Monday, June 17, 2024

ಸತ್ಯ | ನ್ಯಾಯ |ಧರ್ಮ

ಜರಿಯುತ್ತಿರುವ ಜೋಶಿಮಠ

ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಮತ್ತು ಚಾರಣಿಗರ ಪ್ರಿಯ ತಾಣವಾಗಿರುವ ಜೋಶಿಮಠ ವ್ಯಾಪಕ ಭೂ ಕುಸಿತದಿಂದ ಅಪಾಯದ ಅಂಚಿಗೆ ಬಂದು ತಲಪಿದೆ. ಜೋಶಿಮಠ ದುರಂತ ತಂದ ಆತಂಕ ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ಈ ಹೊತ್ತು ಹದತಪ್ಪಿದ ಅಭಿವೃದ್ಧಿ ಯೋಜನೆಗಳು ಹಿಮಾಲಯದ ನವಿರು ಪರಿಸರಕ್ಕೆ ತಂದಿಟ್ಟ ಬಿಕ್ಕಟ್ಟನ್ನು ತಮ್ಮದೇ ಅನುಭವಗಳ ಮೂಲಕ ಲೇಖನವಾಗಿಸಿದ್ದಾರೆ ಖ್ಯಾತ ವಿಜ್ಞಾನ ಬರಹಗಾರ ಕೆ ಎಸ್‌ ರವಿಕುಮಾರ್. ಅವರ ಲೇಖನವನ್ನು ಪೀಪಲ್‌ ಮೀಡಿಯಾ ಜಾಲತಾಣವು ಸರಣಿಯಲ್ಲಿ ಪ್ರಕಟಿಸಲಿದೆ. ಓದಿ ನಿಮ್ಮ ಅಭಿಪ್ರಾಯ ದಾಖಲಿಸಿ. ಸರಣಿಯ ಮೊದಲ ಭಾಗ ಇಲ್ಲಿದೆ.

ಕಳಕಳಿ ಮತ್ತು ಕಳವಳ ತುಂಬಿಕೊಂಡ ಎಚ್ಚರಿಸುವ ದನಿಗಳಿಗೆ ಕಿವಿಗೊಡದ ಜನ, ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಕಡೆಯಲ್ಲಿ ತಮ್ಮ ಮೇಲೆಯೇ ದುರಂತಗಳನ್ನು ಎಳೆದುಕೊಳ್ಳುತ್ತಾರೆ. ಹಿಮಾಲಯದ ಮಡಿಲಲ್ಲಿ ನಿರಾಳವಾಗಿದ್ದ ಜೋಶಿಮಠವೆಂಬ ಊರಿನ ಇವತ್ತಿನ ಅವಸ್ಥೆಯ ಕುರಿತು ಓದಿದ ಮೇಲೆ ಸದರಿ ಬರಹವನ್ನು ಈ ರೀತಿಯಾಗಿಯೆ ಶುರುಮಾಡಬೇಕೆನ್ನಿಸಿತು. ಈ ಹೊತ್ತು ಜೋಶಿಮಠದ ನೆಲ ಕುಸಿಯುತ್ತಿರುವುದರ ಬಗ್ಗೆ ಆಳಕ್ಕಿಳಿದು ರಾಜಕೀಯ ಹಿನ್ನೆಲೆಯಲ್ಲಿ ಬರೆಯುವುದು ನನಗೆ ಇಷ್ಟವಿಲ್ಲ. ನನಗೆ ನಿಸರ್ಗ ಮತ್ತು ಅದನ್ನು ನಂಬಿಕೊಂಡ ಜನರು ಮುಖ್ಯ ಅನ್ನಿಸಿದ್ದರಿಂದ ನಾನು ನನ್ನದೇ ಅನುಭವಗಳ ಮೂಲಕ ಬರೆಯಬೇಕಿರುವ ವಿಚಾರಕ್ಕೆ ಹೊರಳಿ ಕೊಳ್ಳುತ್ತೇನೆ.

ಜೋಶಿಮಠದ ಕನ್ನಡಿಯಲ್ಲಿ ಹಿಮಾಲಯವನ್ನೆ ನೋಡುವ ನನ್ನ ಪ್ರಯತ್ನ ಈ ಬರಹ. ಇಪ್ಪತ್ತೆಂಟು ವರುಷಗಳ ಹಿಂದೆ ನಾನು ಸಹೋದ್ಯೋಗಿ ಗೆಳೆಯರ (ಬಿ.ಅಶೋಕ್ ಮತ್ತು ಎಸ್.ವಿಶ್ವನಾಥ್) ಜೊತೆ ಜೋಶಿಮಠದಲ್ಲಿದ್ದೆ. ಟಿಬೆಟ್ ಗಡಿಯ ಮಾನಾ (ಜಿಮ್ ಕಾರ್ಬೆಟ್ ನರಭಕ್ಷಕ ಹುಲಿಯನ್ನು ಕೊಂದ ಜಾಗ) ಎಂಬ ಹಳ್ಳಿಯ ಸನಿಹ ಒಂದು ಕಡಿದಾದ ಮಾರ್ಗವೊಂದರಲ್ಲಿ ಚಾರಣದಲ್ಲಿ ಪಾಲ್ಗೊಳ್ಳಲು ನಾವು ಹೊರಟಿದ್ದೆವು. ಅದು ಸೆಪ್ಟೆಂಬರ್ ತಿಂಗಳು. ಚಳಿ ಇರಲಿಲ್ಲ. ನಡುನಡುವೆ ಮಳೆ ಬೀಳುತ್ತಿತ್ತು. ಬಿಸಿಲೂ ಇಣುಕಿ ಹವೆ ಆಹ್ಲಾದಕರವಾಗಿತ್ತು. ಜೋಶಿಮಠಕ್ಕೆ ಕೊಂಚ ಮುಂಚೆಯೆ ಒಂದು ಕಡೆ ಗುಡ್ಡ ಜರಿದು ರಸ್ತೆ ಬಂದಾಗಿತ್ತು. ತೆರವಾಗುವ ಹೊತ್ತಿಗೆ ಮಧ್ಯಾಹ್ನ ಮೂರುಗಂಟೆ ಸಂದಿತ್ತು. ಆ ದಿನ ಸಂಜೆಯೆ ನಾವು ಹೂವಿನ ಕಣಿವೆಗೆ ತೆರಳುವ ದಾರಿಯಲ್ಲಿ ಬದರಿನಾಥ್‍ಗೂ ಮುಂಚೆ ಸಿಗುವ ಗೋವಿಂದಘಾಟ್ ಗುರುದ್ವಾರ ತಲುಪಿ ಅಲ್ಲಿ ಉಳಿಯಬೇಕಿತ್ತು. ಹಾಗೆ ಆಗಬೇಕಿದ್ದರೆ ಸಂಜೆ ನಾಲ್ಕು ಗಂಟೆಗೆ ಜೋಶಿಮಠದಿಂದ ಹೊರಡುವ ವಾಹನಗಳ ಕಡೆಯ ಟ್ರಿಪ್ಪಿನಲ್ಲಿ ನಾವು ಸೇರಿಕೊಳ್ಳಬೇಕಿತ್ತು. ಇಲ್ಲೆಲ್ಲ ಬಹಳ ಇಕ್ಕಟ್ಟಾದ, ಕೊಂಚ ಗಮನ ಆಚೀಚೆ ಸರಿದರೂ ಆಳದ ಕಮರಿಗಳಿಗೆ ಬೀಳಬಹುದಾದ ನಡುಕ ಹುಟ್ಟಿಸುವ ರಸ್ತೆಗಳೇ ಇರುವುದು. ಹಲವು ಕಡೆ ಒಮ್ಮುಖ ಚಲನೆಯ ರಸ್ತೆಗಳೇ ಹೆಚ್ಚು. ಜೋಶಿಮಠದಿಂದ ಹೊರಟ ವಾಹನಗಳು ಬದರಿನಾಥ ತಲುಪಿದ ಮೇಲೆ ಆಕಡೆಯಿಂದ ವಾಪಾಸು ಬರುವ ವಾಹನಗಳನ್ನು ಸಂಚಾರಕ್ಕೆ ಬಿಡಲಾಗುತ್ತಿತ್ತು. ಎಲ್ಲೂ ಏನೂ ಅಸಹಜವಾದದ್ದು ಜರುಗಿಲ್ಲ ಎಂದಾದರೆ ವಾಹನಗಳು ನಿಗದಿತ ಸಮಯದಲ್ಲಿ ಗುರಿಮುಟ್ಟುತ್ತಿದ್ದವು. ನಾವು ನಾಲ್ಕುವರೆಗೆ ಜೋಶಿಮಠ ತಲುಪಿದ್ದರಿಂದ ಕಡೆಯ ಟ್ರಿಪ್ಪನ್ನು ತಪ್ಪಿಸಿಕೊಂಡೆವು. ಮನಸ್ಸಿಗೆ ಪಿಚ್ಚೆನಿಸಿದರೂ ಹಾಗೆ ಆದದ್ದು ಒಳ್ಳೆಯದೆ ಆಯಿತು. ಜೋಶಿಮಠದಲ್ಲೆ ಉಳಿದೆವು. ಮುಖ ತೊಳೆದು, ಬಿಸಿ ಚಹಾ ಕುಡಿದು ನಾವಿದ್ದ ಎತ್ತರದ ಡಾರ್ಮಿಟರಿಯ ಹೊರಗೆ ಬಂದು ನಿಂತು ನೋಡಿದರೆ ನಾನೀತನಕ ನನ್ನ ಕಣ್ಣಿನಲ್ಲಿ ತುಂಬಿಕೊಳ್ಳಲು ಸಾಧ್ಯವೇ ಆಗಿರದಂತಹ ನಿಸರ್ಗದ ಚೆಲುವಿನ ಮುಂದೆ ಅವಕ್ಕಾಗಿ ನಿಂತುಬಿಟ್ಟಿದ್ದೆ. ನೆತ್ತಿಯಲ್ಲಿ ಮಂಜಿನಿಂದ ಸಿಂಗಾರಗೊಂಡು 360 ಡಿಗ್ರಿಯಲ್ಲಿ ಸುತ್ತುವರಿದಿರುವ ಹಿಮಾಲಯದ ಸಾಲುಸಾಲು ಹೆಬ್ಬೆಟ್ಟಗಳು ಮುಳುಗು ಸೂರ್ಯನಿಂದ ಮುಲಾಜಿಲ್ಲದೆ ಹೊಂಬಣ್ಣವನ್ನು ಕಸಿದು ತಮ್ಮ ಮೈಗೆಲ್ಲ ಬಳಿದುಕೊಂಡು ನಿಂತಿವೆ! ಕೇವಲ ಕೆಲವೇ ಗಳಿಗೆಗಳಲ್ಲಿ ಹೊಂಬಣ್ಣ ಕೆನ್ನೇರಳೆಗೆ ತಿರುಗಿತ್ತು. ನಾವಿರುವ ದಕ್ಷಿಣದಲ್ಲಿ ಕಾಣಬರದ ಈ ನೋಟವನ್ನು ಬಣ್ಣಿಸಲು ಈಗಲೂ ನನ್ನ ಬಳಿ ಪದಗಳಿಲ್ಲ. ಸುಮ್ಮನೆ ಮೌನದಲ್ಲಿ ಅನುಭವಿಸಿ ಈ ಜಗತ್ತನ್ನು ಅಪಾರವಾಗಿ ಮೆಚ್ಚಲೇಬೇಕಾದ ನಲವಿನ ಸುಳಿಗೆ ಬಿದ್ದಿದ್ದೆವು. ಜೋಶಿಮಠ ಇಷ್ಟೊಂದು ಸುಂದರವೇ ಎಂದು ಬೆರಗಾಗಿದ್ದೆವು. ಮರುದಿನ ಬೆಳಿಗ್ಗೆ, ಸೂರ್ಯ ಹುಟ್ಟುವ ವೇಳೆಯಲ್ಲೂ ಜೋಶಿಮಠ ನಮ್ಮನ್ನು ಆವರಿಸಿಕೊಂಡು ಬಿಟ್ಟಿತ್ತು. ‘ಮಠ’ ಎಂದರೆ ಮಾರುದೂರ ಜಿಗಿಯುವ ನಾನು ಜೋಶಿಮಠದ ಮಡಿಲಲ್ಲಿ ಸೋಜಿಗಗೊಂಡ ಮಗುವಾಗಿಬಿಟ್ಟಿದ್ದೆ.

ಆ ದಿನಗಳ ಹಿಮಾಲಯ

ಜೋಶಿಮಠ ಎಂಬುದು ಚಳಿಗಾಲದ ಬದರಿನಾಥ್. ಚಳಿಗಾಲದಲ್ಲಿ ಬದರಿನಾಥ್ ಮುಚ್ಚಿದಾಗ ಅಲ್ಲಿರುವ ದೇಗುಲದ ಪೂಜೆಪುನಸ್ಕಾರಗಳು ಜೋಶಿಮಠಕ್ಕೆ ವರ್ಗಾವಣೆಗೊಳ್ಳುತ್ತವೆ. ಚಳಿಗಾಲದಲ್ಲಿ ಇಲ್ಲಿಗೆ ಬರುವ ಯಾತ್ರಿಗಳಿಗೆ ಬದರಿನಾಥಕ್ಕೆ ಹೋದಷ್ಟೆ ಪುಣ್ಯ ದಕ್ಕುತ್ತದೆ ಎಂದು ನಂಬಲಾಗಿದೆ. ಇದಲ್ಲದೆ ಜೋಶಿಮಠ ಟಿಬೆಟ್ ಗಡಿಗೆ ಹತ್ತಿರವಿರುವುದರಿಂದ ಮಿಲಿಟರಿಯ ದೃಷ್ಟಿಯಿಂದಲೂ ಆಯಕಟ್ಟಿನ ಜಾಗವೆನಿಸಿದೆ. ಸಮೀಪದಲ್ಲಿ ಔಲಿ ಎಂಬಲ್ಲಿ ಮಂಜಿನ ಜಾರಾಟಕ್ಕೆ ಅವಕಾಶವಿದೆ. ರೋಪ್ ವೇಯ ಕೇಬಲ್ ಕಾರುಗಳಲ್ಲಿ ಪಯಣಿಸಿ ಹಿಮಾಲಯದ ಸೊಬಗನ್ನು ಸವಿಯಬಹುದಾಗಿದೆ. ಆದರೆ ಈ ಎಲ್ಲವನ್ನು ತಲುಪಬೇಕೆಂದರೆ ಅತಿ ಕಿರಿದಾದ ಮುಖ್ಯ ರಸ್ತೆಗಳಲ್ಲೆ ಪಯಣಿಸಬೇಕು. Garhwal Motor Owners Union Ltd. (GMOU)ನ ಪುಟಾಣಿ ಬಸ್ಸುಗಳಲ್ಲೆ ನಮ್ಮ ಪ್ರಯಾಣ ಸಾಗಬೇಕು. ಬಹುಶಃ ಈ ಕಿರಿಯ ಅಪಾಯಕಾರಿ ರಸ್ತೆಗಳ ಕಾರಣಕ್ಕೊ ಏನೋ ಪ್ರವಾಸಿಗರು ಮತ್ತು ಯಾತ್ರಿಗಳ ಸಂಖ್ಯೆ ಹಿಮಾಲಯದ ಈ ಭಾಗಗಳಲ್ಲಿ ಸಹನೀಯವಾಗಿತ್ತು ಎನ್ನಬೇಕು. ಅಂದೆಲ್ಲ ಖಾಸಗಿ ವಾಹನಗಳ ದಟ್ಟಣೆ ಕಮ್ಮಿಯಿತ್ತು. ಎಲ್ಲೂ ಏನೂ ಧಾವಂತ, ಗಡಿಬಿಡಿಗಳಿಗೆ ಅವಕಾಶವಿರುತ್ತಿರಲಿಲ್ಲ. ಕತ್ತಲಾಗುತ್ತಿದ್ದಂತೆ ಹಗಲಿನ ಎಲ್ಲ ಗದ್ದಲಗಳು ಕರಗಿಹೋಗಿ ಇಲ್ಲಿನ ಪರಿಸರ ನೀರವತೆಗೆ ಸರಿದುಬಿಡುತ್ತಿತ್ತು. ರೇಡಿಯೋಗಳಲ್ಲಿ ಹಳೆಯ ಹಿಂದಿ ಹಾಗೂ ಜನಪದರ ಪಹಾಡಿ ಹಾಡುಗಳು ಮಾತ್ರ ಲಾಡ್ಜು, ಹೋಟೆಲ್, ಅಂಗಡಿ, ಮನೆಗಳಿಂದ ಕೇಳಿಬರುತ್ತಿದ್ದವು. ಅಂದು ಹಿಮಾಲಯದ ಊರುಗಳಿಗೆ ವಿದ್ಯುತ್ ಶಕ್ತಿಯನ್ನು ದೂರದ, ಕೆಳಗಿನ ಬಯಲು ನಾಡಿನಿಂದ ಹೈಟೆನ್ಶನ್ ತಂತಿಗಳ ಮೂಲಕ ತರಲಾಗುತ್ತಿತ್ತು. ಸ್ಥಳೀಯವಾದ ಯೋಜನೆಗಳಾಗಲಿ, ಸ್ಥಾವರಗಳಾಗಲಿ ಇರಲಿಲ್ಲ. ಒಟ್ಟಾರೆ ಅಂದಿನ ಅಭಿವೃದ್ಧಿ ಚಟುವಟಿಕೆಗಳಲ್ಲಿ ತರಾತುರಿ ಇರಲಿಲ್ಲ. ಜನರಿಗೆ ಭಾರಿ ನಿರೀಕ್ಷೆಗಳೇನು ಇರಲಿಲ್ಲ. ಅಣೆಕಟ್ಟೆಯಂತಹ ದೊಡ್ಡ ಯೋಜನೆಗಳಿಗೆ ಮಾತ್ರ ಆಗ ವಿರೋಧವಿತ್ತು. ಸುಂದರಲಾಲ ಬಹುಗುಣ ಅಂತಹವರ ಚಳವಳಿಯ ನಾಯಕತ್ವ ಇತ್ತು. ಕಾಡಿನ ನಾಶ ಆಗಲೂ ಇತ್ತು, ಆದರದು ಸೀಮಿತ ಮಟ್ಟದಲ್ಲಿ. ಏನೇ ಇರಲಿ ಹಿಮಾಲಯದ ನವಿರು ರಚನೆಯ ಬಗ್ಗೆ ಒಂದಿಷ್ಟು ಕಾಳಜಿ ಎಲ್ಲರಲ್ಲೂ ಇತ್ತು. ಆದರೆ ಬರಬರುತ್ತ ಜರುಗಿದ ಅಭಿವೃದ್ಧಿ ಹೆಸರಿನ ಬೆಳವಣಿಗೆಗಳು ಕಳೆದ ಇಪ್ಪತ್ತೆಂಟು ವರುಷಗಳಲ್ಲಿ ಏನೆಲ್ಲ ಮಾಡಿಬಿಟ್ಟಿವೆಯೆಂದರೆ ಬಿಡಿಸಿ ಬಿಡಿಸಿ ಬರೆಯಲು ಹೊರಟರೆ ಒಂದು ಬದುಕು ಸಾಲುವುದಿಲ್ಲವೇನೊ. ಅರುಣಾಚಲದಿಂದ ಹಿಮಾಚಲ ಪ್ರದೇಶದವರೆಗೂ ಹಲವು ಜಾಗೆಗಳಿಗೆ ಹೋಗಿ ಬಂದಿರುವ ನನಗೆ ಈಗ ಹಿಮಾಲಯ ಮುಂಚಿನಂತೆ ಸೆಳೆಯುವ ಸೂಜಿಗಲ್ಲಾಗಿ ಉಳಿದಿಲ್ಲ. ಅದೀಗ ಗೌಜು-ಗದ್ದಲ, ಕಟ್ಟಿಕೊಂಡ ದುರ್ನಾತದ ಚರಂಡಿಗಳು, ರಸ್ತೆಗಳ ಆಜುಬಾಜಿನ ಕಚರಾ, ಪ್ಲಾಸ್ಟಿಕ್ ಕಸ (ಸಿಕ್ಕಿಮ್ ಭಾಗವನ್ನು ಹೊರತುಪಡಿಸಿ)ಗಳ ಆಡುಂಬೊಲವಾಗಿ ಹೋಗಿದೆ. ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಭ್ರಷ್ಟ, ಅಗೋಚರ, ಅಸಹ್ಯ ನಂಟುಗಳ ಫಲವಾಗಿ ಜಾರಿಗೆ ಬಂದಿರುವ, ಜಾರಿಗೆ ಬರುತ್ತಿರುವ ತರಾವರಿ ಯೋಜನೆಗಳು ಹಿಮಾಲಯದ ನಾಜೂಕು ಪರಿಸರದ ಬೆನ್ನೆಲುಬನ್ನೆ ಮುರಿದುಹಾಕಿವೆ.

courtesy: THE HINDU

ತ್ವರಿತಗತಿಯಲ್ಲಿ ಗೊತ್ತುಪಡಿಸಿದ ಸಮಯದಲ್ಲಿ ಹಣ ಹೂಡಿ ಹಣ ಮಾಡುವ ಜಾಗತೀಕರಣದ ಮೂಲ ಪರಿಕಲ್ಪನೆ ಜಗತ್ತಿನ ಮೂಲೆಮೂಲೆಗಳನ್ನು ತಲುಪಿ ಆರ್ಥಿಕ ಜಿಗಿತದ ಎಲ್ಲ ರಂಗಗಳನ್ನು ಮುಕ್ತವಾಗಿ ಮುಸುಕಿದ ಮೇಲೆ ಹಿಮಾಲಯ ಒಂದು ನಡುಗಡ್ಡೆಯಾಗಿ ಎಷ್ಟು ಮಾತ್ರವೂ ಉಳಿಯುವುದು ಸಾಧ್ಯವಿರಲಿಲ್ಲ. ಮೊದಲೇ ಪ್ರವಾಸಿಗರು ಮತ್ತು ಧಾರ್ಮಿಕ ಯಾತ್ರಿಗಳ ನೆಚ್ಚಿನ ತಾಣವಾಗಿದ್ದ ಹಿಮಾಲಯ ಈಗ ಹಣ ಮುದ್ರಿಸಿಕೊಡುವ ಟಂಕಸಾಲೆಯ ಪಾತ್ರ ವಹಿಸಿತು. ಪಂಚತಾರಾ ಹೋಟೆಲುಗಳು, ಹೋಮ್‍ಸ್ಟೇಗಳು, ರೆಸಾರ್ಟ್‍ಗಳು, ಕೊಳ್ಳುಬಾಕ ಮನಸ್ಥಿತಿಗೆ ಒಗ್ಗುವಂತಹ ಸರಕು ತಯಾರಿಸುವ ಉದ್ದಿಮೆಗಳು ಎಲ್ಲೆಲ್ಲಿ ಸಮತಟ್ಟು ಜಾಗಗಳಿದ್ದವೊ ಅವೆಲ್ಲವನ್ನು ಆಕ್ರಮಿಸಿಕೊಂಡವು. ಇಲ್ಲದ್ದಲ್ಲಿ ಹೆಚ್ಚುವರಿ ಕಂಬಗಳನ್ನು ಎಬ್ಬಿಸಿ ಕಟ್ಟಡಗಳನ್ನು ಕಟ್ಟಲಾಯಿತು. ಕೆಳಗಿನ ನೆಲ ಗಟ್ಟಿಯೆ? ಅಲ್ಲವೆ? ಎಂದು ನೋಡುವಷ್ಟು ಸೈರಣೆ ಯಾರಲ್ಲೂ ಉಳಿದಿರಲಿಲ್ಲ. ಹಿಮಾಲಯದ ಎತ್ತರದ ಲಾಭ ಪಡೆದು ಲೆಕ್ಕವಿಲ್ಲದಷ್ಟು ಸೆಲ್‍ಫೋನ್ ಗೋಪುರಗಳು ಲಂಗುಲಗಾಮಿಲ್ಲದೆ ತಲೆಯೆತ್ತಿದವು. ಸ್ಕೀಯಿಂಗ್, ಸ್ಕೇಟಿಂಗ್, ಹೈಕಿಂಗ್, ರಿವರ್ ರ್ಯಾಫ್ಟಿಂಗ್, ಬಂಗಿ ಜಂಪಿಂಗ್, ರಾಕ್ ಕ್ಲೈಂಬಿಂಗ್, ಮೌಂಟೇನ್ ಬೈಕಿಂಗ್ ಹೀಗೆ ಹಲವು ಬಗೆಯ ಇಂಗ್ಲಿಷ್ ಹೆಸರಿನ ಸಾಹಸೀ ಕ್ರೀಡೆಗಳು ಮತ್ತು ಚಟುವಟಿಕೆಗಳು ಹಿಮಾಲಯಕ್ಕೆ ಯುವಜನರನ್ನು ಸೆಳೆದವು. ಇವೆಲ್ಲ ನಡೆಯುವ ತಾಣಗಳಿಗೆ ಹೆಚ್ಚುವರಿ ರಸ್ತೆಗಳನ್ನು ನಿರ್ಮಿಸ  ಬೇಕಾಯಿತು ಅಥವಾ ಈಗಾಗಲೆ ಇದ್ದವನ್ನು ಸುಧಾರಿಸ ಬೇಕಾಯಿತು. ಮೊದಲು ಎಲೆಮರೆಯ ಕಾಯಿಯಂತೆ ತಮ್ಮಷ್ಟಕ್ಕೆ ನಿಸರ್ಗ ಸೌಂದರ್ಯದ ನಡುವೆ ಪ್ರಶಾಂತವಾಗಿರುತ್ತಿದ್ದ ಧಾರ್ಮಿಕ ಕೇಂದ್ರಗಳೆಲ್ಲ ಈಗ ಹೊಸ ಹೊಸ ಬಹುಮಹಡಿ ತಂಗುದಾಣಗಳು, ಲಾಡ್ಜ್ ಗಳು, ಶಾಪಿಂಗ್ ಮಾಲುಗಳು, ವಿಶಾಲ ಬಸ್‍ನಿಲ್ದಾಣಗಳು, ಪಾರ್ಕಿಂಗ್ ಲಾಟುಗಳು, ಹೈಟೆಕ್ ಶೌಚಾಲಯಗಳಿಂದ ಅಡಕಿರಿದು ತಮ್ಮ ಭಾರಕ್ಕೆ ತಾವೇ ಕುಸಿದು ಬೀಳುತ್ತವೇನೊ ಎಂಬ ಹಂತವನ್ನು ತಲುಪಿದವು. ಪ್ರವಾಸಿ ತಾಣಗಳು ಜಗಜಗಿಸಲು ಮತ್ತು ಇಪ್ಪತ್ತನಾಲ್ಕು ತಾಸು ಇಂಟರ್‌ನೆಟ್‌ನಲ್ಲಿ ಗ್ರಾಹಕರು ವಿಹರಿಸಲು ಅನುಕೂಲವಾಗುವಂತೆ ವಿದ್ಯುತ್ತಿನ ಪೂರೈಕೆಯ ತೀವ್ರ ಅಗತ್ಯ ಕಂಡುಬಂತು. ಆಗ ಹೈಡೆಲ್ ಪವರ್ ಪ್ರೊಜೆಕ್ಟ್‌ಗಳು ಬೇಕೇಬೇಕೆನಿಸಿದವು. ಸಾರ್ವಜನಿಕ ಸಾರಿಗೆ ಹಿಂದೆ ಬಿದ್ದು ಪ್ರವಾಸಿಗಳನ್ನು ಕರೆತರುವ ಖಾಸಗಿ ಹಾಗೂ ಪ್ರವಾಸಿ ಏಜೆನ್ಸಿಗಳಿಗೆ ಸೇರಿದ ವಾಹನಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿದಂತೆ ಮತ್ತು ಯೋಜನೆಯ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಸತತ ಸಾಗಿಸುವ ಸಲುವಾಗಿ ರಸ್ತೆಗಳನ್ನು ಅಗಲ ಮಾಡುವ ಅಗತ್ಯವೂ ತಲೆದೋರಿತು. ಸದ್ದುಗದ್ದಲವಿಲ್ಲದ ಪ್ರವಾಸೋದ್ಯಮ ಮತ್ತು ತನ್ನಲ್ಲಿರುವ ಸೀಮಿತ ಸಂಪನ್ಮೂಲಗಳಿಂದಲೇ ತನ್ನ ಒಡಲಲ್ಲಿ ನೆಲೆಸಿರುವ ನಿವಾಸಿಗಳು ಆರಕ್ಕೆ ಹಾರದಂತೆ ಮೂರಕ್ಕೆ ಜಾರದಂತೆ ಅವರಿಗೆ ಒಂದು ನಿರಪಾಯಕಾರಿ ಸಭ್ಯ ಬದುಕನ್ನು ಕಲ್ಪಿಸಿದ್ದ ಹಿಮಾಲಯ ಒಮ್ಮೆಲೆ ತನ್ನ ಮೇಲೆ ಎರಗಿಬಿದ್ದ ‘ಅಭಿವೃದ್ಧಿ’ಯ ಭಾರವನ್ನು ತಡೆಯಲಾಗದೆ ತತ್ತರಿಸಿತು. ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳೂ ಭಾರೀ ಯೋಜನೆಗಳನ್ನು ಹಿಮಾಲಯದಲ್ಲಿ ಜಾರಿಗೊಳಿಸಲು ಟೊಂಕ ಕಟ್ಟಿ ನಿಂತವು. ದೊಡ್ಡ ದೊಡ್ಡ ಯೋಜನೆಗಳ ಕಾಮಗಾರಿ ಕಾರ್ಪೋರೇಟ್ ಕಂಪೆನಿಗಳ ಪಾಲಾದರೆ ಸಣ್ಣ, ಮಧ್ಯಮ ಯೋಜನೆಗಳ ಕಾಮಗಾರಿ ಚುನಾಯಿತ ರಾಜಕಾರಣಿಗಳ ಆಪ್ತ ಗುತ್ತಿಗೆದಾರರಿಗೆ ದಕ್ಕಿದವು. ಕಮಿಷನ್, ಕಿಕ್‍ಬ್ಯಾಕ್‍ಗಳೆಲ್ಲ ಅಭಿವೃದ್ಧಿಯ ಹೆಸರಿನಲ್ಲಿ ಮಾಮೂಲೆನಿಸಿದವು. ಹೀಗೆ ಇಡಿಯ ಹಿಮಾಲಯವೆ ಬಿಕ್ಕಟ್ಟಿಗೆ/ಇಕ್ಕಟ್ಟಿಗೆ ಸಿಲುಕಿದಾಗ ಜೋಶಿಮಠ ಹೇಗೆ ಬೇರೆಯಾಗಿ ಉಳಿದೀತು?

ಕೆ ಎಸ್‌ ರವಿಕುಮಾರ್‌

ಲೇಖಕರು ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

Related Articles

ಇತ್ತೀಚಿನ ಸುದ್ದಿಗಳು