Wednesday, June 26, 2024

ಸತ್ಯ | ನ್ಯಾಯ |ಧರ್ಮ

ಒಪ್ಪಿತ ಲೈಂಗಿಕ ಸಂಬಂಧದ ವಯಸ್ಸನ್ನು 18ರಿಂದ 16ಕ್ಕೆ ಇಳಿಸಬೇಕೆ?

ಒಪ್ಪಿತ ಲೈಂಗಿಕ ಸಂಬಂಧದ ವಯಸ್ಸನ್ನು  18ರಿಂದ 16ಕ್ಕೆ ಇಳಿಸಬೇಕು ಎಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿದೆ. 16ರ ವಯಸ್ಸಿನಲ್ಲಿ ಆರ್ಥಿಕ ಸ್ವಾತಂತ್ರ್ಯವಿಲ್ಲದ, ವಿದ್ಯಾಭ್ಯಾಸ ಪೂರ್ಣಗೊಳಿಸದ ಮಕ್ಕಳು ಅಪ್ಪ ಅಮ್ಮ ಆದರೆ ಅವರಿಗೆ ಹುಟ್ಟುವ ಮಗುವಿನ ಭವಿಷ್ಯವನ್ನು ಸರ್ಕಾರ ಹೊರುವ ಅವಕಾಶವಿದೆಯೆ? ಇದನ್ನೆಲ್ಲಾ ಆಲೋಚಿಸದೆ ಒಪ್ಪಿತ ಲೈಂಗಿಕತೆಯ ವಯಸ್ಸನ್ನು 16ಕ್ಕೆ ಇಳಿಸು ಎಂದು ಉನ್ನತ ನ್ಯಾಯಾಲಯವು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ ಅದು ಮೂರ್ಖತನವಲ್ಲದೆ ಇನ್ನೇನು? – ವಿದ್ಯಾ, ವಕೀಲರು

ಪ್ರಕರಣದ ಹಿನ್ನೆಲೆ

ಪೋಕ್ಸೋ ಮತ್ತು ಭಾರತೀಯ ಅಪರಾಧ ದಂಡ ಸಹಿತೆಯ ಕಲಂಗಳ ಪ್ರಕಾರ ತನ್ನ ಮೇಲೆ ಹಾಕಿದ ಎಫ್ ಐ ಆರ್ ನ್ನು ರದ್ದುಪಡಿಸಬೇಕೆಂದು ಒಬ್ಬ ಹುಡುಗ ಮಧ್ಯಪ್ರದೇಶದ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ.  ಅರ್ಜಿಯನ್ನು ಪರಿಗಣಿಸಿದ ಉಚ್ಛ ನ್ಯಾಯಾಲಯ,  ಆರೋಪಿ ಹಾಗೂ ಸರ್ಕಾರದ ವಾದ ಪ್ರತಿವಾದಗಳನ್ನು ಆಲಿಸಿ ಈ ಕೃತ್ಯದಲ್ಲಿ ಆರೋಪಿ ಹುಡುಗ ಮುಗ್ಧ  ಎಂದು ತೀರ್ಪು ನೀಡುತ್ತದೆ ಹಾಗೂ ಎಫ್.‌ ಐ ಆರ್‌ ನ್ನು ರದ್ದು ಪಡಿಸುತ್ತದೆ. ಮುಂದುವರೆದು  ಉಚ್ಚ ನ್ಯಾಯಾಲಯವು ಇಂಥ ಪ್ರಕರಣಗಳು ರೊಮ್ಯಾಂಟಿಕ್‌ ಸಂಬಂಧಗಳಾಗಿವೆ, ಒಪ್ಪಿತ ಲೈಂಗಿಕ ಸಂಬಂಧಗಳಾಗಿವೆ. ಆದ್ದರಿಂದ ಕಾನೂನಿನ ಅನವಶ್ಯಕ ತೊಡಕುಗಳನ್ನು ತಪ್ಪಿಸಲು ಒಪ್ಪಿತ ಲೈಂಗಿಕ ಸಂಬಂಧದ ವಯಸ್ಸನ್ನು  18ರಿಂದ 16ಕ್ಕೆ ಇಳಿಸಬೇಕು ಎಂದು ಸರ್ಕಾರಕ್ಕೆ ಮನವಿಯನ್ನು ಮಾಡಿತು.

ಈಗ ಲಭ್ಯವಿರುವ ಸಾಮಾಜಿಕ ಜಾಲತಾಣಗಳ ಮೂಲಕ ಯುವಜನರು ಬಹಳ ಸುಲಭವಾಗಿ ಲೈಂಗಿಕ ಸಂಬಂಧದ ಬಗ್ಗೆ ತಿಳುವಳಿಕೆ ಪಡೆದುಕೊಳ್ಳುತ್ತಾರೆ. ಹಾಗೂ ಪರಸ್ಪರ ಆಕರ್ಷಣೆಗೆ ಒಳಗಾಗುತ್ತಾರೆ. ಹಾಗೆ ಪರಸ್ಪರ ಆಕರ್ಷಣೆಗೆ ಒಳಗಾದ ಯುವ ಜನರು ಲೈಂಗಿಕ ಸಂಬಂಧ ಬೆಳೆಸುತ್ತಾರೆ. ಇದೊಂದು ರೋಮ್ಯಾಂಟಿಕ್ ಸಂಬಂಧ ಆಗಿದೆಯೆ  ಹೊರತು ಅಪರಾಧ ಕೃತ್ಯವಲ್ಲ ಎಂದು ಮಧ್ಯಪ್ರದೇಶದ ಉಚ್ಛ ನ್ಯಾಯಾಲಯವು ಅಭಿಪ್ರಾಯ ಪಡುತ್ತದೆ. ಅಲ್ಲದೆ ಪೋಕ್ಸೋ ಮತ್ತು ತಿದ್ದುಪಡಿಯಾದ ಭಾರತೀಯ ಅಪರಾಧ ದಂಡ ಸಹಿತೆಯ ಕಲಂಗಳು ಯುವಕರ ಬಗ್ಗೆ ಕಠಿಣವಾಗಿವೆ. ಆದ್ದರಿಂದ ಸಮ್ಮತಿಯ  ಲೈಂಗಿಕ ಸಂಬಂಧಕ್ಕೆ  ಕೇವಲ ಗಂಡು ಮಕ್ಕಳು ಮಾತ್ರ ಬಲಿಪಶುಗಳಾಗುತ್ತಿದ್ದಾರೆ. ಮುಗ್ಧರು ಹಾಗೂ ಅಮಾಯಕರೂ ಆದ ಗಂಡು ಮಕ್ಕಳು ಈ  ಕಠಿಣ ಕಾನೂನಿನಿಂದಾಗಿ  ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ಕಾನೂನಿನ ಬಗ್ಗೆ ಮರು ಪರಿಶೀಲನೆ ಮಾಡಿ ಒಪ್ಪಿತ ಲೈಂಗಿಕ ಸಂಬಂಧದ ವಯಸ್ಸನ್ನು 18ರಿಂದ 16ಕ್ಕೆ ಇಳಿಸಬೇಕೆಂದು ಅದು ಮನವಿ ಸಲ್ಲಿಸಿತು.

ರೊಮ್ಯಾಂಟಿಕ್‌ ರಿಲೇಶನ್‌ ವ್ಯಾಖ್ಯಾನ ಸರಿಯೇ?

ಹದಿಹರೆಯದ ವಯಸ್ಸಿನಲ್ಲಿ ಕಾಮೋದ್ರೇಕ ಆಗುವಂತಹ ಜಾಲತಾಣಗಳನ್ನು ನೋಡಿ, ಹೆಣ್ಣು ಗಂಡುಗಳು ಪರಸ್ಪರ ಅಕರ್ಷಣೆಗೆ ಒಳಗಾಗುವುದನ್ನೇ ಮಧ್ಯಪ್ರದೇಶದ ಮಾನ್ಯ ಉಚ್ಛ ನ್ಯಾಯಾಲಯವು ರೊಮ್ಯಾಂಟಿಕ್‌ ರಿಲೇಶನ್‌ ಎಂದು ವ್ಯಾಖ್ಯಾನಿಸಿದೆ. ಆ ತೀರ್ಪಿನ ಪ್ರತಿಯನ್ನು ಪರಿಶೀಲಿಸಿದರೆ, ನೊಂದ ಹುಡುಗಿಯ ಆರೋಪದ ಪ್ರಕಾರ ಆರೋಪಿಯು ಅಮಲು  ಪದಾರ್ಥವನ್ನು ಪಾನಕದಲ್ಲಿ ಹಾಕಿ ಕುಡಿಸಿ ಲೈಂಗಿಕ ಸಂಬಂಧ ಬೆಳೆಸಿರುತ್ತಾನೆ. ಅಲ್ಲದೆ ಆ ದೃಶ್ಯವನ್ನು ಸೆರೆಹಿಡಿದು ಜಾಲತಾಣದಲ್ಲಿ ಪ್ರಚುರಪಡಿಸುತ್ತೇನೆ ಎಂದು ಬೆದರಿಸುತ್ತಾನೆ. ಹೆದರಿದ ಆಕೆ ಹಲವಾರು ಬಾರಿ ಆತನೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಾಳೆ. ಪರಿಣಾಮವಾಗಿ ಆಕೆ ಗರ್ಭಿಣಿಯೂ ಆಗುತ್ತಾಳೆ. ವಿಷಯ ತಿಳಿದ ಹುಡುಗ ಗರ್ಭ ತೆಗೆಸಲು ಔಷಧಿಯನ್ನು ನೀಡುತ್ತಾನೆ. ಇಂಥಾ ಕೃತ್ಯಗಳು ರೊಮ್ಯಾಂಟಿಕ್‌ ಸಂಬಂಧದ ವ್ಯಾಖ್ಯಾನಕ್ಕೆ ಬರುವುದೆ?. ಆತನದು ಅಪರಾಧೀ ಕೃತ್ಯವೆಸಗುವ ಮನೋಭಾವ ಆಗಿಲ್ಲವೆ?. ಇಂತಹ ಹುಡುಗನನ್ನು ಮುಗ್ಧ, ಅಮಾಯಕ ಎನ್ನುವುದು ಎಷ್ಟು ಸರಿ?

ಇಂತಹ ಹುಡುಗರು ಮುಗ್ಧರು, ಅಮಾಯಕರು ಎಂದು ಘನ ನ್ಯಾಯಾಲಯ ದೂರುದಾರಳ ಆರೋಪದ ಬಗ್ಗೆ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲು ಅವಕಾಶವನ್ನು ನೀಡದೇ ತಾನೇ ಸ್ವತ: ಆರೋಪಿಯ ವಿರುದ್ಧ ದಾಖಲಾದ ಪ್ರಥಮ ವರ್ತಮಾನ ವರದಿಯನ್ನೇ ರದ್ದುಪಡಿಸುವುದು ನ್ಯಾಯಕ್ಕೆ ಎಸಗುವ ಅಪಚಾರವಾಗದೇ

ಇದೊಂದು ವೈರುಧ್ಯವಲ್ಲವೇ?

ಹೆಣ್ಣು ಮಕ್ಕಳ ಮೇಲೆ ನಡೆಯುವ  ದೌರ್ಜನ್ಯವನ್ನು ವಿರೋಧಿಸಿ  ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಭಾಗವಹಿಸಿ ಕೆಲವೆಲ್ಲಾ ತಿದ್ದುಪಡಿಗಳಿಗೆ ಸಹಮತ ತೋರಿಸಿದ ದೇಶಗಳಲ್ಲಿ ನಮ್ಮ ದೇಶವೂ ಒಂದಾಗಿದೆ. ಹಾಗೆ ಭಾಗವಹಿಸಿ, 18ರ ಮತ್ತು ಅದರ ಕೆಳಗಿನ ವಯಸ್ಸು ಅಪ್ರಾಪ್ತ ವಯಸ್ಸು ಎಂಬ ಸಹಮತ ತೋರಿ ಪೋಕ್ಸೋ ಆಕ್ಟ್‌ 2012 ರಲ್ಲಿ 18 ರ ಕೆಳಗಿನ ವಯಸ್ಸಿನವರು ಅಪ್ರಾಪ್ತ ವಯಸ್ಕರು ಎಂದು ತಿದ್ದುಪಡಿ ಮಾಡಲಾಯಿತು. ಮತ್ತು ಭಾರತದಲ್ಲಿ ಯುವತಿಯರ ಮದುವೆಯ ವಯಸ್ಸನ್ನು 18ಕ್ಕೂ ಹಾಗೂ ಗಂಡುಮಕ್ಕಳ ಪ್ರಾಪ್ತ ವಯಸ್ಸನ್ನು 21ಕ್ಕೂ ಏರಿಸಲಾಯಿತು. ಹೀಗಿರುವಾಗ ವಿವಾಹೇತರ ಲೈಂಗಿಕ ಸಂಬಂಧ ಬೆಳೆಸಲು ಒಂದು ವಯೋಮಿತಿ, ವಿವಾಹಕ್ಕೆ ಒಂದು ವಯೋಮಿತಿ ಎನ್ನುವುದು ವೈರುಧ್ಯವಲ್ಲವೇ?

ಇಷ್ಟು ಕಠಿಣ ಕಾನೂನು ಇದ್ದು ಕೂಡಾ  ಈಗಲೂ ಹಲವಾರು ರಾಷ್ಟ್ರ ಮಟ್ಟದ ನಾಯಕರೂ, ಸ್ವಾಮೀಜಿಗಳೂ 18ರ ಕೆಳಗಿನ ಯುವತಿಯರನ್ನು ಲೈಂಗಿಕವಾಗಿ ಪೀಡಿಸಿ, ಕೂದಲೂ ಕೊಂಕದೆ ಅಮಾಯಕರಂತೆ ಕಾನೂನಿನ ಕುಣಿಕೆಯಿಂದ ಹೊರ ಬರುವ ಸಂದರ್ಭದಲ್ಲೂ ಈ ತಿದ್ದುಪಡಿಯಾದ ಕಾನೂನನ್ನು ಈ ಮಾನ್ಯ ನ್ಯಾಯಾಲಯ ಹೇಳಿದಂತೆ ಬದಲಾಯಿಸಿದರೆ, ನಮ್ಮ ಹೆಣ್ಣು ಮಕ್ಕಳ ಪರಿಸ್ಥಿತಿಯನ್ನು ಊಹಿಸಲೂ ಅಸಾಧ್ಯ.

ತೀರ್ಪು ಏಕಮುಖವಾಗಿದೆ..

ಈ ತೀರ್ಪು ಏಕಮುಖವಾಗಿದೆ. ಪೂರ್ವಗ್ರಹ ಪೀಡಿತವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ  ಲೈಂಗಿಕ ಸಂಬಂಧದ ಬಗ್ಗೆ ತಿಳುವಳಿಕೆ ಪಡೆದುಕೊಳ್ಳುವ  ಯುವಜನರು  ಪ್ರಸ್ತುತ ಭಾರತದಲ್ಲಿರುವ ಕಾನೂನುಗಳ ಬಗ್ಗೆಯೂ ತಿಳಿದುಕೊಳ್ಳುವ ಅವಶ್ಯಕತೆ ಇದೆಯಲ್ಲವೇ? ಈಗಾಗಲೇ ಇಂಥ ಕಠಿಣ ಕಾನೂನುಗಳು ಇದ್ದೂ ಲೈಂಗಿಕ ದೌರ್ಜನ್ಯವೆಸಗಿ ಕಾನೂನಿನ ಕಪಿಮುಷ್ಠಿಯಿಂದ ಬಚಾವಾಗುತ್ತಿರುವ ಸಾಕಷ್ಟು ಜನರಿದ್ದಾರೆ. ಹಾಗೆಯೇ ಬೆರಳೆಣಿಕೆಯ ಮಂದಿ ಈ ಕಾನೂನಿನ ದುರುಪಯೋಗದಿಂದ ನೊಂದಿದ್ದಾರೆ ಎಂದ ಮಾತ್ರಕ್ಕೆ ಎಲ್ಲಾ ಯುವತಿಯರು ಈ ಕಾನೂನನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದರೆ ಅದು ಉಚ್ಛ ನ್ಯಾಯಾಲಯವು ಪೂರ್ವಾಗ್ರಹ ಪೀಡಿತವಾಗಿದೆ ಎಂಬ ಭಾವನೆಯನ್ನು  ಮೂಡಿಸುತ್ತದೆ.

ದುಷ್ಕೃತ್ಯಗಳು ಹೆಚ್ಚಾಗಲಾರವೇ?.

ರೋಮ್ಯಾಂಟಿಕ್ ರಿಲೇಷನ್‌ ಹೊಂದುವಂತಹ ಯುವಜನರು ದೈಹಿಕ ಸಂಬಂಧದ ಬಗ್ಗೆ ಆಸಕ್ತಿ ತೋರಿದರೂ, ಅಂತಹ ಸಂಬಂಧಗಳಿಂದ ಉಂಟಾಗುವ ಸಾಧಕ ಬಾಧಕಗಳ ಬಗ್ಗೆಯೂ ಪ್ರಜ್ಞಾವಂತರಾಗಿರುವಂತೆ ಹಾಗೂ ಅಷ್ಟೇ ತೀವ್ರವಾಗಿ ತಮ್ಮ ಭವಿಷ್ಯದ ಬಗ್ಗೆಯೂ ಆಲೋಚಿಸಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ನಮ್ಮ ಸರ್ಕಾರ ಹಾಗೂ ನ್ಯಾಯಾಂಗ   ಪ್ರೇರೇಪಿಸಬೇಕು. ಅದು ಬಿಟ್ಟು ತಪ್ಪೆಸಗಿದ ಯುವಕರು  ಮುಗ್ಧರು ಅಮಾಯಕರು ಎಂಬ ಹಣೆಪಟ್ಟಿ ಕೊಟ್ಟು ಅವರ ವಿರುದ್ಧ ದಾಖಲಾದ F I R ಗಳನ್ನು ರದ್ದುಪಡಿಸಿದರೆ ಇಂಥ ದುಷ್ಕೃತ್ಯಗಳು ಹೆಚ್ಚಾಗುತ್ತವೆ.

ಇದು ಮೂರ್ಖತನವಲ್ಲವೇ?

ಲೈಂಗಿಕ ಸಂಬಂಧ ಎಂದರೆ ಕೇವಲ ಒಂದು ಗಂಡು ಮತ್ತು ಹೆಣ್ಣಿನ ಮಧ್ಯೆ ನಡೆಯುವ ಲೈಂಗಿಕ ಕ್ರಿಯೆಗಳಷ್ಟೇ ಅಲ್ಲ.  ಅಲ್ಲಿ ಪ್ರತ್ಯುತ್ಪಾದನೆಯ  ಕ್ರಿಯೆ ನಡೆಯುವ ಅವಕಾಶವಿರುತ್ತದೆ. ಹುಡುಗಿ ಗರ್ಭ ಧರಿಸುತ್ತಾಳೆ. ಮದುವೆಯಾಗದೆ ಗರ್ಭ ಧರಿಸಿದರೆ ಜನಿಸಿದ ಮಗುವಿನ ಭವಿಷ್ಯವನ್ನು ಸರ್ಕಾರ ಹೊರುವ ಸೌಲಭ್ಯವಿದೆಯೆ?  ಬೇಡದ ಗರ್ಭವನ್ನು ತೆಗೆಸಲು ಹೊರಟಾಗ ಆಗುವ ದುಷ್ಪರಿಣಾಮಗಳಿಗೆ  ಸರಕಾರ ಜವಾಬ್ದಾರಿ ಹೊರುವುದೇ? ಬೇಡದ ಗರ್ಭವನ್ನು ತೆಗೆಸುವ ಸಂದರ್ಭದಲ್ಲಿ ಆಗುವಂಥ ಆರ್ಥಿಕ ಸಮಸ್ಯೆ, ಮಾನಸಿಕ ತುಮುಲಗಳಿಗೆ ಸರಕಾರ ಜವಾಬ್ದಾರಿ ತೆಗೆದುಕೊಳ್ಳುತ್ತದೆಯೇ? ಒಪ್ಪಿತ ಲೈಂಗಿಕತೆಯನ್ನು 16ಕ್ಕೆ  ಇಳಿಸಿದ್ದೇವೆ ಎಂದು ಲೈಂಗಿಕ ಸಂಬಂಧವನ್ನು ಬೆಳೆಸಿದರೆ ಆ ಮನೆಯಲ್ಲಿರುವ ಹೆತ್ತವರು ಸುಮ್ಮನಿರುತ್ತಾರೆಯೆ? ಆಗುವಂತಹ ಅನಾಹುತಗಳಿಗೆ ಜವಾಬ್ದಾರರು ಯಾರು? 16ರ ವಯಸ್ಸಿನಲ್ಲಿ ಆರ್ಥಿಕ ಸ್ವಾತಂತ್ರ್ಯವಿಲ್ಲದ, ವಿದ್ಯಾಭ್ಯಾಸ ಪೂರ್ಣಗೊಳಿಸದ ಮಕ್ಕಳು ಅಪ್ಪ ಅಮ್ಮ ಆದರೆ ಅವರಿಗೆ ಹುಟ್ಟುವ ಮಗುವಿನ ಭವಿಷ್ಯವನ್ನು ಸರ್ಕಾರ ಹೊರುವ ಅವಕಾಶವಿದೆಯೆ? ಇದನ್ನೆಲ್ಲಾ ಆಲೋಚಿಸದೆ ಒಪ್ಪಿತ ಲೈಂಗಿಕತೆಯ ವಯಸ್ಸನ್ನು 16ಕ್ಕೆ ಇಳಿಸು ಎಂದು ಉನ್ನತ ನ್ಯಾಯಾಲಯವು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ ಅದು ಮೂರ್ಖತನವಲ್ಲದೆ ಇನ್ನೇನು?

ಇದು ನ್ಯಾಯ ಸಮ್ಮತವಲ್ಲ…

ಇಷ್ಟು ಸಣ್ಣ ಪ್ರಾಯದಲ್ಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದರೆ ಅದರಿಂದ ಅಗುವ ಬಾಧಕಗಳಿಗೆ ಸರಕಾರಕ್ಕೆ ಉತ್ತರಕೊಡಲು ಸಾಧ್ಯವೆ? ಸರಕಾರ ಜಾಲತಾಣಗಳ ಮೇಲೆ ಲಂಗುಲಗಾಮು ಇಡಬೇಕು. ಉನ್ನತ ವಿದ್ಯಾಭ್ಯಾಸ, ಉತ್ತಮ ಕೆಲಸ, ಸಾಮಾಜಿಕ ಭದ್ರತೆ, ಆರೋಗ್ಯಕರ ಪರಿಸರದಲ್ಲಿ ಇರಬೇಕಾದ ಯುವಜನತೆಗೆ ಕಾಮ ಉದ್ರೇಕಗೊಳಿಸುವ ಜಾಲತಾಣಗಳು ಸುಲಭವಾಗಿ ಕೈಗೆ ಸಿಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಅವಶ್ಯಕತೆ ಬಂದರೆ ರಾಜ್ಯದಾದ್ಯಂತ ರಾತ್ರೋರಾತ್ರಿ ಇಡೀ ಅಂತರ್ಜಾಲ ಸ್ಥಗಿತಗೊಳಿಸುವ ಸರಕಾರಕ್ಕೆ ಇದೇನು ಕಷ್ಟದ ಕೆಲಸವಾಗಲಾರದು. ಇಂಥಾ ಜಾಲತಾಣಗಳು ಬಹಳ ಸುಲಭವಾಗಿ ಯುವಜನತೆಯ ಕೈಗೆಟುಕಿ ಅವರು ಮಾಡಬಾರದ ಅಪರಾಧೀ ಕೃತ್ಯಗಳನ್ನು ಮಾಡಿ, ಲೈಂಗಿಕ ವಾಂಛೆಯನ್ನು ಪೂರೈಸಿ ಕೊನೆಗೆ  ತಾನು ಅಮಾಯಕ ಎಂದು ಬಿಂಬಿಸಿದರೆ ಅದು ನ್ಯಾಯಸಮ್ಮತವೇ? ಇದಕ್ಕೆ ಸರಕಾರವೂ ಕಾರಣವಾಗುವುದಿಲ್ಲವೇ?

ಕಾಮ ಉದ್ರೇಕಿಸುವ ಜಾಲತಾಣಗಳ ಗೀಳಿಗೆ ಸಿಲುಕಿ ಮಕ್ಕಳು ಲೈಂಗಿಕ ಸಂಬಂಧ ಬೆಳೆಸಲು ಆಸಕ್ತಿ ತೋರುತ್ತಾರೆಯೇ ಹೊರತು ಆರೋಗ್ಯಕರ ಲೈಂಗಿಕತೆಯ ಬಗ್ಗೆ ತಿಳುವಳಿಕೆ ಪಡೆದಲ್ಲ. ಉನ್ನತ ಪೀಠದಲ್ಲಿ ಕುಳಿತು ಜನರಿಗೆ ಸರ್ಕಾರಕ್ಕೆ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ತಿಳಿ ಹೇಳಬೇಕಾದ  ಇಂತಹ  ನ್ಯಾಯಾಲಯಗಳು ಲೈಂಗಿಕ ಉದ್ರೇಕ ಮತ್ತು ಆರೋಗ್ಯಕರ ಹಾಗೂ ಜವಾಬ್ದಾರಿಯುತ ಲೈಂಗಿಕತೆಯ ನಡುವಿನ ವ್ಯತ್ಯಾಸ ತಿಳಿಯದೆ ಇಂತಹ ತೀರ್ಪುಗಳನ್ನು ನೀಡುವುದು ಅವಿವೇಕತನವಾಗಿದೆ. ಅಲ್ಲದೆ ಜಾಲತಾಣಗಳ ಮೂಲಕ ಸುಲಭವಾಗಿ ಇಂಥ ಆಕರ್ಷಣೆಗಳಿಗೆ ಬಲಿ ಬೀಳುವ ಯುವಜನರು ಇನ್ನಷ್ಟು ಬೇಜವಾಬ್ದಾರಿಯಿಂದ ಇರಲು ಕಾನೂನಿನ ಈ ತಿದ್ದುಪಡಿ ಸಹಾಯಕವಾಗಬಹುದು. ಯುವಜನತೆ ದುಡುಕಿನ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಸಲಹೆ ಸೂಚನೆಗಳನ್ನು ನೀಡುವುದು ಬಿಟ್ಟು ಕಾನೂನನ್ನೇ ಅವರ ಪರವಾಗಿ ತಿದ್ದುಪಡಿ ಮಾಡಲು ಹೋದರೆ ಸಮಾಜದಲ್ಲಿ ಉತ್ತಮ ನಡೆನುಡಿಯ ಪ್ರಜೆಗಳನ್ನು ರೂಪಿಸುವುದು ಸಾಧ್ಯವೇ? ಈ ದೃಷ್ಟಿಕೋನದಿಂದ ನೋಡುವುದಾದರೆ ಮಾನ್ಯ ಘನ ನ್ಯಾಯಾಲಯದ ತೀರ್ಪು ಖಂಡಿತವಾಗಿಯೂ  ಮರುಪರಿಶೀಲನೆಗೆ ಅರ್ಹವಾಗಿದೆ.

ವಿದ್ಯಾ, ಮಂಗಳೂರು

ವಕೀಲರು ಹಾಗೂ ಸಾಮಾಜಿಕ ಹೋರಾಟಗಾರರು.

ಇದನ್ನೂ ಓದಿ-ದೇವಸ್ಥಾನಗಳಲ್ಲಿ ಮೊಬೈಲ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ಸರ್ಕಾರ

Related Articles

ಇತ್ತೀಚಿನ ಸುದ್ದಿಗಳು