Wednesday, June 19, 2024

ಸತ್ಯ | ನ್ಯಾಯ |ಧರ್ಮ

ಉಡುಪಿಯಲ್ಲಿ ನಿಜವಾಗಿಯೂ ನಡೆದುದೇನು?

ಕಾಲೇಜಿನ ಮುಖ್ಯಸ್ಥರು ಹೇಳುವ ಪ್ರಕಾರ, ಇದು ಸಹಪಾಠಿಗಳಲ್ಲಿ ತಮಾಷೆಗಾಗಿ ನಡೆದ ಒಂದು ಘಟನೆ. ಇದರಲ್ಲಿ ದುರುದ್ದೇಶವೇನೂ ಇಲ್ಲ. ಅವರೆಲ್ಲ ಪರಿಚಿತರೇ ಆಗಿರುವುದರಿಂದ ಹುಡುಗಿ ದೂರು ಕೂಡಾ ಕೊಟ್ಟಿಲ್ಲ. ಆದರೆ ಕಾಲೇಜು ಕ್ಯಾಂಪಸ್ ನಲ್ಲಿ ಮೊಬೈಲ್ ಬಳಸುವಂತಿಲ್ಲ ಎಂಬ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮತ್ತು ವೀಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಅನೇಕ ಕಾರಣಗಳಿಗೆ, ದೇಶದ ಮಾತ್ರವಲ್ಲ, ಜಗತ್ತಿನಲ್ಲಿ ಹರಡಿ ಹೋಗಿದ್ದ ಭಾರತೀಯರೆಲ್ಲರಲ್ಲೂ ಕುತೂಹಲ ಕೆರಳಿಸಿತ್ತು. ಇದಕ್ಕೆ ಕಾರಣ ಇದು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ‘ಮಾಡು ಇಲ್ಲವೇ ಮಡಿ’ ಪ್ರಶ್ನೆಯಾಗಿದ್ದುದು ಮಾತ್ರವಲ್ಲ, ಸೆಕ್ಯುಲರ್ ಭಾರತದ ಅಳಿವು ಉಳಿವಿನ ಒಂದು ಸಣ್ಣ ಪ್ರಶ್ನೆಯೂ ಅಲ್ಲಿದ್ದುದು.

ಬಿಜೆಪಿಯಂತೂ ದೇಶದ ಪ್ರಧಾನಿ, ಗೃಹಮಂತ್ರಿ ಹೀಗೆ ಘಟಾನುಘಟಿಗಳನ್ನು ಪ್ರಚಾರಕ್ಕೆ ಬಳಸಿಕೊಂಡಿತ್ತು; ಸಾವಿರಾರು ಕೋಟಿ ಹಣ ವ್ಯಯಿಸಿತ್ತು; ಮಾಧ್ಯಮಗಳನ್ನೆಲ್ಲ ಉಪಯೋಗಿಸಿಕೊಂಡಿತ್ತು. ಆದರೆ ಈ ಯಾವ ಹೈ ವೋಲ್ಟೇಜ್ ಪ್ರಚಾರವೂ ಬಿಜೆಪಿಯ ಕೈ ಹಿಡಿಯಲಿಲ್ಲ. ಫಲಿತಾಂಶ ಘೋಷಣೆಯಾದಾಗ ಕಾಂಗ್ರೆಸ್ ಗೆ 135 ಸ್ಥಾನ ಬಂದರೆ ಬಿಜೆಪಿಗೆ ಸಿಕ್ಕಿದ್ದು ಕೇವಲ 66 ಸ್ಥಾನ.

ಇದು ಬಿಜೆಪಿಗೆ ಆದ ಕೇವಲ ಚುನಾವಣಾ ಸೋಲಲ್ಲ; ಕಂಡುಕೇಳರಿಯದಂತಹ ಮುಖಭಂಗ. ಈ ಮುಖಭಂಗವನ್ನು ಅದಕ್ಕೆ ಸಹಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಇದೇ  ಕಾರಣದಿಂದ ಕಾಂಗ್ರೆಸ್ ಸರಕಾರ ರಚನೆಯಾದ ದಿನದಿಂದಲೇ, ‘ಕಾನೂನು ಪರಿಸ್ಥಿತಿ ಹದಗೆಟ್ಟಿದೆ, ಹಿಂದೂಗಳಿಗೆ ಭದ್ರತೆ ಇಲ್ಲವಾಗಿದೆ, ಇದು ಹಿಂದೂ ವಿರೋಧಿ ಸರಕಾರ’ ಎಂಬ ಅಪಪ್ರಚಾರ ಅಭಿಯಾನ ಶುರುವಾಯಿತು. ಈಗ ಉಡುಪಿ ಘಟನೆಯೊಂದರ ಬಗ್ಗೆಯೂ ನಡೆಯುತ್ತಿರುವುದು ಅದೇ ಅಪಪ್ರಚಾರ ಅಭಿಯಾನದ ಮುಂದುವರಿದ ಭಾಗ ಎನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೆ ವಿಶೇಷ ಬುದ್ಧಿಮತ್ತೆಯೇನೂ ಅಗತ್ಯವಿಲ್ಲ.

ಕಾಣಿಸಿಕೊಂಡ ಉಡುಪಿಯ ಉಲ್ಲೇಖ

ಮಣಿಪುರದಲ್ಲಿ 80 ದಿನಗಳಿಂದ ನಡೆಯುತ್ತಿರುವ  ಭೀಕರ ಜನಾಂಗೀಯ ಸಂಘರ್ಷದ ಬಗ್ಗೆ ಒಕ್ಕೂಟ ಸರಕಾರ ದಿವ್ಯ ಮೌನವನ್ನು ವಹಿಸಿದ್ದರೂ, ಇತ್ತೀಚೆಗೆ ವೈರಲ್ ಆದ ಒಂದು ವೀಡಿಯೋದ ಕಾರಣ ಪ್ರಧಾನಿಗಳು ತಮ್ಮ ಮೌನವನ್ನು ಮುರಿಯುವುದು ಅನಿವಾರ್ಯವಾಯಿತು. ಆದರೆ ಮೌನ ಮುರಿದಾಗಲೂ ಅವರು ಮಣಿಪುರದ ಜತೆಯಲ್ಲಿ ಕಾಂಗ್ರೆಸ್ ಆಳ್ವಿಕೆಯ ರಾಜಸ್ತಾನ ಮತ್ತು ಛತ್ತೀಸ್ ಗಢದ ಹೆಸರನ್ನೂ ಎಳೆದು ತರಲು ಮರೆಯಲಿಲ್ಲ.

ಬಿಜೆಪಿ ಬೆಂಬಲಿಗರಿಗೆ ಇಷ್ಟೇ ಸಾಕಾಯಿತು. ‘ಮಣಿಪುರದ ಬಗ್ಗೆ ಮಾತಾಡುತ್ತೀರಲ್ಲ ನಿಮಗೆ ಬಂಗಾಳ, ರಾಜಸ್ಥಾನ ಕಾಣುವುದಿಲ್ಲವೇ?’ ಎಂದು what-aboutery ಯಲ್ಲಿ ತೊಡಗಿಯೇ ಬಿಟ್ಟರು. ಈ ಗದ್ದಲದ ನಡುವೆ ಸಣ್ಣಗೆ ಉಡುಪಿಯ ಹೆಸರೂ ಕಾಣಿಸಿಕೊಂಡಿತು.

ಕರ್ನಾಟಕದ, ಅದರಲ್ಲೂ ಕರಾವಳಿಯವರಾದ ನಮಗೇ ಇದು ಅಚ್ಚರಿಯ ಸಂಗತಿ. ರಾಜ್ಯದಲ್ಲಿ, ರಾಜ್ಯದ ಕೋಮುವಾದಿ ಮಾಧ್ಯಮಗಳಲ್ಲಿಯೂ ಚರ್ಚೆಯಾಗದ ಒಂದು ವಿಷಯ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವುದಾದರೂ ಹೇಗೆ?! ಕರ್ನಾಟಕದ ಬಗ್ಗೆ ಏನೇನೂ ಗೊತ್ತಿಲ್ಲದಿರುವವರು ಇದಕ್ಕೆ ಪ್ರತಿಕ್ರಿಯಿಸುತ್ತಿರುವುದಾದರೂ ಹೇಗೆ?!

ಆದರೆ ಇಂದಿನ ದ್ವೇಷಮಯ ವಾತಾವರಣದಲ್ಲಿ ಇದಕ್ಕೆ ಉತ್ತರ ಹುಡುಕುವುದು ಕಷ್ಟವೇನಲ್ಲ. ಈಗ ಇಲ್ಲಿ ಯಾರಿಗೂ ಕಾಮನ್ ಸೆನ್ಸ್ ಬೇಕಾಗಿಲ್ಲ, ಬರೇ ದ್ವೇಷ, ದ್ವೇಷ ಮತ್ತು ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುವ ನಾನ್ ಸೆನ್ಸ್ ಪೋಸ್ಟ್ ಗಳು, ಕಮೆಂಟ್ ಗಳು. ಶಾಂತಿ ಬೇಡ, ಗಲಭೆ ಬೇಕು!

ಇಂತಹ ಹೊತ್ತಿನಲ್ಲಿ ಫ್ಯಾಕ್ಟ್ ಚೆಕ್ಕರ್ ಮಹಮದ್ ಝುಬೇರ್ ಫೀಲ್ಡಿಗಿಳಿದರು. ವಿಷಯದ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸಿದರು. ಉಡುಪಿಯ ಘಟನೆಯ ಬಗ್ಗೆ ‘ದಿ ನ್ಯೂಸ್ ಮಿನಿಟ್’ ವೆಬ್ ಪೋರ್ಟಲ್ ಈಗಾಗಲೇ ಮಾಡಿದ ಸ್ಟೋರಿಯತ್ತಲೂ ಬೆಟ್ಟು ಮಾಡಿದರು.

ಘಟನೆಯ ವಿವರ

‘ದಿ ನ್ಯೂಸ್ ಮಿನಿಟ್’ ವರದಿಯ ಪ್ರಕಾರ ಉಡುಪಿಯಲ್ಲಿ ನಡೆದುದು ಇಷ್ಟು – ಇದೇ ಜುಲೈ 19, 2023 ರಂದು ಉಡುಪಿಯ ಒಂದು ಪಾರಾ ಮೆಡಿಕಲ್ ಕಾಲೇಜಿನ ರೆಸ್ಟ್ ರೂಮ್ ನಲ್ಲಿ ಮೂವರು ಹುಡುಗಿಯರು ಇನ್ನೊಬ್ಬಳು ಸಹಪಾಠಿ ಹುಡುಗಿಯ ವೀಡಿಯೋ ರೆಕಾರ್ಡ್ ಮಾಡಿದರು. ಆಕಸ್ಮಿಕವೆಂದರೆ, ವೀಡಿಯೋ ಚಿತ್ರೀಕರಣ ಮಾಡಿದ ಹುಡುಗಿಯರು ಮುಸ್ಲಿಂ ಸಮುದಾಯದವರಾಗಿದ್ದರೆ, ಚಿತ್ರೀಕರಣಗೊಂಡಾಕೆ ಹಿಂದೂ ಸಮುದಾಯದವಳು. ನಡೆದ ಘಟನೆಯನ್ನು ಆ ಹಿಂದೂ ಹುಡುಗಿ ತನ್ನ ಸ್ನೇಹಿತರೊಂದಿಗೆ ಹೇಳಿಕೊಂಡಳು. ಆ ಸ್ನೇಹಿತರು ವಿಷಯವನ್ನು ಶಾಲೆಯ ಆಡಳಿತದ ಗಮನಕ್ಕೆ ತಂದರು. ಹೀಗೆ ವಿಷಯ ನಿಧಾನಕ್ಕೆ ಹೊರಗೆ ಹರಡಲಾರಂಭಿಸಿತು. ಮೊದಲೇ ಹಿಜಾಬ್ ಗಲಾಟೆಯಿಂದ ಬಿಸಿಯೇರಿದ್ದ ಮತ್ತು ಪ್ರತಿಯೊಂದನ್ನೂ ಕೋಮು ವಿಷಯಕ್ಕೆ ಜೋಡಿಸಿ ಗದ್ದಲ ಎಬ್ಬಿಸಲು ಕಾದಿರುವ ಸಂಘಟನೆಗಳು ಇರುವ ಊರು, ಅಂದ ಮೇಲೆ ಕೇಳಬೇಕೇ?

ಈ ಹಂತದಲ್ಲಿ ಪ್ರಕರಣಕ್ಕೆ ಕೈ ಹಾಕಿದ ‘ಸರ್ವಕಾಲೇಜು ವಿದ್ಯಾರ್ಥಿ ಶಕ್ತಿ’ ಎಂಬ ಸಂಘಟನೆ, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಉಡುಪಿ ಸುಪರಿಂಟೆಂಡೆಂಟ್ ಗೆ ದೂರು ಸಲ್ಲಿಸಿತು. ವಿದ್ಯಾರ್ಥಿಗಳ ವಿರುದ್ಧ ಶಿಕ್ಷಣ ಸಂಸ್ಥೆ ಪೊಲೀಸ್ ದೂರು ನೀಡದಿದ್ದರೆ ಪ್ರತಿಭಟನೆ ನಡೆಸುವ ಬೆದರಿಕೆಯನ್ನೂ ಹಾಕಲಾಯಿತು. ಹೊರಗಿನ ಗುಂಪುಗಳು ಕೈ ಹಾಕುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನಗೊಳ್ಳಲಾರಂಭಿಸಿತು.

ಅದೇ ಹೊತ್ತಿನಲ್ಲಿ, ಘಟನೆಗೆ ರೆಕ್ಕೆ ಪುಕ್ಕ ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಅದನ್ನು ವ್ಯಾಪಕಗೊಳಿಸುವ ಕೆಲಸ ಭರದಿಂದ ಸಾಗಿತು. ಸ್ಥಳೀಯ ನ್ಯೂಸ್ ಚಾನಲ್ ಗಳಲ್ಲಿ ಚರ್ಚೆ ನಡೆಯಿತು. ರೆಸ್ಟ್ ರೂಮ್ ನಲ್ಲಿ ನಡೆದ ಘಟನೆಯನ್ನು ಶೌಚಾಲಯದಲ್ಲಿ ನಡೆದ ಘಟನೆ, ವೀಡಿಯೋವನ್ನು ಅಲ್ಪಸಂಖ್ಯಾತ ಸಮುದಾಯದಲ್ಲಿ ಹಂಚಲಾಗಿದೆ, ಇದು ವಿಸ್ತೃತ ಜಿಹಾದಿ ಕಾರ್ಯಕ್ರಮದ ಭಾಗ ಎಂದೆಲ್ಲ ವದಂತಿ ಹಬ್ಬಿಸಲಾಯಿತು.

ಕ್ರಿಮಿನಲ್ ಉದ್ದೇಶವೂ ಇರಲಿಲ್ಲ, ಕೋಮು ಅಜೆಂಡಾವೂ ಇರಲಿಲ್ಲ

ಪ್ರಾಥಮಿಕ ತನಿಖೆ ನಡೆಸಿದ ಕಾಲೇಜಿನ ಮುಖ್ಯಸ್ಥರು ವಿಡಿಯೋ ಚಿತ್ರೀಕರಣ ನಡೆಸಿದ ಮೂವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿದರು. ಕಾಲೇಜಿನ ಮುಖ್ಯಸ್ಥರು ಹೇಳುವ ಪ್ರಕಾರ, ಇದು ಸಹಪಾಠಿಗಳಲ್ಲಿ ತಮಾಷೆಗಾಗಿ ನಡೆದ ಒಂದು ಘಟನೆ. ಇದರಲ್ಲಿ ದುರುದ್ದೇಶವೇನೂ ಇಲ್ಲ. ಅವರೆಲ್ಲ ಪರಿಚಿತರೇ ಆಗಿರುವುದರಿಂದ ಹುಡುಗಿ ದೂರು ಕೂಡಾ ಕೊಟ್ಟಿಲ್ಲ. ಆದರೆ ಕಾಲೇಜು ಕ್ಯಾಂಪಸ್ ನಲ್ಲಿ ಮೊಬೈಲ್ ಬಳಸುವಂತಿಲ್ಲ ಎಂಬ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮತ್ತು ವೀಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ‘ನಾವು ಇದನ್ನು ಇಲ್ಲಿಗೇ ಬಿಡುವಂತಿಲ್ಲವಾದ ಕಾರಣ ಪೊಲೀಸರಿಗೆ ತಿಳಿಸಿ ಅವರ ಮೊಬೈಲ್ ಫೋನ್ ಗಳನ್ನೂ ಕೊಟ್ಟಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳು ಹೇಳುವ ಪ್ರಕಾರ, ಇದೊಂದು prank ಅಷ್ಟೇ. ವೀಡಿಯೋವನ್ನು ತಕ್ಷಣ ಡಿಲೀಟ್ ಮಾಡಲಾಗಿತ್ತು ಕೂಡಾ. ಉಡುಪಿಯ ಅಡಿಶನಲ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಎಸ್ ಟಿ ಸಿದ್ದಲಿಂಗಪ್ಪ ಹೇಳುವ ಪ್ರಕಾರ, ಇದು ಕಾಲೇಜಿನ ಒಳಗಡೆ ನಡೆದ ಒಂದು ಸಣ್ಣ ಘಟನೆ. ಇದರಲ್ಲಿ ಕ್ರಿಮಿನಲ್ ಉದ್ದೇಶವೂ ಇರಲಿಲ್ಲ, ಕೋಮು ಅಜೆಂಡಾವೂ ಇರಲಿಲ್ಲ. ‘ನಾವು ಫೋನ್ ಪರಿಶೀಲಿಸಿದ್ದೇವೆ. ಅದರಲ್ಲಿ ಅಂತಹ ಯಾವ ವೀಡಿಯೋವೂ ಇಲ್ಲ. ಸಂಪೂರ್ಣ ತನಿಖೆಯನ್ನೂ ಮಾಡಿದ್ದೇವೆ, ವೀಡಿಯೋ ಪ್ರಸರಣ ಮಾಡಿದ ಯಾವ ಪುರಾವೆಯೂ ಇಲ್ಲ, ಸೋಕಾಲ್ಡ್ ಸಂತ್ರಸ್ತೆ ಪೊಲೀಸ್ ದೂರು ಕೊಡಲೂ ಸಿದ್ಧಳಿಲ್ಲ’ ಎನ್ನುತ್ತಾರೆ ಪೊಲೀಸರು.

ಈಗಿನ ಘಟನೆಗೂ ಹಿಂದಿನ ಹಿಜಾಬ್ ನಿಷೇಧ ವಿವಾದಕ್ಕೂ ಸಂಬಂಧವಿಲ್ಲ, ಸದರಿ ಘಟನೆಗೆ ಕೋಮು ಬಣ್ಣ ಹಚ್ಚಕೂಡದು, ಎಲ್ಲರೂ ಸಂಯಮದಿಂದ ವರ್ತಿಸಬೇಕು ಎಂದು ಕಾಲೇಜು ಆಡಳಿತ, ಮತ್ತು ಪೊಲೀಸರು ಮನವಿ ನೀಡಿದ್ದಾರೆ.

“ಸುಳ್ಳು ಮಾಹಿತಿಗಳನ್ನು ಈ ಪ್ರಕರಣಕ್ಕೆ ಲಿಂಕ್ ಮಾಡಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ, ಗೊಂದಲ ಸೃಷ್ಟಿಸಬೇಡಿ. ಸಮಾಜದಲ್ಲಿನ ಶಾಂತಿ ಸುವ್ಯಸ್ಥೆಗೆ ಧಕ್ಕೆ ತರುವ ಪೋಸ್ಟ್ ಹಾಕಬೇಡಿ. ನಿಮ್ಮಲ್ಲಿ ಖಚಿತ ಮಾಹಿತಿ ಇದ್ದರೆ ನಮಗೆ ತಿಳಿಸಿ. ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಶೇರ್ ಮಾಡುವ ಮೊದಲು ಸತ್ಯಾಂಶ ತಿಳಿದುಕೊಳ್ಳಿ. ಅನಗತ್ಯವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ, ವದಂತಿಗಳನ್ನು ಹರಡಬೇಡಿ” ಎಂದು ಉಡುಪಿಯ  ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ  ಹೇಳಿದ್ದಾರೆ.

ಇದರಲ್ಲಿ ಯಾವ ಕ್ರಿಮಿನಲ್ ದುರುದ್ದೇಶವೂ ಇಲ್ಲ ಎಂಬ ಸತ್ಯ ಕಣ್ಣ ಮುಂದೆಯೇ ಇದ್ದರೂ, ರಾಜಕೀಯ ಕಾರಣಕ್ಕೆ ಇದನ್ನು ಒಂದು ದೊಡ್ಡ ವಿವಾದವಾಗಿ ಮಾಡುವ, ಕೋಮು ಸಂಘರ್ಷಕ್ಕೆ ಪ್ರಚೋದಿಸುವ ಯತ್ನ ನಡೆಯುತ್ತಲೇ ಇದೆ. ಸಣ್ಣದಾಗಿ ಹುಟ್ಟಿಕೊಂಡ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಈಗ ಕರ್ನಾಟಕದ ಬಿಜೆಪಿ ನಾಯಕರು ಶುರು ಮಾಡಿದ್ದಾರೆ.

ಇಂತಹ ಹೊತ್ತಿನಲ್ಲಿ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಕೀಲ ಸಂಜಯ ಹೆಗ್ಡೆಯವರು ಮಾಡಿರುವ ಒಂದು ಟ್ವೀಟ್ ಗಮನಾರ್ಹವಾಗಿದೆ. ಅವರು ಹೀಗೆ ಬರೆಯುತ್ತಾರೆ, “ನಾನು ಮೂಲತಃ ಉಡುಪಿಯವನು. ಹಾಗೆಯೇ ಉಡುಪಿಯನ್ನು ಕೋಮುವಾದೀಕರಣಗೊಳಿಸುವ ಯತ್ನಗಳ ಬಗ್ಗೆಯೂ ನನಗೆ ಚೆನ್ನಾಗಿ ಗೊತ್ತಿದೆ. ಉಡುಪಿಯ ಸಜ್ಜನರು ಬಹಳ ಹಿಂದಿನಿಂದಲೂ rationalist sense ಹೊಂದಿದ್ದವರು. ಕಳೆದ ಮೂರು ದಶಕಗಳಿಂದ ಅಲ್ಲಿ ಧಾರ್ಮಿಕ ಐಡೆಂಟಿಗಳು ಮೇಲುಗೈ ಸಾಧಿಸಿರುವಂತೆ ಕಾಣುತ್ತಿದೆ. ಆದರೆ rationalism ನಿಧಾನವಾಗಿಯಾದರೂ ಮರಳುತ್ತಿದೆ”.

ಶ್ರೀನಿವಾಸ ಕಾರ್ಕಳ, ಮಂಗಳೂರು

ಇದನ್ನೂ ಓದಿ-ವಿದ್ಯಾರ್ಥಿನಿ ಖಾಸಗಿ ವಿಡಿಯೋ ಚಿತ್ರೀಕರಣ ; ಆಪಾದಿತರ ಅಮಾನತು : ಆಡಳಿತ ಮಂಡಳಿ ಸ್ಪಷ್ಟನೆ

Related Articles

ಇತ್ತೀಚಿನ ಸುದ್ದಿಗಳು