Tuesday, June 25, 2024

ಸತ್ಯ | ನ್ಯಾಯ |ಧರ್ಮ

ಅಡಿಕೆ ತೋಟಗಳಿಗೆ ಎಲೆ ಚುಕ್ಕೆ, ಹಳದಿ ಎಲೆ ರೋಗ: ದೋಟಿ ಖರೀದಿಸಲು ರಾಜ್ಯ ಸರ್ಕಾರದಿಂದ ಸಬ್ಸಿಡಿ- ಸಚಿವ ಮುನಿರತ್ನ

ಸುಳ್ಯ: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಡಿಕೆ ತೋಟಗಳು ಎಲೆ ಚುಕ್ಕೆ ಮತ್ತು ಹಳದಿ ಎಲೆ ರೋಗದಿಂದ ಬಳಲುತ್ತಿದ್ದು, ಚುಕ್ಕೆಗಳಿಂದ ಬಾಧಿತವಾದ ಎಲೆಯನ್ನು ಕತ್ತರಿಸಲು ಮತ್ತು ಬೆಳೆಗಳಿಗೆ ಔಷದಿ ಸಿಂಪಡಿಸುವ ಸಲುವಾಗಿ ರಾಜ್ಯ ಸರ್ಕಾರವು ದೋಟಿ ಖರೀದಿಸಲು ಸಬ್ಸಿಡಿ ನೀಡುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ಭಾನುವಾರ ತಿಳಿಸಿದ್ದಾರೆ.

ಡಿ.11ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯತಾಲೂಕಿನ ಎಲೆ ಚುಕ್ಕೆ ಮತ್ತು ಅಡಿಕೆ ರೋಗ ಭಾದಿತ ಮರ್ಕಂಜದಲ್ಲಿರುವ ಅಡಿಕೆ ತೋಟಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಅಡಿಕೆ ತೋಟಗಳು ಎಲೆ ಚುಕ್ಕೆ ಮತ್ತು ಹಳದಿ ಎಲೆ ರೋಗದಿಂದ ಬಳಲುತ್ತಿದ್ದು, ಇದರಿಂದ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಈ ರೋಗವು ಅಡಿಕೆ ಬೆಳೆಯನ್ನು ಏಕೆ ಬಾಧಿಸುತ್ತಿದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಇಸ್ರೇಲ್ ಗೆ ಭೇಟಿ ನೀಡಿದಾಗ, ಅಲ್ಲಿನ ವಿಜ್ಞಾನಿಗಳೊಂದಿಗೆ ಈ ಕುರಿತು ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೆನೆʼ ಎಂದು ಹೇಳಿದ್ದಾರೆ.

ʼಚುಕ್ಕೆಗಳಿಂದ ಬಾಧಿತವಾದ ಎಲೆಯನ್ನು ಕತ್ತರಿಸಬೇಕು ಮತ್ತು ಬೆಳೆಯನ್ನು ಉಳಿಸಲು ಕೀಟನಾಶಕವನ್ನು ಸಿಂಪಡಿಸಬೇಕು ಎಂದು ತಿಳಿದುಬಂದಿದೆ. ಆದರೆ ಇದನ್ನು ನೆರೆಹೊರೆಯ ಕೃಷಿ ಮಾಲೀಕರು ಸಹ ಮಾಡಬೇಕಾಗಿದೆ. ಈ ಉದ್ದೇಶಕ್ಕಾಗಿ ಸರ್ಕಾರವು ದೋಟಿ ಖರೀದಿಸಲು ಸಬ್ಸಿಡಿ ನೀಡುತ್ತಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಚರ್ಚೆ ನಡೆಸಲಾಗಿದೆ. ಈ ಮೂಲಕ ರೋಗದಿಂದ ಬಾಧಿತವಾಗದ ತಳಿಯ ಅಡಿಕೆಯನ್ನು ಅಭಿವೃದ್ಧಿಪಡಿಸಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಎಲೆ ಚುಕ್ಕಿ ಬಾಧಿತ ಅಡಿಕೆ ತೋಟಗಳಿಗೆ,ಕೀಟನಾಶಕ ಸಿಂಪಡಿಸಲು ನಾಲ್ಕು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಈ ಕುರಿತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆʼ ಎಂದು ಮುನಿರತ್ನ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮೀನುಗಾರಿಕಾ ಸಚಿವ ಎಸ್.ಅಂಗಾರ, ಮರ್ಕಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಗುಂಡಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ ಕಂಜಿಪಿಲಿ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು