Sunday, June 16, 2024

ಸತ್ಯ | ನ್ಯಾಯ |ಧರ್ಮ

ಮುಶರಫ್ ಎಂಬ ವಿಲಕ್ಷಣ ವ್ಯಕ್ತಿತ್ವ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಶರಫ್ ಎಂಬ ಮಿಲಿಟರಿ ಆಡಳಿತಗಾರ ಕೊನೆಯುಸಿರೆಳೆದಿದ್ದಾರೆ. ತಾವು ಶಾಶ್ವತ ಎಂಬ ಅಹಂಕಾರದಲ್ಲಿ ಮೆರೆಯುವ ಈ ಸರ್ವಾಧಿಕಾರಿಗಳು ಕಾಲನ ಮುಂದೆ ಏನೂ ಅಲ್ಲ. ಆದರೆ ಈ ಸಾವು ಎಂಬ ನಿಸರ್ಗ ನೀಡುವ ನ್ಯಾಯ ತೀರ್ಪಿಗೂ ಮುನ್ನ ಅವರು ಜಗತ್ತಿಗೆ ಮಾಡುವ ಹಾನಿ ಮಾತ್ರ ಅಳೆಯಲಾಗದ್ದು. ಮುಶರಫ್ ಕುರಿತ ಈ ಬಾರಿಯ ʼಶ್ರೀನಿ ಕಾಲಂʼ ‌ ತಪ್ಪದೆ ಓದಿ

ಅಕ್ಟೋಬರ್ 11, 1999, ಸಂಜೆ 6.45 ರ ಸಮಯ. ಘಟನೆಯೊಂದನ್ನು ಜಗತ್ತು ಕಾತರ, ಕಳವಳಗಳೊಂದಿಗೆ ಗಮನಿಸುತ್ತಿತ್ತು. ಯಾಕೆಂದರೆ ಅದು ಸುರಕ್ಷಿತವಾದ ನೆಲದಲ್ಲಲ್ಲ, ಅಸುರಕ್ಷಿತ ಆಕಾಶದಲ್ಲಿ ನಡೆಯುತ್ತಿದ್ದ ಘಟನೆ.

ಸುಮಾರು 200 ಜನರನ್ನು ಹೊತ್ತಿದ್ದ ಒಂದು ಏರ್ ಬಸ್ಸನ್ನು ಅದು ಯಾವ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತೋ ಅದರಲ್ಲಿ ಇಳಿಯಲು ಅವಕಾಶ ನಿರಾಕರಿಸಲಾಗಿತ್ತು. ಅದೂ ತನ್ನದೇ ದೇಶದ ವಿಮಾನವನ್ನು ತನ್ನದೇ ದೇಶದ ವಿಮಾನ ನಿಲ್ದಾಣದಲ್ಲಿ! ಹವಾಮಾನದ ಸಮಸ್ಯೆಯೇನೂ ಇರಲಿಲ್ಲ, ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆಯೂ ಇರಲಿಲ್ಲ, ಯಾಕೆ ಅನುಮತಿ ನಿರಾಕರಿಸಲಾಗಿದೆ ಎಂಬುದು ವಿಮಾನದಲ್ಲಿದ್ದವರಿಗಾಗಲೀ, ಏರ್ ಟ್ರಾಫಿಕ್ ಕಂಟ್ರೋಲ್ ನಿರ್ವಹಿಸುತ್ತಿದ್ದವರಿಗಾಗಲೀ ಗೊತ್ತೂ ಇರಲಿಲ್ಲ! ಒಟ್ಟಿನಲ್ಲಿ ವಿಮಾನ ಇಳಿಯಲು ಅನುಮತಿ ಇರಲಿಲ್ಲ ಅಷ್ಟೇ.

ವಿಮಾನ ಆಕಾಶದಲ್ಲಿ ಸುತ್ತು ಹಾಕುತ್ತಲೇ ಇತ್ತು. ಇಂಧನ ಖಾಲಿಯಾಗುತ್ತಲೇ ಇತ್ತು. ಒಂದು.. ಎರಡು.. ಮೂರು.. ಇನ್ನು ಕೆಲವೇ ನಿಮಿಷಗಳು. ಇಂಧನ ಖಾಲಿಯಾದರೆ ವಿಮಾನ ಧರೆಗುರುಳುವುದು ಖಾತ್ರಿ. ಅದರೊಂದಿಗೆ 200 ಜೀವಗಳೂ ಬಲಿಯಾಗುವುದರಲ್ಲಿ ಅನುಮಾನವಿಲ್ಲ. ಇನ್ನೇನು ಕೇವಲ 7 ನಿಮಿಷಗಳಿಗೆ ಸಾಲುವಷ್ಟು ಇಂಧನ ಮಾತ್ರ ಉಳಿದಿದೆ ಎನ್ನುವಾಗ ಅಂತೂ ಇಂತೂ ವಿಮಾನ ತಾನು ಇಳಿಯಬೇಕಾಗಿದ್ದ ನಿಲ್ದಾಣದಲ್ಲಿಯೇ ಇಳಿಯಿತು. 200 ಜೀವ ಉಳಿಯಿತಲ್ಲ ಎಂದು ಜಗತ್ತು ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು.

ವಿಮಾನದೊಳಗೆ ರೋಚಕ ಬೆಳವಣಿಗೆಗಳು

ವಿಮಾನ ಸುರಕ್ಷಿತವಾಗಿ ಇಳಿಯಿತೇನೋ ನಿಜ. ಆದರೆ ಅದು ಇಳಿಯುವುದಕ್ಕೆ ಮೊದಲ ಕೆಲವು ನಿಮಿಷಗಳಲ್ಲಿ ವಿಮಾನದೊಳಗೆ ನಡೆದ ಬೆಳವಣಿಗೆಗಳು ಸಾಧಾರಣವಾದದ್ದೇನೂ ಆಗಿರಲಿಲ್ಲ. ರೋಮಾಂಚಕವಾಗಿದ್ದ ಅವು ಅಮಾನವೀಯ ರಾಜಕೀಯ ಕುತಂತ್ರದ ವಿರುದ್ಧ ದಿಟ್ಟ ಸಂಘರ್ಷ, ಧೈರ್ಯ, ಸಮಯಸ್ಫೂರ್ತಿ, ಇಚ್ಛಾಶಕ್ತಿ ಎಲ್ಲವುಗಳ ಮೊತ್ತವಾಗಿತ್ತು.

ಅಂದ ಹಾಗೆ ಈ ವಿಮಾನ ಪಾಕಿಸ್ತಾನಕ್ಕೆ ಸೇರಿದ ಏರ್ ಬಸ್ ಪಿಕೆ 805. ವಿಮಾನ ಶ್ರೀಲಂಕಾದಿಂದ ಪಾಕಿಸ್ತಾನದ ಕರಾಚಿಗೆ ಹಾರಿ ಬರುತ್ತಿತ್ತು. ವಿಮಾನದಲ್ಲಿದ್ದ ಪ್ರಮುಖ ವ್ಯಕ್ತಿ ಪಾಕಿಸ್ತಾನದ ಸೇನಾಧಿಕಾರಿ ಜನರಲ್ ಪರ್ವೇಜ್ ಮುಶರಫ್. ಮುಶರಫ್ ಇದ್ದ ವಿಮಾನವನ್ನು ಇಳಿಯಲು ಅವಕಾಶ ಕೊಡಬಾರದು ಎಂದು ಆದೇಶ ಹೊರಡಿಸಿದ್ದು ಆಗಿನ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್.

ಮುಶರಫ್ ನ ದುಸ್ಸಾಹಸಗಳು

ಮುಶರಫ್ ಹುಟ್ಟಿದ್ದು ದಿಲ್ಲಿಯಲ್ಲಿ (ಆಗಸ್ಟ್ 11, 1943). ಭಾರತ ವಿಭಜನೆಯಾಗುತ್ತಿದ್ದಂತೆ ಮುಶರಫ್ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಯಿತು (1947). ಮುಂದೆ ಕ್ವೆಟ್ಟಾದ ಆರ್ಮಿ ಸ್ಟಾಫ್ ಅಂಡ್ ಕಮಾಂಡ್ ಕಾಲೇಜಿನಿಂದ ಪದವಿ ಪಡೆದು 1964 ರಲ್ಲಿ ಪಾಕಿಸ್ತಾನದ ಸೇನೆ ಸೇರಿದ ಮುಶರಫ್ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ 1965 ಮತ್ತು 1971ರ ಎರಡು ಯುದ್ಧಗಳಲ್ಲಿ ಭಾಗಿಯಾಗಿದ್ದಾತ. ಎರಡರಲ್ಲೂ ಪಾಕಿಸ್ತಾನ ಹೀನಾಯವಾಗಿ ಸೋಲು ಕಂಡಿತ್ತು ಮತ್ತು ಇದು ಮುಶರಫ್ ನ ಮನಸಿಗೆ ಆಳ ಗಾಯ ಮಾಡಿತ್ತು. ಅದರಲ್ಲೂ 1971 ರ ಯುದ್ಧದಲ್ಲಿ ಪಾಕಿಸ್ತಾನದ ಒಂದು ಲಕ್ಷ ಸೈನಿಕರು ಭಾರತಕ್ಕೆ ಶರಣಾಗಬೇಕಾಗಿ ಬಂದುದರಿಂದ ಉಂಟಾದ ಅವಮಾನದಿಂದ ಆತ ಸದಾ ಭಾರತದ ವಿರುದ್ಧ ಕುದಿಯುತ್ತಲೇ ಇದ್ದ.

ಮುಂದೆ ಸೇನೆಯ ನಾಯಕತ್ವದಲ್ಲಿ ಮುಶರಫ್ ಒಂದೊಂದೇ ಮೆಟ್ಟಲು ಏರುತ್ತ ಹೋದ. 1987 ರಲ್ಲಿ ಭಾರತದ ವಶದಲ್ಲಿದ್ದ ಸಿಯಾಚಿನ್ ನೀರ್ಗಲ್ಲು ಪ್ರದೇಶದ ಮೇಲೆ ದಾಳಿ ಮಾಡಿದ ಈತನ ಸೇನಾ ತಂಡ ಮತ್ತೆ ಭಾರತೀಯ ಸೈನಿಕರ ಹೊಡೆತದಿಂದ ಮುಖಭಂಗ ಅನುಭವಿಸಿತ್ತು. ಫೆಬ್ರವರಿ 20, 1999 ರಲ್ಲಿ ವಾಜಪೇಯಿ ಪಾಕಿಸ್ತಾನಕ್ಕೆ ಭಾರತ ಯಾತ್ರೆ ಕೈಗೊಂಡುದು ಆತನಿಗೆ ಇಷ್ಟವಾಗಿರಲಿಲ್ಲ. ಆತ ವಾಜಪೇಯಿಗೆ ಸೆಲ್ಯೂಟ್ ಮಾಡದಿದ್ದುದನ್ನು ಎಲ್ಲರೂ ಗಮನಿಸಿದ್ದರು. ಮುಂದೆ ಪಾಕಿಸ್ತಾನ ಪ್ರಧಾನಿಯ ಗಮನಕ್ಕೆ ತಾರದೆ ಮೇ-ಜುಲೈ 1999 ರಲ್ಲಿ ಭಾರತದ ಕಾರ್ಗಿಲ್ ಬೆಟ್ಟಗಳನ್ನು ವಶಪಡಿಸಿಕೊಂಡಿದ್ದ. ಆದರೆ ಭಾರತ ಸೈನಿಕರು ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿ ಮತ್ತೆ ಮುಶರಫ್ ನ ಸೈನಿಕರಿಗೆ ಸೋಲುಣಿಸಿದ್ದರು. ಮುಶರಫ್ ನ ಕಾರ್ಗಿಲ್ ದುಸ್ಸಾಹಸದಿಂದ ಪಾಕಿಸ್ತಾನ ಅಂತಾರಾಷ್ಟ್ರೀಯವಾಗಿ ಪ್ರತ್ಯೇಕತೆ ಅನುಭವಿಸಿ ಮತ್ತೆ ನವಾಜ್ ಶರೀಫ್ ಮುಜುಗರ ಅನುಭವಿಸುವಂತಾಗಿತ್ತು. ಮುಷರಫ್ ಒಂದು ಸಮಾಂತರ ಸರಕಾರದಂತೆ ಕಾರ್ಯ ನಿರ್ವಹಿಸುತ್ತಿದ್ದುದು ನವಾಜ್ ಶರೀಫ್ ನ ಸಿಟ್ಟಿಗೆ ಕಾರಣವಾಗಿತ್ತು. ಅವರ ನಡುವೆ ವೈಮನಸ್ಯದ ಕಂದರ ಹಿಗ್ಗುತ್ತಲೇ ಹೋಯಿತು. ಇದು ಚರಮ ಸೀಮೆ ತಲಪಿದ್ದು ಈ ವಿಮಾನ ಪ್ರಕರಣದಲ್ಲಿ.

ಶ್ರೀಲಂಕಾದಿಂದ ಮರಳುವ ಹಾದಿಯಲ್ಲಿ

ಶ್ರೀಲಂಕಾ ಸರಕಾರದ ಸಂಭ್ರಮಾಚರಣೆಯಲ್ಲಿ ತನ್ನ ಪ್ರತಿನಿಧಿಯಾಗಿ ಭಾಗವಹಿಸಲು ಮುಶರಫ್ ನನ್ನು ನವಾಜ್ ಶರೀಫ್ ಶ್ರೀಲಂಕಾಗೆ ಕಳುಹಿಸಿಕೊಟ್ಟಿದ್ದ. ಆತ ವಾಪಸ್ ಬರುವ ವಿಮಾನದಲ್ಲಿದ್ದಾಗಲೇ ಆತನನ್ನು ಪದಚ್ಯುತಿಗೊಳಿಸಿ ತನ್ನ ಆಪ್ತ ಲೆಫ್ಟಿನೆಂಟ್ ಜನರಲ್ ಕ್ವಾಜಾ ಝಿಯಾ ಉದ್ದೀನ್ ನ್ನು ಆತನ ಜಾಗದಲ್ಲಿ ನೇಮಿಸಿದ್ದ. ಈ ಕ್ವಾಜಾ ಜಿಯಾವುದ್ದೀನ್ ದೇಶದ ಅತ್ಯುನ್ನತ ಮಿಲಿಟರಿ ಇಂಟೆಲಿಜೆನ್ಸ್ ಅಧಿಕಾರಿಯಾಗಿದ್ದಾತ. ಅಲ್ಲದೆ, ವಿಮಾನವನ್ನು ಕರಾಚಿಯಲ್ಲಿ ಇಳಿಯಲು ಬಿಡಬಾರದು. ಭಾರತ ಅಥವಾ ಒಮನ್ ಹೀಗೆ ಪಾಕಿಸ್ತಾನದಾಚೆಗೆ ಎಲ್ಲಿಗೆ ಬೇಕಾದರೂ ಹೋಗಲಿ ಎಂದು ಹೇಳಲಾಗಿತ್ತು. ಆದರೆ ಮುಶರಫ್ ಅದಕ್ಕೆ ಒಪ್ಪಲಿಲ್ಲ; ಸತ್ತರೂ ಸರಿ ಭಾರತಕ್ಕೆ ಹೋಗುವುದು ಬೇಡ ಎಂದು ಪೈಲಟ್ ಗೆ ಹೇಳಿದ್ದ. ‘ವಿಮಾನದಲ್ಲಿ ಇಂಧನ ಮುಗಿಯುತ್ತ ಬಂದಿದೆ, ದೂರ ಹಾರಲು ಸಾಧ್ಯವಿಲ್ಲ’ ಎಂದು ಪೈಲಟ್ ಹೇಳಿದಾಗ ಅಂತಿಮವಾಗಿ ನವಾಬ್ ಶಾ ಎಂಬ ಕರಾಚಿಯ ಹೊರವಲಯದ ಸಣ್ಣ ವಿಮಾನ ನಿಲ್ದಾಣದಲ್ಲಿ ಇಳಿಯಲು ಹೇಳಲಾಗಿತ್ತು. ಅಲ್ಲಿ ಇಳಿಯುತ್ತಿದ್ದಂತೆ ಮುಶರಫ್ ನನ್ನು ಬಂಧಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು.

ಚಾಣಾಕ್ಷ ಮುಷರಫ್

ಆದರೆ ಮುಶರಫ್ ಮೊದಲೇ ಕಮಾಂಡೋ ತರಬೇತಿ ಪಡೆದ ಸೈನಿಕ; ಮಹಾ ಚಾಣಾಕ್ಷ, ಧೈರ್ಯಶಾಲಿ ಮತ್ತು ಸಾಹಸಿ. ಅಂತಹ ಸ್ಥಿತಿಯಲ್ಲಿಯೂ ಆತ ಧೈರ್ಯಗೆಡಲಿಲ್ಲ. ಅಲ್ಲಿಂದಲೇ ಕೊಲ್ಲಿ ರಾಷ್ಟ್ರದ ಮೂಲಕ ತನ್ನ ಸೇನಾಧಿಕಾರಿಗಳನ್ನು ಸಂಪರ್ಕಿಸಿ ಕೆಲ ಸೂಚನೆಗಳನ್ನು ನೀಡಿದ. ಸೇನೆ ಹೇಳುವ ಪ್ರಕಾರ ಜನರಲ್ ಮುಶರಫ್ ವಿಮಾನದ ಕಾಕ್ ಪಿಟ್ ಗೆ ಹೋಗಿ, ಪೈಲಟ್ ಸಹಾಯದಿಂದ ಪರ್ಶಿಯನ್ ಕೊಲ್ಲಿಯ ದುಬಾಯಿಯ ಮೂಲಕ ಕರಾಚಿಯ ಲೆಫ್ಟಿನೆಂಟ್ ಜನರಲ್ ಮುಜಾಫರ್ ಉಸ್ಮಾನಿಯನ್ನು ಸಂಪರ್ಕಿಸಿ  (ಈತ ಕೋರ್ ಕಮಾಂಡರ್)  ಸಹಾಯ ಯಾಚಿಸಿದ. ತಡಮಾಡದೆ ಜನರಲ್ ಉಸ್ಮಾನಿ ಮತ್ತು ಕಮಾಂಡೋಗಳ ತಂಡ ಕರಾಚಿ ವಿಮಾನ ನಿಲ್ದಾಣಕ್ಕೆ ಧಾವಿಸಿ ಕಂಟ್ರೋಲ್ ಟವರ್ ನಿಯಂತ್ರಣಕ್ಕೆ ತೆಗೆದುಕೊಂಡಿತು. ಇನ್ನೇನು ಏಳು ನಿಮಿಷಗಳ ಇಂಧನ ಉಳಿದಿರುವಂತೆಯೇ ವಿಮಾನ ಕರಾಚಿಯಲ್ಲಿಯೇ ಇಳಿಯಿತು.

ಆನಂತರ ಕ್ಷಿಪ್ರ ಮತ್ತು ನಾಟಕೀಯ ಬೆಳವಣಿಗೆಗಳು ನಡೆದವು. ಸೈನಿಕರು ನವಾಜ್ ಶರೀಫ್ ರ ಮನೆಯನ್ನು ಸುತ್ತುವರಿದು ಅವರನ್ನು ಗೃಹಬಂಧನದಲ್ಲಿರಿಸಿದರು. ಸರಕಾರಿ ಟೆಲಿವಿಶನ್ ಅನ್ನೂ ವಶಕ್ಕೆ ತೆಗೆದುಕೊಂಡರು. ದೇಶದ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ನಿಯಂತ್ರಣ ಸಾಧಿಸಿದರು. ಹೀಗೆ ಕೇವಲ ಸೇನಾಧಿಕಾರಿಯಾಗಿದ್ದ ಮುಷರಫ್ ಕೈಗೆ ಇಡೀ ಪಾಕಿಸ್ತಾನದ ಹಿಡಿತ ಬಂತು.

ಹೀಗೆ ಈ ವಿಮಾನ ಲ್ಯಾಂಡಿಂಗ್ ಪ್ರಕರಣ ಮಾತ್ರ ಯಾರೂ ಮರೆಯಲಾಗದ್ದು. ನವಾಜ್ ಶರೀಫ್ ಮಾಡಿದ ಸಣ್ಣ ಎಡವಟ್ಟಿನಿಂದಾಗಿ ಸ್ವತಃ ಅಧಿಕಾರ ಕಳೆದುಕೊಳ್ಳುವಂತಾಗಿತ್ತು. ಅದೇ ಹೊತ್ತಿನಲ್ಲಿ ಆಕಾಶದಲ್ಲಿದ್ದ ವಿಮಾನದಲ್ಲಿ ಕುಳಿತೇ ಒಂದು ಕ್ಷಣವೂ ಎದೆಗುಂದದೆ ಪರ್ವೇಜ್ ಮುಶರಫ್ ನಡೆಸಿದ ಕಾರ್ಯಾಚರಣೆ ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ಇತಿಹಾಸದಲ್ಲಿ ಅತ್ಯಪೂರ್ವವಾದುದು. ಇದು ಮುಶರಫ್ ನ ಧೈರ್ಯ, ಸಾಹಸವನ್ನು ಜಗತ್ತಿಗೆ ಪರಿಚಯಿಸಿತು.

ದೇಶಭ್ರಷ್ಟನಾದ ಪಾಕಿಸ್ತಾನದ ಒಂದು ಕಾಲದ ಹೀರೋ

ಮೊದಲು ಪಾಕಿಸ್ತಾನದ ಮುಖ್ಯ ಕಾರ್ಯನಿರ್ವಾಹಕನಾಗಿ ಮತ್ತು ಆನಂತರ ಅಧ್ಯಕ್ಷನಾಗಿ 1999 ರಿಂದ 2008 ರವರೆಗೆ ವಿವಿಧ ಹುದ್ದೆಗಳಲ್ಲಿ ಮುಷರಫ್ ಪಾಕಿಸ್ತಾನವನ್ನು ಆಳಿದ್ದ. 2007 ರ ನವೆಂಬರ್ 3 ರಂದು ಸಂವಿಧಾನವನ್ನು ಅಮಾನತುಗೊಳಿಸಿದ್ದಕ್ಕಾಗಿ 2014 ರ ಮಾರ್ಚ್ ನಲ್ಲಿ ಮುಷರಫ್ ವಿರುದ್ಧ ದೋಷಾರೋಪವನ್ನು ಮಾಡಲಾಗಿತ್ತು. ಆತನ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವೊಂದು ಡಿಸೆಂಬರ್ 2019 ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. 2016 ರ ಮಾರ್ಚ್ ನಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದುಬೈಗೆ ತೆರಳಿದ ಮುಷರಫ್ ಸ್ವದೇಶಕ್ಕೆ ವಾಪಸಾಗಿರಲಿಲ್ಲ. ಒಂದೆಡೆ ಕಾನೂನಿನ ಭಯ ಇನ್ನೊಂದೆಡೆ ರಾಜಕೀಯ ಪ್ರತಿರೋಧ, ಮುಷರಫ್ ಬ್ರಿಟನ್ ಯುಎಇ ನಡುವೆ ಓಡಾಡುತ್ತಲೇ ಇದ್ದ. ದಶಕಗಳ ಕಾಲ ಪಾಕಿಸ್ತಾನದ ಮಿಲಿಟರಿ ಆಡಳಿತಗಾರನಾಗಿ ಮೆರೆದ, ಕಾರ್ಗಿಲ್ ಸಂಘರ್ಷದ ರೂವಾರಿ ಮುಶರಫ್ ಕೊನೆಗೆ ದೇಶಭ್ರಷ್ಟನಾಗಿ ದುಬಾಯಿಯಲ್ಲಿ ನೆಲೆಸುವಂತಾಯಿತು. ಅಮಿಲಾಯ್ಡೊಸಿಸ್ ಎಂಬ ಅಪರೂಪದ ಕಾಯಿಲೆಗೆ ಈಡಾದ ಆತ ಮೊನ್ನೆ ಫೆಬ್ರವರಿ 5 ರಂದು ದುಬೈಯ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆಯುವ ಮೂಲಕ ಪಾಕಿಸ್ತಾನ ರಾಜಕೀಯ ಇತಿಹಾಸದ ವರ್ಣರಂಜಿತ ಅಧ್ಯಾಯವೊಂದು ಕೊನೆಗೊಂಡಂತಾಯಿತು.

ಸರ್ವಾಧಿಕಾರಿಗಳ ಪಾಪಕೃತ್ಯಗಳು

ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನ ದುರಹಂಕಾರ ಮತ್ತು ಮಹತ್ತ್ವಾಕಾಂಕ್ಷೆಯ ಪರಿಣಾಮವಾಗಿ ಎರಡನೆ ಜಾಗತಿಕ ಯುದ್ಧ ನಡೆದು ಸುಮಾರು 75 ಮಿಲಿಯ ಜನ ಸಾವಿಗೀಡಾದುದು ನಮಗೆ ಗೊತ್ತೇ ಇದೆ. ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ನ ಕಾರ್ಗಿಲ್ ಸೇನಾ ದುಸ್ಸಾಹಸಗಳಿಂದ ಎರಡೂ ಕಡೆಯ ಸಾವಿರಕ್ಕೂ ಅಧಿಕ ಸೈನಿಕರು ಸೇನಾಧಿಕಾರಿಗಳು ಜೀವ ಕಳೆದುಕೊಂಡರು. ಅಪಾರ ಆಸ್ತಿಪಾಸ್ತಿ ನಾಶವಾಯಿತು. ಪಾಕಿಸ್ತಾನ ಸರಕಾರದ ಬೆಂಬಲದಿಂದ ಡಿಸೆಂಬರ್ 2001 ರಲ್ಲಿ ಭಯೋತ್ಪಾದಕರು ಭಾರತದ ಪಾರ್ಲಿಮೆಂಟ್ ನ ಮೇಲೆ ದಾಳಿ ನಡೆಸಿದರು. ಒಂಬತ್ತು ಮಂದಿ ಭದ್ರತಾ ಸಿಬ್ಬಂದಿಗಳು ಗುಂಡಿಗೆ ಬಲಿಯಾದರು. ಭಾರತದ ಅಗ್ರ ನಾಯಕರನ್ನು ಮುಗಿಸುವುದು ಅಥವಾ ಅಪಹರಿಸುವುದು ಉಗ್ರರ ಉದ್ದೇಶವಾಗಿತ್ತು. 2006 ರ ಜುಲೈಯಲ್ಲಿ ಮುಂಬೈ ರೈಲುಗಳ ಮೇಲೆ ಪಾಕಿಸ್ತಾನಿ ಉಗ್ರರಿಂದ ಬಾಂಬ್ ದಾಳಿ ನಡೆಯಿತು. ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಯಿತು.

ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟದ ದಂತಕತೆಯಂತಹ ನಾಯಕ ನವಾಬ್ ಅಕ್ಬರ್ ಬುಗ್ತಿಯನ್ನು 2006 ರಲ್ಲಿ ಇದೇ ಮುಷರಫ್ ಕೊಲ್ಲಿಸಿದ. ಮುಷರಫ್ ನ ಸೈನಿಕರು ಜುಲೈ 2007 ರಲ್ಲಿ ಲಾಲ್ ಮಸ್ಜಿದ್ ಕನ್ಸರ್ವೇಟರಿ ಸೆಮಿನರಿಯ ಮೇಲೆ ದಾಳಿ ನಡೆಸಿದ್ದು ಇದು ಭಾರೀ ಆಕ್ರೋಶಕ್ಕೆ ಕಾರಣವಾಯಿತು. ನವಾಜ್ ಷರೀಫ್ ಮತ್ತು ಬೆನಜೀರ್ ಬುಟ್ಟೋ ದೇಶಭ್ರಷ್ಟರಾಗಿ ಬದುಕುವಂತೆ ಮಾಡಿದ್ದ ಈತ ಕೊನೆಗೆ ಬೆನಜೀರ್ ಬುಟ್ಟೋ ರೊಂದಿಗೆ ರಾಜಿ ಮಾಡಿಕೊಂಡು ಅವರು ಪಾಕಿಸ್ತಾನಕ್ಕೆ ಬರುವಂತೆ ಮಾಡಿದ. ಅಲ್ಲಿ ಚುನಾವಣಾ ಪ್ರಚಾರದಲ್ಲಿರುವಾಗಲೇ ಡಿಸೆಂಬರ್ 27, 2007 ರಂದು ಬೆನಜೀರ್ ಉಗ್ರರ ಗುಂಡಿಗೆ ಬಲಿಯಾದಳು.

The grave yards are full of indispensabe men ಎಂದು ಫ್ರಾನ್ಸ್ ನ ಚಾರ್ಲ್ಸ್ ಡಿಗಾಲೆ ಹೇಳಿದ್ದ. ಅಂದರೆ ತಾವು ಅನಿವಾರ್ಯ, ತಾವಿಲ್ಲದೆ ಜಗತ್ತು ಇರದು ಎಂದು ಈ ಸರ್ವಾಧಿಕಾರಿಗಳು ಅಂದುಕೊಂಡಿರುತ್ತಾರೆ. ಆದರೆ ಅವರೆಲ್ಲರೂ ಸತ್ತು ಸಮಾಧಿಯಾಗಿದ್ದಾರೆ ಎನ್ನುವುದು ವಾಸ್ತವ. ತಾವು ಶಾಶ್ವತ ಎಂಬ ಅಹಂಕಾರದಲ್ಲಿ ಮೆರೆಯುವ ಈ ಸರ್ವಾಧಿಕಾರಿಗಳು ಕಾಲನ ಮುಂದೆ ಏನೂ ಅಲ್ಲ. ಒಮ್ಮೊಮ್ಮೆ ತಮ್ಮದೇ ಅತಿರೇಕದಿಂದಾಗಿ ಹಿಟ್ಲರ್ ರೀತಿಯಲ್ಲಿ ಸಾಯುತ್ತಾರೆ. ಅಥವಾ ಕಾಯಿಲೆಗೀಡಾಗಿಯೋ ವಯಸ್ಸಾಗಿಯೋ ಸಾಯುತ್ತಾರೆ. ಸಾವಂತೂ ಖಂಡಿತ. ಆದರೆ ಈ ಸಾವು ಎಂಬ ನಿಸರ್ಗ ನೀಡುವ ನ್ಯಾಯ ತೀರ್ಪಿಗೂ ಮುನ್ನ ಅವರು ಜಗತ್ತಿಗೆ ಮಾಡುವ ಹಾನಿ ಮಾತ್ರ ಅಳೆಯಲಾಗದ್ದು; ಮತ್ತು ಮರಳಿ ದುರಸ್ತಿಮಾಡಲಾಗದ್ದು. ಇದು ದುರಂತ!

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

.

Related Articles

ಇತ್ತೀಚಿನ ಸುದ್ದಿಗಳು