Thursday, June 13, 2024

ಸತ್ಯ | ನ್ಯಾಯ |ಧರ್ಮ

ಇದು ಆಸ್ಪತ್ರೆ ಕಾಯಿಲೆ ಅಲ್ಲದೆಯೂ ಇರಬಹುದು ಅಲ್ಲವೇ…?

ಸೋಪಾನಪೇಟೆಯ ದೊಡ್ಡ ಆಸ್ಪತ್ರೆಗೆ ಬಂದ ಲಕ್ಷ್ಮಿಗೆ ಪೂವಯ್ಯ ಡಾಕ್ಟರರ ಮುತುವರ್ಜಿ ಯಿಂದಾಗಿ ತರಾತುರಿಯಲ್ಲೇ  ಔಷದೋಪಚಾರ ಆರಂಭವಾಗುತ್ತದೆ. ಆದರೆ ಎರಡು ಮೂರು ದಿನವಾದರೂ ಅವಳಲ್ಲಿ ಯಾವುದೇ ಬದಲಾವಣೆ ಕಾಣದೆ, ಡಾಕ್ಟರ್ ಸೇರಿದಂತೆ ಎಲ್ಲರೊಂದಿಗೂ ವಿಚಿತ್ರವಾಗಿ ವರ್ತಿಸಲು ತೊಡಗುತ್ತಾಳೆ.  ಇತ್ತ ಹೊಸ ನಾರಿಪುರದಲ್ಲಿ ದೊಡ್ಡಮ್ಮನ ಮಾತಿಗೆ ಕಟ್ಟು ಬಿದ್ದ ಚಂದ್ರಹಾಸ, ದೊಡ್ಡಮ್ಮ ಕಟ್ಟಿ ಕೊಟ್ಟ ಬುತ್ತಿಹಿಡಿದು ಗಿರಿಧರ,ಗಂಗೆಯರೊಂದಿಗೆ ಸೋಪಾನ ಪೇಟೆಯ ಬಸ್ ಹತ್ತುತ್ತಾನೆ

ವಾಣಿ ಸತೀಶ್ ಅವರ  ತಂತಿ ಮೇಲಣ ಹೆಜ್ಜೆಯ ಹತ್ತನೆಯ ಕಂತು ಓದಿ.

ಅವ್ವ ಅಪ್ಪನನ್ನು ತಮ್ಮ ಕೊಠಡಿಗೆ ಬರಲು ಹೇಳಿ ಹೋದ ಡಾಕ್ಟರ್ ಪೂವಯ್ಯ,  ತಮ್ಮ ಕುರ್ಚಿಯಲ್ಲಿ ದಿಗ್ಮೂಡರಾಗಿ ಕಣ್ಣು ಮುಚ್ಚಿ ಕುಳಿತರು. ತಮ್ಮ ಮನಸ್ಸನ್ನು ಓದಿದವಳಂತೆ ಮಾತಾಡುತ್ತಿದ್ದ ಲಕ್ಷ್ಮಿಯ ಮುಖಭಾವ, ಇವರು ಗಾಢವಾಗಿ ನಂಬಿಕೊಂಡು ಬಂದ ವಿಜ್ಞಾನವನ್ನು ಅಣಕಿಸುತ್ತಿದ್ದಂತೆನಿಸಿತ್ತು. ಅಲ್ಲದೆ ಅವರ ಮನಸ್ಸು , ಇದು ಆಸ್ಪತ್ರೆ ಕಾಯಿಲೇನೂ ಅಲ್ಲ  ಹುಷಾರಾಗುವ ಕಾಯಿಲೇನೂ ಅಲ್ಲ, ಎಂದ ಲಕ್ಷ್ಮಿಯ ನಿಷ್ಠುರವಾದ  ಮಾತಿನ ಅರ್ಥದ ಗೂಢಚರ್ಯೆಗಿಳಿಯಿತು. ತಾವು ಎಂದೂ ನಂಬದಿದ್ದ ದಯ್ಯ,ದೇವರುಗಳ ಚಿತ್ರಣ ಡಾಕ್ಟರರ ಊಹೇಗೂ ಮೀರಿ,  ನಾನಾ ಅವತಾರಗಳಲ್ಲಿ ಮೂಡಿ ನರ್ತಿಸತೊಡಗಿತು. ಈ ಗೊಂದಲದಲ್ಲಿಯೇ ಮುಳುಗಿದ್ದ ಡಾಕ್ಟರರಿಗೆ ಅಪ್ಪ ಬಂದು ಸಣ್ಣಗೆ ಕೆಮ್ಮಿದಾಗಲೆ ಎಚ್ಚರವಾಗಿದ್ದು. ತುಸು ಗಲಿಬಿಲಿಯಿಂದಲೇ ತಮ್ಮ ಎದುರಿದ್ದ ಕುರ್ಚಿಯಲ್ಲಿ ಅಪ್ಪ ಅವ್ವನನ್ನು ಕುಳಿತುಕೊಳ್ಳಲು ಹೇಳಿ, ಪರದೆಯ ಹಿಂದಿದ್ದ ವಾಷ್ ಬೇಸಿನಿನಲ್ಲಿ ಮುಖಕ್ಕೆ ನೀರು ಸಿಂಪಡಿಸಿ ಕೊಂಡು ಬಂದು ಮಾತಿಗಿಳಿದರು.

