Sunday, June 16, 2024

ಸತ್ಯ | ನ್ಯಾಯ |ಧರ್ಮ

ನಾಗ ಶಾಪ- ವಿಜ್ಞಾನಕ್ಕೆ ಸವಾಲೇ?

ನಂಬಿಕೆಯ ಹೆಸರಲ್ಲಿ ಬಡವರನ್ನು ದೋಚುವ ಶಕ್ತಿಗಳಿಗೆ ನಮ್ಮಲ್ಲಿ ಕೊರತೆಯಿಲ್ಲ. ಜಗತ್ತು ವಿಶಾಲವಾಗಿದೆ. ಜ್ಞಾನ ಕಲಿತು ಮುಗಿಯುವಂತದ್ದಲ್ಲ. ಅಲ್ಲಲ್ಲಿ ಅಚ್ಚರಿಗಳ ಸರಮಾಲೆಗಳಿವೆ. ಕಣ್ಣಿಗೆ ಕಾಣುವ ಕತೆಗಳಿವೆ. ವಿಜ್ಞಾನಕ್ಕೆ ಸವಾಲೆಸೆಯುವ ಇತಿಹಾಸಗಳಿವೆ. ಆದರೆ ಎಲ್ಲವುಗಳನ್ನು ವಿಜ್ಞಾನದ ಅರಿವಿನಲ್ಲಿ ಸಂಶೋಧಿಸಿದರೆ ವಾಸ್ತವದ ಅರಿವು ಮೂಡಲು ಸಾಧ್ಯ ಶೋಭಾಲತಾ ಸ್ಟಾಫ್‌ ನರ್ಸ್‌, ಕಾಸರಗೋಡು.

ಇವತ್ತು ನಾಗರ ಪಂಚಮಿ ಅಲ್ವಾ… ನಾಗನಿಗೆ ಹಾಲು ಅಭಿಷೇಕಕ್ಕೆ ಹೋಗುವುದಿಲ್ಲವೆ…..? ಪಕ್ಕದ ಮನೆಯವರು ಕರೆದು ಕೇಳಿದಾಗ….  ಓಹ್! ಹೌದಲ್ವೇ…. ನನಗೆ ಸಮಯ ಇಲ್ಲ.. ಡ್ಯೂಟಿ ಇದೆ …… ಎಂದಷ್ಟೆ ಹೇಳಿದೆ. ನೆನಪುಗಳು 20 ವರ್ಷಗಳ ಹಿಂದೆ ಸರಿದುವು. 

ಜನರಲ್ ಸರ್ಜನ್ ಕೈಕೆಳಗೆ ಕೆಲಸ ಮಾಡುತ್ತಿದ್ದ ದಿನಗಳವು. ಸಣ್ಣದೊಂದು ಆಸ್ಪತ್ರೆ. 2 – 3 ಸ್ಟಾಫ್ ಗಳು. ಕೆಲವೊಮ್ಮೆ ಮಾತ್ರ ಒಳರೋಗಿಗಳು ಇರುತ್ತಾರೆ. ಶಾಲಾ ರಜಾ ದಿನಗಳಲ್ಲಿ ಆಸ್ಪತ್ರೆ ಜನರಿಂದ ತುಂಬಿರುತ್ತದೆ.. ರಜಾದಿನಗಳಲ್ಲಿ ರೋಗವೇ … ಎಂದು ಕೇಳಬೇಡಿ.

ಇಸ್ಲಾಂ ಧರ್ಮದಲ್ಲಿ  ಸರ್ಕಂಸಿಶನ್ ಮಾಡುತ್ತಾರಲ್ಲಾ…? ಅದನ್ನು ಇಸ್ಲಾಂ ಧರ್ಮದ ಡಾಕ್ಟರ್ ಗಳಲ್ಲಿ ಮಾಡಿಸುವವರೇ ಹೆಚ್ಚು. ಮಕ್ಕಳಿಗೆ ಶಾಲೆಗೆ  ರಜೆ ಇರುವಾಗ ಸರ್ಜರಿ ಮಾಡಿದರೆ ಶಾಲಾ ದಿನಗಳು ನಷ್ಟವಾಗುವುದಿಲ್ಲ. ಹಾಗಾಗಿ ನಾನು ದುಡಿಯುತ್ತಿದ್ದ ಆಸ್ಪತ್ರೆಗಳಲ್ಲಿ ರಜಾದಿನಗಳಲ್ಲಿ ಸ್ವಲ್ಪ ಬಿಝಿ. ಉಳಿದಂತೆ ಹೊರರೋಗಿಗಳ ಸಂಖ್ಯೆ 30 ದಾಟುವುದೇ ಅಪರೂಪ. ಏನು ವಿಶೇಷ ಅನ್ತೀರಾ…?

