Thursday, June 20, 2024

ಸತ್ಯ | ನ್ಯಾಯ |ಧರ್ಮ

ಸಂವಿಧಾನ ರಕ್ಷಣೆ | ಆದ್ಯತೆಗಳೂ ಬಾಧ್ಯತೆಗಳೂ

ಸೆಪ್ಟಂಬರ್‌ 15ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಕರ್ನಾಟಕ ಸರ್ಕಾರ ಒಂದು ಹೊಸ ಆಯಾಮವನ್ನು ನೀಡಿದ್ದು, ಇದೇ ದಿನದಂದು ರಾಜ್ಯಾದ್ಯಂತ ಸಮೂಹಗಾನದ ಮಾದರಿಯಲ್ಲಿ ಸಂವಿಧಾನ ಪೀಠಿಕೆಯ ಓದು ಅಭಿಯಾನವನ್ನು ಹಮ್ಮಿಕೊಂಡಿದೆ. ಸಾಂವಿಧಾನಿಕ ಮೌಲ್ಯಗಳನ್ನು ಬದಿಗೆ ಸರಿಸುತ್ತಲೇ ಪ್ರಜಾತಂತ್ರವನ್ನು ಉಳಿಸುವ ನಾಟಕವಾಡುತ್ತಿರುವ ಆಡಳಿತ ವ್ಯವಸ್ಥೆಯ ಒಂದು ಮಾದರಿಗೆ ರಾಜ್ಯ ಸರ್ಕಾರದ ಈ ಅಭಿಯಾನ ಪ್ರತಿಕ್ರಿಯೆಯ ರೂಪದಲ್ಲಿ, ಪ್ರತಿರೋಧದ ರೂಪದಲ್ಲಿ ವ್ಯಕ್ತವಾಗುತ್ತಿದೆ. ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾ. ದಿವಾಕರ ಅವರ ವಿಶೇಷ ಲೇಖನ ಇಲ್ಲಿದೆ.

75 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತದ ಜನತೆ ಪ್ರಜಾಪ್ರಭುತ್ವ ಅಪಾಯದಲ್ಲಿರುವ ಆತಂಕಗಳನ್ನು ಹಲವು ಸಂದರ್ಭಗಳಲ್ಲಿ ಎದುರಿಸಿದ್ದರೂ, ಕಳೆದ ಹತ್ತು ವರ್ಷಗಳ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಆತಂಕ ಮತ್ತಷ್ಟು ಉಲ್ಬಣಿಸುತ್ತಿರುವುದು ವಾಸ್ತವ. ಮತೀಯವಾದ, ಮತಾಂಧತೆ, ಜಾತಿ ದೌರ್ಜನ್ಯ, ಮಹಿಳಾ ದೌರ್ಜನ್ಯ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯ ಪ್ರಹಾರದಿಂದ ಕೆಳಸ್ತರ ಸಮಾಜದ ಬಹುಸಂಖ್ಯಾತ ಸಮುದಾಯಗಳು ತತ್ತರಿಸುತ್ತಿರುವ ಹೊತ್ತಿನಲ್ಲಿ ಸಂವಿಧಾನವೊಂದೇ ನಮ್ಮನ್ನು ರಕ್ಷಿಸಬಹುದು ಎಂಬ ಆಶಾಭಾವನೆ ಸಹಜವಾಗಿಯೇ ಮೂಡುತ್ತದೆ. ಈ ಆಶಯವೇ ಪ್ರಜಾಪ್ರಭುತ್ವ ದಿನದ ಈ ಕಾರ್ಯಕ್ರಮಕ್ಕೆ ಹೊಸ ಆಯಾಮವನ್ನೂ ನೀಡಲಿದೆ.

ಇಲ್ಲಿ ಪ್ರಧಾನವಾಗಿ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಭಾರತದಲ್ಲಿ ಪ್ರಜಾಪ್ರಭುತ್ವದ ಧ್ವನಿ ಗಟ್ಟಿಯಾಗಲು ಸಂವಿಧಾನ ರಕ್ಷಣೆ ಮುಖ್ಯವಾದರೆ, ತಳಮಟ್ಟದ ಸಾಮಾಜಿಕ ಪರಿಸರದಲ್ಲಿ ಪ್ರಜಾಸತ್ತಾತ್ಮಕ ಆಶಯಗಳು ಸಾಕಾರಗೊಳ್ಳಲು ಸಾಂವಿಧಾನಿಕ ಮೌಲ್ಯಗಳ ರಕ್ಷಣೆ ಮುಖ್ಯವಾಗುತ್ತದೆ. ಇಂದು ಪ್ರಜಾಪ್ರಭುತ್ವವೇ ಅಪಾಯವನ್ನು ಎದುರಿಸುತ್ತಿರುವ ಸನ್ನಿವೇಶವನ್ನು ಕಾಣುತ್ತಿದ್ದೇವೆ. ಮತೀಯ ರಾಜಕಾರಣದ ಹೊಸ ಆಯಾಮಗಳು ತೆರೆದುಕೊಳ್ಳುತ್ತಿರುವಂತೆಯೇ, ಸಂವಿಧಾನ ಆಶಿಸುವಂತಹ ಜಾತ್ಯತೀತ-ಮತನಿರಪೇಕ್ಷ ಸಮಾಜವನ್ನು ಕಟ್ಟುವ ಪ್ರಕ್ರಿಯೆಗೆ ಮತಾಂಧ ಶಕ್ತಿಗಳಿಂದ, ಸಂಪ್ರದಾಯವಾದಿ ಜಾತಿವಾದಿಗಳಿಂದ, ಪಿತೃಪ್ರಧಾನತೆಯ ವಾರಸುದಾರರಿಂದ, ಧಾರ್ಮಿಕ ಮೂಲಭೂತವಾದಿಗಳಿಂದ ಹೊಡೆತ ಬೀಳುತ್ತಲೇ ಇದೆ. ಈ ಶಕ್ತಿಗಳನ್ನು ನಿಯಂತ್ರಿಸುವ ಮೂಲಕ ಸಂವಿಧಾನ ಬಯಸುವ ಸೋದರತ್ವ ಹಾಗೂ ಸಮನ್ವಯದ ಸಾಮಾಜಿಕ ನೆಲೆಗಳನ್ನು ಭದ್ರಪಡಿಸುವ ಜವಾಬ್ದಾರಿ ಇರುವ ಸರ್ಕಾರಗಳು ತಮ್ಮ ಸ್ವಾರ್ಥ ರಾಜಕಾರಣ ಹಾಗೂ ಅಧಿಕಾರ ಕೇಂದ್ರಿತ ಆಡಳಿತ ನೀತಿಗಳನ್ನು ಅನುಸರಿಸುವ ಮೂಲಕ ಸಾಂವಿಧಾನಿಕ ಮೌಲ್ಯಗಳನ್ನು ಶಿಥಿಲಗೊಳಿಸುತ್ತಿವೆ.

ಹಾಗಾಗಿಯೇ ಕಳೆದ ಹತ್ತು ವರ್ಷಗಳಲ್ಲಿ ಸಂವಿಧಾನ ರಕ್ಷಣೆಯ ಕೂಗು ದೇಶವ್ಯಾಪಿಯಾಗಿ ಕೇಳಿಬರುತ್ತಿದೆ. ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳ ಬಾಧ್ಯತೆಯಾದರೆ, ಭವಿಷ್ಯದ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಶಾಶ್ವತಗೊಳಿಸಲು ಇದು ಸಾಮಾನ್ಯ ಜನತೆಯ, ಸಾರ್ವಜನಿಕರ ಆದ್ಯತೆಯೂ ಆಗಿರುತ್ತದೆ. ಸರ್ಕಾರಗಳು ತಮ್ಮ ಬಾಧ್ಯತೆಯನ್ನು ಮರೆತು ತಪ್ಪು ಹೆಜ್ಜೆ ಇಟ್ಟಾಗಲೆಲ್ಲಾ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸುವ ಮೂಲಕ ಈ ದೇಶದ ತಳಸಮುದಾಯಗಳು, ಶೋಷಿತ ಜನರು, ದೌರ್ಜನ್ಯ-ತುಳಿತಕ್ಕೊಳಗಾದ ಮಹಿಳೆಯರು, ಆದಿವಾಸಿಗಳು, ವಿದ್ಯಾರ್ಥಿ ಯುವಜನರು ಹಾಗೂ ಕಾರ್ಮಿಕರು ಜನಜಾಗೃತಿ ಮೂಡಿಸುತ್ತಲೇ ಬಂದಿರುವುದನ್ನು ಗಮನಿಸುತ್ತಿದ್ದೇವೆ. ಸರ್ಕಾರಗಳ ದೃಷ್ಟಿಯಲ್ಲಿ ಕಾಲಕಾಲಕ್ಕೆ ಜಾರಿಗೊಳಿಸುವ ಆಡಳಿತ ನೀತಿಗಳು, ಹೊಸದಾದ ಅಥವಾ ತಿದ್ದುಪಡಿಗೊಳಗಾದ ಕಾಯ್ದೆ ಕಾನೂನುಗಳು ಮಾತ್ರವೇ ಸಂವಿಧಾನ ರಕ್ಷಣೆಯ ಕವಚದಂತೆ ಕಾಣುತ್ತವೆ. ಆದರೆ ತಳಮಟ್ಟದ ಸಮಾಜದಲ್ಲಿ ಈ ನೀತಿ ನಿಯಮಗಳು ಅನುಷ್ಟಾನವಾಗುವಾಗ ಸಂಭವಿಸುವ ಪಲ್ಲಟಗಳು ಆಳುವವರ ದೃಷ್ಟಿಯಿಂದ ಸಾಪೇಕ್ಷವಾಗಿಯೇ ಕಾಣುತ್ತವೆ. ತಮ್ಮ ಅಧಿಕಾರ ರಾಜಕಾರಣದ ವ್ಯಾಪ್ತಿಯನ್ನು ಹಿಗ್ಗಿಸುವ ಸಲುವಾಗಿ, ತಮ್ಮ ಅನುಕೂಲಕ್ಕೆ ತಕ್ಕಂತೆ  ಸರ್ಕಾರಗಳು ಎಂತಹುದೇ ಪಲ್ಲಟಗಳನ್ನೂ, ವ್ಯತಿರಿಕ್ತ ಬೆಳವಣಿಗೆಗಳನ್ನೂ ಅಲಕ್ಷಿಸುತ್ತಲೇ ಬಂದಿರುವುದನ್ನು ಕಂಡಿದ್ದೇವೆ.

ಆದರೆ ನಮ್ಮ ಸಂವಿಧಾನ ಆರಂಭದಲ್ಲೇ ಉಚ್ಚರಿಸುವಂತೆ “ಭಾರತದ ಜನತೆಯಾದ ನಾವು” ಅಂದರೆ ನಾಗರಿಕರಾದ ನಾವು ಈ ಪಲ್ಲಟಗಳನ್ನು ಎಚ್ಚರಿಕೆಯಿಂದಲೆ ಗಮನಿಸುತ್ತಿರಬೇಕಾಗುತ್ತದೆ. ಇದು ನಮ್ಮ ಆದ್ಯತೆ ಮಾತ್ರವಲ್ಲದೆ ಬಾಧ್ಯತೆಯೂ ಆಗುತ್ತದೆ. ಪ್ರತಿರೋಧದ ಧ್ವನಿಗಳನ್ನು ಹತ್ತಿಕ್ಕುವ ಕರಾಳ ಶಾಸನಗಳನ್ನೂ ಇದೇ ಸಂವಿಧಾನದ ಆಸರೆಯಲ್ಲೇ ಜಾರಿಗೊಳಿಸುವ ಅವಕಾಶ ಇರುವುದರಿಂದ, ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಈ ಕಾಯ್ದೆ ಕಾನೂನುಗಳನ್ನು ನಿಷ್ಪಕ್ಷಪಾತತೆಯಿಂದ, ಪಾರದರ್ಶಕವಾಗಿ ಬಳಸಬೇಕಾಗುತ್ತದೆ. ಆದರೆ ಆಳುವ ಸರ್ಕಾರಗಳಿಗೆ ಈ ಮೌಲಿಕ ಬಾಧ್ಯತೆಗಳನ್ನೂ ಮೀರಿದ ಅಧಿಕಾರ ರಾಜಕಾರಣದ ಆದ್ಯತೆಗಳು ಪ್ರಧಾನವಾಗಿ ಕಾಣುತ್ತವೆ. ಹಾಗಾಗಿಯೇ ಅನೇಕ ಸಂದರ್ಭಗಳಲ್ಲಿ ನಾಗರಿಕರ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯವೂ ಹತ್ತಿಕ್ಕಲ್ಪಡುತ್ತದೆ. ಪ್ರತಿರೋಧದ ಧ್ವನಿಗಳೂ ಅಡಗಿಸಲ್ಪಡುತ್ತವೆ. ಕೆಲವು ರಾಜ್ಯಗಳಲ್ಲಿ ಅಧಿಕೃತವಾಗಿ ಜಾರಿಯಲ್ಲಿರುವ ಬುಲ್ಡೋಜರ್‌ ನ್ಯಾಯ ಇದನ್ನೇ ಸೂಚಿಸುತ್ತದೆ.

ಈ ಸನ್ನಿವೇಶಗಳಲ್ಲಿ ನಾಗರಿಕರಾದ ನಮ್ಮ ಆದ್ಯತೆ-ಬಾಧ್ಯತೆ ಏನಾಗಿರಬೇಕು ? ಈ ಜಟಿಲ ಪ್ರಶ್ನೆಗೆ ಉತ್ತರ ಶೋಧಿಸುತ್ತಾ ಹೋದಂತೆ ನಮಗೆ ಶೋಷಿತ-ದಮನಿತ-ಅಂಚಿಗೆ ತಳ್ಳಲ್ಪಟ್ಟ-ಅವಕಾಶವಂಚಿತ-ತುಳಿತಕ್ಕೊಳಗಾದ-ಅಲಕ್ಷಿಸಲ್ಪಟ್ಟ-ಹೊರದೂಡಲ್ಪಟ್ಟ ಅಸಂಖ್ಯಾತ ಜನತೆ ಎದುರಾಗುತ್ತಾರೆ. ಶಿಕ್ಷಣದಿಂದ, ಜೀವನೋಪಾಯದಿಂದ, ಆರೋಗ್ಯಸೇವೆಯಿಂದ, ಸಾಮಾಜಿಕ ಅವಕಾಶಗಳಿಂದ ವಂಚಿತರಾದ ಕೋಟ್ಯಂತರ ಜನತೆ ನಮ್ಮೆದುರು ನಿಲ್ಲುತ್ತಾರೆ. ನವ ಉದಾರವಾದ ಮತ್ತು ಕಾರ್ಪೋರೇಟ್‌ ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಯಲ್ಲಿ ನಲುಗಿಹೋಗುತ್ತಿರುವ ಲಕ್ಷಾಂತರ ಸಂಘಟಿತ-ಅಸಂಘಟಿತ ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು, ವಲಸೆ ಕಾರ್ಮಿಕರು, ಸರ್ಕಾರಿ ಯೋಜನೆಗಳ ಕಾರ್ಯಕರ್ತರು, ಪೌರಕಾರ್ಮಿಕರು, ಅತಿಥಿ ಬೋಧಕರು, ವಲಸೆ ಕಾರ್ಮಿಕರು ನಮಗೆ ಗೋಚರಿಸುತ್ತಾರೆ. ಇವರ ನಡುವೆಯೇ ಉಳ್ಳವರ ದಬ್ಬಾಳಿಕೆಗೊಳಗಾದ, ಪುರುಷಾಧಿಪತ್ಯದ ಅತ್ಯಾಚಾರಕ್ಕೊಳಗಾದ, ಮೇಲ್ಜಾತಿಗಳ ತಾರತಮ್ಯಗಳಿಗೊಳಗಾದ ಲಕ್ಷಾಂತರ ಶ್ರಮಿಕರು, ಮಹಿಳೆಯರು, ಅಸ್ಪೃಶ್ಯರು ಕಾಣತೊಡಗುತ್ತಾರೆ.

ಈ ಜನಸಮುದಾಯಗಳ ನೋವು ಯಾತನೆಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸಬೇಕಾದ ಆಡಳಿತ ವ್ಯವಸ್ಥೆ ಕಾನೂನು ಚೌಕಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡರೂ, ಬಾಹ್ಯ ಸಮಾಜದಲ್ಲಿ ಈ ಜನತೆಗೆ ಸ್ಪಂದಿಸುವ ಧ್ವನಿಗಳು ಕ್ಷೀಣಿಸುತ್ತಿರುವುದು ನಾವು ಎದುರಿಸುತ್ತಿರುವ ದುರಂತಗಳಲ್ಲೊಂದು. ಶಾಸಕಾಂಗ ಮತ್ತು ಕಾರ್ಯಾಂಗದ ನಡವಳಿಕೆಗಳನ್ನು ಸದಾ ಗಮನಿಸುತ್ತಾ, ನಾಗರಿಕರ ನಡುವೆ ನಿಂತು ಸುತ್ತ ದೃಷ್ಟಿ ಹಾಯಿಸುತ್ತಾ ಇರಬೇಕಾದ ದೃಶ್ಯ-ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳು ಇಂದು ಬಹುತೇಕವಾಗಿ ಕಾರ್ಪೋರೇಟ್‌ ಮಾರುಕಟ್ಟೆ ಆಧಿಪತ್ಯಕ್ಕೊಳಗಾಗಿದ್ದು, ತಮ್ಮ ಸಾಂವಿಧಾನಿಕ ನೈತಿಕತೆಯನ್ನು ಮರೆತು ವರ್ತಿಸುತ್ತಿವೆ. ದೇಶದ ಕಟ್ಟಕಡೆಯ ವ್ಯಕ್ತಿಯೂ ನ್ಯಾಯಕ್ಕೆ ಮೊರೆ ಹೋಗಬೇಕಾದರೆ ನ್ಯಾಯಾಂಗದ ಕದ ತಟ್ಟಬೇಕಾದ ವಿಷಮ ಪರಿಸ್ಥಿತಿಯನ್ನು ನಾವು ತಲುಪಿದ್ದೇವೆ. ಈ ಧ್ವನಿಗೆ ದನಿಗೂಡಿಸಬೇಕಾದ ಸಂವಹನ ಮಾಧ್ಯಮದ ಬಹುತೇಕ ವಾಹಿನಿಗಳು ಕಲುಷಿತಗೊಂಡಿದ್ದು ತಮ್ಮದೇ ಆದ ಆದ್ಯತೆಗಳನ್ನನುಸರಿಸಿ, ನಾಗರಿಕ ಬಾಧ್ಯತೆಗಳನ್ನು ಮರೆತಿವೆ.

ಈ ಸಂದಿಗ್ಧತೆಯ ನಡುವೆಯೇ ಸಂವಿಧಾನದ ಹಾಗೂ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಯ ಬಹುದೊಡ್ಡ ಜವಾಬ್ದಾರಿ ನಾಗರಿಕರ ಮೇಲೆ ಬಿದ್ದಿದೆ. ಹಾಗಾಗಿಯೇ “ಪ್ರಗತಿಪರ“ ಎಂದೆನಿಸಿಕೊಳ್ಳುವ ಎಡಪಂಥೀಯ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದುಡಿವ ಶ್ರಮಿಕರನ್ನು ಪ್ರತಿನಿಧಿಸುವ ಸಂಘಟನೆ-ಗುಂಪುಗಳು, ಮಹಿಳಾ ಸಂಘಟನೆಗಳು, ಮಾನವ ಹಕ್ಕು ಸಂಘಟನೆಗಳು, ಅಸಂಘಟಿತ ವಲಯವನ್ನು ಪ್ರತಿನಿಧಿಸುವ ಸಂಘಟನೆಗಳು ಹಾಗೂ ವಿದ್ಯಾರ್ಥಿ ಯುವಜನರು ಈ “ನಾಗರಿಕ ಜವಾಬ್ದಾರಿ” ಯನ್ನು ಹೆಗಲ ಮೇಲೆ ಹೊತ್ತು ಸಾಗಬೇಕಿದೆ. ಅಧಿಕಾರ ರಾಜಕಾರಣದ ಕೇಂದ್ರಗಳಿಂದ ದೂರದಲ್ಲಿ ನಿಂತು, ರಾಜಕೀಯ ಸಾಂಗತ್ಯ ಮತ್ತು ಸಾಮೀಪ್ಯ ಎರಡನ್ನೂ ವರ್ಜಿಸಿ, ನೊಂದ ಜನಸಮುದಾಯಗಳ ಜೊತೆಗೆ ಹೆಗಲು ಕೊಟ್ಟು ನಿಲ್ಲುವುದು ಈ ಎಲ್ಲ “ಜನಪರ ಸಂಘಟನೆಗಳ” ಆದ್ಯತೆಯಾಗಬೇಕಿದೆ. ನಾಗರಿಕರಾದ ನಾವು ಸ್ಪಷ್ಟ ಆದ್ಯತೆಗಳೊಂದಿಗೆ ನಮ್ಮ ಬಾಧ್ಯತೆಗಳನ್ನರಿತು ಮುನ್ನಡೆಯುವುದೇ ಆದರೆ ಸರ್ಕಾರಗಳಿಗೂ ಅವುಗಳ ಬಾಧ್ಯತೆ-ಕರ್ತವ್ಯಗಳ ಬಗ್ಗೆ ಎಚ್ಚರಿಕೆ ನೀಡುತ್ತಾ ಸಾಗಬಹುದು. ಸಂವಿಧಾನ ಪೀಠಿಕೆಯನ್ನು ಓದುವ ಪ್ರತಿ ಮನಸ್ಸಿನಲ್ಲೂ ಈ ಜಾಗೃತಿ ಇದ್ದರೆ ಸೆಪ್ಟಂಬರ್‌ 15ರ ಕಾರ್ಯಕ್ರಮ ಸಾರ್ಥಕವಾದೀತು.

ನಾ ದಿವಾಕರ

ಕನ್ನಡದ ಪ್ರಮುಖ ಲೇಖಕರು

ಇದನ್ನೂ ಓದಿ

ಇಂಡಿಯಾ ಎಂಬ ಭಾರತದಲ್ಲಿ ನಾಮ ಸಮರ

Related Articles

ಇತ್ತೀಚಿನ ಸುದ್ದಿಗಳು