Friday, June 14, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರು | ಗಣಿ ಇಲಾಖೆ ಉಪ ನಿರ್ದೇಶಕಿಯ ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರಿನ ದೊಡ್ಡ ಕಲ್ಲಸಂದ್ರದಿಂದ ಭೀಕರ ಅಪರಾಧ ಘಟನೆಯೊಂದು ವರದಿಯಾಗಿದ್ದು, ಘಟನೆಯಲ್ಲಿ ಮೃತರಾದರವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ (45) ಎಂದು ಗುರುತಿಸಲಾಗಿದೆ.

ಬೆಂಗಳೂರಿನ ದೊಡ್ಡ ಕಲ್ಲಸಂದ್ರದಲ್ಲಿರುವ ಗೋಕುಲ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದ್ದು, ಅಲ್ಲಿ ಒಂಟಿಯಾಗಿ ವಾಸವಿದ್ದ ಪ್ರತಿಮಾ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾರೆ.

ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಶನಿವಾರ (ನ.4) ರಾತ್ರಿ 8.30ರ ಸುಮಾರಿಗೆ ಕೊಲೆ ನಡೆದಿದೆ ಎನ್ನಲಾಗಿದೆ. ಪ್ರತಿಮಾರ ಸಹೋದರ ಬೆಳಗ್ಗೆ ಕರೆ ಮಾಡಿದಾಗ ಅವರು ಪ್ರತಿಕ್ರಿಯಿಸಿರಲಿಲ್ಲ, ಅನುಮಾನಗೊಂಡ ಅವರು ಸ್ಥಳಕ್ಕೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮನೆಯಲ್ಲಿನ ಯಾವುದೇ ಬೆಲೆ ಬಾಳುವ ವಸ್ತುಗಳು ಕಳ್ಳತನಾವಗದಿರುವ ಕಾರಣ ಕೊಲೆ ಬೇರೆ ಯಾವುದೋ ಉದ್ದೇಶಕ್ಕೆ ನಡೆದಿರಬಹುದೆಂದು ಅನುಮಾನಿಸಲಾಗಿದೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಈ ಹಿಂದೆ ರಾಮನಗರದಲ್ಲಿ ಕರ್ತವ್ಯದಲ್ಲಿದ್ದರು.

ಪ್ರತಿಮಾ ಅವರ ಪತಿ ಸತ್ಯನಾರಾಯಣ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದು, ಪ್ರತಿಮಾ ಕಳೆದ ಎಂಟು ವರ್ಷಗಳಿಂದ ದೊಡ್ಡ ಕಲ್ಲಸಂದ್ರದಲ್ಲಿ ಒಂಟಿಯಾಗಿ ವಾಸವಿದ್ದರು. ರಾತ್ರಿ ಪ್ರತಿಮಾ ಅವರ ಚಾಲಕ ಅವರನ್ನು ಮನೆಗೆ ಡ್ರಾಪ್‌ ಮಾಡಿ ಹೋಗಿದ್ದರು. ಆದರೆ ಬೆಳಗ್ಗೆ ಪ್ರತಿಮಾ ಶವವಾಗಿ ಪತ್ತೆಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪ್ರತಿಮಾ ವಾಸವಿದ್ದ ಅಪಾರ್ಟ್‌ಮೆಂಟಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಕಿಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಳ್ಳುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು