Thursday, June 13, 2024

ಸತ್ಯ | ನ್ಯಾಯ |ಧರ್ಮ

ಬಿಸಿಯಲೆಗಳ ಹೊಡೆತದ ಪರಿಣಾಮಗಳು

ಭಾರತ ಕಳೆದ ಕೆಲವು ವರುಷಗಳಿಂದ ಸರಾಸರಿ 101 ಶತಕೋಟಿಯಷ್ಟು ಕೆಲಸದ ತಾಸುಗಳನ್ನು ಬಿಸಿಯಲೆ ಮತ್ತು ವಿಪರೀತ ತಾಪಕ್ಕೆ ಕಳೆದುಕೊಳ್ಳುತ್ತಿದೆ. ನಮ್ಮ ಒಕ್ಕೂಟ ಸರ್ಕಾರ ಮತ್ತು ಅದರ ಬೆನ್ನಿಗೆ ನಿಂತಿರುವ ಬಹುತೇಕ ಮಾಧ್ಯಮಗಳು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿವೆಯೆ? ಇದು ಕೆ ಎಸ್‌ ರವಿಕುಮಾರ್‌ ಬರೆದಿರುವ ʼಬಿಸಿಬಿಸಿ ಫೆಬ್ರವರಿ – ಚಳಿಗಾಲ ಪರಾರಿʼ ಲೇಖನದ ಎರಡನೆಯ ಸರಣಿ.

