Saturday, June 15, 2024

ಸತ್ಯ | ನ್ಯಾಯ |ಧರ್ಮ

ಹೊಸ ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆಗಳು| ತಾಯ್ನುಡಿಗಳ ಸಮಸ್ಯೆ

ಒಕ್ಕೂಟ ಸರಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಿಂದ ಜಾರಿಗೆ ತಂದಿದೆ. ಇದರ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪುರುಷೋತ್ತಮ ಬಿಳಿಮಲೆಯವರು ಭಾಷಾ ಶಾಸ್ತ್ರದ ಹಿನ್ನೆಲೆಯಲ್ಲಿ ವಿವೇಚಿಸಿ, ಹೊಸ ಶಿಕ್ಷಣ ನೀತಿಯು ಭಾರತೀಯ ಭಾಷೆಗಳಿಗೆ ಹೇಗೆ ಮಾರಕವಾಗಿದೆ ಎಂಬುದನ್ನು ಪರಿಣಾಮಕಾರಿಯಾಗಿ ವಿಶ್ಲೇ಼ಷಿಸಿದ್ದಾರೆ. ಎರಡನೆಯ ಭಾಗ ʼತಾಯ್ನುಡಿಗಳ ಸಮಸ್ಯೆʼ ಇಲ್ಲಿದೆ.

ತಾಯ್ನುಡಿಗಳ ಸಮಸ್ಯೆ

ಇನ್ನೊಂದು ಸಮಸ್ಯೆಯನ್ನು ಈಗ ಗಮನಿಸೋಣ:

ಹೊಸ ಶಿಕ್ಷಣ ನೀತಿಯ ಶಿಫಾರಸು 4.11ರಲ್ಲಿ ಈ ಕೆಳಗಿನ ಮಾತುಗಳನ್ನು ಹೇಳಲಾಗಿದೆ-

ʼಚಿಕ್ಕ ಮಕ್ಕಳು ತಮ್ಮ ಮನೆಯ ಭಾಷೆಯಲ್ಲಿ / ಮಾತೃ ಭಾಷೆಯಲ್ಲಿ ಅರ್ಥ ಸಹಿತವಾದ ಮಾತುಗಳನ್ನು ಮತ್ತು ಪರಿಕಲ್ಪನೆಗಳನ್ನು ಹೆಚ್ಚು ಬೇಗ ಕಲಿಯುತ್ತಾರೆ ಮತ್ತು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮನೆ ಭಾಷೆಯೆಂದರೆ ಸಾಧಾರಣವಾಗಿ ಮಾತೃ ಭಾಷೆ ಅಥವಾ ಸ್ಥಳೀಯ ಸಮುದಾಯಗಳು ಆಡುವ ಭಾಷೆಗಳಾಗಿರುತ್ತವೆ. ಇಷ್ಟಾದರೂ ವಾಸ್ತವ ಸಂಗತಿ ಏನೆಂದರೆ ಅನೇಕ ವೇಳೆ ಬಹು ಭಾಷಿಕ ಕುಟುಂಬಗಳಲ್ಲಿ ಮನೆಯ ಕೆಲವರು ತಮ್ಮದೇ ವಿಶಿಷ್ಟವಾದ ಮನೆ ಮಾತು ಬಳಕೆ ಮಾಡಬಹುದು. ಈ ಭಾಷೆಯು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಗಿಂತ ಬೇರೆಯದೇ ಆಗಿರಬಹುದು. ಸಾಧ್ಯವಾದ ಮಟ್ಟಿಗೆ ಕಡೇ ಪಕ್ಷ ಐದನೆಯ ತರಗತಿವರೆಗೆ ಅಥವಾ ಅದಕ್ಕಿಂತ ಮುಂದೆ ಎಂಟನೆಯ ತರಗತಿವರೆಗೆ ಅಥವಾ ಅದಕ್ಕಿಂತಲೂ ಮುಂದೆ ಶಿಕ್ಷಣದ ಮಾಧ್ಯಮ ಮನೆ ಭಾಷೆ / ಪ್ರಾದೇಶಿಕ ಭಾಷೆ/ ಮಾತೃ ಭಾಷೆ ಸ್ಥಳೀಯ ಭಾಷೆ/ ಆಗಿರಬೇಕಾಗುತ್ತದೆ.  ಇದಾದ ಆನಂತರ ಸಾಧ್ಯವಾದಷ್ಟೂ ಮಟ್ಟಿಗೆ ಮನೆ ಭಾಷೆಯನ್ನು / ಸ್ಥಳೀಯ ಭಾಷೆಯನ್ನು ಒಂದು ಭಾಷೆಯಾಗಿ ಓದುವಂತ ಅವಕಾಶ ಇರತಕ್ಕದ್ದು.  ಸರಕಾರೀ ಹಾಗೂ ಖಾಸಗೀ ಎರಡೂ ಬಗೆಯ ಶಾಲೆಗಳಲ್ಲಿ ಇದನ್ನು ಜ್ಯಾರಿಗೆ ತರಲಾಗುತ್ತದೆ. ವಿಜ್ಞಾನ ಸೇರಿದಂತೆ ಎಲ್ಲ ವಿಷಯಗಳಲ್ಲೂ ಉಚ್ಚ ಮಟ್ಟದ ಪಠ್ಯ ಪುಸ್ತಕಗಳನ್ನು ಮನೆ ಭಾಷೆಯಲ್ಲಿ / ಮಾತೃ ಭಾಷೆಯಲ್ಲಿ ದೊರಕಿಸಿಕೊಡಲಾಗುವುದು.  ಒಂದು ವೇಳೆ ಮಗು ಆಡುವ ಭಾಷೆ ಹಾಗೂ ಶಿಕ್ಷಣ ಮಾಧ್ಯಮ ಇವೆರಡೂ ಎಲ್ಲಿಯೇ ಆದರೂ ಬೇರೆ ಬೇರೆಯಾಗಿದ್ದರೆ ಅಂತೆಡೆಗಳಲ್ಲಿ ಆ ಕೊರತೆಯನ್ನು ತುಂಬುವ ಎಲ್ಲ ಪ್ರಯತ್ನ ಮಾಡಲಾಗುವುದು. ಮನೆ ಭಾಷೆಯಲ್ಲಿ ಒಂದು ವೇಳೆ ಪಠ್ಯ ಸಾಮಗ್ರಿ ದೊರೆಯದೇ ಇರುವಂಥ ಸಂದರ್ಭಗಳಲ್ಲಿ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ನಡುವೆ ಸಂಭಾಷಣೆ ರೂಪದಲ್ಲಾದರೂ ಮನೆ ಭಾಷೆಯನ್ನು ಬಳಕೆಗೆ ತರಲಾಗುತ್ತದೆ.  ಇದು ಸಾಧ್ಯವಾಗಲು ಸಂವಿಧಾನದ ಎಂಟನೆಯ ಪರಿಚ್ಚೇದದಲ್ಲಿರುವ ಎಲ್ಲ ಭಾಷೆಗಳ ಭಾಷಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಯತ್ನ ಮಾಡುವುದು. ಸಾಮಾಜಿಕ ಆರ್ಥಿಕ ಪರಿಸ್ಥಿತಿ ಏನೇ ಇದ್ದರೂ ಸಮಾನ ಶಿಕ್ಷಣ ದೊರೆಯಬೇಕು. ಬೋಧನೆ ಮತ್ತು ಕಲಿಕೆ ಎರಡರಲ್ಲೂ ಬಹುಭಾಷೀಯತೆ ಮತ್ತು ಭಾಷಾ ಶಕ್ತಿ ಇವುಗಳಿಗೆ ಪ್ರೋತ್ಸಾಹ ನೀಡುವುದುʼ

ಇದು ಕೂಡಾ ಬಹಳ ಒಳ್ಳೆಯ ಶಿಫಾರಸು ಅಗಿದೆ ಎಂಬುದರಲ್ಲಿ ನನಗೆ ಸಂಶಯವಿಲ್ಲ. ಉನ್ನತ ಶಿಕ್ಷಣದಲ್ಲಿಯೂ ಮಾತೃ ಭಾಷೆಯಲ್ಲಿ ಪಠ್ಯಗಳು ಸಿಗಬೇಕೆಂಬ ಆಶಯವನ್ನೂ ಅದು ಪ್ರಕಟಿಸಿದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜ್ಯಾರಿಗೆ ತಂದ ಏಕೈಕ ರಾಜ್ಯವಾದ ಕರ್ನಾಟಕದಲ್ಲಿ ಏನಾಗಿದೆ? ಗಮನಿಸೋಣ.

ಮೊದಲನೆಯದಾಗಿ, ಈ ತಾಯ್ನುಡಿ ಎಂಬ ಪದವು ಹಲವು ಗೊಂದಲಗಳನ್ನು ಹುಟ್ಟು ಹಾಕಿದೆ. ಭಾರತದಲ್ಲಿರುವ ತಾಯ್ನುಡಿಗಳು ಒಟ್ಟು ಎಷ್ಟು ಎಂದು ನಮಗೆ ಸರಿಯಾಗಿ ತಿಳಿದಿಲ್ಲ. ಈ ವಿಷಯದಲ್ಲಿ ಜನಗಣತಿಗಳು ನೀಡುವ ಮಾಹಿತಿಗಳು ಅರ್ಧ ಸತ್ಯವನ್ನಷ್ಟೇ ಹೇಳುತ್ತಿವೆ.

ಭಾಷೆಗೆ ಸಂಬಂಧಿಸಿದಂತೆ 1971ರಿಂದಲೂ ಕೇಂದ್ರ ಸರಕಾರ ಒಂದು ಧೋರಣೆಯನ್ನು ಸ್ಪಷ್ಟವಾಗಿ ಅನುಸರಿಸುತ್ತಲೇ ಬಂದಿದೆ. ಅದೆಂದರೆ 10 ಸಾವಿರ ಮತ್ತು ಅದಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳನ್ನು ಮಾತ್ರ ಅದು ಜನಗಣತಿಯಲ್ಲಿ ವಿಶ್ಲೇಷಣೆಗೆ ಬಳಸಿಕೊಳ್ಳುತ್ತದೆ. ಈ ನಿಲುವಿನಿಂದಾಗಿ  ನಮ್ಮ ದೇಶದ ಅನೇಕ ಸ್ವತಂತ್ರ ಮತ್ತು ಉಪಭಾಷೆಗಳ ಹೆಸರುಗಳು ( ಉದಾ: ಕೊರಗ ಭಾಷೆ) ಇಲ್ಲಿ ಲಭ್ಯವಾಗುವುದೇ ಇಲ್ಲ. ಅರೆಭಾಷೆ, ಹವ್ಯಕ ಭಾಷೆ, ಕುಂದಾಪುರ ಕನ್ನಡದಂಥ ಮುಖ್ಯ ಉಪಭಾಷೆಗಳ ಕತೆಯಾದರೂ ಅಷ್ಟೆ. ಈ ಮಿತಿಯೊಳಗೆ 2011ರ ಜನಗಣತಿಯು ಒಟ್ಟು 19,569 ಭಾಷೆಗಳನ್ನು ಮಾತೃಭಾಷೆಗಳೆಂದು ಮನ್ನಿಸುತ್ತದೆ.  ಆರ್ಟಿಕಲ್‌ 26 ಈ ಭಾಷೆಗಳಿಗೆ ಸಾಂವಿಧಾನಿಕ ರಕ್ಷಣೆ ನೀಡುತ್ತಿದ್ದರೂ ಭಾಷೆಗಳು ದುರ್ಬಲಗೊಳ್ಳುತ್ತಲೇ ಹೋಗುತ್ತಿವೆ.

ಭಾರತದಂತ ದೇಶದಲ್ಲಿ ʼಉಪಭಾಷೆʼ ಎಂಬ ಪದವನ್ನು ಬಹಳ ಎಚ್ಚರಿಕೆಯಿಂದ ಪರಿಶೀಲಿಸಬೇಕು. ಉಪಭಾಷೆ ಪದವನ್ನು ಗ್ರೀಕ್‌ ಭಾಷೆಯ ‘ಡಯಲೆಕ್ಟ್‌’ ಎಂಬ ಪದಕ್ಕೆ ಸಂವಾದಿಯಾಗಿ ಬಳಸಲಾಗುತ್ತಿದೆ. ಈ ಪದವು ಮುಂದೆ ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳ ಮೂಲಕ ಇಂಗ್ಲಿಷಿಗೆ ಹೋಯಿತು. 16 ನೆಯ ಶತಮಾನದ ಇಂಗ್ಲಿಷ್ ವಿದ್ವಾಂಸರು ಆ ಪದವನ್ನು ʼಶಿಷ್ಟೇತರ ಜನʼ ಅಥವಾ ಅವಿದ್ಯಾವಂತರು ಆಡುವ ಭಾಷಾಪ್ರಭೇದ ಎಂಬರ್ಥದಲ್ಲಿ ಬಳಸಿದ್ದಾರೆ. ಉಪಭಾಷೆಯೆಂದಾಗ ಪ್ರಧಾನ ಭಾಷೆಯೊಂದಿದೆ ಎನ್ನುವ ಅರ್ಥ ಬರುತ್ತದೆ. ಆದರೆ ಒಂದು ಭಾಷಾ ಪ್ರದೇಶದಲ್ಲಿ ಕಂಡುಬರುವ ಆ ಭಾಷೆಯ ಎಲ್ಲ ಪ್ರಭೇದಗಳೂ ಒಂದಲ್ಲ ಒಂದು ಅರ್ಥದಲ್ಲಿ ಉಪಭಾಷೆಯೇ ಆಗಿರುತ್ತದೆ.  ಒಂದು ಭಾಷೆಯು  ವಿಸ್ತಾರವಾದ ಪ್ರದೇಶದಲ್ಲಿ ಹಬ್ಬಿದ್ದರೆ ಅಲ್ಲಿ ಅನಿವಾರ್ಯವಾಗಿ ಉಪಭಾಷೆಗಳು ಹುಟ್ಟಿಕೊಳ್ಳುತ್ತವೆ. ಇಂಥಲ್ಲಿ ಯಾವ ಭಾಷೆಯು ಪ್ರಭುತ್ವಕ್ಕೆ ಹತ್ತಿರವಾಗಿರುತ್ತದೋ ಅಥವಾ ಪ್ರಭುತ್ವದ ಭಾಷೆಯಾಗಿರುತ್ತದೋ ಅದು ಅಧಿಕೃತ ಎಂಬ ಮನ್ನಣೆಯನ್ನು ಪಡೆದು ಕೊಳ್ಳುತ್ತದೆ. ಪ್ರಾಚೀನ ಗ್ರೀಸ್‌ನಲ್ಲಿ ಇದ್ದ ನಾಲ್ಕು ಉಪಭಾಷೆಗಳಲ್ಲಿ ರಾಜಕೀಯ ಕಾರಣಗಳಿಂದಾಗಿ ಅಥೆನ್ಸಿನ ಭಾಷೆ ಪ್ರಬಲವಾಗಿ, ಶಿಷ್ಟಭಾಷೆಯೆನಿಸಿಕೊಂಡಿತು. ಉಳಿದುವು ಉಪಭಾಷೆಗಳಾದುವು. ಈಗಿನ ಇಟಾಲಿಯನ್ ಭಾಷೆ ಹಿಂದೆ ರೋಮ್ ನಗರದ ಸುತ್ತ ಮುತ್ತ ಮಾತಾಡುತ್ತಿದ್ದ ಲ್ಯಾಟಿನ್ನಿನ ಒಂದು ಉಪಭಾಷೆಯೇ ಆಗಿತ್ತು. ಇಂಗ್ಲೆಂಡಿನಲ್ಲಿ ಲಂಡನ್ ಮತ್ತು ಆಕ್ಸಫರ್ಡ್ ಇಂಗ್ಲಿಷ್ ಭಾಷೆಯೇ ಶಿಷ್ಟಭಾಷೆಯೆನಿಸಿಕೊಂಡಿದೆ. ಹೀಗೆ ರಾಜಕೀಯ ಅಥವಾ ಸಾಂಸ್ಕೃತಿಕ ಕಾರಣಗಳಿಂದಾಗಿ ಒಂದು ಪ್ರದೇಶದ ಭಾಷೆ ಮೇಲ್ಮೆಯನ್ನು ಪಡೆಯುತ್ತದೆ. ಇದರ ಫಲವಾಗಿ ಜನಪ್ರಿಯವಲ್ಲದ ಉಪಭಾಷೆಗಳು ದುರ್ಬಲಗೊಳ್ಳುತ್ತಾ ಹೋಗಿ ಕೊನೆಗೆ ನಾಶವಾಗುತ್ತವೆ. ಈ ನಿಟ್ಟಿನಲ್ಲಿ ೨೦೧೧ರ ಜನಗಣತಿ ಮಾಡಿದ ಸರ್ವೇಕ್ಷಣೆಯು ಅತ್ಯಂತ ಮಹತ್ವದ್ದಾಗಿದ್ದು ನಾವೀಗ ಈ ಎಲ್ಲ ಭಾಷೆಗಳನ್ನು ಉಳಿಸಿ ಬೆಳೆಸಲು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಈ ನಡುವೆ ಸರಕಾರಗಳು ಅಂಕಿ ಅಂಶಗಳೊಂದಿಗೆ ಆಟವಾಡುತ್ತಿರುವುದರಿಂದ ನಿಖರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದೂ ಕಷ್ಟವಾಗುತ್ತಿದೆ. ಉದಾಹರಣೆಗೆ, 2001ರ  ಜನಗಣತಿಯು 1,936 ಭಾಷೆಗಳ ಬಗ್ಗೆ ಹೇಳುತ್ತದೆ. ಆದರೆ 2011ರ ಜನಗಣತಿಯು 19,569 ಭಾಷೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಕೇವಲ 10 ವರ್ಷಗಳಲ್ಲಿ ಸುಮಾರು 18 ಸಾವಿರ ಭಾಷೆಗಳು ಹೆಚ್ಚಾಗಲು ಸರಕಾರವು ತನ್ನ ಕೆಲವು ಮಾನದಂಡಗಳನ್ನು ಬದಲಾಯಿಸಿದ್ದೇ ಕಾರಣ. ಈ ಬಗೆಯ ಬದಲಾದ ಮಾನದಂಡಗಳಿಂದಾಗಿ ನಾವು ಇದುವರೆಗೆ ಮಾತೃಭಾಷೆಗಳ ಬಗ್ಗೆ ತೆಗೆದುಕೊಂಡ ಅನೇಕ ತೀರ್ಮಾನಗಳು ಹಾಸ್ಯಾಸ್ಪದವಾದುವು.   2011ರ ಜನಗಣತಿಯ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆ 40.  ಒಂದು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆಯು 60. 10 ಸಾವಿರಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆಯು 122. 19,569ಮಾತೃ ಭಾಷೆಗಳಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿದ ಭಾಷೆಗಳ ಸಂಖ್ಯೆ ಕೇವಲ 22. ಈಗ ಸಂವಿಧಾನದ ಮನ್ನಣೆ ಪಡೆಯಲು ಕಾದು ಕುಳಿತಿರುವ ಸ್ವತಂತ್ರ ಭಾಷೆಗಳ ಸಂಖ್ಯೆ ಒಟ್ಟು 99 . ಈ ನಡುವೆ ಯೂನೆಸ್ಕೋವು ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟ’ ವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ  ಭಾಷೆಗಳೆಂದೂ,  101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ 71 ಭಾಷೆಗಳು ಮುಂದಿನ ಕೆಲವು ವರ್ಷಗಳಲ್ಲಿ ಕಾಣೆಯಾಗಲಿರುವ ಭಾಷೆಗಳೆಂದೂ ಹೇಳಿದೆ(Christopher Moseley, ed., 2010). ಈ ವಿಶ್ಲೇಷಣೆ ಈಗ ನಿಜವಾಗುತ್ತಿದೆ. ಅಂಡಮಾನಿನ ಸೆರಾ ಭಾಷೆಯು 2020 ರ ಎಪ್ರಿಲ್‌ ನಾಲ್ಕರಂದು ಇತಿಹಾಸ ಸೇರಿತು. 1871 ರಲ್ಲಿ 55 ಸಾವಿರ ಜನ ಮಾತಾಡುತ್ತಿದ್ದ ಕೊರಗ ಭಾಷೆಯು ಈಗ ನಾಲ್ಕು ಸಾವಿರಕ್ಕಿಳಿದಿದೆ. 2001ರಲ್ಲಿ 1,66,000ಜನ ಮಾತಾಡುತ್ತಿದ್ದ ಕೊಡವ ಭಾಷೆಯು 2011ರಲ್ಲಿ 1,36,000ಜನರ ಭಾಷೆಯಾಗಿ ಪತನಮುಖಿಯಾಗಿದೆ.

ಶಿಕ್ಷಣ ನೀತಿಯು ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ, ರಾಜ್ಯ ಭಾಷೆ, ಸ್ಥಳೀಯ ಭಾಷೆ ಮತ್ತು ಮಾತೃ ಭಾಷೆಗಳನ್ನು ಗಮನಿಸಲು ಸೂಚಿಸುತ್ತದೆ. ಇದರನುಸಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಭಾಷೆಯಾಗಿ ಕನ್ನಡ, ಸ್ಥಳೀಯ ಭಾಷೆಯಾಗಿ ತುಳು ಮತ್ತು ಮಾತೃಭಾಷೆಯಾಗಿ ಹವ್ಯಕ, ಬ್ಯಾರಿ ಭಾಷೆ, ಅರೆಭಾಷೆ, ಕೊಂಕಣಿ ಮೊದಲಾದುವುಗಳಿಗೂ ಒಂದು ಅವಕಾಶ ಇರುವಂತೆ ಯೋಜಿಸಬೇಕು. ಆದರೆ ಶಿಕ್ಷಣ ನೀತಿಯನ್ನು ಜ್ಯಾರಿಗೆ ತಂದಿರುವ ಕರ್ನಾಟಕ ಸರಕಾರಕ್ಕೆ ಇವುಗಳ ಬಗೆಗೆ ಕನಿಷ್ಠ ತಿಳಿವಳಿಕೆಯಾದರೂ ಇದೆಯೇ ಎಂಬುದು ಸಂಶಯ. ಆದರೆ ಅದು ಶಿಕ್ಷಣ ನೀತಿಯ ಶಿಫಾರಸುಗಳಲ್ಲಿ ಒಂದಾದ ʼ ದೇಸೀ ಜ್ಞಾನʼದ ಹುಡುಕಾಟಕ್ಕಾಗಿ ಬೆಂಗಳೂರಿನಲ್ಲಿ ಚಾಣಕ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಈ ವಿಶ್ವವಿದ್ಯಾಲಯವು ʼ ಪ್ರಾಚೀನ ಭಾರತೀಯರಾದ ಪಾಣಿನಿ, ವಾಸವದತ್ತ, ಆರ್ಯಭಟ, ಬ್ರಹ್ಮಗುಪ್ತ ಮತ್ತಿತರರು ಬಹುಶಿಸ್ತೀಯ ವ್ಯವಸ್ಥೆಯ ಮೂಲಕ ಶ್ರೇಷ್ಠ ಆವಿಷ್ಕಾರಗಳನ್ನು ಮಾಡಿದ್ದನ್ನು ಸಮಕಾಲೀನ ಗೊಳಿಸಲು ಹುಟ್ಟಿಕೊಂಡಿದೆ. ಧ್ಯಾನ, ಸಂಗೀತ, ಸಾಹಿತ್ಯ, ಅಂತರಿಕ್ಷ ಜ್ಞಾನ ಹಾಗೂ ಕೊನೆಗೆ ಸೊನ್ನೆಯ ಆವಿಷ್ಕಾರದ ಗಣಿತ ಪ್ರವೇಶವು ಅಂತರ್‌ಶಿಸ್ತೀಯ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದವು. ಇಂದು ಜಾಗತಿಕ ಮಟ್ಟದಲ್ಲಿ ಬಹುಶಿಸ್ತೀಯ ಮತ್ತು ಅಂತರಶಿಸ್ತೀಯ ಕೋರ್ಸ್‌ಗಳು ಪ್ರಾಮುಖ್ಯ ಪಡೆದಿವೆ. ಹೊಸ ಜ್ಞಾನದ ಆವಿಷ್ಕಾರಕ್ಕೆ ನಾಂದಿ ಹಾಡಿದೆ. ದಿನನಿತ್ಯದ ಜೀವನದಲ್ಲಿ ಮತ್ತು ತಂತ್ರಜ್ಞಾನದಲ್ಲಿ ಬಳಸಲಾಗುವ ಬಹಳಷ್ಟು ಆಧುನಿಕ ಗಣಿತಕ್ಕೆ ಭಾರತೀಯ ಅಂಕಿಗಳು ಆಧಾರವಾಗಿವೆ. ಅದು ಇಲ್ಲದೆ, ಯುರೋಪಿಯನ್ನರು ಇನ್ನೂ ರೋಮನ್ ಅಂಕಿಗಳನ್ನು ಬಳಸುತ್ತಿದ್ದರು. ಆಧುನಿಕ ಗಣಿತಕ್ಕೆ ‘ಶೂನ್ಯ’ ಅಡಿಪಾಯವಾಗಿದೆ. ಇದರ ಪ್ರಾರಂಭವು ತತ್ವಶಾಸ್ತ್ರ, ನಂತರ ಭಾಷಾಶಾಸ್ತ್ರ, ನಂತರ ಕವಿತೆ, ಸಂಗೀತ, ಖಗೋಳಶಾಸ್ತ್ರ ಮತ್ತು ಅಂತಿಮವಾಗಿ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದಿಂದ ಬಂದಿತುʼ ಎಂಬುದನ್ನು ನಂಬುತ್ತದೆ. ಇಂಥ ಆದ್ಯತೆಗಳು ಸಹಜವಾಗಿ ಸ್ಥಳೀಯ ಭಾಷೆಗಳಲ್ಲಿರುವ ಜ್ಞಾನದ ಅನ್ವೇಷಣೆಗೆ ಮುಂದಾಗುವುದಿಲ್ಲ. ಚಾಣಕ್ಯ ವಿಶ್ವವಿದ್ಯಾಲಯದೊಂದಿಗೆ ತುಳು ವಿಶ್ವವಿದ್ಯಾಲಯವೂ ಆರಂಭವಾಗಿದ್ದರೆ ನಾವು ಒಂದು ಹೆಜ್ಜೆ ಮುಂದೆ ಇಟ್ಟಂತಾಗುತ್ತಿತ್ತು.

ಪುರುಷೋತ್ತಮ ಬಿಳಿಮಲೆ

ನಿವೃತ್ತ ಪ್ರಾಧ್ಯಾಪಕರು, ಜೆ.ಎನ್‌ ಯು

Related Articles

ಇತ್ತೀಚಿನ ಸುದ್ದಿಗಳು