Sunday, June 16, 2024

ಸತ್ಯ | ನ್ಯಾಯ |ಧರ್ಮ

ತೀರ್ಥಹಳ್ಳಿ ABVP ಮುಖ್ಯಸ್ಥನ ಬಂಧನ ; ಪ್ರಕರಣದಲ್ಲಿ ಸಂಘಪರಿವಾರದ ಮೌನದ ಹಿಂದಿನ ಕಾರಣವೇನು?

ಅಶ್ಲೀಲ ವಿಡಿಯೋ ಹರಿಬಿಟ್ಟು ಅಮಾಯಕ ಹೆಣ್ಣು ಮಕ್ಕಳ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ABVP ಘಟಕದ ಮುಖ್ಯಸ್ಥ ಪ್ರತೀಕ್ ಗೌಡ ಬಂಧನವಾಗಿದೆ. ನಿನ್ನೆಯ ದಿನ NSUI ತೀರ್ಥಹಳ್ಳಿ ಘಟಕ ಆತನ ಮೇಲೆ ದೂರು ದಾಖಲಿಸಿದ ಬೆನ್ನಲ್ಲೇ ತೀರ್ಥಹಳ್ಳಿ ಪೊಲೀಸರು ಪ್ರತೀಕ್ ಗೌಡನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪೀಪಲ್ ಟಿವಿ ವಿಸ್ತೃತ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಶನಿವಾರ ಪ್ರತೀಕ್ ಗೌಡನ ಬಂಧನವಾಗಿದೆ. ABVP ಸಂಘಟನೆಯ ಸದಸ್ಯತ್ವ ಮತ್ತು ಸಂಘಟನೆಯಲ್ಲಿನ ಘಟಕಗಳಿಗೆ ಸ್ಥಾನಮಾನ ಕೊಡುವ ಬಗ್ಗೆ ವಿಧ್ಯಾರ್ಥಿನಿಯರಿಗೆ ನಾನಾ ರೀತಿಯಲ್ಲಿ ಆಮಿಷವೊಡ್ಡಿ ಅವರಿಂದ ನಗ್ನ ಚಿತ್ರಗಳನ್ನ ಆರೋಪಿ ಪ್ರತೀಕ್ ಗೌಡ ಚಿತ್ರಿಸಿದ್ದನು. ನಂತರ ವಿಧ್ಯಾರ್ಥಿನಿಯರಿಗೆ ವಿಡಿಯೋ ತೋರಿಸಿ ಹಣ ಮತ್ತು ನಿರಂತರ ಲೈಂಗಿಕ ಕ್ರಿಯೆಗೆ ಬಳಸಿದ್ದ ಎಂದೂ ಆರೋಪಿಸಲಾಗಿದೆ.

ನಂತರ ಈತನ ಬ್ಲಾಕ್ಮೇಲ್ ತಂತ್ರಕ್ಕೆ ಮಣಿಯದೇ ಹೋದಾಗ ವಿದ್ಯಾರ್ಥಿನಿಯರ ನಗ್ನ ಚಿತ್ರಗಳನ್ನು ವಾಟ್ಸಾಪ್ ಮೂಲಕ ಹರಿಬಿಟ್ಟು ಹೆಣ್ಣು ಮಕ್ಕಳ ಮಾನಹಾನಿ ಮಾಡಿದ್ದಾನೆ. ಸಧ್ಯ ಆರೋಪಿ ಈಗ ತೀರ್ಥಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ.

ಆತ ನಮ್ಮವನಲ್ಲ ಎಂದ ABVP

ಇನ್ನೊಂದು ಕಡೆ ಈತನ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಈತ ಮುಖ್ಯಸ್ಥನಾಗಿದ್ದ ತೀರ್ಥಹಳ್ಳಿ ABVP ಘಟಕ, ಪ್ರತೀಕ್ ಗೌಡ ನಮ್ಮ ಸಂಘಟನೆಯಲ್ಲೇ ಇಲ್ಲ. ಈತನಿಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಪ್ಪೆ ಸಾರಿಸೋಕೆ ಹೊರಟಿದೆ. ಆದರೆ ಇದು ಸಂಘ ಪರಿವಾರದ ಎಸ್ಕೇಪ್ ಮಾರ್ಗ ಅನ್ನೋ ಸತ್ಯ ಈಗ ಗುಟ್ಟಾಗಿ ಉಳಿದಿಲ್ಲ. ಸಂಘ ಪರಿವಾರದ ಹಿನ್ನೆಲೆಯ ಕಾರ್ಯಕರ್ತರು ಏನೇ ಕಾನೂನು ಬಾಹಿರ ಚಟುವಟಿಕೆ ನಡೆಸಿದರೂ ಪರಿವಾರ ಇದೇ ರೀತಿಯ ಮಾರ್ಗ ಉಪಯೋಗಿಸಿ ತಪ್ಪಿಸಿಕೊಳ್ಳುತ್ತೆ. ಇಲ್ಲಿ ಪ್ರತೀಕ್ ಗೌಡನ ವಿಷಯದಲ್ಲಿ ಆಗಿರೋದೂ ಇದೇ.

ಇದೇ ಪ್ರತೀಕ್ ಗೌಡ ABVP ಸಂಘಟನೆಯ ತಾಲ್ಲೂಕು ಮುಖ್ಯಸ್ಥ ಎಂಬುದು ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲೇ ದಾಖಲಾಗಿದೆ. ಮತ್ತು ಈತ ಗುರುತಿಸಿಕೊಂಡಿರುವ ಸಂಘಟನೆ ಹಿನ್ನಲೆಯ ಪ್ರತಿಯೊಬ್ಬರೂ ಹೇಳುವ ಮಾತು. ಕೇವಲ ಎರಡು ತಿಂಗಳ ಹಿಂದೆ ನಡೆದ ABVP ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ವೇದಿಕೆಯನ್ನೇ ಹಂಚಿಕೊಂಡ ಫೋಟೋಗಳೇ ಈತ ಆ ಸಂಘಟನೆ ಪದಾಧಿಕಾರಿ ಎಂಬುದಕ್ಕೆ ಸಾಕ್ಷ್ಯ ಒದಗಿಸುತ್ತಿದೆ.

ಇನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈತ ತೀರ್ಥಹಳ್ಳಿಯಲ್ಲಿ ಹಿಜಾಬ್ ಘಟನೆಯ ನೇತೃತ್ವ ಕೂಡಾ ವಹಿಸಿದ್ದ. ಅದೂ ABVP ಸಂಘಟನೆಯ ಅಡಿಯಲ್ಲೇ ನಡೆದ ಗಲಭೆಗಳಲ್ಲಿ ಪ್ರತೀಕ್ ಗೌಡ ಮುಂಚೂಣಿ ಜವಾಬ್ದಾರಿ ವಹಿಸಿದ್ದ ಎಂಬ ಮಾಹಿತಿಗಳೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸಂಘ ಪರಿವಾರದ ಮೌನವೇಕೆ?

‘ಒಂದು ಕಡೆ ಸಂಘ ಪರಿವಾರ ತನ್ನ ಅಂಗಸಂಸ್ಥೆಗಳ ಮೂಲಕ ಹಿಜಾಬ್, ಲವ್ ಜಿಹಾದ್ ನಂತಹ ಅನಗತ್ಯ ವಿಚಾರಗಳನ್ನು ಇಟ್ಟು ಹಿಂದೂ ಹೆಣ್ಣು ಮಕ್ಕಳಿಗೆ ಉಳಿಗಾಲವಿಲ್ಲ ಅನ್ನೋದು. ಇನ್ನೊಂದು ಕಡೆ ಅವರದೇ ಸಂಘಟನೆಯ ಪದಾಧಿಕಾರಿಗಳು ಈ ರೀತಿಯಲ್ಲಿ ಹಿಂದೂ ಹೆಣ್ಣು ಮಕ್ಕಳನ್ನೇ ಅಶ್ಲೀಲ ಕೃತ್ಯಗಳಿಗೆ ಬಳಸಿಕೊಳ್ಳೋದು. ಹಾಗಾದರೆ ಹಿಂದೂ ಹೆಣ್ಣು ಮಕ್ಕಳು ಅಪಾಯದಲ್ಲಿ ಇರೋದು ಯಾರಿಂದ? ಹಿಂದೂವಾಗಿ ಹಿಂದೂ ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದಾ? ಇಲ್ಲಿ ಮಾನಹಾನಿ ಆಗಿದ್ದು ಒಬ್ಬ ಹಿಂದೂ ಯುವಕನಿಂದ‌. ಮೇಲಾಗಿ ಸಂಘ ಪರಿವಾರದ ಹಿನ್ನೆಲೆಯ ವ್ಯಕ್ತಿಯಿಂದ ಅನ್ನೋದು ಗಮನಾರ್ಹ.

ಹಿಂದೆ ಇದೇ ತೀರ್ಥಹಳ್ಳಿಯಲ್ಲಿ ನಂದಿತಾ ಎಂಬ ವಿದ್ಯಾರ್ಥಿನಿಯ ಸಾವಿನ ನಂತರ ಬಿಜೆಪಿ ಪಕ್ಷ ಇಡೀ ತೀರ್ಥಹಳ್ಳಿ ಹೊತ್ತಿ ಉರಿಯುವಂತಹ ಪ್ರತಿಭಟನೆ ಮಾಡಿತ್ತು. ಲಕ್ಷಾಂತರ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿತ್ತು. ಸತ್ಯಾಸತ್ಯತೆಯ ಅರಿವಿಲ್ಲದೆ ನೂರಾರು ಅಮಾಯಕ ಯುವಜನರನ್ನು ಅಡ್ಡದಾರಿಗೆ ತಗೆದುಕೊಂಡು ಹೋಗಿ, ಅವರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿತ್ತು. ರಾಜ್ಯದ ಮೂಲೆ ಮೂಲೆಗಳಲ್ಲಿ ನಂದಿತಾ ಸಾವಿನ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿತ್ತು. ಪ್ರಕರಣದ ತೀರ್ಪು ಹೊರಬರಲೂ ಅವಕಾಶ ಕೊಡದೇ ತೀರ್ಥಹಳ್ಳಿಯಲ್ಲಿ ಹಿಂದೆಂದೂ ಕಾಣದಂತಹ ಗಲಭೆ ಎಬ್ಬಿಸಿತ್ತು ಸಂಘ ಪರಿವಾರ.

ಆದರೆ ABVP ಮುಖ್ಯಸ್ಥ ಪ್ರತೀಕ್ ಗೌಡನ ಪ್ರಕರಣದಲ್ಲಿ ಈ ವರೆಗೂ ಯಾವೊಬ್ಬ ಸಂಘ ಪರಿವಾರದ ಮುಖಂಡನಾಗಲಿ, ಬಿಜೆಪಿ ನಾಯಕರಾಗಲಿ ಆ ಹೆಣ್ಣು ಮಕ್ಕಳಿಗಾದ ಅನ್ಯಾಯದ ವಿರುದ್ಧ ದನಿಗೂಡಿಸದೇ ಇರೋದು ಹಿಂದೂ ಹೆಣ್ಣು ಮಕ್ಕಳ ಮೇಲಿನ ಇವರ ಕಾಳಜಿ ಕೇವಲ ಬೂಟಾಟಿಕೆ ಎಂಬುದನ್ನು ತೋರಿಸುತ್ತಿದೆ. ಹೀಗೆಂದು ಸ್ಥಳೀಯ ಪ್ರಜ್ಞಾವಂತರು ಮಾತಾಡಿಕೊಳ್ಳುತ್ತಿದ್ದಾರೆ.

ಏನೇ ಆಗಲಿ ತೀರ್ಥಹಳ್ಳಿ ABVP ಮುಖ್ಯಸ್ಥ ಪ್ರತೀಕ್ ಗೌಡನ ಬಂಧನವಾಗಿದೆ. ಆರೋಪ ಸಾಭೀತಾಗಿ ತಕ್ಕ ಶಿಕ್ಷೆ ಆಗಲಿದೆ ಎಂಬ ಭರವಸೆ ಕೂಡಾ ಇದೆ. ಇನ್ನೂ ಸ್ವಲ್ಪ ಧೈರ್ಯ ಮಾಡಿ ಅನ್ಯಾಯಕ್ಕೆ ಒಳಗಾದ ಹೆಣ್ಣು ಮಕ್ಕಳು ಆತನ ಮೇಲೆ ದೂರು ದಾಖಲಿಸಿದರೆ ಮುಂದೆ ಇಂತಹ ತಪ್ಪು ಮಾಡುವವರು ನೂರು ಬಾರಿ ಯೋಚಿಸುವಂತಾಗಬೇಕು. ಅಮಾಯಕ ಹೆಣ್ಣು ಮಕ್ಕಳು ಅನ್ಯಾಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

Related Articles

ಇತ್ತೀಚಿನ ಸುದ್ದಿಗಳು