ಆ ದಿನದಂದು ಒಂದೇ ಮನೆಯ ಮೂವರು  ಮಕ್ಕಳಿಗೆ ಸರ್ಕಂಸಿಶನ್ ಸರ್ಜರಿ (ಆಸ್ಪತ್ರೆ ಭಾಷೆ)  ಮಾಡಲಾಯಿತು. ಸರ್ಜರಿ ಕಳೆದು ಅರ್ಧ ಗಂಟೆಯಲ್ಲಿ ಸಾಮಾನ್ಯವಾಗಿ ಮಕ್ಕಳನ್ನು ಮನೆಗೆ ಕಳಿಸಲಾಗುವುದು. ಆದರೆ ಆ ಮೂವರು ಮಕ್ಕಳನ್ನು ಮೂರು ದಿನಗಳು ಕಳೆದ ಬಳಿಕವೇ ಮನೆಗೆ ಕರೆದುಕೊಂಡು ಹೋಗುವುದೆಂದು ಅಡ್ಮಿಶನ್ ಮಾಡಲಾಯಿತು. ಕಾರಣ, ಮೂವರೂ ಮಕ್ಕಳು 8 ರಿಂದ 13 ವರ್ಷ ಪ್ರಾಯದವರಾಗಿದ್ದರೂ ಸಾಮಾನ್ಯ ಮಕ್ಕಳಂತಿರಲಿಲ್ಲ. ಬುದ್ಧಿಮಾಂದ್ಯತೆಯಿಂದ ಕೂಡಿದ್ದರು. ಹಲವು ಬುದ್ಧಿಮಾಂದ್ಯ ಮಕ್ಕಳನ್ನು ಕಂಡಿದ್ದರೂ ಇವರಲ್ಲಿ ವಿಶೇಷ ಇದೆ ಅನ್ನಿಸಿತು.

ಸಿಟ್ಟರೇ… ಸಿಟ್ಟರೇ… ಎಂದು ಮುದ್ದಾಗಿ ಕರೆಯುವ ಸಣ್ಣ ಹುಡುಗ ಗಮನ ಸೆಳೆದ. ಬಿಡುವಿನ ಸಮಯದಲ್ಲಿ ಮಕ್ಕಳ ತಂದೆಯೊಂದಿಗೆ  ಮಾತಿಗಾರಂಭಿಸಿದೆ… 

“ಮೂರು ಮಕ್ಕಳೂ ಹೀಗಾಗಲು ಕಾರಣವೇನು? ಕುಟುಂಬದಲ್ಲಿ ಯಾರಾದರೂ ಬುದ್ಧಿಮಾಂದ್ಯರು ಇದ್ದಾರೆಯೇ?”

ಅವರು ತಮ್ಮ ಜೀವನ ಕಥೆಯನ್ನು ಹೇಳಲಾರಂಭಿಸಿದರು.

“ನನ್ನ ವಿವಾಹ ಕಳೆದು ನೆಮ್ಮದಿಯ ದಿನಗಳವು. ದುಡಿದು ಬದುಕುವ ಕುಟುಂಬ ನಮ್ಮದು. ಒಂದರ ಹಿಂದೆ ಒಂದರಂತೆ ಮೂವರು ಮಕ್ಕಳಾದರು. ಎಲ್ಲರೂ ಆರೋಗ್ಯದಿಂದಿದ್ದಾರೆ. ಹಾಗೆಯೇ ಮನೆ ಕಟ್ಟಲು ತೀರ್ಮಾನಿಸಿ ಹೊಸ ಮನೆ ಕಟ್ಟಿದೆವು. ಆ ಬಳಿಕ ಈ ಮೂವರು ಮಕ್ಕಳು ಹುಟ್ಟಿದರು. ಮೂವರ ಸ್ಥಿತಿ ಒಂದೇ ರೀತಿ! ನಡೆಯುವುದಿಲ್ಲ. ಮಾತು ಇಲ್ಲ. ಆದರೆ ಶಬ್ದ ಮಾಡುತ್ತಾರೆ. ಕರೆದರೆ ಸ್ಪಂದಿಸುತ್ತಾರೆ.. ತೆವಳಿಕೊಂಡು ಹೋಗುತ್ತಾರೆ. ಒಬ್ಬ ಹಾವಿನ ರೀತಿ ತಲೆಯಾಡಿಸುತ್ತಿದ್ದ! ಮೂವರು ಮಕ್ಕಳೂ ಹೀಗಾದಾಗ ಅವರಿವರ ಮಾತಿನಂತೆ ಜ್ಯೋತಿಷಿಗಳನ್ನು ಕಂಡೆವು”.

ಮನೆಕಟ್ಟುವ ಸಂದರ್ಭದಲ್ಲಿ  ಅಡಿಪಾಯ ಹಾಕುವಾಗ ಕೆಲಸದಾಳುಗಳ ಕೈಯಲ್ಲಿ ಹಾವಿನ ಮೊಟ್ಟೆಗಳು ಒಡೆದು ಹೋಗಿರುವುದಾಗಿಯೂ ಅದರ ಶಾಪದಿಂದ ಆ ಮನೆಯಲ್ಲಿ ಜನ್ಮವೆತ್ತ ಮಕ್ಕಳ ಸ್ಥಿತಿ ಹೀಗಾಯಿತೆಂದೂ ಜ್ಯೋತಿಷಿಗಳು ಹೇಳಿದರು. ಪರಿಹಾರಾರ್ಥ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರೆ ಮಕ್ಕಳು ಆರೋಗ್ಯವಂತರಾಗುವ ಸಾಧ್ಯತೆ ಇದೆಯೆಂದೂ ಹೇಳಿದರು. ಮನೆಯ ಅಡಿಪಾಯದ ಕೆಲಸಗಾರರಲ್ಲಿ ವಿಚಾರಿಸಿದಾಗ, “ಮೊಟ್ಟೆಗಳು ಒಡೆದಿದ್ದವು… ಆದರೆ ಹಾವಿನದೆಂದು ತಿಳಿದಿರಲಿಲ್ಲ” ಅಂದರು.

ಹಿಂದೂ ಬಾಂಧವರೊಬ್ಬರ ಸಹಾಯದೊಂದಿಗೆ ಸುಬ್ರಹ್ಮಣ್ಯಕ್ಕೆ ಹೋಗಿ ಸ್ವಲ್ಪ ಖರ್ಚು ಮಾಡಿ ಪೂಜೆ ಸಲ್ಲಿಸಿದ ಬಳಿಕ ಮಕ್ಕಳು ಸ್ವಲ್ಪ – ಸ್ವಲ್ಪವೇ ಸುಧಾರಿಸುತ್ತಿದ್ದಾರೆ. ಹಾವಿನಂತೆ ತಲೆಯಾಡಿಸುವ ಹುಡುಗ ತಲೆಯಾಡಿಸುತ್ತಿಲ್ಲ. ತೆವಳುತ್ತಿದ್ದವರು ಸ್ವಲ್ಪ – ಸ್ವಲ್ಪವಾಗಿ ನಡೆಯುತ್ತಿದ್ದಾರೆ.. ತಡವರಿಸಿ ಮಾತಾಡಲು ಆರಂಭಿಸಿದ್ದಾರೆ. ಮುಂದಿನ ದಿನಗಳು ಹೇಗೋ ತಿಳಿಯದು…. ನಿಟ್ಟುಸಿರು ಬಿಟ್ಟರು.

ನಾನು ಗಮನಿಸಿದೆ…

ಮಕ್ಕಳ ಹಣೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹೆಡೆ ಬಿಚ್ಚಿದ ಹಾವಿನ  ರೂಪ ಕಂಡಂತಾಯಿತು. ಅವರ ವಿವರಣೆ ಕೇಳಿಯೇ ಇರಬೇಕು!… ಮಕ್ಕಳ ಸ್ಥಿತಿ, ಆ ಮನೆಯ ಅವಸ್ಥೆ ಯಾರಲ್ಲಾದರೂ ಮರುಕ ಹುಟ್ಟಿಸುವಂತದ್ದು.

ಹಾವನ್ನು ಕೊಲ್ಲುವವರ  ವಿಷಯ ಕೇಳಿರುವೆ… ಸರಕಾರದ ಕಾನೂನುಗಳು ಕಠಿಣವಾದಂತೆ ಉರಗಗಳನ್ನು ಸಂರಕ್ಷಿಸುವವರನ್ನೂ  ಕಾಣುತ್ತಿದ್ದೇವೆ…. ಆದರೆ ಈ ಕುಟುಂಬ… ? ಆ ಮಕ್ಕಳ ಭವಿಷ್ಯ?

ಸಹಜೀವಿ ಮಾನವರನ್ನೇ ಕೊಲ್ಲುವವರಿಗೆ ಯಾವುದೇ ಶಾಪ ತಟ್ಟದ ಈ ಕಾಲದಲ್ಲಿ ತಿಳಿಯದೆ ಇನ್ಯಾರದೋ ಕೈಯಲ್ಲಿ ಮೊಟ್ಟೆಗಳು ನಷ್ಟಗೊಂಡ ಮಾತ್ರಕ್ಕೆ ಈ ಮಕ್ಕಳಿಗೆ ಈ ಶಿಕ್ಷೆಯೇ? ಇದು ಸಾಧ್ಯವೇ?

ಇದು ಯಾರೋ ಹೇಳಿದ ಮಾತು ಕೇಳಿ ಜ್ಯೋತಿಷಿಗಳ ಬಳಿ ತೆರಳಿದ ಜ್ಞಾನದ ಕೊರತೆ ಇರುವ ಬಡ ಕುಟುಂಬವೊಂದರ ಕತೆ. ಇಲ್ಲಿ ಹಾವಿನ ಮೊಟ್ಟೆ ಒಡೆದಿರುವುದೂ, ಜ್ಯೋತಿಷಿ ಹೇಳಿರುವುದೂ ನಮ್ಮಲ್ಲಿ ಗೊಂದಲವನ್ನುಂಟುಮಾಡುವುದು ಸಹಜ. 

ವೈಜ್ಞಾನಿಕವಾಗಿ ಹೇಳುವುದಾದರೆ, ಮೊದಲ ಮೂರು ಮಕ್ಕಳಿಗೆ ಜನ್ಮ ನೀಡುವ ಸಮಯದಲ್ಲಿ ಅವರ ತಾಯಿಯು ಆರೋಗ್ಯವಂತಳಾಗಿರಬಹುದು. ಬಳಿಕದ ಗರ್ಭಾವಸ್ಥೆಯ ಸಮಯದಲ್ಲಿ ಆಕೆಯ ವಯಸ್ಸು ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದು. ಅಂಡಾಣು- ವೀರ್ಯಾಣುಗಳ ಬೆಳವಣಿಗೆಯಲ್ಲಿ ಉಂಟಾಗಿರುವ ಪರಿಣಾಮದ ಹಿನ್ನೆಲೆಯಲ್ಲಿ ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆ ಬಂದಿರಬಹುದು. ತಾಯಿಯ ಗರ್ಭಕೋಶದಲ್ಲಿ ಮಗುವಿನ ಆರೋಗ್ಯಕ್ಕೆ ಪರಿಪೂರ್ಣವಾದ ಸಂರಕ್ಷಣೆ ಸಿಗದಿರುವಾಗಲೂ ಹುಟ್ಟುವ ಮಕ್ಕಳಿಗೆ ವಿಕಲಾಂಗತೆ ಕಾಡಬಹುದು. ಈ ದಿನಗಳಲ್ಲಿ ಸ್ಕ್ಯಾನಿಂಗ್ ತಂತ್ರಜ್ಞಾನದಿಂದ ಮಗುವಿನ ಆರೋಗ್ಯದ ಬಗ್ಗೆ ತಿಳಿಯಬಹುದಾದರೂ ಅಂದು ಹಳ್ಳಿಗಳಲ್ಲಿ  ತಂತ್ರಜ್ಞಾನ ಅಷ್ಟು ಬೆಳೆದಿರಲಾರದು.

ಪೂಜೆಯ ಬಳಿಕ ಮಕ್ಕಳು ಹುಷಾರಾಗುತ್ತಿದ್ದಾರೆ ಎಂಬ ಅವರ ಮಾತನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಮಕ್ಕಳ ಬೆಳವಣಿಗೆ ಹೆಚ್ಚಾದಂತೆ, ಅವರ ಆರೋಗ್ಯ ಶಕ್ತಿ ಹೆಚ್ಚುವುದಲ್ಲವೆ? ಪರಿಣಾಮವಾಗಿ ತೆವಳುತಿದ್ದವರು ನಿಧಾನವಾಗಿ ನಡೆಯಲು ಆರಂಭಿಸಿರಬಹುದು. ಅವರು ನಂಬಿದ ಪೂಜೆ ನಿಮಿತ್ತ ಮಾತ್ರ. ಮುಂದೆ ಆ ಮಕ್ಕಳು ಬೆಳೆಯುತ್ತಿದ್ದಂತೆ ಎಲುಬಿನ ಶಕ್ತಿ ಹೆಚ್ಚಾದಂತೆ ಆರೋಗ್ಯದಲ್ಲಿ ಇನ್ನಷ್ಟೂ ಚೇತರಿಕೆ ಸಾಧ್ಯವಾಗಬಹುದು. ಹತ್ತು ಹಲವು ಸಾಧ್ಯತೆಗಳು ಇಲ್ಲಿವೆ.

ನಂಬಿಕೆಯ ಹೆಸರಲ್ಲಿ ಬಡವರನ್ನು ದೋಚುವ ಶಕ್ತಿಗಳಿಗೆ ನಮ್ಮಲ್ಲಿ ಕೊರತೆಯಿಲ್ಲ. ಜಗತ್ತು ವಿಶಾಲವಾಗಿದೆ. ಅರಿವು ಕಲಿತು ಮುಗಿಯುವಂತದ್ದಲ್ಲ. ಅಲ್ಲಲ್ಲಿ ಅಚ್ಚರಿಗಳ ಸರಮಾಲೆಗಳಿವೆ. ಕಣ್ಣಿಗೆ ಕಾಣುವ ಕತೆಗಳಿವೆ. ವಿಜ್ಞಾನಕ್ಕೆ ಸವಾಲೆಸೆಯುವ ಇತಿಹಾಸಗಳಿವೆ. ಆದರೆ ಎಲ್ಲವುಗಳನ್ನು ವಿಜ್ಞಾನದ ಅರಿವಿನಲ್ಲಿ ಸಂಶೋಧಿಸಿದರೆ ವಾಸ್ತವದ ಅರಿವು ಮೂಡಲು ಸಾಧ್ಯ.

ಶೋಭಲತಾ ಸಿ

ಸ್ಟಾಫ್‌ ನರ್ಸ್‌ ಹಾಗೂ ಸಾಮಾಜಿಕ ಕಾರ್ಯಕರ್ತೆ, ಕಾಸರಗೋಡು

ಇದನ್ನೂ ಓದಿ-

ವಿವಾಹವಾಗಿ 24 ದಿನಗಳು.. ಗರ್ಭಕ್ಕೆ 36 ದಿನಗಳು-ಇದು ಕೂಡಾ ಸಾಧ್ಯ!

Related Articles

ಇತ್ತೀಚಿನ ಸುದ್ದಿಗಳು