ಹೊಲಗಿಚ್ಚಿನ ಬೆದರಿಕೆ

ಬಿಸಿಯಲೆಗಳು ಎರಗುತ್ತಿದ್ದಂತೆ ಅವುಗಳ ಮೊದಲ ಹೊಡೆತ ಚಳಿಗಾಲದಲ್ಲಿ ಬಿತ್ತನೆಯಾದ ಬೆಳೆಗಳ ಮೇಲಾಗುತ್ತದೆ. ಮುಖ್ಯವಾಗಿ ಗೋಧಿಯ ಇಳುವರಿಯ ಮೇಲಾಗುತ್ತದೆ. ಈ ವರುಷ ಒಕ್ಕೂಟ ಸರ್ಕಾರವು ನಮ್ಮ ರೈತರಿಂದ 11.2 ಕೋಟಿ ಟನ್ನುಗಳಷ್ಟು ಗೋಧಿಯ ದಾಖಲೆ ಉತ್ಪಾದನೆಯನ್ನು ನಿರೀಕ್ಷೆ ಮಾಡುತ್ತಿದೆ (ಕಳೆದ ವರುಷಕ್ಕಿಂತ 44.4 ಲಕ್ಷ ಟನ್ನು ಹೆಚ್ಚು). ‘ಬಿಸಿಯಲೆಗಳು ಬೆಳೆದು ನಿಂತ ಗೋಧಿಗೆ ಹಾನಿ ಮಾಡಲಾರವು’ ಎಂದು ಒಕ್ಕೂಟ ಸರ್ಕಾರದ ಕೃಷಿಮಂತ್ರಿ ಭವಿಷ್ಯ ಹೇಳಿದ್ದಾರೆ. Food Secretary ಸಂಜೀವ್ ಚೋಪ್ರಾ ಕೂಡಾ ಕೃಷಿಮಂತ್ರಿಯನ್ನು ಅನುಮೋದಿಸಿದ್ದಾರೆ. ಕಟುಸತ್ಯ ಹೇಳಿ ಅಧಿಕಾರಕ್ಕೆ ಅಂಡಂಟಿಸಿಕೊಂಡವರಿಗೆ ಮುಜುಗರದ ತುರಿಕೆ ತರಬಾರದೆಂದೊ ಏನೋ ಒಂದಷ್ಟು ಪರಿಣಿತರು ರೈತರಿಗೆ ಹುರುಪು ತುಂಬಿದ್ದಾರೆ. ‘ಈ ಬಾರಿಯ ಬಿಸಿಯಲೆಗಳು 2022ರಂತೆ ತೀವ್ರವಾಗಿರುವುದಿಲ್ಲ, ಮಾರ್ಚ್‍ನಲ್ಲಿ ಅವು ಕಾಣುವ ಮುನ್ಸೂಚನೆಯಿಲ್ಲ, ಹೆದರಬೇಡಿ’ ಎಂದು ಭಾರತೀಯ ಹವಾಮಾನ ಇಲಾಖೆಯ ಡೈರೆಕ್ಟರ್ ಜನರಲ್ ಆಗಿರುವ ಮೃತ್ಯುಂಜಯ ಮಹೊಪಾತ್ರ ಹೇಳಿದ ಬೆನ್ನಲ್ಲೆ Indian Institute of Wheat and Barley Research(IIWBR)ನ ಬೆಳೆ ಖಾಯಿಲೆಗಳ ಮುಖ್ಯ ತನಿಖಾಧಿಕಾರಿಯಾದ ಗ್ಯಾನೆಂದರ್ ಸಿಂಗ್ ‘ಈಗಿರುವ ತಾಪದ ಸನ್ನಿವೇಶವು ಗೋಧಿಯ ಸುಗ್ಗಿಗೆ ಒಂದು ಸಮಸ್ಯೆಯೆ ಅಲ್ಲ, ಮಾರ್ಚ್ 25ರ ತನಕದ ತಾಪ ಗೋಧಿ ಕಟಾವಿಗೆ ಅನುಕೂಲವಾಗಿಯೆ ಇರುತ್ತದೆ, ರೈತರು ಗಾಬರಿಯಾಗುವುದು ಬೇಡ’ ಎಂದರು. Indian Council of Agricultural Research (ICAR) ಮತ್ತು ರಾಜ್ಯಗಳ ಕೃಷಿವಿಶ್ವವಿದ್ಯಾನಿಲಯಗಳು ಕೂಡಿ ಅತಿತಾಪವನ್ನೂ ತಡೆದುಕೊಂಡು ಬೆಳೆಯಬಲ್ಲ ಗೋಧಿ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದು ಶೇಕಡಾ 50ರಷ್ಟು ಪ್ರದೇಶದಲ್ಲಿ ಈ ತಳಿಗಳೇ ಬಿತ್ತನೆಯಾಗಿರುವುದರಿಂದ (ಕಳೆದ ವರುಷವೂ ಇಂತಹ ತಳಿಗಳ ಬಿತ್ತನೆಯಾಗಿತ್ತು) ಈ ಬಾರಿ ಒಕ್ಕೂಟ ಸರ್ಕಾರದ ನಿರೀಕ್ಷೆಯಂತೆ ಗೋಧಿಯ ದಾಖಲೆ ಫಸಲು ಬರಬಹುದು ಎಂಬ ವಾದವೂ ಇದೆ. ದಾಖಲೆ ಫಸಲು ಬಂದರೆ ನನಗೂ ಸಂತೋಷವೆ (ಈ ಬಾರಿ ಬೇರೆ ವಿಶ್ವಸಂಸ್ಥೆಗೆ ಕೊಟ್ಟ ಮಾತಿನಂತೆ ತಾಲಿಬಾನಿಗಳ ಅಫಘಾನಿಸ್ತಾನಕ್ಕೆ 20 ಸಾವಿರ ಟನ್ನಿನಷ್ಟು ಗೋಧಿ ಕಳಿಸಿದ್ದೇವೆ. ಅದರ ಜಾಗವನ್ನು ಹೊಸಗೋಧಿ ತುಂಬಬೇಕಲ್ಲ).

 ಅಧಿಕಾರಸ್ಥರು ಮತ್ತು ಸರ್ಕಾರಿ ಪರಿಣಿತರು ದೆಹಲಿಯ ಸುಸಜ್ಜಿತ ಹವಾನಿಯಂತ್ರಿತ ಕಛೇರಿಗಳಲ್ಲಿ ಕುಳಿತು ಹುರುಪಿನ ಹೇಳಿಕೆ ಕೊಡುವುದು ಸರಾಗ. ಆದರೆ ಗೋಧಿಯ ಹೊಲಗಳಲ್ಲಿ ಜರುಗುವ ನಿಜಸಂಗತಿ ಏನು? ಅಧಿಕಾರಸ್ಥರ ಹೇಳಿಕೆಗಳನ್ನು ನೆಚ್ಚಿ ರೈತರು ನಿರಾಳ ನಿದ್ದೆ ತೆಗೆಯಲಾರರು. ಕಳೆದ ವರುಷದ ಕಹಿ ಅನುಭವ ಈ ವರುಷ ಅವರನ್ನು ನಿದ್ದೆಗೆಟ್ಟು ಕಟಾವನ್ನು ಸಮೀಪಿಸುತ್ತಿರುವ ಗೋಧಿ ಹೊಲಗಳನ್ನು ಕಾಯುವಂತೆ ಮಾಡಿದೆ. ಕಳೆದ ವರುಷ ಏನಾಯಿತು? ಫಸಲು ಇನ್ನೇನು ಕೈಗೆ ಹತ್ತಿತು ಎನ್ನುವಾಗ ಬಿಸಿಯಲೆಗಳು ಮುಗಿಬಿದ್ದು ವಾತಾವರಣ ವಿಪರೀತ ಬಿಸಿಯಾಯಿತು. ಎಷ್ಟು ಬಿಸಿಯಾಯಿತೆಂದರೆ ಬೆಳೆದುನಿಂತ ಗೋಧಿ ಹೊಲಗಳಲ್ಲಿ ಬಿರು ಬಿಸಿಲಿನ ವೇಳೆ ತನ್ನಷ್ಟಕ್ಕೆ ಬೆಂಕಿ ಹೊತ್ತಿಕೊಂಡಿತು. ಕಾಡ್ಗಿಚ್ಚಿನ ಹಾಗೆ. ಇದನ್ನು ಹೊಲಗಿಚ್ಚು (Farm fire) ಎಂದು ಕರೆಯುತ್ತಾರೆ. ಪಂಜಾಬ್, ರಾಜಸ್ತಾನ, ಹರ್ಯಾಣ, ಮಧ್ಯಪ್ರದೇಶ, ಉತ್ತರಪ್ರದೇಶಗಳ ಹೆಕ್ಟೇರುಗಟ್ಟಲೆ ಹರಹಿನಲ್ಲಿ ಸಾವಿರಾರು ಗೋಧಿ ಹೊಲಗಳು ಹೀಗೆ ಬೆಂಕಿಯಲ್ಲಿ ಉರಿದು ಹೋದವು. ರೈತರು ಏನೂ ಮಾಡಲಾಗದೆ ಉರಿಯುವುದನ್ನು ಕಂಡು ಎದೆಯೊತ್ತಿಕೊಂಡು ಬಿಕ್ಕಳಿಸಿದರು. ಹೀಗಾಗುವುದನ್ನು ಬಿಲ್‍ಕುಲ್ ಅವರು ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಆಘಾತಕಾರಿ ಅನುಭವ, ಆದರೆ ಈ ವರುಷ ಸುಮ್ಮನಿರಲಾದೀತೆ?

ಈ ವರುಷ ನಮ್ಮ ಉತ್ತರ ಕರ್ನಾಟಕವೂ ಸೇರಿದಂತೆ ಗೋಧಿ ಬೆಳೆಯುವ ಉತ್ತರ ಭಾರತದ ರಾಜ್ಯಗಳಲ್ಲಿ ರೈತರು ಹಗಲೆಲ್ಲ ಗೋಧಿ ಹೊಲಗಳ ಬಳಿಯೆ ಬೀಡುಬಿಟ್ಟು ಕಾಯುತ್ತಿದ್ದಾರೆ. ಬೆಂಕಿ ಆರಿಸಲು ಸಾಕಷ್ಟು ನೀರನ್ನು ದಾಸ್ತಾನು ಮಾಡಿಕೊಂಡು ಅಣಿಯಾಗಿದ್ದಾರೆ. ಒಮ್ಮೆಲೆ ಇಡೀ ಹೊಲಕ್ಕೆ ಬೆಂಕಿ ಬೀಳುವುದಿಲ್ಲವಲ್ಲ. ಎಲ್ಲಿ ಬೆಂಕಿ ಕಾಣಿಸಿಕೊಂಡಿತೊ ಅಲ್ಲಿಗೆ ದೌಡಾಯಿಸಿ ನೀರು ಎರಚಿ ಬೆಂಕಿ ಆರಿಸುತ್ತಾರೆ. ಪೂರ್ತಿ ಹೊಲ ಸುಡುವ ಬದಲು ಎಲ್ಲೋ ಒಂಚೂರು ಜಾಗದಲ್ಲಿ ಗೋಧಿ ಬೆಳೆ ಸುಡಬಹುದು ಅಷ್ಟೆ. ಹೆಚ್ಚಿನ ನೀರಾವರಿ ಅನುಕೂಲ ಇರುವವರು ಬೆಳೆಯ ಬುಡಕ್ಕೆ ಹದವಾಗಿ ನೀರು ಹಾಯಿಸುತ್ತಿದ್ದಾರೆ. ಈ ನೀರು ಆವಿಯಾಗಿ ಹೊಲದ ಮೇಲಿನ ಗಾಳಿಯನ್ನು ತಂಪಾಗಿರಿಸುವ ಮೂಲಕ ಬೆಂಕಿ ಕಾಣಿಸಲು ಅಗತ್ಯವಿರುವ ತಾಪ ಹುಟ್ಟದಂತೆ ಮಾಡುತ್ತದೆ. ಬಹುಶಃ ರೈತರು ಇಂತಹ ಮುನ್ನೆಚ್ಚರಿಕೆಗಳಿಗಿಂತ ಹೆಚ್ಚಿನದೇನನ್ನೂ ಮಾಡಲಾರರು. ಹೀಗೆಲ್ಲ ಮಾಡಿ ಫಸಲನ್ನು ಉಳಿಸಿಕೊಂಡರೂ ದಿನಗಟ್ಟಲೆ ಕವಿದ ಬಿಸಿಹವೆಗೆ ಗೋಧಿಕಾಳುಗಳು ತೇವಾಂಶ ಕಳೆದುಕೊಂಡು ಜೊಳ್ಳಾಗಿಬಿಡುತ್ತವೆ. ಕಳೆದ ವರುಷ ಈ ಜೊಳ್ಳಿನ ಕಾರಣಕ್ಕೇ ಶೇಕಡಾ 10-20ರಷ್ಟು ಇಳುವರಿ ಕುಗ್ಗಿಹೋಗಿತ್ತು. ಚಳಿಗಾಲದ ಗೋಧಿಗೆ ಕಾಳು ಕಟ್ಟಲಿರುವ ನಿರ್ಣಾಯಕ ತಿಂಗಳಾದ ಮಾರ್ಚ್‍ನಲ್ಲಿಯೂ ದಿನದ ಅತಿ ಹೆಚ್ಚಿನ ತಾಪ 40 ಡಿಗ್ರಿಗಿಂತಲೂ ಹೆಚ್ಚಾದರೆ ಈ ವರುಷ ಜೊಳ್ಳಿನ ಪ್ರಮಾಣ ಇನ್ನೂ ಹೆಚ್ಚಬಹುದೆಂದು ರೈತರು ಮತ್ತು ಸಗಟು ಖರೀದಿದಾರರು ಆತಂಕದಲ್ಲಿದ್ದಾರೆ.

ಇನ್ನೂ ಎರಡು ಕಾರಣಕ್ಕೆ ರೈತರಲ್ಲಿ ತಲ್ಲಣವಿದೆ. ಏರಿದ ತಾಪದ ವೇಳೆ ಬೆಳೆಗಳಿಗೆ ಕಾಯಿಲೆಗಳೂ ಬರಬಹುದು ಮತ್ತು ಅವಕಾಶವಾದಿ ಹುಳುಹುಪ್ಪಟೆಗಳ ಕಾಟ ಹೆಚ್ಚಬಹುದು. ಬೆಳೆದು ನಿಂತ ಗೋಧಿಗೆ ಅತಿತಾಪದ ವೇಳೆಯಲ್ಲೆ ಕಾಣಬರುವ ‘ಹಳದಿ ತುಕ್ಕಿನ ಕಾಯಿಲೆ’ಯ ಬಗ್ಗೆ ಎಚ್ಚರದಿಂದಿರುವಂತೆ Indian Council of Agricultural Research – Indian Institute of Wheat and Barley Research (ICAR-IIWBR) ಸಂಸ್ಥೆಯು ಫೆಬ್ರವರಿ 20ರಂದು ರೈತರಿಗೆ ಸರಿಹೊತ್ತಿನ ಸೂಚನೆ ನೀಡಿತು. ಅಂತೂ ಹಲವು ಪರೀಕ್ಷೆಗಳನ್ನು ರೈತರು ಎದುರಿಸಬೇಕು. ಇಷ್ಟುಕಾಲ ರೈತರು ಮಳೆಯೊಂದಿಗೆ ಜೂಜಾಡುತ್ತಿದ್ದರು, ಇನ್ನುಮೇಲೆ ಬಿಸಿಯಲೆಗಳೊಂದಿಗೂ ಜೂಜಾಡಬೇಕು. ಈ ನಡುವೆ ಹವಾಮಾನ ಇಲಾಖೆ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ತಾಸಿಗೆ 20-30 ಕಿ.ಮೀ. ವೇಗದಲ್ಲಿ ಬೀಸುವ ಬಿರುಸು ಬಿಸಿಗಾಳಿ ಬೆಳೆದು ನಿಂತ ಗೋಧಿ ಪೈರನ್ನು ನೆಲಸಮ  ಮಾಡುವ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿತ್ತು. ಹಾಗೆಯೆ ಕೆಲವು ಕಡೆ ಗೋಧಿ ಹೊಲಗಳು ನೆಲಸಮವಾದವು. ತೆನೆ ಬಲಿಯುವ ಮೊದಲೆ ಇನ್ನೇಳದಂತೆ ಮಲಗಿದ ಗೋಧಿ ಹೊಲಗಳ ಹರಹು ಲಕ್ಷಾಂತರ ಹೆಕ್ಟೇರುಗಟ್ಟಲೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದಕ್ಕೆ ಹೋಲಿಸಿದರೆ ಕಮ್ಮಿಯೇ ಇರಬಹುದು. ನಾವಿಲ್ಲಿ ಗಮನಿಸಬೇಕಾದದ್ದು ಇನ್ನು ಮುಂದಿನ ದಿನಗಳಲ್ಲಿ ಬೇಸಾಯ ಎನ್ನುವುದು ಹೇಗೆಲ್ಲ ಬಗೆಬಗೆಯ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂಬ ಅಂಶವನ್ನು.

 ಭಾರತ 2022-23ಕ್ಕೆ ಎಷ್ಟು ಪ್ರಮಾಣದ ಗೋಧಿಯನ್ನು ಉತ್ಪಾದಿಸಬಲ್ಲುದು ಎಂಬುದನ್ನು ಅಂದಾಜುಮಾಡಲು ಬರುವ ಏಪ್ರಿಲ್ ಮೊದಲ ವಾರದವರೆಗಿನ ಗಡುವು ಬಹಳ ನಿರ್ಣಾಯಕವಾದುದು. ಈ ಗಡುವಿನಲ್ಲಿ ಉತ್ತರ ಭಾರತದಲ್ಲಿ ಅತಿಹೆಚ್ಚಿನ ತಾಪ 37 ಡಿಗ್ರಿ ಸೆಲ್ಸಿಯಸ್ ದಾಟಬಾರದು. ಹಾಗೇನಾದರೂ ಆದರೆ ಬಹುಪಾಲು ಗೋಧಿ ಜೊಳ್ಳಾಗಿ ರೈತರ ಕಣ್ಣಲ್ಲಿ ನೀರು ತರಿಸಬಹುದಾಗಿದೆ. ಹಾಗಾಗದಿರಲಿ.

ಕಳೆದುಹೋಗುವ ಕೆಲಸದ ತಾಸು(Work hour) ಗಳು

 ಬಿಸಿಯಲೆಗಳು ಹಗಲಿನ ವೇಳೆ ನಮ್ಮ ಕೆಲಸದ ಅವಕಾಶವನ್ನೆ ಕಸಿದುಕೊಳ್ಳುತ್ತವೆ. ಬಹುಪಾಲು ಜನರ  ದುಡಿಮೆ ಬಿಸಿಲಿನಲ್ಲೆ ಜರುಗುವುದರಿಂದ ಅವರ ಆದಾಯದ ತಾಸುಗಳು ಹಾನಿಗೊಳ್ಳುತ್ತವೆ. ದೆಹಲಿಯಲ್ಲಿ ಆಟೋರಿಕ್ಷಾ ಚಾಲಕನೊಬ್ಬ ಬೆಳಿಗ್ಗೆ 10ರವರೆಗೆ ಆಟೋ ಓಡಿಸಿ ನಂತರ ಸಂಜೆ 4 ಗಂಟೆಯವರೆಗೆ ಮನೆಯಲ್ಲಿ ಬಿಸಿಯಲೆಗಳಿಂದ ರಕ್ಷಣೆ ಪಡೆಯುತ್ತಾನೆ. ಅಲ್ಲಿಗೆ ಆತ ದಿನಕ್ಕೆ 6 ಗಂಟೆಗಳ ಕೆಲಸದ ತಾಸುಗಳನ್ನು ಕಳೆದುಕೊಳ್ಳುತ್ತಾನೆ. ಜೊತೆಗೆ ಈ ಗಡುವಿನ ಗಳಿಕೆಯನ್ನೂ ಕಳೆದುಕೊಳ್ಳುತ್ತಾನೆ. ಒಂದು ತಿಂಗಳ ಬಿಸಿಯಲೆಗಳು ಒಟ್ಟಾರೆ ಆತನಿಂದ ಸರಾಸರಿ 180 ಕೆಲಸದ ತಾಸುಗಳನ್ನು ಕಸಿದುಕೊಂಡಿರುತ್ತವೆ. ಅಂತೆಯೆ ರೈತನೊಬ್ಬ ಬೆಳಿಗ್ಗೆ 10  ರವರೆಗೆ ತನ್ನ ಜಮೀನಿನಲ್ಲಿ ದುಡಿದು ಮನೆಗೆ ಮರಳಿ ಮತ್ತೆ ಸಂಜೆ 4 ಕ್ಕೆ ದುಡಿಯ ಹೊರಟರೆ ಅವನೂ 6 ಕೆಲಸದ ತಾಸುಗಳನ್ನು ಕಳೆದುಕೊಳ್ಳುತ್ತಾನೆ. ನಿಗದಿತ ಸಮಯದಲ್ಲಿ ಆತನ ಬೇಸಾಯದ ಕೆಲಸಗಳು ಮುಗಿಯದೆ ಇಳುವರಿಯ ಮೇಲೆ ಕೆಟ್ಟ ಪರಿಣಾಮ ಬೀರಿಯೆ ಬೀರುತ್ತದೆ. ಇವತ್ತಿಗೂ ಜಗತ್ತಿನಲ್ಲಿ ಶೇಕಡಾ 50ರಷ್ಟು ಬೇಸಾಯಗಾರರು ತಮ್ಮ ಬೆವರಿನ ದುಡಿಮೆ (Physical labour) ಯ ಮೂಲಕವೇ ಸಾಗುವಳಿ ಮಾಡುವುದು (ಮತ್ತು ಇವರೆಲ್ಲ ಬಹುತೇಕ ಸಣ್ಣ ಹಿಡುವಳಿದಾರರೆ ಆಗಿರುತ್ತಾರೆ). ಸಹಜವಾಗಿ ಬಿಸಿಯಲೆಗಳಿಂದ ಇವರ ಕೆಲಸಗಳು ಏರುಪೇರಾಗಿ ಕಡೆಯಲ್ಲಿ ಆಹಾರದ ಕೊರತೆಗೆ ಕಾರಣವಾಗುತ್ತವೆ. ಮುಂದೆ ಮುಂದೆ ರೈತರು ಬಿಸಿಯಲೆಗಳ ಬವಣೆ ಅನುಭವಿಸಲಾಗದೆ ಬೇಸಗೆ ಬೆಳೆ ಬೆಳೆಯುವುದನ್ನೆ ಕೈಬಿಟ್ಟರೆ! ಕಲ್ಪಿಸಿಕೊಳ್ಳಲು ದಿಗಿಲಾಗುತ್ತಿದೆ.

Lancet ಎಂಬ ಸಂಸ್ಥೆ 2017ರಲ್ಲಿ ಜಾಗತಿಕವಾಗಿ ಬಿಸಿಯಲೆಗಳಿಗೆ ಬಲಿಯಾದ ಕೆಲಸದ ತಾಸುಗಳು 153 ಶತಕೋಟಿ ಎಂದು ತನ್ನ ಸರ್ವೆಯಲ್ಲಿ ಲೆಕ್ಕಿಸಿದೆ. 2018ರಲ್ಲಿ 150 ಶತಕೋಟಿ ಕೆಲಸದ ತಾಸುಗಳು ಮಾನವಕುಲಕ್ಕೆ ನಷ್ಟವಾಗಿವೆ. 2019ರಲ್ಲಿ ಈ ಲೆಕ್ಕ ಒಮ್ಮೆಲೆ 302 ಶತಕೋಟಿಗೇರಿದರೆ ಭಾರತ ಒಂದರಲ್ಲೆ 118 ಶತಕೋಟಿಗಳು ಎನ್ನಲಾಗಿದೆ. 2020ರಲ್ಲಿ ಭಾರತವೂ ಸೇರಿದಂತೆ ಜಗತ್ತಿನಲ್ಲಿ ಒಟ್ಟು ನಷ್ಟವಾದ ಕೆಲಸದ ತಾಸುಗಳು 295 ಶತಕೋಟಿಗಳು. ಕೆಲಸದ ತಾಸುಗಳ ನಷ್ಟವೆಂದರೆ ಆದಾಯ ಮತ್ತು ಸಂಪತ್ತಿನ ಉತ್ಪಾದನೆಯಲ್ಲೂ ಗಮನಾರ್ಹ ನಷ್ಟ ಎಂದರ್ಥ.

ಜಗತ್ತು ಬಿಸಿಯಲೆಗಳನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ 2030ರ ಇಸವಿ ವೇಳಗೆ 118 ಶತಕೋಟಿ ಜನ ಭೀಕರ ಬರ ಮತ್ತು ತಾಪಕ್ಕೆ ಸಿಲುಕಲಿದ್ದಾರೆ ಎಂದು ಕೆನ್ಯಾದ ಆಗಾಖಾನ್ ಯೂನಿವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಅಬ್ದು ಮೊಹಿದ್ದಿನ್ ಎಚ್ಚರಿಸಿದ್ದಾರೆ.

ಬಹಳ ಮುಖ್ಯವಾಗಿ ಒಂದು ಅಂಶವನ್ನು ಇಲ್ಲಿ ಹೇಳಬೇಕು. ಭಾರತ ಕಳೆದ ಕೆಲವು ವರುಷಗಳಿಂದ ಸರಾಸರಿ 101 ಶತಕೋಟಿಯಷ್ಟು ಕೆಲಸದ ತಾಸುಗಳನ್ನು ಬಿಸಿಯಲೆ ಮತ್ತು ವಿಪರೀತ ತಾಪಕ್ಕೆ ಕಳೆದುಕೊಳ್ಳುತ್ತಿದೆ. ಒಂದು ದೇಶದ ಮಟ್ಟಿಗೆ ಜಗತ್ತಿನಲ್ಲೆ ಇದು ಅತಿ ಹೆಚ್ಚಿನ ಪ್ರಮಾಣವಾಗಿದೆ. ನಮ್ಮ ಒಕ್ಕೂಟ ಸರ್ಕಾರ ಮತ್ತು ಅದರ ಬೆನ್ನಿಗೆ ನಿಂತಿರುವ ಬಹುತೇಕ ಮಾಧ್ಯಮಗಳು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿವೆಯೆ?

ಕೆ.ಎಸ್.ರವಿಕುಮಾರ್, ಹಾಸನ

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

ಮೊ : 9964604297

***

Related Articles

ಇತ್ತೀಚಿನ ಸುದ್ದಿಗಳು