Saturday, June 15, 2024

ಸತ್ಯ | ನ್ಯಾಯ |ಧರ್ಮ

IND vs SL Final: ಎಂಟನೇ ಬಾರಿಗೆ ಏಷ್ಯಾ ಕಪ್‌ ಎತ್ತಿ ಬೀಗಿದ ಭಾರತ ತಂಡ

IND Vs SL Final: 2023 ರ ಏಷ್ಯಾ ಕಪ್‌ನ ಫೈನಲ್‌ನಲ್ಲಿ, ಟೀಮ್ ಇಂಡಿಯಾ ಶ್ರೀಲಂಕಾವನ್ನು ಸುಲಭವಾಗಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತ ದಾಖಲೆಯ ಎಂಟನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಗೆದ್ದಿದೆ.

ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡ ಕೇವಲ 50 ರನ್‌ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಭಾರತ ತಂಡ ಕೇವಲ 6.1 ಓವರ್‌ಗಳಲ್ಲಿ ಸುಲಭವಾಗಿ ಗುರಿ ಮುಟ್ಟಿತು.

ಶ್ರೀಲಂಕಾ ಮೊದಲು ಆಡಿ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕೇವಲ 51 ರನ್‌ಗಳ ಗುರಿ ನೀಡಿತು. ಈ ಸಾಧಾರಣ ಗುರಿಯನ್ನು ಭಾರತ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಕೇವಲ 37 ಎಸೆತಗಳಲ್ಲಿ ಸಾಧಿಸಿತು. ಶುಭ್ಮನ್ ಗಿಲ್ 19 ಎಸೆತಗಳಲ್ಲಿ 27 ರನ್ ಗಳಿಸಿ ಅಜೇಯರಾಗಿ ಮರಳಿದರು ಮತ್ತು ಇಶಾನ್ ಕಿಶನ್ 18 ಎಸೆತಗಳಲ್ಲಿ 23 ರನ್ ಗಳಿಸಿ ಅಜೇಯರಾಗಿ ಮರಳಿದರು. ಗಿಲ್ 6 ಬೌಂಡರಿ ಬಾರಿಸಿದರೆ, ಇಶಾನ್ ಮೂರು ಬೌಂಡರಿ ಬಾರಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕೇವಲ 15.2 ಓವರ್‌ಗಳಲ್ಲಿ 50 ರನ್‌ಗಳಿಗೆ ಆಲೌಟಾಯಿತು. ಇದು ಭಾರತದ ವಿರುದ್ಧ ಎದುರಾಳಿ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ. ಭಾರತದ ಪರ ಮೊಹಮ್ಮದ್ ಸಿರಾಜ್ ಗರಿಷ್ಠ 6 ವಿಕೆಟ್ ಪಡೆದರು.

9 ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ

ಭಾರತದ ವೇಗಿಗಳ ಮಾರಕ ಬೌಲಿಂಗ್ ಮುಂದೆ ಶ್ರೀಲಂಕಾದ 9 ಆಟಗಾರರು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಕುಸಾಲ್ ಮೆಂಡಿಸ್ (17) ಮತ್ತು ದುಶನ್ ಹೇಮಂತ (13) ಮಾತ್ರ ಎರಡಂಕಿ ಮುಟ್ಟಲು ಸಾಧ್ಯವಾಯಿತು. ಪಾತುಮ್ ನಿಸ್ಸಾಂಕ 02, ಕುಸಾಲ್ ಪೆರೇರಾ 00, ಸದಿರ ಸಮರವಿಕ್ರಮ 00, ಚರಿತ್ ಅಸಲಂಕ 00, ಧನಂಜಯ್ ಡಿ ಸಿಲ್ವ 04, ದಸುನ್ ಶನಕ 00, ದುನಿತ್ ವೆಲ್ಲಲಾಗೆ 08 ಮತ್ತು ಪ್ರಮೋದ್ ಮಧುಶನ್ 01 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ವೇಗದ ಬೌಲರ್‌ಗಳ ಪಾಲಾದ ಎಲ್ಲಾ 10 ವಿಕೆಟುಗಳು

ಅಂತಿಮ ಪಂದ್ಯದಲ್ಲಿ ಸಿರಾಜ್ ಎದುರು ಶ್ರೀಲಂಕಾ ಬ್ಯಾಟ್ಸ್ ಮನ್‌ಗಳು ಅಸಹಾಯಕರಾಗಿ ಕಾಣುತ್ತಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಶ್ರೀಲಂಕಾದ ಎಲ್ಲಾ 10 ವಿಕೆಟ್‌ಗಳನ್ನು ಭಾರತದ ವೇಗದ ಬೌಲರ್‌ಗಳು ಕಬಳಿಸಿದರು. ಏಷ್ಯಾಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ ವೇಗದ ಬೌಲರ್‌ಗಳು ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದ ಘಟನೆ ನಡೆದಿದೆ. ಭಾರತದ ಪರ ಮೊಹಮ್ಮದ್ ಸಿರಾಜ್ 6, ಹಾರ್ದಿಕ್ ಪಾಂಡ್ಯ 3 ಹಾಗೂ ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು.

Related Articles

ಇತ್ತೀಚಿನ ಸುದ್ದಿಗಳು