Monday, June 17, 2024

ಸತ್ಯ | ನ್ಯಾಯ |ಧರ್ಮ

ನಾಡಿನ ಸಮಾನತೆ-ಸೌಹಾರ್ದ ಮೌಲ್ಯಗಳ ಉಳಿವಿಗೆ ಪ್ರಜೆಗಳ ಕನಿಷ್ಟ ಜವಾಬ್ದಾರಿ

ಇಂದು ಕೇಶವ ಕೃಪಾದ ಅಧಿಕೃತ ವ್ಯಕ್ತಿ ಕ.ಸಾ.ಪ.ದ ಅಧ್ಯಕ್ಷ ಗದ್ದುಗೆಯಲ್ಲಿ ಕುಳಿತು ಸಜ್ಜನಿಕೆಯನ್ನು ಬೆಚ್ಚಿ ಬೀಳಿಸುವ ದುಂಡಾವರ್ತಿ ತೋರುತ್ತಿದ್ದಾರೆ! ಕ.ಸಾ.ಪ. ಇತಿಹಾಸದಲ್ಲಿ ಮೊದಲ ಬಾರಿಗೆ ಮತೀಯ ದ್ವೇಷದ ನಡೆಯನ್ನು ಖುಲ್ಲಂ ಖುಲ್ಲಾ ಪ್ರದರ್ಶಿಸುತ್ತಿದ್ದಾರೆ! ಅದರ ವಿರುದ್ಧ ಸಂವಿಧಾನದ ಸಮಾನತೆ-ಸೌಹಾರ್ದ ಮೌಲ್ಯಗಳನ್ನು ಎತ್ತಿ ಹಿಡಿದು ಉಳಿಸುವ ಜವಾಬ್ದಾರಿಯು ಬರೀ ಸಾಹಿತಿ-ಕಲಾವಿದರದ್ದು ಮಾತ್ರವಲ್ಲ-ಕನ್ನಡ ನಾಡಿನಲ್ಲಿ, ನುಡಿಗಟ್ಟಿನಲ್ಲಿ ಶಾಂತಿ-ಸಮಾನತೆಗಳನ್ನು ಜತನವಾಗಿ ಇಟ್ಟುಕೊಳ್ಳಲು ಬಯಸುವ ಎಲ್ಲಾ ನಾಗರಿಕರದ್ದೂ ಆಗಿದೆ. ಪ್ರಗತಿಪರ ಚಿಂತಕ ಫಣಿರಾಜ್‌ ಅವರ ಮಹತ್ತ್ವದ ಈ ಲೇಖನ ಓದಿ..

ಕಳಪೆತನವನ್ನು ಉಪೇಕ್ಷಿಸಬಹುದು, ಕೇಡಿತನವನ್ನು ಉಪೇಕ್ಷಿಸಲಾಗದು. ಕರ್ನಾಟಕದ ಸಾಹಿತ್ಯ-ರಂಗಭೂಮಿ ವಲಯದಲ್ಲಿ ಇತ್ತೀಚಿನ ವಿದ್ಯಮಾನಗಳು ಉಪೇಕ್ಷಿಸ ಬಾರದಷ್ಟು ಕೇಡಿತನದ್ದಾಗಿವೆ. ರಂಗಾಯಣದ ನಿರ್ದೇಶಕರ ಸೃಜನಶೀಲ ಯೋಗ್ಯತೆಯ ಮಟ್ಟ ಹೇಗಾದರೂ ಇರಲಿ,  ಕಾರ್ಯಕ್ರಮಗಳ ಯೋಜನೆ, ಆಹ್ವಾನಿಸುವ ಸಂಪನ್ಮೂಲ ವ್ಯಕ್ತಿಗಳು ಮತ್ತು ರಂಗ ಪ್ರದರ್ಶನಗಳಲ್ಲಿ ಪ್ರಕಟಿಸುತ್ತಿರುವ ಖಳತನ ಸಾಮಾನ್ಯ ಸಜ್ಜನ್ನರನ್ನು ಆತಂಕಗೊಳಿಸುವಂತಿವೆ. ʼಭಂಡತನವೇ ಕಾಲಮಾನದ ಗುಣವಾಗಿದೆ ಸ್ವಾಮಿ!ʼಎಂಬ ದೇಶಾವರಿ ಮಾತುಗಳಿಂದ ಇಂಥ ಘಟನಾವಳಿಗಳನ್ನು ಸಾರಿಸಿ ಬಿಡ ಕೂಡದು. ಸಾರ್ವಜನಿಕ ಸಂಘ-ಸಂಸ್ಥೆಗಳಿಗೆ-ಅದು ಖಾಸಗಿಯೇ ಇರಲೀ, ಪ್ರಭುತ್ವ ಸ್ವಾಮ್ಯದ್ದೇ ಇರಲಿ- ಅವುಗಳದ್ದೇ ಆದ ಪರಂಪರೆ, ಸಭ್ಯತೆಗಳು ಇರುತ್ತವೆ; ಸಾರ್ವಜನಿಕ ಹಿತಕ್ಕೆ ಮಾರಕವಾದಾಗ ಅವುಗಳನ್ನು ಪ್ರಶ್ನಿಸಬಹುದು-ಬದಲಿಸುವ ಮಾತನಾಡಬಹುದು ಎನ್ನುವುದು ಸರಿ-ಅದಕ್ಕೂ ಒಂದು ಪರಂಪರೆ ಇರುತ್ತದೆ; ಹಾಗಂತ ಅವುಗಳನ್ನು ವಿವೇಕಹೀನವಾಗಿ ನಿಂದಿಸುವುದು ಕೇಡಿತನ. ಅದು ಸಹ್ಯವಾಗ ಕೂಡದು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಅದರ ವತಿಯಿಂದ ನಡೆಯುವ ಸಮ್ಮೇಳನಗಳ ವಿಷಯದಲ್ಲೂ ಇದೇ ಬಗೆಯ ಕೇಡಿನ ಅಸಹ್ಯ ವಿದ್ಯಮಾನಗಳು ನಡೆಯುತ್ತಿವೆ.

ಕನ್ನಡ ಸಾಹಿತ್ಯ ಪರಿಷತ್ತಿಗೆ 118 ವರುಷಗಳ ಇತಿಹಾಸವಿದೆ. ದೇಶದ ವಸಾಹತುಶಾಹಿ ವಿರೋಧಿ ಹೋರಾಟದ ಕಡೆತದಲ್ಲಿ ಬದುಕಿನ ಎಲ್ಲಾ ವಲಯಗಳಲ್ಲೂ ಹೊಸ ಸಾಮಾಜಿಕ ಪ್ರಜ್ಞೆಗಳೂ ಜಾಗೃತವಾಗುವ ಹೊತ್ತಲ್ಲಿ ಕಟ್ಟಿದ ಸಂಸ್ಥೆ ಇದು. ʼದೇಶದ ಗುರುತುʼ ʼಭಾಷೆಯ ಗುರುತುʼಗಳಿಗೆ ಹೊಸ ಬಗೆಯ ನಿರೂಪಣೆಗಳು ಹರಳುಗಟ್ಟಿಕೊಳ್ಳುತ್ತಿದ್ದ ಕಾಲದಲ್ಲಿ, ಆ ಕಾಲದ ಗುಣಕ್ಕೆ ಓಗೊಟ್ಟು ಹುಟ್ಟಿದ ಸಂಸ್ಥೆ ಇದು. ಅಂದಿನ ʼಕನ್ನಡ ನಾಡು-ನುಡಿʼಗಳ ನಿರ್ವಚನವು ಸರ್ವ ಸಮ್ಮತವಾಗಿಯೇನೂ ಇರಲಿಲ್ಲ-ಆದರೆ ಚಾಲ್ತಿಯಲ್ಲಿದ್ದ ಹಲವು ಬಗೆಯ ಭಿನ್ನ ನಿರ್ವಚನಗಳು ನಾಡು-ನುಡಿಯ ವಿಷಯದಲ್ಲಿ ಜಾತಿ-ಮತ-ಲಿಂಗ ಭೇದಗಳು ಸಲ್ಲವು ಎಂಬ ಕಾಲಮಾನದ ವಿಶ್ವಾತ್ಮಕ ಮೌಲ್ಯವನ್ನು ಒಪ್ಪಿಕೊಂಡಿದ್ದವು. ಕನ್ನಡ ನುಡಿ ಕಟ್ಟುಗಳಲ್ಲಿ ಈ ಬಗೆಯ ಭೇದಗಳ ಝಲಕು ಕಾಣಿಸಿಕೊಂಡ ಗಳಿಗೆಗಳಲ್ಲಿ ಮಹತ್ತ್ವದ ಸಾರ್ವಜನಿಕ ವಾಗ್ವಾದಗಳು ನಡೆದು ಮತ್ತೆ ಸಾಮರಸ್ಯದ ಸಮತೋಲವನ್ನು ಪಡೆದುಕೊಂಡದ್ದು ಇದೆ-ಕನ್ನಡ ಸಾಹಿತ್ಯ ಪರಿಷತ್ತು ಇಂಥ ರಂಗವಾದದ್ದೂ ಇದೆ. 1970ರ ದಶಕದ ಆರಂಭದಲ್ಲಿ ಕರ್ನಾಟಕದ ಸಾಮಾಜಿಕ-ರಾಜಕೀಯ ಬದುಕಿನಲ್ಲಿ ಕೆಳ ಜಾತಿ- ನುಡಿ ಕಡೆತಗಳಿಗೆ ವರ್ಗಗಳಲ್ಲಿ ಎಚ್ಚರವಾದ ಹೊಸ ಸಾಮಾಜಿಕ ಸಮಾನತೆಯ ಅರಿವಿಗೆ ಅನುಗುಣವಾಗಿ ಕನ್ನಡ ನುಡಿಯಲ್ಲಿ ಅಂತರ್ಗತವಾಗಿರುವ ಮೇಲ್ಜಾತಿಗಳ ಸಂವೇದನೆಯನ್ನು ಗುರುತಿಸಿ ವಿಮರ್ಶೆಗೆ ತೆರೆದು ʼಬರಹಗಾರರ ಒಕ್ಕೂಟʼ ಕಟ್ಟಿಕೊಂಡಾಗಲೂ ಅದು ಕ.ಸಾ.ಪ.ಕ್ಕೆ ಮೂಲ ಮೌಲ್ಯಗಳನ್ನು ಎಚ್ಚರಿಸುವ ಕರೆಗಂಟೆಯಾಗಿತ್ತು. ಅಷ್ಟಾಗಿಯೂ 1979ರಲ್ಲಿ ಸಾಮಾಜಿಕ ಜಾತಿ-ವರ್ಗ ಯಜಮಾನಿಕೆಯನ್ನು ಪ್ರತಿನಿಧಿಸುವ ಧರ್ಮಸ್ಥಳದಲ್ಲಿ ಕ.ಸಾ.ಪ. ಸಮ್ಮೇಳನ ಆಯೋಜಿತವಾದಾಗ ಪ್ರತಿರೋಧದ ದನಿಯಾಗಿ ಕಟ್ಟಿಕೊಂಡ ದಲಿತ-ಬಂಡಾಯ ಸಾಹಿತ್ಯ ಚಳುವಳಿಯೂ ಕನ್ನಡ ನಾಡು-ನುಡಿಯ ವಿಶ್ವಾತ್ಮಕ ಮೌಲ್ಯಗಳನ್ನು ಅವಗಣಿಸುವ ಕ.ಸಾ.ಪ.ದ ಧೋರಣೆಗೆ ಒಂದು ಪ್ರತಿ ತೂಕವನ್ನು ಹೇರಿ ಸಮತೂಗಿಸುವ ನಡೆಯೇ ಆಗಿತ್ತು. ಈ ಚಳುವಳಿಯ ಫಲವಾಗಿ ಕನ್ನಡ ನಾಡು ನುಡಿಯಲ್ಲಿ ಸಮಾನತೆಯ ವಿಶ್ವಾತ್ಮಕ ಮೌಲ್ಯಗಳನ್ನು ಗಟ್ಟಿಗೊಳಿಸುವ ಚಳುವಳಿಯ ಹಾದಿಯು, ಕ.ಸಾ.ಪ.ದ ಕಲಾಪಗಳಿಂದ ಹೊರಗುಳಿದು ಆ ಸಂಸ್ಥೆಯನ್ನು ಅಡಗುದಾಣದಲ್ಲಿ ಹುದುಗಿದ್ದ ಬಲಪಂಥದ ಸಾಂಪ್ರದಾಯಿಕ ಶಕ್ತಿಗಳ ಆಡುಂಬೊಲ ಆಗುವುದಕ್ಕೆ ಕಾರಣವಾಯಿತೇ? ಎಂಬುದು ಚರ್ಚಿಸಬೇಕಾದ ವಿಷಯವೇನೋ ಸರಿ. ಆದರೆ ಇದು ಇಂದು ಕ.ಸಾ.ಪ. ತಲುಪಿರುವ ಅಸಹ್ಯ ಸ್ಥಿತಿಯ ಅವಗಣನೆಗೆ ಕಾರಣ ಆಗಕೂಡದು.

1980ರ ದಶಕದ ಮಧ್ಯದಿಂದ ತೀವ್ರ ಬಲಪಂಥೀಯವೂ, ಮೇಲ್ಜಾತಿ-ವರ್ಗಗಳ ಯಜಮಾನಿಕೆಯನ್ನು ಪುನಃಸ್ಥಾಪಿಸುವ ಉದ್ದೇಶಗಳನ್ನು ಉಳ್ಳದ್ದೂ ಆದ ʼಹಿಂದುತ್ವವಾದಿ ರಾಜಕೀಯʼವು ಸಮಾಜದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವಂತೆಯೇ ಕ.ಸಾ.ಪ.ದಲ್ಲಿ ಆಯಕಟ್ಟಿನ ಜಾಗೆಗಳನ್ನು ಹಿಡಿದುಕೊಳ್ಳುವ ಕೆಲಸವನ್ನು ತಾಲೂಕು ಮಟ್ಟಗಳಲ್ಲಿ ಭರದಿಂದ ನಡೆಸಿತು; ಆ ಕಾರ್ಯಾಚರಣೆಯ ಅಸಹ್ಯ ಪರಿಣಾಮಗಳು ಹೊಸ ಶತಮಾನದಲ್ಲಿ ಕಾಣಿಸಿಕೊಳ್ಳತೊಡಗಿದವು. 2000ದ ನಂತರದ ವರ್ಷಗಳಲ್ಲಿ ಕರ್ನಾಟಕದ ಪಶ್ಚಿಮ ಕರಾವಳಿಯ ಜಿಲ್ಲೆಗಳಲ್ಲಿ ಮತೀಯವಾದಿ ಹಿಂಸೆಗಳು ಏರಿಕೆ ಆಗುತ್ತಿದ್ದ ಹೊತ್ತಲ್ಲಿ, ದಲಿತ-ಬಂಡಾಯ ಚಳುವಳಿಯ ಮುಂದಾಳುಗಳಲ್ಲಿ ಒಬ್ಬರಾಗಿದ್ದ ಚಂಪಾ ಅವರು ಕ.ಸಾ.ಪ. ಅಧ್ಯಕ್ಷರಾಗಿದ್ದರು. 2006ರಲ್ಲಿ ಶಿವಮೊಗ್ಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಿದ್ದಾಗಿ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಸಂಘಪರಿವಾರದ ಸಂಘಟನೆಗಳು ಸಮ್ಮೇಳಕ್ಕೆ ಆಹ್ವಾನಿತರಾಗಿದ್ದ ಕಲ್ಕುಳಿ ವಿಠಲ ಹೆಗಡೆ ಮತ್ತು ಗೌರಿ ಲಂಕೇಶ್‌ ಅವರನ್ನು ನಿಷೇಧಿಸಲು ಒತ್ತಾಯಿಸಿ ದೊಡ್ಡ ಮಟ್ಟದಲ್ಲಿ ಒತ್ತಡ ತಂದರು. ಆದರೆ ಚಂಪಾ ಮತ್ತು ಶಿವಮೊಗ್ಗ ಕಸಾಪ ಅಧ್ಯಕ್ಷರಾಗಿದ್ದ ಡಿ ಮಂಜುನಾಥ್‌ ತಮ್ಮ ನಿಲುವಿನಿಂದ ಹಿಂದೆ ಸರಿಯದೆ ದೃಢವಾಗಿ ನಿಂತರು. ಸಮ್ಮೇಳನ ನಡೆಯುತ್ತಿರುವಾಗ ನೆಹರೂ ಮೈದಾನದಲ್ಲಿ ರೈತ ಮುಖಂಡ ಕೆ ಟಿ ಗಂಗಾಧರ ಅವರು ಭಾಷಣ ಮಾಡುತ್ತಿರುವಾಗ ವೇದಿಕೆಗೆ ನುಗ್ಗಿ ಕಲ್ಕುಳಿ ಅವರ ಮೇಲೆ ಹಲ್ಲೆ ನಡೆಸಲು ಐವತ್ತರವತ್ತು ಕಾರ್ಯಕರ್ತರು ನುಗ್ಗಿದಾಗ ಪೊಲೀಸರು ಮತ್ತು ಕಾರ್ಯಕರ್ತರು ತೋರಿದ ಸಮಯಪ್ರಜ್ಞೆಯಿಂದ ಕಾರ್ಯಕ್ರಮ ಸುಸೂತ್ರವಾಗಿ ನಡೆದಿತ್ತು. ಸಂಘಪರಿವಾರದವರನ್ನು ತಡೆದ ಸೌಹಾರ್ದ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳೂ ಬಿದ್ದವು.

ಚಂದ್ರಶೇಖರ ಪಾಟೀಲ

2008ರಲ್ಲಿ ಉಡುಪಿಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿತವಾಯಿತು ಹಾಗು ಆ ಸಮ್ಮೇಳನಕ್ಕೆ ಹಿಂದುತ್ವವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ರಾ.ಸ್ವ.ಸಂ) ದ ಹಿತೈಷಿಯಾಗಿದ್ದ ಎಲ್.ಎಸ್.ಶೇಷಗಿರಿ ರಾವ್‌ ಅವರನ್ನು ಆಯ್ಕೆ ಮಾಡಲಾಯಿತು. ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು-ನುಡಿಯು ಆಯಾ ಕಾಲಕ್ಕೆ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚಿಸುವ ವೇದಿಕೆ ಆಗಿರ ಬೇಕು ಎನ್ನುವುದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದ  ನಿಯಮವಾಗಿತ್ತು; ಈ ಕಾರಣಕ್ಕೆ ಉಡುಪಿಯಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಕೋಮು ಹಿಂಸೆಯ ಕುರಿತು ಚರ್ಚೆಗೆ ವೇದಿಕೆ ಒದಗಿಸ ಬೇಕು, ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ಹಿಂಸೆಯ ವಿದ್ಯಮಾನಗಳ ಪ್ರಸ್ತಾಪ ಮತ್ತು ರಾಜಿ ಇಲ್ಲದ ಪ್ರತಿರೋಧದ ನುಡಿಗಳು ಖಚಿತವಾಗಿ ಪ್ರಕಟವಾಗಬೇಕು ಎಂಬ ಅಹವಾಲನ್ನು ಕರ್ನಾಟಕದ ಸೌಹಾರ್ದಪ್ರಿಯ ಸಾಹಿತ್ಯ ವಲಯವು ಮುಂದಿಟ್ಟಿತು. ಅದಕ್ಕೆ ಸ್ಪಂದನೆ ದೊರಕದೇ ಇದ್ದಾಗ ಪ್ರತಿಭಟನೆಯಾಗಿ ʼಸೌಹಾರ್ದ ಸಾಹಿತ್ಯ ಸಮ್ಮೇಳನʼವನ್ನು ಸಮನಾಂತರವಾಗಿ ನಡೆಸಲಾಯಿತು ( ಪ್ರಸ್ತುತ ಸಮ್ಮೇಳನದ ಕಲಾಪಗಳಿಗೆ ಕ.ಸಾ.ಪ. ಅಧ್ಯಕ್ಷರಾಗಿದ್ದ ಚಂ.ಪಾ. ಅವರು ಪ್ರೇಕ್ಷಕರಾಗಿ ಹಾಜರಿದ್ದು ಎಲ್ಲ ಭಿನ್ನಮತದ ಟೀಕೆ-ಟಿಪ್ಪಣಿಗಳನ್ನು ಸಂಯಮದಿಂದ ಕೇಳಿಸಿಕೊಂಡರು). ಇಷ್ಟಾದರೂ ಕ.ಸಾ.ಪ.ದ ಧೋರಣೆಗಳಲ್ಲಿ ಬದಲಾವಣೆಯಾಗುವ ಬದಲಾಗಿ, ಒಡಕು ಮತೀಯವಾದಿ ಧೋರಣೆ ಪ್ರಬಲವಾಗುತ್ತಿರುವುದನ್ನೂ ಗಮನಿಸಿ ಹಾಗು ಬದಲಾಗುತ್ತಿರುವ ಕಾಲದ ಕೇಡುಗಳನ್ನು ದನಿಸುವ ಸಲುವಾಗಿಯೂ ಸಮಾನತೆ-ಸೌಹಾರ್ದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕನ್ನಡದ ಸಮುದಾಯಗಳು ʼಜನ ನುಡಿʼ ಹಾಗು ʼಮೇ ಸಾಹಿತ್ಯ ಸಮ್ಮೇಳʼನಗಳನ್ನು ಕಾಲ ಕಾಲಕ್ಕೆ ನಡೆಸಿಕೊಂಡು ಬರುತ್ತಿದ್ದಾರೆ. ಇವೆಲ್ಲವುಗಳ ಔಚಿತ್ಯ ಪ್ರಜ್ಞೆಯನ್ನು ದಮನಿಸಿಯೇ ಸಿದ್ಧವೆಂಬಂತೆ ನವಫ್ಯಾಸಿಸ್ಟ್ ಮತೀಯವಾದಿ‌ ಧೋರಣೆಯನ್ನು ರೂಢಿಸಿಕೊಂಡಿರುವ ಕ.ಸಾ.ಪ. ವರ್ತಿಸುತ್ತಿದೆ. 2019ರಲ್ಲಿ ಶೃಂಗೇರಿ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಬರಹಗಾರ-ಚಳುವಳಿಗಾರ ವಿಠಲ ಹೆಗ್ಡೆಯವನ್ನು ಅಧ್ಯಕ್ಷರನ್ನಾಗಿ ತಾಲೂಕ ಕ.ಸಾ.ಪ. ಆಯ್ಕೆ ಮಾಡಿದಾಗ, ಆ ಸಮ್ಮೇಳನವನ್ನೇ ರದ್ದುಗೊಳಿಸುವ ರಾದ್ಧಾಂತವನ್ನು  ಕ.ಸಾ.ಪ.ದ ದೊಣ್ಣೆ ನಾಯಕರು ನಡೆಸಿದರು; ಒತ್ತಡಕ್ಕೆ ಮಣಿಯದೇ ತಾಲೂಕು ಸಮಿತಿಯು ಸಮ್ಮೇಳನ ನಡೆಸಲು ಮುಂದಾದಾಗ, ಗಲಭೆಯ ವಾತಾವರಣ ಸೃಷ್ಟಿ ಮಾಡಲಾಯಿತು.

ಇಂದು ಕೇಶವ ಕೃಪಾದ ಅಧಿಕೃತ ವ್ಯಕ್ತಿ ಕ.ಸಾ.ಪ.ದ ಅಧ್ಯಕ್ಷ ಗದ್ದುಗೆಯಲ್ಲಿ ಕುಳಿತು ಸಜ್ಜನಿಕೆಯನ್ನು ಬೆಚ್ಚಿ ಬೀಳಿಸುವ ದುಂಡಾವರ್ತಿ ತೋರುತ್ತಿದ್ದಾರೆ! ಕ.ಸಾ.ಪ. ಇತಿಹಾಸದಲ್ಲಿ ಮೊದಲ ಬಾರಿಗೆ ಮತೀಯ ದ್ವೇಷದ ನಡೆಯನ್ನು ಖುಲ್ಲಂ ಖುಲ್ಲಾ ಪ್ರದರ್ಶಿಸುತ್ತಿದ್ದಾರೆ! ಇದಕ್ಕೆ ಭಿನ್ನಮತ ತೋರಿದ ಕನ್ನಡದ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ ಹಾಗು ಅನುಭವಿ ಪತ್ರಕರ್ತ-ಬರಹಗಾರ ಬಿ.ಎಂ.ಹನೀಫ್‌ ಬಗ್ಗೆ ಅಸಹ್ಯವಾದ ಕೀಳು ಅಪಾದನೆಗಳನ್ನು ಮಾಡುತ್ತಿದ್ದಾರೆ! ʼಅವರ ಯೋಗ್ಯತೆಯೇ ಇಷ್ಟು..ʼ ಎಂದು ಗೊಣಗಿ ಕೊಂಡಿರುವುದು ಸಭ್ಯತೆಯೂ ಅಲ್ಲ, ಸಜ್ಜನಿಕೆಯೂ ಅಲ್ಲ. ಈ ಸಂಸ್ಥೆಗೆ ಹಾಗು ಆಯೋಜಿತವಾಗಿರುವ ಈ ವರ್ಷದ ಸಮ್ಮೇಳನಕ್ಕೆ ಕರ್ನಾಟಕದ ಪ್ರಜೆಗಳ ತೆರಿಗೆ ಹಣದ ಕೋಟ್ಯಾಂತರ ರೂಪಾಯಿಗಳನ್ನು ಸರಕಾರ ನೀಡುತ್ತಿದೆ. ಅಧಿಕಾರ ಸ್ಥಾನದಲ್ಲಿ ಯಾರೇ ಅಂಡೂರಿಕೊಂಡಿದ್ದರೂ, ಅವರು ಸಂವಿಧಾನದ ನ್ಯಾಯ-ನೀತಿಯ ಮೌಲ್ಯಗಳಿಗೂ, ನಾಡು-ನುಡಿಯ ಜನಹಿತ ಪರಂಪರೆಯ ಮೌಲ್ಯಗಳಿಗೂ ಅತೀತರಾದವರೇನೂ ಅಲ್ಲ. ʼನಾವು ಹೀಗೆ…!ʼ ಎಂಬ ಭಂಡತನವನ್ನು ಅವರು ತೋರಿದರೆ, ಅದಕ್ಕೆ ಅದರ ವಿರುದ್ಧ ಘನತೆಯಿಂದ ಭಿನ್ನ ನುಡಿದು, ಸಂವಿಧಾನದ ಸಮಾನತೆ-ಸೌಹಾರ್ದ ಮೌಲ್ಯಗಳನ್ನು ಎತ್ತಿ ಹಿಡಿದು ಉಳಿಸುವ ಜವಾಬ್ದಾರಿಯು ಬರೀ ಸಾಹಿತಿ-ಕಲಾವಿದರದ್ದು ಮಾತ್ರವಲ್ಲ-ಕನ್ನಡ ನಾಡಿನಲ್ಲಿ ನುಡಿಗಟ್ಟಿನಲ್ಲಿ ಶಾಂತಿ-ಸಮಾನತೆಗಳನ್ನು ಜತನವಾಗಿ ಇಟ್ಟುಕೊಳ್ಳಲು ಬಯಸುವ ಎಲ್ಲಾ ನಾಗರಿಕರದ್ದೂ ಆಗಿದೆ.

ಈ ಹಿನ್ನೆಲೆಯಲ್ಲಿ ಜನವರಿ 8, 2023ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ʼಜನ ಸಾಹಿತ್ಯ ಸಮಾವೇಶʼವನ್ನು ನಾವು ಬೆಂಬಲಿಸೋಣ. ಸಾಧ್ಯವಿದ್ದಷ್ಟು ಅಂದು ಅಲ್ಲಿ ಹಾಜರಿರೋಣ. ಇದು ನಮ್ಮ ನಾಡಿನ ಸಮಾನತೆ-ಸೌಹಾರ್ದ ಮೌಲ್ಯಗಳ ಉಳಿವಿಗೆ ಪ್ರಜೆಗಳಾಗಿ ನಿಭಾಯಿಸಬೇಕಾದ ಕನಿಷ್ಟ ಜವಾಬ್ದಾರಿ.

ಕೆ.ಫಣಿರಾಜ್

ಪ್ರಗತಿಪರ ಚಿಂತಕರು

Related Articles

ಇತ್ತೀಚಿನ ಸುದ್ದಿಗಳು