Monday, June 17, 2024

ಸತ್ಯ | ನ್ಯಾಯ |ಧರ್ಮ

ವ್ಯಕ್ತಿಯ ಮುಖದ ಮೇಲೆ ಉಚ್ಚೆ ಹುಯ್ದ ಪ್ರಕರಣ: ಸಂತ್ರಸ್ಥನ ಕಾಲು ತೊಳೆದ MP CM

ಮಧ್ಯಪ್ರದೇಶದಲ್ಲಿ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ‌ ಪರ್ವೇಶ್ ಶುಕ್ಲಾ ಎಂಬುವವನು ಉಚ್ಚೆ ಹುಯ್ದ ಪ್ರಕರಣವು ದೇಶದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದ್ದು. ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶ ಬಿಜೆಪಿ ಮತ್ತು ಅಲ್ಲಿನ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಘಟನೆಗೆ ಪ್ರತಿಕ್ರಿಯೆಯಾಗಿ ಇತ್ತೀಚೆಗೆ ಉತ್ತರ ಭಾರತದಲ್ಲಿ ಟ್ರೆಂಡ್‌ ಆಗುತ್ತಿರುವ ಬುಲ್ಡೋಜರ್‌ ದಾಳಿಯನ್ನು ಈ ಪರ್ವೇಶ್ ಶುಕ್ಲಾನ ಮನೆಯ ಮೇಲೂ ನಡೆಸಲಾಗಿತ್ತು. ಜೊತೆಗೆ ಆತನ ಮೇಲೆ ಹಲವು ಸೆಕ್ಷನ್ನುಗಳ ಕೇಸನ್ನೂ ದಾಖಲಿಸಲಾಗಿದೆ. ಆದರೆ ಹೆಚ್ಚುತ್ತಿರುವ ಈ ಕುರಿತಾದ ಆಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನದಲ್ಲಿ ಮುಖ್ಯಮಂತ್ರಿಯು ಸಂತ್ರಸ್ಥನನ್ನು ಭೇಟಿಯಾಗಿ ಅವರ ಕಾಲು ತೊಳೆದು ಆಗಿರುವ ದುರಂತಕ್ಕೆ ಕ್ಷಮೆಯನ್ನೂ ಯಾಚಿಸಿದ್ದಾರೆ.

ಈ ಕುರಿತು ಸಂತ್ರಸ್ಥ ದಶಮತ್ ರಾವತ್‌ ಅವರೊಡನೆ ಮಾತನಾಡಿರುವ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು “ಘಟನೆಯ ವಿಡಿಯೋ ನೋಡಿ ನನಗೆ ಬಹಳ ನೋವಾಯಿತು. ಜನರು ನನ್ನ ಪಾಲಿಗೆ ದೇವರಿದ್ದಂತೆ” ಎಂದು ಹೇಳಿದ್ದಾರೆ.

ದರ್ಶನ್‌ ಅವರಿಗೆ ನ್ಯಾಯ ಕೊಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

https://twitter.com/ChouhanShivraj/status/1676820107753066496?s=20

ಈ ನಡುವೆ ಆರೋಪಿ ಶುಕ್ಲಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಮತ್ತು 504 (ಶಾಂತಿ ಕೆಡಿಸಲು ಉದ್ದೇಶಪೂರ್ವಕ ಅವಮಾನ) ಮತ್ತು ಎಸ್ಸಿ / ಎಸ್ಟಿ ಕಾಯ್ದೆ ಸೇರಿದಂತೆ ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾದ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಆಧಾರದ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ಬುಧವಾರ, ಮಧ್ಯಪ್ರದೇಶ ಆಡಳಿತವು ಆರೋಪಿಯ ಕುಟುಂಬದ ಒಡೆತನದ ಮನೆಯ ಒಂದು ಭಾಗವನ್ನು ನೆಲಸಮಗೊಳಿಸಿತು. ನೆಲಸಮ ಕಾರ್ಯಾಚರಣೆಯನ್ನು ಕೈಗೊಳ್ಳಲು ಜೆಸಿಬಿ ಯಂತ್ರದೊಂದಿಗೆ ಅನೇಕ ಅಧಿಕಾರಿಗಳು ಆರೋಪಿಯ ಮನೆಯ ಬಳಿ ಬಂದಿದ್ದರು. ಸಿಧಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ನೀಲಾಂಬರ್ ಮಿಶ್ರಾ ಅವರು ʼಮನೆಯ ಮೂರನೇ ಒಂದು ಭಾಗವನ್ನು ನೆಲಸಮಗೊಳಿಸಲಾಗಿದೆ, ಇದನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತುʼ ಎಂದು ಹೇಳಿದ್ದಾರೆ.

ಈ ಹೇಯ ಕೃತ್ಯವನ್ನು ಖಂಡಿಸಿರುವ ಶಿವರಾಜ್ ಸಿಂಗ್ ಚೌಹಾಣ್, “ಅವನು (ಪರ್ವೇಶ್) ಮಾನವೀಯತೆಗೆ ಕಳಂಕ ತಂದಿದ್ದಾನೆ ಮತ್ತು ಅಮಾನವೀಯ ಕೃತ್ಯ ಎಸಗಿದ್ದಾನೆ. ಇದೊಂದು ಹೇಯ ಅಪರಾಧವಾಗಿದ್ದು, ಇದಕ್ಕಾಗಿ ಕಠಿಣ ಶಿಕ್ಷೆ ಸಹ ಸಾಕಾಗುವುದಿಲ್ಲ, ಆದರೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ನಾನು ಸೂಚನೆಗಳನ್ನು ನೀಡಿದ್ದೇನೆ… ಇದು ಎಲ್ಲರಿಗೂ ನೈತಿಕ ಪಾಠವಾಗಬೇಕು. ನಾವು ಅವನನ್ನು ಬಿಡುವುದಿಲ್ಲ.” ಎಂದು ಹೇಳಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು