Tuesday, June 18, 2024

ಸತ್ಯ | ನ್ಯಾಯ |ಧರ್ಮ

ಅಫ್ಘಾನಿಸ್ಥಾನ್‌ ಭೂಕಂಪ ದುರಂತ: ಹೆಣದ ರಾಶಿಯಡಿ ಹೆರಾತ್ ಪ್ರಾಂತ್ಯ

ಕುರುಹುಗಳಿಲ್ಲದ ಹಳ್ಳಿಗಳು.. ಅವಶೇಷಗಳನ್ನು ತೆಗೆಯುವಾಗ ಹೊರಬರುತ್ತಿರುವ ಶವಗಳು.. ಮೃತ ಬಂಧುಗಳ ರೋದನ.. ಅವರ ಮೃತದೇಹಗಳೆದುರು ರಾತ್ರಿ ಜಾಗರಣೆ… ಉಟ್ಟ ಬಟ್ಟೆ ಬಿಟ್ಟು ಬೇರೇನೂ ಇಲ್ಲದ ದಿನನಿತ್ಯದ ಜೀವನ.. ಇನ್ನೂ ತಮ್ಮವರ ಕುರುಹು ಕಾಣದ ಎಷ್ಟೋ ಕುಟುಂಬಗಳು.. ಇವು ಭಾರೀ ಭೂಕಂಪಗಳ ಸರಣಿಯಿಂದ ಧ್ವಂಸಗೊಂಡಿರುವ ಅಫ್ಘಾನಿಸ್ತಾನದಲ್ಲಿ ಕಂಡು ಬಂದ ಹೃದಯವಿದ್ರಾವಕ ದೃಶ್ಯಗಳು.

ಪಶ್ಚಿಮ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೂಕಂಪಗಳ ಸರಣಿಯಲ್ಲಿ ಸತ್ತವರ ಸಂಖ್ಯೆ 2 ಸಾವಿರ ಮೀರಿದೆ. 2,060 ಜನರು ಸಾವನ್ನಪ್ಪಿದ್ದಾರೆ, 9,240 ಜನರು ಗಾಯಗೊಂಡಿದ್ದಾರೆ ಮತ್ತು ಹಲವಾರು ಹಳ್ಳಿಗಳು ಮತ್ತು ನೂರಾರು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಮೊದಲು 6.3 ತೀವ್ರತೆಯೊಂದಿಗೆ ಭಾರಿ ಭೂಕಂಪ ಸಂಭವಿಸಿದೆ, ನಂತರ 8 ಹೆಚ್ಚು ಶಕ್ತಿಶಾಲಿ ಉತ್ತರಾಘಾತಗಳು ಸಂಭವಿಸಿದವು. ಶನಿವಾರ ರಾತ್ರಿಯವರೆಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕೆಲವರು ಇಡೀ ರಾತ್ರಿ ಮೃತರ ಶವದ ಬಳಿ ಅಳುತ್ತಾ ಕಳೆದರೆ.. ಇನ್ನು ಕೆಲವರು ಕುಟುಂಬಸ್ಥರ ಕುರುಹು ತಿಳಿಯದೆ ಕತ್ತಲಲ್ಲಿ ಅವಶೇಷಗಳ ನಡುವೆ ರಾತ್ರಿ ಕಳೆದರು.

ಬೆಳಗಾಗಿ ಸೂರ್ಯ ಹೊರ ಬಂದಾಗ ಬಹಳ ಕಷ್ಟಪಟ್ಟು ಅವಶೇಷಗಳನ್ನು ತೆಗೆದು ಉಳಿದವರ ಶವಗಳನ್ನು ಹೊರತೆಗೆಯಲಾಯಿತು. ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಸಿದ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕಳೆದ ವರ್ಷ ಜೂನ್‌ನಲ್ಲಿ ಪೂರ್ವ ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ 5.9 ತೀವ್ರತೆಯ ಭೂಕಂಪದಲ್ಲಿ 1,000 ಜನರು ಸಾವನ್ನಪ್ಪಿದ್ದರು. ಈಗ ದುಪ್ಪಟ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ನಡೆಯುತ್ತಿರುವ ಪರಿಹಾರ ಕಾರ್ಯಗಳು

ಸೇನೆಯೊಂದಿಗೆ ಸ್ವಯಂ ಸೇವಾ ಸಂಸ್ಥೆಗಳ ತಂಡಗಳು ಪರಿಹಾರ ಕಾರ್ಯಗಳನ್ನು ನಡೆಸುತ್ತಿವೆ. 7 ತಂಡಗಳನ್ನು ಕಳುಹಿಸಲಾಗಿದೆ ಮತ್ತು ಇನ್ನೂ ಕೆಲವು ತಂಡಗಳು ಇತರ ಪ್ರಾಂತ್ಯಗಳಿಂದ ಬರಲಿವೆ ಎಂದು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿಯ ಪ್ರತಿನಿಧಿ ಇರ್ಫಾನುಲ್ಲಾ ತಿಳಿಸಿದ್ದಾರೆ. ಹೆರಾತ್ ಪ್ರಾದೇಶಿಕ ಆಸ್ಪತ್ರೆಯಲ್ಲಿ ವೈದ್ಯರು 5 ಶಿಬಿರಗಳನ್ನು ಸ್ಥಾಪಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವಿಶ್ವಸಂಸ್ಥೆ ವಲಸೆ ಸಂಸ್ಥೆಯು ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಿತು. ಭೂಕಂಪ ಪೀಡಿತ ಪ್ರದೇಶಗಳಿಗೆ ಅಗತ್ಯ ನೆರವು ನೀಡುವುದಾಗಿ ಪಾಕಿಸ್ತಾನ ಹೇಳಿದೆ. ಅಫ್ಘಾನ್ ಕ್ರಿಕೆಟಿಗ ರಶೀದ್ ಖಾನ್ ಅವರು ತಮ್ಮ ಎಲ್ಲಾ ಕ್ರಿಕೆಟ್ ವಿಶ್ವಕಪ್ ಸಂಭಾವನೆಯನ್ನು ಭೂಕಂಪ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು