Tuesday, June 18, 2024

ಸತ್ಯ | ನ್ಯಾಯ |ಧರ್ಮ

ಚಿನ್ನದ ಬದಲಿಗೆ ಹಿತ್ತಾಳೆ ಹೊದಿಕೆ ; ಕೇದಾರನಾಥದಲ್ಲಿ 125 ಕೋಟಿ ಅವ್ಯವಹಾರದ ಆರೋಪ

ಉದ್ಯಮಿಯೊಬ್ಬರು ದೊಡ್ಡ ಪ್ರಮಾಣದ ದೇಣಿಗೆ ಅಡಿಯಲ್ಲಿ ಕೇದಾರನಾಥ ದೇವಸ್ಥಾನದ ಗರ್ಭಗುಡಿಗೆ ಚಿನ್ನದ ಹೊದಿಕೆ ಕಾಮಗಾರಿ ನಡೆದಿತ್ತು. ಆದರೆ ಅಲ್ಲಿ ಚಿನ್ನದ ಬದಲು ಹಿತ್ತಾಳೆಯ ಹೊದಿಕೆ ಹೊದಿಸಲಾಗಿದೆ ಎಂಬ ಅಲ್ಲಿನ ಹಿರಿಯ ಅರ್ಚಕರು ಹಾಗೂ ಚಾರ್ ಧಾಮ್ ಮಹಾಪಂಚಾಯತ್ ಉಪಾಧ್ಯಕ್ಷರೂ ಆಗಿರುವ ಸಂತೋಷ್ ತ್ರಿವೇದಿ ಹಗರಣ ನಡೆದ ಬಗ್ಗೆ ಆರೋಪಿಸಿದ್ದಾರೆ.

ಉದ್ಯಮಿಯೊಬ್ಬರು ಕೇದಾರನಾಥ ದೇವಾಲಯಕ್ಕೆ 230 ಕೆಜಿ ಚಿನ್ನವನ್ನು ದೇಣಿಗೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ದೇವಾಲಯದ ಗರ್ಭಗುಡಿಯೊಳಗಿನ ಚಿನ್ನದ ಪದರದ ಕೆಲಸಕ್ಕೆ ಉದ್ಯಮಿ ನೀಡಿದ ಆ ಚಿನ್ನವನ್ನು ಬಳಸಲು ನಿರ್ಧರಿಸಲಾಗಿತ್ತು. ಆದರೆ ಈಗ ಅರ್ಚಕರಾದ ಸಂತೋಷ್ ತ್ರಿವೇದಿ ಆರೋಪಿಸಿದಂತೆ ಚಿನ್ನದ ಲೇಪನ ಈಗ ಹಿತ್ತಾಳೆ ಲೇಪನ ಆಗಿದೆ. ಇದು ಸುಮಾರು 125 ಕೋಟಿ ರೂಪಾಯಿ ಮೌಲ್ಯದ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಆದರೆ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ (BKTC) ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಅರ್ಚಕರ ಈ ಆರೋಪವನ್ನು ನಿರಾಕರಿಸಿದೆ. ಅಂತಹ ಯಾವುದೇ ಅವ್ಯವಹಾರ ನಡೆದೇ ಇಲ್ಲ ಎಂಬಂತೆ ದೇವಾಲಯದ ಆಡಳಿತ ಮಂಡಳಿ ನಿರಾಕರಿಸಿದೆ.

ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ, ಹಿರಿಯ ಅರ್ಚಕ ಸಂತೋಷ್ ತ್ರಿವೇದಿ ಅವರು ಚಿನ್ನದ ಲೇಪನದ ಹೆಸರಿನಲ್ಲಿ ದೇವಾಲಯದ ಗರ್ಭಗುಡಿಯನ್ನು ಹಿತ್ತಾಳೆ ತಟ್ಟೆಗಳಿಂದ ಮುಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತೋಷ್ ತ್ರಿವೇದಿ, ಆಪಾದಿತ ಹಗರಣದಲ್ಲಿ ಭಾಗಿಯಾಗಿರುವವರನ್ನು ಕಾನೂನು ಕ್ರಮಕ್ಕೆ ತರದಿದ್ದರೆ ಆಂದೋಲನ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಬದರಿನಾಥ – ಕೇದಾರನಾಥ ದೇವಾಲಯದ ಸಮಿತಿ ಭಾನುವಾರ ಸಾಮಾಜಿಕ ಮಾಧ್ಯಮದ ಈ ಆಂದೋಲನವನ್ನು ಇದೊಂದು ರಾಜಕೀಯ “ಪಿತೂರಿ” ಎಂದು ಬಣ್ಣಿಸಿದೆ. ಅವರ ನೇತೃತ್ವದಲ್ಲಿ ಸುಧಾರಿತ ಸೌಲಭ್ಯಗಳಿಂದಾಗಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ದಾಖಲೆಯ ಏರಿಕೆಯಾಗಿದೆ. ಇದರಿಂದ ಸಂತೋಷವಾಗದ ಜನ ಈ ರೀತಿಯ ಪಿತೂರಿ ಮಾಡುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ. ಇಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎಂಬುದು ತನಿಖೆಯಿಂದ ಹೊರಬರಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು