Saturday, June 15, 2024

ಸತ್ಯ | ನ್ಯಾಯ |ಧರ್ಮ

ಏರಿಕೆಯಾಗುತ್ತಿದೆ ಡೆಂಗ್ಯೂ ಸೋಂಕು ; ಮುನ್ನೆಚ್ಚರಿಕೆ ಕ್ರಮಗಳೇನು?

ಮಳೆಗಾಲ ಶುರುವಾಗುತ್ತಿದ್ದಂತೆ ಕಂಡುಬರುತ್ತಿದ್ದ ಕೆಲವು ಸಣ್ಣಪುಟ್ಟ ಸಾಂಕ್ರಾಮಿಕ ರೋಗಗಳಲ್ಲಿ ಕೊಂಚ ಮಟ್ಟಿಗೆ ಅಪಾಯಕಾರಿಯೇ ಎಂದು ಗುರುತಿಸಲ್ಪಡುವ ಡೆಂಗ್ಯೂ ಸೋಂಕು, ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ವೇಗವಾಗಿ ಹರಡುತ್ತಿದೆ. ಮುಂಗಾರು ಸ್ವಲ್ಪ ತಡವಾಗಿ ರಾಜ್ಯಕ್ಕೆ ಕಾಲಿಟ್ಟರೂ ರಾಜ್ಯದಲ್ಲಿ ಸೋಂಕಿನ ಪ್ರಮಾಣದಲ್ಲಿ ಅತಿ ಹೆಚ್ಚು ಏರಿಕೆ ಕಂಡುಬಂದಿದೆ.

ಕಳೆದ ಬಾರಿಗಿಂತ ಈ ಬಾರಿ ಮಳೆಯ ಪ್ರಮಾಣ ಕಡಿಮೆ ಇರುವ ಕಾರಣ ಡೆಂಗ್ಯೂ ಸೋಂಕಿನ ಪ್ರಮಾಣದಲ್ಲಿ ಏರಿಕೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಮಳೆಯ ಪ್ರಮಾಣದಲ್ಲಿ ಏರಿಕೆ ಇದ್ದರೆ, ನೀರಿನ ಹರಿವು ಹೆಚ್ಚಿರುತ್ತಿತ್ತು. ಆಗ ನೀರು ನಿಲ್ಲುವುದಕ್ಕೆ ಅವಕಾಶ ಇರುತ್ತಿರಲಿಲ್ಲ. ಆದರೆ ಒಂದು ವಾರಕ್ಕಿಂತ ಹೆಚ್ಚು ಕಾಲ ನೀರು ನಿಂತರೆ ಅಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯೂ ಹರಡುವುದಕ್ಕೆ ಕಾಲ ಅನುಕೂಲಕರವಾಗಿ ಇರುತ್ತದೆ. ಸಧ್ಯದ ಸಂದರ್ಭ ಕೂಡಾ ಹಾಗೆಯೇ ಇರುವ ಕಾರಣ ಡೆಂಗ್ಯೂ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಡೆಂಗ್ಯೂ ವಿಪರೀತವಾಗಿ ಹರಡುತ್ತಿದ್ದು ವೈದ್ಯರು ಮುನ್ನೆಚ್ಚರಿಕೆ ಕ್ರಮಕ್ಕೆ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ವಾರ ಮಳೆ, ಮೋಡ ಕವಿದ ವಾತಾವರಣ ಜೊತೆಗೆ ಚಳಿ ವಾತಾವರಣವಿದ್ದ ಕಾರಣ ನಗರದ ನಿವಾಸಿಗಳಲ್ಲಿ ಜ್ವರ, ಶೀತ ಹಾಗೂ ಗಂಟಲು ನೋವು ಕಾಣಿಸಿಕೊಳ್ಳುತ್ತಿದ್ದು, ಸಾಮಾನ್ಯ ಜ್ವರದ ಜೊತೆಗೆ ಡೆಂಗ್ಯೂ ಪ್ರಕರಣಗಳು ಕೂಡ ವಿಪರೀತ ಹೆಚ್ಚಾಗುತ್ತಿದೆ.

ಮಾಹಿತಿಯ ಪ್ರಕಾರ ಜೂನ್ ತಿಂಗಳಲ್ಲಿ 690 ಡೆಂಗ್ಯೂ ಪ್ರಕರಣ ಕೇವಲ ಬೆಂಗಳೂರಿನಲ್ಲೇ ಕಂಡುಬಂದಿದೆ. ಜುಲೈನಲ್ಲಿ ಡೆಂಗ್ಯೂ ಪ್ರಕರಣ ಸಂಖ್ಯೆ ಹಠಾತ್‌ ಏರಿಕೆಯಾಗಿದೆ. ಜುಲೈ 1ರಿಂದ ಜುಲೈ 30ರ ವರೆಗೆ ಬೆಂಗಳೂರು ನಗರದಲ್ಲಿ ಬರೋಬ್ಬರಿ 1,649 ಪ್ರಕರಣ ದಾಖಲಾಗಿವೆ.

ಇನ್ನು ರಾಜ್ಯಾದ್ಯಂತ ರಾಜ್ಯದ ಪ್ರಮುಖ ಮಹಾನಗರಗಳಲ್ಲೂ ಡೆಂಗ್ಯೂ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ರಾಜ್ಯಾದ್ಯಂತ ಒಟ್ಟಾರೆ ಇಲ್ಲಿಯವರೆಗೆ 4790 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಅಂದಾಜು 2500 ಪ್ರಕರಣಗಳು ಕೇವಲ ಬೆಂಗಳೂರಿನಲ್ಲೇ ಪತ್ತೆಯಾಗಿವೆ.

ಈಡಿಸ್ ಈಜಿಪ್ಟ್ಟೆ ಎಂಬ ಸೊಳ್ಳೆ ಕಚ್ಚಿದ ಮೂರರಿಂದ ಹದಿನಾಲ್ಕು ದಿನಗಳ ನಂತರ ವ್ಯಕ್ತಿಯಲ್ಲಿ ರೋಗ ಉಲ್ಭಣವಾಗಿ ರೋಗದ ಲಕ್ಷಣಗಳು ಹೊರಗೆ ಕಾಣಿಸಿಕೊಳ್ಳುತ್ತದೆ. ಸೊಳ್ಳೆಯು ಸೋಂಕಿಗೆ ತುತ್ತಾಗದ ವ್ಯಕ್ತಿಯನ್ನು ಕಚ್ಚಿದಲ್ಲಿ, ಆ ಸೊಳ್ಳೆಯ ಜೊಲ್ಲಿನ ಮೂಲಕ ವೈರಸ್ ವ್ಯಕ್ತಿಯ ದೇಹವನ್ನು ಪ್ರವೇಶಿಸಿ ದೇಹದಲ್ಲಿನ ಬಿಳಿ ರಕ್ತಕಣದೊಂದಿಗೆ ಸೇರಿಕೊಂಡು, ಬಿಳಿ ರಕ್ತ ಕಣಗಳಲ್ಲಿ ದ್ವಿಗುಣಗೊಳ್ಳುತ್ತಾ ಸಾಗುತ್ತದೆ. ಈ ದ್ವಿಗುಣಗೊಳ್ಳುವಿಕೆಯು ಡೆಂಗ್ಯೂ ರೋಗದ ರೋಗದ ಪ್ರಮುಖ ಲಕ್ಷಣವಾಗಿರುತ್ತದೆ. ಡೆಂಗ್ಯೂ ಕಾಣಿಸಿಕೊಳ್ಳುತ್ತಿದ್ದಂತೆ ಕೀಲು ನೋವು, ಸ್ನಾಯು ನೋವು, ಕೆಳಹೊಟ್ಟೆಯಲ್ಲಿ ನೋವು, ವಾಂತಿ ಅಥವಾ ಮಲದಲ್ಲಿ ರಕ್ತ, ತ್ವಚೆಯ ಮೇಲೆ ಸಣ್ಣ ಕೆಂಪು ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ. ಜೊತೆಗೆ ಪದೇ ಪದೇ ಜ್ವರ ಮರುಕಳಿಸುವುದು, ಜ್ವರದ ತಾಪಮಾನವು 104 ಡಿಗ್ರಿವರೆಗೆ ಏರುವುದು, ಮೈ-ಕೈ ನೋವು ಮತ್ತು ಸ್ನಾಯುಗಳ ಸೆಳೆತ ಎಲ್ಲವೂ ಕಾಣಿಸಿಕೊಳ್ಳುತ್ತದೆ.

Prevention is better than cure ಎಂಬಂತೆ ರೋಗ ಕಾಣಿಸಿಕೊಳ್ಳುವುದಕ್ಕಿಂತ ಮುಂಚೆಯೇ ಆ ಬಗ್ಗೆ ಜಾಗೃತರಾಗುವುದು ಒಳ್ಳೆಯದು. ಹಾಗಾಗಿ ಸೊಳ್ಳೆಗಳು ಉತ್ಪತ್ತಿಯಾಗದಂತಹ ಪರಿಸರ ನಿರ್ಮಾಣ ಮಾಡುವುದು, ಸೊಳ್ಳೆಗಳು ಕಚ್ಚದಂತೆ ಸೊಳ್ಳೆ ನಿವಾರಕ, ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯವಾಗಿದೆ. ಮನೆಯ ಸುತ್ತ ಚರಂಡಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ, ಬಕೆಟ್, ಟಯರ್, ಎಳನೀರು ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜೊತೆಗೆ ಜನರು ಜ್ವರ ಬಂದ ತಕ್ಷಣವೇ ಆಸ್ಪತ್ರೆಗಳಿಗೆ ಭೇಟಿ ನೀಡುವಂತೆ ಎಲ್ಲಾ ಕಡೆಗೂ ಆರೋಗ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು