Sunday, June 23, 2024

ಸತ್ಯ | ನ್ಯಾಯ |ಧರ್ಮ

ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸುಳ್ಳಿನ ಪ್ರಚಾರ : ಎಂ.ಲಕ್ಷಣ್

ಬೆಂಗಳೂರು: ಬೊಮ್ಮಾಯಿ ಹಾಗೂ ಅವರ ಸಚಿವರು ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸುತ್ತಿದ್ದೇವೆ ಎಂದು ಊರೆಲ್ಲಾ ಡಂಗೂರ ಸಾರಿಕೊಂಡು ಪರಿಶಿಷ್ಟ ಜನರನ್ನು ಗುಗ್ಗೂಗಳನ್ನಾಗಿ ಮಾಡಲು ಹೊರಟಿದ್ದಾರೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,  ಸಂಸತ್ತಿನಲ್ಲಿ ತಮಿಳುನಾಡಿನ ಸದಸ್ಯರು ರಾಜ್ಯ ಸರ್ಕಾರಗಳು ಶೇ.50ರಷ್ಟು ಮೀಸಲಾತಿ ಮಿತಿ ಮೀರಿ ಮೀಸಲಾತಿಯನ್ನು ನೀಡುವ ಅವಕಾಶ ಇದೆಯೇ? ಎಂದು ಕೇಳಿದ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವರು ಕೊಟ್ಟಿರುವ ಉತ್ತರದಲ್ಲಿ, ‘ಯಾವುದೇ ಕಾರಣಕ್ಕೆ ಮೀಸಲಾತಿಯನ್ನು ಶೇ.50ಕ್ಕಿಂತ ಹೆಚ್ಚಿಸುವ ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಮಾರ್ಗಸೂಚಿಯಲ್ಲಿ ಇದು ಸ್ಪಷ್ಟವಾಗಿ ಇದೆ. ಇಂತಹ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಈ ವಿಚಾರದಲ್ಲಿ ಬದಲಾವಣೆ ಮಾಡುವ ಅವಕಾಶಗಳು ನಮ್ಮ ಮುಂದೆ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕೆ ಬೊಮ್ಮಾಯಿ ಅವರು ಉತ್ತರಿಸಬೇಕು. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಮುಂದಿನ ದಿನಗಳಲ್ಲಿ ಈ ಪ್ರಸ್ತಾವನೆಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಿಲ್ಲ ಏಕೆ? ಕೇಂದ್ರಕ್ಕೆ ಇದುವರೆಗೂ ಪ್ರಸ್ತಾವನೆ ಸಲ್ಲಿಸಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಪರಿಶಿಷ್ಟ ಸಮುದಾಯದ ಜನರು ಡೋಂಗಿ ಹಾಗೂ ಗಿಮಿಕ್ ರಾಜಕಾರಣ ನಂಬಬೇಡಿ. ಇವರು ಮೀಸಲಾತಿ ವಿರುದ್ಧವಿದ್ದಾರೆ. ಇವರೇ ರಮಾಜೋಯೀಸ್ ಅವರ ಮೂಲಕ ಮೀಸಲಾತಿ ವಿರುದ್ಧ ಕೇಸ್ ಹಾಕಿಸಿದ್ದರು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇವರು ಪಂಚಮಸಾಲಿ ಹಾಗೂ ಒಕ್ಕಲಿಗರಿಗೂ ಇಂತಹ ಸುಳ್ಳು ಮೀಸಲಾತಿ ನೀಡುತ್ತಾರೆ. ಮೇ ವರೆಗೂ ಏನೆಲ್ಲಾ ನಾಟಕವಾಡಬಹುದೋ ಅದನ್ನು ಮಾಡುತ್ತಾರೆ ಎಂದು ಎಂ.ಲಕ್ಷಣ್‌ ಟೀಕಿಸಿದ್ದಾರೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರೆಲ್ ಗೆ 73 ಡಾಲರ್ ಇದೆ. ಇದೇ ವರ್ಷ ಜೂನ್ ತಿಂಗಳಲ್ಲಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 129 ಡಾಲರ್ ಇತ್ತು. ಆಗಲೂ ಪೆಟ್ರೋಲ್ ಬೆಲೆ 102 ರೂ. ಆಗಿತ್ತು. ಈಗ 73 ಡಾಲರ್ ಆಗಿದ್ದರೂ ಅಷ್ಟೇ ಹಣ ನೀಡುತ್ತಿದ್ದೇವೆ. ಆ ಮೂಲಕ ಸುಂಕ ಹೊರತಾಗಿ ಜನಸಾಮಾನ್ಯರಿಂದ ಪ್ರತಿ ಲೀಟರ್ ಗೆ 40 ರೂ. ಹೆಚ್ಚಾಗಿ ಜನರಿಂದ ವಸೂಲಿ ಮಾಡುತ್ತಿದ್ದಾರೆ. ಇದನ್ನು ಕೇಳಿದರೆ ಅಭಿವೃದ್ಧಿ ಕೆಲಸಕ್ಕೆ ಎಂದು ಹೇಳುತ್ತಾರೆ. ರಸ್ತೆ ನಿರ್ಮಾಣ ಎಂದು ಹೇಳುತ್ತಾರೆ. ಆದರೆ ರಸ್ತೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುತ್ತಿದ್ದು, ಶೇ.90ರಷ್ಟು ಖಾಸಗಿಯವರ ಹಣದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯೂ ಅದೇ ರೀತಿ ಆಗಿದೆ. ಈಗ ಈ ರಸ್ತೆಗೆ ಎರಡು ಟೋಲ್ ಹಾಕಿದ್ದು, ಪ್ರತಿ ಟೋಲ್ ನಲ್ಲಿ 150ರಂತೆ 300 ರೂ. ಕಟ್ಟಬೇಕು. ಅಲ್ಲಿಗೆ ಮೈಸೂರಿಗೆ ಹೋಗಿ ಬರಲು 600 ರೂ. ಟೋಲ್ ಕಟ್ಟಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು