Friday, June 14, 2024

ಸತ್ಯ | ನ್ಯಾಯ |ಧರ್ಮ

ನಮ್ಮ ಸಂವಿಧಾನ ಮನುವಾದಿಗಳ ಕೈಯಲ್ಲಿದೆ ; ದಸಂಸ ವೇದಿಕೆಯಲ್ಲಿ ಸಿದ್ದರಾಮಯ್ಯ

ಆರೆಸ್ಸೆಸ್ ಸರಸಂಘಚಾಲಕ ಗೋಲ್ವಲ್ಕರ್ ಅಂಬೇಡ್ಕರ್ ಸಂವಿಧಾನ ಸರಿಯಿಲ್ಲ ಎಂದಿದ್ದರು. ಸಾವರ್ಕರ್ ಅಂಬೇಡ್ಕರ್ ಬರೆದ ಸಂವಿಧಾನ ಒಪ್ಪಿರಲಿಲ್ಲ. ಆದರೆ ಸಾವರ್ಕರ್ ಸಿದ್ಧಾಂತ ಒಪ್ಪುವ ಬಿಜೆಪಿ ಅಂಬೇಡ್ಕರ್ ಅವರನ್ನು ಗೌರವಿಸುವ ನಾಟಕ ಮಾಡುತ್ತಿದೆ. ಅವರದು ಸಾವರ್ಕರ್ ಸಿದ್ಧಾಂತವೋ, ಅಂಬೇಡ್ಕರ್ ಸಿದ್ದಾಂತವೋ ಎಂಬುದು ಸ್ಪಷ್ಟಪಡಿಸಲಿ. ಈ ಹಿಪೋಕ್ರಸಿ ಅಗತ್ಯವಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ “ಭೀಮ ಸಂಕಲ್ಪ” ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಟೌನ್ ಹಾಲ್ ನಲ್ಲಿ ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಈ ಭೀಮ ಸಂಕಲ್ಪ ಸಮಾವೇಶದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ನಮ್ಮ ಗೆಲುವಿಗೆ ಕಾರಣಕರ್ತರಾದ ನಿಮಗೆ ಹೃದಯ ತುಂಬಿದ ಧನ್ಯವಾದಗಳನ್ನು ಅರ್ಪಿಸುತ್ತೇನೆ‌ ಎಂದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಹಳ ಕಠಿಣವಲ್ಲದ ತಿದ್ದುಪಡಿಗೆ ಅವಕಾಶ ಇರುವ ಒಂದು ಯೋಗ್ಯವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಅವರು ಒಂದು ಮಾತು ಹೇಳಿದ್ದಾರೆ. ಈ ಸಂವಿಧಾನ ಯೋಗ್ಯವಾಗಿದೆ. ಆದರೆ ಅದು ಯಾರ ಕೈಯಲ್ಲಿರುತ್ತದೆ ಎಂಬುದು ಮುಖ್ಯ ಎಂದಿದ್ದಾರೆ‌.

ಕೇಂದ್ರ ಮತ್ತು ರಾಜ್ಯಗಳಲ್ಲಿ ಸಂವಿಧಾ‌ನಕ್ಕೆ ವಿರುದ್ಧವಿರುವ ಜನರೂ ಅಧಿಕಾರಕ್ಕೆ ಬಂದಿದ್ದಾರೆ. ಅವರು ಅಧಿಕಾರದಲ್ಲಿದ್ದುಕೊಂಡೇ ಸಂವಿಧಾನದ ವಿರುದ್ಧ ಮಾತಾಡ್ತಾರೆ. ಅನಂತಕುಮಾರ್ ಹೆಗಡೆಯಂತಹ ಒಬ್ಬ ಕೇಂದ್ರ ಸಚಿವ ನಾವು ಬಂದಿರುವುದೇ ಸಂವಿಧಾನ ಬದಲಿಸಲು ಎಂದಾಗ ಅಮಿತ್ ಶಾ ಆಗಲೀ, ನರೇಂದ್ರ ಮೋದಿ ಆಗಲೀ ಆ ವ್ಯಕ್ತಿಯನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಿಲ್ಲ. ಅವರಿಗೆ ಗೊತ್ತಿದ್ದೇ ಹಾಗೆ ಮಾಡಲು ಅವಕಾಶ ಕೊಟ್ಟು ಸುಮ್ಮನಾದರು. ಆದರೆ ನಾವು ಸುಮ್ಮನಿರುವುದಿಲ್ಲ. ಈ ಸಂವಿಧಾನ ಉಳಿಯಲೇ ಬೇಕು. ನೀವೆಲ್ಲಾ ಪ್ರತಿಜ್ಞೆ ಮಾಡಿ ಯಾರು ಸಂವಿಧಾನ ಬದಲಾವಣೆ ಮಾಡುತ್ತೇವೆಂದರೋ ಅವರನ್ನೇ ಬದಲಾವಣೆ ಮಾಡಿದ್ದೀರಿ. ನಿಮಗೆ ಧನ್ಯವಾದಗಳು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಎಲ್ಲಾ ಮಾಡಿದೆ ಎಂದು ನಾನು ಹೇಳಲ್ಲ. ಆದರೆ ಕಾಂಗ್ರೆಸ್ ಪಕ್ಷ ಯಾವತ್ತೂ ಸಂವಿಧಾನಕ್ಕೆ ವಿರುದ್ಧ ಹೋಗಲ್ಲ. ಕೋಮುವಾದಿಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗೆಯೇ ಇಂದಿಗೂ ಅಸಮಾನತೆ ದೇಶದಲ್ಲಿದೆ. ನವೆಂಬರ್ 25 ರ 1949 ರಂದು ಅಂಬೇಡ್ಕರ್ ಸಂವಿಧಾನಸಭೆಯಲ್ಲಿ ಐತಿಹಾಸಿಕ ಭಾಷಣ ಮಾಡಿದ್ದಾರೆ. ಅದನ್ನು ಎಲ್ಲರೂ ಓದಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆ ಭಾಷಣದಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು, ನಾವೇನೋ ಒಳ್ಳೆಯ ಸಂವಿಧಾನ ಮಾಡಿದ್ದೇವೆ. ಆದರೆ ಅದನ್ನು ಯಾರು ಜಾರಿ ಮಾಡುತ್ತಾರೆ ಅವರು ಒಳ್ಳೆಯವರಾಗಿದ್ದರೆ ಮಾತ್ರ ಒಳ್ಳೆಯದಾಗುತ್ತದೆ. ಅಕಸ್ಮಾತ್‌ ಸಂವಿಧಾನ ದುಷ್ಟರ ಮೂಲಕ ಜಾರಿಯಾದರೆ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆಟ. ಅಂಬೇಡ್ಕರ್‌ ಅವರು ಸಂವಿಧಾನ ಜಾರಿಯಾಗುವ ಮೂಲಕ ಭಾರತೀಯರು ವೈರುಧ್ಯದ ಯುಗಕ್ಕೆ ಕಾಲಿಟ್ಟಿದ್ದೇವೆಂದೂ, ಶತಶತಮಾನಗಳ ಕಾಲ ಸಮಾಜವನ್ನು ಆಳಿರುವ ಮನುಸ್ಮೃತಿ ಪ್ರಣೀತ ಅಸಮಾನತೆ ಸಮಾಜದಲ್ಲಿದೆ, ಆದರೆ ನಮ್ಮ ಸಂವಿಧಾನ ರಾಜಕೀಯ ಸಮಾನತೆ ಹೇಳುತ್ತದೆ. ಈ ವೈರುಧ್ಯ ನೀಗಿಕೊಳ್ಳದೇ ಇದ್ದರೆ, ಸಮಾಜದಲ್ಲಿ ಇರುವ ಅನ್ಯಾಯ ಸರಿಪಡಿಸದೇ ಹೋದರೆ ನಾವು ಶ್ರಮವಹಿಸಿ ಕಟ್ಟಿರುವ ಈ ಸೌಧವನ್ನೇ ದಮನಿತರು ಧ್ವಂಸ ಮಾಡುತ್ತಾರೆ. ಹಾಗಾಗಿ ಆದಷ್ಟು ಬೇಗನೇ ಈ ಸಾಮಾಜಿಕ ಅಸಮಾನತೆ ತೊಡೆದು ಹಾಕಬೇಕುಟ ಎಂದು ಎಚ್ಚರಿಕೆ ನೀಡಿದ್ದನ್ನು ನಾವು ಯಾರೂ ಮರೆಯಬಾರದು ಎಂದು ಸಿದ್ದರಾಮಯ್ಯ ತಿಳಿಸಿದರು.