ಡಾಕ್ಟರ್: ನಿಮ್ಮ ಮಗಳು ಏನು ಓದಿದ್ದಾಳೆ ?

ಅಪ್ಪ   :  ಮೂರನೇ ಕ್ಲಾಸ್ ಸಾ; ಮೇಷ್ಟ್ರು  ಒಡ್ದು ಬುಟ್ರು ಅಂತ ಅರ್ಧಕ್ಕೆ ಇಸ್ಕೂಲ್ ಬುಟ್ಬುಟ್ಟ್ಲು .

ಡಾಕ್ಟರ್ :  ಮತ್ತೆ… ಇಂಗ್ಲೀಷ್ ಮಾತಾಡೋದನ್ನ ಹೇಗೆ ಕಲಿತಳು !?

ಅವ್ವ : ಇಂಗ್ಲೀಸಾ… ಇದೇನ್ ಡಾಕ್ಟ್ರೆ ತಮಾಸಿ ಮಾಡ್ತಿದಿರಾ. ಅವ್ಳುಗೆ ಕನ್ನಡವೇ ನೆಟ್ಟ್ಗೆ ಮಾತಾಡಕ್ಕೆ ಬರದಿಲ್ಲ ಅಂತದ್ರಲಿ ಈ‌ ಇಂಗ್ಲೀಸು ಎಲ್ಲಿಂದ ಬಂದಾತು ಬುಡಿ ಎಂದು ರಾಗ ಎಳೆಯುತ್ತಾ ಅಪ್ಪನ ಮುಖ ನೋಡಿದಳು.

ಡಾಕ್ಟರ್ : ಅಪ್ಪನನ್ನು ನೋಡುತ್ತಾ ನಿಮ್ಮ ಒಳ ಹೊರಗಿನ ವ್ಯವಹಾರಗಳನ್ನೇನಾದರು  ಅವಳಲ್ಲಿ ಹೇಳಿಕೊಳ್ಳುತ್ತೀರಾ ?

ಅವ್ವ: ಅಯ್ಯೋ..ಅವ್ಳುಗೆ ಕ್ವಾಣೆ ಉಸಾಬರಿ ಬುಟ್ರೆ ಏನು ಗೊತ್ತಿಲ್ಲ ಸಾ. ಮೂಗ ಮುತ್ನಂತ ಮಗ. ಅವ್ಳು ಮೈ ನೆರೆದ್ ಮೇಲೆ ನಮ್ಮ ಗಂಡ್ಹೈಕ್ಳು ಮನೆ ತಲೆಬಾಗ್ಲಿಂದ ಈಚೆ ಕಳ್ಸೇಯಿಲ್ಲ ಸಾ. ಅವತ್ತೆ ಮೊದ್ಲುನೆದಪ ನಮಗೆ ಯಾರಿಗೂ ಹೇಳ್ದಂಗೆ ಅವರಪ್ಪುಂಗೆ ಊಟ ಕೊಡಕ್ಕೆ ಅಂತ ಹೊಲುಕ್ಕೋಗ್ಗ್ಬುಟ್ಟಿದ್ಲು ಸಾ,  ಅಲ್ಲಿಂದ ಬಂದ್ ಮಾರನೆ ದಿನದಿಂದ್ಲೆಯ ಹಿಂಗೆ ಉಸಾರ್ ತಪ್ಪಿದ್ದು . ಎಂದು ಗದ್ಗದಿತಳಾದಳು .

ಡಾಕ್ಟರ್ : ಆಸ್ಪತ್ರೆಯಲ್ಲದೆ ಬೇರೆ ಕಡೆ ಎಲ್ಲಾದರು ಅವಳನ್ನು ತೋರಿಸಿದ್ರ ? ಎಂದು ಪ್ರಶ್ನಿಸಿದಳು

 ಅವ್ವ ಅಪ್ಪ ಮುಖಾ ಮುಖ ನೋಡಿ ಕೊಂಡುರು. ಅಪ್ಪ ತುಸು ಹಿಂಜರಿಯುತ್ತಲೇ ಮಸೀದಿಯಲ್ಲಿ ಶರೀಫ ಕಾಕ ತಾಯತ ಕಟ್ಟಿ ಹೇಳಿದ ಮಾತುಗಳನ್ನೆಲ್ಲಾ ಡಾಕ್ಟರರಿಗೆ ಹೇಳಿದರು.

ಎಲ್ಲವನ್ನು ತಣ್ಣಗೆ ಕೇಳಿಸಿ ಕೊಂಡ  ಪೂವಯ್ಯ ಡಾಕ್ಟರ್ ಸಣ್ಣಗೆ ನಿಡುಸುಯ್ದು,  ಒಳಗೆ ಲಕ್ಷ್ಮಿ  ತಮ್ಮೊಂದಿಗೆ ವಿಚಿತ್ರವಾಗಿ ವರ್ತಿಸಿದ ಬಗೆಯನ್ನು ವಿವರ ವಿವರವಾಗಿ ಹೇಳಿದರು.  ಡಾಕ್ಟರ್ ಮಾತುಗಳನ್ನು ಕೇಳುತ್ತಿದ್ದ ಅಪ್ಪ ಅವ್ವನಿಗೆ ಅದಾಗಲೇ ತಮ್ಮ ಮುಂದಿನ ಹಾದಿ  ನಿಚ್ಚಳವಾಗಿ ತೆರೆದು ಕೊಂಡಿತ್ತು.  ಅಪ್ಪನಿಗೆ ಡಾಕ್ಟರರಲ್ಲಿ ತಮ್ಮ ಮುಂದಿನ ನಡೆಯನ್ನು ಹೇಳಿಬಿಡಬೇಕೆಂದು ನಾಲಿಗೆ ತುದಿಗೆ ಬಂತಾದರು ಅದನ್ನು ಹೇಗೆ ಹೇಳುವುದೆಂದು ತೋಚದೆ ಮುಗುಮ್ಮಾಗಿ ತಲೆ ತಗ್ಗಿಸಿ ಕೂತ.

ಇತ್ತ ಪೂವಯ್ಯ ಡಾಕ್ಟರ್  ಅವರಾಗಿಯೇ ಮುಂದಿನ ನಿರ್ಧಾರ  ತೆಗೆದು ಕೊಂಡು ಹೇಳಲಿ  ಎಂದು  ಕಾದು ಕುಳಿತರು. ಗೊಂದಲ್ಲಿದ್ದ ಅಪ್ಪ ಅವ್ವ ಎಷ್ಟೊತ್ತಾದರು ಬಾಯಿ ತೆಗೆಯಲೇ ಇಲ್ಲ. ಡಾಕ್ಟರ್ ಇದನ್ನು ಗ್ರಹಿಸಿದವರಂತೆ ತಾವೇ ಅವರ ಗೊಂದಲಕ್ಕೆ ತೆರೆ ಎಳೆಯಲು ಮುಂದಾದರು.  “ನಾನು ಒಬ್ಬ ಡಾಕ್ಟರ್ ಆಗಿ ಹೀಗೆ ಹೇಳುವುದು ತಪ್ಪಾಗ ಬಹುದು ಬೋಪಯ್ಯನವರೇ, ನಿಮ್ಮ ಆ ಕಾಕ ಹೇಳಿದಂತೆ ಇದು ಆಸ್ಪತ್ರೆಯ ಕಾಯಿಲೆ ಅಲ್ಲದೆಯೂ ಇರಬಹುದು ಅನ್ನಿಸಿಲ್ಲವೇ ನಿಮಗೆ ?” ಎಂದು ಅಪ್ಪನನ್ನೇ ಪ್ರಶ್ನಿಸಿದರು. ಅವ್ವ  ಡಾಕ್ಟರರ ಈ ಮಾತಿಗೆ ಕಾದು ಕುಳಿತವಳಂತೆ ಹುರುಪು ತುಂಬಿ “ಹುಂ ಡಾಕ್ಟ್ರೆ ಮೊದ್ಲಿಂದ್ಲು ನಮಗೆ ಇದೊಂದು ಅನುಮಾನ ಇದ್ದೇ ಇತ್ತು. ನೀವು ನಮ್ಮುನ್ನ ಇಲ್ಲಿಂದ ಬೇಗ ಕಳ್ಸುಡ್ಬುಟ್ರೆ ನಮ್ಮ ಮಗಿನ ಮಾದ್ಲಪುರುಕ್ಕೆ ಕರ್ಕೊಂಡೋಗಿ ಹುಸಾರ್ ಮಾಡ್ಕೊಬುಡ್ತಿವಿ”ಎಂದು ಹಲ್ಲು ಗಿಂಜುತ್ತಾ ಡಾಕ್ಟರರ ಮುಖ ನೋಡಿದಳು. ಡಾಕ್ಟರ್ “ಇದೂ ಒಂದು ಪ್ರಯತ್ನ ಮಾಡಿಯೇ ಬಿಡಿ ನೋಡುವ” ಎಂದು ಹೇಳಿ, ಇನ್ನು ಒಂದು ಇಂಜೆಕ್ಷನ್ ಮಾತ್ರ ಬಾಕಿ ಇದೆ ಅದನ್ನು ತೆಗೆದು ಕೊಂಡು ನಾಳೆ ಮಧ್ಯಾಹ್ನದ ನಂತರ ನೀವು ಹೊರಡಲು ವ್ಯವಸ್ಥೆ ಮಾಡಿಕೊಳ್ಳ ಬಹುದು ಎಂದು ಹೇಳಿ ಹೋದರು.

ಬೆಳಗ್ಗಿನ ಹನ್ನೊಂದರ  ಹೊತ್ತಿಗೆ ಸೋಪಾನಪೇಟೆಯ ದೊಡ್ಡ ಆಸ್ಪತ್ರೆ ತಲುಪಿದ ಚಂದ್ರಹಾಸ ಗಿರಿಧರರಿಗೆ ಬಾಗಿಲಲ್ಲೇ ಎದುರಾದ ಅಪ್ಪ, ಬಂದಾಗಿನಿಂದ ಇದುವರೆಗೂ ನಡೆದ ಘಟನೆಯನ್ನೆಲ್ಲಾ ವಿವರಿಸಿ, ನಂತರ ಲಕ್ಷ್ಮಿ ಇದ್ದ ಕೋಣೆಗೆ ಅವರನ್ನು ಕರೆದುಕೊಂಡು ಬಂದ. ಮಲಗಿದ್ದ ಲಕ್ಷ್ಮಿ ಅವರನ್ನೆಲ್ಲ ಕಂಡು ತುಸು ಗೆಲುವಾಗಿ ಎದ್ದು ಕುಳಿತಳು. ಅಪ್ಪನನ್ನು ನೋಡುತ್ತಾ “ಏನ್ರಪ್ಪಾ ನೀವು, ಅವರೆಲ್ಲಾ ಈಗಷ್ಟೇ ವಳಿಕ್ ಬತ್ತವ್ರೆ  ಆಗ್ಲೆಯ ಎಲ್ಲನು ವರ್ದಿ ಒಪ್ಪುಸ್ಬುಟ್ರ” ಎಂದು ಹುಸಿ ಮುನಿಸು ತೋರಿದಳು. ಗಿರಿಧರನ ಕೈಲಿದ್ದ ಬುತ್ತಿಯನ್ನು ಕಂಡು “ಪಾಪ ದೊಡ್ಡವ್ವ ನಂಗೂ ಅಪ್ಪುಂಗು ಇಷ್ಟ ಅಂತ ರೊಟ್ಟಿನು ಗೊಡ್ಗಾರನು ಮಾಡಿ ಕಳ್ಸೈತೆ  ನೋಡವ್ವ” ಎಂದು ಹೇಳಿದಳು. ಅವ್ವ ಗಂಗೆ ಹಿಡಿದಿದ್ದ ಬುತ್ತಿ ಗಂಟನ್ನು ನೋಡುತ್ತಾ “ಅಲ್ಲ ಕಣ್ಮಗ ಇನ್ನು ಆ ಬುತ್ತಿ ಗಂಟುನ್ನೇ ಬಿಚ್ಚ್ ನೋಡಿಲ್ಲ ಅಂತದ್ರಲ್ಲಿ ಅಲ್ಲಿ ರೊಟ್ಟಿ ಗೊಡ್ಗಾರನೇ ಐತೆ ಅಂತ ನಿಂಗೆ ಹೆಂಗ್ ಗೊತ್ತವ್ವ” ಎಂದು ಕೇಳಿದಳು. ಲಕ್ಷ್ಮಿ “ಅಯ್ಯೋ ನೀನೊಬ್ಳು ನಾನ್ಯಾಕವ್ವ ಸುಳ್ಳ್ ಹೇಳ್ಳಿ ತಗ್ದು ನೋಡಬೇಕಾದ್ರೆ ಎಂದು ಹೇಳಿ, ಮೊದ್ಲು ನಂಗೊಂದು ಅರ್ಧ ಮುರ್ಕು ರೊಟ್ಟಿ ಹಾಕ್ಕೊಟ್ಬುಡವ್ವ ಆಸೆ ಆಯ್ತಾಯ್ತೆ” ಎಂದಳು. ಹುಷಾರು ತಪ್ಪಿದಾಗಿನಿಂದಲೂ ಇದೇ ಮೊದಲ ಬಾರಿಗೆ ಮಗಳು ಆಸೆ ಪಟ್ಟು ತಿನ್ನಲು ಕೇಳಿದ್ದನ್ನು ಕಂಡ ಅವ್ವ, ಸಂತೋಷದಿಂದ ಓಡಿಹೋಗಿ ತಟ್ಟೆ ತೊಳೆದುಕೊಂಡು ಬಂದು ರೊಟ್ಟಿಯ ಮೇಲೊಂದಿಷ್ಟು ಮೆಣಸಿನ ಖಾರ ಹಾಕಿ ಒಂದು ತುತ್ತು ರೊಟ್ಟಿ ಮುರಿದು ಬಾಯಿಗಿಟ್ಟಳು. 

ಲಕ್ಷ್ಮಿ ಬಾಯಿಗಿಟ್ಟ ತುತ್ತನ್ನು ಇನ್ನು  ನುಂಗಿಯೇ ಇರಲಿಲ್ಲ, ಅವಳಿಗೆ ಯಾರೋ ಗಂಟಲಿಗೆ ಕೈ ಹಾಕಿ  ಹೊಟ್ಟೆಯಲ್ಲಿ ಇದ್ದದ್ದನ್ನೆಲ್ಲಾ ಕಿತ್ತು ಹೊರ ತೆಗೆದಂತಹ ಅನುಭವವಾಯಿತು.  ಹೊಟ್ಟೆ ಎಲ್ಲಾ ಕಿವುಚಿದಂತಾಗಿ   ಬಕ್ಕನೆ  ವಾಂತಿ ಮಾಡಿಕೊಂಡು ಬಿಟ್ಟಳು. ಲಕ್ಷ್ಮಿಯ ತಲೆ ಬಳಿಯೇ ಕುಳಿತಿದ್ದ ಚಂದ್ರಹಾಸ ಕೂಡಲೆ ಪಕ್ಕದಲ್ಲಿದ್ದ ಬಟ್ಟಲು ತೆಗೆದು ಅವಳ ಬಾಯಿಯ ಮುಂದೆ ಹಿಡಿದ. ನಂತರ ಅವಳ ಬಾಯಿ ತೊಳೆಸಿ ಬಟ್ಟಲು ತುಂಬಿದ್ದ ವಾಂತಿಯನ್ನೆಲ್ಲ ಹೊರಗೆ ಸುರಿದು ಬಂದ. ಲಕ್ಷ್ಮಿ ಕಣ್ಣಿನಲ್ಲಿ ನೀರು ತುಂಬಿಸಿಕೊಂಡು ಚಂದ್ರಹಾಸನ ಮುಖ ನೋಡುತ್ತಾ, “ಅಣ್ಣಯ್ಯ ಅವತ್ತು ನಾನು ಮನೆ ಹೊರಿಕ್ ನಿಂತು ಅಲ್ಮೇಲಿ ಜೊತೆ ಮಾತಾಡ್ತಿದ್ದೆ ಅಂತ ಸೌದೆ ಪಾಲ್ ತಕ್ಕೊಂಡು ಬಡ್ದು, ನನ್ ತಲೆ ತೂತ ಮಾಡಿದ್ದೆ ನೋಡು ಅದ್ರು ನೋವು ಇನ್ನೂ ನನ್  ಮನಸ್ಸಲ್ಲಿ ಮಾದೇ ಇರ್ಲಿಲ್ಲ ಕನ, ನೋಡು ಈಗ ಆ ನೋವು ಮಾದೋಯ್ತು. 

ಇವತ್ತು ವಾಂತಿ ಬಾಚಿ ನನ್ನ್ ಋಣ ತೀರುಸ್ತೆ ಬುಡು”. ಎಂದು ಮೊದಲ ಬಾರಿಗೆ ಚಂದ್ರಹಾಸನ ಗಲ್ಲವನ್ನು ಪ್ರೀತಿಯಿಂದ ನೇವರಿಸಿದಳು. ಚಂದ್ರಹಾಸನಿಗೆ ಆ ದಿನದ ಚಿತ್ರಣ ಧುತ್ತನೆ ಕಣ್ಣ ಮುಂದೆ ಮೂಡಿ ನಿಂತಿತು. ಅಂದು ಲಕ್ಷ್ಮಿ ತಲೆಗೆ ಬಿದ್ದ ಪೆಟ್ಟಿನ ನೋವು ತಾಳಲಾರದೆ “ಅಯ್ಯಯ್ಯೋ ಕೆಟ್ಟೆ ಕಣ್ರಪ್ಪೋ” ಎಂದು ಯಾರಿಗೂ ಕೇಳದಂತೆ ಸಣ್ಣಗೆ ಕೂಗಿಕೊಂಡಿದ್ದ ದನಿ ಇಂದು ಚಂದ್ರಹಾಸನ ಕಿವಿ ಗಡಚಿಕ್ಕುವಂತೆ ಮಾರ್ದನಿಸಿತು. ಆ ದನಿಯಲ್ಲಿದ್ದ ವೇದನೆಯ ತೀಕ್ಷ್ಣತೆ ಚಂದ್ರಹಾಸನ ಎದೆಯನ್ನು ನಾಟಿದಂತಾಗಿ  ಕ್ಷಣ ನಡುಗಿ ಹೋದ. ಇನ್ನು ಅಲ್ಲಿ ನಿಲ್ಲಲು ಸಾಧ್ಯವೇ ಇಲ್ಲ ಎನ್ನಿಸಿ, ಉಕ್ಕಿ ಬಂದ ದುಃಖವನ್ನು ಒಳಗೆ ದಬ್ಬುತ್ತಾ ಆಸ್ಪತ್ರೆಯ ಹೊರಗೆ ಓಡಿದ.

ಅಲ್ಲಿಯೇ ಅನತಿ ದೂರದಲ್ಲಿ ಅಪ್ಪ ನಿಲ್ಲಿಸಿದ್ದ ಎತ್ತಿನ ಗಾಡಿ ಏರಿ ಬೋರಲು ಬಿದ್ದು ಸಮಾಧಾನ ಆಗುವವರೆಗೂ ಕಣ್ಣೀರು ಸುರಿಸಿದ. 

ತನ್ನನ್ನು ಎದೆಯ ಮೇಲೆ ಒರಗಿಸಿಕೊಂಡು ಬೆನ್ನು ನೀವುತ್ತಾ ಸಂತೈಸುತ್ತಿದ್ದ ತಮ್ಮ ಗಿರಿಧರನ ಕೈ ಹಿಡಿದು ಕೊಂಡ  ಲಕ್ಷ್ಮಿ, “ಅಪ್ಪ ಗಿರಿ ನೀನು ಅಷ್ಟೆಯ ಅವತ್ತು ಸಾರ್ ಚನ್ನಾಗ್ಮಾಡಿಲ್ಲ ಅಂತ ಅಡುಗೆ ಕ್ವಾಣೆ ಮೂಲೆಗೆ ಹಾಕ್ಕೊಂಡು  ತಪ್ಪಲೆ ಸಾರ್ನ್ನೆಲ್ಲಾ ನನ್ನ ತಲೆ ಮೇಲೆ ಊದು ಹೋದೆ ನೋಡು, ಅವತ್ತು ನನ್ನ ಕಣ್ಣ್ಗೆ ತುಂಬ್ಕೊಂಡ್  ಸಾರಿನ್ ಉರಿ  ಇವತ್ತಿನ್ಗಂಟ ಇಂಗಿರ್ಲಿಲ್ಲ ಕಣ್ಲಾ. ನೋಡು ಈಗ ನೀನ್ನ್ ತೋರ್ತಿರೋ ಪ್ರೀತಿ ಒಳಗೆ ಆ ಉರಿ ಪರಿ ಎಲ್ಲ ಕಿತ್ಕೊಂಡು ಹೊಂಟೋಯ್ತು” ಎಂದು ಮೃದುವಾಗಿ ನಕ್ಕಳು. ಅವ್ವನನ್ನು ತಬ್ಬಿ ನಿಂತಿದ್ದ ಗಂಗೆಯನ್ನು ಹತ್ತಿರ ಕರೆದು ತನ್ನ ಪಕ್ಕ ಕೂರಿಸಿ ಕೊಂಡು “ಹಠ್ಮಾರಿತನನೆಲ್ಲಾ ಬುಟ್ಬುಡವ್ವ ಗಂಗೂ” ಎಂದು ಹೇಳಿ ಲೊಚ ಲೊಚನೆ ಕೆನ್ನೆಗೆ ಮುತ್ತಿಕ್ಕಿದಳು. ಅಪ್ಪ ಡಿಸ್ಚಾರ್ಜ್ ಮಾಡಿಸಲೆಂದು ಹೋದವನು ಇನ್ನೂ ಬಂದಿರಲಿಲ್ಲವಾದ್ದರಿಂದ ಅಲ್ಲಿ ಅವ್ವ,  ಗಿರಿಧರ, ಗಂಗೆ ಮಾತ್ರ ಉಳಿದಿದ್ದರು.  ಲಕ್ಷ್ಮಿ ಅವ್ವ ಮತ್ತು ಗಿರಿಧರನನ್ನು  ನೋಡುತ್ತಾ “ನೀವಿಬ್ರು ಒಂಚೂರು ಹೊರಿಕೋಯ್ತಿರ ನಾನು ಗಂಗೂ ಹತ್ರ ಒಂದೀಟ್ ಮಾತಾಡದೈತೆ” ಎಂದಳು. ಗಂಗೆ ಒಬ್ಬಳನ್ನೆ ಅಲ್ಲಿ ಬಿಟ್ಟು ಹೋಗಲು ಹಿಂದೆ ಮುಂದೆ ನೋಡುತ್ತಿದ್ದ ಅವ್ವನ ಮನಸ್ಸನ್ನು ಅರಿತ ಲಕ್ಷ್ಮಿ “ಇದ್ಯಾಕವ್ವ ನನ್ನ ಮೇಲೆ ಇಷ್ಟು ಅನ್ಮಾನ” ಎಂದು ಮುಖ ಗಂಟು ಹಾಕಿ ಕೊಂಡಳು. ಅವ್ವ ಹಲ್ಲು ಗಿಂಜುತ್ತಾ “ಥೂ ಬುಡ್ತು ಅನ್ನು ಮಗ ನಾನ್ಯಾಕವ್ವ ನನ್ನ ಮಗಿನ್ ಮ್ಯಾಲೆ ಅನ್ಮಾನ ಪಡ್ಲಿ. ನಿನ್ನ ತಂಗಿತವ ಅದೇನ್ ಮಾತಾಡ್ಕೊತ್ತಿಯೋ ಮಾತಾಡ್ಕೊಳವ್ವ” ಎಂದು ಹೇಳಿ ಗಿರಿಧರನಿಗೆ ಒರಗಿ ಕುಳಿತಿದ್ದ ಲಕ್ಷ್ಮಿಯನ್ನು ಮಲಗಿಸಿ ಇಬ್ಬರು ಹೊರ ಬಂದರು.

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು