Sunday, June 16, 2024

ಸತ್ಯ | ನ್ಯಾಯ |ಧರ್ಮ

ಚಂದ್ರನಲ್ಲಿ ಗಂಧಕ ಪತ್ತೆ – ಇಸ್ರೋ

ಬೆಂಗಳೂರು, ಅಗಸ್ಟ್.30 : ಚಂದ್ರಯಾನ-3 ರ ‘ಪ್ರಜ್ಞಾನ್’ ರೋವರ್‌ನಲ್ಲಿರುವ ಲೇಸರ್ ಹೊಂದಿರುವ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಚಂದ್ರನ ದಕ್ಷಿಣ ಧ್ರುವದ ನೆಲದಲ್ಲಿ ಸಲ್ಫರ್ ಇರುವುದನ್ನು ದೃಢಪಡಿಸಿದೆ ಎಂದು ಇಸ್ರೋ ತಿಳಿಸಿದೆ.

ಇದರ ಜೊತೆಗೆ ಚಂದ್ರಯಾನ-3 ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಈ ಉಪಕರಣವು ಪತ್ತೆ ಮಾಡಿದೆ ಎಂದಿದೆ ಇಸ್ರೋ.

“ಚಂದ್ರಯಾನ-3 ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪಿ (Laser-Induced Breakdown Spectroscopy – LIBS) ಉಪಕರಣ ಚಂದ್ರನ ದಕ್ಷಿಣ ಧ್ರುವದಲ್ಲಿ ಧಾತುರೂಪದ ಸಂಯೋಜನೆಯ (Elemental Composition) ಮೇಲೆ ಮೊಟ್ಟಮೊದಲ ಇನ್-ಸಿಟು ಮಾಪನಗಳನ್ನು (in-situ measurements – ಒಂದೇ ಸ್ಥಳದಲ್ಲಿ ಅದೇ ಕಂಡಿಷನ್‌ನಲ್ಲಿ ಮಾಡುವ ಮಾಪನ) ಮಾಡಿದೆ . ಈ ಇನ್-ಸಿಟು ಮಾಪನಗಳು ಆ ಪ್ರದೇಶದಲ್ಲಿ ಸಲ್ಫರ್ (S) ಇರುವುದನ್ನು ದೃಢಪಡಿಸಿವೆ.

ISRO ಪ್ರಕಾರ LIBS ವೈಜ್ಞಾನಿಕ ತಂತ್ರದಲ್ಲಿ ವಸ್ತುಗಳ ಸಂಯೋಜನೆಯನ್ನು ತೀವ್ರವಾದ ಲೇಸರ್ ಪಲ್ಸ್‌ಗಳಿಗೆ (intense laser pulses) ಒಡ್ಡಿ ವಿಶ್ಲೇಷಿಸಲಾಗುತ್ತದೆ. ಇದನ್ನು ಬಂಡೆ ಅಥವಾ ಮಣ್ಣಿನ ಮೇಲೆ ಹರಿಯಬಿಡಲಾಗುತ್ತದೆ. ಈ ಲೇಸರ್‌ ಪಲ್ಸ್‌ ತುಂಬಾ ಬಿಸಿಯಾಗಿರುವುದರಿಂದ ಆ ವಸ್ತುವನ್ನು ಕರಗಿಸಿ ಪ್ಲಾಸ್ಮಾವನ್ನು (Plasma) ಉತ್ಪಾದಿಸುತ್ತವೆ. ಈ ಪ್ಲಾಸ್ಮಾದ ಬೆಳಕನ್ನು ಸ್ಪೆಕ್ಟ್ರಲ್‌ (Spectral) ಆಗಿ ವಿಭಜಿಸಿ Charge Coupled Devices ನಂತಹ ಡಿಕ್ಟೇಟರ್‌ ಸಾಧನಗಳಿಂದ ಅಧ್ಯಯನ ಮಾಡಲಾಗುತ್ತದೆ. ಈ ಬಿಸಿ ಬಿಸಿ ಪ್ಲಾಸ್ಮಾ ಸ್ಥಿತಿಯಲ್ಲಿ ಇರುವ ವಸ್ತು ಹೊರಸೂಸುವ ಬೆಳಕು ಬೇರೆ ಬೇರೆ ತರಂಗಾಂತರಗಳನ್ನು (wavelengths) ಹೊಂದಿರುವುದರಿಂದ ಆ ತರಂಗಾಂತರಗಳನ್ನು ಅಧ್ಯಯನ ಮಾಡಿ ಏನೇನು ಧಾತುಗಳಿವೆ ಎಂಬುದನ್ನು ಪತ್ತೆ ಮಾಡಲಾಗುತ್ತದೆ.

ಈ ಪ್ರಾಥಮಿಕ ವಿಶ್ಲೇಷಣೆಗಳಿಂದ ಚಂದ್ರನ ಮೇಲ್ಮೈಯಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇರುವುದು ಪತ್ತೆಯಾಗಿದೆ. ಹೆಚ್ಚಿನ ಅಧ್ಯಯನದಿಂದ ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವಿಕೆಯನ್ನು ಬಹಿರಂಗಪಡಿಸಿದೆ. ಆದರೆ ಹೈಡ್ರೋಜನ (H) ಇದೆಯೇ ಎಂಬುದನ್ನು ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಸ್ರೋ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು