Monday, June 17, 2024

ಸತ್ಯ | ನ್ಯಾಯ |ಧರ್ಮ

ಪ್ರತಿಮಾ ಕೊಲೆ ಪ್ರಕರಣ: ಮಲೆ ಮಹದೇಶ್ವರದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಕಿರಣ್‌

ಚಾಮರಾಜನಗರ: ಗಣಿ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದ ಪ್ರತಿಮಾ ಅವರ ಕೊಲೆ ಆರೋಪಿ ಕಿರಣನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಎನ್ನಲಾಗುತ್ತಿದೆ

ಗುತ್ತಿಗೆ ಆಧಾರದಲ್ಲಿ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣನನ್ನು ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಪ್ರತಿಮಾ ಹತ್ತು ದಿನಗಳ ಕೆಳಗೆ ಕೆಲಸದಿಂದ ವಜಾ ಮಾಡಿದ್ದರು.

ಕೆಲಸದಿಂದ ವಜಾ ಆದ ನಂತರ ಕಿರಣ್‌ ಕುಟುಂಬದಲ್ಲಿ ಬಿಕ್ಕಟ್ಟು ಉಂಟಾಗಿದ್ದು, ಕಿರಣನ ಹೆಂಡತಿ ಜಗಳ ಮಾಡಿಕೊಂಡು ತವರಿಗೆ ಹೋಗಿದ್ದರು. ಇದರಿಂದ ಕಂಗಾಲಾಗಿದ್ದ ಕಿರಣ ಮತ್ತೆ ಶನಿವಾರ ಪ್ರತಿಮಾ ಅವರ ಮನೆಗೆ ಬಂದು ನೀವು ಹೇಳಿದಂತೆ ಕೇಳಿಕೊಂಡಿರುತ್ತೇನೆ, ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಕೇಳಿಕೊಂಡಿದ್ದಾನೆ.

ಆದರೆ ಇದನ್ನು ನಿರಾಕರಿಸಿದ್ದ ಪ್ರತಿಮಾ ಅವರು ಈಗಾಗಲೇ ಕೆಲಸಕ್ಕೆ ಬೇರೆಯವರನ್ನು ತೆಗೆದುಕೊಂಡಿರುವುದಾಗಿಯೂ ಹೇಳಿದ್ದರು. ಜೊತೆಗೆ ಈ ರೀತಿ ಮನೆಯ ಬಳಿ ಬರದಿರುವಂತೆಯೂ ಎಚ್ಚರಿಸಿದ್ದರು. ಆಗ ಮಾತಿಗೆ ಮಾತು ಬೆಳೆದು ಕಿರಣ ಅವರ ಚೂಡಿದಾರ್‌ ವೇಲನ್ನು ಬಳಸಿ ಅವರನ್ನು ಉಸಿರುಗಟ್ಟಿಸಿ ಅಡುಗೆ ಮನೆಗೆ ಎಳೇದುಕೊಂಡು ಹೋಗಿದ್ದಾನೆ. ನಂತರ ಅಲ್ಲಿದ್ದ ಚೂರಿಯಿಂದ ಅವರ ಕುತ್ತಿಗೆ ಕುಯ್ದಿದ್ದಾನೆ.

ಕೊಲೆಯಾದ ನಂತರ ಗಾಬರಿಯಾದ ಕಿರಣ ಪ್ರತಿಮಾ ಅವರ ಮನೆಯಲ್ಲಿದ್ದ ಹದಿನೈದು ಸಾವಿರ ಹಣವನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದ. ನಂತರ ತನ್ನ ಸ್ನೇಹಿತರಿಗೆ ಕರೆ ಮಾಡಿ ಮಲೆಮಹದೇಶ್ವರ ದೇವಸ್ಥಾನಕ್ಕೆ ಹೋಗೋಣ ಬನ್ನಿ ಎಂದು ಕರೆದು ಅವರೊಡನೆ ದೇವಸ್ಥಾನಕ್ಕೆ ಹೊರಟಿದ್ದಾನೆ.

ಪ್ರಸ್ತುತ ಪೊಲೀಸರ ಅತಿಥಿಯಾಗಿರುವ ಕಿರಣ ಎರಡು ಮೊಬೈಲುಗಳನ್ನು ಬಳಸುತ್ತಿದ್ದ. ಅವುಗಳಲ್ಲಿ ಒಂದನ್ನು ಸ್ವಿಚ್‌ ಆಫ್‌ ಮಾಡಿ ಮನೆಲ್ಲಿಟ್ಟು ಹೋಗಿದ್ದರೆ ಇನ್ನೊಂದನ್ನು ತನ್ನೊಡನೆ ಕೊಂಡೊಯ್ದಿದ್ದ. ನಂತರ ಪೊಲೀಸರು ಅವನ ಮೊಬೈಲ್‌ ನ ಜಾಡು ಹಿಡಿದು, ಈ ಕುರಿತು ಚಾಮರಾಜನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ದಾರಿ ಮಧ್ಯೆ ಪ್ರತಿಮಾ ಅವರ ಕೊಲೆಯಾದ ಕುರಿತು ಸುದ್ದಿಯನ್ನು ಸ್ನೇಹಿತರೊಂದಿಗೆ ನೋಡಿದ್ದ ಕಿರಣ ತನಗೂ ಆ ವಿಷಯ ಈಗಷ್ಟೇ ತಿಳಿದಿದೆ ಎನ್ನುವಂತೆ ನಟಿಸಿದ್ದನು.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಎಸ್‌ ಮಲ್ಲಿಕಾರ್ಜುನ್‌ ಪ್ರತಿಮಾ ಅವರಿಗೆ ಇಲಾಖೆಯಿಂದ ಯಾವುದೇ ಸಮಸ್ಯೆ ಇದ್ದಿರಲಿಲ್ಲ, ಆದರೆ ಅವರ ಕುಟುಂಬದಲ್ಲಿ ಸಮಸ್ಯೆಯಿತ್ತುಇದರಿಂದಾಗಿಯೂ ಕೊಲೆ ನಡೆದಿರಬಹುದಾದ ಸಾಧ್ಯತೆಯಿರಬಹುದು ತನಿಖೆಯ ನಂತರವಷ್ಟೇ ಸತ್ಯ ಹೊರಬರಲು ಸಾಧ್ಯ ಎಂದರು.

ಕುಟುಂಬದವರು ಯಾವುದೇ ತಕಾರಾರು ಇರಲಿಲ್ಲವೆಂದು ಹೇಳಿದ್ದಾರೆ, ಗಣಿ ಮಾಫಿಯಾ ಇದರ ಹಿಂದಿದೆ ಎನ್ನಲಾಗುತ್ತಿದೆ ಎಂದು ವರದಿಗಾರರು ಕೇಳಿದಾಗ, “ಅದೊಂದು ಕಡೆಗಿದೆ, ಇದೊಂದು ಕಡೆಗಿದೆ. ಎರಡೂ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತದೆ. ಜೊತೆಗೆ ಈಗ ಚಾಲಕನನ್ನು ವಶಕ್ಕೆ ಪಡೆಯಲಾಗಿದೆಯೆಂದು ಸುದ್ದಿಗಳು ಬರುತ್ತಿವೆ. ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ಮಾಡಿ ವರದಿ ಸಲ್ಲಿಸಲಿದ್ದಾರೆ” ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು