Thursday, June 13, 2024

ಸತ್ಯ | ನ್ಯಾಯ |ಧರ್ಮ

ಚಿತ್ರ ಜಗತ್ತಿನಲ್ಲಿ ತೀವ್ರ ಬಲಪಂಥೀಯ ಧೋರಣೆಯಿಂದಾಗುತ್ತಿರುವ ಪಲ್ಲಟಗಳು | ಭಾಗ ಒಂದು

ಭಾರತದಲ್ಲಿ ಸಿನಿಮಾ ಜಗತ್ತು ನಿಡುಗಾಲದಿಂದಲೂ ಬಹುಮಟ್ಟಿನ ಸ್ವಾತಂತ್ರ್ಯವನ್ನು ಅನುಭವಿಸಿಕೊಂಡು ಬಂದಿತ್ತು. ಆದ್ದರಿಂದಲೇ ಜಗತ್ತೇ ಹೆಮ್ಮೆ ಪಡುವಂತಹ ಸಿನಿಮಾಗಳನ್ನು ಕೊಡುವುದು ಭಾರತೀಯ ಚಿತ್ರರಂಗಕ್ಕೆ ಸಾಧ್ಯವಾಯಿತು. ಆದರೆ ಬಲಪಂಥೀಯ ರಾಜಕಾರಣ ವಿಜೃಂಭಿಸಲಾರಂಭಿಸಿದ 2014 ರ ನಂತರ ಸಿನಿಮಾವೊಂದನ್ನು ಮಾಡುವುದು ಬಹಳ ಸವಾಲಿನ ಮತ್ತು ಅಪಾರ ಆರ್ಥಿಕ ನಷ್ಟದ ಕೆಲಸವಾಗುತ್ತಿದೆ. ಈ ಬಗೆಗಿನ ಅನೇಕ ಒಳನೋಟಗಳನ್ನು ಸಿನಿಮಾ ವಿದ್ಯಾರ್ಥಿಯೇ ಅಗಿರುವ ವಿವೇಕ ಅವರು ಇಲ್ಲಿ ನೀಡಿದ್ದಾರೆ.  ನಾವು ಎಚ್ಚರಗೊಳ್ಳಬೇಕಾದ ಸಮಯವಿದು. ಸಿನೆಮಾ ಕ್ಷೇತ್ರದ ಸೃಜನಶೀಲತೆಯನ್ನು ಉಳಿಸಿಕೊಳ್ಳಬೇಕಾದರೆ ಬಲಪಂಥೀಯ ಶಕ್ತಿಗಳನ್ನು ಹಿಮ್ಮೆಟ್ಟಿಸಲು ನಮಗಿರುವ ಮತಾಧಿಕಾರವನ್ನು ಯೋಚಿಸಿ ಬಳಸಬೇಕು.

2014 ರಿಂದ 2022 ಎಂದರೆ ಒಂಬತ್ತು ವರ್ಷಗಳ ಸುದೀರ್ಘ ಸಮಯ. 9 ವರ್ಷಗಳಲ್ಲಿ ಬಹಳಷ್ಟು ರೀತಿಯಲ್ಲಿ ಹಲವರ ಬದುಕಿನಲ್ಲಿ ಏರಿಳಿತಗಳು ಬಂದಿರುತ್ತವೆ. ಹಲವರ ಮದುವೆಯಾಗುತ್ತದೆ, ಮಕ್ಕಳಾಗುತ್ತವೆ, ಕೆಲಸ ಗಳಿಸುತ್ತಾರೆ, ಕಳೆದುಕೊಳ್ಳುತ್ತಾರೆ, ಸ್ನೇಹ ಕಂಪಿಸುತ್ತದೆ, ಬಿಗಡಾಯಿಸುತ್ತದೆ, ಬ್ರೇಕಪ್ ಆಗಿ ಮತ್ತೆ ಪ್ರೇಮ ಅರಳುತ್ತಿರಬಹುದು, ಸಂಗಾತಿಯನ್ನು ಕಳೆದುಕೊಂಡಿರಬಹುದು ವಗೈರೆ ವಗೈರೆ. ಒಬ್ಬ ವ್ಯಕ್ತಿಯ ಜೀವನದಲ್ಲಾದ ಬದಲಾವಣೆಗಳು ಒಂದಲ್ಲಾ ಒಂದು ರೀತಿ ದೇಶದ ಬದಲಾವಣೆಯೊಂದಿಗೆ ಕೊಂಡಿ ಹಾಕಿಕೊಂಡಿರುತ್ತವೆ. ಪ್ರಜಾಪ್ರಭುತ್ವದ ಕಾಲಾಳಾಗಿ ಅಂಥಾ ಬದಲಾವಣೆಯ ಒಂದು ಮಜಲನ್ನು ನಾನಿಲ್ಲಿ ದಾಖಲಿಸುತ್ತಿದ್ದೇನೆ. 2014ರ ಮೇ ನಂತರದಿಂದ ಇಲ್ಲಿಯವರೆಗೂ ಭಾರತೀಯ ಸಿನಿಮಾದಲ್ಲಿ ಆಗಿರುವ ಸ್ಥಾನಪಲ್ಲಟದ ಬಗೆಗೆ ನಾನಿಲ್ಲಿ ಬರೆಯುತ್ತಿದ್ದೇನೆ.

ಪ್ರಸಿದ್ಧ ಲೇಖಕ ಹಾಗು ಚಿಂತಕ ಜಾವೇದ್ ಅಖ್ತರ್ ಒಮ್ಮೆ ಹೇಳಿದ್ದರು. ಶೋಲೇ ಚಿತ್ರದಲ್ಲಿ ಬಸಂತಿ ಒಂದು ಹನುಮಂತನ ದೇವಸ್ಥಾನದ ಮುಂದೆ ನಿಂತು ವೀರುನ ಬಗೆಗೆ ಕೇಳಿಕೊಳ್ಳುತ್ತಿರುತ್ತಾಳೆ. ಇಷ್ಟರಲ್ಲೇ ಹನುಮಂತನ ಪ್ರತಿಮೆಯ ಹಿಂದೆ ನಿಂತು ಹನುಮಂತನೇ ಮಾತನಾಡಿದ ರೀತಿಯಲ್ಲಿ ವೀರು ಸ್ವತಃ ಮಾತನಾಡುತ್ತಾ ಸ್ವಲ್ಪ ತರಲೆ ಮಾಡುತ್ತಿರುತ್ತಾನೆ ಇಷ್ಟರಲ್ಲೇ ಜೈ ಅಲ್ಲಿಗೆ ಬಂದು ಬಸಂತಿಯನ್ನು ಹಿಂಬದಿಗೆ ಕರೆದುಕೊಂಡು ಹೋಗಿ ವೀರುನನನ್ನು ತೋರಿಸುತ್ತಾನೆ. ಹೀಗೆ ಆ ದೃಶ್ಯ ಮುಗಿಯುತ್ತದೆ. ಇದೊಂದು ಹಾಸ್ಯಭರಿತ ಲವಲವಿಕೆ ತುಂಬಿದ ದೃಶ್ಯ. ಜಾವೇದ್ ಅಖ್ತರ್ ಮುಂದುವರೆಸುತ್ತಾರೆ – “ತುಂಬಾ ಸಾಧಾರಣ ಎನಿಸುವಂತಹ ಈ ದೃಶ್ಯವನ್ನು ಪ್ರಸ್ತುತ ಕಾಲಘಟ್ಟದಲ್ಲಿ ಬರೆಯುವ ಮುನ್ನ ನೂರು ಬಾರಿ ಯೋಚಿಸಬೇಕಾಗುತ್ತದೆ.” ಎಂದು. ನಾನು ದಾಖಲಿಸಬಯಸುತ್ತಿರುವ ಮಜಲನ್ನು ಜಾವೇದ್ ಅಖ್ತರ್ ಬಹಳ ಸರಳವಾಗಿ ಹೇಳಿ ಮುಗಿಸಿದ್ದಾರೆ. ಆದರೆ ಇದನ್ನು ಇನ್ನಷ್ಟು ಹೊಕ್ಕು ನೋಡಬೇಕು. ಈ ಪಲ್ಲಟ ಹೇಗಾಯಿತು ಎಂಬುದರ ಬಗೆಗಿನ ಅರಿವು ನಾವು ಮೂಡಿಸಿಕೊಳ್ಳಲೇಬೇಕು. ಆ ಹಾದಿಯಲ್ಲೇ ಈ ಲೇಖನ.

