Thursday, June 20, 2024

ಸತ್ಯ | ನ್ಯಾಯ |ಧರ್ಮ

ಉರಿ ನಂಜು ಕಡೆಗಣಿಸುವ ಹಾಗಿತ್ತೇ?

ಟಿಪ್ಪುವನ್ನು ಕೊಂದುದು ಒಕ್ಕಲಿಗರು ಎಂದು ಬಿಂಬಿಸಿದರೆ ಒಕ್ಕಲಿಗರು ಮತ್ತು ಮುಸಲ್ಮಾನರ ನಡುವೆ ವೈಷಮ್ಯ ಮೂಡುತ್ತದೆ. ಇದರ ಲಾಭ ಸಂಘಪರಿವಾರಕ್ಕಾಗುತ್ತದೆ. ಉರಿಗೌಡ ನಂಜೇಗೌಡ ಧುತ್ತೆಂದು ಕಾಣಿಸಿದ್ದು, ಈ ವಸ್ತುವಿನ ಮೇಲೆಯೇ, ರಂಗಾಯಣವು ನಾಟಕ ಆಡಿದ್ದು ಚುನಾವಣಾ ತಂತ್ರದ ಭಾಗವಾಗಿಯೇ ಎಂಬುದು ನೆನಪಿರಲಿ – ಶಂಕರ್ ಸೂರ್ನಳ್ಳಿ.

ನಂಜು ಅಂದರೆ ದೇಹಕ್ಕೆ ಒಗ್ಗದ ವಿಷವೆಂದರ್ಥ. ಈ ನಂಜು ಅಥವಾ ಅದರಿಂದುಂಟಾಗುವ ಉರಿ ಬೇನೆಯನ್ನು ನಿರ್ಲಕ್ಷ್ಯ ಮಾಡಿದ್ದೇ ಆದಲ್ಲಿ ಅದರ ನಂತರದ ಪರಿಣಾಮವೇನೆಂಬುದನ್ನು ವಿವರಿಸುವ ಅಗತ್ಯವೇನೂ ಇಲ್ಲ. ಇತ್ತೀಚೆಗೆ ಹರಡಲಾಗಿದ್ದ ಉರಿ-ನಂಜಿನ ವಿಚಾರದಲ್ಲಿ ಮಾತಾಡಲೇಬೇಕಿದ್ದ ವಿಚಾರವಂತರ ಒಂದು ವರ್ಗ ಜಾಣಮೌನವನ್ನು ವಹಿಸಿದ್ದರ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಹಾಗಾದರೆ ಈ ಉರಿನಂಜುಗಳ ವಿಚಾರ ವಿಮರ್ಶೆಗೊಳಪಡುವಷ್ಟು ಗಂಭೀರತನದ್ದಲ್ಲವೇ?.

ನೈತಿಕವಾಗಿ ಒಪ್ಪಿತವೆನಿಸದಂತಹ ವಿಚಾರಗಳು ನಮಗೆ ಲಾಭತರುವಂತದ್ದಾಗಿದ್ದರೆ ಅದರ ಗೀಳಿಗೆ ಒಮ್ಮೆ ಬಿದ್ದಂತವರು ಈ ವಿಚಾರದಲ್ಲಿ ನೈತಿಕ ಅನೈತಿಕತೆಯ ಚಿಂತನೆಗೆ ಯಾವತ್ತಿಗೂ ತೊಡಗುವುದಿಲ್ಲ. ಉದಾಹರಣೆಗೆ ಕಳ್ಳತನ, ಮೋಸ, ಲಂಚ ಇತ್ಯಾದಿಗಳಿಗೆ ಸಾರ್ವಜನಿಕವಾಗಿ ಮಾನ್ಯತೆಯಿಲ್ಲದಿದ್ದರೂ ಕೂಡ ಅಡ್ಡದಾರಿಯ ಸುಲಭದ ಗಳಿಕೆಯೆಂದು ಒಮ್ಮೆ ಅದರ ಗೀಳಿಗೆ ಬಿದ್ದಂತವರು ಅದನ್ನೇ ಯಾವುದೋ ಸಮರ್ಥನೆಗಳ ಮೂಲಕ ಹಾಗೆಯೇ ಮುಂದುವರೆಸಿಕೊಂಡು ಹೋಗುವುದುಂಟು.

ರಾಜಕೀಯದ ಒಡೆದಾಳುವಿಕೆಯ ತಂತ್ರದ ಭಾಗವಾಗಿ ಸೃಷ್ಟಿಸಲ್ಪಟ್ಟ ಇತ್ತೀಚೆಗಿನ ಉರಿ-ನಂಜಿನ ಪ್ರಹಸನವು ಕೆಲವರ ಎಚ್ಚೆತ್ತುಕೊಳ್ಳುವಿಕೆಯಿಂದಾಗಿ ಅದರ ಸೃಷ್ಟಿಕರ್ತರ ಯೋಜನೆಗೆ ವಿರುದ್ಧವಾಗಿ ಅದು ಮಕಾಡೆ ಮಲಗಿದೆ. ಇದನ್ನು ವ್ಯವಸ್ಥಿತವಾಗಿ ಹಬ್ಬಿಸುವ ಗುತ್ತಿಗೆಯನ್ನು ವಹಿಸಿಕೊಂಡಿದ್ದ ಕೆಲವರುಗಳು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತಾವು ಸೋತಿಲ್ಲ ಎಂದು ಬಿಂಬಿಸಿಕೊಳ್ಳುವ ಸಲುವಾಗಿ ಏನೇನೋ ಜಡ ಸಮರ್ಥನೆಗಳನ್ನ ನೀಡುತ್ತಾ ತಮಗೆ ತಾವೇ ನಗೆಪಾಟಲಿಗೀಡಾಗುತ್ತಿದ್ದಾರೆ.

ಮುಖ್ಯವಾಗಿ ಈ ಸಂಗತಿಗೆ ಸಂಬಂಧಪಟ್ಟಂತೆ ಒಂದು ಬಗೆಯ ಕ್ಲಾಸಿಕಲ್ ವಿಚಾರವಂತ (ವಿಶೇಷ ಪದವಿ ಬಿರುದುಧಾರಿಗಳಾದವ) ರ ಗುಂಪಿನ ಪ್ರತಿರೋಧ ಅಷ್ಟಾಗಿ ಕಂಡುಬರದೇ ಇದ್ದದ್ದು ಇಲ್ಲಿ ಗಮನಾರ್ಹವಾಗಿತ್ತು. ಬಹುಷ ಈ ಸಂಗತಿ ಅವರಿಗೆ ಅಷ್ಟಾಗಿ ಗಂಭೀರವಾದದ್ದನ್ನಿಸದೇ ಇದ್ದಿರಬಹುದೇನೋ.. ಅಷ್ಟಕ್ಕೂ ಒಂದು ಬಳಗ ತಮ್ಮ ಬತ್ತಳಿಕೆಯಿಂದ ಹೊರಬಿಟ್ಟಂತಹ ಈ ಉರಿನಂಜಿನ ಬಾಣ ನಿಜಕ್ಕೂ ನಿರುಪದ್ರವಿಯಾಗಿತ್ತೇ…?

ಯಾವುದೇ ಇತಿಹಾಸಜ್ಞರ ಅಥವಾ ಸಂಶೋಧಕರ ಪಾಲ್ಗೊಳ್ಳುವಿಕೆಯಿಲ್ಲದೇ ಇದರ ಹೊರತಾದಂತಹ ವರ್ಗವೊಂದು ವ್ಯವಸ್ಥಿತವಾಗಿ ತರಾತುರಿಯಲ್ಲಿ ಹರಿಬಿಟ್ಟಂತಹ ಈ ಉರಿನಂಜಿನ ಘಾಟನ್ನು ಸದ್ಯಕ್ಕೆ ತಡೆಯದೇ ಹೋಗಿರದಿದ್ದರೆ ಜನಮಾನಸದಲ್ಲಿ ಅದು ಕ್ರಮೇಣ ಗಟ್ಟಿಯಾಗಿ ಸ್ಥಾಪಿತಗೊಳ್ಳುತ್ತಿತ್ತು.  ಆ ಬಳಿಕ ಈ ಜೊಳ್ಳನ್ನು ಹೋಗಲಾಡಿಸ ಹೋಗುವುದೆಂದರೆ ಅದು ಕಷ್ಟಸಾಧ್ಯ.

ಒಂದು ವಿಚಾರವನ್ನು ಹರಿಬಿಡುವುದು ಕಷ್ಟವೇನಲ್ಲ. ಆದರದು ಯಾರಿಗೇ ಆದರೂ ಮೇಲ್ನೋಟಕ್ಕೆ ಸುಳ್ಳೆಂಬ ಸತ್ಯ ಅರಿವಾದರೂ  ಅದನ್ನು ಸುಳ್ಳೆಂದು ಸಾಧಿಸುವುದು ತುಂಬಾನೇ ಕಷ್ಟ. ಹಿಮಾಲಯದ ಮಾನವರೂಪಿ ದೈತ್ಯ ಯೇತಿ, ಸ್ಕಾಟ್ ಲ್ಯಾಂಡಿನ ಲಾಕ್ನೆಸ್ ಸರೋವರದ ದೈತ್ಯ ಜೀವಿ ’ನೆಸ್ಸಿ”ಯನ್ನ ನೋಡಿದ್ದೇವೆಂಬ ಬಾಯ್ಮಾತಿನ ಹೇಳಿಕೆಗಳು ಮತ್ತು ಯಾವುದೋ ಒಂದು ಅಸ್ಪಷ್ಟ ಚಿತ್ರ ಬಿಟ್ಟರೆ, ಹೌದು ಅದು ಇರುವುದು ನಿಜ ಎಂಬುದನ್ನು ಈವರೆಗೆ ಯಾರಿಂದಲೂ ಕೂಡ ಸಾಬೀತು ಪಡಿಸಲಾಗಲಿಲ್ಲ. ಇದೇ ನಾವು ಕಣ್ಣಾರೆ ನೋಡಿದ್ದೇವೆಂದು ಕೆಲವರಿಂದ ಹೇಳಲ್ಪಡುವ ಏಲಿಯನ್ಸ್, ದೇವರು, ಭೂತ ಇತ್ಯಾದಿಗಳ ಸಂಗತಿಗೂ ಅನ್ವಯಿಸುತ್ತದೆ. ಕತೆ ಕಟ್ಟಿ ಹೇಳುವುದು ಸುಲಭ. ಆದರೆ, ಇತರರಿಗೆ ಅದನ್ನು ಸುಳ್ಳೆಂದು ಸಾಧಿಸುವುದು ಮಾತ್ರ ಅಸಾಧ್ಯ ಕಷ್ಟ.

ನನ್ನ ನಂಬಿಕೆಯ ಮಿತ್ರನೇ ಒಮ್ಮೆ ನನ್ನಲ್ಲಿ “ನಾನಿಲ್ಲಿ ಏಳು ಹೆಡೆಯ ಸರ್ಪವನ್ನ ನೋಡಿದ್ದೇನೆ” ಅಂದಿದ್ದ. (ಅಂತಹ ಜೀವಿ ಇದ್ದರೆ ಅದಕ್ಕೆ ಆಹಾರ ಸಿಗದೇ ಅಥವಾ ಇನ್ಯಾವುದಕ್ಕೋ ಸ್ವತಃ ಅದೇ ಆಹಾರವಾಗಿಯೋ ಅದು ತಿಂಗಳೊಳಗೇ ಸಾಯುತ್ತದೆ. ಯಾಕೆಂದರೆ ಏಳು ತಲೆಯಲ್ಲಿ ಏಳು ರೀತಿಯಲ್ಲಿ ಯೋಚಿಸುವ ಆ ಹಾವು ಸಲೀಸಾಗಿ ಪೊದರಿನ ನೆಲದಲ್ಲಿ ಹರಿದಾಡುವುದಾಗಲೀ ಓಡುವುದಾಗಲಿ ಮಾಡಲಾಗದು. ಉರಗ ತಜ್ಞರೊಬ್ಬರಲ್ಲಿದ್ದ  ‘Y’ ಆಕಾರದ ಇಂತಹ ಎರಡು ತಲೆಯ ಹಾವನ್ನು ನೋಡಿದ್ದೆ. ಅವರೂ ಕೂಡ ಹೀಗೇ ಕಾಡಿನಲ್ಲಿ ಇದು ಸಹಜವಾಗಿ ಬದುಕದು ಎಂದಿದ್ದರು) ಅವನಿಗೆ ನನ್ನಲ್ಲಿ ಸುಳ್ಳು ಹೇಳುವ ಯಾವ ದುರುದ್ದೇಶವೂ ಇಲ್ಲ. ನನ್ನ ಪ್ರಕಾರ ಯಾರೋ ಅವನಿಗೆ ಈ ರೀತಿ ಹೇಳಿದ್ದನ್ನ ಸ್ವತಃ ತಾನೇ ಕಣ್ಣಾರೆ ನೋಡಿದಂತೆ ನನಗಾತ ಇಲ್ಲಿ ಹೇಳಿಕೊಂಡಿದ್ದನಷ್ಟೆ. ಅವನು ನೋಡಿದ್ದನ್ನ ಸುಳ್ಳೆಂದು ನಾನಿಲ್ಲಿ ಸಾಧಿಸುವುದಾದರೂ ಹೇಗೆ?

ಕರಾವಳಿಯಲ್ಲಿ ಹಬ್ಬಿಕೊಂಡಿದ್ದ ಪರಶುರಾಮನ ಕತೆಯೂ ಇಂತಾದ್ದೇ. ಯಾರೋ ಪುರಾಣಿಕ ಕಥಾಪ್ರವಚನದಲ್ಲೋ ಸಾಹಿತ್ಯದಲ್ಲೋ ಪರಶುರಾಮನನ್ನ ಸ್ಥಳೀಯವಾಗಿ ಕಲ್ಪಿಸಿಕೊಂಡು ಅಂದದ್ದನ್ನ ನಂತರ ಅದನ್ನೇ ಸತ್ಯವೆಂಬಂತೆ ಪರಶುರಾಮನ ಕತೆಯನ್ನ ಕರಾವಳಿ ಭಾಗದಲ್ಲಿ ಪ್ರಚಾರಪಡಿಸಲಾಯಿತು. ಆದರೀಗ ಅದನ್ನ ಸುಳ್ಳೆಂದು ಅಲ್ಲಗಳೆಯುವುದು ಸುಲಭದ ಮಾತೇ? ಹಿಂದಿ ಭಾಷಿಕ ಪ್ರದೇಶದಲ್ಲಿ ಹಬ್ಬಿದ ಸಂತೋಷಿ ಮಾ ಪ್ರಭಾವದ ಕತೆ ಅದೊಂತರದ್ದು. ಕಡಿಮೆ ಬಜೆಟ್ಟಿನ ಸಂತೋಷಿ ಮಾ ಸಿನಿಮಾಗಳು ಸೂಪರ್ ಸ್ಟಾರ್ ಗಳ ಸಿನಿಮಾಗಳನ್ನೇ ಮೀರಿಸಿದವು. ಸಿನಿಮಾ ಆರಂಭಕ್ಕೂ ಮುನ್ನ ಪರದೆಗೆ ಪೂಜೆಗಳು ಸಂದವು. ಒಟ್ಟಾರೆ ಇದ್ದೇ ಇರದ ಸಂತೋಷಿ ಮಾ ಜನರ ಮನದಲ್ಲಿ ಚಿರಕಾಲ ಅಮರಳಾಗಿ ಬಿಟ್ಟಳು.

ಈಗ ಉರಿ ನಂಜೇಗೌಡರ ಕಥೆಯನ್ನು ಟಿಪ್ಪುವನ್ನು ಕುಪ್ರಸಿದ್ಧಗೊಳಿಸುವ ಸಲುವಾಗಿ ಕಟ್ಟಿದಂತೆಯೇ ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿರುವ ಬಿಕರ್ನಕಟ್ಟೆ ಅಂದರೆ ಟಿಪ್ಪು ಸುಲ್ತಾನ ಇಲ್ಲಿ ಸಾವಿರಾರು ಕ್ರಿಶ್ಚಿಯನ್ನರನ್ನ (ಉರಿ ಗೌಡ ಕತೆಯಲ್ಲಿ ಒಕ್ಕಲಿಗ ಸಮುದಾಯ ಇಲ್ಲಿ ಕಿರಿಸ್ತಾನರು ಮತ್ತೊಂದು ಕತೆಗೆ ಯಾರೋ..!!) ಗಲ್ಲಿಗೇರಿಸಿದ ಕಟ್ಟೆ. ಅದೇ ಬಳಿಕ ’ಭೀಕರನ್ಯಾಯದ ಕಟ್ಟೆ” ಆಗಿ ನಂತರ ಇದೀಗ ಬಿಕರ್ನಕಟ್ಟೆ ಆಗಿದೆ ಎಂದು ಗುರುಕುಲ ವಟು ಸಿದ್ಧಾಂತದ ವ್ಯಕ್ತಿಯೊಬ್ಬರು ಪತ್ರಿಕೆಗಳಲ್ಲಿ ಕಲ್ಪಿಸಿ ಬರೆದಿದ್ದರು.

ಇದೇ ರೀತಿ ಒಂದು ವೇಳೆ ಈ ಉರಿನಂಜನ್ನು ಸಲೀಸಾಗಿ ಹಾಗೇ ಹರಿಯ ಬಿಟ್ಟಿದ್ದಿದ್ದರೆ ಈಗಾಗಲೇ ನಾಟಕ ಮತ್ತು ಸಿನಿಮಾ ತಯಾರಿಗೆ ಹೊರಟಂತೆ ಬಳಿಕ ಧಾರಾವಾಹಿಗಳು, ಪುಸ್ತಕಗಳು, ಆ ಹೆಸರಿನ ಸಂಘಟನೆಗಳು ಪ್ರಶಸ್ತಿಗಳು ಎಲ್ಲವೂ ನಡೆಯುತ್ತಾ ಸಮಾಜದಲ್ಲಿ ಶಾಶ್ವತವಾಗಿ ಈ ಉರಿನಂಜಿನ ಪ್ರತಿಷ್ಠಾಪನೆಯಾಗಿರುತಿತ್ತು.

ಭಾರತವನ್ನು ಸಂಪೂರ್ಣ ಕೈವಶ ಮಾಡಿಕೊಳ್ಳುವಲ್ಲಿ ಬ್ರಿಟಿಷರಿಗೆ ಬಹು ದೊಡ್ಡ ತಡೆಗೋಡೆಯಾಗಿದ್ದುದು ಟಿಪ್ಪು ಸುಲ್ತಾನ್. ಸರಿ ಸುಮಾರು ನೂರೈವತ್ತು ವರ್ಷ ಭಾರತವನ್ನು ದೋಚಿದ ಮತ್ತು ಅಸಂಖ್ಯ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದ ಬ್ರಿಟಿಷರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ ಟಿಪ್ಪು  ಬಗ್ಗೆ ನಾವು ಹೆಮ್ಮೆ ಪಡಬೇಕು. ಆದರೆ ಇಂತಹ ಟಿಪ್ಪುವನ್ನೂ ಸಂಘಪರಿವಾರ ದ್ವೇಷಿಸುತ್ತದೆ. ಯಾಕೆಂದರೆ ಆತ ಮುಸಲ್ಮಾನ. ಈ ಮುಸಲ್ಮಾನ ದ್ವೇಷ ಸಂಘಪರಿವಾರದ ಕೋಮು ರಾಜಕಾರಣದ ತಳಹದಿ. ಎಂದೇ ಟಿಪ್ಪು ದ್ವೇಷವೂ ಅವರ ಕುಟಿಲ ರಾಜಕಾರಣಕ್ಕೆ ಹೊಂದುತ್ತದೆ. ಈ ರಾಜಕಾರಣದ ಮುಂದುವರಿದ ಭಾಗವೇ ಉರಿಗೌಡ ನಂಜೇಗೌಡರ ಸೃಷ್ಟಿ.

ಇದ್ದಕ್ಕಿದ್ದಂತೆ ಈ ಉರಿಗೌಡ ನಂಜೇಗೌಡ ಯಾಕೆ ಇತ್ತೀಚೆಗೆ ಭಾರೀ ಪ್ರಚಾರಕ್ಕೆ ಬಂದರು? ಮೋದಿ ಸ್ವಾಗತದ ಕಮಾನಿನಲ್ಲಿ ಅವರು ಯಾಕೆ ಕಾಣಿಸಿಕೊಂಡರು? ಕಾರಣ ಇಲ್ಲಿದೆ. ಹಳೆ ಮೈಸೂರು ಭಾಗದಲ್ಲಿ ಮುಖ್ಯವಾಗಿ ಮಂಡ್ಯಭಾಗದಲ್ಲಿ ಒಕ್ಕಲಿಗರು ಮತ್ತು ಮುಸಲ್ಮಾನರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಅವರ ಒಗ್ಗಟ್ಟು ಮುರಿಯದೆ ಅಲ್ಲಿ ಸಂಘಪರಿವಾರಕ್ಕೆ ನೆಲೆ ಸಿಗುವುದಿಲ್ಲ. ಟಿಪ್ಪುವನ್ನು ಕೊಂದುದು ಒಕ್ಕಲಿಗರು ಎಂದು ಬಿಂಬಿಸಿದರೆ ಒಕ್ಕಲಿಗರು ಮತ್ತು ಮುಸಲ್ಮಾನರ ನಡುವೆ ವೈಷಮ್ಯ ಮೂಡುತ್ತದೆ. ಇದರ ಲಾಭ ಸಂಘಪರಿವಾರ ಅಂದರೆ ಬಿಜೆಪಿಗೆ ಲಾಭವಾಗುತ್ತದೆ. ಇದು ಅವರ ಉದ್ದೇಶ‌‌. ಉರಿಗೌಡ ನಂಜೇಗೌಡ ಧುತ್ತೆಂದು ಕಾಣಿಸಿದ್ದು, ಈ ವಸ್ತುವಿನ ಮೇಲೆಯೇ ರಂಗಾಯಣವು ನಾಟಕ ಆಡಿದ್ದು ಚುನಾವಣಾ ತಂತ್ರದ ಭಾಗವಾಗಿಯೇ ಎಂಬುದು ನೆನಪಿರಲಿ.

ಕೇವಲ ಕೆಲ ತಿಂಗಳ ಹಿಂದೆಯಷ್ಟೆ ಮಂಗಳೂರಿನಲ್ಲಿ ದೇಶದ ಅಸಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಾಯಕ ಕೆದಂಬಾಡಿ ರಾಮಯ್ಯಗೌಡರ ಪ್ರತಿಮೆ ಅನಾವರಣವಾಗಿತ್ತು. ಬ್ರಿಟಿಷರ ವಿರುದ್ಧ ಸೈನ್ಯವನ್ನು ಒಟ್ಟುಗೂಡಿಸಿ ಅವರ ಮೇಲೆ ವಿಜಯ ಸಾಧಿಸಿ ಎರಡು ವಾರಗಳ ಕಾಲ ಮಂಗಳೂರನ್ನು ಆಳ್ವಿಕೆ ಮಾಡಿದ ಅಪ್ರತಿಮ ಸಾಹಸಿ ಆತ. ಒಕ್ಕಲಿಗ ಸಮುದಾಯದ ಸ್ವಾಭಿಮಾನದ ಪ್ರತೀಕ ಈ ರಾಮಯ್ಯ ಗೌಡರು. ಬಳಿಕ ಬ್ರಿಟಿಷರು ಅವರನ್ನು ದೂರದ ಸೆರೆಮನೆಗೆ ತಳ್ಳಿ ಕ್ರೂರವಾಗಿ ಸಾಯಿಸಿದರೆ ಉಳಿದವರನ್ನು ಗಲ್ಲಿಗೇರಿಸಿ ಜನರಿಗೆ ಎಚ್ಚರಿಕೆ ತಲುಪಲು ವಾರಗಳ ಕಾಲ ಸಾರ್ವಜನಿಕವಾಗಿ ಆ ಶವಗಳನ್ನು ಹಾಗೆಯೇ ನೇತುಹಾಕಲಾಯಿತು. ಇಂತಹ ಸ್ವಾಭಿಮಾನಿ ಹೆಮ್ಮೆಯ ಸಮುದಾಯದ ಹೆಸರನ್ನು ಉರಿ ನಂಜಿನ ಹೆಸರಲ್ಲಿ ಕೆಡಿಸಲು ಅದೇ ಒಕ್ಕಲಿಗ ಸಮುದಾಯವನ್ನೇ ಛೂ ಬಿಟ್ಟು ಒಡೆದಾಡುವ ಆಟವಾಡಲು ನೋಡಿದ ಫ್ಯಾಸಿಸ್ಟ್ ಸಿದ್ಧಾಂತ ಕುವೆಂಪುರವರ ವಿಶ್ವಮಾನವ ತತ್ವಕ್ಕೆ ಯಾವತ್ತೂ ಹೇಳಿಸಿದ್ದಲ್ಲ. ಈಗ ಬರಲಿರುವ ಮತದಾನದ ವೇಳೆಯಲ್ಲಿ ಮತ ಚಲಾಯಿಸುವಾಗ ಕುವೆಂಪುರವರ ಈ “ಸರ್ವ ಜನಾಂಗದ ಶಾಂತಿಯ ತೋಟ” ವೆಂಬ ಸುಂದರ ಸಹಬಾಳ್ವೆಯ ಕನಸು ನಮ್ಮ ನಿಮ್ಮಂಥ ಮತದಾರರ ಮನದಲ್ಲಿರಲಿ.

ಶಂಕರ್ ಸೂರ್ನಳ್ಳಿ

ಲೇಖಕರು

Related Articles

ಇತ್ತೀಚಿನ ಸುದ್ದಿಗಳು