Monday, June 17, 2024

ಸತ್ಯ | ನ್ಯಾಯ |ಧರ್ಮ

ಭೂಸ್ವಾಧೀನ ವಿರೋಧಿ ಹೋರಾಟ ಮತ್ತು ʼಭೂಸ್ವಾಧೀನ ಒಳಸುಳಿಗಳುʼ

ಕೃಷಿಯನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು, ಕೈಗಾರಿಕೆಗಳಿಗಾಗಿ ಕೃಷಿ ಭೂಮಿ ಸ್ವಾಧೀನ ಮಾಡುತ್ತಿರುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈ ಹೋರಾಟಗಳನ್ನು ಹತ್ತಿರದಿಂದ ಗಮನಿಸಿರುವ ʼನಮ್ಮೂರಭೂಮಿ ನಮಗಿರಲಿ, ಅನ್ಯರಿಗಲ್ಲ’ ಬಳಗದ ಸಂಗಾತಿಗಳು “ಭೂಸ್ವಾಧೀನದ ಒಳಸುಳಿಗಳು” ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಭೂಮಿಯನ್ನು ಉಳಿಸಿಕೊಳ್ಳುವ ಕಾನೂನಿನ ಸಾಧ್ಯತೆಗಳ ಕುರಿತಾದ ಈ ಪುಸ್ತಕದ ಬಿಡುಗಡೆ ನಾಳೆ ( ೧೭.೦೧.೨೦೨೩) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯುವ ರೈತ ರಮೇಶ್ ಚೀಮಾಚನಹಳ್ಳಿಯವರ ಲೇಖನ ಇಲ್ಲಿದೆ.

ಕರ್ನಾಟಕ ಸರ್ಕಾರವು ಕೈಗಾರಿಕಾ ಅಭಿವೃದ್ಧಿಯ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವ ವಿಷಯ ತಮಗೆ ತಿಳಿದೇ ಇರುತ್ತದೆ. ಇದಾಗಲೇ ಸ್ವಾಧೀನ ಪಡಿಸಿಕೊಂಡಿರುವ ಭೂಮಿ ಬಹುಪಾಲು ಕೈಗಾರಿಕೆಗಳು ಬಾರದೆ ಖಾಲಿ ಉಳಿದಿರುವಾಗ ಮತ್ತು ಇರುವ ಕೈಗಾರಿಕೆಗಳೆ ಮುಚ್ಚಿಕೊಳ್ಳಿತ್ತಿರುವಾಗ ಹೊಸದಾಗಿ ರಾಜ್ಯದಾದ್ಯಂತ 50 ಸಾವಿರ ಎಕರೆ ಭೂಸ್ವಾಧೀನದ ಗುರಿ ಇದೆ ಎಂದು ಸಚಿವರಾದ ಮುರುಗೇಶ್ ನಿರಾಣಿಯವರು ಅದಕ್ಕಾಗಿ ಅತುರಾತುರವಾಗಿ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನಕ್ಕೆ ಮುಂದಾಗಿದ್ದಾರೆ. ಇದು ಮಾತ್ರವಲ್ಲದೆ ವಸತಿ ಯೋಜನೆಗಳು ರಸ್ತೆ ಮುಂತಾದವುಗಳಿಗಾಗಿ ಕೂಡ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.

ಅದರಲ್ಲೂ, ಕಳೆದೆರಡು ದಶಕಗಳಿಂದ ಭೂಸ್ವಾಧಿನ ಪ್ರಕ್ರಿಯೆ ಮತ್ತು ಅದರ ಪರಿಣಾಮಗಳನ್ನು ಕಣ್ಣಾರೆ ಕಂಡಿರುವ, ಕೃಷಿಯನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು, ಕೃಷಿ ಭೂಮಿಯ ಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ತಮ್ಮ ಭೂಮಿಯನ್ನು ಕಳೆದುಕೊಂಡ ರೈತರು ಇಂದು ದುಡಿಮೆಗಾಗಿ ಭೂಮಿ, ಕೆಲಸ ಯಾವುದೂ ಇಲ್ಲದೆ ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುತ್ತಿರುವುದನ್ನು ಕಂಡಿರುವ ಈ ಭಾಗದ ರೈತರು, ಇತ್ತೀಚಿನ ಭೂ ಸ್ವಾಧೀನವನ್ನು ಗಟ್ಟಿ ಧ್ವನಿಯಲ್ಲಿ ವಿರೋಧಿಸುತ್ತಿದ್ದು, ಹೋರಾಟ ಮಾಡಿಯಾದರೂ ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಪಟ್ಟು ಹಿಡಿದಿದ್ದಾರೆ. ಇದರ ಭಾಗವಾಗಿ, ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಿಗೆ ಸೇರಿದ 1777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು, ಕೆ.ಐ.ಎ.ಡಿ.ಬಿ ಕೈಗಾರಿಕೆಗಳ ಅಭಿವೃದ್ಧಿಯ ಹೆಸರಲ್ಲಿ ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿ ನೋಟೀಸ್ ಜಾರಿಮಾಡಿದಾಗ, ರೈತರು ಕಳೆದ ಒಂದು ವರ್ಷದಿಂದ ವಿವಿಧ ರೀತಿಯ ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆವ ಮತ್ತು ಒತ್ತಡ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.

ಸಂಬಂಧಿಸಿದ ಇಲಾಖೆ ಮತ್ತು ಮಂತ್ರಿಗಳಿಗೆ, ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಮನವಿಗಳು, ಪ್ರತಿಭಟನಾ ಧರಣಿಗಳು, ಜಿಲ್ಲಾಧಿಕಾರಿ ಕಛೇರಿಗೆ ಟ್ರಾಕ್ಟರ್ ರ್ಯಾಲಿ ಮುಂತಾದ ರೀತಿಯ ಪ್ರತಿರೋಧಗಳಿಗೆ ಸರ್ಕಾರ ಸ್ಪಂದಿಸದಿದ್ದಾಗ ರೈತರು, ಹೋಬಳಿ ಕೇಂದ್ರವಾದ ಚನ್ನರಾಯಪಟ್ಟಣದ ನಾಡ ಕಛೇರಿ ಮುಂಭಾಗದಲ್ಲಿ ದಿನಾಂಕ 04.04.2022 ರಿಂದ ಅನಿರ್ಧಿಷ್ಟಾವಧಿ ಧರಣಿ ಕುಳಿತಿದ್ದಾರೆ. ಬಿಸಿಲು ಮಳೆಯೆನ್ನದೆ ರೈತರು ನಡೆಸುತ್ತಿರುವ ಧರಣಿ 300  ದಿನಗಳನ್ನು ಸಮೀಪಿಸುತ್ತಿದೆ. ಈ ನಡುವೆ ಧರಣಿಗೆ ಪಕ್ಷಾತೀತವಾಗಿ ಎಲ್ಲ ಪಕ್ಷದ ಮುಖಂಡರುಗಳು, ರೈತ, ದಲಿತ, ಕಾರ್ಮಿಕ, ಕನ್ನಡ, ಮಹಿಳಾ ಸಂಘಟನೆಗಳ ಮುಖಂಡರುಗಳು, ಕಲಾವಿದರು, ಬರಹಗಾರರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ ಬೆಂಬಲಿಸಿದ್ದಾರೆ. ಧರಣಿಗೆ ಎಲ್ಲ ಕಡೆಯಿಂದ ಬೆಂಬಲ ಬರುತ್ತಿರುವುದನ್ನು ಗಮನಿಸಿದ ಸರ್ಕಾರ ರೈತರನ್ನು ಒಡೆಯಲು ವಿವಿಧ ರೀತಿಯ ಕುತಂತ್ರಗಳನ್ನು ಮಾಡುತ್ತಾ ಬರುತ್ತಿದೆ. ರೈತರಲ್ಲದ ಏಜಂಟರ ಜೊತೆ ಮತ್ತು ಬಾಡಿಗೆ ಜನರ ಜೊತೆ ಸಭೆ ಮಾಡಿದ ನಿರಾಣಿಯವರು ಧರಣಿ ನಿರತರನ್ನು ಉದ್ದೇಶಿಸಿ “ಧರಣಿ ಕುಳಿತವರು ರೈತರೇ ಅಲ್ಲ, ನಿಜವಾದ ರೈತರು ಭೂಮಿಕೊಡಲು ಸಿದ್ಧರಿದ್ದಾರೆ ” ಎಂದು ಹಸಿ ಸುಳ್ಳು ಹೇಳಿದ್ದಲ್ಲದೆ, ನಂತರದ ಬೆಳವಣಿಗೆಯಲ್ಲಿ “ಒಪ್ಪಿಗೆ ನೀಡಿದ ರೈತರ ಭೂಮಿಯನ್ನು ಮಾತ್ರ ಸ್ವಾಧೀನ ಪಡಿಸಿಕೊಳ್ಳುತ್ತೇವೆ, ಬಲವಂತದ ಭೂಸ್ವಾಧೀನ ಮಾಡುವುದಿಲ್ಲ” ಎಂದು ಹೇಳಿ ರೈತರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಅಲ್ಲದೆ, ಸ್ಥಳೀಯ ಭೂ ದಲ್ಲಾಳಿಗಳ ಮೂಲಕ ರೈತರನ್ನು ನಿರಂತರವಾಗಿ ‘ಒಮ್ಮೆ ನೋಟಿಫೈ ಮಾಡಿದರೆ ಹಿಂದೆ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿ  ಬೆದರಿಸುತ್ತಾ ಬಂದಿದ್ದಾರೆ. ಇದೆಲ್ಲವನ್ನು ಮೆಟ್ಟಿನಿಂತು ಪ್ರತಿಭಟನಾ ಧರಣಿಯನ್ನು ಮುಂದುವರೆಸಿದ ರೈತರು, ಆಗಷ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು, ದೇವನಹಳ್ಳಿಯಲ್ಲಿ ಧ್ವಜಾರೋಹಣಕ್ಕೆ ಬಂದಿದ್ದ ಸಚಿವ ಡಾ. ಸುಧಾಕರ್ ರವರ ಮೂಲಕ ಸರ್ಕಾರದ ಗಮನ ಸೆಳೆಯಲು ಮೌನ ಪ್ರತಿಭಟನೆಗೆ ಮುಂದಾದಾಗ ಪೊಲೀಸರ ಮೂಲಕ ರೈತರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ್ದಲ್ಲದೆ ರೈತರ ಮೇಲೆ, ರೈತ ಮಹಿಳೆಯರು, ವಿದ್ಯಾರ್ಥಿ ಯುವಜನರ ಮೇಲೆ ಸುಳ್ಳು ಮೊಕದ್ದಮೆಯನ್ನು ದಾಖಲಿಸುವ ಮೂಲಕ ರೈತರ ನ್ಯಾಯಯುತ ಹೋರಾಟವನ್ನು ದಮನ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದಲ್ಲದೆ, ಕಳೆದ ಸೆಪ್ಟೆಂಬರ್ ನಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೃಹತ್ ಕೈಗಾರಿಕಾ ಸಚಿವರು 50% ಗಿಂತ ಹೆಚ್ಚು ರೈತರು ಒಪ್ಪಿದರೆ ಮಾತ್ರ ಭೂಮಿ ಸ್ವಾಧೀನ ಮಾಡಿಕೊಳ್ಳುವುದಾಗಿ ಹೇಳಿದರಾದರೂ ಸುಮಾರು ಶೇ 60-80 ರೈತರು ಭೂ ಸ್ವಾಧೀನ ವಿರೋಧಿಸಿ ದಾಖಲೆ ಸಮೇತ ಕೆಐಎಡಿಬಿ ಗೆ  ಮನವಿ ಮಾಡಿರುವ ಭಾಗಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸಿ ಮಾತು ತಪ್ಪಿದ್ದಾರೆ.

ಈ ಹಿನ್ನೆಲೆಯಲ್ಲಿ, ತಮ್ಮ ಜೀವನಾಧಾರವಾದ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲೇಬೇಕೆಂಬ ಕಾರಣಕ್ಕೆ, ಭೂಸ್ವಾಧೀನ ಪ್ರಕ್ರಿಯೆಯಿಂದ ತಮ್ಮ ಬದುಕುವ ಅವಕಾಶವನ್ನೇ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರು ಧಾರವಾಡ, ಮಾಗಡಿ, ಚಾಮರಾಜನಗರ, ಆನೇಕಲ್ ಸೇರಿದಂತೆ ರಾಜ್ಯದ ವಿವಿಧ ಭೂಸ್ವಾಧೀನ ವಿರೋಧಿ ಹೋರಾಟಗಳನ್ನು ಹತ್ತಿರದಿಂದ ಗಮನಿಸುತ್ತಾ ಬಂದಿರುವ ʼನಮ್ಮೂರಭೂಮಿ ನಮಗಿರಲಿ, ಅನ್ಯರಿಗಲ್ಲ’ ಬಳಗದ ಸಂಗಾತಿಗಳು, ಆತಂಕದಲ್ಲಿರುವ ರೈತರಿಗೆ ತಮ್ಮ‌ ಭೂಮಿಯನ್ನು ಉಳಿಸಿಕೊಳ್ಳುವ ಕಾನೂನಿನ ಸಾಧ್ಯತೆಗಳ ಕುರಿತಾಗಿ ತಿಳಿಸಿ ಅರಿವು ಮೂಡಿಸಲು ಪುಸ್ತಕ ಒಂದನ್ನು ಹೊರ ತರುತ್ತಿದ್ದಾರೆ.

ಕಾನೂನು ತಜ್ಞರು, ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ವಿಷಯ ತಜ್ಞರ ಸಲಹೆ ಸೂಚನೆಯೊಂದಿಗೆ ಮತ್ತು ಹಿಂದಿನ ಉದಾಹರಣೆಗಳ ಸಮೇತ ವಿವರಿಸಿ ರೈತರ ಪರವಾಗಿ ವಕಲತ್ತು ವಹಿಸುವಂತಿರುವ “ಭೂಸ್ವಾಧೀನದ ಒಳಸುಳಿಗಳು” ಪುಸ್ತಕವನ್ನು ದಿನಾಂಕ 17.01.2023 ರಂದು, ಚನ್ನರಾಯಪಟ್ಟಣದ ಭೂಸ್ವಾಧೀನ ವಿರೋಧಿ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿರುವ ವೇದಿಕೆಯಲ್ಲಿ, ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ರವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ. ಪರಿಸರ ತಜ್ಞರಾದ ನಾಗೇಶ ಹೆಗಡೆ, ಚಿಂತಕರಾದ ಕೆ ಪಿ ಸುರೇಶ್ ಸೇರಿದಂತೆ ನಮ್ಮೂರ ಭೂಮಿ ನಮಗಿರಲಿ ಬಳಗದ ಗಾಯತ್ರಿ, ಜೋತಿರಾಜ್, ವತ್ಸಲ ಆನೇಕಲ್ ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸ್ಥಳಿಯ ರೈತರು, ಮಹಿಳಾ ರೈತರು, ಯುವಜನರು ತಯಾರಿಯಲ್ಲಿ ತೊಡಗಿ ಕುತೂಹಲದಿಂದ ಕಾಯುತ್ತಿರುವುದು ಅವರ ಒಂದು ವರ್ಷದ ಹೋರಾಟಕ್ಕೆ ಹೊಸ ಹುರುಪು ಸಿಕ್ಕಂತಿದೆ.

ರಮೇಶ್ ಚೀಮಾಚನಹಳ್ಳಿ 

ಭೂಸ್ವಾಧೀನ ಪ್ರಕ್ರಿಯೆಯಲ್ಲಿ  ದ್ರಾಕ್ಷಿ ಮತ್ತು ಆಹಾರ ಧಾನ್ಯಗಳನ್ನು ಬೆಳೆಯುತ್ತಿರುವ ಅಷ್ಟೂ ಭೂಮಿಯನ್ನು ಕಳೆದು ಕೊಳ್ಳುವ ಆತಂಕದಲ್ಲಿರುವ ಸ್ಥಳೀಯ ರೈತ.  ಸದ್ಯ, ಬೆಂಗಳೂರಿನ ಬದುಕು ಸೆಂಟರ್‌ ಫಾರ್‌ ಲೈವ್ಲಿಹುಡ್ ಲರ್ನಿಗ್ ನಲ್ಲಿ  ಯುವ ರೈತರೊಂದಿಗೆ ಕೆಲಸ.

Related Articles

ಇತ್ತೀಚಿನ ಸುದ್ದಿಗಳು