Friday, June 14, 2024

ಸತ್ಯ | ನ್ಯಾಯ |ಧರ್ಮ

ನಮ್ಮನೆಗ್‌ ಬತ್ತಿರೋ ಸೊಸಿನು ನಿನ್ನಂಗೆ ಅವ್ಳೆ ಕನೆ ಮಾದೇವಿ

(ಈ ವರೆಗೆ…)

ಲಕ್ಷ್ಮಿಯ ಅವ್ವ ಹಳೆಯದನೆಲ್ಲ ನೆನಪಿಸಿಕೊಳ್ಳುತ್ತಾಳೆ. ಉಣ್ಣಲು ಉಡಲು ಸಾಕಷ್ಟಿದ್ದ ಮನೆಯ ಮಗಳಾಗಿ ಹುಟ್ಟಿ, ಅಣ್ಣಂದಿರ ಕೆಟ್ಟ ನಡತೆಯಿಂದಾಗಿ ಎಲ್ಲ ಆಸ್ತಿ ಪಾಸ್ತಿ ಕಳೆದುಕೊಂಡು ಕೊನೆಗೆ ಅಣ್ಣಂದಿರ ಹಣದ ಆಮಿಷಕ್ಕೆ ಬಲಿಯಾಗಿ ಸಾವುಕಾರನ ಹೆಂಡತಿಯಾಗಿ ಹೋಗುತ್ತಾಳೆ. ಆತನೋ ದುಷ್ಟ ಮತ್ತು ಕಾಮುಕ. ಸಹಿಸಲಾರದೆ ಆ ಮನೆಬಿಟ್ಟು ಮತ್ತೆ ತವರು ಸೇರುತ್ತಾಳೆ. ಅಲ್ಲೂ ಮೂದಲಿಕೆಗೆ ಒಳಗಾಗಿ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಿ ಮೇಸ್ತ್ರಿಯ ಪ್ರೀತಿಯ ಬಲೆಯೊಳಗೆ ಬೀಳುತ್ತಾಳೆ. ಅವಳ ಪ್ರೀತಿ ಗೆದ್ದಿತೇ? ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ 13ನೇ ಕಂತು ಓದಿ.

ತನ್ನ ಹೆತ್ತವ್ವನ  ಬದುಕಿನ ಏರಿಳಿತದ ಕಥೆಗೆ ಕಿವಿಯಾಗಿದ್ದ ಲಕ್ಷ್ಮಿ, ತಾನೇ ಇದನ್ನೆಲ್ಲಾ ಅನುಭವಿಸುತ್ತಿರುವಂತಹ ಭಾವ ಹೊತ್ತು ಕುಳಿತಿದ್ದಳು. ಇದುವರೆಗೂ ಅವಳೊಳಗೆ ಈ ಅವ್ವನ ಬಗ್ಗೆ ಮಡುಗಟ್ಟಿದ್ದ ಕೋಪವೆಲ್ಲ ಆರಿ ಅನುಕಂಪ ಮನೆಮಾಡಿತ್ತು. ಮಾತು ನಿಲ್ಲಿಸಿ ತನ್ನ ಮುಖವನ್ನೇ ದಿಟ್ಟಿಸುತ್ತಿದ್ದ ಅವ್ವನ ಬಳಿ ಇನ್ನಷ್ಟು ಒತ್ತಿ ಕುಳಿತು, ಪ್ರೀತಿಯಿಂದ ಅವಳ ಕೈ ಹಿಡಿದು  “ಯಾಕವ್ವ ಹಂಗ್ ನೋಡ್ತಿದ್ದಿ; ಕೇಳ್ತಿದ್ದೀನಿ ಕಂತೆ ಮುಂದೊರ್ಸು” ಎಂದಳು. ಮಗಳು ತನ್ನನ್ನು ಅರ್ಥಮಾಡಿ ಕೊಳ್ಳುತ್ತಿದ್ದಾಳೆ ಎಂದು ಸಮಾಧಾನಗೊಂಡ ಆ ಅವ್ವ ತನ್ನ ಕತೆ ಮುಂದುವರಿಸಿದಳು.

ತ್ವೊಟದ್ ಕೆಲಸುಕ್ಕೋದ ಆರು ತಿಂಗಳೊಳಗೆ ಒಂದೆರಡು ದಪ ಊರ್ಗು ಹೋಗ್ ಬಂದೆ ಮಗ. ನನ್ನಿಂದ ದುಡ್ಡು ಸಿಕ್ತಿತಲ್ಲ ಹಂಗಾಗಿ ಅಣ್ಣದಿರು ಅತ್ತಿಗೆದಿರು ಚೆನ್ನಾಗಿ ಕಂಡು ಕಳುಸಿದ್ರು. ಆಗಾಗ ನಿದಾನುಕ್ಕೆ ಮೇಸ್ತ್ರಿ ಬಂದು ನಂಜೊತೆಗಿರಕೆ ಸುರು ಮಾಡ್ದಾ. ಆ ಸೋಪಾನ್ ಪೇಟೆ ತ್ವೋಟದಲ್ಲಿ ನಮ್ಮಟ್ಟಿ ಅವಳು ಅಂತ ಇದ್ದಿದ್ದು ನಾನೊಬ್ಬ್ಳೆಯ. ಹಂಗಾಗಿ ನನಗೂ ಯಾವ ಭಯವು ಇರಲಿಲ್ಲ. ಒಂದಿನ ಅವಂತವ  ಹಠ ಮಾಡಿ ದೇವರ್ ಮುಂದೆ ನನ್ನ ಕುತ್ತಿಗೆಗೆ  ಒಂದು ಅರಿಶಿನದ ಕೊನೆನೂ ಕಟ್ಟುಸ್ಕೊಂಡು ಇನ್ನಷ್ಟು ನಿರಾಳಾದೆ. ಜೀವನ್ದಲ್ಲಿ ಪಿರುತಿ ಅನ್ನದುನ್ನೇ ಕಂಡರಿದಿದ್ದ ನನಗೆ  ತುಂಬಿ ತುಂಬಿ ಪಿರುತಿ ಕೊಟ್ಟ. ದೇವರು ಕಣ್ಬುಟ್ಟ.. ನನ್ ಕಷ್ಟವೆಲ್ಲ ಹರಿತು ಅಂದುಕೊಂಡೆ. ವರ್ಷ ಒಪ್ಪತ್ತು ಅನ್ನೋದ್ರೊಳಗೆ ಬಸ್ರಿನು ಆದೆ. ಅವನು ನಂಜೊತೆ ಇರುವಾಗ ಯಾಕ್ ಅಂಜ್ಕೆ ಅಂತ ಎಲ್ಲ ಹೆಣ್ಮಕ್ಕಳಂಗೆ ನಾನು ನನ್ನ ಬಸ್ರುತನನ ಸಂಭ್ರಮುಸ್ದೆ. ಅವನು ಹದ್ನೈ ದು ದಿನ ಕಳ್ದು  ಮನೆಗೆ ಬಂದಾಗ ನಾನು ಬಸ್ರಾಗಿರೊ ವಿಸ್ಯ ತಿಳುಸ್ದೆ. ಅವನು “ಈಗ ಮಕ್ಳು ಬ್ಯಾಡ ಇನ್ನು ವಸಿ ದಿನಾ ಹೋಗ್ಲಿ ಅದನ್ ತಗ್ಸು”  ಅಂತ ಕೂತ್ಕೊಂಡ. ಅವನು ಹಿಂಗಂತಾನೆ ಅಂತ ಕನಸು ಮನಸ್ನಲ್ಲು ಅಂದ್ಕೊಂಡಿರದಿದ್ದ  ನನ್ಗೆ, ಜೀವುವೇ ಬಾಯಿಗೆ ಬಂದಂಗಾತು. ನಾನು ಸುತ್ರಾಂ ತಗ್ಸದಿಲ್ಲ ಅಂತ ಹಠಹಿಡ್ದು ಕೂತೆ. ಅವನು ಹೇಳುವಷ್ಟ್ ಹೇಳಿ ಕೊನೆಗೆ ಸುಮ್ಕಾದ.

 ಹಂಗು ಹಿಂಗು ಒಂದೈದಾರು ತಿಂಗ್ಳು ಗಂಟ ಬಂದು ಹೋಗಿ ಮಾಡ್ದಾ. ಆರು ತುಂಬಿ ಏಳುಕ್ಕೆ ಬಿತ್ತು  ನೋಡು, ಅವನು ಪೂರ್ತಿಯಾಗಿ ಬರದುನ್ನೇ ನಿಲ್ಲಿಸ್ಬುಟ್ಟ ಮಗ. ಇಂತ ಸ್ಥಿತಿಲಿ ಯಾರುನ್ ಕೇಳ್ಳಿ ಏನ್ ಮಾಡ್ಲಿ ಅಂತ ದಿಕ್ಕೇ ತೋಚ್ದಂಗಾತು. ಅವನು ಬತ್ತಿದ್ದಿದ್ದೇ ಹದಿನೈದು ದಿನುಕ್ಕೋ ಇಪ್ಪತ್ತು ದಿನುಕ್ಕೋ ಒಂದಪ ಆಗಿದ್ರಿಂದ  ನಾನುವೇ ಅವನ್ ಬಗ್ಗೆ ಏನು ಕೆದಿಕಿ ಕೆದಿಕಿ  ಕೇಳಿ ತೊಂದ್ರೆ ಕೊಡಕೊಯ್ತಿರಲಿಲ್ಲ. ಅವನಾಗೆ ಏನಾದ್ರು ಹೇಳಿದ್ರೆ ಹೂಂ ಅನ್ಕತಿದ್ದೆ ಅಷ್ಟೆಯ. ನನ್ನ ಚೆನ್ನಾಗೆ ನೋಡ್ಕೋತಾ ಇದ್ನಲ್ಲ ಹಂಗಾಗಿ ನಾನು ಅವನ ಮೂಲ ಮುಖಿ ತಕ್ಕಂಡು ಏನ್ ಆಗಬೇಕು ಒಟ್ನಲ್ಲಿ ಅವನು ಬಂದು ಇದ್ದಷ್ಟು ದಿನ ನನ್ನ ಜೊತೆ  ಖುಸಿಯಾಗಿದ್ದೋಗ್ಲಿ ಅಂತ ಚನ್ನಾಗಿ ನೋಡ್ಕೊಂಡು ಕಳುಸ್ತಿದ್ದೆ.

ಆಮೇಲೆ ಅವರಿವರ ಬಾಯಿಂದ ಅವನ್ ಮದುವೆಯಾಗಿ ಆಗಲೆ ಎಂಡ್ ಮಕ್ಕಳವೆ ಅನ್ನೋ ವಿಚಾರ ತಿಳಿತು. ಇನ್ನೇನ್ ಮಾಡದು ದೇವರಿಟ್ಟಂಗಾಗಲಿ ಅಂತ  ತ್ವೋಟಕ್ ಹೋಗಿ ಕೆಲಸ ಮಾಡ್ಕಂಡು ಬತ್ತಿದ್ದೆ. ಹಿಂಗೆ ದಿನ ತುಂಬ್ತಾ ತುಂಬ್ತಾ ಬಾಳ ತ್ರಾಸಾಗಕ್ ಸುರುವಾತು. ಹಂಗಾಗಿ ಆಗಾಗ ಕೆಲ್ಸುಕ್ಕೆ  ರಜಾ ಹಾಕ್ಬೇಕಾಗಿ ಬತ್ತಿತ್ತು. ಒಂದಿನ ಇದ್ದಕ್ಕಿದ್ದಂಗೆ ಸಾವ್ಕಾರ ನನ್ ಕ್ವೊಣೆ ಹತ್ರುಕ್ ಬಂದು ನೀನು ಕೆಲಸಕ್ಕೆ ಬರ್ಬ್ಯಾಡ ಲೈನು ಖಾಲಿ ಮಾಡು ಅಂತ ಕೂತ್ಕೊಂಡ. ಅವನು ಮಾತು ಕೇಳಿ ಆಕಾಶ ಭೂಮಿಯಲ್ಲಾ ಒಂದಾದಂಗಾತು. ಕಣ್ಣು ಕತ್ತ್ಲೆ ಬಂತು. ದಸಕ್ಕುನೆ ಕುಕ್ರು ಬಡ್ದೆ. ಇಂಥ ಸ್ಥಿತಿಲಿ ಎಲ್ಲಿ ಹೋಗಲಿ  ಸಾವ್ಕಾರೆ.. ಒಂದೀಸ್ ತಿಂಗಳು ಟೇಮ್ ಕೊಡಿ ಅಂದೆ. ಆವಯ್ಯ ಒಂದು ವಾರದೊಳಗೆ ಖಾಲಿ ಮಾಡು ಅಂದು ಹೋದ. ಆ ಮೂರು ದಿಂದಲೇ ಹೆರಿಗೆ ಆತು ನೀನು ಹುಟ್ಟಿದೆ ಮಗ. ಹೆರಿಗೆ ಆಗಿ ಎರಡು ದಿನ ಅಲ್ಲೇ ಸುಧಾರಿಸ್ಕೊಂಡು ಮೂರನೇ ದಿನಕ್ಕೆ ಗಂಟು ಮೂಟೆ ಕಟ್ಕೊಂಡು ಆ ಸಾವುಕರುನ್ತವ  ಮಿಕ್ಕಿದ ದುಡ್ಡು ಇಸ್ಕೊಂಡು ಹೊಂಟೆ, 

ಎಲ್ಲಿಗ್ ಹೋಗ್ಲಿ ಏನ್ ಮಾಡ್ಲಿ ಅಂತ ಒಂದೂ ತೋಚ್ಲಿಲ್ಲ. ನಿನ್ನ ಮಡ್ಲುಗಾಕ್ಕೊಂಡು ನಮ್ಮ ಹಟ್ಟಿಗೋದ್ರೆ ನಮ್ಮ ಅಣ್ಣದಿರು ನನ್ನ ಸುಮ್ನೆ ಬುಡ್ತಿರ್ಲಿಲ್ಲ ಮಗ. ಇರೋಳೊಬ್ಬ್ಳು ತಂಗಿನ ನ್ಯಾಯವಾಗಿ ಬಾಳುಸ್ಲಿಲ್ಲ ಅಂದ್ರು ಸಿಂಕಿಲ್ಲ ಅವಳಿಂದ ಅವರ್ ಮನ್ತನುಕ್ಕೆ ಜಾತಿ ಜನಾಂಗುಕ್ಕೆ ಯಾವ ಕಾರ್ಣುಕ್ಕು ದಕ್ಕೆಯಾಗ್ದಂಗೆ ನಡ್ಕಬೇಕು ಅನ್ನದು ಅವರ ದರಿದ್ರುದ್ ನ್ಯಾಯ. ಆ ಮೂರು ದಿನದ ನನ್ನ ಯಾತ್ನೆನ ಈಗ ನೆನುಸ್ಕೊಂಡ್ರು ಮೈ ನಡ್ಕಸುರುವಾಯ್ತದೆ ಮಗ. ಅವತ್ತು ತಲೆಕೆಟ್ಟು ಹುಚ್ಚ್ಹಿಡಿಯದು ಒಂದು ಬಾಕಿ ಆಗಿತ್ತು. ಏನ್ ಮಾಡ್ಲಿ ವಿಧಿ ಇಲ್ಲ. ಕೊನೆಗೆ  ಧೈರ್ಯ ಮಾಡಿ ನಮ್ಮೂರಿನ್ ಕಡಿಗೆ ಬಸ್ ಹತ್ತಿ ಕೂತ್ಕೊಂಡೇ ಬುಟ್ಟೆ. ಬಸ್ ಹೊಂಟು ಒಂದೊಂದೇ ಊರ್ಗೊಳು ದಾಟ್ತಾ ದಾಟ್ತಾ ನಿಧಾನುಕ್ಕೆ  ನನ್ನೊಳಗೆ ತರ್ ಗುಟ್ಟೊ ಅಂತ  ಹೆದ್ರುಕೆ ಸುರುವಾತು. ಇನ್ನು ಬಸ್ಸಲ್ಲಿ ಕೂತ್ಕೊಳ್ಳಕ್ಕೆ  ಆಗದೆ ಇಲ್ಲ ಅನ್ನ್ಸಿ ಕಂಡಕ್ಟರಿಗೆ ದಮ್ಮಯ್ಯ ದಕ್ಕಯ್ಯ ಹಾಕಿ ನಾರಿ ಪುರದ್ ನೀರೊಳೆ ಹಾದಿ ತವ ಇಳ್ಕೊಂಬುಟ್ಟೆ. ನಿನ್ನು ಮಾಡ್ಲಿಗೆ ಕಟ್ಕೊಂಡು ಹೊಳೆತಕ್ ಹೋದೆ, ಅಲ್ಲಿ ಯಾರು ಇರ್ಲಿಲ್ಲ. ನಿರಾಳವಾಗಿ ಒಂದೀಟು ನೀರು ಕುಡ್ದು ನಿನಗೂ ಹಾಲು ಕೊಟ್ಕೊಂಡ್ ಕೂತ್ಕೊಂಡೆ. ಹಂಗೆ ನಿನ್ನ ಮಕ ನೋಡ್ತಾ ನೋಡ್ತಾ ಎದೆಯಲ್ಲಾ ಭಾರ ಆಗಕ್ಕೆ ಸುರುವಾತು ಮಗ. ನ್ಯಾಯವಾಗಿ  ಅಪ್ಪ ಅವ್ವ ಅಣ್ಣದಿರೊಳಗೆ ಹುಟ್ಟೆ ಯಾರು ಗತಿ ಇಲ್ದೊಳಂಗೆ ತಬ್ಬ್ಲುತನ ನೀಸ್ಕೊಂಡೆ ಬೆಳೆದೆ. ದುಡ್ಡ್ನಾಸೆಗೆ ಅವನ್ ಯಾವನ್ಗೊ ಕಟ್ಟಿ ನನ್ ಬದುಕನ್ನೇ ಹಾಳ್ ಗೆಡುವು ಬುಟ್ರು. ನನ್ತನ ಅನ್ನದುನ್ನೇ ಕಳಕೊಂಡು ಜೀತುಕ್ಕಾಗೆ ಹುಟ್ಟಿದಿನೇನೋ ಅಂತ ಅಂದುಕೊಂಡ್ ಬದುಕ್ದೆ.  ಮಧ್ಯುದಲ್ಲಿ ಇವ್ನ್ಯಾವನೋ ಬಂದ ಇನ್ನೇನು ನನಗು ರೆಕ್ಕೆ ಪುಕ್ಕ ಬಂತು. ನಾಕ್ ಜನ್ದಂಗೆ ನಾನು ಬದುಕು ಕಟ್ಕೊಬೋದು ಅಂತ ಕನಸ್ ಕಂಡೆ, ಇವುನೂ ನನ್ನ ನಡ್ ನೀರ್ರ್ನಲ್ಲಿ ಕೈ ಬುಟ್ಟು ಹೋದ. ನಾನು  ಈ ಪ್ರಪಂಚುಕ್ ಬಂದ ಈ ಇಪ್ಪತ್ತ್ವರ್ಸಕ್ಕೆ  ಈಟೆಲ್ಲಾ ಅನುಭವುಸ್ದೆ  ಮಗ. ಇನ್ನೂ ಕಣ್ಣೇ ಬುಡ್ದಿದ್ದ್ ನೀನು ಏನೇನೇಲ್ಲಾ ಅನುಭವುಸಬೇಕೋ ಅನ್ನೋದುನ್ನ ನೆನ್ಕೊಂಡು ಎದ್ರುಕೆ ಆಗಕ್ಕೆ ಸುರುವಾತು ಮಗ. ಹಿಂಗೆ ಹೆದ್ರುಕೆ ಏರ್ತಾ ಏರ್ತಾ ಕಣ್ಣಲ್ಲಿ ನೀರೇ ನಿಲ್ಲಿಲ್ಲ. ಅತ್ತೆ ಕರ್ದೆ ಎದೆ ಬಡ್ಕೊಂಡೆ.. ನನ್ ಸಂಕ್ಟ ಕೇಳಕೆ ಯಾರಿದ್ರು ಮಗ. ನೀನು ಕಣ್ಣು ಬಿಟ್ಟು ಈ ಕೆಟ್ಟ ಪ್ರಪಂಚ ನೋಡದೆ ಬ್ಯಾಡ ಅನ್ನುಸ್ತು. ಎದೆನಾ ಕಲ್ಮಾಡ್ಕೊಂಡು ನಿನ್ ಕುತ್ತಿಗೆಗೆ ಕೈ ಹಾಕೇ ಬುಟ್ಟೇ ಮಗ ಎಂದು ಹೇಳಿ ತನ್ನೆರಡು ಮಂಡಿಯೊಳಗೆ ಮುಖ ತೋರಿಸಿ ಬಿಕ್ಕಳಿಸ ತೊಡಗಿದಳು. ಲಕ್ಷ್ಮಿ  ಆಕೆಯನ್ನು ಎಷ್ಟು ಸಮಾಧಾನಿಸಿದರು ಆಕೆಯ ದುಃಖ ಸ್ಥಿಮಿತಕ್ಕೆ ಬರಲೇ ಇಲ್ಲ. ಕೊನೆಗೆ ಲಕ್ಷ್ಮಿ “ಬುಡವ್ವ ನೀನು ಮಾಡಿದ್ರಲ್ಲಿ ಏನು ತಪ್ಪಿಲ್ಲ ಆಗ್ಲು ನೀನು ಯೋಚಿಸಿದ್ದು ನನ್ನ ಬಗ್ಗೆನೇ ತಾನೇ.  ನನ್ನ ಕಟ್ಕೊಂಡು ನೀನು ಇನ್ನೆಷ್ಟು ನರ್ಕ ಅನುಭವುಸ್ಬೇಕಿತ್ತೋ ಏನೋ..  ಹೋಗ್ಲಿ ಬುಡು ಈ ಮನೆಲೂ ನನ್ನ ರಾಣಿ ನೋಡ್ಕಂಡಂಗೆ ನೋಡ್ಕೊಂಡವ್ರೆ. ಅವ್ವ ಅಪ್ಪ ನನ್ ಮೇಲೆ ಜೀವನೇ ಮಡಿಕೊಂಡು ಕೂತವ್ರೆ, ಅದೆಲ್ಲ ಇರಲಿ ಈಗ ಹೆಂಗ್ ಜೀವುನ ಮಾಡ್ತಿದ್ದಿ ಹೇಳವ್ವ ? ಇಷ್ಟು ವರ್ಸ ಆದ್ಮೇಲೆ ಈಗ ಯಾಕೆ ನನ್ನ ನೋಡ್ಬೇಕು ಅನ್ನುಸ್ತವ್ವ  ಎಂದು  ಮುಗ್ಧವಾಗಿ ಕೇಳಿದಳು.ಅಷ್ಟರಲ್ಲಾಗಲೇ ಮಗಳ ಸಾಂತ್ವನದ ಮಾತು ಆ ಹೆಂಗಸಿಗೆ ತುಸು ಮಟ್ಟಿಗೆ ಸಮಾಧಾನ ನೀಡಿತ್ತು. “ಇನ್ನೇನ್ ಮಗ ಈ ಪ್ರಪಂಚುಕ್ಕ್  ಹೆದ್ರುಕೊಂಡು ಇನ್ನೊಬ್ರುಗೆ ವರ್ಗೆ ಬದುಕಿದ್ ಈ ಮೂದೇವಿ ಎಲ್ಲ್ ಹೋದಾತು ಹೇಳು, ಮತ್ತ್ ಅದೇ ಅಣ್ಣ ಅತ್ತಿಗೆದಿರ್ ಸಂದಿಲೇ ಜೀವನ ವರ್ಕೊತ ಆಯಸ್ ಕಳಿತಿದ್ದೀನಿ. 

ನನ್ನ್ ಪಾಲ್ಗು ನಿನ್ ಪಾಲ್ಗು ದ್ಯಾವ್ರಂಗ್ ಬಂದ್ ಈ  ವಮ್ಮುನ್ಗೆ ನಿನ್ನ ಕೊಟ್ಟು ಹೋದ ಸ್ವಲ್ಪ ದಿನ ಹೆಂಗೋ, ಮಗ ಒಳ್ಳೆ ಕಡಿಕೆ ಸೇರ್ಕೊತಲ್ಲ ಅಂತ ವಸಿ ನಿರಾಳ್ವಾದೆ , ಒಂದಿಷ್ಟ್ ದಿನ ಕಳಿತ ಕಳಿತ ನಿನ್ ನೆನಪು ಚೇಳು ಕುಟುಕ್ದಂಗೆ ನನ್ನೆದೆ ಕುಟ್ಕಕೆ ಸುರುವಾತು. ಈವಮ್ಮ ಬ್ಯಾರೆ  ಆವತ್ತು ಕಡಾ ಖಂಡಿತವಾಗಿ ನೀನು ಇನ್ನು ಯಾವತ್ತು ಈ ಊರಿನ್ ಕಡಿಕೆ ತಲೆ ಹಾಕ್ ಬ್ಯಾಡ ಅಂತ ತಾಕಿತ್ ಬ್ಯಾರೆ ಮಾಡದ್ಲು;  ಅದುಕ್ಕೆ ಹೆದ್ರುಕೊಂಡು ನಿನ್ನ ನೋಡಕ್ಕೆ ಬರ ಸಾಹಸ ಮಾಡಲೇ ಇಲ್ಲ. ಈಗ ಹದ್ನಯದು ದಿನದ ಕೆಳಗೆ ಜೋಗತಿ ಕಟ್ಟೆ ಸಾವ್ಕಾರನ್ ಮನೆ ಹೊಲಕ್ಕೆ ನಾಟಿ ಕೆಲಸಕ್ಕೆ ಹೋಗಿದ್ದೆ ಆಗ ಸಾಹುಕಾರ್ನ ಹೆಂಡ್ತಿ ನಮಗೆಲ್ಲ ಹೊಲದಲ್ಲಿ ಊಟಕ್ಕಿಕ್ತಾ ನಮ್ಮನೆಗ್ ಬತ್ತಿರೋ ಸೊಸಿನು ನಿನ್ನಂಗೆ ಅವಳೆ ಕನೆ ಮಾದೇವಿ ಒಂದ್ ಕೈ ನಿನ್ಗಿಂತ ಚಂದಗವ್ಳೆ ಅಂತ ಬೀಗಿದ್ಲು. ನಾನು, ಸೊಸಿದು ಯಾವುರವ್ವ ಅಂತ ಕೇಳಿದೆ. ಅವಮ್ಮ ನಾರಿಪುರ ಅಂತದಿದ್ದೆ ತಡ ಯಾಕೋ ನನ್ನ ಮನಸ್ಸಿಗೆ ಅದು ನೀನೇ ಇರ್ಬೋದು ಅನ್ಸಕೆ ಸುರುವಾತು. ನಿನ್ನ ಅಂದ ಚಂದದ ಬಗ್ಗೆ, ನಿನ್ನ ಅಪ್ಪ ಅವ್ವ ನಿನ್ ಮೇಲೆ ಜೀವನೇ ಮಾಡ್ಗಿರ ಬಗ್ಗೆ ಎಲ್ಲಾನು ಅವಮ್ಮ ನಮ್ ತವ ಹೇಳಿಕೊಂಡಿದ್ದೆ ಹೇಳ್ಕೊಂಡಿದ್ದು. ನಿನ್ನ ನೋಡಬೇಕು ಅದು ನೀನೆನ ಅಂತ ತಿಳ್ಕೊಬೇಕು ಅಂತ ಮನಸ್ಸು ಕವಕವ ಅಂತ ಕಾಟ ಕೊಡಕ್ಕೆ ಸುರುವಾತು ಮಗ. ಇನ್ನು ನನ್ ಕೈಲಿ ತಡೆಯಕ್ಕೆ ಆಗ್ಲೇ ಇಲ್ಲ. ಆಗಿದ್ದಾಗಲಿ ಅಂತ ಹೊಂಟು ಬಂದೇಬುಟ್ಟೆ. ಬರ್ತಾ ದಾರಿ ಉದ್ದಕ್ಕೂ ನಿನ್ ಬಗ್ಗೆನೇ ಇಚಾರಿಸ್ಕಂಡ್ ಬಂದೆ. ಎದೆ ನಿರಾಳಾತು. ನನ್ನ ಅದೃಷ್ಟ ಮಗ ನೀನೊಬ್ಬಳೇ ಇವತ್ತು ಮಾತಿಗೆ ಸಿಕ್ಕುದೆ. ಎಂದು ಮಗಳನ್ನು ತಬ್ಬಿ ಮುತ್ತಿಟ್ಟಳು.

 ಲಕ್ಷ್ಮಿ ಇನ್ನು ತಡ ಮಾಡುವಂತಿರಲಿಲ್ಲ. ಅರಿಬಿರಿಯಲ್ಲಿ ಅಡಿಗೆ ಕೋಣೆಗೆ ಬಂದು  ಅನ್ನ ಸಾರಿಗಿಷ್ಟು ಬೆಣ್ಣೆ ಹಾಕಿ ಅವ್ವನಿಗೆ ಬಿಸಿಬಿಸಿ ಊಟಕ್ಕಿಟ್ಟು ಎದುರು ಕೂತಳು.  ಮಾತು ಮುಂದುವರಿಸಿದ ಅವ್ವ ಮಗ ಒಳ್ಳೆ ಮನೆಗೆ ಸೇರ್ಕೊತಿದ್ದಿಯ; ಅಪರಂಜಿ ಅಂತ ಹುಡುಗ.  ಈ ಕಷ್ಟ ಅನ್ನದು ನನ್ನ ತಲೆಗೆ ಕೊನೆ ಆಗ್ಬುಡ್ಲಿ ಮಗ. ನನ್ ಸುಖ ಎಲ್ಲಾ ಸೇರಿಸಿ ಆ ದ್ಯಾವರು ನಿನಗೆ ಕೊಟ್ಟು ಬಿಡ್ಲವ್ವ ಸಾಕು ಎಂದು ನಿಟ್ಟುಸಿರು ಬಿಟ್ಟಳು. ಲಕ್ಷ್ಮಿ ಅವ್ವನನ್ನೇ ದಿಟ್ಟಿಸುತ್ತಾ ಇನ್ನೇನು ಹಂಗಿದ್ರೆ ಅಲ್ಲಿಗೆ ಬತ್ತಿನಲ್ಲ ಬುಡವ್ವ  ಆಗಾಗ ನಿನ್ನ ನೋಡಬೋದು ಎಂದು ಪುಟ್ಟ ಮಗುವಿನಂತೆ ಸಂಭ್ರಮಿಸಿದಳು.  ಕೊನೆಯದಾಗಿ ಊಟ ಮುಗಿಸಿ ಹೊರಟ ಅವ್ವನ ಕೈ ಹಿಡಿದು ಹನಿಗಣ್ಣಾದ ಲಕ್ಷ್ಮಿ “ಅವ್ವ ಇವತ್ತು ನಾನು ನಿನ್ ಜೊತೆ ಇದ್ದಿದ್ರೆ ಕೂಲಿನೋ ನಾಲಿನೋ ಮಾಡಿ ನಿನ್ನ ರಾಣಿ ರಾಣಿ ನೋಡ್ಕಳ್ಳೋ ಹಂಗೆ ನೋಡ್ಕತಿದ್ನಲ್ಲವ್ವ ಯಾರ್ ಹಂಗು ಇಲ್ದಂಗೆ ಬಿಡ್ಬೀಸಾಗಿ ಬದುಕ್ಕಟ್ಕೊ ಬೋದಿತ್ತು ಅಲ್ವ ?ಎಂದು ಹೇಳಿದಳು. ತಿದ್ದಿ ತೀಡಿದ ಗೊಂಬೆಯಂತಿದ್ದ  ಮಗಳನ್ನು ದಿಟ್ಟಿಸಿ ನೋಡಿದ ಅವ್ವ ಅವಳ ಮುಗ್ಧವಾದ ಪ್ರಶ್ನೆಗೆ ಏನು ಹೇಳುವುದೆಂದು ತಿಳಿಯದೆ ತನ್ನ ಸುತ್ತಾ ಒಮ್ಮೆ ಕಣ್ಣಾಡಿಸಿ ತನ್ನ ತುಟಿಯಂಚಿನಿಂದ ನೋವಿನ ನಗು ತುಳುಕಿಸಿದಳು. ಮಗಳ ಗಲ್ಲವನ್ನು ಹಗುರಾಗಿ ಸವರುತ್ತಾ “ನಮ್ಮ ಸುತ್ಲು ಪ್ರಪಂಚ ಅಷ್ಟು ಸಲೀಸಾಗಿಲ್ಲ ಮಗ” ಎಂದಷ್ಟೇ ಹೇಳಿ  ಕಣ್ಣಂಚಿಂದ ಹೊರ ಧುಮುಕಿದ ನೀರ ತನ್ನ ಸೆರಗಿನಿಂದ ಒತ್ತಿ ಕೊಳ್ಳುತ್ತಾ ಭಾರವಾದ ಹೆಜ್ಜೆಯೊಂದಿಗೆ ರಸ್ತೆಯ ಆ ತುದಿಯಲ್ಲಿ ಮರೆಯಾದಳು.‌

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು