Tuesday, June 18, 2024

ಸತ್ಯ | ನ್ಯಾಯ |ಧರ್ಮ

ವಿಶ್ವ ದೊಡ್ಡಣ್ಣ ಮತ್ತು ವಿಶ್ವಗುರುವಿನ ವಾಯುವಿಹಾರ

“ಬಾರಯ್ಯ ಬೇಗ….” ದೊಡ್ಡಣ್ಣ ನಮೋ ಮನೆ ಮುಂದು ನಿಂತು ವಾಕಿಂಗ್‌ ಹೋಗಲೆಂದು ಕೂಗಿದ.

“ಬಂದೇ…ಬಂದೇ” ನಮೋ ಕೂಗುತ್ತ ಓಡಿಬಂದ.

“ಯಾಕಪ…ಲೇಟು”

“ನವಿಲಿಗೆ ಕಾಳು ಹಾಕ್ತಿದ್ದೆ. ಫೋಟೊಗ್ರಾಫರ್‌ ಬೇರೆ ಬಂದಿರಲಿಲ್ಲ”

“ಅದೇನ್‌ ಫೋಟೊ ಹುಚ್ಚು ನಿಂದು…ಸರಿ ನಡಿ”

ಹಂಗೆ ವಾಕಿಂಗ್‌ ಮಾಡ್ತ…..

ದೊಡ್ಡಣ್ಣ:– ನೋಡು…ನಾನು ವಿಶ್ವಕ್ಕೆ ಬರೀ ದೊಡ್ಡಣ್ಣ. ನೀನು ವಿಶ್ವಗುರು ಆಗಬೇಕು ಅಂತಿದ್ದೀಯಾ….

ನಮೋ (ತಟ್ಟನೆ) :- ನಾನಾಗಲೇ ವಿಶ್ವಗುರು ಆಗಿದ್ದೀನಿ.

ದೊಡ್ಡಣ್ಣ (ನಗುತ್ತ) :- ಹಂಗಂತ ಯಾರು ಹೇಳಿದ್ದು?

ನಮೋ :- ನಾನು ಫಾರಿನ್‌ ಟೂರ್ಗೆ ಹೋದಲೆಲ್ಲ….ಅಲ್ದೆ…ಇಂಡಿಯಾ ಅಲ್ಲಾ…..ಭಾರತ್‌ ದಲ್ಲಿ ಎಲ್ರೂ….ಮೀಡಿಯಾದವ್ರು ನನ್ನ ಹಂಗೇ ಕರಿಯೋದು

ದೊಡ್ಡಣ್ಣ:- ಎಲ್ರೂ ಅಂದ್ರೆ….ಯಾರು? ಫಾರಿನ್‌ ಟೂರ್‌ ಬಿಡು. ಅವರೆಲ್ಲ ನಿನ್ನನ್ನು ಎಂಟೈರ್‌ ಎಂಟರ್‌ ಟೈನ್‌ ಮೆಂಟ್‌ ಪಿಎಚ್‌ ಡಿ ಹೋಲ್ಡರ್‌ ಅಂದ್ಕೊಂಡಿದ್ದಾರೆ. ಇನ್ನು ಉಳಿದವರು…. ನಿನ್ನ ಟುರುಪೀಸ್ ಪೇಯ್ಡ್‌ ಲಂಡಭಕ್ತರು‌ ಮತ್ತೆ… ಮೂರೊತ್ತು ನೀನು ಹಾಕೊ ಪೆಡಿಗ್ರಿ ಡಾಗ್‌ ಬಿಸ್ಕತ್‌ ತಿನ್ನೋ ಗೋದಿ ಮೀಡಿಯಾದವ್ರು….

ನಮೋ (ಮುನಿಸಿಕೊಂಡು) :- ಸರಿ….ಅದಕ್ಕೇನೀಗ?

ದೊಡ್ಡಣ್ಣ:- ನೋಡು….. ಬರೀ ಗಾಂಧೀಜಿ ಸಮಾಧಿ ಮುಂದೆ ಕ್ಯಾಮೆರಾಕ್ಕೆ ಪೋಸು ಕೊಟ್ಟರೆ ಸಾಲದು. ವಿಶ್ವಗುರು ಆಗಬೇಕಾದ್ರೆ ಗಾಂಧೀಜಿ ಹಂಗೆ ನಡ್ಕೊಬೇಕು. ಮಾನವ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಜಾಸ್ತಿ ಗೌರವ ಕೊಡ್ಬೇಕು. 

ನಮೋ (ತಲೆ ಕೆರೆದುಕೊಳ್ಳುತ್ತ) :- ಹಂಗಂದ್ರೆ ಏನು? ನಾನು ಸನಾತನ ಚಡ್ಡಿಧಾರಿ.

ದೊಡ್ಡಣ್ಣ (ಮುಖ ಸಿಂಡರಿಸಿ, ಮೂಗು ಮುಚ್ಚಿಕೊಂಡು):- ಅದು ನಂಗೆ ಗೊತ್ತು ಕಣಯ್ಯ….ಎತ್ತಿ ತೋರಿಸ್ಬೇಡ. ಅದೇ ಪ್ರಾಬ್ಲಮ್‌ ಆಗಿರೋದು. ನಿಮ್ಮ ದೇಶದಲ್ಲಿ ಎಲ್ಲೆಲ್ಲೂ ಬೀದೀಲಿ ಸನಾತನ ಗಬ್ಬುವಾಸನೆ ರಾಚುತ್ತೆ. ನಮ್ಮಲ್ಲೂ ಅಂತ ವಾಸನೆ ಚೂರುಪಾರು ಇದೆ. ಆದರೆ ಅದು ಚರ್ಚಲ್ಲಿದೆ. ಬೀದಿಲೀ ಇಲ್ಲ. ನೋಡು….ನಾಗರಿಕ ಸಮಾಜದಲ್ಲಿ ಮಾನವ ಹಕ್ಕುಗಳು ಬಹಳ ಮಹತ್ವದ್ದು. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಮುಖವಾದದ್ದು……

ನಮೋ (ಸ್ವಗತ) :- ಇವನದ್ದು ಯಾಕೋ ಜಾಸ್ತಿಯಾಯ್ತು. ಹೋಗಲಿ ಪಾಪಾಂತ ಡಿನ್ನರ್ ಗೆ ಬೀಫ್‌ ಬಿರಿಯಾನಿ ಮಾಡಿಸಿದ್ದು ತಪ್ಪಾಯಿತು.

ದೊಡ್ಡಣ್ಣ ಬಾಲಬೋಧೆ ಮುಂದುವರೆಸಿದ್ದ……

ನಿಮ್ಮ ದೇಶದಲ್ಲಿ ಮೈನಾರಿಟಿಸ್‌ ಕಮ್ಯೂನಿಟಿ ಮೇಲೆ ದೌರ್ಜನ್ಯ, ಹಿಂಸೆ ಹೆಚ್ಚುತ್ತಿದೆ. ಪೊಲೀಸ್‌ ಮತ್ತು ಬಂದೀಖಾನೆ ಇಲಾಖೆಯ ಅಧಿಕಾರಿಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ……

ನಮೋ(ಸ್ವಗತ):- ಇವನ್ಯಾವನೋ ದೊಣ್ಣೆನಾಯಕ ನಂಗೆ ಪಾಠ ಮಾಡ್ತವ್ನೆ….ಇವ್ನು ಮಾತ್ನ ಕೇಳ್ತಾ ಕೂತರೆ ಮಾಧವ ಕೃಪಾಕಟಾಕ್ಷ ಕುಟೀರದ ಪೂಜಾರಿ ನನ್ನ ಮುಖಕ್ಕೆ ಮಂಗಳಾರತಿ ಎತ್ತಿ….ಕುರ್ಚಿಯಿಂದ ಕೆಳಗೆ ಇಳಿ ಅಂತಾನೆ…ಮೂವತ್ತು ವರ್ಷ ಭಿಕ್ಷೆ ಬೇಡಿಕೊಂಡು ತಿಂದು ಸಾಕಾಗಿತ್ತು. ಹೆಂಗೊ ಈಗ ಮಜವಾಗಿದ್ದೀನಿ….

ದೊಡ್ಡಣ್ಣನ ಮಾತಿನಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕಲ್ಲ ಎಂದು ನಮೋ ಯೋಚಿಸುತ್ತಿರುವಾಗಲೇ, ಅಲ್ಲೊಬ್ಬ ತೋಟದ ಮಾಲಿ “ಸಾಹೇಬ್‌…ಸಾಹೇಬ್‌” ಆತಂಕದಿಂದ ಕೂಗುತ್ತ ಓಡಿ ಬರುತ್ತಿದ್ದ.

ಮಾಲಿ:- ಸಾಹೇಬ್‌….ಮೊಸಳೆ ಫೌಂಟೆನ್ ನಿಂದ ಆಚೆ ಬಂತು. ಸಾಹೇಬ್ರರಿಗೆ ಕಂಪ್ಲೇಂಟ್‌  ಮಾಡ್ತೀನಿ…ವಾಪಸ್‌ ಒಳಗೋಗು ಅಂದ್ರೆ ಮಾತು ಕೇಳ್ತಿಲ್ಲ. ತಿರುಗಿ ನೋಡುವಷ್ಟರಲ್ಲಿ  ಮಾಯವಾಗಿದೆ. ಎಲ್ಲೋ ತಪ್ಪಿಸಿಕೊಂಡಿದೆ.

ಅದಕ್ಕೆ ಕಾಯುತ್ತಿದ್ದವನಂತೆ “ಅಣ್ಣ ಸ್ವಲ್ಪ ಬರ್ತೀನಿ. ಮೊಸಳೆ ಮಾಯವಾಗಿದೆಯಂತೆ” ಎಂದು ದೊಡ್ಡಣ್ಣನ ಉತ್ತರಕ್ಕೆ ಕಾಯದೆ  ಅಲ್ಲಿಂದ ಬುಲೆಟ್‌ ಟ್ರೈನ್‌ ಬಿಟ್ಟ.

ನಮೋ ಕಳ್ಳಾಟ ಗೊತ್ತಿದ್ದ ದೊಡ್ಡಣ್ಣ “ಇವ್ನು ಉದ್ದಾರ ಆಗೊಲ್ಲ….ನೊ ವೇ…ವಾಟ್‌ ಎ ಫಕ್“               ಎನ್ನುತ್ತ ಒಬ್ಬಂಟಿ ವಾಕಿಂಗ್‌ ಹೊರಟ. 

ಚಂದ್ರಪ್ರಭ ಕಠಾರಿ

cpkatari@yahoo̤.com

Related Articles

ಇತ್ತೀಚಿನ ಸುದ್ದಿಗಳು