Thursday, June 13, 2024

ಸತ್ಯ | ನ್ಯಾಯ |ಧರ್ಮ

ಸುವರ್ಣ ನ್ಯೂಸ್ ಮೇಲೆ ಮಾನನಷ್ಟ ಮೊಕದ್ದಮೆ : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸ್ಪಷ್ಟನೆ

ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರ ಕುರಿತು ಸುವರ್ಣ ನ್ಯೂಸ್ ನಲ್ಲಿ ಜನವರಿ 11, 2023 ರಂದು ಪ್ರಸಾರವಾದ ಸುದ್ದಿ ಈಗ ಮತ್ತೆ ಮಹತ್ವ ಪಡೆದುಕೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ 4 ತಿಂಗಳ ಮುಂಚೆ ಕಿಮ್ಮನೆ ರತ್ನಾಕರ್ ಅವರ ಮನೆ ಮೇಲೆ ಇ.ಡಿ.ದಾಳಿ ಎಂಬ ಸುದ್ದಿಯನ್ನು ಸುವರ್ಣ ನ್ಯೂಸ್ ಮೇಲಿಂದ ಮೇಲೆ ಪ್ರಸಾರ ಮಾಡಿತ್ತು. ಜೊತೆ ದಕ್ಷಿಣ ಕನ್ನಡದ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ ಶಾರಿಕ್ ಜೊತೆಗೆ ನಂಟು ಇರುವುದಾಗಿಯೂ ವರದಿ ಪ್ರಸಾರ ಮಾಡಿತ್ತು. ಈ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಚಾನಲ್ ಮತ್ತು ಅದರ ಪ್ರಧಾನ ಸಂಪಾದಕ ಅಜಿತ್ ಹನಮಕ್ಕನವರ್ ಮೇಲೆ ಪ್ರಕರಣ ದಾಖಲು ಮಾಡಲು ಚಿಂತನೆ ನಡೆಸಿದ್ದಾರೆ.

ಈ ಬಗ್ಗೆ ಪೀಪಲ್ ಮೀಡಿಯಾ ಗೆ ಸ್ಪಷ್ಟನೆ ನೀಡಿದ ಕಿಮ್ಮನೆ ರತ್ನಾಕರ್, ‘ಸುದ್ದಿ ಮಾಧ್ಯಮದ ಮೇಲೆ ಪ್ರಕರಣ ದಾಖಲಿಸುವುದು ಸ್ಪಷ್ಟ. ಪೂರ್ವಾಪರ ಅರಿಯದೇ ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡಲೆಂದೇ ಈ ಸುದ್ದಿ ಪ್ರಸಾರ ಮಾಡಿದ್ದಾರೆ. ಈ ಬಗ್ಗೆ ಒಂದು ಕರೆ ಮಾಡಿ ಸ್ಪಷ್ಟನೆ ಕೇಳಬಹುದಿತ್ತು. ಆದರೆ ಅದ್ಯಾವುದರ ಗೊಡವೆಗೂ ಹೋಗದೇ ನೇರವಾಗಿ ನನ್ನ ಮೇಲೆ ದೇಶದ್ರೋಹದಂತಾ ಆರೋಪ ಮಾಡಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಚಾನಲ್ ಮೇಲೆ ಮತ್ತು ಅದರ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲು ಮಾಡೇ ಮಾಡುತ್ತೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಈಗಾಗಲೇ ಆ ವರದಿ ಪ್ರಸಾರವಾಗಿ 6 ತಿಂಗಳ ಮೇಲಾಗಿದೆ, ಅಂದೇ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು, ತಡ ಯಾಕೆ’ ಎಂಬ ಪ್ರಶ್ನೆಗೆ, ‘ಚುನಾವಣೆ ಸಂದರ್ಭದಲ್ಲಿ ಬಿತ್ತರಿಸಿದ ಸುದ್ದಿ ಅದಾಗಿದ್ದರಿಂದ ನಾನೂ ಸ್ವಲ್ಪ ಒತ್ತಡದಲ್ಲಿದ್ದೆ. ಆದರೆ ಕಾನೂನು ಕ್ರಮದ ಬಗ್ಗೆ ಅಂದೇ ಚಿಂತನೆ ಮಾಡಿದ್ದೆ. ಮೇಲಾಗಿ ವರದಿ ಪ್ರಸಾರವಾದ ದಿನದಿಂದ 3 ವರ್ಷಗಳ ಒಳಗೆ ಯಾವಾಗ ಬೇಕಾದರೂ ಪ್ರಕರಣ ದಾಖಲಿಸಬಹುದು’ ಎಂದು ಕಿಮ್ಮನೆ ರತ್ನಾಕರ್ ಸ್ಪಷ್ಟನೆ ನೀಡಿದ್ದಾರೆ.

‘ವರದಿ ಪ್ರಸಾರವಾದ ನಂತರ, ತಪ್ಪು ಮಾಹಿತಿ ನೀಡಿದರ ಬಗ್ಗೆ ಕ್ಷಮೆ ಕೇಳಬಹುದಿತ್ತು. ಅಥವಾ ತಮಗೆ ಸಿಕ್ಕ ಮಾಹಿತಿ ತಪ್ಪಾಗಿದೆ ಎಂದೂ ಸ್ಪಷ್ಟನೆ ಕೊಡಬಹುದಿತ್ತು. ಆದರೆ ಇದ್ಯಾವುದೂ ಸುವರ್ಣ ನ್ಯೂಸ್ ಕಡೆಯಿಂದ ಆಗಿಲ್ಲ. ಇದೆಲ್ಲಾ ನೋಡಿದರೆ ಇದು ದುರುದ್ದೇಶಪೂರಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರಿಗೆ ನನ್ನ ತೇಜೋವಧೆ ಮಾಡುವುದೇ ಮುಖ್ಯ ಉದ್ದೇಶವಾಗಿತ್ತು’ ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಈ ವರದಿ ಪ್ರಸಾರದ ಹಿಂದೆ ಸ್ಥಳೀಯ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲರು ಕುಮ್ಮಕ್ಕು ಇದೆ ಎಂಬ ಬಲವಾದ ಅನುಮಾನವಿದೆ. ಸಧ್ಯದಲ್ಲೇ ಈ ಬಗ್ಗೆ ಕ್ರಿಮಿನಲ್ ಪ್ರಕರಣ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಪ್ರಕರಣ ದಾಖಲಿಸಿದ ನಂತರ ಇವೆಲ್ಲದರ ಸತ್ಯ ತಿಳಿಯಲಿದೆ ಎಂದೂ ಸಹ ಕಿಮ್ಮನೆ ರತ್ನಾಕರ್ ಪೀಪಲ್ ಮೀಡಿಯಾ ಗೆ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು