Friday, June 14, 2024

ಸತ್ಯ | ನ್ಯಾಯ |ಧರ್ಮ

ಹೊಸ ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆಗಳು| ತ್ರಿಭಾಷಾ ಸೂತ್ರದ ಸಮಸ್ಯೆ

ಒಕ್ಕೂಟ ಸರಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಿಂದ ಜಾರಿಗೆ ತಂದಿದೆ. ಇದರ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪುರುಷೋತ್ತಮ ಬಿಳಿಮಲೆಯವರು ಭಾಷಾ ಶಾಸ್ತ್ರದ ಹಿನ್ನೆಲೆಯಲ್ಲಿ ವಿವೇಚಿಸಿ ಹೊಸ ಶಿಕ್ಷಣ ನೀತಿಯು ಭಾರತೀಯ ಭಾಷೆಗಳಿಗೆ ಹೇಗೆ ಮಾರಕವಾಗಿದೆ ಎಂಬುದನ್ನು ಪರಿಣಾಮಕಾರಿಯಾಗಿ ವಿಶ್ಲೇ಼ಷಿಸಿದ್ದಾರೆ. ಕೊನೆಯ ಭಾಗ ʼತ್ರಿಭಾಷಾ ಸೂತ್ರದ ಸಮಸ್ಯೆʼ ಇಲ್ಲಿದೆ.

ತ್ರಿಭಾಷಾ ಸೂತ್ರದ ಸಮಸ್ಯೆ

ರಾಷ್ಟ್ರೀಯ ಶಿಕ್ಷಣ ನೀತಿಯು ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡುತ್ತದೆ. ಇದು ಹೆಚ್ಚು ವಿಶ್ಲೇಷಣೆಯಿಲ್ಲದೆ ಯಾಂತ್ರಿಕವಾಗಿ ಮುಂದುವರಿದುಕೊಂಡು ಬಂದ ಒಂದು ಹಳೆಯ ಸೂತ್ರ. ಸ್ವಾತಂತ್ರ್ಯಾನಂತರ 1952ರಲ್ಲಿ ಮೊದಲಿಯಾರ್‌ ಶಿಕ್ಷಣ ಆಯೋಗವು ಪ್ರಥಮ ಬಾರಿಗೆ ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡಿತ್ತು. ಅದನ್ನು ದಕ್ಷಿಣದ ರಾಜ್ಯಗಳು ವಿರೋಧಿಸಿದ್ದವು. 1968 ರ ಕೊಠಾರಿ ಆಯೋಗ ಮತ್ತು 1985ರ ಶಿಕ್ಷಣ ನೀತಿಯೂ ಅದೇ ಸೂತ್ರವನ್ನು ಮುಂದುವರಿಸಿತು. ಈಗ 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಅದೇ ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡಲಾಗಿದೆ. ಭಾರತದ ಸಂವಿಧಾನ ಅಸ್ತಿತ್ವಕ್ಕೆ ಬಂದ ಆನಂತರ ಈವರೆಗೆ ಐದು ಸಲ ಶಿಕ್ಷಣ ನೀತಿ ಬದಲಾಗಿದೆಯಾದರೂ ತ್ರಿಭಾಷಾ ಸೂತ್ರದ ಶಿಫಾರಸಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೇಂದ್ರದಲ್ಲಿ ಅಧಿಕಾರ ಹಿಡಿದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಇದರ ಪರವಾಗಿದ್ದರೂ ಚಾಲ್ತಿಗೆ ತರುವಲ್ಲಿ ಅವೆಲ್ಲವೂ ವಿಫಲವಾಗಿವೆ.  ಕಾರಣ ಈ ಸಮಸ್ಯೆಯನ್ನು ನಾವು ಸ್ವಲ್ಪ ಎಚ್ಚರದಿಂದ ಪರಿಶೀಲಿಸಬೇಕಾಗಿದೆ.

ಮೊದಲನೆಯದಾಗಿ, ತ್ರಿಭಾಷಾ ಸೂತ್ರದ ಸಮಸ್ಯೆಯ ಮೂಲವು ಸಂವಿಧಾನದ ಹದಿನೇಳನೆಯ ಭಾಗದ 343ನೇ ವಿಧಿಯ ಸೆಕ್ಷನ್‌ ಒಂದರಲ್ಲಿದೆ. ಇದರ ಪ್ರಕಾರ ‘ಹಿಂದಿಯು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿರತಕ್ಕದ್ದುʼ. ಇದರಿಂದಾಗಿ ಇವತ್ತು ಭಾರತದ ಬೇರೆ ಯಾವ ಭಾಷೆಗೂ ಸಿಗದಿರುವ ಪ್ರಾಧಾನ್ಯವು ಹಿಂದಿಗೆ ಸಿಕ್ಕಿದೆ. ಜೊತೆಗೆ ಹಿಂದಿಯು ಗೃಹ ಇಲಾಖೆಯ ಕೈ ಕೆಳಗೆ ಬರುವ ಏಕೈಕ ಭಾಷೆ, ಉಳಿದೆಲ್ಲಾ ಭಾಷೆಗಳು ಮಾನವ ಸಂಪನ್ಮೂಲ ಇಲಾಖೆಯಡಿ ಬರುತ್ತವೆ. ಆರ್ಟಿಕಲ್‌ 344 ಹಿಂದಿಯನ್ನು ಕಾರ್ಯರೂಪಕ್ಕೆ ತರುವ ಯೋಜನೆಗಳನ್ನು ರೂಪಿಸಿ ಜ್ಯಾರಿಗೊಳಿಸಲು ಅಧಿಕಾರವನ್ನು ʼಜಂಟಿ ಸದನ ಸಮಿತಿʼಗೆ ನೀಡುತ್ತದೆ. ಈ ಸಮಿತಿಯು ಎಷ್ಟು ಅಧಿಕಾರ ಹೊಂದಿದೆ ಎಂದರೆ ಅದರ ಶಿಫಾರಸುಗಳು ಸಂಸತ್ತಿಗೆ ಹೋಗಲೇ ಬೇಕಾಗಿಲ್ಲ. ರಾಷ್ಟ್ರಪತಿಗಳ ಅಂಕಿತ ಬಿದ್ದರೆ ಸಾಕು. ಬಹುಶ: ಈಗ ಸಂವಿಧಾನದಲ್ಲಿಯೇ ಸೂಕ್ತ ತಿದ್ದುಪಡಿ ತಾರದ ಹೊರತು ಈ ಸಮಸ್ಯೆ ಪರಿಹರಿಯದು ಎಂದು ತೋರುತ್ತದೆ. ʼಭಾಷೆಗೆ ಸಂಬಂಧಿಸಿದ 1963 ರ ʼಅಧಿಕೃತ ಭಾಷೆಗಳ ಕಾಯ್ದೆʼಗೆ ತಿದ್ದುಪಡಿ ತರಬಹುದೇ ಎಂಬುದರ ಕುರಿತು ಕೇಂದ್ರ ಸರ್ಕಾರ ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್‌ ಕೂಡಾ 2022ರಲ್ಲಿ ಹೇಳಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯು ತ್ರಿಭಾಷಾ ಸೂತ್ರದ ಪ್ರಕಾರ, ಹಿಂದಿ ಮಾತನಾಡುವ ಪ್ರದೇಶದ ವಿದ್ಯಾರ್ಥಿಗಳು ಹಿಂದಿ ಮತ್ತು ಇಂಗ್ಲಿಷ್‌ನ ಜತೆಗೆ ಇನ್ನೊಂದು ಭಾರತೀಯ ಭಾಷೆಯನ್ನು ಕಲಿಯಬೇಕು. ಹಿಂದಿಯೇತರ ಪ್ರದೇಶಗಳ ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್‌ನ ಜತೆಗೆ ಹಿಂದಿ ಕಲಿಯುವುದು ಕಡ್ಡಾಯವಾಗಿದೆ.

ಸದ್ಯಕ್ಕೆ ಈ ಶಿಫಾರಸಿನಲ್ಲಿ ಮುಖ್ಯವಾದ ನಾಲ್ಕು ಸಮಸ್ಯೆಗಳಿವೆ-

1.      ಮೊದಲನೆಯದಾಗಿ, ತ್ರಿಭಾಷಾ ಸೂತ್ರವನ್ನು ಎಲ್ಲ ರಾಜ್ಯಗಳೂ ಸಮಾನವಾಗಿ ಅನುಸರಿಸುತ್ತಿಲ್ಲ. ಅನುಸರಿಸುವ ಹಾಗೆ ಮಾಡುವ ಶಕ್ತಿಯೂ ಕೇಂದ್ರಕ್ಕೆ ಇಲ್ಲ.

2.      ಎರಡನೆಯದಾಗಿ, ಕರ್ನಾಟಕ ರಾಜ್ಯವು 1968 ರಂದಲೂ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡಿದೆ. ಇದರಿಂದ ಕರ್ನಾಟಕ ರಾಜ್ಯಕ್ಕೆ ಏನು ಲಾಭ ಆಗಿದೆ? ಅಥವಾ ನಷ್ಟವಾಗಿದೆ ಎಂಬುದರ ಕುರಿತು ಸರಿಯಾದ ವಿಶ್ಲೇಷಣೆ ನಡೆದಿಲ್ಲ. 

3.      ತಮಿಳುನಾಡು ಈವರೆಗೆ ದ್ವಿಭಾಷಾ ಸೂತ್ರವನ್ನು ಅನುಸರಿಸುತ್ತಿದೆ. ಅಲ್ಲಿನ ಮಕ್ಕಳು ತಮಿಳು ಹಾಗೂ ಆಂಗ್ಲ ಭಾಷೆಯನ್ನು ಮಾತ್ರ ಕಲಿಯುತ್ತಿದ್ದಾರೆ. ಇದರಿಂದ ತಮಿಳುನಾಡಿಗೆ ಏನು ಲಾಭ ಅಥವಾ ನಷ್ಟ ಆಗಿದೆ ಎಂಬ ಕುರಿತೂ ಸರಿಯಾದ ವಿಶ್ಲೇಷಣೆ ಇಲ್ಲ. ನನಗೆ ತಿಳಿದಂತೆ ಇಂಗ್ಲಿಷ್‌ ಕಲಿತದ್ದರಿಂದ ತಮಿಳಿನ ಅಂತಾರಾಷ್ಟ್ರೀಯ ಹಾಜರಾತಿ ಹೆಚ್ಚಿದೆ. ಅಮೇರಿಕಾದ 16 ವಿಶ್ವವಿದ್ಯಾಲಯಗಳಲ್ಲಿ ಮತ್ತು ಭಾರತದ ಅನೇಕ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ತಮಿಳು ಪೀಠಗಳಿವೆ.

4.      ನಾಲ್ಕನೆಯದಾಗಿ, ತ್ರಿಭಾಷಾ ಸೂತ್ರದ ಅಂಗವಾಗಿ ಉತ್ತರ ಭಾರತೀಯರು ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆಯನ್ನು ಕಲಿಯಬೇಕು. ಆದರೆ ಅದೂ ಚಾಲ್ತಿಗೆ ಬಂದಿಲ್ಲ. ದಕ್ಷಿಣ ಭಾರತದ ಭಾಷೆಗಳ ಬದಲು ಉತ್ತರ ಭಾರತೀಯರು ಸಂಸ್ಕೃತವನ್ನು ಆರಿಸಿಕೊಂಡರು. ಹೀಗಾಗಿ ಉತ್ತರ ಭಾರತೀಯರಿಗೆ ದಕ್ಷಿಣ ಭಾರತದ ಭಾಷೆಗಳ ಕುರಿತಾದ ತಿಳಿವಳಿಕೆ ಇಲ್ಲವೆಂಬಷ್ಟು ಕಡಿಮೆ.

ಜ್ಞಾನದ ಅಂತಾರಾಷ್ಟ್ರೀಕರಣ

ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಅಂಶವನ್ನು ಪರಿಗಣಿಸಿ ಈ ಲೇಖನವನ್ನು ಮುಗಿಸಬಯಸುತ್ತೇನೆ.

21ನೇ ಶತಮಾನದ ಎರಡನೇ ದಶಕದಲ್ಲಿ ಮುನ್ನಡೆಯುತ್ತಿರುವ ವಿಶ್ವವು ಇದೀಗ ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಹೆಚ್ಚು ಒತ್ತುನೀಡುತ್ತಿದೆ. ಇದು ಮಾರುಕಟ್ಟೆ ಆಧಾರಿತವಾದ ಒಂದು ಪರಿಕ್ರಮ.1990 ರ ದಶಕದಲ್ಲಿ ನಡೆದ ಜಾಗತೀಕರಣ ಪ್ರಕ್ರಿಯೆಯು ಜಗತ್ತಿನ ಭಾಷೆಗಳ ವ್ಯಾಕರಣವನ್ನು ಏಕರೂಪಿಯಾಗಿ ಬದಲಾಯಿಸಿದೆ. ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ರೀತಿ ನೀತಿಗಳು ಶಿಕ್ಷಣದ ಪರಿಕಲ್ಪನೆಯನ್ನು ಆಮೂಲಾಗ್ರವಾಗಿ ಬದಲಾಯಿಸಿವೆ. ರಾಷ್ಟ್ರೀಯ ಶಿಕ್ಷಣ ನೀತಿಯು ಆತ್ಮನಿರ್ಭರ ಭಾರತದ ಬಗ್ಗೆ ಮಾತಾಡುತ್ತಿರುವಾಗಲೇ ʼ ವಿಶ್ವದ ಕುರಿತಾದ ಭಾರತದ ತಿಳಿವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ ವಿಶ್ವದ ತಿಳಿವಳಿಕೆಗಾಗಿ ಈ ಅಂತಾರಾಷ್ಟ್ರೀಯಕರಣ ಪ್ರಕ್ರಿಯೆ ಅಗತ್ಯʼ ಎಂದು ಪ್ರತಿಪಾದಿಸಲಾಗುತ್ತಿದೆ. ಗುಣಾಂಕಗಳ ಸಿದ್ಧತೆ ಮತ್ತು ಹಂಚುವಿಕೆಯು ಜಾಗತೀಕರಣ ಪ್ರಕ್ರಿಯೆಗಳಿಗೆ ಅನುಗುಣವಾಗಿರಬೇಕು ಎಂದು ಇಂದಿನ ವಿಶ್ವ ಹೇಳುತ್ತಿದೆ. ಉನ್ನತ ಶಿಕ್ಷಣದ ಜಾಗತೀಕರಣದ ಪರವಾಗಿ ಯುನೆಸ್ಕೋ ಮತ್ತು ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರಬಲವಾಗಿ ವಾದ ಮಂಡಿಸಿವೆ. ಇದನ್ನು ಕಾರ್ಪೋರೇಟ್ ವಲಯ ಬೆಂಬಲಿಸಿದೆ. ಪರಿಣಾಮವಾಗಿ ಶಿಕ್ಷಣದ ಖಾಸಗೀಕರಣ ಅನಿವಾರ್ಯವಾಗಿದೆ. ಸರಕಾರಕ್ಕೆ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗದಿದ್ದಾಗ ಅದು ಖಾಸಗಿ ಶಾಲೆಗಳು, ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು, ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ನೆರವನ್ನು ಯಾಚಿಸುತ್ತದೆ. 

 ಇನ್ಸ್ಟಿಟ್ಯೂಟ್ ಆಫ್ ಇಂಟರ್‌ನೇಶನಲ್ ಎಜುಕೇಶನ್ ಎಂಬ ಹೆಸರಿನ ಸಂಸ್ಥೆಯು ಬಿಡುಗಡೆ ಮಾಡಿದ ವರದಿಯು ಬೇರೆ ಬೇರೆ ದೇಶಗಳು ಶಿಕ್ಷಣದ ಅಂತಾರಾಷ್ಟ್ರೀಕರಣದ ಮೂಲಕ ಮಾಡಿದ ಲಾಭದ ಕುರಿತಾದ ಮಾಹಿತಿ ನೀಡುತ್ತದೆ.  ಈ ಬಗೆಯ ಆದಾಯದ ಕುರಿತು ಯಾವ ದೇಶದ ಸರಕಾರಗಳೂ ಕಣ್ಣು ಮುಚ್ಚಿ ಕುಳಿತಿರಲು ಸಾಧ್ಯವಿರಲಿಲ್ಲ. ಏಕೆಂದರೆ ೨೧ನೇ ಶತಮಾನದಲ್ಲಿ  ಶಿಕ್ಷಣವು ಬಿಲಿಯನ್ ಡಾಲರ್ ಆದಾಯದ ಪ್ರಶ್ನೆಯಾಗಿದೆ.

ಭಾರತದಲ್ಲಿ ಶಿಕ್ಷಣದ ಅಂತರರಾಷ್ಟ್ರೀಕರಣ ಪ್ರಕ್ರಿಯೆಯು ಗ್ಯಾಟ್ (General Agreement of Trade in Servises ಹಾಗೂ ಡಬ್ಲ್ಯುಟಿಒ (World Trade Organizations)  ಒಪ್ಪಂದದ ಮೇರೆಗೆ ಆರಂಭವಾಗಿದೆ. ಎಪ್ರಿಲ್ 1, 2005 ರಂದು ಜ್ಯಾರಿಗೆ ಬಂದ ಈ ಒಪ್ಪಂದದ ಅನುಸಾರವಾಗಿ, 10ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣವನ್ನು Educational Services as sector of industry under GATS ಎಂದು ಘೋಷಿಸಿತು. ಇದು ಶಿಕ್ಷಣದ ವ್ಯಾಪಾರೀಕರಣಕ್ಕೆ ಬಾಗಿಲು ತೆರೆಯಿತು. ಹೀಗೆ ಶಿಕ್ಷಣವನ್ನು ಕೈಗಾರಿಕೆಗಳ ಭಾಗವಾಗಿ ಪರಿಗಣಿಸಿದ ಆನಂತರ ಭಾರತವೂ ಸೇರಿದಂತೆ ಅನೇಕ ದೇಶಗಳು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಸಜ್ಜಾದುವು. ಇದಕ್ಕಾಗಿ ಯುಜಿಸಿಯು ೨೦೦೭ರಲ್ಲಿ ಉಪಸಮಿತಿಯೊಂದನ್ನು ರಚಿಸಿತು. ಕ್ಷಿಪ್ರವಾಗಿ ಕಾರ್ಯನಿರ್ವಹಿಸಲಾರಂಭಿಸಿದ ಈ ಸಮಿತಿಯು  ಕೆಳಗಿನ ಮೂರು ಮುಖ್ಯ ಶಿಫಾರಸುಗಳನ್ನು ನೀಡಿದ್ದು, ಅವುಗಳನ್ನು 2020 ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅಂಗೀಕರಿಸಿದೆ-

1.      ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ : ಈ ಶಿಫಾರಸಿನ ಪ್ರಕಾರ ಭಾರತದ ಬಹುತೇಕ ಪ್ರೌಢ ಶಾಲಾ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದೇಶೀ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಈ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ನಾವು ಪಠ್ಯಕ್ರಮ, ಅಧ್ಯಯನದ ಅವಧಿ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

2.      ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು: ಈ ಯೋಜನೆಯಲ್ಲಿ ಖಾಸಗಿ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳು ವಿದೇಶಿ ಶಾಲಾ ಕಾಲೇಜುಗಳೊಂದಿಗೆ ಸಂಬಂಧ ಸ್ಥಾಪಿಸಿಕೊಳ್ಳುತ್ತವೆ. ಆ ಮೂಲಕ ಪರಸ್ಪರ ಮಾಹಿತಿ ಹಾಗೂ ಪರಿಣತರ ವಿನಿಮಯ ಸಾಧ್ಯವಾಗುತ್ತದೆ. ದೆಹಲಿಯ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ವಿದೇಶೀ ಅಧ್ಯಾಪಕರು ಪಾಠ ಮಾಡುತ್ತಿದ್ದಾರೆ. ಈ ಬಗೆಯ ಸಹಭಾಗಿತ್ವದಿಂದ ವಿದೇಶೀಯರು ಇಲ್ಲಿ ವಿಶ್ವವಿದ್ಯಾಲಯಗಳನ್ನು ಆರಂಭಿಸಬಹುದು.  ಇದರ ಪರಿಣಾಮವಾಗಿ ಪಾಠ ಪ್ರವಚನಗಳು, ಅಧ್ಯಯನ, ಸಂಶೋಧನಾ ಕಾರ್ಯ, ಮೂಲಭೂತ ಸೌಲಭ್ಯಗಳ ಗುಣಮಟ್ಟ ವರ್ಧಿಸಲಿದೆ ಎಂದು ಭಾವಿಸಲಾಗಿದೆ.  ಈ ಬದಲಾವಣೆಯು ಶಿಕ್ಷಣದ ಕ್ರಮಗಳನ್ನು ಆಮೂಲಾಗ್ರವಾಗಿ ಬದಲಾಯಿಸಲಿದೆ. ಪಾಶ್ಚಾತ್ಯ ಮಾದರಿಯ ಶಾಲೆಗಳು ಮತ್ತು ಅಲ್ಲಿಯ ಬೋಧನೆಯ ಕಲಿಕೆಯ ಗುಣಮಟ್ಟ, ಗುಣಾಂಕ ಇತ್ಯಾದಿಗಳು ನಮ್ಮಲ್ಲಿಯೂ ಜಾರಿಗೆ ಬರಲಿದೆ. 

3.      ಅತ್ಯುತ್ತಮ ಶಿಕ್ಷಣದ ರಫ್ತಿಗಾಗಿ ವಿಶೇಷ ವಲಯಗಳ ಸ್ಥಾಪನೆ: ಭಾರತ ದೇಶದ ಉತ್ತರ, ಪೂರ್ವ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಆರಂಭವಾಗಲಿರುವ ಈ ವಿಶೇಷ ಶಿಕ್ಷಣ ವಲಯಗಳಲ್ಲಿ ಭಾರತೀಯ ಮತ್ತು ವಿದೇಶೀಯ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡುತ್ತವೆ. ಇಲ್ಲಿನ ಪಠ್ಯಕ್ರಮಗಳನ್ನು ಎರಡೂ ದೇಶಗಳ ಸಂಸ್ಥೆಗಳು ಜಂಟಿಯಾಗಿ ರೂಪಿಸುತ್ತವೆ. ಹಾಗೆಯೇ ಎರಡು ದೇಶಗಳ ಅಧ್ಯಾಪಕರು ಈ ವಲಯಗಳಲ್ಲಿ ಜಂಟಿಯಾಗಿ ಕೆಲಸಮಾಡುತ್ತಾರೆ. ಇಂಥ ಕಡೆ ಸಾಮಾಜಿಕ ನ್ಯಾಯದ ಪ್ರಶ್ನೆ ಹಿನ್ನೆಲೆಗೆ ಸರಿಯುತ್ತದೆ. 

ಈ ಬಗೆಯ ಕೆಲಸಗಳಿಂದಾಗಿ, ಇಂದು ಶಿಕ್ಷಣವು ಒಂದು ದೇಶದ ರಾಜಕೀಯ ಗಡಿಗಳಿಗೆ ಸೀಮಿತವಾಗಿ ಉಳಿಯದೆ ‘ಸೀಮಾತೀತವಾಗುತ್ತಿದೆ. ಶಿಕ್ಷಣದ ಅಂತಾರಾಷ್ಟ್ರೀಕರಣದ ಪ್ರಕ್ರಿಯೆಯು ಸ್ಥಳೀಯ ಸಾಂಸ್ಕೃತಿಕ ಪರಂಪರೆಗಳನ್ನು ರಕ್ಷಿಸುವುದು ಕನಸಿನ ಮಾತೇ ಸರಿ.

ಇಂಥ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ, ಅದರಲ್ಲೂ ಮುಖ್ಯವಾಗಿ ಭಾಷೆ ಮತ್ತು ಸಾಹಿತ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಹೊಸದಾಗಿ ಯೋಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆಗಳೆಂದರೆ-

1.      ಭಾರತೀಯ ಭಾಷೆಗಳ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ಶಿಕ್ಷಣ ಕ್ಷೇತ್ರಕ್ಕೆ ಹೊಸ ಶಿಕ್ಷಣ ನೀತಿಯ ಶಿಫಾರಸಿನಂತೆ ಜಿಡಿಪಿಯ ಶೇಕಡಾ ಆರರಷ್ಟು ಸಂಪನ್ಮೂಲವನ್ನು ರಾಜ್ಯ ಸರಕಾರಗಳು ಒದಗಿಸಲು ಸಮರ್ಥವಾಗಿವೆಯೇ? ಈಗ ಇರುವಂತೆ ಅದು ಶೇಕಡಾ ಮೂರನ್ನು ಮೀರಿಲ್ಲ. 

2.      ಕನ್ನಡ ಮಾಧ್ಯಮದ ಶಿಕ್ಷಣವನ್ನು ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯಗೊಳಿಸುವ ಕರ್ನಾಟಕ ಸರಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದು ಪಡಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ನೀತಿಯ ಶಿಫಾರಸುಗಳನ್ನು ಜ್ಯಾರಿಗೆ ತರುವುದು ಹೇಗೆ? 

3.      ಉನ್ನತ ಶಿಕ್ಷಣವು ಅಂತಾರಾಷ್ಟ್ರೀಕರಣಗೊಳ್ಳುತ್ತಿರುವಾಗ ಕನ್ನಡ ಮಾಧ್ಯಮದ ಪುಸ್ತಕಗಳನ್ನು ಸರಿಹೊಂದಿಸುವುದು ಹೇಗೆ?

4.      ಖಾಸಗೀ ಶಾಲೆಗಳಲ್ಲಿ ರಾಜ್ಯ ಭಾಷೆಗಳನ್ನು ಅಳವಡಿಸುವಂತೆ ಮಾಡಲು ಸರಕಾರಕ್ಕೆ ಇವತ್ತು ಸಾಧ್ಯ ಇದೆಯೇ? 

5.      ಕೊಡವ, ತುಳು, ಬ್ಯಾರಿ, ಕೊಂಕಣಿ ಮೊದಲಾದ ಭಾಷೆಗಳಿರುವಲ್ಲಿ ಶಿಕ್ಷಣ ನೀತಿಯ ಶಿಫಾರಸುಗಳನ್ನು ಜ್ಯಾರಿಗೆ ತರಲು ಬೇಕಾದ ಕಾರ್ಯಯೋಜನೆಗಳನ್ನು ಯಾರು ರೂಪಿಸುತ್ತಿದ್ದಾರೆ? ಅಥವಾ ಇದೊಂದು ಅನುಷ್ಠಾನ ಸಾಧ್ಯವಾಗುವ ಶಿಫಾರಸೇ?  ಈ ಕುರಿತು ಅಧ್ಯಾಪಕರಿಗೆ ತರಬೇತು ನೀಡಲು ಬೇಕಾದ ಕೈಪಿಡಿ ಇದೆಯೇ?

6.      ಈಗ ಕರ್ನಾಟಕವು ಒಪ್ಪಿಕೊಂಡಿರುವ ತ್ರಿಭಾಷಾ ಸೂತ್ರದಿಂದ  ರಾಜ್ಯಕ್ಕೆ ಏನು ಲಾಭವಾಗಿದೆ? ತ್ರಿಭಾಷಾ ಸೂತ್ರವನ್ನು ಒಪ್ಪದೆ, ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿರುವ ಪಕ್ಕದ ತಮಿಳುನಾಡಿಗೆ ಏನು ನಷ್ಟವಾಗಿದೆ ಎಂಬುದರ ವಿಶ್ಲೇಷಣೆ ಸರಕಾರ ಮಾಡಬಲ್ಲುದೇ?

ಸಮಾರೋಪ: 

ಬದಲಾಗುತ್ತಿರುವ ಜಗತ್ತಿನ ಪರಿಕಲ್ಪನೆಗೆ ಸರಿಯಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಆಲೋಚನೆ ಬರುವಂತೆ ಮಾಡಬೇಕಾದ್ದು ಬಹಳ ಅಗತ್ಯ. ಭಾಷೆಯ ಮೇಲೆ ಹಿಡಿತ ಬರುವಂತೆ ವಿದ್ಯಾರ್ಥಿಗಳನ್ನು ರೂಪಿಸಬೇಕು. ಸಾಹಿತ್ಯದ ಪಠ್ಯಗಳನ್ನು, ವಿಮರ್ಶಾತ್ಮಕ ಮತ್ತು ಕ್ರಿಯಾತ್ಮಕ ರೀತಿಯಲ್ಲಿ ಹೇಳಿಕೊಡುವ ಜವಾಬ್ದಾರಿ ಅಧ್ಯಾಪಕನದು. ಆದ್ದರಿಂದ, ಒಬ್ಬ ವಿದ್ಯಾರ್ಥಿ ಕುವೆಂಪುವನ್ನು ಓದುವುದೆಂದರೆ, ಅದಕ್ಕೆ ಪೂರ್ವಭಾವಿಯಾಗಿ ಕುವೆಂಪು ಅವರ ಮೂಲ ಪಠ್ಯಗಳನ್ನು ಓದುವುದು, ಅವುಗಳ ಬಗ್ಗೆ ಚರ್ಚಿಸುವುದು, ವಿಚಾರ ವಿಮರ್ಶೆ ಮಾಡುವುದು, ಮತ್ತು ಕೊನೆಯಲ್ಲಿ ಅವರ ಬಗ್ಗೆ ವಿಸ್ತಾರವಾಗಿ ಒಂದು ಪ್ರಬಂಧವನ್ನು ಬರೆಯುವುದು.  ಈ ಕ್ರಿಯೆಗಳು ವಿದ್ಯಾರ್ಥಿಯ ಪ್ರಶ್ನಿಸುವ ಸಾಮರ್ಥ್ಯವನ್ನು ಹೆಚ್ಚಿಸಿ, ಆಲೋಚನೆಗೆ ಅವಕಾಶ ಮಾಡಿಕೊಡುತ್ತದೆ. ಪ್ರತಿಕ್ರಿಯೆ ಮತ್ತು ಸಮರ್ಥನೆಯ ಆನಂತರ ತರ್ಕಬದ್ಧವಾದ ಪ್ರಬಂಧವೊಂದನ್ನು ರಚಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತದೆ. ಇದು ಭಾಷೆಯ ಮೇಲಿನ ಹಿಡಿತವನ್ನು ಹೆಚ್ಚು ಮಾಡುತ್ತದೆ. ಇವತ್ತಿನ ಬಹು ಆಯ್ಕೆಯ ಪ್ರಶ್ನೆಗಳ ಮಾದರಿಯಲ್ಲಿ ಭಾಷೆ ಮತ್ತು ಸಾಹಿತ್ಯಗಳು ಗಣಿತದ ಹಾಗೆ ಕೆಲಸ ಮಾಡುತ್ತಿರುವಾಗ, ತಾತ್ವಿಕ ಅರಾಜಕತೆಯನ್ನು ಇಷ್ಟ ಪಡುತ್ತಾ, ಓದುಗರನ್ನು ಸರಿ ತಪ್ಪುಗಳ ಹಂಗಿಲ್ಲದ ಆಶ್ಚರ್ಯಕರ ಜಗತ್ತಿಗೆ ಕರೆದೊಯ್ಯುವ ಮಾನವಿಕಗಳಿಗೆ  ಯಾವ ಸ್ಥಾನವಿದೆ?

ಶಿಕ್ಷಣ ನೀತಿಯ ಅಧ್ಯಾಯ ೨೫.೧ರಲ್ಲಿ ʼಸುದೀರ್ಘಾವಧಿಯ ದೃಷ್ಟಿಕೋನ, ತಜ್ಞರ ಜೊತೆ ಸಮಾಲೋಚನೆ ಸಾಂಸ್ಥಿಕ ಪ್ರಯತ್ನಗಳ ಅಗತ್ಯವಿದೆʼ ಎಂಬ ಮಾತಿದೆ. ಅದನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು.

ಪುರುಷೋತ್ತಮ ಬಿಳಿಮಲೆ

ನಿವೃತ್ತ ಪ್ರಾಧ್ಯಾಪಕರು, ಜೆ.ಎನ್‌ ಯು, ನವದೆಹಲಿ.

Related Articles

ಇತ್ತೀಚಿನ ಸುದ್ದಿಗಳು