Thursday, June 13, 2024

ಸತ್ಯ | ನ್ಯಾಯ |ಧರ್ಮ

ಅಜಲು- ಕೊರಗರ ಜೀವಸಂಕುಲವನ್ನೆ ಹಿಂಡುತ್ತಿದೆ

ರಾತ್ರಿ ಹಗಲು ಊರ ಜಾತ್ರೆಗಳಿಗೆ ನನ್ನ ಅಜ್ಜ, ಮಾವಂದಿರು ನೀಡಿದ  ಬಿಟ್ಟಿ ಚಾಕರಿಗೆ ಸತತವಾಗಿ ವಾರಗಟ್ಟಲೆ ಡೋಲು, ಚಂಡೆ, ಕೊಳಲು ವಾದಿಸಿ ದಣಿದ ಜೀವಕ್ಕೆ ಸಿಗುವ ಪ್ರತಿಫಲವೆಂದರೆ, ಬಲಿ ಹಬ್ಬಗಳಾದರೆ ಕೋಳಿಯನ್ನು ಕೊಯ್ದ ರಕ್ತ ಮಿಶ್ರಿತ ಅರೆ ಬೆಂದ ಅನ್ನದ ಜೊತೆ ಕೋಳಿಯ ತಲೆ ಮತ್ತು ಒಂದು ಕುಂಬಳ ಕಾಯಿ. ಇಲ್ಲ ಪ್ರಾಣಿ ಬಲಿ ಇಲ್ಲದ ಹಬ್ಬಗಳಾದರೆ ಕುಂಕುಮ  ಮೆತ್ತಿದ ಕೆಂಪು ಬಣ್ಣದ ಅರೆ ಬೆಂದ ಅನ್ನ, ರೋಡಿಗೆ ಹೊಡೆದ, ರಥಗಳಲ್ಲಿ ಬಿದ್ದ ತೆಂಗಿನಕಾಯಿ ಪುಡಿ ಗಡಿಗಳು, ಇಲ್ಲ ಕುರಿ ಆಡು ಬಲಿಯಾದರೆ ಬೋಟಿ, ಚರ್ಮ ಇತ್ಯಾದಿಡಾ. ಸಬಿತಾ, ಸಹಾಯಕ ಪ್ರಾಧ್ಯಾಪಕರು

ಶತ-ಶತಮಾನಗಳಿಂದ ಅಜಲು ಅಸ್ಪೃಶ್ಯತೆಯಲ್ಲಿ ನಲುಗಿದ ಕೊರಗ ಸಮುದಾಯ ತನ್ನ ನೋವು-ಅವಮಾನಗಳನ್ನು ಮರೆತು ಮುಖ್ಯವಾಹಿನಿಯ ಅಭಿವೃದ್ಧಿಯಲ್ಲಿ ತೊಡಗುವುದು ಅಷ್ಟೊಂದು ಸುಲಭದ ಪ್ರಕ್ರಿಯೆಯಲ್ಲ. ಆದರೆ ಈ ನೋವು-ಅವಮಾನಗಳನ್ನು ಮರೆತು ಹೊಸ ಜೀವನವನ್ನು ಕಟ್ಟುವ ಸಲುವಾಗಿ ಈ ಕೃಷಿ ಪೂರ್ವ ಹಂತದ ಸಮುದಾಯವಾದ ಕೊರಗರು ಭೂಮಿ ಮತ್ತು ಅಜಲು ಚಳುವಳಿಯನ್ನು ಕೈಗೊಂಡವು. ಈಚಳುವಳಿಗಳು ಸಮುದಾಯಕ್ಕೆ ಸ್ವಾಭಿಮಾನವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಪ್ರತಿ ವರ್ಷವು ತಮ್ಮ ಭಾಷೆ, ಕಲೆ, ಸಂಸ್ಕೃತಿ, ಪದ್ಧತಿ, ಧರ್ಮ ಮತ್ತು ಕೌಶಲ್ಯಗಳನ್ನು ಅನಾವರಣಗೊಳಿಸುತ್ತಿದೆ. 2023ನೇ ಇಸವಿಯಲ್ಲಿ ಕೊರಗರು 15ನೇ ವರ್ಷದ ಭೂಮಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಆಚರಣೆಯ ಒಂದು ಉಪ ಉದ್ದೇಶ ತನ್ನ ಗತಕಾಲದಿಂದ ಪ್ರಸ್ತುತ ಜಾಗತೀಕರಣ ದಿನದವರೆಗೂ ಅಂಟಿಕೊಂಡ ಅಜಲು, ಅಸ್ಪೃಶ್ಯತೆಯ ಕಳಂಕವನ್ನು ಕೊರಗರ ಮನಸ್ಸಿನಿಂದ ಕಿತ್ತೊಗೆದು, ಸ್ವಾವಲಂಬಿ ಮತ್ತು ಸ್ವತಂತ್ರ ಜೀವನವನ್ನು ಕಟ್ಟಿಕೊಡುವುದು. ಹೇಗೆ ಮತ್ತು ಯಾಕೆ ಈ ನಿಕೃಷ್ಟ ಕಳಂಕವು ಕೊರಗರಿಗೆ ಅಂಟಿಕೊಡಿತು ಎನ್ನುವುದಕ್ಕೆ ಐತಿಹ್ಯಗಳು, ದಂತಕತೆಗಳು, ಇತಿಹಾಸಗಳು ಪುರಾವೆ ನೀಡುತ್ತವೆ. ಆದರೆ ಅದಕ್ಕಿಂತಲೂ ದೊಡ್ಡ ಪುರಾವೆ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಗಳು ತನ್ನ ಏಣಿ ಶ್ರೇಣಿಯೊಳಗೆ ಕೊರಗರನ್ನು ದೂರವಿಟ್ಟು ಇನ್ನೂ ಅಜಲು-ಅಸ್ಪೃಶ್ಯತೆಯ ನೆಪದಲ್ಲಿ ಜೀವಂತವಾಗಿರುವಂತೆ ಈ ಜಾತಿ ವ್ಯವಸ್ಥೆಯು ಪ್ರಜ್ಞಾಪೂರ್ವಕವಾಗಿ ತೊಡಗಿರುವುದನ್ನು ಅವಲೋಕಿಸಿದರೆ ಅದರ ಕಠೋರತೆ ತಿಳಿಯುತ್ತದೆ. ಇಂದು ಹಬ್ಬ ಹರಿದಿನಗಳಲ್ಲಿ ಅನಿರೀಕ್ಷಿತ ಭೇಟಿ ನೀಡಿದರೆ ಅಜಲು ಪದ್ಧತಿ ಈಗಲೂ ಜೀವಂತವಾಗಿದೆ ಎನ್ನುವುದನ್ನು ಸಾಕ್ಷಿ ಸಮೇತ ಅಂದಾಜಿಸಬಹುದು.

ಜಾತಿ ವ್ಯವಸ್ಥೆಯು ಪ್ರಾದೇಶಿಕವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಿಭಿನ್ನವಾಗಿದೆ. ಆಯಾಯ ಪ್ರದೇಶದ ಜಾತಿ ವ್ಯವಸ್ಥೆಯಲ್ಲಿ ಸಾಮಾಜಿಕ ಸಂಬಂಧಗಳು ಮೇಲು-ಕೀಳು, ಶ್ರೇಷ್ಠ-ಕನಿಷ್ಠ, ಉಚ್ಚ-ನೀಚ ಎಂಬ ಕಲ್ಪನೆಯನ್ನು ಹೊಂದಿದೆ. ಕೊನೆಯ ಜಾತಿಗೂ ಅಸ್ಪೃಶ್ಯವಾದ ಒಂದು ಜಾತಿ ಎಂದರೆ ‘ಕೊರಗರು’ ಎನ್ನುವ ರೂಢಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿದೆ. ಚಂಡಾಲ, ಕೊರಗ, ಕಪ್ಪು ಕಾಲಿನವ, ಮನ್ಸ, ತೋಟಿ, ಅಪ್ಪು ತಿನ್ನುವವ ಹೀಗೆ ಇನ್ನೂ ಹಲವಾರು ಹೆಸರುಗಳಿಂದ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಕೊರಗರು ಹೀನಾಯವಾಗಿ ಬದುಕುವಂತೆ ಈ ನಾಗರಿಕ ಸಮಾಜ ಕೊರಗರ ಮೇಲೆ ಈ ಕಳಂಕವನ್ನು ಹೇರಿದೆ. ಈ ತರಹದ ಹೆಸರುಗಳನ್ನು ಸಮಾಜ ಕೊರಗರಿಗೆ ನೀಡುವುದರ ಜೊತೆಗೆ ಆಯಾಯ ಭಾಗದಲ್ಲಿ ವಾಸಿಸುತ್ತಿರುವ ಕೊರಗರು ತಮ್ಮ ಬಳಿ ಪದ್ಧತಿಯ ಅನುಗುಣವಾಗಿ, ಪ್ರತಿಯೊಂದು ಉಪಗುಂಪುಗಳು ನಿರ್ದಿಷ್ಟ ಪ್ರದೇಶಕ್ಕೆ ಬಿಟ್ಟಿ ಚಾಕರಿಯನ್ನು ಸಲ್ಲಿಸುವುದು, ತಮ್ಮ-ತಮ್ಮ ಗಡಿ ಪ್ರದೇಶಗಳಿಗೆ ನಿಷ್ಠೆಯಿಂದ ಪ್ರಾಣವನ್ನು ಒತ್ತೆಯಿಟ್ಟು ಸೇವೆ ಸಲ್ಲಿಸುವುದು ಸಮಾಜದ ಅಲಿಖಿತ ಆದೇಶವಾಗಿದೆ. ಈ ಗಡಿ ಪ್ರದೇಶಗಳಿಗೆ ಭೌತಿಕವಾದ ಯಾವುದೇ ಅಧಿಕಾರವನ್ನು ನೀಡದೇ ಮೌಖಿಕವಾಗಿ ಕೊರಗರು ಈ ಪರಿಧಿಯೊಳಗೆ ಇದ್ದು ಅಧೀನರಾಗುವಂತೆ ಆಯಾಯ ಪ್ರದೇಶದ ಉನ್ನತ ಜಾತಿಯವರು ನಿಯಂತ್ರಣ ಮಾಡುವುದು ವಾಡಿಕೆ. ಅದಕ್ಕೆ ಅನುಸರಣೆಯಾಗಿ ಕೊರಗರು ತಮ್ಮ-ತಮ್ಮ ಅಜಲು ಪ್ರದೇಶವೆಂದೋ ತಮ್ಮನ್ನು ತಾವು ಈ ಅಜಲು ಗಡಿಯವರು/ಕ್ಷೇತ್ರದವರೆಂದು ಅರ್ಪಿಸಿಕೊಳ್ಳುತ್ತಾರೆ. ಈ ತರಹದ ವಿಂಗಡಣೆ ಒಂದು ತರಹದಲ್ಲಿ ಸಮಾಜದ ಉನ್ನತ ಜಾತಿಯ ಜನರು ತಮ್ಮಂತಹ ಎಲ್ಲ ಜನರ ಹಿತದೃಷ್ಟಿಗೆ ಕೊರಗರು ಸಂಪೂರ್ಣವಾಗಿ ದಕ್ಕಬೇಕು, ಮತ್ತು ಶನಿಗ್ರಹಚಾರಗಳನ್ನು ವರ್ಗಾಯಿಸಿಕೊಳ್ಳುವಂತ ಒಂದು ಮನುಷ್ಯ ಜಾತಿ ಕೊರಗರು, ಹಾಗಾಗಿ ಅವರು ಉನ್ನತ ಜಾತಿಯ ಬಿಟ್ಟಿ ಚಾಕರಿಗಳನ್ನು ಯಾವುದೇ ಪ್ರತಿಫಲವನ್ನು ಬೇಡದೆ ನಿರ್ವಹಿಸಬೇಕು, ಮತ್ತು ಅದು ಅವರ ಹಕ್ಕು/ಕರ್ತವ್ಯ ಎನ್ನುವ ಒಂದು ತರಹದ ದರ್ಪದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಈ ಅಜಲು ಪ್ರದೇಶದಲ್ಲಿ ಕೊರಗರು ನಿರ್ವಹಿಸಬೇಕಾದ ಚಾಕರಿಗಳು ಯಾವುವು? ಅದಕ್ಕೆ ನಿರ್ದಿಷ್ಟತೆ ಇದೆಯೇ ಎಂದರೆ ಅದಕ್ಕೆ ಉತ್ತರ ದೊರೆಯದು. ಆದರೆ ಉನ್ನತ ಜಾತಿಯ ಜೀವನ ಚಕ್ರದಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳಿಗೂ, ಧಾರ್ಮಿಕ ಕಾರ್ಯಕ್ರಮಗಳಿಗೂ, ಪೂಜೆ ಪುನಸ್ಕಾರ, ಹಬ್ಬ-ಹರಿದಿನ, ಜಾತ್ರೆ, ಮಾರಿ, ಕಂಬಳ, ಹುಟ್ಟು-ಸಾವು ಈ ಎಲ್ಲಾ ಕಾರ್ಯಗಳಿಗೆ ಕೊರಗರ ಬಿಟ್ಟಿ ಚಾಕರಿ ಉನ್ನತ ಜಾತಿಯವರ ಜನ್ಮ ಸಿದ್ಧ ಹಕ್ಕು. ಇಲ್ಲಿ 200 ಅಡಿ ಅಂತರ ಅಸ್ಪೃಶ್ಯತೆ ಕೊರಗರಿಗೆ ಬಳುವಳಿ.

