Wednesday, June 26, 2024

ಸತ್ಯ | ನ್ಯಾಯ |ಧರ್ಮ

ಸಂವಿಧಾನ ಉಳಿಸುವುದು ತನ್ನ ಗುರಿಯೆನ್ನುವ ವಿಶ್ವಾಸವನ್ನು ಜನರಲ್ಲಿ ಮೂಡಿಸಬೇಕಿದೆ: ಬೃಂದಾ ಕಾರಟ್‌

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ದಾಳಿಯಿಂದ ದೇಶ ಮತ್ತು ಸಂವಿಧಾನವನ್ನು ರಕ್ಷಿಸುವ ಸಲುವಾಗಿ ವಿರೋಧ ಪಕ್ಷಗಳು ಒಗ್ಗೂಡಿವೆ ಎನ್ನುವ ವಿಶ್ವಾಸವನ್ನು ಜನರಲ್ಲಿ ಮೂಡಿಸಬೇಕು ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಹಿರಿಯ ನಾಯಕಿ ಬೃಂದಾ ಕಾರಟ್ ಮಂಗಳವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ́ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ (NDA) ಮೈತ್ರಿಕೂಟದ ನಿಜವಾದ ಮಿತ್ರಪಕ್ಷಗಳೆಂದರೆ ಕೇಂದ್ರೀಯ ತನಿಖಾ ದಳ (CBI), ಜಾರಿ ನಿರ್ದೇಶನಾಲಯ (EdDಁಮತ್ತು ಆದಾಯ ತೆರಿಗೆ ಇಲಾಖೆ (IT)́ ಎಂದು ಪ್ರತಿಪಾದಿಸಿದರು.

2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟು ಪ್ರಬಲವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರಟ್, “ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ನಾಶವನ್ನು ತಡೆಯಲು” ವಿರೋಧ ಪಕ್ಷಗಳು ಮಾತ್ರವಲ್ಲದೆ ರಾಜಕೀಯ ಮತ್ತು ಸಾಮಾಜಿಕ ವಲಯದ ಸಾಮಾಜಿಕ ಶಕ್ತಿಗಳು ಮತ್ತು ಸಾಮಾಜಿಕ ಚಳವಳಿಗಳು ಒಂದಾಗುವ ಅಗತ್ಯವಿದೆ ಎಂದು ಹೇಳಿದರು.

“ಪ್ರತಿಯೊಂದು ರಾಜ್ಯದಲ್ಲೂ ಭಿನ್ನ ರಾಜಕೀಯ ಸಂರಚನೆಗಳಿರುವುದರಿಂದ, ಈ ಚಟುವಟಿಕೆಯನ್ನು ಪ್ರಾಥಮಿಕವಾಗಿ ರಾಜ್ಯದ ಮಟ್ಟದಲ್ಲಿ ಮಾಡಬೇಕಾಗಿದೆ…. ರಾಷ್ಟ್ರ ಮಟ್ಟದಲ್ಲಿ, ನಾವು ಬಿಜೆಪಿ ಮತ್ತು RSS ದಾಳಿಯಿಂದ ಭಾರತ ಮತ್ತು ಸಂವಿಧಾನವನ್ನು ಉಳಿಸುವ ಸಮಾನ ಆಸಕ್ತಿಯನ್ನು ಹೊಂದಿದ್ದೇವೆ ಎನ್ನುವ ವಿಶ್ವಾಸವನ್ನು ಜನರಲ್ಲಿ ಮೂಡಿಸಬೇಕಿದೆ ಎಂದರು.

ಪ್ರತಿಪಕ್ಷಗಳದ್ದು ಕುಟುಂಬಕ್ಕೆ ಮೊದಲ ಸ್ಥಾನ ಮತ್ತು ರಾಷ್ಟ್ರಕ್ಕೆ ಎರಡನೇ ಸ್ಥಾನ  ಎಂಬ ಪ್ರಧಾನಿ ನರೇಂದ್ರ ಮೋದಿಯವರ ವ್ಯಂಗ್ಯಕ್ಕೆ ಪ್ರತಿಯಾಗಿ, ಮೋದಿ ಮತ್ತು ಬಿಜೆಪಿಗೆ “ಅಧಿಕಾರ ಮೊದಲು, ತತ್ವಗಳು ಮತ್ತು ಜನರು ನಂತರದ ಆದ್ಯತೆ” ಎಂದು ಕಾರಟ್  ಹೇಳಿದರು.

ಎನ್‌ಡಿಎ ಮಿತ್ರಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಅರ್ಧದಷ್ಟು ಜನರು ಪಕ್ಷಾಂತರಿಗಳಾಗಿದ್ದು, ಅವರು ಇಡಿ, ಸಿಬಿಐ ಮತ್ತು ಐಟಿ ಇಲಾಖೆಯ ಭಯದಿಂದ ಪಕ್ಷಾಂತರಿಗಳಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಏಕೆ ಮೌನವಾಗಿದ್ದಾರೆ ಎಂದೂ ಅವರು ಪ್ರಶ್ನಿಸಿದರು.

ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯ ಕುರಿತು ಮಾತನಾಡುತ್ತಾ ಸಿಪಿಎಂ ನಾಯಕಿ, ಬಿಜೆಪಿ ಯಾರ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿದೆಯೋ ಅವರೇ ಈಗ ಆ ಪಕ್ಷದ ಹತ್ತಿರದ ಮಿತ್ರರಾಗಿದ್ದಾರೆ, ಇದು ಅದರ ಬೂಟಾಟಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಏಕರೂಪದ ನಾಗರಿಕ ಸಂಹಿತೆಯ ಕುರಿತು ಮಾತಾಡಿದ ಅವರು “ಪ್ರಸ್ತುತ ಏಕರೂಪ ನಾಗರಿಕ ಸಂಹಿತೆಯ ಅಗತ್ಯವಿಲ್ಲ ಮತ್ತು ಅದು ಅಪೇಕ್ಷಣೀಯವೂ ಅಲ್ಲ ಎಂದು 21ನೇ ಕಾನೂನು ಆಯೋಗ ಹೇಳಿದ್ದರೂ ಸರಕಾರ ತನ್ನ ಚುನಾವಣಾ ಲಾಭಕ್ಕಾಗಿ ಅದನ್ನು ಬಳಸಿಕೊಳ್ಳುವ ಆತುರದಲ್ಲಿದೆ” ಎಂದು ಟೀಕಿಸಿದರು.

Related Articles

ಇತ್ತೀಚಿನ ಸುದ್ದಿಗಳು