Friday, June 14, 2024

ಸತ್ಯ | ನ್ಯಾಯ |ಧರ್ಮ

ಪ್ಯಾಲಸ್ಟೀನ್‌ಗೆ ಭಾರತದ ಬೆಂಬಲ ಅಚಲ: ಪ್ರಧಾನಿ ಮೋದಿ

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ಯಾಲೆಸ್ತೀನ್ ಗೆ ಭಾರತದ ಬೆಂಬಲ ಅಚಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ವಾರ್ಷಿಕ ಆಚರಣೆಯಾದ ಪ್ಯಾಲೆಸ್ತೀನ್ ಜನರೊಂದಿಗೆ ಐಕಮತ್ಯದ ಅಂತಾರಾಷ್ಟ್ರೀಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಪ್ಯಾಲಸ್ಟೀನ್‌ ನಾಗರಿಕರಿಗೆ ಶುಭ ಕೋರುವುದರೊಂದಿಗೆ, ಪ್ಯಾಲೆಸ್ತೀನ್‌ನ ಸ್ನೇಹಪರ ಜನರೊಂದಿಗೆ ಭಾರತದ ಸಂಬಂಧಗಳು ನಮ್ಮ ಸಾಮಾನ್ಯ ಇತಿಹಾಸದಲ್ಲಿ ಬೇರೂರಿದೆ. ನಾವು ಯಾವಾಗಲೂ ಘನತೆ ಮತ್ತು ಸ್ವಾವಲಂಬನೆಯೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಅನ್ವೇಷಣೆಯಲ್ಲಿ ಪ್ಯಾಲೆಸ್ತೀನ್ ಜನರನ್ನು ಬೆಂಬಲಿಸಿದ್ದೇವೆ ಎಂದು  ತಿಳಿಸಿದ್ದಾರೆ.

 ಬಿಕ್ಕಟ್ಟು ಪರಿಹಾರಕ್ಕೆ ಸಂಧಾನದ ಪರಿಹಾರವನ್ನು ಕಂಡುಕೊಳ್ಳಲು ಪ್ಯಾಲೇಸ್ಟಿನಿಯನ್ ಮತ್ತು ಇಸ್ರೇಲಿ ಕಡೆಯ ನಡುವಿನ ನೇರ ಮಾತುಕತೆ ಪುನರಾರಂಭಗೊಳ್ಳುತ್ತದೆ ಎಂದು ನಾವು ಭರವಸೆ ಹೊಂದಿದ್ದೇವೆ ಎಂದು ಮೋದಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಅಕ್ಟೋಬರ್‌ನಲ್ಲಿ, ಪ್ಯಾಲೆಸ್ತೀನ್‌ಗೆ ವಾಗ್ದಾನ ಮಾಡಿದ ವಾರ್ಷಿಕ ಐದು ಮಿಲಿಯನ್ USD ಬೆಂಬಲದ ಭಾಗವಾಗಿ ಮೊದಲ ಕಂತಾಗಿ 2.5 ಮಿಲಿಯನ್ USD ಚೆಕ್ ಅನ್ನು ಭಾರತವು ನೀಡಿದೆ, ಈ ಧನಸಹಾಯವು ಪ್ಯಾಲೇಸ್ಟಿನಿಯನ್ ನಿರಾಶ್ರಿತರನ್ನು ಪುನರ್ವಸತಿ, ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ.

2018 ರಿಂದ, ಭಾರತವು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಮೂಲಕ ಪ್ಯಾಲೆಸ್ಟೈನ್ ನಿರಾಶ್ರಿತರಿಗೆ (UNRWA) 22.5 ಮಿಲಿಯನ್‌ USD ನೀಡಿದೆ.

ಶಾಂತಿ ಮತ್ತು ಸಮೃದ್ಧಿಯನ್ನು ಸಾಧಿಸುವ ಪ್ರಯಾಣದಲ್ಲಿ ಪ್ಯಾಲೆಸ್ತೀನ್ ರಾಜ್ಯದ ಜನರಿಗೆ ಭಾರತದ ಸರ್ಕಾರ ಮತ್ತು ಜನರ ಪರವಾಗಿ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಪ್ಯಾಲೆಸ್ತೀನ್ ಸಂಬಂಧವು ಸುಮಾರು ಅರ್ಧ ಶತಮಾನದಷ್ಟು ಹಿಂದಿನದಾಗಿದ್ದು, 1974 ರಲ್ಲಿ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (PLO) ಗೆ ಮಾನ್ಯತೆ ನೀಡಿದ ಅರಬಿಯನ್‌ ದೇಶಗಳಿಗೆ ಹೊರತಾದ ಮೊದಲ ದೇಶವಾಗಿತ್ತು, ಹದಿನಾಲ್ಕು ವರ್ಷಗಳ ನಂತರ, ಪ್ಯಾಲೆಸ್ತೀನ್ ಗೆ ಮಾನ್ಯತೆ ನೀಡಿದ ಕೆಲವು ದೇಶಗಳಲ್ಲಿ ಭಾರತವೂ ಸೇರಿದೆ. 1996 ರಲ್ಲಿ ಭಾರತವು ಗಾಜಾದಲ್ಲಿ ಪ್ರತಿನಿಧಿ ಕಚೇರಿಯನ್ನು ತೆರೆದಾಗ ಪ್ಯಾಲೆಸ್ಟೀನ್‌ ನೊಂದಿಗೆ ರಾಜತಾಂತ್ರಿಕ ಸಂಬಂಧಗಳು ಹೆಚ್ಚಾದವು, ನಂತರ ಅದನ್ನು 2003 ರಲ್ಲಿ ರಮಲ್ಲಾಗೆ ಸ್ಥಳಾಂತರಿಸಲಾಯಿತು.

2014ರಲ್ಲಿ ಭಾರತದಲ್ಲಿ ಬಲಪಂಥೀಯ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಭಾರತದ ನಿಲುವು ಇಸ್ರೇಲ್‌ ಪರವಾಗಿದೆ ಎಂಬ ಭಾವನೆ ವ್ಯಾಪಕವಾಗಿತ್ತು. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ ಭೇಟಿ ನೀಡುವವರೆಗೆ ಭಾರತದ ಇನ್ಯಾವ ಪ್ರಧಾನಿಯೂ ಆ ದೇಶಕ್ಕೆ ಭೇಟಿ ನೀಡಿರಲಿಲ್ಲ.

Related Articles

ಇತ್ತೀಚಿನ ಸುದ್ದಿಗಳು