Saturday, June 15, 2024

ಸತ್ಯ | ನ್ಯಾಯ |ಧರ್ಮ

ಪುರುಷನೊಳಗಿನ ಹೆಂಗರುಳು ಎಚ್ಚರಗೊಳ್ಳಬೇಕು

ಮೊದಲು ಸಮಾಜದ ಒಡಲಾಳ ಬದಲಾಗಬೇಕು. ಅದು ಶುಚಿಯಾಗಿದ್ದರೆ ನೋಡುವ ನೋಟ, ಆಡುವ ಮಾತು ಶುದ್ಧವಾಗಿರುತ್ತದೆ. ಇದಲ್ಲದೆ ಪುರುಷನೆಂಬ ಅಹಂ ಕೂಡ ಕಳಚಬೇಕು. ಈ ಅಹಂನಿಂದಲೇ ಹೆಣ್ಣನ್ನು ಆತ ಸರಕನ್ನಾಗಿ ಮಾಡಿರುವುದು. ಹೆಣ್ಣನ್ನು ಗುಲಾಮ ಸ್ಥಿತಿಯಿಂದ ದೂರವಿಟ್ಟು, ಸ್ನೇಹ ಪ್ರೀತಿಯ ಮನೋಭಾವದಿಂದ ಸಹಜೀವಿಯಂತೆ ಕಾಣಬೇಕಿದೆ – ಆಕಾಶ್ ಆರ್ ಎಸ್. ಯುವ ಬರಹಗಾರ 

ದೇಶದ ಯಾವುದೇ ಮೂಲೆಯಲ್ಲೂ ಹೆಣ್ಣಿನ ಮೇಲಿನ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದಂತಹ ಪ್ರಕರಣಗಳು ಕೇಳಿ ಬಂದರೆ ಸಾಕು ಸಮಾಜದಲ್ಲಿ ನಾಗರೀಕರೆಸಿಕೊಂಡವರ ಬಾಯಲ್ಲಿ ಅದು ಬೇಗ ಪ್ರಚಾರವಾಗಿ ಬಿಡುತ್ತದೆ. ಇದನ್ನೂ ಮತ್ತಷ್ಟು ವೈಭವೀಕರಿಸುವುದು ಕೂಡ ಅದೇ ಸಮಾಜದ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿಕೊಂಡ ಪತ್ರಿಕಾ ಉದ್ಯಮ. ಆದರೆ ಸಂತ್ರಸ್ತರ ಬದುಕು ಹಾಗೂ ಅವರ  ಕುಟುಂಬದ ನೋವು ಏನೆಂದು ಅರಿಯುವಲ್ಲಿ ಅಥವಾ ಯೋಚಿಸುವಲ್ಲಿ ಇವರಿಬ್ಬರು ಸೋತಿದ್ದಾರೆ ಎಂದರೆ ತಪ್ಪಾಗಲಾರದು. 

ಈಗಾಗಲೇ ಇಂತಹ ಪ್ರಕರಣಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಅಸಹನೆ, ಬಹುದೊಡ್ಡ ಪ್ರತಿರೋಧ, ಆವೇಷವೂ ಹೊರಬರುತ್ತಲೆ ಇವೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್‌ ಮಾಡಿ ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಮಾಡಿದ್ದು ಇದೆ. ಇವೆಲ್ಲವುಗಳ ನಡುವೆ ಸಂವೇದನಾಶೀಲರಾಗಿ ನಾವೆಲ್ಲಾ ಚಿಂತನೆಗೆ ಇಳಿಯಬೇಕಿದೆ. ಅದು ಸಂತ್ರಸ್ತರ ಮನಸ್ಥಿತಿ ಹಾಗೂ ಅವರ ಮುಂದಿನ ಬದುಕಿನ ಬಗೆಗೆ. 

ಮುರುಘಾ ಮಠದ ಪ್ರಕರಣದಿಂದ ಹಿಡಿದು ಸಾಗರದ ವಸತಿ ಶಾಲೆಯ ಹುಡುಗಿ, ಶಿವಮೊಗ್ಗದಲ್ಲಿನ ಚರ್ಚ್‌ ಫಾದರ್‌ನ ಲೈಂಗಿಕ ಕಿರುಕುಳ ಹಾಗೂ ಈಗಿನ ಮಣಿಪುರದ ಕಾಂಗಪೂರ ಜಿಲ್ಲೆಯಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ನಗ್ನ ಮಾಡಿ ಮೆರವಣಿಗೆ ನಡೆಸಿ ಮೈದಾನದಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿರುವುದು ಹಾಗೂ ಬೋಧಪುರ ವಿಶ್ವವಿದ್ಯಾಲಯದಲ್ಲಿ ಹಾಕಿ ಮೈದಾನದಲ್ಲಿ 17 ವರ್ಷದ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಇವೆಲ್ಲ ಕೆಲ ಉದಾಹರಣೆಗಳಷ್ಟೇ. ಬಹುತೇಕ ಪ್ರಕರಣಗಳು ಕಾನೂನು ಕ್ರಮವಾಗಿ ನ್ಯಾಯಾಲಯದಲ್ಲಿ ಇವೆ. ಆನಂತರದಲ್ಲಿ ಅಪರಾಧಿಗಳು ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಪೂರ್ಣಗೊಳಿಸಿ ಮರಳಿ ಮತ್ತೆ ತಮ್ಮ ಹಳೆ ಜೀವನವನ್ನು ಮುಂದುವರೆಸುತ್ತಾರೆ. ಆದರೆ ಇಂತಹ ಕೃತ್ಯಗಳಿಗೆ ಒಳಗಾದ ಸಂತ್ರಸ್ತರ ಸ್ಥಿತಿ ಏನು? ಪೋಕ್ಸೋ ಕಾಯ್ದೆಯಡಿ ಬರುವ ಹೆಣ್ಣು ಮಕ್ಕಳ ಗತಿಯೇನು?. ತಸ್ಲಿನ್‌ ಬಾನು ಪ್ರಕರಣ ಇದಕ್ಕೆ ಉದಾಹರಣೆಯಾಗಿ ನಿಂತಿದೆ. ಅತ್ಯಾಚಾರಿಗಳನ್ನು ಸಂಭ್ರಮದಿಂದ ಬರಮಾಡಿಕೊಂಡ ಚಿತ್ರ ಕಣ್ಣಮುಂದೆ ಕಟ್ಟಿದಂತಿದೆ. ಆದರೆ ಅವರ ಲೈಂಗಿಕ ತೃಷೆಗೆ ಬಲಿಯಾದ ಹೆಣ್ಣು ಮಕ್ಕಳ ಸ್ಥಿತಿ, ಈ ಸಮಾಜ ಅವರನ್ನು ನೋಡುವ ಬಗೆ, ಅವರುಗಳ ಸಂಕಟ, ವೈವಾಹಿಕ ಜೀವನ, ಶಿಕ್ಷಣ, ಉದ್ಯೋಗದಂತಹ ಸ್ಥಳದಲ್ಲಿ ಇತರರು  ಅವರನ್ನು ನೋಡುವ ದೃಷ್ಟಿ ಸಹಜವಾಗಿರುತ್ತದೆಯೇ? ಇದನ್ನು ಬಲ್ಲವರಾಗಿದ್ದೇವೆ. 

ಇದನ್ನೂ ಓದಿ ಹೆಣ್ಣಿನ ಮೇಲೆ ಜಂಗೀ ಕುಸ್ತಿ

ಕಾನೂನಿನಲ್ಲಿ ಅಪರಾಧಿಗೆ ಶಿಕ್ಷೆ ಒದಗಿಸುವಂತ ಎಲ್ಲಾ ಕ್ರಮಗಳೂ ನಡೆಯುತ್ತವೆ. ಆದರೆ ಅದೇ ಕಾನೂನು ಇಂತಹ ಕೃತ್ಯಕ್ಕೆ ಒಳಗಾದ ಹೆಣ್ಣಿನ ಬದುಕಿಗೆ ಬೆಂಗಾವಲಾಗಿ ನಿಂತಿದ್ದು ವಿರಳ. ಅಲಹಾಬಾದ್‌ ಹೈಕೋರ್ಟ್‌ ಸಂತ್ರಸ್ತೆಯ ಬಗ್ಗೆ ಜ್ಯೋತಿಷಿಗಳ ವರದಿ ಕೇಳಿದ ಪ್ರಸಂಗ ಇದಕ್ಕೊಂದು ಉದಾಹರಣೆ.. ಒಂದು ವೇಳೆ ನ್ಯಾಯಾಲಯ ಸಂತ್ರಸ್ತರ ಜತೆಗೆ ಇದ್ದರು ಕೂಡ ಈ ಸಮಾಜ ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಯಾಕೆ.?  ಸರ್ಕಾರವೂ ಕೂಡ ಪರಿಹಾರವೆಂದು ಹಣ ನೀಡಿ ಕೈ ತೊಳೆದುಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಆದರೆ ಆ ಪರಿಹಾರ ಅವರನ್ನು ಸಮಾಜದಲ್ಲಿ ಮೊದಲಿನಂತೆ ಮಾಡಲು ಸಾಧ್ಯವೇ?.  ಮೊದಲಿನಂತೆ ಅವರು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವೆ? ಮಣಿಪುರದಲ್ಲಿ ಬುಡಕಟ್ಟು ಮಹಿಳೆಯ ನಗ್ನ ವೀಡಿಯೋವನ್ನು ಟ್ವಿಟರ್‌ ಸಂಸ್ಥೆ ಹರಿಬಿಟ್ಟಿದೆ. ಅದನ್ನು ಈಗ ಸುಪ್ರೀಂ ಕೋರ್ಟ್‌ ಕೂಡ ಖಂಡಿಸಿ ತೆಗೆಯಲು ತಾಕೀತು ಮಾಡಿದೆ. ಆದರೆ ಆ ಹೆಣ್ಣು ಮಕ್ಕಳಿಗೆ ಆಗಿರುವ ಮಾನಸಿಕ ಘಾಸಿಯನ್ನು ಸರಿಪಡಿಸುವವರು ಯಾರು?. ಇಡೀ ಜಗತ್ತೇ ಅವರ ದೇಹವನ್ನು ನೋಡುವಂತೆ ಮಾಡಿರುವ ಈ ಸಮಾಜವೂ ಅವರನ್ನು ಕಳಂಕರಹಿತರಾಗಿ ನೋಡುವುದೇ? ಅಥವಾ ಕಾನೂನು, ಸರ್ಕಾರವೂ ಅಂತಹ ವಾತಾವರಣ ನಿರ್ಮಾಣ ಮಾಡುತ್ತದೆಯೇ? ಇಂತಹ ಅದೆಷ್ಟೋ ಪ್ರಶ್ನೆಗಳು ನಮ್ಮೊಳಗೆ ನುಸುಳಿ ಹೋಗುತ್ತಲೇ ಇವೆ. ಒಂದಂತೂ ನಿಜ. ಇಂತಹ ಪ್ರಕರಣಗಳು ಇಡೀ ಮನುಷ್ಯತ್ವವೇ ತಲೆ ತಗ್ಗಿಸುವಂತೆ ಮಾಡಿವೆ.

ಮನಸ್ಥಿತಿಗಳು ಬದಲಾಗಬೇಕು

ಮೊದಲು ಸಮಾಜದ ಒಡಲಾಳ ಬದಲಾಗಬೇಕು. ಅದು ಶುಚಿಯಾಗಿದ್ದರೆ ನೋಡುವ ನೋಟ, ಆಡುವ ಮಾತು ಶುದ್ಧತೆಯಿಂದ ಕೂಡಿರುತ್ತದೆ. ಇದಲ್ಲದೆ ಪುರುಷನೆಂಬ ಅಹಂ ಕೂಡ ಕಳಚಬೇಕು. ಈ ಅಹಂನಿಂದಲೇ ಹೆಣ್ಣನ್ನು ಸರಕನ್ನಾಗಿ ಮಾಡಿರುವುದು. ಹೆಣ್ಣನ್ನು ಗುಲಾಮ ಸ್ಥಿತಿಯಿಂದ ದೂರವಿಟ್ಟು, ಸ್ನೇಹ ಪ್ರೀತಿಯ ಮನೋಭಾವದಿಂದ ಸಹಜೀವಿಯಂತೆ ಕಾಣಬೇಕಿದೆ. ಅಲ್ಲದೆ  ಪುರುಷನೊಳಗಿನ ಹೆಂಗರುಳು ಎಚ್ಚರಗೊಳ್ಳಬೇಕು. ಆಗ ಕಾನೂನು, ಕಟ್ಟಳೆಯಿಂದ ಆಗದೆ ಇರುವುದು ಅಂತರಾಳದ ಮಿಡಿತದಿಂದ  ಸಾಧ್ಯವಾಗುತ್ತದೆ.

ಆಕಾಶ್.ಆರ್.ಎಸ್ 

ಯುವ ಬರಹಗಾರ

ಇದನ್ನು ಓದಿದ್ದೀರಾ? ಹೆಣ್ಣಿನ ಮೇಲಿನ ಜಂಗೀ ಕುಸ್ತಿ – ಭಾಗ 2

Related Articles

ಇತ್ತೀಚಿನ ಸುದ್ದಿಗಳು