Sunday, June 23, 2024

ಸತ್ಯ | ನ್ಯಾಯ |ಧರ್ಮ

ಇದೆಂತಾ ಭಯ!

ರಕ್ತನಾಳ ಹುಡುಕಿ, ಇನ್ನೇನು ಸಿರಿಂಜ್ ನೀಡಲ್ ಚುಚ್ಚಬೇಕು ಅನ್ನುವಾಗ ಹುಡುಗಿ ಕೈ ಸರಕ್ಕನೆ ಎಳೆದುಕೊಂಡಳು! ಸೂಜಿ ಬೇಡಾ..  ಸೂಜಿ ಬೇಡಾ… ಕಿರುಚಿದಳು! ಆಕೆಯೇನೂ ಸಣ್ಣ ಮಗುವಲ್ಲ! ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ಫ್ರೌಢಾವಸ್ಥೆಯಲ್ಲಿರುವವಳು. ಈ ಭಯ ಕಂಡು ನಾನು ದಿಗ್ಭ್ರಾಂತಳಾದೆ –ಶೋಭಲತಾ ಸಿ, ಸ್ಟಾಫ್‌ ನರ್ಸ್‌, ಕಾಸರಗೋಡು

ಭಯ! ಜೀವನದಲ್ಲಿ ಎಲ್ಲರಿಗೂ ಇರುವಂತದ್ದೇ. ಸಾವಿನ ಭಯ.. ಸೋಲುವ ಭಯ.. ನೋವಿನ ಭಯ.. ಆಸ್ಪತ್ರೆಯ ಭಯ.. ಸೋಂಕಿನ ಭಯ..  ಹೀಗೆ, ಜೀವನದುದ್ದಕ್ಕೂ  ಸಾಮಾನ್ಯವಾಗಿ ಎಲ್ಲರಲ್ಲೂ ಒಂದಲ್ಲ ಒಂದು ಕಾರಣಕ್ಕೆ ಭಯ ಮತ್ತು ಆತಂಕ ಇದ್ದೇ ಇರುತ್ತದೆ. ಭಯವು ಪ್ರೀತಿಯಂತೆ ಬಲವಾದ ಭಾವನೆಯಾಗಿದೆ. ಅದು ಸಹಜ ಪ್ರವೃತ್ತಿಯೇ ಅನ್ನುವಂತೆ ನಮ್ಮಲ್ಲಿ ಬೇರೂರಿದೆ. ಆದರೆ ನಾನೀಗ ಹೇಳಹೊರಟಿರುವುದು ನನ್ನ ಕೆಲಸದ ಸಂದರ್ಭದ ಒಂದು ಘಟನೆಯನ್ನು.

ಅಂದೂ ಕರ್ತವ್ಯದಲ್ಲಿದ್ದೆ. ಕರ್ತವ್ಯದಲ್ಲಿದ್ದ ಡಾಕ್ಟರ್ ಅಂದು ತುರ್ತು ಕೆಲಸದ ಮೇರೆಗೆ ಹೊರಗೆ ಹೋಗುವವರಿದ್ದರು. ಹೋಗುವವರೆಗೆ  ಅವರು ಬಂದ ರೋಗಿಗಳನ್ನು ಪರೀಕ್ಷಿಸುತ್ತಿದ್ದರು. ಆಗ ಸುಮಾರು 14 ವರ್ಷ ಪ್ರಾಯದ ಒಬ್ಬ ಹುಡುಗಿ ಕಾಲಿಗೆ ಏನೋ ಸೋಂಕು ಆಗಿದೆ ಎಂದು ಬಂದಳು. ಕೆಲವು ದಿನಗಳ ಹಿಂದೆ ಜ್ವರ ಇತ್ತಂತೆ. ರಕ್ತ – ಮೂತ್ರ ಪರೀಕ್ಷಿಸದೆ ಮೆಡಿಸಿನ್ ಬರೆದು ಕೊಡುವುದು ಸರಿಯಾಗದೆಂದು ಡಾಕ್ಟರ್ ಇನ್ವೆಸ್ಟಿಗೇಷನ್ ಗೆ ಬರೆದು ಕೊಟ್ಟರು. ಅಂತೆಯೇ ಆಕೆಯ ಜೊತೆ ಇದ್ದವರು ಬಿಲ್ ಪಾವತಿಸಿ ಲ್ಯಾಬ್ ಕಡೆ ಹೋದರು. ಸ್ವಲ್ಪ ಹೊತ್ತಿನಲ್ಲಿ ಲ್ಯಾಬ್ ನಿಂದ ನನಗೆ ಕರೆ ಬಂತು.

ಸರ್ವೇ ಸಾಮಾನ್ಯವಾಗಿ ರಕ್ತ ನಾಳ ಸರಿಯಾಗಿ ಕಾಣದೇ ಇರುವಾಗ ಲ್ಯಾಬ್ ಟೆಕ್ನಿಶಿಯನ್ ನಮ್ಮ ಸಹಾಯ ಪಡೆಯುತ್ತಾರೆ. ಹಾಗಿರಬಹುದೆಂದು ಲ್ಯಾಬ್ ನತ್ತ ನಡೆದೆ. ಸಣ್ಣ ಪ್ರಾಯದ ಹುಡುಗಿ, ರಕ್ತನಾಳ ಕೂಡಾ ಅಸ್ಪಷ್ಟ. ಸಹಜವಾಗಿ ಸಹಾಯ ಯಾಚಿಸಿದಾಗ ಬ್ಲಡ್ ತೆಗೆದು ಕೊಡಲು ಮುಂದಾದೆ. ರಕ್ತನಾಳ ಹುಡುಕಿ, ಇನ್ನೇನು ಸಿರಿಂಜ್ ನೀಡಲ್ ಚುಚ್ಚಬೇಕು ಅನ್ನುವಾಗ ಹುಡುಗಿ ಕೈ ಸರಕ್ಕನೆ ಎಳೆದುಕೊಂಡಳು!

ಸೂಜಿ ಬೇಡಾ … ಸೂಜಿ ಬೇಡಾ… ಕಿರುಚಿದಳು!

ಆಕೆಯೇನೂ ಸಣ್ಣ ಮಗುವಲ್ಲ! ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ಫ್ರೌಢಾವಸ್ಥೆಯಲ್ಲಿರುವವಳು. ಈ ಭಯ ಕಂಡು ನಾನು ದಿಗ್ಭ್ರಾಂತಳಾದೆ ! ಒಂದು ಕಡೆ ಡಾಕ್ಟರ್ ಗೆ ರಿಪೋರ್ಟ್ ಬೇಗನೆ ಸಿಗಬೇಕು. ಇನ್ನೊಂದೆಡೆ  ಹುಡುಗಿ  ಸುತರಾಂ ಒಪ್ಪುತ್ತಿಲ್ಲ. ಆಕೆಯ ಜತೆ ಇದ್ದ ಇಬ್ಬರು ಹೆದರಿಸಿದರೂ ಆಕೆ ಒಪ್ಪುತ್ತಿಲ್ಲ. ಪರೀಕ್ಷಿಸದೆ ಮದ್ದು ಸಿಗಲಾರದೆಂದು ಒತ್ತಿ ಹೇಳಿದರೂ ಆಕೆ ಜಪ್ಪೆನ್ನಲಿಲ್ಲ. ನನ್ನ ಬುದ್ಧಿ ಎಲ್ಲ ಖರ್ಚಾದರೂ ಆಕೆಯನ್ನು ಒಪ್ಪಿಸಲಾಗಲಿಲ್ಲ.

ಸಣ್ಣ ಮಕ್ಕಳು ಸೂಜಿ ಅಂದರೆ ಹೆದರುವುದು ನೋಡಿದ್ದೇನೆ. ಆದರೆ ಫ್ರೌಢಾವಸ್ಥೆಯಲ್ಲಿರುವ ಈಕೆಯ ವರ್ತನೆ ಕಂಡು ಸಿಟ್ಟು ಬಂದರೂ ತೋರಿಸಿಕೊಳ್ಳದೆ ಸಹಜವಾಗಿಯೇ ಇದ್ದೆ.  ಭಯ ಇರುತ್ತದೆ… ಇರಬೇಕು ….. ಆದರೆ ಇದೆಂತಹ ಭಯ?

ನನ್ನ ಕರ್ತವ್ಯದ ದಿನಗಳಲ್ಲಿ  ಇದು ಮೊದಲ ಅನುಭವ.  ಮಾನಸಿಕ ಅಸ್ವಸ್ಥರಿಗೆ ಇಂಜೆಕ್ಷನ್ ಚುಚ್ಚಲು ಪರದಾಡಿದ್ದಿದೆ. ಅವರ ಕೈಯ ಪೆಟ್ಟು, ಕಾಲಿನ ತುಳಿತ ತಿಂದದ್ದಿದೆ. ಆದರೂ, ಇಂತಹ ಅನುಭವ ಆಗಿರಲಿಲ್ಲ.

ಕೊನೆಗೆ ರಕ್ತ ಪರೀಕ್ಷೆ ಬೇಡ; ಮೂತ್ರ ಪರೀಕ್ಷೆ ಮಾತ್ರ ಮಾಡುವ ಎಂದು ತೀರ್ಮಾನಿಸಿ ಮೂತ್ರ ತೆಗೆದು ಕೊಡಲು ಹೇಳಲಾಯಿತು. ಆಕೆಯ ಜತೆ ಇದ್ದವರು ಮನೆಯ ಇನ್ಯಾರಿಗೋ ಫೋನ್ ಮೂಲಕ ಹೇಳಿ ಆಕೆಯನ್ನು ಒಪ್ಪುವಂತೆ ಮಾಡುವ ಪ್ರಯತ್ನದಲ್ಲಿದ್ದರು. ಅವರ ಪ್ರಯತ್ನ ವಿಫಲವಾಯಿತು. ನಾನೂ ಸ್ಪಲ್ಪ ಹಠಮಾರಿ ತಾನೆ?

ಆಕೆಯನ್ನು ಕರೆದುಕೊಂಡು ಹೋಗಿ ಪಕ್ಕದ ಬೆಡ್ ಮೇಲೆ ಮಲಗಿಸಿದೆ. ಆಕೆಯ ಜೊತೆ ಇದ್ದ (ಬಹುಶಃ ಚಿಕ್ಕಮ್ಮ ಇರಬೇಕು) ಹೆಂಗಸಿನೊಂದಿಗೆ ಸಹಕರಿಸಲು ಹೇಳಿದೆ. ಅವರು ಹುಡುಗಿಯ ತಲೆಯನ್ನು ಅಲ್ಲಾಡಿಸದಂತೆ ಹಿಡಿದುಕೊಂಡರು. ಇನ್ನೋರ್ವ ಸಹೋದರ ಇರಬೇಕು. ಅವರು ಕೈ ಕಾಲುಗಳನ್ನು ಒತ್ತಿ ಹಿಡಿದುಕೊಂಡರು. ಲ್ಯಾಬ್ ಟೆಕ್ನಿಶಿಯನ್ ಬ್ಲಡ್ ತೆಗೆಯಬೇಕಿದ್ದ ಕೈಯನ್ನು ಹಿಡಿದುಕೊಂಡರು.  ಅಂತೂ ಬ್ಲಡ್ ತೆಗೆದೆ.  ಒಂದು ದೊಡ್ಡ ಸಾಹಸ ಮಾಡಿದ ಮುಖಭಾವ ನನ್ನದಾಗಿತ್ತು. ಆಕೆಯ ಬೊಬ್ಬೆ ಎಷ್ಟಿತ್ತೆಂದರೆ, ಮೇಲಿನ  ಫ್ಲೋರ್ ನಲ್ಲಿದ್ದ ಇಬ್ಬರು ಸ್ಟಾಫ್ ಗಳು ಓಡಿ ಬಂದಿದ್ದರು.  ಜತೆ ಇದ್ದ ಮಹಿಳೆ ಸಿಟ್ಟಿನಿಂದ ಆಕೆಗೆ ಕೈಯಲ್ಲಿ ಎರಡು ಪೆಟ್ಟು ಕೊಟ್ಟದ್ದೂ ಆಯಿತು.

ಭಯ ಅಂದರೆ ಹೀಗಿರುವುದೇ? ಈ ಹಿಂದೆ ಆಕೆಗೇನಾದರೂ ಕೆಟ್ಟ ಅನುಭವಗಳಾಗಿರಬಹುದೇ? ಅ ಹುಡುಗಿಯ ಮನಸಿಗೇನಾದರೂ ಆಘಾತವಾಗಿರಬಹುದೇ? ಆಕೆಗೆ ಆಪ್ತಸಮಾಲೋಚನೆಯ ಅವಶ್ಯಕತೆ ಇರಬಹುದೇ? ಹೀಗೆಲ್ಲ ನನ್ನ ಮನಸಿನಲ್ಲಿ ಹಲವು ಪ್ರಶ್ನೆಗಳು ಮೂಡಿದವು.

ಇರಲಿ…. ಜೀವನದಲ್ಲಿ  ಇದೂ  ಒಂದು ಮರೆಯಲಾರದ ಅನುಭವ!

ಶೋಭಲತಾ ಸಿ,

ಸ್ಟಾಫ್‌ ನರ್ಸ್‌ ಹಾಗೂ ಸಾಮಾಜಿಕ ಕಾರ್ಯಕರ್ತೆ, ಕಾಸರಗೋಡು

ಇದನ್ನೂ ಓದಿ-ವಿವಾಹವಾಗಿ 24 ದಿನಗಳು.. ಗರ್ಭಕ್ಕೆ 36 ದಿನಗಳು-ಇದು ಕೂಡಾ ಸಾಧ್ಯ!

Related Articles

ಇತ್ತೀಚಿನ ಸುದ್ದಿಗಳು