Saturday, June 15, 2024

ಸತ್ಯ | ನ್ಯಾಯ |ಧರ್ಮ

ಭಾರತದಲ್ಲಿ ಲೈಂಗಿಕ ಕಿರುಕುಳಕ್ಕೆ ಕೊನೆ ಯಾವಾಗ…?

ಭಾರತದ ಕುಸ್ತಿ ಪ್ರಿಯರಷ್ಟೇ ಅಲ್ಲದೆ ನೆರೆದೇಶಗಳ ಕುಸ್ತಿ ಪ್ರಿಯರು ಭಾರತದ ಕುಸ್ತಿಪಟುಗಳತ್ತ ನೋಡುತ್ತಿರುವ ಘಳಿಗೆಯೊಂದು ಉದ್ಭವವಾಗಿತ್ತು. ಆದರೆ, ಭಾರತದ ಕೀರ್ತಿ ಹೆಚ್ಚಿಸಿದ ಮಹಿಳೆಯರಿಗೆ  ಭಾರತ  ನೀಡಿದ ಗೌರವವೇನು? ಲೈಂಗಿಕ ದೌರ್ಜನ್ಯ ಮತ್ತು ಬೀದಿಯಲ್ಲಿ ಧರಣಿಯೇ? – ಭೀಮಣ್ಣ ಹತ್ತಿಕುಣಿ, ಪತ್ರಿಕೋದ್ಯಮ ವಿದ್ಯಾರ್ಥಿ

ಸಾವಿರಾರು ವರ್ಷಗಳಿಂದ ಹೆಣ್ಣು ಮಕ್ಕಳನ್ನು ಪುರುಷ ಪ್ರಧಾನ ವ್ಯವಸ್ಥೆ ತುಳಿಯುತ್ತ ಬಂದಿದೆ. ಹೆಣ್ಣು ಎಂದರೆ ಪೂಜೆ ಮಾಡುವ ದೇವತೆ, ತ್ಯಾಗಮಯಿ, ಸಹನೆ, ಹೀಗೆ ಒಂದಿಷ್ಟು ಹೇಳಿಕೆಗಳನ್ನ ಅವಳ ಮೇಲೆ ಹೊರಿಸಿ ಧ್ವನಿಯಿಲ್ಲದ ಹಾಗೆ ಮಾಡಿರುವ ಸಂಸ್ಕೃತಿ ನಮ್ಮದು. ಹೆಣ್ಣು ಶತಮಾನಗಳಿಂದ ಅಡುಗೆ ಮನೆಗೆ ಮಾತ್ರ ಸೀಮಿತವಾದವಳು. ಸತತವಾಗಿ 24ಗಂಟೆಗಳ ಕಾಲ ಹೆಣ್ಣು ಮನೆಯ ಒಳಗೆ ಇರಬೇಕು. ಅವಳು ತೊಡುವ ಬಟ್ಟೆಯಿಂದ ತಿನ್ನುವ ಆಹಾರದವರೆಗೂ ಒಬ್ಬ ಗಂಡಸು ನಿರ್ಧರಿಸುತ್ತಾನೆ ಎಂದರೆ ಹೆಣ್ಣು ಮಕ್ಕಳು ಎಷ್ಟು ತುಳಿತಕ್ಕೆ ಒಳಪಟ್ಟಿದ್ದಾರೆ ಎಂಬುದು ಬಹು ಶೋಚನೀಯ.

ದಶಕಗಳಿಂದ ಹೆಣ್ಣು ಒಂದು ಗಂಡಿನ ಅಡಿಯಾಳಾಗಿ ಬದುಕುತ್ತಿದ್ದಾಳೆ. ಅವಳಿಗೆ ಅವಳದೇ ಆದ ಆಸೆ, ಆಕಾಂಕ್ಷೆಗಳಿದ್ದರು ಎಲ್ಲವನ್ನೂ ಪಕ್ಕಕ್ಕೆ ಸರಿಸಿ ಈ ಪುರುಷ ಪ್ರಧಾನ ಸಮಾಜ ಹೇಳಿದ ಹಾಗೆ ಕೇಳುತ್ತಿದ್ದಾಳೆ. ನಗರಗಳಲ್ಲಿ ಸ್ವಲ್ಪ ಸುಧಾರಣೆಗೆ ಬಂದಿದೆ. ಆದರೆ ಹಳ್ಳಿಗಳಲ್ಲಿ ಇನ್ನೂ ಗಂಡಿನ ಅಡಿಯಾಳೆ. ಮನು ತನ್ನ ಪುಸ್ತಕವಾದ ಮನುಸ್ಮೃತಿಯಲ್ಲಿ ಹೆಣ್ಣಿನ ಬಗ್ಗೆ ಹಲವು ನಿರ್ಬಂಧಗಳನ್ನು  ಹೇರಿದ್ದ. ಅವುಗಳಲ್ಲಿ ಹಲವು ಆಚರಣೆಯಲ್ಲಿ ಇದ್ದವು.  ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನೆಲ್ಲ ಹೊಡೆದಾಕಿ ಗಂಡಿನಷ್ಟೇ ಹೆಣ್ಣಿಗೂ ಬದುಕುವ ಹಕ್ಕಿದೆ ಎಂದು ಹೋರಾಟ ಮಾಡಿದ ಹಲವು ವೀರ ಮಹಿಳೆಯರನ್ನ ಕಂಡಿದ್ದೇವೆ.

ಇತ್ತೀಚೆಗೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಗಂಡಿನಷ್ಟೇ ಸಮನಾಗಿ ಬದುಕುವ ಬಲವಿದೆ ಎಂದು ತೋರಿಸಿ ಕೊಳ್ಳುತ್ತಿದ್ದಾರೆ. ಆದರೆ ಈ ಪುರುಷ ಮತ್ತೆ ಮತ್ತೆ ಹೆಣ್ಣುಮಕ್ಕಳಿಗೆ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ಕೊಡುತ್ತಾ ಬಂದಿದ್ದಾನೆ. ಹೌದು ಇತ್ತೀಚೆಗೆ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಪೊಗಟ್ ಅವರು ಭಾರತಕ್ಕೆ ಪದಕಗಳನ್ನ ತಂದು ಕೊಟ್ಟವರು. ಇವರ ಮೇಲೆಯೆ ಲೈಂಗಿಕ ದೌರ್ಜನ್ಯವಾಗಿದೆ. ದೇಶಕ್ಕೆ ಹೆಮ್ಮೆ ಪಡುವಂತ ವಿಚಾರವೆಂದರೆ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಹಾಕಿ ಕ್ರೀಡೆ ಬಿಟ್ಟರೆ ಅತಿಹೆಚ್ಚು ಪದಕಗಳನ್ನು ತಂದು ಕೊಟ್ಟ ಶ್ರೇಯ ಕುಸ್ತಿಪಟುಗಳಿಗೆ ಸೇರಬೇಕು. ಎರಡು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಭಾರತಕ್ಕೆ ಇವರು ತಂದು ಕೊಟ್ಟಿದ್ದಾರೆ. ಇದರಲ್ಲಿ ಮಹಿಳೆಯರ ವಿಭಾಗದಲ್ಲಿ ಒಂದು ಕಂಚು ಇದೆ. ಭಾರತಕ್ಕೆ ಪದಕಗಳನ್ನು ತಂದು ಭಾರತದ ಕೀರ್ತಿಯನ್ನು  ಹೆಚ್ಚಿಸಿದ ಕುಸ್ತಿಪಟುಗಳ ಮೇಲೆ  ಲೈಂಗಿಕ ದೌರ್ಜನ್ಯವಾಗಿದೆ. ಇದರ ವಿರುದ್ಧ ಧ್ವನಿಯೆತ್ತಿದ ಪಟುಗಳು ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿಗೆ ಕುಳಿತಿದ್ದಾರೆ.

 ದೆಹಲಿಯಲ್ಲಿ ಹಗಲು ರಾತ್ರಿಯೆನ್ನದೆ ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೆ ಕುಸ್ತಿಪಟುಗಳು ಬೀದಿಗಿಳಿದು ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಇದುವರೆಗೂ ನ್ಯಾಯ ಸಿಗಲಿಲ್ಲವೆನ್ನುವುದು ಬೇಸರದ ಸಂಗತಿ. ಭಾರತದ ಕುಸ್ತಿ ಪ್ರಿಯರಷ್ಟೇ ಅಲ್ಲದೆ ನೆರೆದೇಶಗಳ ಕುಸ್ತಿ ಪ್ರಿಯರು ಭಾರತದ ಕುಸ್ತಿಪಟುಗಳತ್ತ ನೋಡುತ್ತಿರುವ ಘಳಿಗೆಯೊಂದು ಉದ್ಭವವಾಗಿತ್ತು. ಆದರೆ, ಭಾರತದ ಕೀರ್ತಿ ಹೆಚ್ಚಿಸಿದ ಮಹಿಳೆಯರಿಗೆ  ಭಾರತ  ನೀಡಿದ ಗೌರವವೇನು? ಲೈಂಗಿಕ ದೌರ್ಜನ್ಯ ಮತ್ತು ಬೀದಿಯಲ್ಲಿ ಧರಣಿಯೇ?

 ಕೆಲ ತಿಂಗಳಿಂದ ಭಾರತದ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ವಿನೇಶ್ ಮತ್ತು ಕೆಲ ಮಹಿಳೆಯರು ಆರೋಪಿಸಿದ್ದರು. ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಹಲವು ಆರೋಪಗಳನ್ನು ಬಹಿರಂಗ ಪಡಿಸಿದ್ದರು. ಕೇವಲ ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಅಷ್ಟೇ ಅಲ್ಲದೆ ಬಜರಂಗ್ ಪೂನಿಯ ಜೊತೆಯಲ್ಲಿ ಹಲವರು ದೂರಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಬೇಜವಾಬ್ದಾರಿ ತೋರಿಸಿರುವುದು ಖಂಡನಿಯ.  ಬ್ರಿಜ್ ಭೂಷಣ್ ಸಿಂಗ್ ಅವರು ಉತ್ತರ ಪ್ರದೇಶದವರು. ಹಾಗೂ ಭಾರತೀಯ ಜನತಾ ಪಕ್ಷದ ಸಂಸದರು. ಇವರು ಆರು ಸಲ ಸಂಸದರಾಗಿದ್ದರು. ಇವರ ಮೇಲೆ ಯಾವುದೇ ಕ್ರಮ ಜರುಗಲಿಲ್ಲ. ಬ್ರಿಜ್ ಭೂಷಣ್ ಅವರು ಒಬ್ಬ ಪ್ರಭಾವಿಯಾಗಿದ್ದಾರೆ ಮತ್ತು ಅವರ ಮೇಲೆ ಕ್ರಮ ಕೈಗೊಂಡರೆ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಅವಮಾನ ಆಗುವುದು ಎಂಬ ಕಾರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲವೆಂದು ಕಾಣುತ್ತದೆ.

ಬ್ರಿಜ್ ಭೂಷಣ್ ಮೇಲೆ ಆರೋಪ ಕೇಳಿಬಂದಾಗ  ಕೇಂದ್ರ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಬದಲಾಗಿ ಮಾನ್ಯ ಪ್ರಧಾನಿಯವರು ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಹಿಳೆಯರ ಸುರಕ್ಷತೆಗಿಂತಲೂ ಇವರಿಗೆ  ಚುನಾವಣಾ ಪ್ರಚಾರವೇ ಮುಖ್ಯವಾಯಿತೇ? “ಬೇಟಿ ಬಚಾವೋ, ಬೇಟಿ ಪಡಾವೋ” ಕೇವಲ ಹೇಳುವುದು ಅಲ್ಲ ನುಡಿದಂತೆ ನಡೆಯಬೇಕಾಗಿದೆ. ಕಾಮನ್ ವೇಲ್ತ್ ಕ್ರೀಡಾಕೂಟದ ಪದಕ ವಿಜೇತರಾದ ವಿನೇಶ್ ಪೋಗಟ್, ರಿಯಾ ಒಲಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಟೋಕಿಯೋ ಒಲಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪೂನಿಯಾ, ರವಿ ದಹಿಯಾ, ಮಹಿಳಾ ಕುಸ್ತಿಪಟುಗಳಾದ ಬಬಿತಾ ಪೋಗಟ್, ಅಂಶು  ಮಲಿಕ್ ಸೇರಿದಂತೆ ಹಲವಾರು ಕುಸ್ತಿಪಟುಗಳು ಒಟ್ಟು ಸೇರಿ ಲೈಂಗಿಕ ದೌರ್ಜನ್ಯವನ್ನು  ಖಂಡಿಸಿ ಜೊತೆಗೂಡಿದರು. ಇದು ಇಡೀ ಭಾರತಕ್ಕೆ ನಾಚಿಕೆಯಾಗುವಂತಹ ವಿಷಯವಾಗಿದೆ. ದೇಶದ ಗೌರವಕ್ಕೆ ಧಕ್ಕೆಯಾಯಿತು ಎಂದು ಗೊತ್ತಿದ್ದರೂ ಕೇಂದ್ರ ತಕ್ಷಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ದೇಶ ತಲೆ ತಗ್ಗಿಸುವಂತೆ ಮಾಡಿದೆ.

ಕೊನೆಗೂ ಕುಸ್ತಿ ಪಟುಗಳಿಗೆ ಮಣಿದ ಕೇಂದ್ರ  ಕ್ರೀಡಾ ಇಲಾಖೆಯು ತನಿಖಾ ಸಮಿತಿಯೊಂದನ್ನು ರಚಿಸಿತು.  ಪಿ. ಟಿ. ಉಷಾ ಅವರ ನೇತೃತ್ವದಲ್ಲಿ ಭಾರತ ಒಲಂಪಿಕ್ಸ್ ಸಂಸ್ಥೆಯು ಏಳು ಜನರ ತನಿಖಾ ಸಮಿತಿಯನ್ನು ರಚಿಸಿದ್ದು ಮತ್ತೊಂದು ಸಮಿತಿ ರಚನೆಗೆ ಕ್ರೀಡಾ ಇಲಾಖೆ ಮುಂದಾಗಿದೆ. ಕುಸ್ತಿ ಪಟುಗಳು ಈಗಾಗಲೇ ಹೇಳಿದ್ದಾರೆ ನಮ್ಮಲ್ಲಿ ಎಲ್ಲಾ ಸಾಕ್ಷಾಧಾರಗಳು ಇವೆ ಎಂದು. ಆದರೂ ಕ್ರಮ ಜರುಗಿಸದೆ ಪ್ರತಿಭಟನೆಯನ್ನು ವಾಪಸ್ ಪಡೆಯುವಂತೆ ಕ್ರೀಡಾ ಸಚಿವ ಅನುರಾಗ ಠಾಕೂರ್ ಕುಸ್ತಿಪಟುಗಳಿಗೆ ಮನವೊಲಿಸಲು ಮುಂದಾಗಿದ್ದಾರೆ ಎಂದರೆ ಇದರ ಹಿಂದೆ ಹಲವು ಗಣ್ಯರು ಎನಿಸಿಕೊಳ್ಳುವವರ ಕೈವಾಡವಿದೆ ಎಂದು ಸಂಶಯ ಬರುವುದು ಸತ್ಯ.

ಇದು ಕೇವಲ ಕುಸ್ತಿ ಪಟುಗಳ ಮೇಲೆ ಆಗುತ್ತಿರುವ ದೌರ್ಜನ್ಯವಷ್ಟೇ ಅಲ್ಲ, ಇತರ ಹಲವು ಕ್ಷೇತ್ರಗಳಲ್ಲಿ ತೊಡಗಿರುವ ಮಹಿಳೆಯರು ಅಂದರೆ ಸಿನಿಮಾ ರಂಗ ಮತ್ತು ಖಾಸಗಿ ಕಂಪನಿಗಳು, ಸರ್ಕಾರಿ ಕಚೇರಿಗಳಲ್ಲಿ ಕೆಲಸಮಾಡುವ ಮಹಿಳೆಯರು ಲೈಂಗಿಕ ಕಿರುಕುಳ ಸಹಿಸಿಕೊಂಡು ಬದುಕುತ್ತಿದ್ದಾರೆ. ಪ್ರಭಾವಿಗಳ ವಿರುದ್ಧ ಧ್ವನಿಯೆತ್ತಲು ಆಗದೆ ಅಸಹಾಯಕರಾಗಿ ಸಹಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಕೊನೆ ಯಾವಾಗ ಎಂಬುದು ಪ್ರತಿ ಹೆಣ್ಣು ಮಕ್ಕಳ ಒಳಧ್ವನಿಯಾಗಿದೆ. ಇತ್ತೀಚೆಗೆ ಮಠಾಧೀಶರೊಬ್ಬರು ವಿದ್ಯಾರ್ಥಿಗಳ  ಮೇಲೆ ದೌರ್ಜನ್ಯ ಎಸಗಿರುವ ಕೃತ್ಯ ಕಂಡಿದ್ದೇವೆ. ಹೀಗಾದರೆ ಮಹಿಳೆಯರು ಸಮಾಜದಲ್ಲಿ ಬದುಕುವುದಾದರೂ ಹೇಗೆ? ಇಂತಹ  ನೀಚ ಕೆಲಸ ಮಾಡುವವರ  ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕು. ಆಗ ಬೇರೆ ಹೆಣ್ಣು ಮಕ್ಕಳಿಗೆ ನಮ್ಮೊಂದಿಗೆ ಕಾನೂನು, ಸಂವಿಧಾನ, ಮತ್ತು ಸರ್ಕಾರವಿದೆ ಎಂದು ಧೈರ್ಯಬರಲಿದೆ

ಭೀಮಣ್ಣ ಹತ್ತಿಕುಣಿ, ಯಾದಗಿರಿ

ಪತ್ರಿಕೋದ್ಯಮ ವಿದ್ಯಾರ್ಥಿ

ಇದನ್ನೂ ಓದಿ-ಮಹಿಳಾ ಕುಸ್ತಿ ಪಟುಗಳ ಹೋರಾಟ | ಇದೆಂಥಾ ಕ್ರೌರ್ಯ?!

Related Articles

ಇತ್ತೀಚಿನ ಸುದ್ದಿಗಳು