Thursday, June 27, 2024

ಸತ್ಯ | ನ್ಯಾಯ |ಧರ್ಮ

ಬೀದಿ ಹೋರಾಟ ಅಂತ್ಯ, ಇನ್ನೇನಿದ್ದರೂ ಕಾನೂನು ಸಮರ : ಕುಸ್ತಿಪಟುಗಳು

ಡಬ್ಲ್ಯುಎಫ್‌ಐ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಪ್ರಕರಣದ ಹೋರಾಟ ಇನ್ನು ನ್ಯಾಯಾಲಯದಲ್ಲಿ ಮುಂದುವರೆಯಲಿದೆ ಎಂದು ಹೋರಾಟ ನಿರತ ಕುಸ್ತಿಪಟುಗಳು ಹೇಳಿದ್ದಾರೆ.

ನಿರಂತರ 5 ತಿಂಗಳ ಬೀದಿ ಹೋರಾಟದ ಬಳಿಕ ಈಗ ಕುಸ್ತಿಪಟುಗಳು ಕಾನೂನು ಸಮರದ ಹಾದಿಯಲ್ಲಿ ಯಶಸ್ವಿಯಾಗಬಹುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದ ಕುಸ್ತಿಪಟುಗಳು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇವರ ಹೋರಾಟಕ್ಕೆ ಭಾರತೀಯ ಕಿಸಾನ್ ಯೂನಿಯನ್ ಸೇರಿದಂತೆ ಹಲವು ಜನಪರ ಸಂಘಟನೆಗಳು ಬೆಂಬಲ ನೀಡಿದ್ದರು.

ವಿನೇಶ್ ಫೋಘಟ್, ಸಾಕ್ಷಿ ಮಲ್ಲಿಕ್, ಬಜರಂಗ್ ಪೂನಿಯಾ ಅವರು ಪ್ರತಿಭಟನೆಯನ್ನು ಅಂತ್ಯಗೊಳಿಸುವುದಾಗಿ ಟ್ವಿಟ್ ಮೂಲಕ ತಿಳಿಸಿದ್ದಾರೆ. ಇನ್ನು ಮುಂದೆ ನಾವು ರಸ್ತೆಯಲ್ಲಿ ಪ್ರತಿಭಟನೆ ನಡೆಸುವುದಿಲ್ಲ. ಆದರೆ ಬ್ರಿಜ್ ಬೂಷಣ್ ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ನಮ್ಮ ಹೋರಾಟ ಮುಂದುವರೆಸುತ್ತೇವೆ, ನಮ್ಮ ಅಭಿಯಾನವನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಸಧ್ಯ ಸರ್ಕಾರ ನೀಡಿದ ಭರವಸೆಯಂತೆ ಭಾರತೀಯ ಕುಸ್ತಿ ಒಕ್ಕೂಟದಲ್ಲಿನ ಬದಲಾವಣೆಗೆ ಮುಂದಾಗಿದೆ. ಅದರ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಆ ನಿಟ್ಟಿನಲ್ಲಿ ಜುಲೈ 11ರಂದು ಚುನಾವಣೆ ನಡೆಯಲಿದೆ ಎಂಬ ಮಾತು ಕೇಳಿ ಬಂದಿದೆ. ನಾವು ಭರವಸೆ ಕಾರ್ಯಗತವಾಗುವ ತನಕ ಕಾಯುತ್ತೇವೆ.’ ಎಂದು ಕುಸ್ತಿಪಟುಗಳು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈಗಾಗಲೇ ಜೂನ್‌ನಲ್ಲಿ ನಡೆಯಬೇಕಿದ್ದ ಚುನಾವಣೆ ಮಹಾರಾಷ್ಟ್ರ, ಹರ್ಯಾಣ, ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸ್ಥಳೀಯ ಕುಸ್ತಿ ಸಂಘಟನೆಗಳ ಚುನಾವಣೆ ಮತ್ತು ಮಾನ್ಯತೆಗೆ ಸಂಬಂಧಿಸಿದ ಗೊಂದಲದಿಂದಾಗಿ ಮುಂದೂಡಲಾಗಿತ್ತು. ಹಾಗಾಗಿ ಕೊಟ್ಟ ಭರವಸೆಯಂತೆ ಜುಲೈ 11 ರಂದು ಚುನಾವಣೆ ನಡೆಯುವ ಮುನ್ಸೂಚನೆಯನ್ನು ಸರ್ಕಾರ ನೀಡಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಈಗಾಗಲೇ ದೆಹಲಿ ಪೊಲೀಸರು ತನಿಖೆ ನಡೆಸಿದ್ದಾರೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ 1500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. 200 ಹೇಳಿಕೆಗಳನ್ನು ದಾಖಲು ಮಾಡಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಜೂನ್ 27ರಿಂದ ಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ನಡೆಯಲಿದೆ.

ಚಾರ್ಜ್‌ ಶೀಟ್‌ನಲ್ಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 354 ( ಹಲ್ಲೆ ಅಥವ ಕ್ರಿಮಿನಲ್ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪಗಳನ್ನು ದಾಖಲು ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು