Friday, June 14, 2024

ಸತ್ಯ | ನ್ಯಾಯ |ಧರ್ಮ

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ABVP ಪದಾಧಿಕಾರಿಗಳು : ಆರೋಪ ತಳ್ಳಿ ಹಾಕಿದ ಸಂಘಟನೆ

ರಾಜಸ್ಥಾನದ ಜೋಧ್‌ಪುರ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಆವರಣದಲ್ಲಿ 17 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳು ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರು ಎಂದು ಪೊಲೀಸರು ಆರೋಪಿಸಿ ರಾಜಸ್ಥಾನದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ತಾನು ಪ್ರೀತಿಸಿದ ಹುಡುಗನೊಂದಿಗೆ ಅಜ್ಮೀರ್ ಜಿಲ್ಲೆಯ ಬೇವಾರ್‌ನಿಂದ ಓಡಿಹೋಗಿ ಶನಿವಾರ ತಡರಾತ್ರಿ ಜೋಧ್‌ಪುರ ತಲುಪಿದ್ದಾಳೆ. ನಗರದಲ್ಲಿ ವಸತಿಗಾಗಿ ಹುಡುಕಾಡುತ್ತಿದ್ದಾಗ ಮೂವರು ಆರೋಪಿಗಳು ರಾತ್ರಿ ಆಶ್ರಯ ನೀಡುವುದಾಗಿ ಹೇಳಿ ಆಮಿಷ ಒಡ್ಡಿದ್ದಾರೆ.

ನಂತರ ಆರೋಪಿಗಳು ಅವರನ್ನು ವಿಶ್ವವಿದ್ಯಾನಿಲಯದ ಹಾಕಿ ಮೈದಾನಕ್ಕೆ ಕರೆದೊಯ್ದು ಆಕೆಯ ಪ್ರಿಯಕರನನ್ನು ಥಳಿಸಿ ನಂತರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆಪಾದಿತ ಅತ್ಯಾಚಾರಿಗಳನ್ನು ಅಪರಾಧ ನಡೆದ ಎರಡು ಗಂಟೆಗಳ ನಂತರ ಬಂಧಿಸಲಾಗಿದೆ. ಅವರನ್ನು ಧರ್ಮಪಾಲ್ ಸಿಂಗ್, ಸಮಂದರ್ ಸಿಂಗ್ ಭಾಟಿ ಮತ್ತು ಭಟ್ಟಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಎಲ್ಲರೂ 20 ರಿಂದ 22 ವರ್ಷ ವಯಸ್ಸಿನವರಾಗಿದ್ದಾರೆ.

ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿಗಳು ABVP ಸದಸ್ಯರು ಎಂದು ಪೊಲೀಸರು ಗುರುತಿಸಿದ್ದು, ರಾಜಸ್ಥಾನದ ರಾಜಕೀಯದಲ್ಲಿ ಬಾರೀ ಕೋಲಾಹಲ ಸೃಷ್ಟಿಯಾಗಿದೆ. ಆದರೆ ಪೊಲೀಸರು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ವಿದ್ಯಾರ್ಥಿ ಸಂಘದ ಚುನಾವಣೆಗೆ ಎಬಿವಿಪಿಯಿಂದ ಟಿಕೆಟ್‌ಗಾಗಿ ವಿದ್ಯಾರ್ಥಿ ನಾಯಕನಿಗೆ ಆರೋಪಿಗಳು ಪ್ರಚಾರ ನಡೆಸುತ್ತಿದ್ದರು ಎಂದು ಪೊಲೀಸರು ತನಿಖೆ ಮೂಲಕ ತಿಳಿಸಿದ್ದಾರೆ.

ಆದರೆ ಬಿಜೆಪಿ ಪಕ್ಷ ಮತ್ತು ABVP ಸಂಘಟನೆ ಆರೋಪಿಗಳೊಂದಿಗಿನ ತಮ್ಮ ಸಂಬಂಧವನ್ನು ನಿರಾಕರಿಸಿವೆ. ಇದೇ ವಿಚಾರ ರಾಜಸ್ಥಾನದ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪವಾದಾಗ ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿದ ಘಟನೆ ನಡೆದಿದೆ. ವಿಧಾನಸಭೆಯಲ್ಲಿ ಪಕ್ಷೇತರ ಶಾಸಕ ಸಂಯಮ್ ಲೋಧಾ ಅವರು ಈ ವಿಚಾರ ಪ್ರಸ್ತಾಪಿಸಿದಾಗ ಬಿಜೆಪಿ ಶಾಸಕರು ಇದನ್ನು ವಿರೋಧಿಸಿ, ಈ ವಿಚಾರವನ್ನು ನಡಾವಳಿಗಳ ದಾಖಲೆಯಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದರು.

ಇದರ ನಡುವೆ ಆರೋಪಿಗಳಲ್ಲಿ ಒಬ್ಬನಾದ ಧರ್ಮಪಾಲ್ ಸಿಂಗ್ ಅವರು ಸೆಪ್ಟೆಂಬರ್ 21, 2021 ರಿಂದ ಸದಸ್ಯರಾಗಿದ್ದಾರೆ ಎಂದು ತೋರಿಸುವ ಎಬಿವಿಪಿ ಸದಸ್ಯತ್ವದ ರಸೀದಿಯನ್ನು ರಾಜ್ಯ ಸರ್ಕಾರದ ಮೂಲಗಳು ಬುಧವಾರ ಬಿಡುಗಡೆ ಮಾಡಿದೆ. ರಶೀದಿಯಲ್ಲಿ ಎಬಿವಿಪಿ ಜೋಧ್‌ಪುರ ‘ಪ್ರಾಂತ್’ (ಬ್ಲಾಕ್) ಅಧ್ಯಕ್ಷ ಬಲ್ವೀರ್ ಚೌಧರಿ ಸಹಿ ಮಾಡಿದ ದಾಖಲೆ ಕೂಡ ಕಂಡುಬಂದಿದೆ.

ಮೂವರು ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO), ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು