Sunday, June 16, 2024

ಸತ್ಯ | ನ್ಯಾಯ |ಧರ್ಮ

ಜನಸಾಹಿತ್ಯ ಸಮ್ಮೇಳನ ಕಸಾಪಕ್ಕೆ ನಿಜ ಹಾದಿ ಬೆಳಕು

ಕಸಾಪದಂಥಾ ಸಂಸ್ಥೆ ಸ್ವಾಯತ್ತವಾಗಿದ್ದು, ಕನ್ನಡ ನಾಡು ಕಾಣುತ್ತಿರುವ ಸೂಕ್ಷ್ಮ ಪಲ್ಲಟಗಳ ಬಗ್ಗೆ ಸ್ಪಂದಿಸಬೇಕಿತ್ತು. ಆದರೆ ಈ ಸಂಸ್ಥೆಯೂ ಕಬ್ಜಾ ಯೋಜನೆಗೆ ಬಲಿಯಾಗಿದೆ. ಆದ್ದರಿಂದಲೇ ಈ ಜನಸಾಹಿತ್ಯ ಸಮ್ಮೇಳನ ಮೂಲತಃ ಕಸಾಪದ ಸ್ವಾಯತ್ತತೆಯನ್ನು ಎತ್ತಿ ತೋರಿಸುವ ಸರ್ಚ್‌ ಲೈಟ್; ಕಸಾಪಕ್ಕೂ ನಾಡಿಗೂ ನಿಜ ಹಾದಿ ತೋರುವ ಬೆಳಕು. ಜ. 8ರಂದು ಆಯೋಜಿಸಿರುವ ಜನಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಚಿಂತಕ ಕೆ ಪಿ ಸುರೇಶ ಅವರ ಈ ವಿಚಾರಪೂರ್ಣ ಲೇಖನ ನಿಮಗಾಗಿ.

ಈ  ಹಾವೇರಿ  ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಪ್ರಾತಿನಿಧ್ಯವಿಲ್ಲ ಎಂಬ  ಸತ್ಯ ಕರ್ನಾಟಕದ ಪ್ರಜ್ಞಾವಂತರನ್ನು ಚುಚ್ಚಿದೆ. ಇದೇ ಕಾರಣಕ್ಕೆ ಜನ ಸಾಹಿತ್ಯ ಸಮ್ಮೇಳನ ಎಂಬ ಕಾರ್ಯಕ್ರಮವೂ ಸಂಘಟಿತವಾಗುತ್ತಿದೆ.

ಈ ನಡೆಗೆ ಹಲವಾರು ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಆತುರಾತುರವಾಗಿ ಮಾಡುವುದಾಯಿತು.. ʼಅವರಿಗೆʼ ಪ್ರಾತಿನಿಧ್ಯವಿಲ್ಲ ಎಂಬುದು ಪರ್ಯಾಯ ಮಾಡುವಷ್ಟು ದೊಡ್ಡ ಸಂಗತಿಯಾ? ಹೀಗೆ.. ಆದರೆ ಇದು ನಮ್ಮೆಲ್ಲರ ಹಕ್ಕಿನ ಸಂಸ್ಥೆಯಾಗಿರುವ ಕಸಾಪದ ವಾರುಸುದಾರಿಕೆ ಕುರಿತಾದ ಪ್ರಶ್ನೆ ಕೂಡಾ.

ಕನ್ನಡದ ಸಾಂಸ್ಕೃತಿಕ ಸಾಹಿತ್ಯಿಕ ಫಸಲು/ ಮೌಲ್ಯಮಾಪನಗಳೆಲ್ಲಾ ಒಂದು ಜೀವಂತ ಪರಂಪರೆಯ ರೆಂಬೆ ಕೊಂಬೆಗಳ ಬೆಳವಣಿಗೆಯ ದ್ಯೋತಕ.  ಕಾಲಕಾಲಕ್ಕೆ ಕನ್ನಡದಲ್ಲಿ ಸಾಂಸ್ಥಿಕವಾಗಿ ಕೆಲವು ಕೆಲಸಗಳು ಆಗುತ್ತಿವೆ. ವಾರ್ಷಿಕವಾಗಿ ಆ ವರ್ಷದ ಅತ್ಯುತ್ತಮ ಕವಿತೆ, ಕತೆ, ವಿಮರ್ಶೆ ಇತ್ಯಾದಿಗಳ ಸಂಕಲನದ ಕೆಲಸ ಸಾಹಿತ್ಯ ಅಕಾಡೆಮಿ ಮಾಡುತ್ತಿರುತ್ತದೆ.  ವಿಶ್ವವಿದ್ಯಾನಿಲಯಗಳು  ಮತ್ತು ಅದರ ಅಂಗ ಕಾಲೇಜುಗಳು ಸಾಹಿತ್ಯದ ನೂರಾರು ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಿರುತ್ತವೆ.  ಬಹುತೇಕ ವಿವಿ ಮಟ್ಟದ ಪ್ರೊಫೆಸರು/ ಉಪನ್ಯಾಸಕರುಗಳು ವರ್ಷಕ್ಕೆ ಏನಿಲ್ಲವೆಂದರೂ ಡಜನ್‌ ವಿಚಾರಸಂಕಿರಣಗಳಲ್ಲಿ ಭಾಗವಹಿಸುತ್ತಾರೆ. ಇದರೊಂದಿಗೆ ಪುಸ್ತಕ ಬಿಡುಗಡೆ, ಕೃತಿಕಾರನ ಕುರಿತಾದ ವಿಚಾರ ಸಂಕಿರಣಗಳನ್ನೆಲ್ಲಾ ಸೇರಿಸಿದರೆ  ಉಸ್ಸಪ್ಪಾ!

ಮತ್ತೆ ಕಸಾಪಕ್ಕೇನು ಕೆಲಸ?

ಕಾಲಕಾಲದ ಸಾಂಸ್ಕೃತಿಕ ಸಂವೇದನೆಗಳಿಗೆ ಸ್ಪಂದಿಸಿ ಅವುಗಳಿಗೆ ವೇದಿಕೆ ಕಲ್ಪಿಸುವುದು, ಅವುಗಳನ್ನು ದೊಡ್ಡ ಬೆಳಕಿನಲ್ಲಿ ಪ್ರಸ್ತುತ ಪಡಿಸುವುದು ಇಂಥಾ ಸಂಸ್ಥೆಗಳ ಕೆಲಸ.

ಮೊದಲು ಹೇಳಿದ ನೂರಾರು ಸೆಮಿನಾರುಗಳ ರೀಚ್‌ ಗೆ ಮಿತಿಯಿದೆ. ಸಾವಿರಾರು ಸ್ಪಂದನ ಶೀಲರಿಗೆ  ಮಸುಕು ವಿವರಗಳಷ್ಟೇ ತಲುಪುತ್ತವೆ. ಆದ್ದರಿಂದಲೇ ಕಸಾಪದಂಥಾ ಸಂಸ್ಥೆಗಳು ಈ ಮಥನದ ಕ್ರೋಢೀಕೃತ  ವೇದಿಕೆಯ ಜವಾಬ್ದಾರಿ ಹೊರಬೇಕು.

ಈ ಬಾರಿ ಮುಸ್ಲಿಂ ಲೇಖಕರಿಗೆ ಪ್ರಾತಿನಿಧ್ಯವಿಲ್ಲ ಎಂಬುದು ಕೇವಲ ರೋಗ ಲಕ್ಷಣವೇ ಹೊರತು ರೋಗವಲ್ಲ. ಹಿಂದೆ ಧರ್ಮಸ್ಥಳದಲ್ಲಿ ದಲಿತ ಬಲಿತ ಎಂಬ ತಾತ್ಸಾರ ಹುಟ್ಟಿದ್ದು ಘನೀಭೂತ ಸಾಂಸ್ಥಿಕ ಮನಸುಗಳ ಪ್ರತಿಕ್ರಿಯೆ. ಹೊಸ ಸಂವೇದನೆ ಚಿಗುರಿ ಬೆಳೆಯುತ್ತಿದ್ದ ಹೊಳಪು ಈ ಮಂದಿಗೆ ಕಾಣಿಸಲೇ ಇಲ್ಲ. ಬಂಡಾಯ ಇಂಥಾ ಚಾರಿತ್ರಿಕ ಅವಜ್ಞೆಗೆ ಕನ್ನಡಿ ಹಿಡಿಯಿತು.

ನಾಲ್ಕು ದಶಕದ ಬಳಿಕ ಮತ್ತೆ ಕಸಾಪ ಇನ್ನಷ್ಟು  ಆಳವಾದ ತಮಂಧದ ಕೂಪಕ್ಕಿಳಿಯುತ್ತಿದೆ. ನಮ್ಮ ಸುತ್ತ ಹತ್ತು ಹಲವು ಬಗೆಗಳಲ್ಲಿ ಹರಡುತ್ತಿರುವ ಕೋಮು ರಾಜಕೀಯ, ಏಕ ಸಂಸ್ಕೃತಿಯ  ಹೇರಿಕೆಯ ಒತ್ತಡಗಳನ್ನು ಗಮನಿಸಬೇಕು.

ತನ್ನ ಮೂಸೆಯಲ್ಲಿ ಪ್ರಸ್ತುತ ಪಡಿಸಿದ್ದನ್ನಷ್ಟೇ ಅಧಿಕೃತವೆಂದು ಒಪ್ಪಿಕೊಳ್ಳುವಂತೆ  ಒತ್ತಡ ಹೇರಲಾಗುತ್ತಿದೆ. ಅಚ್ಚರಿ ಎಂದರೆ  ಈ ಪ್ರಸ್ತುತಿ ಯಾವ ಚರ್ಚೆ, ವಿಶ್ಲೇಷಣೆಯ ಪರೀಕ್ಷೆಯಲ್ಲೂ ಉತ್ತೀರ್ಣವಾದ ಪ್ರಸ್ತುತಿ ಅಲ್ಲ; ಇದು ಕೇವಲ ದಬಾವಣೆಯ ತಂತ್ರಗಾರಿಕೆ ಅಷ್ಟೇ.

ರಂಗಾಯಣದ ಮಂಗಾಟದಿಂದ ಹಿಡಿದು ಪಠ್ಯಪುಸ್ತಕದವರೆಗೆ ಈ ಬುಲ್‌ ಡೋಝ್‌ ಪ್ರವೃತ್ತಿ ಕಂಡಿದ್ದೇವೆ. ಶಿಕ್ಷಣ ನೀತಿಯ ಜಾರಿಯಲ್ಲಿ ಕಂಡಿದ್ದೇವೆ. ಸಂಸ್ಥೆಗಳನ್ನು, ರಾಜ್ಯಾಧಿಕಾರವನ್ನು ಕಬ್ಜಾ ಮಾಡಿದ ಬಳಿಕ ಇದರ ಹೇರಿಕೆ ಇನ್ನಷ್ಟು ಬಿರುಸು ಪಡೆಯುತ್ತಿದೆ. ಇದು ಬೌದ್ಧಿಕ ಅನುಮೋದನೆಯನ್ನೂ ಪಡೆದಿಲ್ಲ, ಪ್ರಜಾ ತಾಂತ್ರಿಕವೂ ಅಲ್ಲ.

ಕಸಾಪದಂಥಾ ಸಂಸ್ಥೆ ಸ್ವಾಯತ್ತವಾಗಿದ್ದು, ಕನ್ನಡ ನಾಡಿನ ಈ ಸೂಕ್ಷ್ಮ ಪಲ್ಲಟಗಳ ಬಗ್ಗೆ  ಸ್ಪಂದಿಸಬೇಕಿತ್ತು. ಆದರೆ ಈ ಸಂಸ್ಥೆಯೂ ಕಬ್ಜಾ ಯೋಜನೆಗೆ ಬಲಿಯಾಗಿದೆ. ಆದ್ದರಿಂದಲೇ  ಈ ಜನ ಸಾಹಿತ್ಯ ಸಮ್ಮೇಳನ ಮೂಲತಃ ಕಸಾಪದ ಸ್ವಾಯತ್ತತೆಯನ್ನು ಎತ್ತಿ ತೋರಿಸುವ ಸರ್ಚ್‌ ಲೈಟ್.‌

ಕರ್ನಾಟಕದ ವೈಶಿಷ್ಟ್ಯತೆ ಎಂದರೆ ಪ್ರಾಯಶಃ ಕರ್ನಾಟಕದಲ್ಲಿ ಇದ್ದಷ್ಟು ಸೋದರ ಭಾಷಾ ಅಕಾಡೆಮಿಗಳು ಯಾವ ರಾಜ್ಯದಲ್ಲೂ ಇರಲಾರದು. ಇದರರ್ಥ ಇಷ್ಟೇ. ಕರ್ನಾಟಕದಲ್ಲಿ ಹಲವು ಭಾಷೆಗಳ ಮಂದಿ  ಕನ್ನಡಕ್ಕೊಲಿದು  ಅದು ಬೆಳೆಯಲು ಬದ್ಧರಾಗಿದ್ದಾರೆ. ಈ ಸಾಂಸ್ಕೃತಿಕ ಸತ್ಯ  ಕಸಾಪದ  ಸ್ಪಂದನೆಯ ಬುನಾದಿಯಾಗಬೇಕು.

 ಕರ್ನಾಟಕ ರಾಜ್ಯವಾದಾಗ ಯಾರೋ “ ಉದಯವಾಯಿತು ನಮ್ಮ ಚೆಲುವ ಕನ್ನಡನಾಡು” ಎಂದು ಹಾಡಿದಾಗ, ಬೇಂದ್ರೆಯವರು, “ತಪ್ಪು, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂದೇ ಇರಬೇಕು” ಅಂದಿದ್ದರಂತೆ. ಪರಿಪೂರ್ಣ ಆದರ್ಶ ರಾಜ್ಯ ಸದಾ ಭವಿಷ್ಯದಲ್ಲಿರುತ್ತದೆ. ನುಡಿಗೆ ಬದ್ಧವಾದ ಸಂಸ್ಥೆ ಈ ಭವಿಷ್ಯದತ್ತ ಸದಾ ಹೆಜ್ಜೆ ಇಡಬೇಕು. ಇಡುವಾಗ ಕೈ ಕೈ ಹಿಡಿದು ಸಾಮರಸ್ಯದ ಸಾಂಗತ್ಯದ ಹಾಡಿಗೆ ಹೆಜ್ಜೆ ಇಡುತ್ತಾ ಸಾಗಬೇಕು.

ಕಸಾಪ ಈ ಹಾದಿ ಬಿಟ್ಟು  ಇನ್ನೆಲ್ಲೋ ಕಗ್ಗತ್ತಲ ಕೂಪದೆಡೆ ನಾಡನ್ನು ಒಯ್ಯುತ್ತಿದೆ. ಅದಕ್ಕೆ ಬೆರಳು, ಬೆಳಕು ತೋರುತ್ತಿರುವ ಶಕ್ತಿಗಳು ನಾಡಿನ ಬಹುತ್ವಕ್ಕೆ ಬೆನ್ನು ತೋರಿವೆ. ಇದು ಕಸಾಪಕ್ಕೆ ಅರ್ಥವಾಗಬೇಕಿದೆ. ಮುಸ್ಲಿಂ ಪ್ರಾತಿನಿಧ್ಯ ಎಂಬ ಇಷ್ಯೂ ಈ ಹಾದಿ ತಪ್ಪಿದ ಬಗ್ಗೆ ಎಚ್ಚರಿಸುವ ಕೂಗು ಅಷ್ಟೇ.

ಜನಸಾಹಿತ್ಯ ಸಮ್ಮೇಳನ ಕಸಾಪಕ್ಕೂ ನಾಡಿಗೂ ನಿಜ ಹಾದಿ ತೋರುವ ಬೆಳಕು

ಕೆ ಪಿ ಸುರೇಶ

ನಾಡಿನ ಪ್ರಮುಖ ಚಿಂತಕರು

Related Articles

ಇತ್ತೀಚಿನ ಸುದ್ದಿಗಳು