Sunday, June 16, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಗರ ಹಾರಾಟವೂ, ‘Exhibitionism’ ಎಂಬ ಮನೋಲೈಂಗಿಕ ಅಪಸವ್ಯವೂ

ಬಿಜೆಪಿ ಹೈಕಮಾಂಡ್ ಅಥವಾ ಕೇಶವಕೃಪಾದ ತೀರ್ಪುಗಾರರ ಮುಂದೆ ತಮ್ಮ ಹಾರಾಟದ ‘ಸಾಮರ್ಥ್ಯ’ವನ್ನು ‘exhibition’ಗೆ ಇಟ್ಟು, ಅದರ ಮೂಲಕ ಅವರನ್ನು ಆಕರ್ಷಿಸಿ, ತಮ್ಮ ಮನೋಇಂಗಿತವಾದ ವಿಪಕ್ಷ ನಾಯಕ ಸ್ಥಾನದ ವಾಂಛೆಯನ್ನು ತೀರಿಸಿಕೊಳ್ಳುವ ಬಿಜೆಪಿಯವರ ಲೆಕ್ಕಾಚಾರವಿದೆಯಲ್ಲ, ಅದನ್ನು ನೋಡಿದಾಗ ಆ ಮನೋ-ಲೈಂಗಿಕ ಅಪಸವ್ಯ ಹೆಚ್ಚು ಸಾಮ್ಯತೆಯೇನೊ ಅನ್ನಿಸಿತು – ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

ಇವತ್ತು ಸದನದಲ್ಲಿ ಬಿಜೆಪಿ ಶಾಸಕರು ತೋರಿದ ಅತಿರೇಕವಿದೆಯಲ್ಲಾ, ಅದು ನಿಜಕ್ಕೂ ಅಗತ್ಯವಿತ್ತಾ? ರಾಜ್ಯದ ಜನರ ಯಾವ ಕಾಳಜಿಗಾಗಿ ಅವರು ಅಷ್ಟೆಲ್ಲಾ ಹಾರಾಡಿ ರಾದ್ಧಾಂತ ಮಾಡಿದರು? ಸದನ ಎಂದರೆ ಒಂದು ರೋಚಕ ಅಖಾಡ ಎಂದುಕೊಂಡಿರುವ ಬಿಜೆಪಿ ಶಾಸಕರು, ಒಂದೆರಡು ಪ್ರಶ್ನೋತ್ತರಗಳಲ್ಲಿ ಮುಗಿದುಹೋಗಬೇಕಿದ್ದ ಸಂಗತಿಯನ್ನು ಮಾರ್ಷಲ್‌ಗಳು ಎತ್ತಿ ಹೊರಗೆ ಬಿಸಾಕುವವರೆಗೆ ಕೊಂಡೊಯ್ದರಲ್ಲ.. ಇದನ್ನು ಅರ್ಥೈಸಿಕೊಳ್ಳುವುದು ಹೇಗೆ?

ಅಷ್ಟಕ್ಕೂ ಪ್ರಶ್ನೆ ಇದ್ದಿದ್ದೇನು? ಮೊನ್ನೆಯಷ್ಟೇ ಮುಗಿದ ರಾಷ್ಟ್ರೀಯ ವಿರೋಧ ಪಕ್ಷಗಳ ನಾಯಕರ ಸಭೆಗೆ ಆಗಮಿಸಿದ ಅತಿಥಿಗಳ ಸತ್ಕಾರಕ್ಕೆ ಸರ್ಕಾರವು ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿತ್ತು ಅನ್ನೋದು. ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ, ಸರ್ಕಾರದ ಇಂತಹ ಪ್ರಮಾದವನ್ನು ಪ್ರಶ್ನಿಸುವುದು ಬಿಜೆಪಿ ಮಾತ್ರವಲ್ಲ, ಯಾವುದೇ ಪಕ್ಷದ ಹೊಣೆಯೂ ಹೌದು. ಆದರೆ ಅದಕ್ಕೆ ಪ್ರತಿಕ್ರಿಯೆ ಕೊಟ್ಟ ಮುಖ್ಯಮಂತ್ರಿಗಳು, ‘ಸಭೆಗೆ ಆಗಮಿಸಿದ ಅತಿಥಿಗಳ ಪೈಕಿ ಹಲವರು ಬೇರೆಬೇರೆ ರಾಜ್ಯಗಳ ಹಾಲಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ಲೋಕಸಭಾ ವಿರೋಧ ಪಕ್ಷದ ನಾಯಕರೂ ಇದ್ದಿದ್ದರಿಂದ ಅಂತವರನ್ನು ಬರಮಾಡಿಕೊಳ್ಳುವಾಗ ಪ್ರೊಟೊಕಾಲ್ ಪ್ರಕಾರ ಐಎಎಸ್ ಅಧಿಕಾರಿಗಳು ಉಪಸ್ಥಿತರಿರಬೇಕು. ಅದಕ್ಕಷ್ಟೇ ಐಎಎಸ್ ಅಧಿಕಾರಿಗಳು ಸ್ವಾಗತಿಸಲು ಹೋಗಿದ್ದರು. ಅದರಾಚೆಗೆ, ಅಧಿಕಾರಿಗಳನ್ನು ರಾಜಕೀಯ ಕಾರ್ಯಕ್ರಮಕ್ಕೆ ಬಳಸಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು. ಅದು ಸುಳ್ಳಾಗಿದ್ದರೆ, ಸೂಕ್ತ ಕಾನೂನು ನಿಬಂಧನೆಗಳು, ಸರ್ಕಾರ ಉಲ್ಲಂಘಿಸಿದ್ದಕ್ಕೆ ಸಮಂಜಸ ಪುರಾವೆಗಳನ್ನು ಹಾಜರುಪಡಿಸಿ ಬಿಜೆಪಿ ಚರ್ಚೆಯನ್ನು ಅರ್ಥಪೂರ್ಣವಾಗಿ ಮುಂದಕ್ಕೆ ಕೊಂಡೊಯ್ಯಬಹುದಿತ್ತು. ಆದರೆ ಬಿಜೆಪಿಗೆ ಚರ್ಚೆಗಿಂತ ಹೆಚ್ಚಾಗಿ ಗದ್ದಲ ಎಬ್ಬಿಸುವುದು ಮುಖ್ಯವಾಗಿತ್ತು. ಹಾಗಾಗಿ ಸದನದ ಬಾವಿಗಿಳಿದು, ಹೊಸ ಮಸೂದೆಗಳ ಹಸ್ತಪ್ರತಿಗಳನ್ನು ಹರಿದು, ಉಪಸಭಾಪತಿಗಳ ಮೇಲೆಲ್ಲ ಎರಚಾಡಿ… ಅಬ್ಬಬ್ಬಾ! ಎಂತೆಂಥಾ ಮುತ್ಸದ್ದಿಗಳ ಚರ್ಚೆ, ವಾಗ್ವಾದಕ್ಕೆ ಸಾಕ್ಷಿಯಾಗಿದ್ದ ಸದನದ ನೆಲದ ಘನತೆಯನ್ನು ಕಳೆಯುವುದಕ್ಕೇ ಈ ಬಿಜೆಪಿಯವರು ಇದ್ದಾರೇನೋ ಅನ್ನಿಸುವಂತಿತ್ತು ಅವರ ವರ್ತನೆ.

ಅವರ ಹಾರಾಟದಲ್ಲಿ ಕಿಂಚಿತ್ತೂ ಜನರ ಕಾಳಜಿ ಇರಲಿಲ್ಲ. ಮಳೆ ಬಂದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳು ಪ್ರವಾಹಕ್ಕೆ ತುತ್ತಾಗಿದ್ದ ಸಮಯದಲ್ಲಿ ಸ್ಟೇಜ್ ಹಾಕಿಕೊಂಡು ‘ಕುಲದಲ್ಲಿ ಮೇಲಾವುದೊ ಹುಚ್ಚಪ್ಪ….’ ಚಿತ್ರಗೀತೆಗೆ ಜಗ್ಗಣಕ್ಕ ಜಗ್ಗಣಕ್ಕ ಅಂತ ಕುಣಿದು ಕುಪ್ಪಳಿಸಿದ್ದ ಬಿಜೆಪಿಗರ ಯೋಗ್ಯತೆ ತಿಳಿದೇ ಜನ ಈ ಸಲ ಅವರನ್ನು ‘ಐವತ್ತಾರಕ್ಕಿಂತ’ ತುಸು ಜಾಸ್ತಿ ಅರವತ್ತಾರಕ್ಕೆ ತಂದು ನಿಲ್ಲಿಸಿದ್ದಾರೆ. ಅಷ್ಟಾದರೂ, ಜನ ಗಮನಿಸುತ್ತಾರೆಂಬ ಪರಿಜ್ಞಾನವಿಲ್ಲದೆ ಅವರು ಇವತ್ತು ಮಾಡಿದ ರಾದ್ಧಾಂತಕ್ಕೆ ಕಾರಣವೇನಿರಬಹುದು?

ಅನುಮಾನವಿಲ್ಲ, ವಿರೋಧಪಕ್ಷದ ನಾಯಕನ ಸ್ಥಾನ ಖಾಲಿಯಿದ್ದಷ್ಟೂ ದಿನ ಬಿಜೆಪಿಗರು ಹೀಗೆ ವರ್ತಿಸುತ್ತಲೇ ಇರುತ್ತಾರೆ. ಇವರು ಹೀಗೆ ವರ್ತಿಸಲಿ ಅಂತಲೇ ಬಹುಶಃ ಬಿಜೆಪಿ ಹೈಕಮಾಂಡ್, ವಿಪಕ್ಷ ನಾಯಕನ ಸ್ಥಾನವನ್ನು ಖಾಲಿಯಿಟ್ಟು, ಇವರ ಮೂಗಿಗೆಲ್ಲ ಅಫೀಮು ಸವರಿ ಬಿಟ್ಟಂತಿದೆ. ಅದೊಂದು ಸ್ಥಾನಕ್ಕಾಗಿ ಅತ್ತ ಜೆಡಿಎಸ್‌ನ ಕುಮಾರಸ್ವಾಮಿಯವರೂ frustrationಗೆ ಒಳಗಾಗಿದ್ದಾರೆ, ಇತ್ತ ಬಿಜೆಪಿ ನಾಯಕರೂ ಅಬ್ಬರಿಸಿ, ಬೊಬ್ಬಿರಿದು ಹೈಡ್ರಾಮಾ ಮಾಡುತ್ತಿದ್ದಾರೆ. 

ಇವರ ಈ ಆಟವನ್ನು ನೋಡುತ್ತಿದ್ದರೆ, ಮನೋ-ಲೈಂಗಿಕ ವಿಜ್ಞಾನದಲ್ಲಿ ಬರುವ exhibitionism ಎಂಬ ಅಪಸವ್ಯದ ನೆನಪಾಗುತ್ತದೆ. ಇದೊಂಥರಾ ಮಾನಸಿಕ ಗೀಳು. ಈ ಗೀಳಿಗೆ ತುತ್ತಾದ ವ್ಯಕ್ತಿಗಳು, ತನಗೆ ಅರಿವಿದ್ದೂ ತನ್ನ ಗುಪ್ತಾಂಗಗಳನ್ನು ಸಾರ್ವಜನಿಕವಾಗಿ ಮತ್ತೊಬ್ಬರಿಗೆ ಕಾಣುವಂತೆ ಪ್ರದರ್ಶಿಸಿಕೊಂಡು, ಅದರಿಂದ ತನ್ನೊಳಗೇ ಖುಷಿ ಪಟ್ಟುಕೊಳ್ಳುತ್ತಿರುತ್ತಾರೆ. ಇನ್ನು ಕೆಲವರು, ಹಾಗೆ ತಮ್ಮ ಖಾಸಗಿ ಅಂಗಗಳನ್ನು ಪ್ರದರ್ಶಿಸುವ ಮೂಲಕ, ಎದುರಿಗಿರುವ ಹೆಣ್ಣನ್ನೋ/ಗಂಡನ್ನೋ ಲೈಂಗಿಕವಾಗಿ ಪ್ರಚೋದಿಸಿ ಅವರನ್ನು ಆಕರ್ಷಿಸುತ್ತಿದ್ದೇವೆ ಎಂಬ ಮಾನಸಿಕ ತೃಷೆ ಅನುಭವಿಸುತ್ತಿರುತ್ತಾರೆ. ಖಂಡಿತ ಇದಕ್ಕೆ ಮನೋವೈದ್ಯಕೀಯ ಚಿಕಿತ್ಸೆ ಬೇಕಾಗುತ್ತದೆ. ಆದರೆ ಈ ಚಿಕಿತ್ಸೆ ಹೇಗೆ ಶುರುವಾಗುತ್ತದೆ? 

ಈ ಪ್ರಶ್ನೆ ಯಾಕೆಂದರೆ, ಬೇರೆಲ್ಲ ಕಾಯಿಲೆಗಳಲ್ಲಿ ನಮಗೆ ಉಪಶಮನ ಬೇಕೆಂದು ರೋಗಿಗೆ ಅನ್ನಿಸುವುದರಿಂದ ಆತನೇ/ಆಕೆಯೇ ವೈದ್ಯರ ಬಳಿ ಹೋಗಿ ಸಮಸ್ಯೆ ಹೇಳಿಕೊಳ್ಳುತ್ತಾರೆ. ಆದರೆ ಇಂತಹ ವಿಕೃತ ಅಪಸವ್ಯದಲ್ಲಿ ರೋಗಿ ತನ್ನ ರೋಗದಿಂದ ಖುಷಿ ಅನುಭವಿಸುತ್ತಿರುತ್ತಾನೆ, ಆದರೆ ತೊಂದರೆಗೆ ಒಳಗಾಗುವುದು ಸಭ್ಯ ನಾಗರಿಕ ಸಮಾಜ! ಇಲ್ಲಿ ರಿಲೀಫ್ ಬೇಕಾಗಿರುವುದು ರೋಗಿಗೆ ಅಲ್ಲ; ಅಂತವರ ಉಪಟಳದಿಂದ ಸಮಾಜಕ್ಕೆ! ಹಾಗಾಗಿ ಚಿಕಿತ್ಸೆಯ ಮೊದಲ ಹಂತ ಶುರುವಾಗುವುದೇ, ಇಂತವರು ಸಾರ್ವಜನಿಕವಾಗಿ ಸಿಕ್ಕಿಬಿದ್ದಾಗ ಅವರನ್ನು ಕಾನೂನು ರೀತ್ಯ ಅರೆಸ್ಟ್ ಮಾಡುವ ಮೂಲಕ! ಇವತ್ತು ಸದನದ ಮಾರ್ಷಲ್‌ಗಳು ಬಿಜೆಪಿ ಶಾಸಕರನ್ನು ಎತ್ತಿ ಹೊರಗೊಯ್ದರಲ್ಲಾ, ಥೇಟು ಅದೇ ರೀತಿ! 

ಬಿಜೆಪಿ ಹೈಕಮಾಂಡ್ ಅಥವಾ ಕೇಶವಕೃಪಾದ ತೀರ್ಪುಗಾರರ ಮುಂದೆ ತಮ್ಮ ಹಾರಾಟದ ‘ಸಾಮರ್ಥ್ಯ’ವನ್ನು ‘exhibition’ಗೆ ಇಟ್ಟು, ಅದರ ಮೂಲಕ ಅವರನ್ನು ಆಕರ್ಷಿಸಿ, ತಮ್ಮ ಮನೋಇಂಗಿತವಾದ ವಿಪಕ್ಷ ನಾಯಕ ಸ್ಥಾನದ ವಾಂಛೆಯನ್ನು ತೀರಿಸಿಕೊಳ್ಳುವ ಬಿಜೆಪಿಯವರ ಲೆಕ್ಕಾಚಾರವಿದೆಯಲ್ಲ, ಅದನ್ನು ನೋಡಿದಾಗ ಆ ಮನೋ-ಲೈಂಗಿಕ ಅಪಸವ್ಯ ಹೆಚ್ಚು ಸಾಮ್ಯತೆಯೇನೊ ಅನ್ನಿಸಿತು.

ಅಷ್ಟಕ್ಕೂ, ಸದನದಲ್ಲಿ ಗದ್ದಲವೆಬ್ಬಿಸಿ, ಮಾರ್ಷಲ್‌ಗಳಿಂದ ಹೊರಗೆ ಎತ್ತಿಸಿಕೊಂಡು ಹೋದ ಪ್ರಕರಣ ಇದೇ ಮೊದಲೇನಲ್ಲ. ಹಿಂದೆ ಹಲವು ಬಾರಿ ಇಂತದ್ದಕ್ಕೆ ಸದನ ಸಾಕ್ಷಿಯಾಗಿದೆ. ಆದರೆ ಅಂತಹ ಗದ್ದಲದ ಹಿಂದೆ ಒಂದು ಗಂಭೀರ ಪ್ರತಿರೋಧವೋ, ಅಥವಾ ನಾಡಿನ ಜನ ಕುತೂಹಲದಿಂದ ಗಮನಿಸುತ್ತಿದ್ದ ಪ್ರಕರಣದ ಚರ್ಚೆಯೋ ಇರುತ್ತಿತ್ತು. ಹಿಂದೊಮ್ಮೆ ಇದೇ ಬಿಜೆಪಿ ಪಕ್ಷದ ಸದಸ್ಯರು, ಯಡಿಯೂರಪ್ಪನವರ ನೇತೃತ್ವದಲ್ಲಿ ‘ಸಿಎಂ ಕುಮಾರಸ್ವಾಮಿಯವರು ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವುದನ್ನು ಬೇಕಂತಲೇ ವಿಳಂಬ ಮಾಡುತ್ತಿದ್ದಾರೆ’ ಅಂತ ಆರೋಪಿಸಿ, ಸದನದೊಳಗೇ ಹಗಲು ರಾತ್ರಿ ಮಲಗಿ ಪ್ರತಿಭಟಿಸಿದ್ದರು. ಅದು ನಿಜಕ್ಕೂ ಗಂಭೀರ ಪ್ರಕರಣ. ಅಂತಹ ಯಾವುದಾದರು ಪ್ರಕರಣದಲ್ಲಿ ಇವತ್ತಿನ ಬಿಜೆಪಿ ಸದಸ್ಯರು ಪ್ರತಿಭಟಿಸಿ, ಗದ್ದಲ ಮಾಡಿ, ಮಾರ್ಷಲ್‌ಗಳಿಂದ ಆಚೆ ಹಾಕಿಸಿಕೊಂಡಿದ್ದರೆ ಅದಕ್ಕೊಂದು ಘನತೆಯಾದರೂ ಇರುತ್ತಿತ್ತು. ಆದರೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆಯ ನಂತರ ಸಂಪೂರ್ಣ ಬಿದ್ದುಹೋಗುವಂತಹ ಕಾರಣವನ್ನಿಟ್ಟುಕೊಂಡು  ಇಷ್ಟೆಲ್ಲಾ ರಾದ್ದಾಂತ ಮಾಡುತ್ತಾರೆಂದರೆ, ಅದು ತಮ್ಮ ಸಾಮರ್ಥ್ಯದ ಪ್ರದರ್ಶನ ಕಲೆಯ ಮೂಲಕ ಹೈಕಮಾಂಡ್ ನಾಯಕರನ್ನು ಮೆಚ್ಚಿಸಿ ವಿಪಕ್ಷ ನಾಯಕ ಸ್ಥಾನ ಗಿಟ್ಟಿಸಿಕೊಳ್ಳುವ ಇರಾದೆಯಲ್ಲದೆ ಮತ್ತಿನ್ನೇನು ಇದ್ದೀತು? ಅಂದಹಾಗೆ, ಮಾರ್ಷಲ್‌ಗಳು ಹಾಗೆ ಎತ್ತಿಕೊಂಡು ಹೋಗುವಾಗ ಕೆಲವು ಶಾಸಕರು ಅದೇಗೆ ನಸುನಗುತ್ತಾ ಖುಷಿಯಾಗಿದ್ದರು ಅನ್ನುತ್ತೀರಿ. ಅದರಲ್ಲಿಯೇ ಅರ್ಥವಾಗುತ್ತದೆ, ತಾವು ಎತ್ತಿಕೊಂಡ ವಿಷಯದ ಬಗ್ಗೆ ಸ್ವತಃ ಅವರೇ ಎಷ್ಟು ಗಂಭೀರವಾಗಿದ್ದರು ಅನ್ನೋದು! 

ಜನ ಪಾಠ ಕಲಿಸಿದ ಮಾತ್ರಕ್ಕೆ, ರಾಜಕಾರಣಿಗಳು ಪಾಠ ಕಲಿಯಬೇಕು ಅಂತೇನಿಲ್ಲವಲ್ಲಾ! ಇನ್ನೂ ಒಂದು ಕೊನೇ ಪಾಠ ಮುಂದಿನ ವರ್ಷ ಬಾಕಿಯಿದೆ. ಅದರ ಆನಂತರವಾದರೂ ಇವರು ಸುಧಾರಿಸುತ್ತಾರೋ ಕಾದು ನೋಡಬೇಕು. ಆದರೆ ಅಲ್ಲಿಯವರೆಗೆ ಸಭ್ಯ ನಾಗರೀಕ ಸಮಾಜ ಇನ್ನೂ ಅದೇನೇನು ಇವರ ಅಪಸವ್ಯಗಳನ್ನು ಕಾಣಬೇಕೊ, ದೇವರೇ ಬಲ್ಲ!

ಮಾಚಯ್ಯ ಎಂ ಹಿಪ್ಪರಗಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ-ಡೆಪ್ಯುಟಿ ಸ್ಪೀಕರ್ ಮೇಲೆ ಪೇಪರ್ ಎಸೆದ ಆರೋಪ: 10 ಬಿಜೆಪಿ ಶಾಸಕರ ಅಮಾನತು

Related Articles

ಇತ್ತೀಚಿನ ಸುದ್ದಿಗಳು