ಸಿನಿಮಾ ಎಲ್ಲ ಲಲಿತಕಲೆಗಳ ಸಂಗಮ. ಇಲ್ಲಿ ಕಥೆ, ಕವನ, ಸಂಗೀತ, ಅಭಿನಯ, ಚಿತ್ರಕಲೆ, ಗಾಯನ ಇತ್ಯಾದಿ ಎಲ್ಲ ಲಲಿತಕಲೆಗಳೂ ಗರಿಗೆದರಿ ಈ ಸಿನಿಮಾ ಎಂಬ ಮಾಧ್ಯಮದ ಶಕ್ತಿ ಹಾಗು ಆಕರ್ಷಣೆಯನ್ನು ದುಪ್ಪಟ್ಟು ಮಾಡಿದೆ. ನಮ್ಮ ದೇಶದ ಚಿತ್ರರಂಗ ಹಾಡುಗಳಿಗೆ ಬಹಳ ಹೆಸರುವಾಸಿ. ಬೇರೆ ಯಾವ ದೇಶದಲ್ಲೂ ಸಿಗದಷ್ಟು ವೈವಿಧ್ಯಮಯ ಸಂಗೀತ ಭಾರತೀಯ ಚಿತ್ರಗಳಲ್ಲಿ ಹೆಚ್ಚು ಕೇಳಸಿಗುತ್ತದೆ. ಇನ್ನು ಸಿನಿಮಾವನ್ನು ಇಡಿಯಾಗಿ ಒಂದು ಸಂದೇಶ ಸಾರುವ ವಾಹಕವಾಗಿ ಬಹಳ ಜನರು ಬಳಸಿದ್ದಾರೆ. ಸಿನಿಮಾವನ್ನು ಮೊದಲಿನಿಂದಲೂ ಒಂದು ಪಂಗಡದ ಅಥವಾ ಸರ್ಕಾರದ ಅಥವಾ ಒಬ್ಬ ಮನುಷ್ಯನ ಸಿದ್ಧಾಂತ, ವಿಚಾರ ಹಾಗು ಇನ್ನಿತರ ಜನಪ್ರಿಯತೆಗೆ ಸಹಾಯವಾಗುವಂತಹ ವಿಷಯಗಳನ್ನು ಹರಡಿಸಲು ಬಳಸಲಾಗಿದೆ. ಹಿಟ್ಲರ್ ಕೂಡಾ ಬಳಸಿದ್ದನು. ಇನ್ನು ನಮ್ಮ ದೇಶಕ್ಕೆ ಬಂದರೆ, ಇಲ್ಲಿ ಸ್ವಲ್ಪ ಪರಿಸ್ಥಿತಿ ಸೂಕ್ಷ್ಮ. ಸಾವಿರಾರು ಭಾಷೆಗಳು, ಧರ್ಮಗಳು, ಲೆಕ್ಕವಿಲ್ಲದಷ್ಟು ಜಾತಿಗಳು – ಹೀಗೆ ಈ ಎಲ್ಲ ವಿಷಯಗಳೂ ಒಡಗೂಡಿ ನಮ್ಮ ಸಮಾಜವನ್ನು ತುಸು ಹೆಚ್ಚೇ ಸಂಕೀರ್ಣವಾಗಿಸಿದೆ. ಇಂತಹ ದೇಶದಲ್ಲಿ ಯಾವುದೇ ರೀತಿಯ, ಪ್ರತಿರೋಧದ ಛಾಯೆಯಿರುವ, ಸಾರ್ವಜನಿಕ ಲಲಿತ ಕಲೆಯ ಪ್ರದರ್ಶನ ಸ್ವಲ್ಪ ಕಷ್ಟ. ಯಾವುದಾದರೂ ಸಿನಿಮಾದಲ್ಲಿ ಉದಾಹರಣೆಗೆ ವಕೀಲನ ವೃತ್ತಿ ಮಾಡುತ್ತಿರುವ ನಟಿ ಅಥವಾ ನಟ ಖಳನಾಯಕಿಯ/ಕನ ಪಾತ್ರದಲ್ಲಿ ಕಂಡುಬಂದರೆ ಊರಿನಲ್ಲಿರುವ ವಕೀಲರೆಲ್ಲರೂ ಹೊರಬಂದು ಸಿನಿಮಾ ನಿಷೇಧಿಸುತ್ತಾರೆ. ನಮ್ಮ ದೇಶದಲ್ಲಷ್ಟೇ ಇರಬೇಕು ಸಿನಿಮಾದಲ್ಲಿ ನಡೆಯುವುದನ್ನು ಕಟ್ಟು ಕಥೆ ಮಾತ್ರ ಎಂದು ನಂಬಿದ್ದಾರೆ. ಬಹುತೇಕ ಜನರಂತೂ ಹೌದು. ಸಿನಿಮಾ ಕಟ್ಟು ಕಥೆಯಲ್ಲ, ಯಾವುದೇ ಚಿತ್ರವಾದರೂ ಸಹ ಆ ಕಥೆಯ ಬಹುತೇಕ ವಿಷಯಗಳು ಲೇಖಕನ ಅಥವಾ ನಿರ್ದೇಶಕನ ಬದುಕಿನಿಂದ ಹೆಕ್ಕಲಾಗಿರುತ್ತವೆ. ಆ ಸಣ್ಣ ಸಣ್ಣ ಅನುಭವದ ದರ್ಶನದಲ್ಲಿ ಈ ಕಲೆ ಬಹಳ ಮಂದಿಯ ಮನಸ್ಸನ್ನು ಮುಟ್ಟಿ ರೋಮಾಂಚನಗೊಳಿಸಿದೆ.

ಮೊದಲೇ ಇಷ್ಟು ಸಂಕೀರ್ಣವಾಗಿರುವ ನಮ್ಮ ದೇಶದ ಜನರು ಆರಿಸಿ ಸಂಸತ್ತಿಗೆ ಕಳುಹಿಸುವ ನಾಯಕರೂ ಹಾಗೂ ಅವರ ವಿಚಾರಗಳೂ ಕೆಲವೊಮ್ಮೆ ನಮ್ಮಿಂದ ತುಂಬ ದೂರವೇ ಉಳಿದುಬಿಡುತ್ತದೆ. 2014ರ ಚುನಾವಣೆಯಲ್ಲಿ landslide ವಿಜಯವನ್ನು ಸಾಧಿಸಿದ ಬಲಪಂಥೀಯ ವಿಚಾರಧಾರೆಯ ಬಿಜೆಪಿ ಪಕ್ಷದ ನಂತರದ ಭಾರತೀಯ ಸಿನಿಮಾ ಸಹ ಮೃದುವಾದ ಬಲಪಂಥೀಯತೆಯನ್ನು ಪ್ರದರ್ಶಿಸುತ್ತಲಿದೆ. ನಟಿ ರೇಣುಕಾ ಶಹಾನೆ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ ಈ ಬೆಳವಣಿಗೆಯ ಬಗೆಗೆ ಬಹಳ ವಿವೇಚನೆಯಿಂದ ಒಂದು ಮಾತನ್ನು ಮುಂದಿಟ್ಟಿದ್ದರು. ಅದೇನೆಂದರೆ ಒಂದು ವರ್ಗದ ಸಿನಿಮೋದ್ಯಮ ಎಂದಿಗೂ ಸಹ ನಡುನೆಲೆಯಲ್ಲಿಯೇ ಅಸ್ತಿತ್ವವನ್ನು ಕಂಡುಕೊಂಡಿತ್ತು ಎಂದು. ನಿಜ, ಯಾವ ಪಂಥದ ಜೊತೆಗೂ ಗುರುತಿಸಿಕೊಳ್ಳದೇ ಹಾಗೇ ತಮ್ಮ ಕೆಲಸ ಹಾಗು ಬದುಕನ್ನು ನಡುನೆಲೆಯಲ್ಲೇ ನಿರ್ವಹಿಸಿ ಮುಗಿಸಿ ಹೋದವರು ಬಹಳ ಜನ ನಮಗೆ ಸಿಗುತ್ತಾರೆ. ಒಕ್ಕೂಟಕ್ಕಾಗಿರಬಹುದು ಅಥವಾ ಸಮಾಜದ ಮೇಲುವರ್ಗಕ್ಕೆ ಪ್ರತಿರೋಧ ತೋರಿದ ಚಿತ್ರ ನಿರ್ದೇಶಕರು ಕೂಡ ಇದ್ದಾರೆ. ಇಷ್ಟು ದೊಡ್ಡ ದೇಶವೆಂದರೆ ಅಷ್ಟು ಪ್ರತಿರೋಧವಾದರೂ ಹೊರಬರದಿದ್ದರೆ ಹೇಗೆ ಹೇಳಿ! ಸಂಕಟದ ಸಮಯದಲ್ಲಿ ‘ಮಾತನಾಡದ’ ಜನರ ಬಗೆಗೆ ನಾನು ಮಾತನಾಡಲು ಅರ್ಹನಲ್ಲ. ಏಕೆಂದರೆ ಪ್ರತಿಯೊಬ್ಬರ ಪ್ರತಿರೋಧವೂ ವಿವಿಧ ಸ್ವರೂಪದಲ್ಲಿರುತ್ತದೆ. ಎಲ್ಲರೂ ಸಹ ರಸ್ತೆಗಿಳಿದು ಚಳುವಳಿ ಮಾಡುವಷ್ಟು ಸವಲತ್ತು ಹೊಂದಿಲ್ಲ. ಹಾಗಾಗಿ ಮಾತನಾಡದ ಜನರ ಬಗೆಗೆ ನಾವು ಮಾತನಾಡುವುದು ಬೇಡ.

ರಾಮ ಮತ್ತು ಸೀತಾ ಹೆಸರು ಬಳಸಿದ್ದಕ್ಕೆ ಬೆಂಗಾಲಿ ಸಿನೆಮಾದ ಮೇಲೆ ಆಕ್ರಮಣ

ಒಂದು ಸಿನಿಮಾ ಇದೆ, ಆ ಚಿತ್ರದಲ್ಲಿ ನರಸಿಂಹರಾಜು ಅವರು ಒಂದು ಪಾತ್ರ ಮಾಡಿದ್ದಾರೆ. ಆ ಚಿತ್ರದಲ್ಲಿ ಭಿಕ್ಷೆ ಬೇಡುವ ಒಂದು ದೃಶ್ಯವಿದೆ. ನರಸಿಂಹರಾಜು ತಮ್ಮ ತಲೆಯ ಮೇಲ್ಭಾಗದಿಂದ ಅರ್ಧ ಮುಖ ಮಾತ್ರ ಕಾಣುವ ರೀತಿಯ ಬಟ್ಟೆ ತೊಟ್ಟಿರುತ್ತಾರೆ, ಅವರು ಬಂದು ಭಿಕ್ಷೆ ಕೇಳುತ್ತಾರೆ. ಮಹಿಳೆಯೊಬ್ಬರು ಅವರನ್ನು ತಲೆಯ ಮೇಲಿನಿಂದ ಬಿಟ್ಟುಕೊಂಡಿರುವ ಬಟ್ಟೆ ಏಕೆಂದು ಕೇಳುತ್ತಾರೆ. ಅದಕ್ಕೆ ನರಸಿಂಹರಾಜು ಆ ಬಟ್ಟೆಯನ್ನು ತೆಗೆದು ಮುಖ ತೋರಿಸುತ್ತಾರೆ. ಅವರ ಮುಖದ ಒಂದು ಭಾಗ ಶೈವರ ತರಹ ಅಲಂಕಾರಗೊಂಡಿರುತ್ತದೆ, ಮತ್ತೊಂದು ಭಾಗ ವೈಶ್ಣವರ ತರಹ ಇರುತ್ತದೆ – ವೈಶ್ಣವರ ಮನೆಗೆ ಹೋದರೆ ಶೈವ ಭಾಗವನ್ನು ಹಾಗು ಶೈವರ ಮನೆಗೆ ಹೋದರೆ ವೈಶ್ಣವ ಭಾಗವನ್ನು ಬಟ್ಟೆಯಿಂದ ಮುಚ್ಚಿ ಮರೆಮಾಡಿಕೊಳ್ಳುವೆ ಎನ್ನುತ್ತಾರೆ. ಇದೊಂದು ತುಂಬಾ ಸರಳವಾದ ದೃಶ್ಯ. ರಾಜಕೀಯವಾಗಿಯೂ ಸಿನಿಮೀಯವಾಗಿಯೂ ನಿರ್ದೇಶಕರ ಪಕ್ವತೆ ತೋರುತ್ತದೆ. ಜಾವೇದ್ ಅಖ್ತರ್ ಹೇಳಿದ ಮಾತನ್ನೇ ನಾನೂ ಹೇಳುತ್ತೇನೆ. ಈ ಮೇಲಿನ ದೃಶ್ಯವನ್ನು ಖಂಡಿತ ಈಗ ಮಾಡಲು ಸಾಧ್ಯವಿದೆಯಾ ಎಂದು ನಾನು ಹೇಳುವುದಕ್ಕಿಂತ ನೀವೇ ಒಮ್ಮೆ ತಣ್ಣಗೆ ಯೋಚಿಸಿ ನೋಡಿ. ಎಲ್ಲಕ್ಕಿಂತ ಮೊದಲು ಸ್ವತಃ ನಿಮಗೆ ಇಂತಹ ದೃಶ್ಯ ಹೇಗನ್ನಿಸುತ್ತದೆ ಎಂದು ಸ್ವವಿಮರ್ಶೆ ಮಾಡಿಕೊಳ್ಳಿ. ಏಕೆಂದರೆ ನಮ್ಮ ದೇಶದಲ್ಲಿ ಬೇರೆ ಜಾತಿ ಧರ್ಮಗಳ ವಿಷಯದಲ್ಲಿ ಧರ್ಮನಿರಪೇಕ್ಷರಾಗಿರುವವರು ಮನೆಗೆ ಮೂರು ಜನ ಸಿಗುತ್ತಾರೆ, ಅದೇ ತಾವು ನಂಬುವ ಜಾತಿ ಧರ್ಮವನ್ನು ಲೇವಡಿ ಮಾಡಿದರೆ ಕಟ್ಟರ್ ಮೂಲಭೂತವಾದಿಗಳಾಗಿ ಬಿಡುತ್ತಾರೆ. ಇಂತಹ ಜನರೇ ಹೆಚ್ಚು ನಡುನೆಲೆಯಲ್ಲಿ ಸಿಗುವರು. ನಾನು ಈ ದೃಶ್ಯದ ಉದಾಹರಣೆ ಏಕೆ ನೀಡಿದೆ ಎಂದರೆ ಸುಮಾರು55-60 ವರ್ಷಗಳ ಹಿಂದೆ ಬಂದಿರುವ ದೃಶ್ಯದಲ್ಲಿರುವ ವಿಚಾರಗಳ ಓಘವನ್ನು ಸಿನಿಮಾ ನೋಡುವ ಜನ ಹೇಗೆ ಸ್ವೀಕರಿಸುತ್ತಿದ್ದಿರಬಹುದು ಎಂಬ ಚಿತ್ರಣ ಕೊಡಲು. ಬಹುಶಃ ಮಾತನಾಡುವ ಬಗೆಗಳು ಕೂಡಾ ಕಡಿಮೆಯೂ ಇದ್ದಿರಬಹುದು.

(ಮುಂದುವರೆಯುವುದು..)

ವಿವೇಕ,  ಬೆಂಗಳೂರು.

ಕಳೆದ ಹತ್ತು ವರ್ಷಗಳಿಂದ ಮಾಧ್ಯಮ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ವಿವೇಕ್‌, ಇತ್ತೀಚಿನ ಆರು ವರ್ಷಗಳಿಂದ ಸಿನಿಮಾರಂಗದಲ್ಲಿ ಬರಹಗಾರನಾಗಿ ಹಾಗೂ ನಿರ್ದೇಶನ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ನಡುವೆ ಮುಂಬಯಿಯಲ್ಲಿ ನೆಲೆಸಿ ಇರಾಸ್‌ ಇಂಟರ್‌ ನ್ಯಾಶನಲ್ ಸ್ಟುಡಿಯೋಗೆ ಚಿತ್ರಕಥಾ ಬರಹಗಾರನಾಗಿ ಕೆಲಸ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇವರು ಸಿನೆಮಾ ವಿದ್ಯಾರ್ಥಿ.

Related Articles

ಇತ್ತೀಚಿನ ಸುದ್ದಿಗಳು