Sunday, June 16, 2024

ಸತ್ಯ | ನ್ಯಾಯ |ಧರ್ಮ

ಮಂಗಳೂರಿನಲ್ಲಿ ಮತ್ತೆ ತಲೆಯೆತ್ತಿದ ಅನೈತಿಕ ಪೊಲೀಸ್‌ ಗಿರಿಯೆನ್ನುವ ಅಸಹ್ಯ: ಇಬ್ಬರ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿ ಮೀತಿ ಮೀರಿ ಬೆಳೆಯುತ್ತಿದ್ದು ಎರಡು ದಿನಗಳ ಹಿಂದೆ ವಿಟ್ಲದಲ್ಲಿ ಪೊಲೀಸ್ ಸಿಬಂದಿಯನ್ನು ಅಡ್ಡಗಟ್ಟಿ ನಿಂದಿಸಿದ ಪ್ರಕರಣ ಮಾಸುವ ಮುನ್ನವೇ ನಗರದ ಯುವ ವರದಿಗಾರನೋರ್ವನನ್ನು ತಡೆದ ಧರ್ಮದ ಹೆಸರಿನಲ್ಲಿ ಅವಾಚ್ಯವಾಗಿ ನಿಂದಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಇಂಟರ್ನೆಟ್‌ ಮಾಧ್ಯಮವೊಂದರ ಪತ್ರಕರ್ತರೊಬ್ಬರು ಜುಲೈ 26ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕಾವೂರು ಜಂಕ್ಷನ್ ಬಳಿಯ ಹೋಟೆಲ್ ಒಂದರಲ್ಲಿ ತನ್ನ ಕಾಲೇಜಿನ ಸಹಪಾಠಿಯಾಗಿದ್ದ ಯುವತಿ ಜೊತೆ ಊಟ ಮುಗಿಸಿ ಹೊರ ಬರುತ್ತಿದ್ದಾಗ ಅಪರಿಚಿತರಿಬ್ಬರು ಪತ್ರಕರ್ತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಆ ರಿಪೋರ್ಟರ್‌ ತನ್ನ ಬಳಿಯಿದ್ದ ಪತ್ರಕರ್ತರ ಗುರುತಿನ ಚೀಟಿ ತೋರಿಸಿದರೂ ಬಿಡದೆ ಹೊಲಸು ಪದಗಳನ್ನು ಬಳಸಿ ಬಯ್ದಿದ್ದಾರೆ ಎನ್ನಲಾಗಿದೆ.

ಈ ಕುರಿತು ಪತ್ರಕರ್ತ ಅದೇ ದಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ವೇಳೆ ದೂರಿನಲ್ಲಿ ನಿಂದಿಸಿದ್ದ ವ್ಯಕ್ತಿಯ ಕಾರಿನ ನಂಬರ್ ನಮೂದಿಸಿದ್ದರು. ನಗರ ಪೊಲೀಸ್ ಆಯುಕ್ತ ಕುಲದೀಪ್ ಆರ್ ಜೈನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅವರ ನಿರ್ದೇಶನದ ಮೇರೆಗೆ ಕಾವೂರು ಪೊಲೀಸರು ಕೋಟೆಕಾರ್ ನಿವಾಸಿ ಚೇತನ್ ಕುಮಾರ್ (38), ಯೆಯ್ಯಾಡಿ ನಿವಾಸಿ ನವೀನ್(39) ಎಂಬವರನ್ನು ಬಂಧಿಸಿದ್ದಾರೆ. ವಿಚಾರಣೆ ಬಳಿಕ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಆರೋಪಿಗಳ ಪೈಕಿ ಚೇತನ್‌ ಕುಮಾರ್‌ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಇಬ್ಬರ ವಿರುದ್ಧ ಸೆಕ್ಷನ್‌ 506, 507ರ ಅಡಿ ಪ್ರಕರಣ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು