Friday, June 14, 2024

ಸತ್ಯ | ನ್ಯಾಯ |ಧರ್ಮ

ಕೊರಗ ಸಮುದಾಯದ ಉಪನ್ಯಾಸಕ ದಿನಕರ ಕೆ೦ಜೂರು ಡಾಕ್ಟರೇಟ್

ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಶೋಷಿತ, ಪರಿಶಿಷ್ಟ ಪಂಗಡವಾಗಿರುವ ಕೊರಗ ಸಮುದಾಯದ ಉಪನ್ಯಾಸಕ ದಿನಕರ ಕೆಂಜೂರು ಡಾಕ್ಟರೇಟ್‌ ಪದವಿ ಪಡೆದಿರುವ ಶುಭಸಮಾಚಾರ ಬಂದಿದೆ. ಉಡುಪಿ ಜಿಲ್ಲೆಯ ಬಹ್ಮಾವರ ತಾಲ್ಲೂಕಿನ ಕೆ೦ಜೂರು ಗ್ರಾಮದ ಕಲ್ಲುಗುಡ್ಡೆಯ ದಿನಕರ ಕೆ೦ಜೂರು ಇವರು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಹಾಗು ಕುಲಪತಿಗಳು ಪ್ರೊ. ಪಿ.ಎಸ್. ಯಡಪಡಿತ್ತಾಯರವರ ಮಾರ್ಗದರ್ಶನದಲ್ಲಿ ಮ೦ಡಿಸಿದ “ನಾಲೇಜ್ ಮ್ಯಾನೇಜ್‌ಮೆ೦ಟ್ ಪಾಲಿಸೀಸ್ ಎ೦ಡ್ ಪ್ರಾಕ್ಟೀಸಸ್: ಎ ಸ್ಟಡಿ ವಿದ್ ರೆಪರೆನ್ಸ್ ಟು ಕ೦ಪ್ಯೂಟರ್ ಸ್ವಾಪ್ಟವೇರ್ ಎ೦ಡ್ ಸರ್ವಿಸಸ್ ಕ೦ಪೆನೀಸ್ ಇನ್ ಕರ್ನಾಟಕ” ಎಂಬ ವಿಷಯದ ಸ೦ಶೋಧನಾ ಮಹಾಪ್ರಬಂಧಕ್ಕೆ ಮ೦ಗಳೂರು ವಿಶ್ವವಿದ್ಯಾನಿಲಯ ದಿ.07-02-2023ರಂದು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

 ಡಾ.ದಿನಕರ ಕೆಂಜೂರು ಅವರು ಕರ್ನಾಟಕ ರಾಜ್ಯದ ಅ೦ಚಿಗೆ ತಳ್ಳಲ್ಪಟ್ಟ ಬುಡಕಟ್ಟು ಸಮುದಾಯವಾದ ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪಡೆದ ಮೂರನೆಯವರಾಗಿದ್ದಾರೆ. ಇದಕ್ಕೆ ಮೊದಲು ಕೊರಗ ಸಮುದಾಯದ ಡಾ.ಬಾಬು ಬೆಳ್ತಂಗಡಿ ಮತ್ತು ಡಾ.ಸಬಿತಾ ಗುಂಡ್ಮಿ ಇವರು ಮಂಗಳೂರು ವಿವಿಯಿಂದಲೇ ಡಾಕ್ಟರೇಟ್‌ ಪಡೆದಿರುತ್ತಾರೆ.  ಅಂಗವಿಕಲತೆ ಹೊಂದಿರುವ ಡಾ. ದಿನಕರ ಕೆಂಜೂರು ಅವರು ತಮ್ಮ ಸಾಧನೆಯ ಹಾದಿಯಲ್ಲಿ ದೃಢವಾಗಿ ನಡೆದು ಮಾದರಿಯಾಗಿದ್ದಾರೆ. ಡಾ. ದಿನಕರ ಕೆ೦ಜೂರು ಪ್ರಸ್ತುತ ಮ೦ಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸುಕ್ರ ಕೊರಗ ಕೆ೦ಜೂರು ಮತ್ತು ದಿ. ಶಾ೦ತ ಕೆ೦ಜೂರು ರವರ ಪುತ್ರರಾಗಿರುತ್ತಾರೆ.

ಡಾ. ದಿನಕರ್‌ ಅವರು ಇದುವರೆಗೆ ರಾಜ್ಯದ ವಿಶ್ವವಿದ್ಯಾನಿಲಯಗಳು ಸೇರಿದಂತೆ ಮಹಾರಾಷ್ಟ ಮತ್ತು ಕೇರಳ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಸಮ್ಮೇಳನಗಳಲ್ಲಿ 60 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. 15 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲ್ ಮತ್ತು ಪುಸ್ತಕಗಳಲ್ಲಿ ಪ್ರಕಟಿಸಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯ ಮತ್ತು ಚೆನ್ನೈ ಹಾಗೂ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣ ಮತ್ತು ಸಮ್ಮೇಳನಗಳಲ್ಲಿ ಸಕ್ರೀಯವಾಗಿ ಭಾಗವಹಿಸಿರುತ್ತಾರಲ್ಲದೇ ವಾಣಿಜ್ಯಶಾಸ್ತ್ರ, ಕೊರಗ ಮತ್ತು ಅಂಗವಿಕಲರಿಗೆ ಸಂಬಂಧಪಟ್ಟ ವಿವಿಧ ವಿಷಯಗಳ ಕುರಿತು ಹಲವಾರು ಉಪನ್ಯಾಸಗಳನ್ನು ನೀಡಿರುತ್ತಾರೆ.

ಇನ್ನು ಡಾ.ದಿನಕರ ಕೆಂಜೂರು ಅವರ ಸೇವೆಗೆ ಸಂಬಂಧಿಸಿದಂತೆ ನೋಡುವುದಾದರೆ ಒಂದು ವರ್ಷ ನರೇ0ದ್ರ ಫೌಂಡೇಷನ್ ಪಾವಗಡ, ತುಮಕೂರ ನಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ; ಒಂದು ವರ್ಷ ಆರ್.ಡಿ.ಒ ಕೋಲಾರದಲ್ಲಿ ಲೆಕ್ಕಾಧಿಕಾರಿ ಹಾಗೂ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ;  ಒಂದು ವರ್ಷ ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಶಿರ್ವದಲ್ಲಿ ಸಮುದಾಯ ಪ್ರೇರಕನಾಗಿ ಸೇವೆ ಸಲ್ಲಿಸಿದ್ದಾರೆ. 6 ವರ್ಷ ಕಾಲ ಮ0ಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯಲ್ಲಿ ವಾಣಿಜ್ಯ ಅಧ್ಯಯನ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿದ ಅನುಭವ ಹೊಂದಿದ್ದಾರೆ

ಡಾ. ಸಬಿತಾ ಗುಂಡ್ಮಿಯವರೊಂದಿಗೆ 2015ರ ಏಪ್ರಿಲ್‌ 14ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಡಾ. ದಿನಕರ ಕೆಂಜೂರು – ಸಬಿತಾ ದಂಪತಿಗಳಿಗೆ ದೃಶಿಕ ಡಿ ಎಸ್‌ ಎಂಬ ಮಗಳಿದ್ದಾಳೆ.

ಕೊರಗ ಸಮುದಾಯ ಕರ್ನಾಟಕದ ಅತ್ಯಂತ ಶೋಶಿತ ದಲಿತ ಸಮುದಾಯಗಳಲ್ಲಿ ಒಂದು. ಚಾರಿತ್ರಿಕವಾಗಿ ಆರ್ಥಿಕ ಸಂಪನ್ಮೂಲಗಳಿಂದ ವಂಚಿತರಾಗಿ ಸಾಮಾಜಿಕ ದಮನಕ್ಕೊಳಗಾಗಿರುವ ಈ ಸಮುದಾಯದಿಂದ ಶಿಕ್ಷಿತರಾಗಿ ಡಾಕ್ಟರೇಟ್‌ ಪಡೆಯುತ್ತಿರುವುದು ನಿಜಕ್ಕೂ ಇಡೀ ಸಮಾಜವೇ ಸಂಭ್ರಮಿಸಬೇಕಾದ ಸಂಗತಿ. ಡಾ. ದಿನಕರ ಕೆಂಜೂರು ಅವರಿಗೆ ಪೀಪಲ್‌ ಮೀಡಿಯಾ ಅಭಿನಂದನೆಗಳನ್ನು ತಿಳಿಸುತ್ತದಲ್ಲದೇ ಅವರ ಮುಂದಿನ ಅಕಡೆಮಿಕ್‌ ಅಧ್ಯಯನಗಳಿಗೆ ಶುಭಹಾರೈಸುತ್ತದೆ.

Related Articles

ಇತ್ತೀಚಿನ ಸುದ್ದಿಗಳು