Monday, June 17, 2024

ಸತ್ಯ | ನ್ಯಾಯ |ಧರ್ಮ

ಪ್ರಸ್ತ ನೋಡಲು ರಚ್ಚೆ ಹಿಡಿದ ಚಿಳ್ಳೆ ಪಿಳ್ಳೆಗಳು

(ಈ ವರೆಗೆ…)

ಮನೆಯ ಕೆಲಸದಾಳು, ಮೇಲಾಗಿ ಕೊಳಕು ಕೊಳಕಾಗಿದ್ದ ಮಾರಯ್ಯನ ಜತೆ ತುಂಗಾಳಿಗೆ ಸಂಸಾರ ಮಾಡೋದು ಅಸಹ್ಯ ಎನಿಸಿ ಆಕೆ ದೂರವೇ ಇರತೊಡಗಿದಳು. ಊರಿನವರಿಗೆ ಈ ಸುದ್ದಿಯೇ ರಸಗವಳವಾಯ್ತು. ಸೋತು ಸುಣ್ಣವಾದ ರಾಜಪ್ಪಯ್ಯ ಗಂಡನೊಂದಿಗೆ ಸಂಸಾರ ನಡೆಸುವಂತೆ ಮಗಳನ್ನು  ಕೇಳಿಕೊಂಡು ಅತ್ತುಬಿಡುತ್ತಾನೆ. ವಿಚಲಿತಳಾದ ತುಂಗಾ ಒಂದು ನಿರ್ಧಾರಕ್ಕೆ ಬರುತ್ತಾಳೆ. ಆ ನಿರ್ಧಾರ ಏನು? ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಇಪ್ಪತ್ತೆಂಟನೆಯ ಕಂತು.

ಆ ರಾತ್ರಿ ತುಂಗೆ ಊಟ ಮುಗಿಸಿ ಮುಸುರೆ ತೊಳೆಯುತ್ತಾ ಕೂತಿದ್ದ ಅವ್ವನ ಕಿವಿಯಲ್ಲಿ, ತಾನು ಮಾರಯ್ಯನೊಂದಿಗೆ ಸಂಸಾರ ಮಾಡಲು ಸಿದ್ದ ಎಂಬ ಸಂದೇಶವನ್ನು ಉಸುರಿ  ಸರಸರನೆ ಅಟ್ಟ ಏರಿ ಕಣ್ಮರೆಯಾದಳು.  ಮಗಳ ಈ ಮಾತಿಗಾಗಿ ಮೂರ್ನಾಲ್ಕು ತಿಂಗಳಿಂದ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ನರಸಮ್ಮ, ರಾಚಪ್ಪಯ್ಯ ತಡ ಮಾಡಿದರೆ ಇನ್ನೆಲ್ಲಿ ಮಗಳು ಮನಸ್ಸು ಬದಲಿಸಿ ಬಿಡುವಳೊ ಎಂದು ಹೆದರಿ ಮಾರನೆ ದಿನವೇ ಪ್ರಸ್ತದ ಶಾಸ್ತ್ರ ಮುಗಿಸಿ ಬಿಡುವುದೆಂದು ನಿರ್ಧರಿಸಿ, ದೀಪ ಆರಿಸಿ ಮಲಗಿದರು.

ಇಡೀ ರಾತ್ರಿ ಕಣ್ಣಿಗೆ ನಿದ್ದೆ ಹತ್ತದೆ ಚಾಪೆಯಲ್ಲಿಯೇ ಒದ್ದಾಡಿದ ನರಸಮ್ಮ, ಮುಂಜಾನೆ ಕೋಳಿ ಕೂಗುವುದನ್ನೇ ಕಾದು ಕುಳಿತಿದ್ದು, ಊರು ಕಣ್ಣು ಬಿಡುವುದಕ್ಕೆ ಮುಂಚೆಯೇ ಎದ್ದು ಕೊಟ್ಟಿಗೆಯಿಂದ ಸಗಣಿ ತಂದು ನುಣ್ಣಗೆ ಬೀದಿ ಬಾಗಿಲು ಸಾರಿಸಿದಳು.  ದಾರಿಯಲ್ಲಿ ಓಡಾಡುವವರ ಕಣ್ಣು ಕುಕ್ಕುವಂತೆ ಊರಗಲ ರಂಗೋಲಿ ಬಿಡಿಸಿ ಬಣ್ಣ ತುಂಬಿದಳು. ಹಿತ್ತಿಲಲ್ಲಿದ್ದ ದೊಡ್ಡ ಮಾವಿನ ಮರದಿಂದ ತಳಿರು ಕಿತ್ತು ತಂದು ತೋರಣ ಮಾಡಿ ಬಾಗಿಲಿಗೆ ಕಟ್ಟಿ ಇಡೀ ಮನೆಯೇ ಲಕಲಕಿಸುವಂತೆ ಮಾಡಿದಳು. 

ಆಗಷ್ಟೇ ಕಣ್ಣು ಬಿಡುತ್ತಿದ್ದ  ಪುಟ್ಟಮ್ಮತ್ತೆ, ರಾಜಮಕ್ಕ, ಗೌರ ಚಿಕ್ಕವ್ವ, ಮೇಗಳ ಬೀದಿಯ ಕೆಂಪಮ್ಮ, ಮಾಯವ್ವ,  ಚೆನ್ನಮ್ಮನವರ ಮನೆಗಳಿಗೆ ಹೋಗಿ “ಇವತ್ತು ರಾತ್ರಿನಾಗ ನಮ್ ತುಂಗೆದು ಪ್ರಸ್ತುದ್ ಸಾಸ್ತ್ರ, ಸೋಬಾನೆ ಪದ ಹಾಡಿ ಸಿಹಿ ಉಂಡ್ಕೊಂಡು ಬರುವ್ರಂತೆ  ಬನ್ರವ್ವ” ಎಂದು ಬುಲಾವು  ಕೊಟ್ಟು ಬಂದಳು.  ಮಗಳ ಸೋಬನದ ಕಥೆಗೆ ರೆಕ್ಕೆ ಪುಕ್ಕ ಕಟ್ಟಿ  ಕಿಸುಕ್ ಪುಸುಕ್ ಎಂದು ಅಣಕವಾಡುತ್ತಾ ಓಡಾಡುತ್ತಿದ್ದ ಕೊಂಕಿಗರ ಮನೆಗಳಿಗೂ ಎಡತಾಕಿ “ರಾತ್ರಿಕ್ ಬಂದು ನಮ್ಮ  ಮಕ್ಳು ತಲೆ ಮ್ಯಾಲೆ ನಾಕ್ ಅಕ್ಕಿಕಾಳಾಕಿ ಆಸಿರ್ವಾದ ಮಾಡ್ರವ್ವ”  ಎಂದು ಹೇಳಿ ಬೀಗುತ್ತಾ ಮನೆ ಸೇರಿದ್ದಳು.

 ಇನ್ನೂ ಹಾಸಿಗೆಯಲ್ಲಿಯೇ ಹೊರಳಾಡುತ್ತಾ ಮಲಗಿದ್ದ  ರಾಜಪ್ಪಯ್ಯನನ್ನು, ಬೆನ್ನು ಬಿಡದ ಬೇತಾಳದಂತೆ  ಎಬ್ಬಿಸಿದ ನರಸಮ್ಮ,” ರಾತ್ರೆ ಸಾಸ್ತ್ರುಕ್ಕೆ ಊರ್ನೊರ್ನೆಲ್ಲಾ ಕರ್ದು ಬಂದಿದ್ದೀನಿ. ಬೇಗೆದ್ದು ಮಗ್ಳುಗು ಅಳಿಯುನ್ಗೂ  ಹೊಸ ಅರ್ವೆನುವೆ, ಅಡ್ಗೆಗೆ ಸಾಮಾನ್ ತನ್ನಿ ” ಎಂದು ತಾಕಿತು ಮಾಡಿದಳು. ಹೆಂಡತಿಯ ಈ ಅದ್ದೂರಿ ತಯಾರಿ ಕಂಡು ಕೊಸರಾಡಿದ ರಾಚಪ್ಪಯ್ಯ” ನಿನ್ಗೆನಾರ  ತಲೆ ಗಿಲೆ ನೆಟ್ಗಿದ್ದಾತೆನೆ ನರ್ಸಿ. ಮಲಿಕೊಳದು ಆ ಹೈಕ್ಳು ಅದುಕ್ಕೆ ನೀನ್ಯಾಕೆ ಊರ್ನೋರ್ನೆಲ್ಲ ಕರ್ದ್ ಗುಡ್ಡೆ ಹಾಕ್ತಿದ್ದಿ” ಎಂದು ತಲೆ ಚಚ್ಚಿಕೊಂಡ. ಗಂಡನ ಮಾತು ಕೇಳಿ ಸಿಡಿ ಮಿಡಿಗೊಂಡ ನರಸಮ್ಮ “ಆ ಬಡ್ಡಿಮಗ ಬೋಪುನ್ ದೆಸೆಯಿಂದ ನಮ್ಮ್ ಮಗಿನ್ ಮದುವೆ ಅಂತೂ ಅದ್ದೂರಿಯಾಗಿ ಆಗ್ಲಿಲ್ಲ. ಈಗ್ಲಾದ್ರು  ಒಂದ್ ನಾಕ್ ಜನ್ರು ಮುಂದೆ ಒಂದೀಟ್  ಸಾಸ್ತ್ರ ಗೀಸ್ತ್ರನಾರ  ನೇರ್ಪಾಗ್ ಮಾಡಿ,  ಆಡ್ಕೊಂಡೋರ್ ಬಾಯಿ ಮುಚ್ಸಿ ಕಳ್ಸನ.  ಒಂದೀಟು ಜುಗ್ಗ್ ತನ ಬುಟ್ಟು ಕಾರ್ಯನ ಅಚ್ಕಟ್ಟಾಗಿ ಮಾಡ್ ನಡೀರಿ” ಎಂದು ಗಡುಸಾಗಿಯೇ ಹೇಳಿ ಮುಂದಿನ ಕಾರ್ಯಕ್ಕೆ ನಡೆದಳು. 

ಅಂದು ಬೆಳಿಗ್ಗೆಯೇ ಕಣ್ಣುಜ್ಜಿ ಕೊಂಡು ಆಕಳಿಸುತ್ತಾ ಹೊರ ಬಂದ ಮಾರಯ್ಯ, ಬಾಗಿಲಲ್ಲಿ ಹಾಕಿದ್ದ ತಳಿರು ತೋರಣ, ರಂಗೋಲಿಗಳನ್ನು  ಕಂಡು ನರಸಮ್ಮನನ್ನು “ಇವತ್ತು ಏನ್ ವಿಸೇಸ ಅಮ್ಮೊರೆ ರಂಗೋಲೆ ಗಿಂಗೋಲೆ ಜೋರಾಗ್ ಆಕ್ಬುಟ್ಟಿದ್ದೀರಿ” ಎಂದು ಕೇಳಿದ. ಅವನ ಮಾತಿಗೆ ಉತ್ತರ ಕೊಡಲಾರದೆ ನಾಚಿದ ನರಸಮ್ಮ “ಅಮ್ಯಾಕೆ ಅಯ್ಯೊರ್ ಹೇಳ್ತರೆ ಅವರ ಜೊತೆ ಹೋಸ್ನಾರಿ ಪುರುಕ್ಕೋಗಿ ಮನೆಗೊಂದಿಷ್ಟು ಸಾಮಾನ್ ತಗೊಂಡು ಬಾ” ಎಂದು ಹೇಳಿ ಒಳ ಹೋದಳು. ಒಂದೆರೆಡು ಚೀಲವನ್ನು ಕಂಕುಳಿಗೆ ಸಿಕ್ಕಿಸಿ ಕೊಂಡು ರಾಚಪ್ಪಯ್ಯನೊಂದಿಗೆ ಹೊಸ ನಾರಿಪುರದತ್ತ ಹೆಜ್ಜೆಹಾಕಿದ ಮಾರಯ್ಯ, ಎಷ್ಟೊತ್ತಾದರು ರಾಚಪ್ಪಯ್ಯ ಬಾಯಿ ತೆರೆಯದಿದ್ದನ್ನು ಕಂಡು ತಾನೆ ಮಾತಿಗೆ ಮೊದಲಾದ.  

” ಇವತ್ತು ಏನ್ ವಿಸೇಸ ಅಯ್ಯೊರೆ ಅವ್ವೋರು ಆ ನರಿ ಸಂಭ್ರಮುಸ್ತವ್ರಲ್ಲ” ಎಂದು  ಕುತೂಹಲ ವ್ಯಕ್ತ ಪಡಿಸಿದ.  ಮಾರಯ್ಯನ ದೈನೇಸಿ ಮುಖ ನೋಡಿದ ರಾಚಪ್ಪಯ್ಯನಿಗೆ ಕ್ಷಣ ಊರವರ ಗೇಲಿ ಮಾತುಗಳೆಲ್ಲ ರಪ ರಪನೆ ಕಿವಿ ಮೇಲೆ ಅಪ್ಪಳಿಸಿದಂತಾಗಿ ” ಹೂಂ ಕನಪ್ಪ ಊರ್ ತುಂಬಾ ನನ್ನ ಹೆಡ್ತಿಗೆ ಬುದ್ದಿಹೇಳಿ ನನ್ನ ಹೆಡ್ತಿಗೆ ಬುದ್ದಿ ಹೇಳಿ ಅಂತ  ತಿರುಗ್ತಿದ್ದಲ್ಲ ಈಗ ಅವುಳ್ಗೆ ಬುದ್ದಿ ಬಂದದೆ ನೋಡು ಅದುಕ್ಕೆ ಈ ಸಂಭ್ರಮ” ಎಂದು ಅಣಕಿಸುವವನಂತೆ ಹೇಳಿದ. “ಅಂಗಾರೆ ತುಂಗವ್ವ ನನ್ಜೊತೆ ಸಂಸಾರ ಮಾಡಕೆ ಒಪ್ಪಿದ್ಲಾ ಅಯ್ಯೊರ ಎಂದು ಮತ್ತೊಮ್ಮೆ ಕೇಳಿ ಉದ್ವೇಗಗೊಂಡ ಮಾರಯ್ಯ, ತನಗರಿವಿಲ್ಲದೆ ರಾಚಪ್ಪಯ್ಯನನ್ನು ಬಿಗಿಯಾಗಿ ತಬ್ಬಿ ಹೋಯ್….ಎಂದು ಕೂಗು ಹಾಕಿಬಿಟ್ಟ.  ಮಾರಯ್ಯನ ಈ ಅಚಾನಕವಾದ ನಡೆಕಂಡು ತಬ್ಬಿಬ್ಬುಗೊಂಡ ರಾಚಪ್ಪಯ್ಯ ಅವನ ಬಿಗಿಯಾದ ಅಪ್ಪುಗೆಗೆ ಉಸಿರು ಕಟ್ಟಿ” ಥೂ ಹೆಡ್ ಮುಂಡೆದೆ ಬುಡ್ಲಾ ನಾನ್ ಸಾಯ್ಸಿಗಿಯ್ಸಿ ” ಎಂದು ತನ್ನ ಶಕ್ತಿ ಬಳಸಿ ದೂರ ತಳ್ಳಿ, ಸುಕ್ಕಾದ ತನ್ನ ಗರಿಮುರಿ ಅಂಗಿಯನ್ನು ಸರಿಪಡಿಸಿ ಕೊಂಡ. ಎಚ್ಚರಗೊಂಡ ಮಾರಯ್ಯ ತಾನು ನಡೆದು ಕೊಂಡ ರೀತಿಗೆ ಕೈ ಕೈ ಹಿಸುಕಿಗೊಂಡು ಮಾರು ದೂರ ಸರಿದು ನಿಂತ. “ತೆಪ್ಪಾತು ಅಯ್ಯೊರ ಖುಸಿಲಿ ನಂಗ್ ಗೊತ್ತೆ ಆಗ್ಲಿಲ್ಲ ಎಂದು ಕ್ಷಮೆ ಯಾಚಿಸಿ ಇವತ್ತಾದ್ರು ನಮ್ಮ ತುಂಗವ್ವುನ್ಗೆ ಬುದ್ದಿ ಬಂತಲ್ಲ ಅಷ್ಟು ಸಾಕು ಬುಡಿ” ಎಂದು ಹಗೂರವಾದ.

 ಮಾರಯ್ಯ ಮನೆಗೆ ಬೇಕಾದ ಎಲ್ಲ ಸಮಾನುಗಳನ್ನು ಕಟ್ಟಿಸಿಟ್ಟು,  ತುಂಗೆ ಹೇಳಿದಂತೆ  ಚೌರದಂಗಡಿಯತ್ತ ನಡೆದ. ಜನರಿಲ್ಲದೆ ಖಾಲಿ ಹೊಡೆಯುತ್ತಿದ್ದ ಸಗ್ಗಪ್ಪನಲ್ಲಿ  “ಒಯ್ ಸಗ್ಗಪ್ಪಣ್ಣ ಇವತ್ತು ನನ್ನ ಪ್ರಸ್ತುದ್ ಸಾಸ್ತ್ರ, ಒಂಚೂರ್ ಚನ್ನಾಗಿ ಕಾಣಂಗೆ ಕೂದ್ಲು ಕತ್ರುಸಿ ಗಡ್ಡ ಬೋಳ್ಸು ಮಾರಾಯ” ಎಂದ.  ಈ ಮಾತು ಕೇಳಿ ಕಿಸಕ್ಕನೆ ನಕ್ಕ ಸಗ್ಗಪ್ಪನನ್ನು ಕಂಡು ಮಾರಯ್ಯನ ಉಮೇದೆಲ್ಲ ಸರ್ರನೆ ಇಳಿದು ನಾಲಿಗೆ ಕಚ್ಚಿ ಕೊಂಡ. ಸಿಟ್ಟುಗೊಂಡವನಂತೆ ಮುಖ ಸಿಂಡರಿಸಿ ಕೊಂಡ ಮಾರಯ್ಯ “ನಾನು ಅಂತದ್ದು ಏನ್ ಹೇಳ್ಬಾರುದ್ದು ಹೇಳ್ದೆ ಅಂತ ಕಿಸುಕ್ ಅಂತಿಯೊ ” ಎಂದು ಬಿಗುವಾಗಿ ಕುಳಿತು ತುಟಿಕ್ ಪಿಟಿಕ್ ಎನ್ನದೆ ಕೂದಲು ಕತ್ತರಿಸಿ ಕೊಂಡು ಬಂದು ಮನೆ ಸೇರಿದ. 

ಮಾರಯ್ಯ ಆ ದಿನವಿಡೀ ಏನೇನೋ ನೆಪ ಹೇಳಿ ಕೊಂಡು  ಮನೆಯಿಂದ ಹೊರಗೆ ಕಾಲಿಡಲಿಲ್ಲ. ತುಂಗೆಯ ಆಸುಪಾಸಿನಲ್ಲಿಯೇ ಓಡಾಡುತ್ತಾ ತಾನು ಅವಳ ಕಣ್ಣಿಗೆ ಚಂದವಾಗಿ ಕಾಣಿಸಿ ಕೊಳ್ಳಬೇಕೆಂದು ಬಯಸಿದ. ಅವಳಿಗೆ ಹತ್ತಿರವಾಗಲು ತುಡಿಯುತ್ತಿದ್ದ ಮಾರಯ್ಯ  ತನ್ನ ಕೈ ಚೀಲದಲ್ಲಿದ್ದ ಬಟ್ಟೆಗಳನ್ನು ಅವಳ ಮುಂದೆ ಹರವಿ “ಇದ್ರಲ್ಲಿ ಯಾವ ಬಟ್ಟೆ ಏರುಸ್ಕೊಳ್ಳಿ ತುಂಗವ್ವ” ಎಂದು ಕೇಳಿ ಅವಳು ತೋರಿಸಿದ ಬಟ್ಟೆ ಹಾಕಿಕೊಂಡು ಹಿಗ್ಗಿದ. ತನ್ನ ಸಂಕೋಚವನ್ನೆಲ್ಲ ಬದಿಗೊತ್ತಿ ಅವಳ ಬಳಿ ಇದ್ದ ಸ್ನೋ  ಪೌಡರ್ ಕೇಳಿ ಪಡೆದು  ಮುಖವನ್ನು ಬೆಳ್ಳಗೆ ಕಾಣುವಂತೆ ಮಾಡಿಕೊಂಡ. ಕನ್ನಡಿ ಮುಂದೆ ನಿಂತು ಪದೇಪದೇ ತಲೆ  ತೀಡಿ ಕೂದಲು ಕೆದರದಂತೆ ಜಾಗ್ರತೆ ವಹಿಸಿದ್ದ.

 ಹೀಗೆ ಸೂರ್ಯ ನೆತ್ತಿ ಮುಟ್ಟುವುದರ ಒಳಗಾಗಿ ತುಂಗೆ ಮತ್ತು ಮಾರಯ್ಯನ ಸೋಬನದ  ಸುದ್ದಿ ಊರಿನ ತುಂಬಾ ಹರಿದಾಡಿ ಎಲ್ಲರ ಮನೆ ಒಳ ಹೊರಗೂ ಈಡಾಡಿತು. ಕೊನೆಗೆ ಈ  ಸಮಾಚಾರ ಯಾವ ಹಂತಕ್ಕೆ ಬಂದು ತಲುಪಿತೆಂದರೆ, ಬೀದಿಯಲ್ಲಿ ಆಡುತ್ತಿದ್ದ ಸಣ್ಣ ಚಿಳ್ಳೆ ಪಿಳ್ಳೆಗಳು  ತಮ್ಮ ಮನೆಗಳಿಗೆ ಓಡಿಬಂದು ಯಾವುದೋ ಆಟ ನೋಡಲು ಹೋಗುವವರಂತೆ “ನಾವು ಮಾರಯ್ಯನ್ ಪ್ರಸ್ತ ನೋಡ್ಬೇಕು ಕರ್ಕೊಂಡು ಹೋಗಿ” ಎಂದು ತಮ್ಮ ಅವ್ವಂದಿರಿಗೆ ದುಂಬಾಲು ಬಿದ್ದು  ರಚ್ಚೆ ಹಿಡಿದು ಕೂತವು.

ನರಸಮ್ಮ ಯೋಜಿಸಿಕೊಂಡಂತೆ ಹಿಂದೆ ಮುಂದೆ ಆಡಿಕೊಂಡು ನಕ್ಕವರ ಸಮ್ಮುಖದಲ್ಲಿಯೇ, ಮಗಳ ಸೋಬನದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದಳು. ಬಂದವರಿಗೆಲ್ಲ ಹೊಟ್ಟೆ ಬಿರಿಯುವಂತೆ ಊಟಕ್ಕಿಟ್ಟು, ಅರಿಶಿಣ ಕುಂಕುಮದ ನೆಪದಲ್ಲಿ ಪಡಿ ಅಕ್ಕಿ ಯೊಂದಿಗೆ ಕೆಲವು ಪಾವಲಿ ಇಟ್ಟು, ಅಂದವರು ಹಾಡಿ ಹೊಗಳುವಂತೆ ಕಂಡು ಕಳುಹಿಸಿದಳು.  ಮಗಳನ್ನು ಮಲಗುವ ಕೋಣೆಗೆ ಬಿಡುವ ಮೊದಲು ಒಂದು ನೂರು ಬಾರಿಯಾದರು, “ಅವತ್ತು ಬೀದಿಗ್ ಬಂದ್ ಕೂತಂಗೆ ಇವತ್ತು ಬಂದ್ಬುಟ್ಟ್ಯ ತಾಯಿ.  ಏನಾರ ಆಗ್ಲಿ ಹೆಣ್ಣು ಮಕ್ಳು ಕಮಕ್ ಕಿಮಿಕ್ ಅಂದಂಗೆ ನಾಕ್ ಕ್ವೊಣೆ ಒಳಗೆ ಸೈಸ್ಕೊಂಡು ಹೋಗದ್ನ ಕಲೀಬೇಕು ಮಗ. ಗಂಡುಸ್ರು ಏನ್ ಮಾಡುದ್ರು ನಡಿತದೆ ನಮ್ದು ಹಂಗ್ ನಡ್ಯಕಿಲ. ಇದ್ನ ಅರ್ಥ ಮಡ್ಕೊಂಡು ನಿನ್ ಗಂಡ ಹೇಳ್ದಂಗೆ ಕೇಳು”  ಎಂದು ಬುದ್ಧಿವಾದ ಹೇಳಿದಳು. “ನಾವು ಇಲ್ಲೇ ಪುಟ್ಟಮ್ಮತ್ತೆ ಮನೆಲಿ ಮಲ್ಗಿರ್ತಿವಿ” ಎಂದು ಹೇಳುವುದನ್ನು ಮಾತ್ರ ಮರೆಯಲಿಲ್ಲ.

ಹಿಂದಿನ ದಿನ ಪೂರ ಮಾರಯ್ಯನನ್ನು  ಗಂಡನೆಂದು ಒಪ್ಪಿಕೊಳ್ಳಲು ತನ್ನ ಮನಸ್ಸಿಗೆ ತರಬೇತಿ ನೀಡಿದ್ದ ತುಂಗೆ, ಅವ್ವ ಅಪ್ಪ ಅತ್ತ ಹೋದದ್ದೆ ಭದ್ರವಾಗಿ ಬಾಗಿಲು ಮುಚ್ಚಿ ಅಟ್ಟದ ಮೇಲಿನ ತನ್ನ ಕೋಣೆಯತ್ತ ಬಂದಳು. ಪ್ರತೀ ರಾತ್ರಿ ಮನೆ ಮುಂದಿನ ದೊಡ್ಡ ಜಗಲಿ ಕಟ್ಟೆಯಲ್ಲಿ ಗುಬುರು ಹಾಕಿಕೊಂಡು ಗೊರಕೆ ಹೊಡೆಯುತ್ತಾ ಮಲಗುತ್ತಿದ್ದ ಮಾರಯ್ಯ ಇಂದು ತನ್ನ ಹಾಸಿಗೆ ಮೇಲೆ ರಾಜಾರೋಷವಾಗಿ ಪವಡಿಸಿರುವುದನ್ನು  ಕಂಡು ಅವಳಿಗೆ ಇದ್ದಕ್ಕಿದ್ದಂತೆ ಇರುಸು ಮುರುಸಾಯಿತು.  ಮನೆಗೆ ಬಂದು ಹೋಗುತ್ತಿದ್ದ ಎಲ್ಲಾ ಆಳುಗಳಂತೆ ಅವನು ಒಬ್ಬ ಆಳು ಎಂಬಂತೆ ಬೇಕಾಬಿಟ್ಟಿಯಾಗಿ ನಡೆಸಿಕೊಂಡು ಬಂದಿದ್ದ ಅವಳಿಗೆ, ಒಂದು ಕ್ಷಣ ಅವನೊಂದಿಗೆ ತನ್ನ ದೇಹ ಹಂಚಿಕೊಳ್ಳುವುದನ್ನು ನೆನೆದು ದುಃಖ ಉಮ್ಮಳಿಸಿ ಬಂತು. ‌

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌

ಇದನ್ನು ಓದಿದ್ದೀರಾ? https://peepalmedia.com/unpredictable-move-of-bopaiah/ http://ಊಹೆಗೂ ನಿಲುಕದ ಬೋಪಯ್ಯನ ನಡೆ

Related Articles

ಇತ್ತೀಚಿನ ಸುದ್ದಿಗಳು