Saturday, June 15, 2024

ಸತ್ಯ | ನ್ಯಾಯ |ಧರ್ಮ

“ಸೋಗು”

ತುಳಸಿ ಗಿಡ ಒಣಗಿದೆ

ಬಸವನ ಹುಳು ಪಕ್ಕದಲ್ಲೇ ತೆವಳುತ್ತಿವೆ

ಒಂದಿಷ್ಟು ಗ್ರಹಗಳು ಆಗಸದಲ್ಲಿ

ಕಣ್ಮರೆಯಾಗಿವೆ

ನಮ್ಮ ಮನೆ ಅಂಗಳದಲ್ಲಿ ತೆವಳುತ್ತಿರುವ

ಬಸವನ ಹುಳುವಿನ ಸಖ್ಯ ಬೆಳೆಸಿ ಯಾರ

ರಾಶಿಗೂ ಹೋಗಲ್ಲ ಎಂದು ಮಾತು ಕೊಟ್ಟಂತೆ

ಬೆಳುಗ್ತಿವೆ…

ದೊಡ್ಡಪತ್ರೆ ಗೆ ಏನೋ ರೋಗ ಒಣಗುತ್ತಿದೆ

ಲೋಳೆಸರ ಲೋಳೆಯನ್ನು ಒಳಗೆ ಅಡಗಿಸಿ

ಹಸಿರು ಹರಡಿದೆ

ಮಹಾಭಾರತ ರಾಮಾಯಣ

ಕೇಳಲು ಇವಕ್ಕೆ ಕಿವಿಗಳಿಲ್ಲ…..

ವಂಚಕರ ನಡತೆ ತಿಳಿಯಲ್ಲ……

ಸಣ್ಣ ಮಡಕೆಯಲ್ಲಿ ಹಾಕಿದ ರಸಭರಿತ ಸಣ್ಣ

ಗಿಡಕ್ಕೆ ಅದೆಂತಾ ಪ್ರಭೆ!!!!!!

ಪಾರಿವಾಳಗಳು ಅಂಗಳದ ತುಂಬಾ

ಹೆಜ್ಜೆಯೂರಿ ಹೋಗಿವೆ

ಹಾರಿದ ಸದ್ದು ಮಾತ್ರ ಮೌನ ಮುರಿದು ಕೇಳ್ತನೆ

ಇದೆ……

ಎಲ್ಲಿಂದ ಬಂತೋ ಹೆಗ್ಗಣ

ದಿನಕ್ಕೊಂದು ಮರಿತಿಂದು ರುಧಿರದ ಗುರುತು

ಸವರಿ ಹೋಗಿರ್ತದೆ

ಸದ್ಯಕ್ಕೆ ಬಿಕ್ಕೆಕಾಯಿ ತಿನ್ನಲು ಬಂದ ಉರ್ತೆ

ಯಾರ ಕೈಗೂ ಸಿಕ್ಕಿಲ್ಲ…..‌‌

ಅರ್ಕನ ಕಿರಣಗಳು ಎಲ್ಲವನ್ನೂ ಮುಟ್ಟಿ

ನೋಡಿ ಸುಮ್ಮನೆ ಹೋದವು……ಮಳೆಯ

ದೊಡ್ಡ ಸಣ್ಣ ಹನಿಗಳೆಲ್ಲ ಆರಿ ತಂಪು

ಉಳಿದಿದೆ……ಅಂಗಳದ ಮೂಲೆ

ಮೂಲೆಯಲ್ಲೂ ಇದ್ದ ಮಡಕೆಗಳಲ್ಲಿ ಕಡಜ

ಮನೆ ಕಟ್ಟಿವೆ……ಇವರೆಲ್ಲರ ಜೊತೆ ಬದುಕು

ಗದ್ದಲವಿಲ್ಲದೆ ನಡೀತಿದೆ…..

ಪಾರಿವಾಳ ಗಲೀಜು ಮಾಡ್ತವೆ ಅಂತ

ಅಕ್ಕಿ ಬಚ್ಚಿಟ್ಟಿದ್ದೆ; ಅವಕ್ಕೆ ಹುಳಬಿದ್ದು

ಪುಡಿಯಾಗ್ತಿವೆ……

ಎಲ್ಲಾ ದಾಟಿ ಬಂದು ನೋಡ್ಕಂಡ್ರೆ

ಮನುಷ್ಯರು ಇಷ್ಟೇ…..

ಅನ್ನ ಬಚ್ಚಿಡುವ ಸೋಗಿನವರು…

ಗೀತಾ ಎನ್ ಸ್ವಾಮಿ.

ತಿಪಟೂರಿನ ಕಲ್ಪತರು ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ.

Related Articles

ಇತ್ತೀಚಿನ ಸುದ್ದಿಗಳು