ನಮ್ಮ ದೇಶದ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಅಲ್ಲಿ ಚಲನೆ ಬೇಕು ಎಂದರೆ ಸಾಮಾಜಿಕ ಆರ್ಥಿಕ ಶಕ್ತಿ ಬರಬೇಕು. ಇದನ್ನು ಬಾಬಾಸಾಹೇಬ್ ಅಂಬೇಡ್ಕರ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಒಬ್ಬ ವ್ಯಕ್ತಿ- ಒಂದು ಓಟು ತತ್ವದ ರಾಜಕೀಯ ಸಮಾನತೆ ಇದೆ. ಆದರೆ ಒಬ್ಬ ವ್ಯಕ್ತಿ, ಒಂದು ಮೌಲ್ಯ ಆಗಬೇಕಂದರೆ ಸಾಮಾಜಿಕ, ರಾಜಕೀಯ ಪ್ರಜಾಪ್ರಭುತ್ವ ಜಾರಿಯಾಗಬೇಕು. ಇದು ಅಂಬೇಡ್ಕರ್ ಕಾಳಜಿಯಾಗಿತ್ತು.

ಮನುಸ್ಮೃತಿಯ ಬದಲಾವಣೆಯೇ ಸಮಾನತೆಯ ಸಂವಿಧಾನವಾಗಿದೆ. ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟಿರುವುದು ಬಿಜೆಪಿ. ಬಿಜೆಪಿ ಸೇರಿದವರು ಅಂಬೇಡ್ಕರ್ ಸಿದ್ದಾಂತ ಪ್ರತಿಪಾದಿಸುವುದಿಲ್ಲ. ಆರ್‌ ಎಸ್‌ ಎಸ್‌ ನ ಸರಸಂಘಚಾಲಕ ಮಾ.ಸ.ಗೋಲ್ವಾಲ್ಕರ್‌, ಹಿಂದೂ ಮಹಾಸಭಾದ ಅಧ್ಯಕ್ಷ ಸಾವರ್ಕರ್‌ ಇಬ್ಬರೂ ಅಂಬೇಢ್ಕರ್‌ ಬರೆದ ಸಂವಿಧಾನವನ್ನು ತಿರಸ್ಕರಿಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಆರೆಸ್ಸೆಸ್‌ ತನ್ನ ಪತ್ರಿಕೆ ಆರ್ಗನೈಸರ್‌ ನಲ್ಲಿ ಸಂವಿಧಾನವನ್ನು ತಿರಸ್ಕರಿಸುವ ಲೇಖನಗಳನ್ನು ಪ್ರಕಟಿಸಿತ್ತು. ಇಂದು ಕೆಲವರು ಬಿಜೆಪಿ ಪಕ್ಷವನ್ನು ಹುದ್ದೆಗಳಿಗಾಗಿ ಸೇರಿಕೊಳ್ಳುತ್ತಾರೆ. ಅವರೂ ಕೂಡ ಸಂವಿಧಾನ ವಿರೋಧಿಗಳು ಎಂದು ತೀರ್ಮಾನ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಲಿತ ಸಂಘರ್ಷ ಸಮಿತಿ ನೀಡಿರುವ ಎಲ್ಲಾ ಬೇಡಿಕೆಗಳಿಗೆ ನಮ್ಮ ಒಪ್ಪಿಗೆ ಇದೆ. ಅಗತ್ಯ ಇರುವ ಕಾಯ್ದೆಗಳನ್ನು ತರೋಣ. ಜಾರಿಯಲ್ಲಿರುವ ಕೆಲವು ಕಾಯ್ದೆ ಕಾನೂನುಗಳಿಗೆ ನೀವು ಹೇಳಿದ ಬದಲಾವಣೆಗಳನ್ನು ತರೋಣ ಎಂದು ಸಿದ್ದರಾಮಯ್ಯ ಭರವಸೆ ನೀಡದರು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖಿಸಿದ ಅವರು ಕೆಲವರು ಇದನ್ನೇ ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ. ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಮೇಲೆ 10% ಸೇರಿಸಿ ನೀಡುವುದರಲ್ಲಿ ತಪ್ಪೇನಿದೆ? ಗೃಹಲಕ್ಷ್ಮಿ ಯೋಜನೆ ಜನಸಂಖ್ಯೆಯ 85% ಕುಟುಂಬಗಳಿಗೆ ಅನ್ವಯವಾಗುತ್ತದೆ. 10 KG ಅಕ್ಕಿ ಬಡವರಿಗೆ ಅನುಕೂಲವಾಗುತ್ತದೆ. ಇಂದಿರಾ ಕ್ಯಾಂಟೀನ್ ಕೂಡಾ ಮತ್ತೆ ಶುರು ಮಾಡುತ್ತೇವೆ. ಇವೆಲ್ಲವೂ ಬಡವರಿಗೆ ಅನುಕೂಲ ಆಗುವಂತದ್ದು. ಇದಕ್ಕೆ ಬಿಜೆಪಿ ಅಪಸ್ವರ ಎತ್ತಿದೆ. ಆ ಮೂಲಕ ಬಿಜೆಪಿ ಬಡವರ ವಿರೋಧಿ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು