Friday, June 14, 2024

ಸತ್ಯ | ನ್ಯಾಯ |ಧರ್ಮ

ಮನುಷ್ಯನ ಮೆದುಳಿಗಂಟಿದ ಜಾತಿ ಕಲೆ ಮಸುಕಾಗಿಲ್ಲ.

ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಶತಮಾನಗಳಿಂದ ದಾರ್ಶನಿಕರು, ನಾಯಕರು ಶ್ರಮವಹಿಸಿದ್ದು, ಅದು ಈಗ ಮೆಲ್ಲಗೆ ಅರಳಿ ಹೂವಾಗುವಂತ ಕಾಲ ನಿರ್ಮಾಣವಾಗುತ್ತಿದೆ. ಆದರೆ ಈ ಜಾತಿ ಎನ್ನುವ ಅಮಲು ಅವುಗಳನ್ನು ಹೊಸಕಿ ಹಾಕಲು ಕಾತರಿಸಿದೆ. ಆ ಸ್ಥಿತಿ ಬದಲಾಗಬೇಕು – ಆಕಾಶ್. ಆರ್.ಎಸ್, ಯುವ ಬರಹಗಾರ

ಶತಮಾನಗಳು ಕಳೆದು ಹೋಗಿವೆ, ಪ್ರಜಾಪ್ರಭುತ್ವದಲ್ಲಿದ್ದೇವೆ. ಎಲ್ಲಾ ದೇಶಕ್ಕೂ ಮಾದರಿಯಾಗುವಂತ ಬೃಹತ್‌ ಸಂವಿಧಾನ ನಮ್ಮ ದೇಶದಲ್ಲಿ ರೂಪಗೊಂಡಿದೆ. ಆದರೂ ಕಾಲದಿಂದ ಕಾಲಕ್ಕೆ ನಡೆಯುತ್ತಿರುವ ಜಾತಿ ಕ್ರೌರ್ಯ ಇನ್ನೂ ನಿಂತಿಲ್ಲ ಎಂಬುದಕ್ಕೆ ಇತ್ತೀಚೆಗೆ  ಕೋಲಾರದಲ್ಲಿ ಜಾತಿ ವಿಚಾರವಾಗಿ ಪರಿಶಿಷ್ಟ ಜಾತಿ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯಿಂದ ಮಗಳ ಹತ್ಯೆ ಹಾಗೂ ರಾಮನಗರದಲ್ಲಿ ಪರಿಶಿಷ್ಟ ಸಮುದಾಯದ ಶಿಕ್ಷಕ ದೇವರ ಆರತಿ ತಟ್ಟೆ ಮುಟ್ಟಿದ್ದಕ್ಕೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆಗಳು ಸಾಕ್ಷಿಯಾಗಿವೆ.

ಭಾರತವೂ ಈಗ ೨೧ನೇ ಶತಮಾನದ ಪ್ರವರ್ಧಮಾನದಲ್ಲಿದೆ. ತಂತ್ರಜ್ಞಾನ, ವಿಜ್ಞಾನಗಳಲ್ಲಿ ಬಹಳಷ್ಟು ಮುಂದುವರೆದಿದೆ. ದಲಿತರು ವಿದ್ಯಾವಂತರಾಗಿ ಸಮಾಜದಲ್ಲಿ ಸಮಾನವಾಗಿ ನಿಲ್ಲುವ, ಕೂರುವ ಸ್ಥಿತಿಯೂ ಕೂಡ ನಿರ್ಮಾಣವಾಗಿದೆ. ಆದರೂ ಕೂಡ ಮನುಷ್ಯನ ಮೆದುಳಿಗಂಟಿದ ಜಾತಿ ಕಲೆ ಮಾತ್ರ ಮಸುಕಾಗಿಲ್ಲ.  ಹಾಗೇ ಈ ದೇಶದ ದಲಿತರು ಮೇಲ್‌ಸ್ತರದ ಜಾತಿಗಳ ದರ್ಪಕ್ಕೆ ನಲುಗಿದ ಇತಿಹಾಸವಿದೆ. ಅವರ ಸಂಕಟಗಳು ಇನ್ನೂ ಕೂಡ ಮಾರ್ಧನಿಸುತ್ತಿವೆ. ಅದರ ಮುಂದುವರಿಕೆಯಾಗಿ ಜಾತಿಯನ್ನು ಪ್ರತಿರೋಧಿಸುವಲ್ಲಿ ಅದು ಮರ್ಯಾದಾ ಹೀನ  ಹತ್ಯೆಯ ರೂಪ ತಾಳುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.

ಹಿಂದೆಯೆಲ್ಲಾ ನೆರಳು ಸೋಕಿದರೆ, ನೀರು ಮುಟ್ಟಿದರೆ, ಪಕ್ಕದಲ್ಲಿ ಕೂತರೆ ಸಾಕು ಮೈಡಿ ಮೈಲಿಗೆ ಎಂದು ಪ್ರಾಣ ತೆಗೆದು ಆ ಸಮುದಾಯಗಳಲ್ಲಿ ಭಯವನ್ನು ಬಿತ್ತರಿಸುತ್ತಿದ್ದರು. ಆದರೆ ಈಗ ಅದು ಕೊಂಚ ಬದಲಾವಣೆಯಾದಂತಿದೆ ಅಷ್ಟೇ. ಸಂವಿಧಾನ ರೂಪುಗೊಂಡು ಸಮಾನತೆಯ ಹಕ್ಕು ಬಂದಾಗಿನಿಂದ ಇಂತವೆಲ್ಲಾ  ಕಡಿಮೆಯಾಗಿದ್ದರೂ ಕೂಡ ಉತ್ತರ ಭಾರತದ ಕಡೆ ಈ ಕ್ರೌರ್ಯ ಇನ್ನೂ ಇದೆ. ಹೀಗಿದ್ದರೂ ಜಾತಿವಾದಿಗಳ ಪ್ರತಿರೋಧಗಳ ನಡುವೆಯೇ ಮೇಲು ಕೀಳು ನೋಡದೆ ಯುವ ಸಮೂಹಗಳಲ್ಲಿ ಸಮಾನತೆ ಅನ್ನುವುದು ಪ್ರೀತಿಯ ರೂಪದಲ್ಲಿ ವ್ಯಕ್ತವಾಗುತ್ತಿದೆ. ಹಾಗಾಗಿ ಅದನ್ನು ತಡೆಯುವ ದಿಸೆಯಲ್ಲಿ ಜಾತಿಗೇಡಿಗಳು ಮರ್ಯಾದೆ ಎನ್ನುವ ಅಸ್ತ್ರವನ್ನು ಝಳಪಿಸಲು ಶುರುವಿಟ್ಟಿದ್ದಾರೆ.

ಈ ಮಣ್ಣಿನಲ್ಲಿ ಹಕ್ಕಿಗಾಗಿ ಹೋರಾಡಿ ಮಡಿದ ದಲಿತ ಮಕ್ಕಳಿಗಿಂತ  ಪ್ರೀತಿಗೆ, ಸಂಪ್ರದಾಯಕ್ಕೆ, ಅವಮಾನಕ್ಕೆ ನರಳಿ ರಕ್ತ ಚೆಲ್ಲಿದವರೆ ಹೆಚ್ಚು. ಸ್ವತಃ ಎತ್ತಿ ಆಡಿಸಿದ ಕೈಯಲ್ಲೇ ಮಕ್ಕಳ ಕೊರಳನ್ನು ಹಿಸುಕಿ ಜಾತಿಯನ್ನು ಭೀಭತ್ಸವಾಗಿ ಮೆರೆದವರೆ ಹೆಚ್ಚು. ಮಾನವ ಕುಲವನ್ನು ಮರೆತು ಮನುವನ್ನೇ ಹೊದ್ದವರು ಹೆಚ್ಚು. ರಾಷ್ಟ್ರೀಯ ಅಪರಾಧ ದಾಖಲೆಗಳ ವರದಿಯಂತೆ 2017 ರಿಂದ 2019ರವರೆಗೂ ದೇಶದಲ್ಲಿ 145 ಹಾಗೂ 2020ರ ವರದಿಯಂತೆ 25 ಮರ್ಯಾದೆ ಗೇಡು ಹತ್ಯೆಯ ಪ್ರಕರಣಗಳು ದಾಖಲಾಗಿವೆ. ಕಳೆದ ಮೂರು ವರ್ಷಗಳಿಂದ ತಮಿಳುನಾಡಿನಲ್ಲಿ 81 ಮರ್ಯಾದೆಗೇಡು ಹತ್ಯೆ ಪ್ರಕರಣಳು ದಾಖಲಾಗಿದೆ. ಅದರಲ್ಲಿ ಹೆಚ್ಚು ದಲಿತ ಮಹಿಳೆಯರ ಹತ್ಯೆ ನಡೆದಿದೆ ಎಂಬುದನ್ನೂ ಅದು ತಿಳಿಸಿದೆ. ಇನ್ನು ಕರ್ನಾಟಕದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 10 ಕ್ಕಿಂತ ಹೆಚ್ಚು ಹತ್ಯೆ ನಡೆದಿದೆ. ಇಷ್ಟೆಲ್ಲಾ ಶೋಷಣೆಗೆ ಒಳಗಾದರೂ ಕೂಡ ದಲಿತರು ಪ್ರತಿಭಟಿಸುವ ಧೈರ್ಯವನ್ನು ಕಳೆದುಕೊಂಡು ಉಸಿರುಗಟ್ಟಿ ಅತ್ತಿದ್ದಾರೆ. ಜಾತಿ ಮೀರಿ ಮನುಷ್ಯತ್ವದ ನೆಲೆಯಲ್ಲಾದರೂ ಬಂದು ದನಿಗೂಡಿದವರು ಕೂಡ ಕಡಿಮೆಯೇ. ಅದಕ್ಕೆಂದೇ ಕಾನೂನು ರೂಪಿಸಿದರೂ ಕೂಡ ಜಾತಿಯ ದಾಹ ಬಾಯಾರಿ ಕೂತಿದೆ. 

ಅಂತರ್ಜಾತಿ ವಿವಾಹ, ಪ್ರೀತಿ ಸಲ್ಲದು ಎಂದು ಬೊಬ್ಬೆ ಹೊಡೆಯುವವರು ಇದು ನಿನ್ನೆ ಮೊನ್ನೆ ಮೊಳಕೆಯೊಡೆದ ತರುಣ ತರುಣಿಯರಿಂದ ಹುಟ್ಟಿದಲ್ಲವೆಂದು ಅರಿಯಬೇಕಿದೆ. ಇದು ಸಮಾನತೆಯ ಸಮಾಜದ ಇನ್ನೊಂದು ಚಹರೆ ಎಂಬುದನ್ನು ಮನಗಾಣಬೇಕಿದೆ.

ಅಂತರ್‌ಜಾತಿ ವಿವಾಹ, ಬಸವಣ್ಣ ಬುನಾದಿ

೧೨ ನೇ ಶತಮಾನದಲ್ಲಿ ಆರಂಭಗೊಂಡ ಕಾಯಕ ಚಳುವಳಿಯಲ್ಲಿ ಬಸವಣ್ಣ ಶ್ರಮಿಕ ವರ್ಗದವರನ್ನೂ ಒಗ್ಗೂಡಿಸಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಆ ಮೂಲಕ ಶ್ರಮಿಕರನ್ನು ಸಮಾಜದ ಮುನ್ನೆಲೆಗೆ ತಂದರು. ಅಲ್ಲದೆ ಬ್ರಾಹ್ಮಣಮಂತ್ರಿ ಮಧುವರಸನ ಮಗಳು ಮತ್ತು ಸಮಗಾರ ಕಾಯಕದ ಹರಳಯ್ಯನ ಮಗನಿಗೆ ವಿವಾಹ ಮಾಡಿಸುವ ಮೂಲಕ ಅಂತರ್ಜಾತಿ ವಿವಾಹಕ್ಕೆ ಮೊದಲು ಬುನಾದಿ ಹಾಕಿದರು. ಆ ಮೂಲಕ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದರು. ಇದಕ್ಕೆ ಮೇಲ್ಜಾತಿಯಿಂದ ಪ್ರತಿರೋಧವೂ ಬಂತು. ಕೊನೆಗೆ ಹತ್ಯೆ ರೂಪವೂ ಪಡೆದಿದ್ದು ಇದೆ.  ಇನ್ನು ಗಾಂಧಿಯೂ ಕೂಡ ಅಂತರ್ಜಾತಿ ವಿವಾಹದ ಹೊರತು ಬೇರೆ ಯಾವ ವಿವಾಹಕ್ಕೂ ಹೋಗುತ್ತಿರಲಿಲ್ಲ. ಅಂಬೇಡ್ಕರ್‌ ಕೂಡ ಇದನ್ನು ಮತ್ತಷ್ಟು ಪುಷ್ಟೀಕರಿಸಿ “ಸಾಮಾಜಿಕ ನಿರ್ಬಂಧ ಮತ್ತು ಅಂತರ್ಭೋಜನ ನಿರ್ಬಂಧಗಳು ಹೋಗಿಬಿಟ್ಟರೆ ಅಸ್ಪೃಶ್ಯತೆ ಮಾಯವಾಗುವುದಿಲ್ಲ. ಮನೆಯೊಳಗೂ ಹೊರಗೂ ಅಸ್ಪೃಶ್ಯತೆಯನ್ನು ನಿವಾರಿಸಬೇಕಾದರೆ ಅಂತರ್ಜಾತಿ ನಿರ್ಬಂಧ ಮುರಿಯಬೇಕು. ಇದನ್ನು ಮುರಿಯುವುದರಿಂದ ನಿಜವಾದ ಸಮಾನತೆ ಹುಟ್ಟುವುದು” ಎಂದಿದ್ದರು.

ವ್ಯಕ್ತಿ ಸ್ವಾತಂತ್ರ್ಯ ಹರಣ

ವರ್ತಮಾನದಲ್ಲಿ ಸಂವಿಧಾನದ ಆಶಯಗಳಾದ ಮೀಸಲಾತಿ, ಮಹಿಳಾ ಪ್ರಾತಿನಿಧ್ಯವನ್ನು ಜಾತಿವಾದಿಗಳು, ಪುರುಷ ಪ್ರಾಬಲ್ಯ ಮನಸ್ಥಿತಿಗಳು ಘಂಟಾಘೋಷವಾಗಿ ತಿರಸ್ಕಾರ ಮಾಡುತ್ತಿರುವುದನ್ನು ಕಾಣುತ್ತಲೆ ಇದ್ದೇವೆ. ಅದರಂತೆ ಅಂತರ್ಜಾತಿ ವಿವಾಹ ಹಾಗೂ ಪ್ರೀತಿಗೂ ಕೂಡ ಮರ್ಯಾದೆಗೇಡು ಹತ್ಯೆಯ ರೂಪದಲ್ಲಿ ಪ್ರತಿರೋಧ ಒಡ್ಡುತ್ತಿದ್ದಾರೆ. ಈ ಮೂಲಕ ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಹರಣ ಮಾಡಲಾಗುತ್ತಿದೆ. ಸಂವಿಧಾನದ ವಿಧಿ ೨೧ ರಲ್ಲಿ ಜೀವದ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆ ಕುರಿತಾಗಿ ಹಾಗೂ ಯಾವುದೇ ವ್ಯಕ್ತಿ ತಮ್ಮಿಚ್ಛೆಯಂತೆ ಬದುಕಿನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಮರ್ಯಾದೆಗೇಡು ಹತ್ಯೆಯನ್ನು ಮಾಡುವ ಮೂಲಕ ಸಂವಿಧಾನದ ಆಶಯಗಳ ವಿರೋಧವಾಗಿದ್ದೇವೆ, ಅಲ್ಲದೆ ಮನುಷ್ಯ ಸಂಬಂಧಕ್ಕಿಂತ ಜಾತಿ ಮುಖ್ಯ ಎನ್ನುವ ಸಂದೇಶವನ್ನು ಇವರು ಬಿತ್ತುತ್ತಿದ್ದಾರೆ. 

ಇದೆಲ್ಲವನ್ನು ಮೀರಿ ಬಸವಣ್ಣ, ಗಾಂಧಿ, ಅಂಬೇಡ್ಕರ್‌ ಅವರ  ಮುಕ್ತ ಮನಸ್ಸಿನ ಆಲೋಚನೆಯಂತೆ ಜಾತಿ ಗಡಿದಾಟಿ ಬದುಕು ಕಟ್ಟಿಕೊಳ್ಳಲು ಅದೆಷ್ಟೋ ಪ್ರೀತಿಸಿದ ಜೀವಗಳು ಹಾತೊರೆಯುತ್ತಿವೆ. ಅದಕ್ಕೆ  ಸರ್ಕಾರವೂ ಸಹ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನವನ್ನು ನೀಡುವ ಕಾರ್ಯಕ್ರಮವನ್ನು  ಕೂಡ ಮಾಡಿದೆ. ಇದರಿಂದ ಜಾತಿಯ ಅಹಂ ಬಿಟ್ಟು ಪ್ರೀತಿಸಿದ ಜೋಡಿಗಳು ವರಿಸುವಂತಾಗಿದೆ. ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಶತಮಾನಗಳಿಂದ ದಾರ್ಶನಿಕರು, ನಾಯಕರು ಶ್ರಮವಹಿಸಿದ್ದು, ಅದು ಈಗ ಮೆಲ್ಲಗೆ ಅರಳಿ ಹೂವಾಗುವಂತ ಕಾಲ ನಿರ್ಮಾಣವಾಗುತ್ತಿದೆ. ಆದರೆ ಈ ಜಾತಿ ಎನ್ನುವ ಅಮಲು ಅವುಗಳನ್ನು ಹೊಸಕಿ ಹಾಕುವಲ್ಲೇ ಕಾತರಿಸಿದೆ. ಆ ಸ್ಥಿತಿ ಬದಲಾಗಬೇಕು.“ಜಾತಿ ಎನ್ನುವುದು ಮೈಗಂಟಿದ್ದ ಚರ್ಮದಂತೆ ಅದು ಸದಾ ನಮ್ಮೊಟ್ಟಿಗೆ ಇರುತ್ತದೆ. ಆದರೆ ಅದನ್ನು ತಲೆಯ ಮೇಲೆ ಹೊತ್ತು ತಿರುಗಬಾರದು, ಅದೆಲ್ಲವನ್ನು ನಿಷ್ಕ್ರಿಯಗೊಳಿಸಿ “ಮನುಷ್ಯ ಜಾತಿ ತಾನೊಂದೆ ವಲಂ” ಎಂಬಂತೆ ಬದುಕಬೇಕು. 

Cast is the monster, closes your path

Dr.B.R.Ambedkar 

ಆಕಾಶ್. ಆರ್.ಎಸ್‌, ಶಿವಮೊಗ್ಗ.

ಯುವ ಬರಹಗಾರ

ಇದನ್ನೂ ಓದಿ-ದಲಿತ ಸರಣಿ ಹತ್ಯೆ, ತುಟಿ ಬಿಚ್ಚದ ಹಿಂದೂ ಸಂಘಟನೆಗಳು

Related Articles

ಇತ್ತೀಚಿನ ಸುದ್ದಿಗಳು