ಕೊರಗರ ಮನೆ-ಮನೆಗಳಲ್ಲಿ ಒಂದು ಡೋಲು, ಚೆಂಡೆ, ತಾಳ, ಕೊಳಲು ಇರುವುದು ರೂಢಿ. ಈ ಪರಿಕರಗಳನ್ನು ಗಂಡು-ಹೆಣ್ಣು, ಮಕ್ಕಳು, ವೃದ್ಧರು ಎನ್ನುವ ಭೇದ ಭಾವವಿಲ್ಲದೆ ಅದನ್ನು ಕರಗತ ಮಾಡಿಕೊಳ್ಳುವ ಕೌಶಲ್ಯ ಕೊರಗರಲ್ಲಿದೆ. ಈ ಒಂದು ಹುಟ್ಟು ಕಲೆಯನ್ನು ತಮ್ಮ ಜೀವನೋಪಾಯಕ್ಕೆ ಬಳಸದೆ ತಮ್ಮ ಜೀವಮಾನ ಪೂರ್ತಿ ಉನ್ನತ ಜಾತಿಯವರ ಸಂತೋಷಕ್ಕಾಗಿ, ಮನೋರಂಜನೆಗಾಗಿ ಮುಡಿಪಿಟ್ಟು ತ್ಯಾಗವನ್ನು ಕೊರಗರು ಮೆರೆಯುತ್ತಾರೆ. ಅದೆಷ್ಟೋ ಬಾರಿ ನಾನು ಶಾಲೆ, ಹೈಸ್ಕೂಲ್‍ಗಳಿಗೆ ರಜೆ ಮಾಡಿ ಅಜ್ಜ-ಅಜ್ಜಿಯ ಜೊತೆ ಪೂಜೆ, ಕಂಬಳ, ಊರು-ಕೇರಿ ಸುತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದೆ. ರಸ್ತೆ ಬದಿ, ಕಾಡು-ಮೇಡು, ಗದ್ದೆ ಎನ್ನುವ ಪರಿಕಲ್ಪನೆಯೇ ಇಲ್ಲದೆ ಮುಗ್ಧತೆಯಿಂದ ಅಲೆಮಾರಿಗಳಾಗಿ ತಿಂಗಳುಗಟ್ಟಲೆ ಬದುಕಿದ ಅನುಭವಗಳಿವೆ. ನಮ್ಮ ಕುಟುಂಬದವರಿಗೆ ಊರಿನಲ್ಲಿ ಅಜಲು ಕಾರ್ಯಕ್ರಮಗಳು ಇದೆ ಎಂದರೆ ಸಂತಸ. ಕಾರಣ ಅಳಿದು-ಉಳಿದ ಊಟಗಳಿಂದ, ಹಬ್ಬ ಹರಿದಿನಗಳಲ್ಲಿ ಬೇಡಿ, ಮಕ್ಕಳ, ಮೊಮ್ಮಕ್ಕಳ ಹೊಟ್ಟೆ ತುಂಬಿಸಬಹುದು ಎನ್ನುವುದು.  ನಮ್ಮ ಅಜ್ಜನ ಬಹುದೊಡ್ಡ ಆಸೆ ಇದಾಗಿತ್ತು.

ಅದೊಂದು ದಿನ ನಮ್ಮ ಊರಿನ ಜಾತ್ರೆ. ಒಂದು ವಾರದ ಮೊದಲೇ ಊರಿನಲ್ಲಿ ಅದರ ತಯಾರಿ ಪ್ರಾರಂಭವಾಗುತ್ತದೆ. ಬೀದಿ ದೀಪಗಳು, ರಥಗಳ ಪತಾಕೆ ತಯಾರಿ, ಅಂಗಡಿ ಮುಂಗಟ್ಟುಗಳ ಜೋಡಣೆ, ಬ್ಯಾನರ್‍ಗಳು ಇತ್ಯಾದಿ. ಜೊತೆಗೆ ಊರಿನ ಸಾಹುಕಾರನಿಂದ ಮನೆಯಂಗಳದ  ಹೊರ ಅಂಚಿನಲ್ಲಿ ಬಂದು ನಿಂತು ಕೊರಗರಿಗೆ ಆಮಂತ್ರಣ ತರಹದ ಆದೇಶ. ಆತ  ತನ್ನ ಏರು ಧ್ವನಿಯಲ್ಲಿ ನನ್ನ ಅಜ್ಜನಲ್ಲಿ ʼಪ್ರತಿ ವರ್ಷ ನಿಮ್ಮ ಡೋಲು ತರುವುದು ವಾಡಿಕೆ, ತಪ್ಪಿದರೆ ಗೊತ್ತಿದೆಯಲ್ಲ ಅದರ ಪರಿಣಾಮʼ ಎನ್ನುವ ಬೆದರಿಕೆ ಹಾಕುತ್ತಿದ್ದ. ತಪ್ಪಿದರೆ ವಂಶ ನಿರ್ವಂಶವಾಗಿ ಕುಟುಂಬ ಸಮೇತರು ಅನುಭವಿಸಬೇಕಾಗುತ್ತದೆ ಎನ್ನುವ ಮಾನಸಿಕ ಹಿಂಸೆ. ಅದಕ್ಕೆ ಮೌನವಾಗಿ  ಕೈಮುಗಿದು ನಡುಬಗ್ಗಿಸಿ ಆಯ್ತು ಉಲ್ಲಾಯ(ಒಡೆಯ) ನಿಮ್ಮ ಮಾತನ್ನು ಮೀರುವುದುಂಟೆ ಎನ್ನುವ ನನ್ನ ಅಜ್ಜ ಅಜ್ಜಿಯ ಕೀರಲು ಧ್ವನಿ ಇಂದೂ ಕೂಡ ನನ್ನ ಕಿವಿಯಲ್ಲಿ ಮೊಳಗುತ್ತಿದೆ.

ಹಬ್ಬದ ಗೌಜಿ ಗಮ್ಮತ್ತು ಉನ್ನತ ಜಾತಿಯವರಿಗೆ, ದೇವಸ್ಥಾನದ  ಸಾರ್ವಜನಿಕ ಊಟ-ಉಪಚಾರ, ಗೌಜಿ ಗದ್ದಲದ ನಡುವೆ ನಮಗೆ ಪ್ರವೇಶ ಇಲ್ಲದಿದ್ದರೂ ಮರೆಯಲ್ಲಿ ನಿಂತು ಎಂಜಲೆಲೆಯನ್ನು ಹಾಕುವ ತೊಟ್ಟಿಯನ್ನು ಕಾಯುವುದು ನನ್ನ ಮತ್ತು ಅಜ್ಜಿಯ ಕೆಲಸ. ಈ ಊರ ಸಮಾರಂಭದ ಮೂರು ನಾಲ್ಕು ಪಂಕ್ತಿಯ ಊಟದ ಎಲೆಯನ್ನು ಸಂಗ್ರಹಿಸುವುದೇ ನಮ್ಮ ಕಾಯಕ. ಒಂದು ಕಡೆಯಲ್ಲಿ ನಾಯಿಗೂ, ಇನ್ನೊಂದು ಕಡೆಯಲ್ಲಿ ನನ್ನ ಅಜ್ಜ, ಅಮ್ಮ, ದೊಡ್ಡಮ್ಮ ರವರಿಗಗೂ ಸಂಗ್ರಹಿಸುವ ಸಾಮಾಜಿಕ ಅವಕಾಶ. ಅಳಿದುಳಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸುವಲ್ಲಿ ನಾಯಿಗೂ, ಕಾಗೆಗೂ, ಹದ್ದುಗಳಿಗೂ ಸಾಮಾಜಿಕ ನ್ಯಾಯ. ಇದೇನು ಓಬಿರಾಯನ ಕಥೆಯಲ್ಲ. 2000-2002 ರ ವರೆಗೂ ನಾನು ಹೀನಾಯವಾಗಿ ನಡೆದು ಬಂದ ದಾರಿ. ಈ ತರಹ ರಾತ್ರಿ ಹಗಲು ಊರ ಜಾತ್ರೆಗಳಿಗೆ ನನ್ನ ಅಜ್ಜ, ಮಾವಂದಿರು ನೀಡಿದ  ಬಿಟ್ಟಿ ಚಾಕರಿಗೆ ಸತತವಾಗಿ ವಾರಗಟ್ಟಲೆ ಡೋಲು, ಚಂಡೆ, ಕೊಳಲು ವಾದಿಸಿ ದಣಿದ ಜೀವಕ್ಕೆ ಸಿಗುವ ಪ್ರತಿಫಲ ಬಲಿ ಹಬ್ಬಗಳಾದರೆ ಕೋಳಿಯನ್ನು ಕೊಯ್ದ ರಕ್ತ ಮಿಶ್ರಿತ ಅರೆ ಬೆಂದ ಅನ್ನದ ಜೊತೆ ಕೋಳಿಯ ದೇಹವನ್ನು ಹೊರತು ಪಡಿಸಿ ಕೋಳಿಯ ತಲೆ ಮತ್ತು ಒಂದು ಕುಂಬಳ ಕಾಯಿ. ಇಲ್ಲ ಪ್ರಾಣಿ ಬಲಿ ಇಲ್ಲದ ಹಬ್ಬಗಳಾದರೆ ಕುಂಕುಮ  ಮೆತ್ತಿದ ಕೆಂಪು ಬಣ್ಣದ ಅರೆ ಬೆಂದ ಅನ್ನ, ರೋಡಿಗೆ ಹೊಡೆದ, ರಥಗಳಲ್ಲಿ ಬಿದ್ದ ತೆಂಗಿನಕಾಯಿ ಪುಡಿ ಗಡಿಗಳು, ಇಲ್ಲ ಕುರಿ ಆಡು ಬಲಿಯಾದರೆ ಬೋಟಿ, ಚರ್ಮ ಇತ್ಯಾದಿ.

ಊರ ಜಾತ್ರೆ ಮುಗಿದು ಮರುದಿನ ಊರು ಊರು ಸುತ್ತಿ ಉನ್ನತ ಜಾತಿಯವರ ಮನೆಯಲ್ಲಿ ತಿಂದು ಉಂಡು ಉಳಿದ ತಂಗಳ ಪದಾರ್ಥಗಳನ್ನು ಬೇಡಿ ಆ ಎಲ್ಲಾ ಆಹಾರ ಪದಾರ್ಥಗಳನ್ನು ಒಂದೇ ಪಾತ್ರೆಯಲ್ಲಿ ಮಿಶ್ರಣ ಮಾಡಿ ಮರುದಿನ ಅದನ್ನು ಒಣಗಿಸಿ ತಿಂಗಳುಗಟ್ಟಲೆ ಆ ಆಹಾರವನ್ನು ತಿನ್ನುವ ದಾರಿದ್ರ್ಯ ಮಾತ್ರ ಕೊರಗರಿಗೆ. ಒಮ್ಮೆ ನಮ್ಮ ಊರಿನ ಗಣ್ಯ ವ್ಯಕ್ತಿ ಮೃತರಾಗಿದ್ದರು. ಅದು ಬಿಳಲು ತೆಗೆಯಲು ಹೋದ ದೊಡ್ಡಮ್ಮನ ಕಿವಿಗೆ ಬಿದ್ದು ಅದನ್ನು ಬಂದು ಅಜ್ಜಿಯಲ್ಲಿ ಹೇಳಿ ತಮ್ಮ ಅಜಲು ಪ್ರದೇಶದೊಳಗೆ ಬರುತ್ತದೊ ಇಲ್ಲವೊ ಎಂದು ಧೃಡೀಕರಿಸಿಕೊಂಡು ಹೋದರು. ಜೊತೆಗೆ ಅಜ್ಜ-ಮಾವಂದಿರು ತಮ್ಮ ಬುಟ್ಟಿ ಬಿಳಲುಗಳನ್ನು ಅರ್ಧದಲ್ಲಿಯೆ ಬಿಟ್ಟು ದಿಗಿಲಿನಿಂದ ತಮ್ಮದೇ ಮನೆಯಲ್ಲಿಯೇ ಸಾವು ಸಂಬಂಧಿಸಿದಂತೆ ತನ್ನ ಡೋಲು, ಚಂಡೆ, ತಾಳವನ್ನು ಹಿಡಿದು ಸಾವಿನ ಮನೆಯಲ್ಲಿ ದೂರದಲ್ಲಿ ನಿಂತುಕೊಂಡು ಜಡಿಮಳೆಗೆ ತನ್ನ ಡೋಲು ಹರಿಯುತ್ತದೊ ಏನೋ ಎನ್ನುವ ಭಯದಲ್ಲಿ ಆ ಮನೆಯ ದನದ ಹಟ್ಟಿಯ ಹೊರಗಿನ ಭಾಗದ ಗೋಡೆಯ ಅಂಚಿನಲ್ಲಿ ನಿಂತುಕೊಂಡು ಚಾಕರಿ ನೀಡಿ ಪುಕ್ಕಟೆಯಾಗಿ ಹೆಣವನ್ನು ದಫನ ಮಾಡಿದ ಅಥವಾ ದಹನ ಮಾಡಿದ ಜಾಗದಲ್ಲಿ ಸತ್ತ ವ್ಯಕ್ತಿಯ ಬಟ್ಟೆಯನ್ನು, ಚಪ್ಪಲಿ, ಪಾತ್ರೆ, ಲೋಟ ಇನ್ನಿತರ ವಸ್ತುಗಳನ್ನು ತಂದು ಕುಟುಂಬ ಸಮೇತವಾಗಿ ಉಪಯೋಗಿಸಿಕೊಳ್ಳುತ್ತಿದ್ದೆವು.

ಇದರಿಂದ ಮೇಲ್ನೋಟಕ್ಕೆ ಕೊರಗರು ತಮ್ಮ-ತಮ್ಮ ಅಜಲು ಪ್ರದೇಶಗಳಲ್ಲಿ ತಾವೇ ಸ್ವಯಂಪ್ರೇರಣೆಯಿಂದ ಚಾಕರಿ ಮಾಡುತ್ತಾರೆ ಎಂದು ಅನ್ನಿಸಿದರು ಇದರ ಹಿಂದೆ ಪ್ರಜ್ಞಾಪೂರ್ವಕವಾಗಿ ಕೊರಗರೇತರರು ಮಾಡುವ ಕಣ್ಣಿಗೆ ಕಾಣದ ಸಾಮಾಜಿಕ ನಿಯಮವಿದೆ. ಕೊರಗರು ಈ ಚಾಕರಿಯನ್ನು ಮಾಡಲೇಬೇಕು, ಇದು ಅವರ ಪೂರ್ವ ಕರ್ಮದ ಫಲ, ಒಂದು ವೇಳೆ ಅದನ್ನು ಧಿಕ್ಕರಿಸಿದರೆ, ಅವರ ವಂಶ ನಿರ್ವಂಶವಾಗುವುದು ಎನ್ನುವ ಶಾಪ ಕೊರಗರ ಹೆಣ್ಣು ಮಕ್ಕಳ ಕರುಳನ್ನು ಹಿಂಡುತ್ತಿತ್ತು. ಅದೆಷ್ಟೊ ಬಾರಿ ನನ್ನಜ್ಜಿ ಕಣ್ಣೀರು ಹಾಕುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಒಂದು ವೇಳೆ ಅಜಲು ವಿರೋಧ ನಡೆದರೆ ಕೊರಗರ ಮಾನಸಿಕ ಹಿಂಸೆಗೆ, ಭೀಭತ್ಸ ಭಯಕ್ಕೆ ಕಾರಣವಾಗುತ್ತಿತ್ತು. ಹಾಗಾಗಿ ಕೊರಗರು ಮತ್ತೆ ಮತ್ತೆ ಈ ಅಜಲು ಪ್ರಕ್ರಿಯೆಯಲ್ಲಿ ತೊಡಗಿ ಕೀಳರಿಮೆಯಿಂದ ಮೇಲ್ವರ್ಗದ ಜನರಿಗೆ ಅಧೀನರಾಗುವುದು ರೂಢಿಯಾಗಿತ್ತು.

ಕೆಲವೊಮ್ಮೆ ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಹೋಗಿ ದಿನವಿಡಿ ದೂರದ ಅಂಚಿನಲ್ಲಿ ಕಾದು ಕೊನೆಗೆ ಎಂಜಲೆಲೆಯಲ್ಲಿ ಏನೂ ಸಿಗದ ಸಂದರ್ಭದಲ್ಲಿ ಮದುವೆ ಮನೆಯ ಯಜಮಾನನಲ್ಲಿ ಬೇಡಿದಾಗ ಅಪ್ಪು ತಿನ್ನುವ ಕೊರಗನಿಗೆ ಅತ್ರಾಸ್ ಯಾಕೆ ಬೇಕು ಎನ್ನುವ ಬೈಗುಳ ಕೇಳಿ ಬರಿ ಹೊಟ್ಟೆಯಲ್ಲಿ ಅಜ್ಜಿಯ ಜೊತೆ ಬಿಳಲು ಹೊತ್ತು ಸಪ್ಪೆ ಮೊರೆ ಹಾಕಿಕೊಂಡು ಬಂದಿದ್ದೂ ಇದೆ.

ನನ್ನ ಅಜ್ಜನ ಅಜಲು ಹಂದಾಡಿ ಪ್ರದೇಶ, ಬ್ರಹ್ಮಾವರದ ಹಂದಾಡಿ ಕಂಬಳದ ಸಂಭ್ರಮವನ್ನು ಒಂದೆರೆಡು ಪದಗಳಲ್ಲಿ ಹೇಳಲು ಸಾಧ್ಯವಾಗದು. ಅದರ ತಯಾರಿ ಎಷ್ಟರ ಮಟ್ಟಿಗಿತ್ತು ಎಂದರೆ ಎರಡು ಮೂರು ದಿನಗಳ ಮೊದಲೆ ಹೈಸ್ಕೂಲ್ ಗೆ ರಜೆ ಹಾಕಿ ಅಜ್ಜನ ಸಂಸಾರದವರ ಜೊತೆ ಸವಾರಿ, ಚಿಕ್ಕಪ್ಪ, ಚಿಕ್ಕಮ್ಮ, ಹೀಗೆ ಹಲವಾರು ಜನರ ಜೊತೆ ಚಿಕ್ಕ ಪುಟ್ಟ ಜವಾಬ್ದಾರಿಯೊಂದಿಗೆ ಬಿರ್ತಿಯಿಂದ ಹಂದಾಡಿಯವರೆಗೆ ಕಾಲ್ನಡಿಗೆ, ಇತ್ತ ಚಪ್ಪಲಿ ಇಲ್ಲದ ಬರಿಗಾಲಲ್ಲಿ ನಡೆದು ಕಾಲೆಲ್ಲ  ಸವೆತ, ಮಧ್ಯಾಹ್ನ ಹೊರಟು ಸಂಜೆಯ ಹೊತ್ತಿಗೆ ಕಂಬಳ ಗದ್ದೆಯಲ್ಲಿ ನಮ್ಮ ಬಿಡಾರ. ಮೂರು ನಾಲ್ಕು ದಿನ ಅಲ್ಲೆ ಇದ್ದು ಆ ಕಂಬಳದ ಅಜಲು ಚಾಕರಿಯಲ್ಲಿ ಭಾಗಿ. ಈ ಪ್ರಕ್ರಿಯೆಯನ್ನು “ಪನಿ ಕುಲ್ಲುನ” (ಕಂಬಳ ಗದ್ದೆಯನ್ನು ಕಾಯುವುದು ಎಂದರ್ಥ) ಯಾಕೆಂದರೆ ಆ ಊರಿನ ಸಾಹುಕಾರ ತನ್ನ ಸ್ಥಾನ ಮಾನವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ, ತನ್ನ ಮನೋರಂಜನೆಗಾಗಿ, ಸಂತೋಷ ಕೂಟಕ್ಕಾಗಿ ಕೋಣಗಳನ್ನು ಓಡಿಸುವುದು. ಆಗ ತಾನೇ ಹೊಸ ಫಸಲು ಬಂದಿರುವ ಹಿನ್ನೆಲೆಯಲ್ಲಿ ತನ್ನ ಕುಟುಂಬದ ಸಮೃಧ್ಧಿಯ ಸುಭಿಕ್ಷೆಗಾಗಿ, ತನ್ನ ಸ್ಥಾನ ಮಾನವನ್ನು ಹೆಚ್ಚಿಸಿ ಕೊಳ್ಳುವ ಒಂದು ಮನರಂಜನ ಕಾರ್ಯ ಅದು. ಆದರೆ ಇದರ ಯಾವುದೇ ಅರ್ಥದ ಪರಿವೇ ಇಲ್ಲದ ನಮಗೆ ಕಂಬಳದ ಕೋಣಗಳು ಓಡುವ ಗದ್ದೆಯನ್ನು ಬೇರೆ ಯಾರೋ ಯಜಮಾನನ ಹಿತ ಶತ್ರುಗಳು ತೊಂದರೆ ಕೊಡದಂತೆ ಕಾವಲು ಕಾಯುವ, ರಾತ್ರಿಯೆಲ್ಲ ಕಣ್ಣಿಗೆ ಎಣ್ಣೆ ಹಚ್ಚಿ ಕಾಯ್ದ, ಚಳಿಗಾಳಿಯನ್ನು ಲೆಕ್ಕಿಸದೇ ಮರುದಿನ ಕಂಬಳ ಗದ್ದೆಯಲ್ಲಿ ಓಡಿ, ಗದ್ದೆಯು ಯಾವುದೇ ಗಾಜಿನ ಚೂರು ಅಥವಾ ಕಬ್ಬಿಣ ಕಡ್ಡಿಗಳಂತ ವಸ್ತುಗಳಿಂದ ಸುರಕ್ಷಿತವಾಗಿದೆ ಎನ್ನುವುದನ್ನು ಸಾಬೀತು ಪಡಿಸುವ ಕಾರ್ಯ. ಇಲ್ಲದಿದ್ದಲ್ಲಿ ಮುಂದೆ ನಡೆಯುವ ಕೋಣಗಳ ಕಾಲಿಗೂ ಅಥವಾ ಓಟಗಾರರ ಕಾಲಿಗೂ ಅನಾಹುತಗಳು ಆಗಬಾರದೆಂದು ಚುಣ್ಣನ ವೇಷವನ್ನು ಧರಿಸಿದ ಕೊರಗರು ಆ ಗದ್ದೆಯಲ್ಲಿ ಓಡುವುದು. ಇದೇ ವೇಷ ತಂಡದೊಂದಿಗೆ ಡೋಲು, ಚಂಡೆ, ವಾದನಗಳೊಂದಿಗೆ ಮನೆ ಮನೆಗಳಿಗೆ ತೆರಳಿ ಭತ್ತದ ಪಡಿಯನ್ನು ಬೇಡಿ ಆ ಊರ ಮತ್ತು ಕಂಬಳದ ಕಾರ್ಯಕ್ರಮಗಳಿಗೆ ತಗುಲಿದ ಎಲ್ಲ ಮಾನವ ಶನಿ ಗ್ರಹಚಾರಗಳನ್ನು ತನಗೆ ನೀಡಿದ ದಾನದ ಮುಖಾಂತರ ವರ್ಗಾಯಿಸಿಕೊಂಡು ಊರ ಜನರ ಸಮೃದ್ಧಿಯನ್ನು ಬಯಸುವುದು. ಹಾಗಾಗಿ  ಅಜ್ಜ ತನ್ನ ಪ್ರಾಣವನ್ನು ಒತ್ತೆ ಇಟ್ಟು ಸಿಗುವ ಪುಡಿಗಾಸಿಗೆ, ಸರಾಯಿ ಬಾಟಲಿಗೆ, ಒಂದು ಪ್ಯಾಕ್ ಕಡಲೆ ಬೀಜಕ್ಕೆ ಸಿಡಿಮದ್ದು ಸಿಡಿಸುವ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದರು.

ಇಷ್ಟಕ್ಕೆ ಈ ಅಜಲು ಕಾರ್ಯಗಳು ಮುಗಿಯುವುದಿಲ್ಲ. ತಿಂಗಳ ಅಂತ್ಯ ಚಂದ್ರ ಪೂರ್ಣವಾಗಿ ಕಪ್ಪಾಗಬೇಕು, ಅಮವಾಸ್ಯೆ ಬರಬೇಕು. ಕಪ್ಪು ಕಾಲಿನ ಕೊರಗನಿಗೆ ಎಣ್ಣೆ ದಾನ ಮಾಡಿದರೇನೆ ಈ ದಿನದ ಮಹತ್ವ ಪರಿಪೂರ್ಣವಾಗುವುದು. ಆ ದಿನ ಕೊರಗ ತನ್ನ ಅಜಲು ಪ್ರದೇಶವನ್ನು ಮೂರು ಸುತ್ತು ಹಾಕಿ ನಿವಾಳಿಸಬೇಕು. ಯಾಕೆಂದರೆ ಕಾಯಿಲೆ ಕಸಾಲೆಗಳಿದ್ದ ಮನೆಗಳಿಗೆ  ಹೋಗಿ ಆ ಮನೆಯವರು ತಲೆಗೆ ಸುರಿದ ಎಣ್ಣೆ ಕಣ್ಣು ಬಾಯಿಗೆ ಬಂದು ದಮ್ಮು ಕಟ್ಟುವ ವರೆಗೆ ತಾಳ್ಮೆಯಿಂದ ಕುಳಿತುಕೊಳ್ಳಬೇಕು. ಕಾಯಿಲೆಯಿಂದ ಬಳಲುವ ವ್ಯಕ್ತಿಯ ಉಗುರು, ಕೂದಲು ಮಿಶ್ರಿತ ಬಾಳೆಯ ಎಲೆಯಲ್ಲಿ ಬಡಿಸಿದ ಅರೆಬೆಂದ ಅನ್ನ ಮತ್ತು ಕುಂಬಳಕಾಯಿ ಸಾರನ್ನು ಕಣ್ಣು ಮುಚ್ಚಿ ತಿನ್ನಬೇಕು. ನಿವಾಳಿಸಿದ ಊಟದ ಜೊತೆಗೆ ಆತನ ಹಳೆ ಬಟ್ಟೆ, ಪಾತ್ರೆ, ಇತರ ಹಳೆ ವಸ್ತುಗಳನ್ನು ಕೊರಗ ತನ್ನ ಮನೆಗೆ ಕೊಂಡೊಯ್ಯಬೇಕು. ಇಷ್ಟೇ ಅಲ್ಲ ಅಮವಾಸ್ಯೆಯ ದಿನ ಊರಲ್ಲಿ ಕೆಲವು ಉನ್ನತ ಜಾತಿಯವರು ಬಳಿ, ಮಾಟ, ಮಂತ್ರಕ್ಕೆ ಬಡಿಸಿದ ಎಲ್ಲಾ ಆಹಾರ ಪದಾರ್ಥಗಳನ್ನು ಕೊರಗರು ಹೊತ್ತು ಹೋಗಬೇಕು.

ನನ್ನ ತಂದೆಯ ಅಜಲಿನಲ್ಲಿ ನಡೆದ ಒಂದು ಘಟನೆಯನ್ನು ನನ್ನ ಸಂಬಂಧಿಕರು ನಾವು ಚಿಕ್ಕ ಮಕ್ಕಳಿದ್ದಾಗ ಹೇಳಿದ ನೆನಪು. ನನ್ನ ತಂದೆ ಹುಣಸೆಮಕ್ಕಿ ಊರಿನ ಅಜಲಿನ ಪ್ರದೇಶವನ್ನು ಹೊಂದಿದ್ದರು. ಅಲ್ಲಿನ ಸಾಹುಕಾರರ ಮನೆಯಲ್ಲಿ, ಅಜ್ಜಿಯ ಕಾಲದಿಂದಲೂ ಜೀತದಲ್ಲಿದ್ದು ಊಟ ತಿಂಡಿಗೆ ಬಹಳ ಕಷ್ಟ ಪಡುತ್ತಿದ್ದ ದಿನಗಳಲ್ಲಿ ಊರಿನ ಹಬ್ಬ ಹರಿದಿನ, ಮಾಟ ಮಂತ್ರ, ಬಲಿ, ಶ್ರಾವಣ ಶನಿವಾರಗಳು ಈ ತರಹದ ದಿನಗಳು ಬರಲಿ ಅಂತನೇ ಅವರು ಕಾಯುತ್ತಿದ್ದರಂತೆ. ಸಾಹಸಿಯಾದ ನನ್ನ ತಂದೆ ಭಯ ಪಡದೇ ಆಹಾರದ ಆಸೆಗಾಗಿ ಮಾಟ, ಮಂತ್ರ, ಬಳಿ ಮತ್ತು ಕೂಟಗಳಿಗೆ ಬಡಿಸಿದ ಊಟಗಳನ್ನು ತಂದು ಮನೆ ಮಂದಿಗೆಲ್ಲ ಹಂಚಿ ತಿನ್ನುತ್ತಿದ್ದರಂತೆ. ಹೀಗೆ  ಅಜಲು ಎಂದರೆ ಒಂದೇ ಪ್ರದೇಶವಲ್ಲ. ಕೊರಗರೆಲ್ಲ ಒಂದೇ ಪ್ರದೇಶಕ್ಕೆ ಸೇರಿದವರು ಎನ್ನುವುದಲ್ಲ. ಕೊರಗರ ಅಜಲು ಒಂದು ಪ್ರಕ್ರಿಯೆ. ಕೊರಗರು ತಮ್ಮ-ತಮ್ಮ ನಿರ್ದಿಷ್ಟ ಪ್ರದೇಶದೊಳಗೆ ಉನ್ನತ ಜಾತಿಯ ಜನರ ಸಂತೋಷಕ್ಕಾಗಿ ಅವರ ಸಮೃದ್ಧಿ-ಸುಭಿಕ್ಷೆಗಾಗಿ ಆರೋಗ್ಯಕ್ಕಾಗಿ ಯಾವುದೇ ಪ್ರತಿಫಲವನ್ನು, ಅಪೇಕ್ಷೆಯನ್ನು ಬಯಸದೇ ಸಾಮೂಹಿಕವಾಗಿ ಮತ್ತು ಸಾಮಾಜಿಕ ಕಳಕಳಿಯಿಂದ ಮಾಡುವ ಬಿಟ್ಟಿ ಚಾಕರಿ ಅಥವಾ ಜೀತ.

2000ನೇ ಇಸವಿಯಲ್ಲಿ ಅಜಲು ಮುಕ್ತ ಹೋರಾಟದ ಫಲವಾಗಿ ಅಜಲು ನಿಷೇಧ ಕಾಯ್ದೆ ಜಾರಿಯಾಗಿದೆ. ಅಜಲು ಚಾಕರಿಯಲ್ಲಿ ಕೊರಗರನ್ನು ತೊಡಗಿಸಿದರೆ ದಂಡ ಮತ್ತು ಜೈಲುವಾಸದಂತಹ ಕಠಿಣ ಶಿಕ್ಷೆಯನ್ನು ಕಾಯ್ದೆಯು ವಿಧಿಸುತ್ತದೆ. ಆದರೆ ಈ ನ್ಯಾಯಾಲಯದ ಕಾನೂನಿಗೆ ಬಗ್ಗದ ಮನಸ್ಥಿತಿಗಳು ಇನ್ನೂ ಜೀವಂತವಾಗಿವೆ. ಹಿಂದಿನ ಅಜಲು ಪ್ರಕ್ರಿಯೆಯ ರೂಪಗಳು ಬದಲಾಗಿ ಹೊಸ ರೂಪದ ಅಜಲು ಅಸ್ಪೃಶ್ಯತೆಗಳು ಕಣ್ಣಿಗೆ ಕಾಣದ ರೀತಿಯಲ್ಲಿ ಜೀವಂತವಾಗಿವೆ. ಅಜಲು ಮುಕ್ತ ಸಮಾಜಕ್ಕಾಗಿ ಕೊರಗರು ಮತ್ತು ಕೊರಗರೇತರರು ವೈಚಾರಿಕ ಮನೋಭಾವನೆಯೊಂದಿಗೆ ಸಂವೇದನಾಶೀಲರಾಗುವುದು ಅನಿವಾರ್ಯವಾಗಿದೆ.

ಡಾ.ಸಬಿತಾ                         

ಕೊರಗ ಸಮುದಾಯದ ಮೊದಲ ಮಹಿಳಾ ಡಾಕ್ಟರೇಟ್‌ ಪದವೀಧರೆಯಾಗಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರವಿಭಾಗದಲ್ಲಿ  ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು