Monday, October 20, 2025

ಸತ್ಯ | ನ್ಯಾಯ |ಧರ್ಮ

ನಮ್ಮ ಶಾಲೆ ನಮ್ಮ ಹೆಮ್ಮೆ

ಮನೆಯಲ್ಲಿ ಬೆಳ್ಳಂಬೆಳಗ್ಗೆ ತೆಂಗಿನ ಎಣ್ಣೆ ನೆತ್ತಿಗೆ ಹಾಕಿ ಮೆತ್ತಿ ಕಳುಹಿಸುತ್ತಿದ್ದರು. ಶಾಲೆಗೆ ಬರುವಾಗ ಅದು ನೆತ್ತಿಯಿಂದ ಕೆಳಗಿಳಿದು ಮುಖದವರೆಗೂ ಬಂದರೂ ಮರುದಿನ ಮತ್ತೆ ಅಷ್ಟೇ ಎಣ್ಣೆ ಮೆತ್ತಿಸಿಕೊಂಡು  ಬರಬೇಕಿತ್ತು…ಪತ್ರಿಕೋದ್ಯಮ ಪದವೀಧರ ರಾಹುಲ್ ತಮ್ಮ ಶಾಲಾ ದಿನಗಳನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ

ಪ್ರತಿಯೊಬ್ಬರಿಗೂ ಅವರವರ ಶಾಲೆಗಳೆಂದರೆ ಅದೇನೊ ವಿವರಿಸಲಾಗದಂತ ಪ್ರೀತಿ. ನನಗೂ ಹಾಗೆಯೆ. ನನ್ನ ಶಾಲೆ ಎಂದರೆ  ಮೊದಲು ನೆನಪಾಗುವುದೇ ಆ ಗೋಡೆಯಲ್ಲಿದ್ದ ಕನ್ನಡಾಂಬೆಯ ಭವ್ಯವಾದ ಚಿತ್ರ ಕಲೆ, ಹಾಗೂ ಸದಾ ಓಡಾಡಿ ಬಿದ್ದು ನಡೆದ ಶಾಲೆಯಾವರಣ ಮತ್ತು ಅನನ್ಯವಾದ ಸ್ನೇಹಿತರ ಬಳಗ. ಬದುಕಿನ ಯಾವ ಸಂದರ್ಭದಲ್ಲೂ ಸಹಾಯಕ್ಕೆ ಕೈ ಜೋಡಿಸುವ ಅವರನ್ನು ನನಗಿತ್ತ ಈ ಶಾಲೆಗೆ ನಾನೆಷ್ಟು ಕೃತಜ್ಞನಾದರೂ ಕಡಿಮೆಯೇ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹ ರಾಜಪುರದ ಒಂದು ಪುಟ್ಟ ಹಳ್ಳಿ ಜೋಗಿಮಕ್ಕಿ ನನ್ನೂರು. ಅದಿರಲಿ, ಆ ದಿನಗಳಲ್ಲಿ ಆಡಿದ ಆಟ, ಕೈ ಹಿಡಿದು ನಡೆದ ದಾರಿ, ಅವರವರ ಪ್ರೀತಿಯ ಮಾಸ್ಟರ್ ಅಥವಾ ಟೀಚರ್ ಅನ್ನು ಯಾರಾದರೂ ಮರೆಯಲ್ಲಿಕ್ಕುಂಟೆ!!  ಶಾಲೆಯ ಗಂಟೆ ಸರಿಯಾಗಿ ಒಂಬತ್ತು ಗಂಟೆಗೆ ಕೆಲಸಕ್ಕೆ ಸಿದ್ಧವಾದರೆ, ಸುಮ್ಮನಾಗುತ್ತಿದ್ದುದು ಸಂಜೆ ನಾಲ್ಕರ ಹೊತ್ತಿಗೆ. ಊರಿನಲ್ಲಂತೂ ಬಿಸಿಲು ನೆತ್ತಿಗೆ ಕುಕ್ಕುತಿತ್ತು, ಅದಕ್ಕೆ ಏನೋ ಮನೆಯಲ್ಲಿ ಬೆಳ್ಳಂಬೆಳಗ್ಗೆ ತೆಂಗಿನ ಎಣ್ಣೆ ನೆತ್ತಿಗೆ ಹಾಕಿ ಮೆತ್ತಿ ಕಳುಹಿಸುತ್ತಿದ್ದರು. ಶಾಲೆಗೆ ಬರುವಾಗ ಅದು ನೆತ್ತಿಯಿಂದ ಕೆಳಗಿಳಿದು ಮುಖದವರೆಗೂ ಬಂದರೂ ಮರುದಿನ ಮತ್ತೆ ಅಷ್ಟೇ ಎಣ್ಣೆ ಮೆತ್ತಿಸಿಕೊಂಡು  ಬರಬೇಕಿತ್ತು. ಇಲ್ಲದಿದ್ದರೆ, ನೇರವಾಗಿ ಮನೆಯಿಂದ ಶಾಲೆಗೆ ಕಾಲ್ ಹೋಗುತಿತ್ತು. ಮುಂದೆ ಏನಾಗುತ್ತಿತ್ತು ಎಂದು ನೀವು ಊಹಿಸಬಹುದು.

ವಾರದ ಕೊನೆಯಲ್ಲಿ ಅಪ್ಪ ತಂದು ಕೊಡುತ್ತಿದ್ದ ಹೊಸ ಪೆನ್ಸಿಲ್, ಪೆನ್ನುಗಳು ನೀಡುತ್ತಿದ್ದ ಖುಷಿ ಅಂತಿಂತದ್ದೇನಲ್ಲ. ಭಾನುವಾರ ಕಳೆದು ಸೋಮವಾರ ಶಾಲೆಗೆ ಹೋಗುವುದೆಂದರೆ ಆಗಾಗ ಜ್ವರ ಬರುತಿತ್ತು, ಕೆಲವೊಮ್ಮೆ ಹೊಟ್ಟೆ ನೋವು ಬಂದಿದ್ದು ಕೂಡ ಉಂಟು. ನೆಪ ಮಾತ್ರ ಬೇರೆ  ಮುಖ್ಯ ಕಾರಣ ಒಂದೆ. ಈಗಿನ ರೀತಿ ಸ್ಕೂಲ್ ಡೇ ಎಲ್ಲ ಆಗ ನಮಗಿರಲಿಲ್ಲ, ಶಾಲೆಯಲ್ಲಿ ಪ್ರತಿಭಾ ಕಾರಂಜಿಯಾದರೆ ಅದೇ ಹೆಚ್ಚು. ನಾವು ಶಾಲೆಯಲ್ಲಿ ಎಷ್ಟು ಕೀಟಲೆ ಮಾಡಿದ್ದೆವೋ ಆ ಶಾಲೆಯಿಂದ ಅದಕ್ಕಿಂತ ಹೆಚ್ಚಿನ ಶಿಸ್ತು, ಸಮಯ ಪ್ರಜ್ಞೆಯನ್ನು ಕಲಿತೇ ಹೊರ ಬಂದಿದ್ದೇವೆ.

ನಾನು ಶಾಲೆಯ ಶಿಕ್ಷಕ ವೃಂದವನ್ನು  ಮರೆಯಲಾರೆ. ಏಕೆಂದರೆ ತಮ್ಮ ತಮ್ಮ ಜವಾಬ್ದಾರಿಗೂ ಮೀರಿ ಶ್ರಮ ವಹಿಸಿ ಒಂದೇ ಧ್ಯೇಯದೊಂದಿಗೆ ದುಡಿಯುವ ಅವರನ್ನು ನಾ ಮರೆತರೆ ಈ ಬರಹದ ಅರ್ಥ ಬೇರೆ ಪದ ಬೇರೆಯಾದಂತೆ. ನಾವಿಂದು ಈ ರೀತಿ ಶಿಸ್ತಿನಿಂದಿದ್ದೇವೆ ಎಂದರೆ ಅದಕ್ಕೆ ಕಾರಣರು ನಮ್ಮ ತಂದೆ ತಾಯಿ ಮತ್ತು ಈ ಶಾಲೆಯ ಶಿಕ್ಷಕರು.

ಏನೇ ಆಗಲಿ ಇಂಥ ಶಾಲೆಯನ್ನು ಪಡೆದ ನಾವೇ ಧನ್ಯರು. ನಮ್ಮ ಶಾಲೆ ನಮ್ಮ ಹೆಮ್ಮೆ.

ರಾಹುಲ್‌

ಉಡುಪಿಯ ಎಂ ಜಿ ಎಮ್‌ ಕಾಲೇಜಿನ ತೃತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page