Wednesday, June 26, 2024

ಸತ್ಯ | ನ್ಯಾಯ |ಧರ್ಮ

ನ್ಯಾಯಾಲಯದಲ್ಲಿ ನ್ಯಾಯ ಸಿಗ್ತದೇಂತ ನಿಮಗೆ ಯಾರು ಹೇಳಿದ್ದು?!

ಇತ್ತೀಚಿನ ವರ್ಷಗಳಲ್ಲಿ ದೇಶದ ಗಮನ ಸೆಳೆದ ಪ್ರಕರಣಗಳಲ್ಲಿ ಸಿದ್ದೀಕ್‌ ಕಪನ್‌ ಅವರ ಪ್ರಕರಣವೂ ಒಂದು. ಉತ್ತರ ಪ್ರದೇಶದ ಹತ್ರಾಸ್‌ ಎನ್ನುವಲ್ಲಿ ನಡೆದ ದಲಿತ ಬಾಲಕಿಯ ಮೇಲಿನ ಅತ್ಯಾಚಾರದ ಪ್ರಕರಣವನ್ನು ವರದಿ ಮಾಡಲು ಹೊರಟಿದ್ದ ಅವರನ್ನು ತಡೆದು ಬಂಧಿಸಿ UAPA ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹೀಗೆ ಜೈಲುವಾಸಿಯಾಗಿದ್ದ ಅವರಿಗೆ ಮೊನ್ನೆಯಷ್ಟೇ ಜಾಮೀನು ದೊರೆತಿದೆ. ಈ ಹಿನ್ನೆಲೆಯಲ್ಲಿ ಚಿಂತಕ ಶ್ರೀನಿವಾಸ ಕಾರ್ಕಳ ಅವರು ಈ ವಾರದ ಶ್ರೀನಿ ಕಾಲಮ್ಮಿನಲ್ಲಿ ನ್ಯಾಯಾಲಯದ ವ್ಯವಹಾರದ ಸುತ್ತಮುತ್ತಲಿನ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ

“ನ್ಯಾಯಾಲಯದಲ್ಲಿ ನ್ಯಾಯ ಸಿಗ್ತದೇಂತ ನಿಮಗೆ ಯಾರು ಹೇಳಿದ್ದು? ಅಲ್ಲಿ ಕಾನೂನು, ಸಂವಿಧಾನ ವಿಧಿಗಳ ವ್ಯಾಖ್ಯಾನ ನಡೆಯುತ್ತದೆ. ನಿಮಗೆ ‘ನ್ಯಾಯ’ ಬೇಕಾದರೆ ಸಂಧಾನದಂತಹ ಬೇರೆ ಯಾವುದಾದರೂ ದಾರಿ ಕಂಡುಕೊಳ್ಳಿ…” ಇದು ಕರಾವಳಿಯ ಬಳಕೆದಾರರ ಹೋರಾಟ ವೇದಿಕೆಯ ಮುಖ್ಯಸ್ಥರೊಬ್ಬರು ಎರಡು ದಶಕಗಳ ಹಿಂದೆ ನೀಡಿದ ಸಲಹೆ. ಆ ಮಹನೀಯರು ಈ ಮಾತನ್ನು ಸುಮ್ಮನೆ ಹೇಳಲಿಲ್ಲ. ಬಳಕೆದಾರರಿಗೆ ಅನ್ಯಾಯವಾದಾಗ ಈ ಸಂಬಂಧ ಕೋರ್ಟ್ ಗೆ ಅಲೆದಲೆದು, ಸತ್ಯ ಎಂಬುದು ಕಣ್ಣಿನ ಎದುರೇ ಇದ್ದಾಗಲೂ ಕೋರ್ಟ್ ನಲ್ಲಿ ವರ್ಷಗಟ್ಟಲೆ ಹೆಣಗುವಂತಾಗಿ, ಅಪಾರ ಕಷ್ಟ ನಷ್ಟ ಮಾಡಿಕೊಂಡು, ಕೊನೆಗೆ ಅಲ್ಲೂ ವ್ಯತಿರಿಕ್ತ ತೀರ್ಪುಗಳು ಬರುವುದನ್ನು ಸ್ವತಃ ನೋಡಿದ ಹಿನ್ನೆಲೆಯಲ್ಲಿ ಅವರು ಹೀಗೆ ಸಲಹೆ ನೀಡಿದ್ದರು. “ಮಾರಾಟಗಾರರಿಂದ ಅನ್ಯಾಯವಾಗಿದೆಯೇ? ನೇರ ಕೋರ್ಟ್ ಗೆ ಹೋಗುವ ಬದಲು, ಮೊದಲು ಆ ಮಾರಾಟಗಾರರನ್ನು ಭೇಟಿಯಾಗಿ, ಅವರಿಗೆ ಪ್ರಕರಣದ ಬಗ್ಗೆ ಮನವರಿಕೆ ಮಾಡಿಕೊಟ್ಟು, ಅಲ್ಲೇ ನ್ಯಾಯ ಪಡೆಯಲು ಸಾಧ‍್ಯವಾದಷ್ಟು ಪ್ರಯತ್ನ ಮಾಡಿ. ಆ ಹಂತದಲ್ಲಿಯೇ ಒಮ್ಮೊಮ್ಮೆ ಸಮಸ್ಯೆ ಪರಿಹಾರವಾಗುವುದಿದೆ. ಅಲ್ಲೂ ಸಮಸ್ಯೆ ಪರಿಹಾರವಾಗಲಿಲ್ಲವೇ? ಕೊನೆಯ ಆಯ್ಕೆಯಾಗಿ ಮಾತ್ರ ನ್ಯಾಯಾಲಯಕ್ಕೆ ಹೋಗಿ. ಅಲ್ಲೂ ನಿಮಗೆ ನ್ಯಾಯ ಸಿಗುವ ಖಾತ್ರಿಯೇನೂ ಇಲ್ಲ, ನೆನಪಿಡಿ” ಎನ್ನುತ್ತಿದ್ದರು ಅವರು.

ಮಾನವ ಇತಿಹಾಸದಲ್ಲಿ ಅತ್ಯಂತ ಆದರ್ಶಯುತ ಆಡಳಿತ ಮಾದರಿ ಎಂದು ನಾವು ಅಂದುಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗಕ್ಕೆ ಬಹಳ ಮಹತ್ತ್ವದ ಒಂದು ಸ್ಥಾನವಿದೆ. ಶಾಸಕಾಂಗದಿಂದ, ಕಾರ್ಯಾಂಗದಿಂದ ನಮಗೆ ಅನ್ಯಾಯವಾಗಬಹುದು. ಸಾಂವಿಧಾನಿಕ ಹಕ್ಕುಗಳಿಂದ ನಾವು ವಂಚಿತರಾಗಬಹುದು. ಆಗ ಬಹುನಿರೀಕ್ಷೆಯಿಂದ ನಾವು ನೋಡುವುದು ನ್ಯಾಯಾಂಗದತ್ತ. ಆಳುವವರು ಪ್ರಜಾತಂತ್ರ, ಸಂವಿಧಾನ, ಹಕ್ಕುಗಳ ಬಗ್ಗೆ ಎಷ್ಟೇ ಆಕರ್ಷಕ ಮಾತುಗಳನ್ನಾಡಿದರೂ, ತಮ್ಮನ್ನು ಪ್ರಜೆಗಳು ಪ್ರಶ್ನಿಸುವುದನ್ನು, ಟೀಕಿಸುವುದನ್ನು, ವಿರೋಧಿಸುವುದನ್ನು ಸಹಜವಾಗಿಯೇ ಅವರು ಇಷ್ಟ ಪಡುವುದಿಲ್ಲ. ವಿರೋಧದ ದನಿಗಳನ್ನು ಹೊಸಕಿ ಹಾಕಲು ಅವರು ಯತ್ನಿಸುತ್ತಲೇ ಇರುತ್ತಾರೆ. ಆಗ ಪ್ರಜೆಗಳಿಗೆ ರಕ್ಷಣೆ ಒದಗಿಸಬೇಕಾದುದು ನ್ಯಾಯಾಂಗ. ಆದರೆ, ನಮ್ಮ ನ್ಯಾಯಾಂಗ ಈ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆಯೇ? ಪ್ರಕ್ರಿಯೆಯೇ ಒಂದು ಶಿಕ್ಷೆಯಾಗಿ, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ, ಕೊನೆಗೆ ಅಪರಾಧಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಖುಲಾಸೆ ಗೊಳಿಸಿದರೆ ಇದರಿಂದ ಸಂತ್ರಸ್ತ ವ್ಯಕ್ತಿಗೆ ಏನು ನ್ಯಾಯ ಸಿಕ್ಕಂತಾಯಿತು? ವ್ಯಕ್ತಿಯ ಆಯುಷ್ಯದ ಅನೇಕ ವರ್ಷಗಳು ಜೈಲಿನಲ್ಲಿ ಕಳೆಯುವಂತಾದರೆ ಆ ವ್ಯಕ್ತಿಗೆ ಆದ ನಷ್ಟಕ್ಕೆ ಯಾರು ಹೊಣೆ? ದೇಶದಲ್ಲಿ ಇಂತಹ ಘಟನೆಗಳು ನೂರಾರು ಸಂಖ್ಯೆಯಲ್ಲಿ ನಡೆಯುತ್ತಲೇ ಇವೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ ಪ್ರಕರಣ.

ಏನಿದು ಸಿದ್ದಿಖಿ ಕಪ್ಪನ್ ಪ್ರಕರಣ?

2020 ನೇ ಇಸವಿ ಸೆಪ್ಟಂಬರ್ 14 ರಂದು ಉತ್ತರಪ್ರದೇಶದ ಹಾತರಸ್ ನಲ್ಲಿ ದಲಿತ ಯುವತಿಯೊಬ್ಬಳ ಮೇಲೆ ನಾಲ್ವರು ಸವರ್ಣೀಯರಿಂದ ಬರ್ಬರ ಅತ್ಯಾಚಾರ ನಡೆಯಿತು. ಕ್ರೌರ್ಯ ಯಾವ ಮಟ್ಟಿನದಾಗಿತ್ತೆಂದರೆ, ಅಂತಿಮವಾಗಿ ಅದು ಆಕೆಯ ಸಾವಿಗೆ ಕಾರಣವಾಗಿತ್ತು. ಈ ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಸಕಾಲದಲ್ಲಿ ಆಕೆಯ ನೆರವಿಗೆ ಬಂದಿರಲಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿಯೂ ತಕ್ಷಣ ಆಕೆಗೆ ಸೂಕ್ತ ಚಿಕಿತ್ಸೆ ಸಿಕ್ಕಿರಲಿಲ್ಲ. ಸರಕಾರದ ವತಿಯ ತೀವ್ರ ಲೋಪದ ಈ ಸುದ್ದಿ ಹರಡುತ್ತಿದ್ದಂತೆ ಜನಾಕ್ರೋಶ ಹೆಚ್ಚ ತೊಡಗಿತು. ಪರಿಸ್ಥಿತಿ ಕೈಮೀರುವುದನ್ನು ಅರಿತ ಉತ್ತರಪ್ರದೇಶ ಪೊಲೀಸರು ಹೆತ್ತವರಿಗೆ ಒಪ್ಪಿಸುವ ಮಾತಂತಿರಲಿ, ಅವರಿಗೆ ಸರಿಯಾಗಿ ನೋಡಲೂ ಬಿಡದೆ, ಬಲವಂತವಾಗಿ ರಾತ್ರೋರಾತ್ರಿ ಆ ಹೆಣ್ಣುಮಗಳ ಮೃತದೇಹವನ್ನು ಸುಟ್ಟು ಹಾಕಿದ್ದರು. ಪ್ರಜೆಗಳ ಹಕ್ಕುಗಳನ್ನು ರಕ್ಷಿಸಬೇಕಾದ ಚುನಾಯಿತ ಸರಕಾರವೇ ಹೀಗೆ ಕಾನೂನು ಬಾಹಿರವಾಗಿ ಮತ್ತು ಅಮಾನುಷವಾಗಿ ನಡೆದುಕೊಂಡಿತ್ತು.

ಈ ಪ್ರಕರಣವನ್ನು ವರದಿ ಮಾಡಲು ಅನೇಕರು ಹಾತರಸ್ ಗೆ  ಹೋಗಿದ್ದರು. ಇದೇ ರೀತಿಯಲ್ಲಿ ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ ಕೂಡಾ ಹಾತರಸ್ ಗೆ ಹೊರಟಿದ್ದರು. ಆದರೆ ಹಾತರಸ್ ನ ಹಾದಿಯಲ್ಲಿರುವಾಗಲೇ ಕಪ್ಪನ್ ಮತ್ತು ಅವರ ಜತೆಗಿದ್ದ ಮೂವರನ್ನು ಉತ್ತರಪ್ರದೇಶ ಪೊಲೀಸರು ಮಥುರಾದಲ್ಲಿ ಅಕ್ಟೋಬರ್ 5, 2020 ರಂದು ಬಂಧಿಸಿದ್ದರು.

ವಿಚಿತ್ರವೆಂದರೆ, ಕಪ್ಪನ್ ಯಾವ ಅಪರಾಧವನ್ನೂ ಮಾಡಿರಲಿಲ್ಲ. ಅವರು ಪತ್ರಕರ್ತನಾಗಿ ತನ್ನ ಕರ್ತವ್ಯವನ್ನಷ್ಟೇ ನಿಭಾಯಿಸುತ್ತಿದ್ದರು. ಆದರೆ ಅವರ ಹೆಸರು ಸಿದ್ದಿಖಿಯಲ್ಲವೇ?!  ಹಾತರಸ್ ಭೇಟಿಯ ಅವರ ಉದ್ದೇಶ, ಮತೀಯ ಸೌಹಾರ್ದವನ್ನು ಕದಡುವುದು, ಗಲಭೆ ಪ್ರಚೋದಿಸುವುದು, ಭಯೋತ್ಪಾದನೆ ಹರಡುವುದು ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದು ಎಂದು ಪೊಲೀಸರು ಆರೋಪಿಸಿದ್ದರು. ಅವರ ಮೇಲೆ ತುಂಬ ಕಠಿಣವಾದ ‘ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಕಪ್ಪನ್ ರನ್ನು ಶಿಕ್ಷಿಸಲು ಬಲವಾದ ಪುರಾವೆಗಳಿಲ್ಲ ಎನ್ನುವುದು ಖಚಿತವಾಗುತ್ತಲೇ, ಜುಜುಬಿ 5000 ರುಪಾಯಿ ವರ್ಗಾವಣೆಯನ್ನು ನೆಪ ಮಾಡಿಕೊಂಡು ಜ್ಯಾರಿ ನಿರ್ದೇಶನಾಲಯದ ವತಿಯಿಂದ ಅಕ್ರಮ ಹಣ ವರ್ಗಾವಣೆ ಕೇಸನ್ನೂ ಅವರ ವಿರುದ್ಧ ದಾಖಲಿಸಲಾಯಿತು.

ಕಪ್ಪನ್ ರ ಕಷ್ಟಗಳ ಸರಣಿ ಇಲ್ಲಿಂದ ಆರಂಭವಾಯಿತು. ಅವರ ಮೇಲೆ ಕೇಸು ದಾಖಲಿಸಿರುವುದರ ಹಿಂದೆ ಇರುವುದು ದುರುದ್ದೇಶ ಎಂಬುದು ಮೇಲು ನೋಟಕ್ಕೇ ತಿಳಿಯುವಂತಿದ್ದರೂ ಕೆಳ ಕೋರ್ಟ್ ಗಳು ಪದೇ ಪದೇ ಅವರಿಗೆ ಜಾಮೀನು ನಿರಾಕರಿಸಿದವು. ಮುಂದೆ ಹೈಕೋರ್ಟ್ ಕೂಡಾ ಜಾಮೀನು ನಿರಾಕರಿಸಿತು. ಕೋವಿಡ್ ಕಾಲದಲ್ಲಿಯೂ ಕಪ್ಪನ್ ಜೈಲಿನಲ್ಲಿ ನರಳಬೇಕಾಯಿತು. ಪರಿಣಾಮವಾಗಿ ಅವರು ಕೋವಿಡ್ ಸೋಂಕಿಗೆ ಒಳಗಾದರು. ಆಗ ಸಿಜೆಐ  ಆಗಿದ್ದ ಜಸ್ಟಿಸ್ ರಮಣ ಅವರು ಕಪ್ಪನ್ ರನ್ನು ದಿಲ್ಲಿಗೆ ತರಿಸಿ ಅವರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಿದ್ದರು.

ಮುಗಿಯದ ಯಾತನೆ

ವರ್ಷ ಉರುಳಿದರೂ ಕಪ್ಪನ್ ಗೆ ಜಾಮೀನು ಸಿಗಲೇ ಇಲ್ಲ. ಕೇರಳದಲ್ಲಿರುವ ಆಕೆಯ ಪತ್ನಿ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಯಾವ ಫಲವೂ ದೊರೆಯಲಿಲ್ಲ. ಈ ನಡುವೆ 18 ಜೂನ್ 2021 ರಲ್ಲಿ ಕಪ್ಪನ್ ಅವರ ತಾಯಿ ತೀರಿಕೊಂಡರು. ತೀರಿಕೊಳ್ಳುವ ಮೊದಲು ತನ್ನ ತಾಯಿಯ ಮುಖವನ್ನು ನೋಡುವ ಅವಕಾಶವೂ ಕಪ್ಪನ್ ಗೆ ಇರಲಿಲ್ಲ! ಯಾತನೆಗಳ ಮೇಲೆ ಯಾತನೆ. ಮಾಡಿಯೇ ಇರದ ಅಪರಾಧಕ್ಕಾಗಿ ಜೈಲಿನೊಳಗೆ ಬಂಧಿ.

ಕಪ್ಪನ್ ರನ್ನು ಜೈಲಿನಿಂದ ಹೊರ ತರಲು ಅವರ ಒಡನಾಡಿಗಳು ಹೋರಾಟ ನಡೆಸಿಯೇ ಇದ್ದರು. ಅಂತಾರಾಷ್ಟ್ರೀಯವಾಗಿ ಪ್ರತಿಭಟನೆಗಳು, ಒತ್ತಡಗಳು ಸಾಗಿಯೇ ಇದ್ದವು. ಹೀಗೆಯೇ ಒಂದೂ ಮುಕ್ಕಾಲು ವರ್ಷ ಕಳೆದುಹೋಯಿತು. ಅಂತಿಮವಾಗಿ ಪ್ರಕರಣ ಸುಪ್ರೀಂ ಕೋರ್ಟ್ ಗೆ ಬಂತು. ಆಗ ಸಿಜೆಐ ಆಗಿದ್ದವರು ಜಸ್ಟಿಸ್ ಯು ಯು ಲಲಿತ್. ಕಪ್ಪನ್ ಮೇಲಿನ  ಪ್ರಕರಣಕ್ಕೆ ಬಲವಾದ ಪುರಾವೆ ಏನಿದೆ ಎಂದು ಕೋರ್ಟ್ ಸರಕಾರಿ ವಕೀಲರನ್ನು ಕಟುವಾಗಿ ಪ್ರಶ್ನಿಸಿತು. ಆದರೆ ಸರಕಾರದ ಬಳಿ ಸೂಕ್ತ ಸಾಕ್ಷ್ಯಾಧಾರಗಳೇ ಇರಲಿಲ್ಲ. ಸರಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಕಪ್ಪನ್ ಗೆ ಜಾಮೀನು ನೀಡಿತು; ಬಂಧನದ ಸುಮಾರು 700 ದಿನಗಳ ಬಳಿಕ!

ಇದು ನಡೆದುದು ಸೆಪ್ಟಂಬರ್ 9, 2022 ರಂದು. ಯುಎಪಿಎ ಪ್ರಕರಣದಲ್ಲೇನೋ ಜಾಮೀನು ಸಿಕ್ಕಿತು. ಆದರೆ ಕಪ್ಪನ್ ಜೈಲಿನಿಂದ ಹೊರಬರುವಂತಿರಲಿಲ್ಲ. ಯಾಕೆಂದರೆ ಅವರ ಮೇಲೆ ಅಕ್ರಮ ಹಣ ವರ್ಗಾವಣೆಯ ಕೇಸು ಬಾಕಿ ಇತ್ತು. ಇನ್ನೊಂದು ಸುತ್ತಿನ ನ್ಯಾಯಕ್ಕಾಗಿನ ಹೋರಾಟ ಶುರುವಾಯಿತು. ಕೇವಲ 5000 ರುಪಾಯಿ ವರ್ಗಾವಣೆಯ ಕೇಸು! ಅಕ್ಟೋಬರ್ ಹೋಯಿತು, ನವೆಂಬರ್ ಹೋಯಿತು,  ಕೊನೆಗೆ 2022 ಡಿಸೆಂಬರ್ 23  ರಂದು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಬೆಂಚ್ ಕಪ್ಪನ್ ಗೆ ಜಾಮೀನು ಮಂಜೂರು ಮಾಡಿತು. 

ಈಗ ಕಪ್ಪನ್  ಜೈಲಿನಿಂದ ಹೊರಬರಬಹುದೇ? ಉಹುಂ ಇಲ್ಲ. ಯಾಕೆಂದರೆ ಈಗ ನ್ಯಾಯಾಲಯಗಳಿಗೆ ವರ್ಷದ ಕೊನೆಯ ರಜಾದಿನಗಳು. ಮತ್ತೆ ನ್ಯಾಯಾಲಯ ಕಾರ್ಯಾರಂಭ ಮಾಡಿದ ಮೇಲೆ ಜಾಮೀನಿನ ಷರತ್ತುಗಳನ್ನು ಪೂರೈಸಿದ ಮೇಲೆಯಷ್ಟೇ ಕಪ್ಪನ್ ಮನೆಗೆ ಹೋಗಬಹುದು. ಅಂದರೆ 2020 ರಲ್ಲಿ ಜೈಲು ಸೇರಿದ ಕಪ್ಪನ್ 2023 ರಲ್ಲಿ  ಜೈಲಿನಿಂದ ಹೊರಬರಬಹುದು. ನೆನಪಿಡಿ,  ಇದು ಕೇವಲ ಜಾಮೀನು. ಆರೋಪ ಮುಕ್ತನಾಗಲು ಅವರು ಸಾಗಬೇಕಾದ ದಾರಿ  ಎಷ್ಟು ದೀರ್ಘ  ಇದೆ, ತಗಲುವ ಖರ್ಚು ಎಷ್ಟು ಊಹಿಸಿ.

ಶಿಕ್ಷೆ ಮೊದಲು, ಆಮೇಲೆ ತನಿಖೆ !!

‘ಹತ್ತು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆಯಾ‍ಗಬಾರದು’ ಎಂಬುದು ಪ್ರಸಿದ್ಧ ಇಂಗ್ಲಿಷ್ ಜ್ಯೂರಿ ವಿಲಿಯಂ ಬ್ಲಾಕ್ ಸ್ಟನ್ ಎಂಬಾತನ ಮಾತು. ಪ್ರಕರಣಗಳನ್ನು ನಿಭಾಯಿಸುವಾಗ  ಜಗತ್ತಿನ ಅನೇಕ ನ್ಯಾಯಾಲಯಗಳು ಇದನ್ನೊಂದು ಆಧಾರ ತತ್ತ್ವದಂತೆ ಪರಿಗಣಿಸುತ್ತವೆ. ಜಾಮೀನು ನೀಡುವ ವಿಷಯದಲ್ಲಿಯೂ ನ್ಯಾಯಶಾಸ್ತ್ರ ತುಂಬಾ ಸ್ಪಷ್ಟವಿದೆ. Bail is the rule and jail is the exception ಎಂದು ಅದು ಹೇಳುತ್ತದೆ. ಅಂದರೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬೇಕು. ಆದರೆ ಈವತ್ತು ನಮ್ಮ ನ್ಯಾಯಾಲಯಗಳು ಹಾಗೆ ನಡೆದುಕೊಳ್ಳುತ್ತವೆಯೇ? ಪೊಲೀಸರು ದುರುದ್ದೇಶದಿಂದ ಕೇಸು ದಾಖಲಿಸಿ ಕೋರ್ಟಿ್ಗೆ ಎಳೆ ತರಬಹುದು. ಆದರೆ ನ್ಯಾಯಾಧೀಶರು ಪೂರ್ವಗ್ರಹ ರಹಿತವಾಗಿ ಪ್ರಕರಣವನ್ನು ಪರಿಶೀಲಿಸಿದರೆ ಮೇಲು ನೋಟದಲ್ಲಿಯೇ ಅದು ಗಂಭೀರ ಹೌದೋ ಅಲ್ಲವೋ ಎಂದು ಅವರಿಗೆ ತಿಳಿಯುವುದು ಕಷ್ಟವೇನಲ್ಲ. ಗಂಭೀರ ಅಪರಾಧ ಅಲ್ಲವಾದರೆ ಅವರನ್ನು ಜೈಲಿಗೆ ಹಾಕುವ ಅಗತ್ಯವಾದರೂ ಏನು?

ದೇಶದ ಆಡಳಿತವು ಕಾನೂನು ನಿಯಮಗಳ ಆಧಾರದಲ್ಲಿ ನಡೆಯಬೇಕೇ ಹೊರತು, ಭಾವನೆಗಳ ಆಧಾರದಲ್ಲಿ ಅಲ್ಲ; ಸಂಘಟನೆಗಳ ಒತ್ತಡ, ಮಾಧ್ಯಮಗಳ ಆಗ್ರಹ, ಸಾಮಾಜಿಕ ಮಾಧ್ಯಮಗಳ ಅಭಿಯಾನದ ಮೂಲಕ ಅಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದರೆಂದೋ, ಪಾಕಿಸ್ತಾನ ಕ್ರಿಕೆಟ್ ‍ಗೆದ್ದಾಗ ಸಂಭ್ರಮಿಸಿದರೆಂದು ಆರೋಪ ಹೊರಿಸಿ ತಿಂಗಳು ಗಟ್ಟಲೆ ಅವರನ್ನು ಜೈಲಿನಲ್ಲಿರಿಸುವುದು ಏನನ್ನು ಸೂಚಿಸುತ್ತದೆ? ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ಅಥವಾ ಕಾನೂನಿನ ಯಾವ ಕಲಂ ಅಡಿಯಲ್ಲಿ ಅದು ಅಪರಾಧ ಎಂದು ನ್ಯಾಯಾಲಯಗಳು ವಿವೇಚಿಸಬೇಡವೇ?!

ಈವತ್ತು ಪ್ರಭುತ್ವ ಮನಸು ಮಾಡಿದರೆ ಸುಮ್ಮನೆ ನಿಮ್ಮ ಮೇಲೆ ಕೇಸು ಹಾಕಿ ಜೈಲಿನಲ್ಲಿಡಬಹುದು. ನಿಮ್ಮ ಮೊಬೈಲ್, ಕಂಪ್ಯೂಟರ್ ವಶಪಡಿಸಿಕೊಂಡು ಅದರಲ್ಲಿ ಸುಳ್ಳು ದಾಖಲೆಗಳನ್ನು ಸೇರಿಸಿ ನಿಮ್ಮನ್ನು ವರ್ಷ ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಬಹುದು (ಭೀಮಾ ಕೋರೇಗಾಂವ್ ಕೇಸಿನಲ್ಲಿ ಹೀಗೆ ಮಾಡಲಾದುದು ಈಗಾಗಲೇ ಬೆಳಕಿಗೆ ಬಂದಿದೆ). ಒಂದು ದಿನ ನೀವು ನಿರಪರಾಧಿ ಎಂದು ಸಾಬೀತಾಗಲೂಬಹುದು. ಆದರೆ ಆಗ ಶಿಕ್ಷೆ ಅನುಭವಿಸಿಯಾಗಿರುತ್ತದೆ!

ಪ್ರಕ್ರಿಯೆಯೇ ಒಂದು ಶಿಕ್ಷೆ!

ಉತ್ತರ ಪ್ರದೇಶದ ವಿಷ್ಣು ತಿವಾರಿ ಎಂಬಾತ ಅತ್ಯಾಚಾರ ಆರೋಪದಿಂದ ಮುಕ್ತನಾದ. ಆದರೆ ಹೀಗೆ ಮುಕ್ತನಾಗುವುದಕ್ಕೆ ಮುನ್ನ ಆತ ಜೈಲಿನಲ್ಲಿ ಕಳೆದುದು ಬರೋಬ್ಬರಿ 20 ವರ್ಷಗಳನ್ನು! ಉಗ್ರರು ಎಂಬ ಆರೋಪದಡಿ ದಶಕಗಳ ಕಾಲ ಜೈಲಿನಲ್ಲಿದ್ದು, ಆಮೇಲೆ ಕೋರ್ಟ್ ತೀರ್ಪು ಪ್ರಕಾರ ಅಮಾಯಕರೆನಿಸಿಕೊಂಡು ಹೊರಬಂದವರೆಷ್ಟು ಮಂದಿ? ಭೀಮಾ ಕೋರೇಗಾಂವ್ ಪ್ರಕರಣದಲ್ಲಿ ನಿಜವಾದ ಅಪರಾಧಿಗಳು ಆರಾಮ ಹೊರಗೆ ತಿರುಗಾಡಿಕೊಂಡಿದ್ದು ಘಟನೆಗೆ ಸಂಬಂಧವೇ ಪಡದವರೆಷ್ಟು ಮಂದಿ ಜೈಲಿನಲ್ಲಿಲ್ಲ? ಮಾನವ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ವಿದ್ವಾಂಸ ಆನಂದ ತೇಲ್ತುಂಬ್ಡೆ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಕವಿ ವರವರ ರಾವ್ ಅವರದೂ ಇದೇ ಕತೆ. ಗೌತಮ ನವಲಕಾ ವರ್ಷಗಳ ಕಾಲ ಜೈಲಿನಲ್ಲಿದ್ದು ಈಗ ಗೃಹಬಂಧನದಲ್ಲಿದ್ದಾರೆ. ಸುರೇಂದ್ರ ಗಾಡ್ಲಿಂಗ್, ಸುಧೀರ್ ಧವಲೆ, ರೋನಾ ವಿಲ್ಸನ್, ಶೋಮಾ ಸೇನ್, ಮಹೇಶ್ ರಾವತ್, ಅರುಣ್ ಫೆರೇರಾ, ವರ್ನನ್ ಗೊನ್ಸಾಲ್ವೇಸ್, ಹನಿಬಾಬು, ಸಾಗರ್ ಗೋರ್ಖೆ, ರಮೇಶ್ ಗಾಯ್ಚೋರ್, ಜ್ಯೋತಿ ಜಗತಾಪ್ ಇವರೆಲ್ಲರೂ ಇದೇ ಪ್ರಕರಣದಲ್ಲಿ ಈಗಲೂ ಜೈಲಿನಲ್ಲಿದ್ದಾರೆ.  85 ರ ಮುದುಕ ಫಾದರ್ ಸ್ಟಾನ್ ಸ್ವಾಮಿಯಂತೂ ಪಾನೀಯ ಕುಡಿಯವ ಒಂದು ಸ್ಟ್ರಾ ಗಾಗಿ ಕೋರ್ಟ್ ನ ಮುಂದೆ ಅಂಗಾಲಾಚಬೇಕಾಯಿತು. ಕೊನೆಗೂ ಅವರು ಕಸ್ಟಡಿಯಲ್ಲಿಯೇ ಕೊನೆಯುಸಿರೆಳೆದರು.

ಜೆ ಎನ್ ಯು ನ ಪ್ರತಿಭಾವಂತ ವಿದ್ಯಾರ್ಥಿ ಉಮರ್ ಖಾಲೀದ್ ದೆಹಲಿ ಗಲಭೆಯ ಪಿತೂರಿಗಾರ ಎಂಬ ಆರೋಪದಲ್ಲಿ ಜೈಲಿನಲ್ಲಿದ್ದಾರೆ. ಅವರ ಜತೆಗೆ ಇನ್ನೂ ಅನೇಕ ಹೋರಾಟಗಾರರು, ಹೆಣ್ಣುಮಕ್ಕಳು ಕೂಡಾ ವರ್ಷ ವರ್ಷಗಳಿಂದ ಜೈಲಿನಲ್ಲಿದ್ದಾರೆ. ಫ್ಯಾಕ್ಟ್ ಚೆಕ್ಕರ್ ಮಹಮದ್ ಜುಬೇರ್ ರಿಗೆ ಸರಕಾರ ಕಿರುಕುಳ ಕೊಡಲಾರಂಭಿಸಿದಾಗ ಕೆಳ ಕೋರ್ಟ್ ಗಳು ಆತನಿಗೆ ರಕ್ಷಣೆ ಕೊಡಲೇ ಇಲ್ಲ. ಅದಕ್ಕೆ ಸುಪ್ರೀಂ ಕೋರ್ಟೇ ಮಧ‍್ಯಪ್ರವೇಶ ಮಾಡಬೇಕಾಯಿತು.

ಇವೆಲ್ಲ ನ್ಯಾಯಾಂಗಕ್ಕೆ ಶೋಭೆ ತರುವಂತಹ ನಡೆಗಳೇ? ನ್ಯಾಯದಾನ ಎಂಬುದು ಕಾನೂನು ಮತ್ತು ಸಂವಿಧಾನವನ್ನು ಆಧರಿಸಿಯೇ ಇರುವುದಾದರೆ ಯಾವ ಕೋರ್ಟೇ ಇರಲೀ, ಯಾವ ನ್ಯಾಯಾಧೀಶರೇ ಇರಲಿ ಅವರು ನೀಡುವ ನ್ಯಾಯ ಒಂದೇ ತೆರನಾಗಿರಬೇಕಲ್ಲವೇ? ಒಂದೇ ಪ್ರಕರಣದಲ್ಲಿ ಒಂದು ಕೋರ್ಟು ಜಾಮೀನು ನಿರಾಕರಿಸುತ್ತದೆ ಇನ್ನೊಂದು ಕೋರ್ಟು ಜಾಮೀನು ನೀಡುತ್ತದೆಯಾದರೆ ನ್ಯಾಯ ಎಂದರೆ ಏನು? ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ಒಬ್ಬರು ನ್ಯಾಯಮೂರ್ತಿಗೆ ಸಮವಸ್ತ್ರಕ್ಕಿಂತಲೂ ಹೆಣ್ಣುಮಕ್ಕಳ ಶಿಕ್ಷಣವೇ ಮುಖ್ಯವಾಗುತ್ತದಾದರೆ, ಇನ್ನೊಬ್ಬ ನ್ಯಾಯಮೂರ್ತಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕಿಂತಲೂ ಸಮವಸ್ತ್ರವೇ ಮುಖ್ಯವಾಗುತ್ತದೆ ಎಂದರೆ ಅದು ನ್ಯಾಯದ ಅಣಕದಂತೆ ಕಾಣುವುದಿಲ್ಲವೇ? ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥವಾದರೆ ಸಾಲದು,  ‘ನ್ಯಾಯ’ ವೂ ಸಿಗುವಂಥಾಗಬೇಕಲ್ಲವೇ?

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

Related Articles

ಇತ್ತೀಚಿನ ಸುದ್ದಿಗಳು