Sunday, June 16, 2024

ಸತ್ಯ | ನ್ಯಾಯ |ಧರ್ಮ

ಮಣಿಪುರದಲ್ಲಿ ಹಿಂಸಾಚಾರ ಕೊನೆಗಾಣಿಸಿ : ಬೆಂಗಳೂರು ವಿವಿ ವಿಧ್ಯಾರ್ಥಿಗಳ ಆಗ್ರಹ

ಭಾರತದ ಈಶಾನ್ಯ ಭಾಗದ ಪ್ರಮುಖ ರಾಜ್ಯವಾದ ಮಣಿಪುರದಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ಅಮಾನುಷ ದೌರ್ಜನ್ಯ ಖಂಡಿಸಿ, ಈ ರೀತಿಯ ಕೃತ್ಯದಲ್ಲಿ ಭಾಗಿ ಆದವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಬೆಂಗಳೂರು ವಿವಿ ಯ, ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ಆಗ್ರಹಿಸಿದೆ.

ಜುಲೈ 26 ರ ಬುಧವಾರ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಮೂಲಕ ರಾಜ್ಯದ ರಾಜ್ಯಪಾಲರಿಗೆ ಸಲ್ಲಿಸಿದ ಆಗ್ರಹ ಪತ್ರದಲ್ಲಿ ವಿದ್ಯಾರ್ಥಿಗಳ ವೇದಿಕೆ, ‘ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮೇ ತಿಂಗಳಲ್ಲೇ ನಡೆದ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆ ಈಗ ಹೊರ ಬಂದಿರುವುದು ಅತ್ಯಂತ ಅಮಾನುಷ ಮತ್ತು ಅಲ್ಲಿನ ಆಡಳಿತ ಲೋಪಕ್ಕೆ ಹಿಡಿದ ಕನ್ನಡಿ. ಇಂತಹ ಸಂದರ್ಭದಲ್ಲಿ ಇಂತಹ ಅಮಾನುಷ ಕೃತ್ಯದಲ್ಲಿ ಭಾಗಿ ಆದವರ ವಿರುದ್ಧ ಹಾಗೂ ಇಂದಿಗೂ ಗಲಭೆ, ಹಿಂಸಾಚಾರದಂತಹ ಚಟುವಟಿಕೆಗಳಲ್ಲಿ ಭಾಗಿ ಆದವರನ್ನು ಗುರುತಿಸಿ, ಕಾನೂನಾತ್ಮಕ ಕಠಿಣ ಕ್ರಮಕ್ಕೆ ಮುಂದಾಗಬೇಕು’ ಎಂದು ಮನವಿ ಮಾಡಿಕೊಂಡಿದೆ.

‘ಮೇ ತಿಂಗಳ 4 ನೇ ತಾರೀಕಿನಂದೇ ನಡೆದಿರುವ ಕುಕ್ಕಿ ಸಮುದಾಯದ ಮಹಿಳೆಯರ ಮೇಲಿನ ಅತ್ಯಾಚಾರ, ಜುಲೈ 19 ರಂದು ಮೈತೈ ಸಮುದಾಯದ ದುಷ್ಕರ್ಮಿಗಳು ಕುಕ್ಕಿ ಸಮುದಾಯದ ಮಹಿಳೆಯರನ್ನು ಬೆತ್ತಲೆಗೊಳಿಸಿ ನಡೆಸಿದ ಮೆರವಣಿಗೆ ಸೇರಿದಂತೆ ನಿರಂತರವಾಗಿ ಮಹಿಳೆಯರ ಮೇಲಿನ ಗಲಭೆ, ಅಪಹರಣ, ಅತ್ಯಾಚಾರ, ಹಿಂಸಾಚಾರ, ದೌರ್ಜನ್ಯ ಯಾವುದನ್ನೂ ನಿಯಂತ್ರಿಸುವಲ್ಲಿ ಅಲ್ಲಿನ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತಹ ಕೃತ್ಯಗಳಾಗಿವೆ. ಮಕ್ಕಳು ಮರಿ ಎನ್ನದೇ, ವೃದ್ದರಾದಿಯಾಗಿ ಎಲ್ಲರನ್ನೂ ಹಿಂಸಿಸಿ ಕೊಲ್ಲಲಾಗುತ್ತಿದೆ. ಇದು ಭಾರತದ ಅತಿ ದೊಡ್ಡ ಹಿಂಸಾಚಾರ ಎನ್ನುವುದರಲ್ಲಿ ಎರಡು ಮಾತಿಲ್ಲ’ ಎಂದು ವಿಧ್ಯಾರ್ಥಿ ಸಂಘಟನೆ ಅಭಿಪ್ರಾಯ ಪಟ್ಟಿದೆ.

ಆಶ್ಚರ್ಯಕರ ಮತ್ತು ಆಘಾತಕಾರಿ ವಿಚಾರ ಎಂದರೆ ಈ ಬಗ್ಗೆ ಆಳುವ ವರ್ಗ ಇಲ್ಲಿಯ ವರೆಗೂ ತುಟಿ ಬಿಚ್ಚಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಜಾಲತಾಣಗಳ ಮೂಲಕ ಹೊರ ಬಂದ ನಂತರ ಸುಪ್ರೀಂಕೋರ್ಟ್ ಸ್ವಯಂ ಈ ಬಗ್ಗೆ ಮಾತನಾಡಿದೆ, ತನ್ನ ಅಭಿಪ್ರಾಯ ಹೊರಹಾಕಿದೆ. ಆಡಳಿತ ಮಾಡುವವರು ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ತಾರದೇ ಹೋದರೆ, ನಾವೇ ಮುಂದೆ ಹೆಜ್ಜೆ ಇಡುತ್ತೇವೆ ಎಂದು ಸುಪ್ರೀಂಕೋರ್ಟ್ ಕೂಡಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇದು ಭಾರತೀಯ ಪ್ರಜಾಪ್ರಬುತ್ವ ವ್ಯವಸ್ಥೆಯ ದುರಂತ ಎಂದು ಹೇಳಿದ್ದಾರೆ.

ಸಧ್ಯ ಅಲ್ಲಿನ ದೌರ್ಜನ್ಯಗಳನ್ನು ಮನಗಂಡು ಭಾರತೀಯ ಸಂವಿಧಾನದಲ್ಲಿ ಉಲ್ಲೇಖಿಸಿದ ಮೂಲಭೂತ ಹಕ್ಕು, ಸಮಾನತೆಯ ಹಕ್ಕು, ಖಾಸಗಿ ಹಕ್ಕು ಎಲ್ಲವನ್ನೂ ಬಳಸಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಬೇಕು. ವಿಶೇಷವಾಗಿ ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಇರುವ ವಿಶೇಷ ಅವಕಾಶಗಳನ್ನು ಬಿಟ್ಟು ಅವರ ರಕ್ಷಣೆ ಮಾಡಬೇಕು ಎಂದು ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ಆಗ್ರಹಿಸಿದೆ.

Related Articles

ಇತ್ತೀಚಿನ ಸುದ್ದಿಗಳು