Sunday, June 16, 2024

ಸತ್ಯ | ನ್ಯಾಯ |ಧರ್ಮ

ಲಕ್ಷ್ಮಿಯನ್ನು ಕಾಡಿದ ಅನಾರೋಗ್ಯ

(ಈವರೆಗೆ…)

ಮನೆಗೆ ಬಂದ ಲಕ್ಷ್ಮಿ ಮನೆಯ ಮಹಾಲಕ್ಷ್ಮಿಯೇ ಆದಳು. ಮದುವೆಯ ವಯಸ್ಸಿಗೆ ಬಂದ ಚೆಂದುಳ್ಳಿ ಲಕ್ಷ್ಮಿಗೆ ಒಡಾಟದ ಸ್ವಾತಂತ್ರ್ಯವಿರಲಿಲ್ಲ. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಿಂದ ಹೊಲಕ್ಕೆ ಹೋದ ಲಕ್ಷ್ಮಿಗೆ ಹೊಳೆಯಲ್ಲಿ ಸ್ನಾನ ಮಾಡುವ ಆಸೆಯಾಯಿತು. ಸ್ನಾನ ಮಾಡುವಾಗ  ಅದೇನೋ ಕೀಟ ಕಚ್ಚಿ ಅಸಾಧ್ಯ ನೋವಿನೊಂದಿಗೆ ಮನೆ ಸೇರಿದ ಲಕ್ಷ್ಮಿಗೆ ಮುಂದೇನಾಯಿತು? ಓದಿ.. ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಏಳನೇ ಕಂತು

ಆ ದಿನ ಶನಿವಾರ, ನಾರಿಪುರದ ಸಂತೆ. ಅವ್ವ ಬೆಳಗ್ಗೆ ಎದ್ದವಳೇ ಕೊಟ್ಟಿಗೆ ಕೆಲಸ ಮುಗಿಸಿ ಲಕ್ಷ್ಮಿಗೆ ರೊಟ್ಟಿ ತಟ್ಟಲು ಹೇಳಿ ಹೊಸ ನಾರಿಪುರದ ಸರ್ಕಲ್ಲಿನಲ್ಲಿ ಕಟ್ಟುವ ಸಂತೆಗೆ ಹೊರಟಳು. ಮನೆಯ ಹತ್ತು ಜನರಲ್ಲದೆ ಹೊಲಕ್ಕೆ ಬರುವ ಆಳುಗಳಿಗೂ ಸೇರಿಸಿ ರೊಟ್ಟಿ ತಟ್ಟಿ, ಬುತ್ತಿ ಕಟ್ಟಿ ಮುಗಿಸಿದ ಲಕ್ಷ್ಮಿಗೆ ಇದ್ದಕ್ಕಿದ್ದಂತೆ ಹೊಟ್ಟೆ ಸೊಂಟ ಎಳೆಯುತೊಡಗಿತ್ತು. ಬಚ್ಚಲು ಮನೆಗೆ ಓಡಿ ಹೋಗಿ ನೋಡಿಕೊಂಡಳು. ಒಳ ಲಂಗವೆಲ್ಲಾ ಕೆಂಪಾಗಿ ಹೋಗಿತ್ತು. ಹೊರಗಾದವರು ಮೂರುದಿನ ಒಳ ಹೋಗುವಂತಿಲ್ಲ. ಲಕ್ಷ್ಮಿ ಸ್ನಾನ ಮುಗಿಸಿ ಬಚ್ಚಲ ಪಕ್ಕದಲ್ಲಿಯೇ ಒಗೆದು ಒಣಗಿ ಹಾಕಿದ್ದ ಗಂಗೆಯ ಒಳ ಲಂಗವನ್ನು ಹಾಕಿಕೊಂಡು ಅಲ್ಲೇ ಇದ್ದ ಅವ್ವನ ಸೀರೆ ಉಟ್ಟಳು.

ಹಿಂದಿನ ಮನೆ ಪಾರ್ವತಿಯೊಂದಿಗೆ ಗದ್ದೆ ಬಯಲ ಕಡೆ ಹೋಗಿದ್ದ ಗಂಗೆ ಅದ್ಯಾವ ಮಾಯದಲ್ಲಿ ಬಂದು ನಿಂತಿದ್ದಳೊ, ರಾಕ್ಷಸಿಯಂತೆ ಲಕ್ಷ್ಮಿಯನ್ನು ಪರಚಿ  “ನನ್ ಲಂಗ ಯಾಕೆ ಹಾಕ್ಕೊಂಡಿದ್ಯೆ ಮೊದ್ಲು ಬಿಚ್ಚ್ಕೊಟ್ಬುಡು” ಎಂದು ಗುದುಮುರಿ ಬಿದ್ದಳು. ಎಂದೂ ಜೋರಾಗಿ ದನಿ ಎತ್ತದ ಲಕ್ಷ್ಮಿ ಪಿಸು ಮಾತಿನಲ್ಲೇ “ ಥೂ… ಆ ಕಡಿಕ್ ಹೋಗು ಗಂಗೂ.. ಮುಟ್ಟುಸ್ಕೋ ಬ್ಯಾಡ. ನನ್ನ ನಾಯಿ ಮುಟ್ಟೈತೆ” ಎಂದು ದೂರ ಸರಿಸಿದಳು. ಗಂಗೆ ಹುಲಿಯಂತೆ ಹಾರಿ “ನನ್ನೇ ನೂಕ್ತಿಯೇನೆ ಇರು ನಿಂಗೆ ಮಾಡ್ತಿನಿ” ಎಂದು ಅವಳ ಮುಂದಲೆ ಹಿಡಿದು ಜಗ್ಗ ತೊಡಗಿದಳು.

ಸಂತೆಯಿಂದ ಆಗಷ್ಟೇ ಒಳ ಬರುತ್ತಿದ್ದ ಅವ್ವ, ಗಂಗೆಯ ಆರ್ಭಟ ಕೇಳಿ ಅಪ್ಪನೊಂದಿಗೆ ಸೀದ ಹಿತ್ತಿಲಲ್ಲಿದ್ದ ಬಚ್ಚಲ ಕಡೆಗೆ ದೌಡಾಯಿಸಿದಳು. ಅಪ್ಪ ಅವ್ವನ ಮುಖ ಕಂಡಿದ್ದೆ ಗಂಗೆ ಮುಗಿಲೇ ಹರಿದು ಬೀಳುವಂತೆ ಅಳಲು ಆರಂಭಿಸಿದಳು. “ಇವ್ಳು ನನ್ನ ನೂಕಿದ್ಲು ಇವಳಿಗೆ ಹೊಡಿ… ಎಂದು ಸಣ್ಣ ಮಗುವಿನಂತೆ ರಚ್ಚೆ ಹಿಡಿದು ಕೂತಳು. ಅವ್ವನ ಯಾವ ಸಮಾಧಾನದ ಮಾತಿಗೂ ಅವಳು ಬಗ್ಗಲಿಲ್ಲ. “ಅಲ್ಲ ಗಂಗು ಹದ್ನಾಕೊರ್ಸ ಆದ್ರು  ಒಳ್ಳೆ ಎಳೇ ಮಗಿನಂಗಾಡ್ತಿಯಲ್ಲೆ” ಎಂದು ಅವ್ವ ಗಂಗೆಯ ತಲೆ ತಿವಿದಳು. ಗಂಗೆಗೆ ಅಷ್ಟೇ ಸಾಕಿತ್ತು ಊರು ಕೇರಿ ಒಂದಾಗುವಂತೆ ಬೊಬ್ಬೆ ಇಡ ತೊಡಗಿದಳು. ಗಟ್ಟಿಯಾಗಿ ಅವಳ ಅಳುವ ಬಾಯಿ ಮುಚ್ಚಿ ಹಿಡಿದ ಅವ್ವ, ಅವಳು ಸಮಾಧಾನವಾಗಲೆಂದು “ಯಾಕವ್ವ ಲಕ್ಷ್ಮು  ಅವಳನ್ನ ನೂಕ್ದೆ ” ಎಂದು ಗಂಗೆಗೆ ಕಾಣದಂತೆ ಕಣ್ಣು ಮಿಟುಕಿಸಿ ಲಕ್ಷ್ಮಿಯ ತಲೆಯ ಮೇಲೆ ಸಣ್ಣಗೆ ತಟ್ಟಿದಷ್ಟೇ, ಇದ್ದಕ್ಕಿದ್ದಂತೆ ಲಕ್ಷ್ಮಿ ಉಸಿರು ಮೇಲೆಳೆದು ಕೊಳ್ಳುತ್ತ  ಧೊಪ್ಪೆಂದು ನೆಲಕ್ಕೆ ಬಿದ್ದಳು. ಇದನ್ನು ಕಂಡು ಅವ್ವನ ಜೀವವೇ ಬಾಯಿಗೆ ಬಂದಂತಾಯಿತು. “ಅಯ್ಯೋ ಹೊಡಿಲಿಲ್ಲ ಬಡಿಲಿಲ್ಲ ಇದೇನಾಗೋಯ್ತು ದೇವರೆ ನನ್ನ ಮಗಿಗೆ” ಎಂದು ಪರದಾಡುತ್ತಾ ತನ್ನ ಸೀರೆಯ ಸೆರಗಿನಿಂದ ಜೋರಾಗಿ ಗಾಳಿ ಹಾಕತೊಡಗಿದಳು. ಅವ್ವ ಗಾಳಿ ಹಾಕಿದಷ್ಟು ಲಕ್ಷ್ಮಿ ಉಸಿರು ಕಟ್ಟುವುದು ಜಾಸ್ತಿ ಆಗುತ್ತಲೇ ಹೋಯಿತು. ಅಪ್ಪ ಗಾಳಿ ಹಾಕುವುದನ್ನು ನಿಲ್ಲಿಸಲು ಹೇಳಿ ಒಳಕೋಣೆಗೆ ಎತ್ತಿಕೊಂಡು ಬಂದು ನೀರು ಕುಡಿಸಿದರು. ಕುಡಿಸಿದ ನೀರೆಲ್ಲವೂ ಹೊರ ಬಂದಿತು. ತಡ ಮಾಡದೆ ಗಾಡಿ ಕಟ್ಟಿ ಕೊಂಡು ಮಾದಲಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದರು.  

ಪರೀಕ್ಷಿಸಿದ ಡಾಕ್ಟರ್ ಮೊದಲಿಗೆ, ಲಕ್ಷ್ಮಿಯ ಒಣಗಿ ಕೊರಡಂತಾಗಿದ್ದ ಬಾಯಿಗೆ ಒದ್ದೆಯ ಹತ್ತಿಯನ್ನು ಇರಿಸಿದರು. ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಸಿದರು. ಯಾವ ಸಣ್ಣ ಸಮಸ್ಯೆಯೂ ದೇಹದಲ್ಲಿ ಕಾಣಲಿಲ್ಲ. “ಹಿಂದೆ ಎಂದಾದರೂ ನಾಯಿ ಕಚ್ಚಿತ್ತಾ” ಡಾಕ್ಟರ್  ಪ್ರಶ್ನಿಸಿದರು “ಹತ್ತು ವರ್ಸುದ್ ಹಿಂದೆ ಕಚ್ಚಿತ್ತು ಸ್ವಾಮಿ” ಅವ್ವ ಉತ್ತರಿಸಿದಳು. “ಬಹುಶಃ ಅದು ಈಗ ಸಮಸ್ಯೆ ಮಾಡುತ್ತಿರಬಹುದು” ಎಂದು ಉತ್ತರಿಸಿ ಒಂದು ಇಂಜೆಕ್ಷನ್ ಹಾಕಿ ಸಣ್ಣ ಬಾಟಲಿಯಲ್ಲಿ ಕೆಂಪನೆಯ ಸಿರಪ್ ಕೊಟ್ಟು ಇದನ್ನು ಮೂರುಹೊತ್ತು ಕುಡಿಸಿ ನೋಡೋಣ ಸರಿಯಾಗಬಹುದು ಎಂದರು. ಗಾಳಿ ನೀರೆ ಒಳಹೋಗದಿದ್ದ ಮಗಳು ಈ ಔಷಧಿ ಕುಡಿಸಿದ ಕೂಡಲೆ ಸರಿಯಾಗಿ ಬಿಡುತ್ತಾಳೆ ಎಂದು ಅವನಿಗೆ ಅನ್ನಿಸಲಿಲ್ಲ.

ಅವ್ವ ಏನೊಂದು ಮಾತನಾಡದೆ ಅಪ್ಪನನ್ನು ಲಕ್ಷ್ಮಿ ಹತ್ತಿರವೇ ಕೂರಲು ಹೇಳಿ “ಈಗ ಬಂದ್ಬುಡ್ತಿನಿ ಇರಿ” ಎಂದು  ಹೊರ ಹೊರಟಳು. ತ್ರಾಣವೇ ಇಲ್ಲದೆ ಏದುಸಿರು ಬಿಡುತ್ತಾ ನರಳುತ್ತಿದ್ದ ಲಕ್ಷ್ಮಿ ತಕ್ಷಣವೇ ಬಿರುಸಾಗಿ ಅವ್ವನನ್ನು ಜಗ್ಗಿ ಎಳೆದು “ನೀನು ಆ ಮಂತ್ರವಾದಿತಕ್ಕೆ ಸಾಸ್ತ್ರ ಕೆಳಕ್ಕೆ ಹೋಯ್ತಿದ್ದಿ ಅಂತ ನನಗೆ ಗೊತ್ತು. ಸುಮ್ನೆ ಅಲ್ಲೆಲ್ಲಾ ಹೋಗಿ ದುಡ್ಯಾಕೆ ಕಳ್ಕೊತ್ತಿಯ. ಇದು ಎಲ್ಲೂ ಉಸಾರಾಗೋ ಕಾಯಿಲೆ ಅಲ್ಲ. ಸುಮ್ನೆ ನನ್ನ ಮನೆ ಕರ್ಕೊಂಡು ಹೋಗಿ” ಎಂದಳು. ಅವ್ವ ಬೆಕ್ಕಸ ಬೆರಗಾಗಿ ಮಗಳನ್ನು ಮೇಲಿನಿಂದ ಕೆಳಗಿನವರೆಗೂ ನೋಡಿದಳು. ಹುಟ್ಟಿದಾಗಿನಿಂದಲೂ ಲಕ್ಷ್ಮಿ ಅಷ್ಟು ಗಡುಸಾಗಿ ಬಿರುಸಿನಿಂದ ಮಾತನಾಡಿದ್ದೇ ಇಲ್ಲ. ಲಕ್ಷ್ಮಿ ಎಂದರೆ ಬೆಣ್ಣೆ ಮುರುಕು ಎಂಬಂತಿದ್ದಳು. ಅಷ್ಟು ಮೃದು ಸ್ವಭಾವದ ಮಗಳ ವರ್ತನೆ  ಕ್ಷಣದಲ್ಲಿ ಬದಲಾದದ್ದನ್ನು ಕಂಡು ಅವ್ವ ಕಸಿವಿಸಿ ಗೊಂಡಳು. “ಅಲ್ಲ ಮಗ ನಾನು ಅಲ್ಲಿಗೆ ಹೋಯ್ತಿದ್ದೀನಿ ಅಂತ ನಿನಗೆ ಹೆಂಗ್ ಗೊತ್ತಾಯ್ತವ್ವ” ಎಂದು ಕೇಳಿದಳು. “ನನಗೆ ಎಲ್ಲ ಗೊತ್ತಾಯ್ತದೆ ಸುಮ್ನೆ ತಲೆ ತಿನ್ಬೇಡ. ನಡಿರಪ್ಪ ನನ್ನ ಬಿರ್ನೆ ಮನೆ ಕರ್ಕೊಂಡು ಹೋಗಿ” ಎಂದು ಚಂಗನೆ ಹಾರಿ ಗಾಡಿ ಹತ್ತಿ ಕುಳಿತಳು.

ಅಪ್ಪನಿಗೂ ಕೂಡ ಮಗಳ ವರ್ತನೆ ಬಹಳ ವಿಚಿತ್ರವಾಗಿಯೇ ಕಂಡಿತು. ಆದರು ಹೇಗೋ ಮಗಳು ತುಸು ಗೆಲುವಾದಳಲ್ಲ ಎಂದು ಸಮಾಧಾನವೂ ಆಯಿತು. “ಸರಿ ಕನವ್ವ ಹಂಗಾದ್ರೆ ಈ ಹಾಲಿನ್ ಜೊತೆ ಅಜ್ಕೊಂಡು ಒಂದೆರಡು ಬ್ರೆಡ್ ಚೂರ್ ತಿಂದ್ಬುಡು ಬೇಗ ಹೋಗ್ಬುಡನ” ಎಂದು ಲಕ್ಷ್ಮಿ ಯನ್ನು ಪುಸಲಾಯಿಸಿದ ಅಪ್ಪ. ಒಂದು ಸಾರಿ ಈ ಜಾಗದಿಂದ ಹೋದರೆ ಸಾಕೆಂದು ತವಕಿಸುತ್ತಿದ್ದ ಲಕ್ಷ್ಮಿ, ತನಗೆ ಏನೂ ಆಗಿಯೇ ಇಲ್ಲ ಎಂಬಂತೆ ಅವ್ವ ಕೊಟ್ಟ ಬ್ರೆಡ್ಡಿನ ಚೂರು ಮತ್ತು ಹಾಲನ್ನು ಒಂದೇ ಗುಕ್ಕಿಗೆ ಮುಕ್ಕಿ ಸೆರಗಿನಿಂದ ಬಾಯೊರೆಸಿ ಕೂತಳು. “ಸಧ್ಯ ಒಂದು ಕಂಟ್ಕ ಹರಿತು ಹೆಂಗೊ ಮಗ ಸರಿಯಾಯ್ತಲ್ಲ” ಎಂದು ಅಪ್ಪ ಅವ್ವ ನಿಟ್ಟುಸಿರು ಬಿಟ್ಟರು.

ನಿಧಾನವಾಗಿ ಕತ್ತಲು ಕವುಚಿಕೊಳ್ಳಲು ಆರಂಭವಾದ್ದರಿಂದಾಗಿ ಅಪ್ಪ  ಮಾದಲಾಪುರ ಪಟ್ಟಣ ದಾಟಿದ ಕೂಡಲೇ ಗಾಡಿಯ ವೇಗವನ್ನು ತುಸು ಹೆಚ್ಚಿಸಿದ. ಗಾಡಿಯ ವೇಗ ಹೆಚ್ಚಿದಂತೆ ಗಾಳಿ ಬೀಸುವ ಬಿರುಸು ಕೂಡ ಜಾಸ್ತಿಯಾಯಿತು. ಗಾಳಿಯನ್ನು ಒಳಗೆಳೆದು ಕೊಳ್ಳಲಾರದೆ ಲಕ್ಷ್ಮಿ ಮತ್ತೆ ಉಸಿರುಕಟ್ಟಲು ಆರಂಭಿಸಿದಳು. ಅವ್ವ ಗಾಬರಿಯಾಗಿ ಮತ್ತೆ ಗಾಳಿ ಬೀಸಿ ನೀರು ಕುಡಿಸಲು ಮುಂದಾದಳು.   ಲಕ್ಷ್ಮಿಗೆ ಅದೆಲ್ಲಿತ್ತೊ ಅಷ್ಟು ಬಲ ಇನ್ನೇನು ಅವ್ವ ಆ ಎತ್ತಿನ ಗಾಡಿಯಿಂದ ಕೆಳಗೆ ಉರುಳೇ ಬಿಟ್ಟಳು  ಎನ್ನುವಂತೆ ಅವ್ವನನ್ನು ಬಲವಾಗಿ ಹಿಂದೆ ನೂಕಿದಳು. ಅಪ್ಪ ಗಕ್ಕನೆ ಲಗಾಮು ಹಾಕಿ ಒಂದು ಬದಿಗೆ ಗಾಡಿ ನಿಲ್ಲಿಸಿ “ಯಾಕವ್ವ ಹಿಂಗ್ ಮಾಡ್ದೇ ನಿಮ್ಮವ್ವ ಈಗ ಕೆಳಿಕ್ ಬಿದ್ದೋಗ್ ಬುಡೋಳಲ್ಲ ಮಗ” ಎಂದು ಹೇಳಿ ಲಕ್ಷ್ಮಿಯ ತಲೆ ನೇವರಿಸಿದ.

ಅಪ್ಪನ ಬೆರಳು ಸೋಕುತ್ತಿದ್ದಂತೆ ತುಸು ಎಚ್ಚರಗೊಂಡ ಲಕ್ಷ್ಮಿ “ಅಯ್ಯೋ… ಅವ್ವುನ್ನ ನೂಕ್ಬುಟ್ನ. ನಂಗ್ ಗೊತ್ತೇ ಆಗ್ಲಿಲ್ವಲ್ರಪ್ಪ. ಥೂ ನಾನೊಬ್ಳು ಹಾಳಾದೋಳು, ಏನ್ ಬಂದೈತೋ ಕಣೆ. ನಿಂಗೆನಾದ್ರು ನೋವು ಮಾಡಿದ್ನೆನವ್ವ ಎಂದು ಕಣ್ಣಿನಲ್ಲಿ ನೀರು ತುಂಬಿ ಕೊಂಡು ಅವ್ವನ ಮೈಕೈ ತಡವಿದಳು. ಅವ್ವ “ನನಗೇನು ಆಗಿಲ್ಲ ಕನವ್ವ.. ನಿನಗೇನಾಯ್ತವ್ವ ಲಕ್ಷ್ಮು ಯಾಕಿಂಗಾಡ್ತಿದ್ದಿ” ಎಂದು ಮಗಳನ್ನು ಗಟ್ಟಿಯಾಗಿ ತಬ್ಬಿಹಿಡಿದು ಅಳಲು ಆರಂಭಿಸಿದಳು. “ಅಯ್ಯೋ ನನಗೇನಾಗೈತವ್ವ ನಿವಿಬ್ರು ನನ್ನ ರಾಣಿ ರಾಣಿ ನೊಡ್ಕೊಂಡಂಗೆ ನೋಡ್ಕೊತಿರುವಾಗ. ಅಪ್ಪ ಒಂಚೂರು ನಿಧಾನವಾಗೇ ಗಾಡಿ ಓಡ್ಸಿ ಯಾಕೋ ಹೆದ್ರಿಕೆ ಆಯ್ತದೆ” ಎಂದು ಹೇಳಿ ಅವ್ವನ ತೊಡೆಯನ್ನು ಗಟ್ಟಿಯಾಗಿ ತಬ್ಬಿ ಮಲಗಿದಳು. ಹಾಗೂ ಹೀಗೂ ಗಾಡಿ ಹಳೇ ನಾರಿಪುರದ ಹೆಬ್ಬಾಗಿಲ ತಿರುವಿನ ಬಳಿ ಬಂತು.

ಆ ತಿರುವಿಗೆ  ಮಾರು ದೂರದಲ್ಲಿಯೇ ಇದ್ದ ಮಸೀದಿಯಿಂದ ಹೊರ ಬಂದ ಶರೀಫ ಕಾಕಾ ಅಪ್ಪನನ್ನು ಕಂಡು “ಓಹೋ ಬೋಪಣ್ಣ ಸಂಸಾರ ಸಮೇತ ಇಷ್ಟೊತ್ತಿನಲ್ಲಿ ಬರ್ತಿದ್ದೀರ ಏನ್ ಸಮಾಚಾರ ಎಂದು ವಿಚಾರಿಸಿದರು. ಅಪ್ಪ ಲಕ್ಷ್ಮಿಗೆ ಹುಷಾರಿಲ್ಲವೆಂದು ನಡೆದ ಘಟನೆಯನ್ನೆಲ್ಲಾ ಹೇಳಿದ. ಶರೀಫ ಕಾಕಾ ಗಾಡಿಯ ಹಿಂಬದಿಗೆ ಬಂದು ಅವ್ವನ ತೊಡೆ ಮೇಲೆ ಕಣ್ಣು ಮುಚ್ಚಿ ಮಲಗಿದ್ದ ಲಕ್ಷ್ಮಿಯ ತಲೆ ನೇವರಿಸಿದರು. ಕರೆಂಟು ಹೊಡೆದಂತೆ ಅದುರಿ ಕಣ್ಣು ಬಿಟ್ಟ ಲಕ್ಷ್ಮಿ ತಟ್ಟನೆ ತುಸು ದೂರ ಹಾರಿ ಕೂತು ಕೋಪದಿಂದ “ಯಾಕಯ್ಯ ನನ್ನ ತಲೆ ಮುಟ್ಟ್ದೆ ಒಳ್ಳೆ ಹಾವು ಕುಕ್ದಂಗೈತಲ್ಲ. ಯಾವನಪ್ಪ ಇವಯ್ಯ ಮೊದ್ಲು ಇಲ್ಲಿಂದ ಕಳ್ಸಿ ಒಳ್ಳೆ ದಯ್ಯ ನಿಂತಂಗೆ ನಿಂತಿರದು ನೋಡು” ಎಂದು ಹೇಳಿ ಅವ್ವನ ಬೆನ್ನ ಮರೆಗೆ ಸರಿದಳು. ಅವ್ವ “ಅಯ್ಯೋ ಸರಿಯಾಗಿ ನೋಡು ಮಗ ಅದು ನಮ್ಮ ಸರೀಫ್ ಕಾಕಾ ಅಲ್ವೆನವ್ವ” ಎಂದು ಹೇಳಿ ಶರೀಫ ಕಾಕಾನ ಕಡೆ ತಿರುಗಿ “ಮಗಿಗೆ ಮಬ್ಬಲಿ ಸರಿಯಾಗಿ ಕಂಡಿಲ್ಲ ಕಾಕಾ ಬೇಜಾರ್ ಮಾಡ್ಕಬೇಡಿ” ಎಂದಳು. ಅಪ್ಪನ ವಯಸ್ಸಿನವರೇ ಆಗಿದ್ದ ಮೃದು ಸ್ವಭಾವದ ಕಾಕಾ ತಣ್ಣನೆಯ ದನಿಯಲ್ಲಿ ಇರ್ಲಿ ಅಕ್ಕ ನಮ್ಮ ಬೇಟಿ ಅಲ್ವ ಬೇಜಾರು ಎಂತದು. ಬೇಗ ಹುಶಾರಾಗು ಬೇಟಿ” ಎಂದು ಹೇಳಿ ಅಪ್ಪನ ಹತ್ತಿರ ಬಂದು, “ಬೋಪಣ್ಣ ನಿಮ್ಮ ಜೊತೆ ಮಾತಾಡೋದಿದೆ ಸ್ವಲ್ಪ ನನ್ನ ಜೊತೆ ಬನ್ನಿ” ಎಂದು ಕರೆದು ಕೊಂಡು ಮಸೀದಿ ಕಡೆಗೆ ಹೆಜ್ಜೆ ಹಾಕಿದರು.

ಚಿಕ್ಕ ವಯಸ್ಸಿನಿಂದಲೂ ಲಕ್ಷ್ಮಿಯನ್ನು ಎತ್ತಾಡಿ ಬೆಳೆಸಿದ್ದ ಶರೀಫ ಕಾಕಾನಿಗೆ ಈಗ ಯಾವುದೇ ಅನುಮಾನ ಉಳಿದಿರಲಿಲ್ಲ. ಅಪ್ಪನನ್ನು ಮಸೀದಿಯ ಹೊರಗೆ ನಿಲ್ಲಿಸಿ ಒಳಹೋದ ಕಾಕಾ ಒಂದು ಹಸಿರು ತಾಯತದೊಂದಿಗೆ ಹೊರ ಬಂದರು “ನೋಡಿ ಬೋಪಣ್ಣ ಬೇಟಿದು ಆಸ್ಪತ್ರೆ ಕಾಯಿಲೆ ಅಲ್ಲ. ಅದು ಕೆಟ್ಟ ಗಾಳಿ  ಸಮಸ್ಯೆ. ಗಾಬ್ರಿಯಾಗ್ಬೇಡಿ ನಾನು ಅವಳನ್ನ ಹುಷಾರ್ ಮಾಡ್ತಿನಿ, ಈಗ ಹೋಗಿ ಅವಳನ್ನ ಇಲ್ಲಿಗೆ ಕರ್ಕೊಂಡು ಬನ್ನಿ ಮಂತ್ರ ಹಾಕಿರೋ ಈ ತಾಯ್ತಿನ ಕಟ್ಟ್ಕೊಡ್ತಿನಿ. ಎಂದು ಹೇಳಿ ಅಪ್ಪನಿಗೆ ಧೈರ್ಯ ತುಂಬಿ ಕಳುಹಿಸಿದರು. ಅಪ್ಪ “ಅಯ್ಯೋ ದೇವರೆ ನನ್ನ ಮಗ ಬೇಗ ಉಸಾರಾದ್ರೆ ಸಾಕಪ್ಪ” ಎಂದು ಮಸೀದಿಯ ಮುಂಬಾಗಿಲಿಗೆ ಅಡ್ಡ ಬಿದ್ದು ಗಾಡಿಯ ಕಡೆ ಬಂದ.

ಲಕ್ಷ್ಮಿ ಅಪ್ಪ ಅವ್ವನ ಯಾವ ಮಾತಿಗೂ ಜಗ್ಗಲಿಲ್ಲ. ಕಲ್ಲು ಬಂಡೆಯಂತೆ ಕೂತ ಜಾಗದಿಂದ ಮಿಸುಕಾಡದೆ ಗಟ್ಟಿಯಾಗಿ ಕೂತು “ಮೊದ್ಲು ನನ್ನ ಈ ಜಾಗದಿಂದ ಕರ್ಕೊಂಡು ಹೋದ್ರೆ ಸರಿ” ಎಂದು ಆರ್ಭಟಿಸ ತೊಡಗಿದಳು. ವಿಧಿ ಇಲ್ಲದೆ ಶರೀಫ ಕಾಕಾನೇ ಅವಳ ಬಳಿ ಬಂದು  ಕುತ್ತಿಗೆಗೆ ತಾಯತ ಕಟ್ಟಲು ಮುಂದಾದರು. ಲಕ್ಷ್ಮಿ ಕುತ್ತಿಗೆ ಮುಂಚಾಚಲು ಒಪ್ಪಲೇ ಇಲ್ಲ. ಕೊನೆಗೆ ಅವ್ವ ಅತ್ತು ಕರೆದು ಅವಳ ಮನವೊಲಿಸಿ ಎಡ ತೋಳಿಗೆ ತಾಯತವನ್ನು ಕಟ್ಟಿಸಿ ನಿಟ್ಟುಸಿರು ಬಿಟ್ಟಳು. ಕಾಕಾ ಯಾವ ಕಾರಣಕ್ಕೂ ಈ ತಾಯತ ಬಿಚ್ಚಿ ಹೋಗದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿ, ಗಾಡಿ ಮರೆಯಾಗುವವರೆಗೆ ನೋಡುತ್ತಾ “ಯಾ ಅಲ್ಲಹ್” ಎಂದು ಆಕಾಶವನ್ನೊಮ್ಮೆ ದಿಟ್ಟಿಸಿ ಮನೆಗೆ ಹೋಗಲು ಮನಸ್ಸಾಗದೆ ಮತ್ತೆ ಮಸೀದಿ ಕಡೆಗೆ ಹೆಜ್ಜೆ ಹಾಕಿದರು.

(ಮುಂದುವರೆಯುವುದು…)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು