Friday, June 14, 2024

ಸತ್ಯ | ನ್ಯಾಯ |ಧರ್ಮ

ಬೃಹನ್ಮಠ ಗುರುಪೀಠದ ವೇದ ಶಾಸ್ತ್ರ ಮೋಹ; ಬಹುದೇವೋಪಾಸನೆಯೆಂಬುದು ಬಸವದ್ರೋಹ

ಡಾಕ್ಟರ್ ಸ್ವಾಮಿಗಳು ಎಂತಲೇ ಭಕ್ತಾದಿಗಳ ಬಾಯಲ್ಲಿ ಪ್ರಚಲಿತರಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಬಸವ ತತ್ವಕ್ಕೆ ವೈದಿಕತೆಯನ್ನು ಬೆರೆಸಿ ಲಿಂಗಾಯತ ಸಮುದಾಯದಲ್ಲಿ ಗೊಂದಲ ಸೃಷ್ಟಿಸುತ್ತಲೇ ಬಂದಿದ್ದಾರೆ. ಏಕದೇವೋಪಾಸಕರಾದ ಲಿಂಗಾಯತ ಮಠದಲ್ಲಿ ವೈದಿಕ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸನಾತನ ವಿಚಾರಗಳಿಗೂ ಆಗಾಗ ಸಮ್ಮತಿ ಸೂಚಿಸುತ್ತಲೇ ಬಂದಿದ್ದಾರೆ. ಪುರೋಹಿತಶಾಹಿ ಪರಿಕಲ್ಪನೆಯ ಕರ್ಮಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ.ಇವೆಲ್ಲವೂ ಲಿಂಗಾಯತ ಧರ್ಮಕ್ಕೆ, ಬಸವ ತತ್ವಕ್ಕೆ ವಿರುದ್ಧ– ಶಶಿಕಾಂತ ಯಡಹಳ್ಳಿ.

ತರಳಬಾಳು ಹನ್ಮಠದ ಸಾಣೇಹಳ್ಳಿ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯರು ‘ಕಾಲ್ಪನಿಕ ದೇವರಾದ ಗಣಪತಿ ಪೂಜೆಯು ಲಿಂಗಾಯತರ ಸಂಸ್ಕೃತಿ ಅಲ್ಲಾ’ ಎಂದು ಹೇಳಿದ್ದು ಚಲನಶೀಲತೆ ಇಲ್ಲದೇ ಮಡುಗಟ್ಟಿ ಪಾಚಿಕಟ್ಟಿ ನಾರುತ್ತಿರುವ ವೈದಿಕಶಾಹಿ ಕೆರೆಗೆ ಕಲ್ಲೆಸೆದಂತಾಗಿದೆ. 

ಹಿಂದೂ ದೇವರು ಧರ್ಮವನ್ನು ಯಾರೇ ವಿಮರ್ಶಿಸಲಿ ನಂದೆಲ್ಲಿಡಲಿ ಎಂದು ಮುಂದೆ ಬಂದು ನಿಂದನಾಸ್ತ್ರ ಬಿಡುವ ಸ್ವಘೋಷಿತ ಹಿಂದುತ್ವವಾದಿ ಪ್ರಮೋದ ಮುತಾಲಿಕ ಮುತ್ಯಾರವರು ‘ಶ್ರೀಗಳು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು’ ಅಂತಾ ಒತ್ತಾಯಿಸಿದ್ದಾರೆ. ‘ಗಣೇಶನ ತಂದೆ ಶಿವನ ಪೂಜೆ ಮಾಡುತ್ತೀರಾ, ಗಣೇಶ ಯಾಕೆ ಬೇಡ?’ ಎಂದು ಪ್ರಶ್ನಿಸಿದ್ದಾರೆ. ಈ ಅರೆಬೆಂದ ಮಡಿಕೆಯಂತಹ ದ್ವೇಷಪೀಡಿತ ಮತಾಂಧ ವ್ಯಕ್ತಿಗೆ “ವೈದಿಕರು ಪುರಾಣ ಕಥೆಗಳ ಮೂಲಕ ನಂಬಿಸಿದ ಶಿವನ ಕುಟುಂಬ ಕಲ್ಪನೆಗೂ ಬಸವಣ್ಣನವರ ಕೂಡಲ ಸಂಗಮನ ರೂಪಕಕ್ಕೂ ಇರುವ ವ್ಯತ್ಯಾಸವೇ ಗೊತ್ತಿಲ್ಲ. ದೇವರುಗಳ ಹುಟ್ಟಿನ ಮೂಲ ಗುಟ್ಟಿನ ಅರಿವೂ ಈ ದ್ವೇಷದ ವ್ಯಾಪಾರಿಗೆ ಅರ್ಥವಾಗುವುದಿಲ್ಲ. ಇಂತಹ ಅಪಸವ್ಯವನ್ನು ನಿರ್ಲಕ್ಷಿಸುವುದರಲ್ಲಿ ನೆಮ್ಮದಿ ಇದೆ.

ಆದರೆ.. ಆತಂಕ ಹುಟ್ಟಿಸಿದ್ದು ತರಳಬಾಳು ಬೃಹನ್ಮಠದ ಮಹಾಸ್ವಾಮಿಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಹೇಳಿಕೆ. ” ವಚನ ಸಾಹಿತ್ಯ ಓದಿಕೊಂಡವರೂ ಮೂಲಭೂತವಾದಿ ಆಗುತ್ತಿರುವುದು ವಿಷಾದನೀಯ. ಲಿಂಗಾಯತ ಧರ್ಮದಲ್ಲೂ ಕೆಲವರು ಇಂತಹ ಗೊಂದಲ ಹಬ್ಬಿಸುತ್ತಿದ್ದಾರೆ. ಬಸವಣ್ಣನವರು ವೇದ ಉಪನಿಷತ್ತುಗಳ ವಿರೋಧಿಯಾಗಿದ್ದರು ಎಂಬ ಪ್ರಜ್ಞೆ ಈಗ ಮೂಡುತ್ತಿದೆ. ಅವರು ವೇದ ವಿರೋಧಿಯಾಗಿರಲಿಲ್ಲ, ಸಾರಾಸಗಟಾಗಿ ತಿರಸ್ಕರಿಸಿಲ್ಲ…” ಎಂದು ತರಳಬಾಳು ಮಠ ಆಯೋಜಿಸಿದ್ದ ‘ವಚನ ಸಾಹಿತ್ಯದ ಪ್ರಸ್ತುತತೆ’ ಕುರಿತ ಗೋಷ್ಟಿಯಲ್ಲಿ ದೊಡ್ಡ ಗುರುಗಳು ಗೊಡ್ಡು ಆಶೀರ್ವಚನ ನೀಡಿದರು.

ತರಳಬಾಳು ಮೂಲ ಮಠದ ಈ ಡಾಕ್ಟರ್ ಸ್ವಾಮೀಜಿಗಳಿಗೂ ಅದೇ ಬೃಹನ್ಮಠದ ಶಾಖಾಮಠದ ಪಂಡಿತಾರಾಧ್ಯ ಸ್ವಾಮಿಗಳಿಗೂ ಹಲವಾರು ವರ್ಷಗಳಿಂದ ತಾತ್ವಿಕ ಭಿನ್ನಾಭಿಪ್ರಾಯಗಳು ಇರುವುದು ಈ ಮಠದ ಭಕ್ತಾದಿಗಳಿಗೆ ಗೊತ್ತಿರುವ ಸಂಗತಿಯಾಗಿದೆ. ಪಂಡಿತಾರಾಧ್ಯರು ಬಸವ ತತ್ವದ ಮೂಲಕ ಲಿಂಗಾಯತ ಸಮಾಜದಲ್ಲಿ ಜಾಗೃತಿ ತರಲು ಶಿಕ್ಷಣ, ರಂಗಭೂಮಿ ಮೂಲಕ ಪ್ರಯತ್ನಿಸುತ್ತಿದ್ದಾರೆ. ಬಸವಾದಿ ಶರಣರ ಆಶಯಗಳನ್ನು ಪ್ರತಿಪಾದಿಸುವ ಅನೇಕ ನಾಟಕಗಳನ್ನು ಶಿವಸಂಚಾರ ರೆಪರ್ಟರಿಯ ಮೂಲಕ ನಿರ್ಮಿಸಿ ನಾಡಿನಾದ್ಯಂತ ಪ್ರಯೋಗಿಸಿದ್ದಾರೆ. ಇವರ ಪರಿಕಲ್ಪನೆಯ ನಾಟಕ ತಂಡವು ದೇಶಾದ್ಯಂತ ಸಂಚರಿಸಿ ಶಿವಶರಣರ ತತ್ವವನ್ನು ಪಸರಿಸಿದೆ. ಸಮಾಜದಲ್ಲಿರುವ ಮೌಢ್ಯಗಳನ್ನು ಹೋಗಲಾಡಿಸಲು ರಂಗಮಾಧ್ಯಮವನ್ನು ಸಶಕ್ತವಾಗಿ ಸಾಣೇಹಳ್ಳಿ ಸ್ವಾಮಿಗಳು ಬಳಸಿಕೊಂಡಿದ್ದಾರೆ. 

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಆದರೆ ಮೂಲ ಮಠದ ಸ್ವಾಮಿಗಳಿಂದ ಆಗಾಗ ಅಪಸ್ವರ ಕೇಳಿಬರುತ್ತಲೇ ಇರುತ್ತದೆ. ಡಾಕ್ಟರ್ ಸ್ವಾಮಿಗಳು ಎಂತಲೇ ಭಕ್ತಾದಿಗಳ ಬಾಯಲ್ಲಿ ಪ್ರಚಲಿತರಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಬಸವ ತತ್ವಕ್ಕೆ ವೈದಿಕತೆಯನ್ನು ಬೆರೆಸಿ ಲಿಂಗಾಯತ ಸಮುದಾಯದಲ್ಲಿ ಗೊಂದಲ ಸೃಷ್ಟಿಸುತ್ತಲೇ ಬಂದಿದ್ದಾರೆ. ಏಕದೇವೋಪಾಸಕರಾದ ಲಿಂಗಾಯತ ಮಠದಲ್ಲಿ ವೈದಿಕ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸನಾತನ ವಿಚಾರಗಳಿಗೂ ಆಗಾಗ ಸಮ್ಮತಿ ಸೂಚಿಸುತ್ತಲೇ ಬಂದಿದ್ದಾರೆ. ಪುರೋಹಿತಶಾಹಿ ಪರಿಕಲ್ಪನೆಯ ಕರ್ಮಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ. ಇವೆಲ್ಲವೂ ಲಿಂಗಾಯತ ಧರ್ಮಕ್ಕೆ, ಬಸವ ತತ್ವಕ್ಕೆ ವಿರುದ್ಧವಾಗಿದ್ದರೂ ಡಾಕ್ಟರ್ ಸ್ವಾಮಿಗಳು ವೈದಿಕಶಾಹಿ ಸಿದ್ಧಾಂತಗಳ ಪರವಾಗಿರುವುದು ಅಚ್ಚರಿಯ ಸಂಗತಿ ಏನಲ್ಲ.

ಯಾಕೆಂದರೆ ಅವರು ಉನ್ನತ ಶಿಕ್ಷಣ ಪಡೆದು ಅಧ್ಯಯನ ಮಾಡಿದ್ದು ಬನಾರಸ್ ವಿಶ್ವವಿದ್ಯಾಲಯದಲ್ಲಿ. ಡಾಕ್ಟರೇಟ್ ಪಡೆದಿದ್ದು ‘ಎ ಕ್ರಿಟಿಕಲ್ ಸ್ಟಡಿ ಆಫ್ ಸೂತ್ರ ಸಂಹಿತಾ’ ಕುರಿತ ಸಂಸ್ಕೃತ ಅಧ್ಯಯನದಲ್ಲಿ. ಆ ಹಿನ್ನೆಲೆಯಿಂದಾಗಿ ವೈದಿಕಶಾಹಿ ಆಚಾರ ವಿಚಾರಗಳಲ್ಲಿ ಸ್ವಾಮಿಗಳು ನಂಬಿಕೆ ಇಟ್ಟಿರುವುದರಲ್ಲಿ ಅಚ್ಚರಿ ಏನಿಲ್ಲ. ಆದರೆ ತಮ್ಮ ವೈಯಕ್ತಿಕ ನಂಬಿಕೆಗಳನ್ನು ಲಿಂಗಾಯತ ಮಠದ  ಪೀಠಾಧ್ಯಕ್ಷರಾಗಿ ಆಚರಣೆಗೆ ತರಬಾರದಿತ್ತು.  ಯಾವ ಬ್ರಾಹ್ಮಣ್ಯದ ವಿರುದ್ಧ ಬಸವಾದಿ ಶರಣರು ಸಾಂಸ್ಕೃತಿಕ ಆಂದೋಲನವನ್ನು ಹುಟ್ಟು ಹಾಕಿದರೋ ಆ ಆಶಯದ ವಿರುದ್ಧ ಬೃಹನ್ಮಠದ ಸ್ವಾಮಿಗಳು ಹೋಗಲೇಬಾರದಿತ್ತು. ಮೊದಲೇ ಪುರೋಹಿತಶಾಹಿಗಳ ಬಹುದೇವೋಪಾಸನೆಯತ್ತ ವಾಲಿರುವ ಲಿಂಗಾಯತ ಸಮುದಾಯದಲ್ಲಿ ಜಾಗೃತಿ ಮೂಡಿಸಿ  ಇಷ್ಟಲಿಂಗದ ಪರಿಕಲ್ಪನೆಯನ್ನು ಮನದಟ್ಟು ಮಾಡಿಕೊಡುವುದು ಬಿಟ್ಟು ಹೀಗೆ ವೈದಿಕ ಸಿದ್ಧಾಂತಗಳನ್ನು ಪ್ರಚುರ ಪಡಿಸುವುದು ಲಿಂಗಾಯತ ಧರ್ಮಕ್ಕೆ ಅಪಚಾರವೆಸಗುವಂತಹುದು. 

ಡಾಕ್ಟರ್ ಸ್ವಾಮಿಗಳು ನಾಟಕದ ಸ್ವಾಮಿಗಳಿಗೆ ಕೌಂಟರ್ ಕೊಡಲೆಂದೇ ಮೂಲಭೂತವಾದಿ ಶಬ್ದ ಪ್ರಯೋಗ ಮಾಡಿದ್ದಾರೆ. ಆದರೆ ಬಸವ ತತ್ವಕ್ಕೆ ಬದ್ಧತೆ ತೋರಿ ಬಹುದೇವೋಪಾಸನೆ ಲಿಂಗಾಯತ ಧರ್ಮದವರ ಸಂಸ್ಕೃತಿ ಅಲ್ಲಾ ಎಂದು ಸಾಣೇಹಳ್ಳಿ ಸ್ವಾಮಿಗಳು ಹೇಳಿದ್ದರಲ್ಲಿ ಮೂಲಭೂತವಾದಿತನ ಏನಿದೆ? “ಬಸವಣ್ಣನವರು ವೇದಗಳ ವಿರೋಧಿ ಆಗಿರಲಿಲ್ಲ” ಎಂದು ಸಮರ್ಥಿಸಿಕೊಳ್ಳುತ್ತಿರುವ ಡಾಕ್ಟರ್ ಸ್ವಾಮಿಗಳು ತಾವೇ ಮೂಲಭೂತವಾದಿಗಳು ಎಂಬುದನ್ನು ತಮ್ಮ ಹೇಳಿಕೆಯ ಮೂಲಕ ಸಾಬೀತು ಪಡಿಸಿದ್ದಾರೆ. ವೈದಿಕ ಧರ್ಮದ ತಾರತಮ್ಯ ಶೋಷಣೆ ಮೌಢ್ಯಗಳನ್ನು ವಿರೋಧಿಸಿಯೇ ಲಿಂಗಾಯತ ಧರ್ಮ ಉದಯಿಸಿದ್ದು.  ಲಿಂಗಾಯತ ಮಠದ ಹಿರಿಯ ಸ್ವಾಮಿಗಳೇ ವೈದಿಕರಿಂದ ರಚನೆಗೊಂಡ ವೇದ ಶಾಸ್ತ್ರಗಳ ಪರವಾಗಿ ಪ್ರವಚನ ಕೊಡುತ್ತಿರುವುದು ಬಸವದ್ರೋಹವಲ್ಲದೇ ಮತ್ತೇನಲ್ಲ.

ಸಂಸ್ಕೃತ ಅಧ್ಯಯನ ಮಾಡಿ ವೇದ ಉಪನಿಷತ್ತುಗಳ ಸಮರ್ಥಕರಾದ  ಡಾಕ್ಟರ್ ಸ್ವಾಮಿಗಳು ತಮ್ಮ ಸಂಸ್ಕೃತ ಬೂವಿಷ್ಟ ಪೂರ್ವಾಗ್ರಹವನ್ನು ಪಕ್ಕಕ್ಕಿಟ್ಟು  ವೇದ ಶಾಸ್ತ್ರ ಪುರಾಣಗಳ ಬಗ್ಗೆ ಶಿವಶರಣರ ವಚನಗಳಲ್ಲಿರುವ ತೀವ್ರತರ ಪ್ರತಿರೋಧವನ್ನು ಇನ್ನೊಮ್ಮೆ ಓದಿಕೊಳ್ಳಬೇಕಿದೆ.

ಡಾ.ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

ವೇದ ವಿರೋಧಿಯಾದ ಬಸವಣ್ಣನವರ ಕೆಲವು ವಚನಗಳು ಹೀಗಿವೆ. 

“ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯ್ಯುವೆ ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ ಎನ್ನುವ ವಚನದಲ್ಲಿ ಬಸವಣ್ಣನವರು ವೇದ ಶಾಸ್ತ್ರಗಳ ಕುರಿತು ನಿಷ್ಠುರವಾಗಿಯೇ ಹೇಳಿದ್ದಾರೆ.

ವೇದವನೋದಿದಡೇನು ಶಾಸ್ತ್ರವ ಕೇಳಿದೊಡೇನಯ್ಯಾ, ಜಪವ ಮಾಡಿದಡೇನು ತಪವ ಮಾಡಿದಡೇನಯ್ಯಾ, ಏನ ಮಾಡಿದಡೇನು ನಮ್ಮ ಕೂಡಲಸಂಗಯ್ಯನ ಮನಮುಟ್ಟದನ್ನಕ್ಕ ಎನ್ನುವ ವಚನದಲ್ಲೂ ವೈದಿಕಾಚರಣೆಗಳು ಏನು ಮಾಡಿದರೂ ಕೂಡಲ ಸಂಗಯ್ಯನ ಮನ ಮುಟ್ಟದು ಎಂದಿದ್ದಾರೆ. ಡಾಕ್ಟರ್ ಸ್ವಾಮಿಗಳು ವೇದಗಳ ಪರ ಅದೆಷ್ಟೇ ಸಮರ್ಥನೆ ಮಾಡಿದರೂ ಅದು ಸಂಗಯ್ಯನ ಮನಮುಟ್ಟದು.

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ! `ಭರ್ಗೋ ದೇವಸ್ಯ ಧೀಮಹಿ’ ಎಂಬರು, ಒಬ್ಬರಿಗಾಗಿ ವಿಚಾರವಿಲ್ಲ, ನೋಡಿರೇ ಕೂಡಲಸಂಗಮದೇವಾ ಎನ್ನುವ ಈ ವಚನದಲ್ಲಿ ವೇದವನೋದಿದ ಬ್ರಾಹ್ಮಣರ ಕೇಡನ್ನು ವಿವರಿಸಿದ್ದಾರೆ. ಇದು ವೇದವನೋದಿದ ಡಾಕ್ಟರ್ ಸ್ವಾಮಿಗಳಿಗೂ ಅನ್ವಯಿಸುವುದು ವಿಪರ್ಯಾಸ.

ಆದಿ ಪುರಾಣ ಅಸುರರಿಗೆ ಮಾರಿ, ವೇದಪುರಾಣ ಹೋತಿಂಗೆ ಮಾರಿ, ರಾಮಪುರಾಣ ರಕ್ಕಸರಿಗೆ ಮಾರಿ, ಭಾರತ ಪುರಾಣ ಗೋತ್ರಕ್ಕೆ ಮಾರಿ. ಎಲ್ಲಾ ಪುರಾಣ ಕರ್ಮಕ್ಕೆ ಮೊದಲು, ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲಸಂಗಮದೇವಾ. ಆದಿ ವೇದ ರಾಮ ಪುರಾಣಗಳು ಹೇಗೆ ಮಾರಿಸ್ವರೂಪ ಎಂದು ಹೇಳುವ ಈ ವಚನ ವೇದಪುರಾಣ ಕರ್ಮಗಳ ವಿಮರ್ಶಿಸುವಂತಿದೆ.

ವೇದ ಸ್ವಯಂಭು’ವೆಂಬ ವಾದಿ ಕೇಳೆಲವೋ. `ಏಕೋ ದೇವೋ ರುದ್ರೋ ನ ದ್ವಿತೀಯಃ ಎಂದು ನಂಬುವುದು ಕಾಣಿರಣ್ಣಾ. `ಚಕಿತಮಬ್ಥಿಧತ್ತೇ ಎಂದು ಶ್ರುತಿ ಸಾರುತ್ತೈದಾವೆ ಜಗದ ಕರ್ತ ಕೂಡಲಸಂಗಮದೇವನೊಬ್ಬನೆ ಕಾಣಿರಣ್ಣಾ. ಡಾಕ್ಟರ್ ಸ್ವಾಮಿಗಳಂತಹ  ವೇದಗಳ ಪರ ವಾದಿಗಳಿಗೆ ಏಕದೇವೋಪಾಸನೆಯನ್ನು ಬಸವಣ್ಣನವರು ಈ ವಚನದಲ್ಲಿ ಬೋಧಿಸಿದ್ದಾರೆ. 

ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ !  ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ !  ಆಗಮ ಹೆರತೊಲಗಿ ಅಗಲಿದ್ದಿತಯ್ಯಾ ! ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ. ಕೂಡಲಸಂಗಯ್ಯ ಕೆಳ ಜಾತಿಯ ಚೆನ್ನಯ್ಯನ ಮನೆಯಲ್ಲಿ ಉಂಡ ಕಾರಣಕ್ಕೆ ವೇದಗಳೇ ನಡುಗಿದವು, ಶಾಸ್ತ್ರ ಕೆಳಗೆ ಬಿತ್ತು.. ಎಂದೆಲ್ಲಾ ಈ ವಚನದಲಿ ಬರೆಯುವ ಮೂಲಕ ಬಸವಣ್ಣನವರು ಜಾತಿ ತಾರತಮ್ಯದ ವೈದಿಕಶಾಹಿ ಸಿದ್ಧಾಂತ ಪ್ರತಿಪಾದಕ ವೇದ ಶಾಸ್ತ್ರಗಳನ್ನು ಟೀಕಿಸಿದ್ದಾರೆ.

ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ, ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ, ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ. ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ, ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ, ಕೂಡಲಸಂಗಮದೇವ ಶ್ವಪಚನ ಮೆರೆದಡೆ ಜಾತಿಭೇದವ ಮಾಡಲಮ್ಮವು ವೇದ ಶಾಸ್ತ್ರ ತರ್ಕಗಳೇ ಶಿವ ಮಂತ್ರದ ಮುಂದೆ ನಿಶ್ಚಲ ಎಂದು ಈ ವಚನ ಹೇಳುವ ಜೊತೆಗೆ ವೈದಿಕತೆಯ ಜಾತಿಬೇಧವನ್ನೂ ವಿಡಂಬಿಸಿದೆ.

ಹೊಲೆಯೊಳಗೆ ಹುಟ್ಟಿ ಕುಲವನರಸುವೆ, ಎಲವೊ, ಮಾತಂಗಿಯ ಮಗ ನೀನು. ಸತ್ತುದನೆಳೆವನೆತ್ತಳ ಹೊಲೆಯ ಹೊತ್ತು ತಂದು ನೀವು ಕೊಲುವಿರಿ. ಶಾಸ್ತ್ರವೆಂಬುದು ಹೋತಿಂಗೆ ಮಾರಿ, ವೇದವೆಂಬುದು ನಿಮಗೆ ತಿಳಿಯದು. ನಮ್ಮ ಕೂಡಲಸಂಗನ ಶರಣರು. ಕರ್ಮವಿರಹಿತರು, ಶರಣಸನ್ನಿಹಿತರು, ಅನುಪಮಚಾರಿತ್ರರು. ಅವರಿಗೆ ತೋರಲು ಪ್ರತಿಯಿಲ್ಲವೋ ಶರಣರು ಕರ್ಮವಿಹಿತರು ಎನ್ನುವ ಈ ವಚನದ ಒಳಾರ್ಥ ಅರ್ಥವಾದರೆ ಕರ್ಮಸಿದ್ಧಾಂತಿಗಳಾದ  ಡಾಕ್ಟರ್ ಸ್ವಾಮಿಗಳು ನಿಜ ಶರಣರಾಗುವರು.

ವೇದ ವೇಧಿಸಲರಿಯದೆ ಅಭೇದ್ಯಲಿಂಗವೆಂದು ನಡನಡುಗಿತ್ತು. ಶಾಸ್ತ್ರ ಸಾಧಿಸಲರಿಯದೆ ಅಸಾಧ್ಯಲಿಂಗವೆಂದು ಸಾರುತ್ತೈದಾವೆ. ತರ್ಕ ತರ್ಕಿಸಲರಿಯದೆ ಅತಕ್ರ್ಯಲಿಂಗವೆಂದು ಮನಂಗೊಳ್ಳವು. ಆಗಮ ಗಮಿಸಲರಿಯದೆ ಅಗಮ್ಯಲಿಂಗವೆಂದು ಹೋದವು. ನರರು ಸುರರು ಅಂತುವ ಕಾಣರು, ನಮ್ಮ ಕೂಡಲಸಂಗನ ಪ್ರಮಾಣ ಶರಣ ಬಲ್ಲ. ಅಭೇದ್ಯ ಲಿಂಗದ ಮುಂದೆ ವೇದ ಶಾಸ್ತ್ರ ತರ್ಕಗಳೆಲ್ಲಾ ವ್ಯರ್ಥವೆಂದು ಹೇಳುವ ಈ ವಚನದ ಮೂಲಕ ಇಷ್ಟಲಿಂಗದ ಶ್ರೇಷ್ಠತೆಯನ್ನೂ ಹಾಗೂ ವೇದ ಶಾಸ್ತ್ರಗಳ ನಿಷ್ಕ್ರಿಯತೆಯನ್ನೂ ಸಾರುವ ಬಸವಣ್ಣನವರ ಈ ವಚನವನ್ನಾದರೂ ಅರಿತು ವೇದಗಳ ಸಮರ್ಥನೆ ಬಿಟ್ಟು ಇಷ್ಟಲಿಂಗ ದರ್ಶನವನ್ನು ಸ್ವಾಮಿಗಳು ಕಂಡುಕೊಳ್ಳಬೇಕಿದೆ.

ಗೀತವ ಹಾಡಿದಡೇನು, ಶಾಸ್ತ್ರ-ಪುರಾಣವ ಕೇಳಿದಡೇನು, ವೇದವೇದಾಂತವ ನೋಡಿದಡೇನು ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು ಎಲ್ಲರಲ್ಲಿ ಪ್ರಾಜ್ಞರಾದಡೇನು ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ. ಮನಸಾರೆ ಲಿಂಗಜಂಗಮ ಪೂಜೆಯ ಭಕ್ತಿಯಿಂದ ಮಾಡುವುದನು ಅರಿಯದೇ ವೇದ ವೇದಾಂತ, ಶಾಸ್ತ್ರ ಪುರಾಣಗಳ ಕೇಳಿ ನೋಡಿದರೂ ವ್ಯರ್ಥ ಎಂದು ಹೇಳುವ ಈ ವಚನ ವೇದವೇದಾಂತದ ಪ್ರತಿಪಾದಕರಿಗೆ ಪಾಠ ಹೇಳುವಂತಿದೆ.

ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯಾ. ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ. ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾತ್ತು. ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು. ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ. ಶಿವನೇ ವೇದಪ್ರಿಯನಲ್ಲವೆಂದು ಬಸವಣ್ಣನವರು ಹೇಳಿದಮೇಲೆ ಈ ಬಸವ ಮಾರ್ಗಿಗಳು ವೇದಪ್ರೀಯರಾಗಿದ್ದು ಸಮರ್ಥನೀಯವಲ್ಲ.

ಓದಿನ ಹಿರಿಯರು, ವೇದದ ಹಿರಿಯರು, ಶಾಸ್ತ್ರದ ಹಿರಿಯರು, ಪುರಾಣದ ಹಿರಿಯರು, ವೇಷದ ಹಿರಿಯರು, ಭಾಷೆಯ ಹಿರಿಯರು, ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ. ತಮ್ಮ ಮರೆದು ನಿಮ್ಮ ಮೆರೆದಡೆ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವರು.

ಈ ವಚನವನ್ನು ಹಿರಿಯ ಸ್ವಾಮಿಗಳು ಅಧ್ಯಯನ ಮಾಡಲೇಬೇಕಿದೆ. ತಮ್ಮತನ ಮೆರೆಯಲು ಮೂಲತತ್ವವನ್ನೇ ಮರೆತವರನ್ನು ಈ ವಚನ ಎಚ್ಚರಿಸಬೇಕಿದೆ.

ಹೀಗೆ ಬ್ರಾಹ್ಮಣ್ಯದ ಪ್ರತಿಪಾದನೆಯ ಅಂಗಗಳಾದ ವೇದ, ಶಾಸ್ತ್ರ, ತರ್ಕ, ಪುರಾಣ, ಆಗಮಗಳನ್ನು ಪ್ರತಿರೋಧಿಸುವ 70 ಕ್ಕೂ ಹೆಚ್ಚು ಬಸವಣ್ಣನವರ ವಚನಗಳು ದೊರಕಿವೆ. ಅಲ್ಲಮಪ್ರಭುಗಳಾದಿಯಾಗಿ ಅನೇಕ ಶರಣರು ವೇದ ಶಾಸ್ತ್ರಗಳ ವಿರುದ್ಧ ಬರೆದ ವಚನಗಳು ದಂಡಿಯಾಗಿವೆ.  ವೇದ ಹೇಳಿದ್ದೆಲ್ಲವೂ ಸತ್ಯ, ಶಾಸ್ತ್ರಗಳೇ ಮನುಕುಲ ಮುನ್ನಡೆಸುವ ದಾರಿದೀಪ ಎಂದು ಬ್ರಾಹ್ಮಣ್ಯವಾದಿಗಳು ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದಾರೆ. ಸಮರ್ಥಿಸಲಿ. ಆದರೆ ವೇದ ಶಾಸ್ತ್ರಗಳ ಮನ್ನಣೆ ಸಮರ್ಥನೆಗಳನ್ನೇ ವಿರೋಧಿಸುವ ವಿಡಂಬಿಸುವ ವಚನ ಧರ್ಮವನ್ನು ಲಿಂಗಾಯತ ಧರ್ಮೀಯರು ಪರಿಪಾಲಿಸಲಿ. ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಲಿಂಗಾಯತ ಮಠ ಮಾನ್ಯ ಪೀಠಗಳು ವಚನ ದರ್ಶನಗಳಿಗೆ ಬದ್ಧವಾಗಿರಲಿ. ಕರ್ಮಸಿದ್ಧಾಂತ, ದೇವಲೋಕ ಮರ್ಥ್ಯಲೋಕ, ಬಹುದೇವೋಪಾಸನೆಗಳ ಕಲ್ಪನೆಗಳನ್ನು ಹಾಗೂ ಅವುಗಳ ಮೂಲಕ ವೈದಿಕಶಾಹಿ ಮಾಡಿಕೊಂಡ ಬಂದ ಶೋಷಣೆಯನ್ನು ವಿರೋಧಿಸಿ ಸಿಡಿದೆದ್ದ ಲಿಂಗಾಯತ ಧರ್ಮದ ಬಸವ ಪರಂಪರೆಯನ್ನು ಸಮರ್ಥಿಸಿಕೊಳ್ಳುವ ಕಾಯಕವನ್ನು ಲಿಂಗಾಯತ ಮಠ ಪೀಠಗಳು ಮಾಡಲೇಬೇಕಿದೆ. ಬಸವ ತತ್ವ, ಲಿಂಗಾಯತ ಧರ್ಮ ಸಿದ್ಧಾಂತಗಳ ವಿರೋಧಿಯಾದ ನಿಲುವನ್ನು ಹೊಂದಿರುವ ಯಾವುದೇ ಮಠದ ಪೀಠಾಧ್ಯಕ್ಷರು ಪೀಠ ತ್ಯಾಗ ಮಾಡುವುದು ಅನುಕರಣೀಯ. ಇಲ್ಲವಾದರೆ ತಮ್ಮ ಲಿಂಗಾಯತ ಮಠವನ್ನು ವೀರಶೈವ ಜಂಗಮ ಮಠವೆಂದು ಘೋಷಿಸಿಕೊಳ್ಳುವುದು ಸಮರ್ಥನೀಯ. 

ಯಾಕೆಂದರೆ.. ಈಗಾಗಲೇ ಬಹುತೇಕ ಲಿಂಗಾಯತ ಸಮುದಾಯದವರು ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿ ವೈದಿಕ ಧರ್ಮಾಚರಣೆಗಳನ್ನು ಅರಿತೋ ಅರಿಯದೆಯೋ ಮಾಡುತ್ತಲೇ ಇದ್ದಾರೆ. ಏಕದೇವೋಪಾಸನೆಯನ್ನು ಮರೆತು ಬಹುದೇವೋಪಾಸನೆಯನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ.   ಭಗವಂತ ಮತ್ತು ಭಕ್ತರ ನಡುವೆ ಮಧ್ಯವರ್ತಿಗಳಾದ ಈ ಪೂಜಾರಿ ಪುರೋಹಿತರುಗಳು ಇರಬಾರದು ಎಂದೇ ಬಸವಣ್ಣನವರು ಇಷ್ಟಲಿಂಗ ಮಾದರಿಯನ್ನು ಆಚರಣೆಗೆ ತಂದಿದ್ದು. ಭಕ್ತರು ತಮ್ಮ ಅಂಗೈಯಲ್ಲಿರುವ ಇಷ್ಟಲಿಂಗಕ್ಕೆ ನೇರವಾಗಿ ತಮ್ಮ ಅಹವಾಲು ಸಲ್ಲಿಸಿ ಆರಾಧಿಸಬೇಕೆಂಬುದು ಬಸವಣ್ಣನವರ ಉದ್ದೇಶವಾಗಿತ್ತು. ಅಸಮಾನತೆ ಹಾಗೂ ಶೋಷಣೆಯ ಕೇಂದ್ರಗಳಾಗಿರುವ ಪುರೋಹಿತರ ದೇವಸ್ಥಾನಗಳನ್ನು ಧಿಕ್ಕರಿಸಿದ ಬಸವಣ್ಣನವರು ದೇಹವೇ ದೇಗುಲವೆನ್ನುವ ಸಿದ್ಧಾಂತವನ್ನು ಪ್ರತಿಪಾದಿಸಿದ್ದು. ಆದರೆ ಈಗ ಬಹುತೇಕ ಲಿಂಗಾಯತರಲ್ಲಿ ಇಷ್ಟಲಿಂಗ ಆರಾಧನೆ ಹಿನ್ನೆಲೆಗೆ ಸರಿದು ಗುಡಿ ಗುಂಡಾರಗಳ ಬಹುದೇವರ ಆರಾಧನೆಯೇ ಪ್ರಮುಖವಾಗಿದೆ. ವೈದಿಕ ಆಚರಣೆಗಳೇ ಲಿಂಗಾಯತ ಸಮುದಾಯದ ಆಚರಣೆಗಳಾಗಿವೆ. ಯಾವಾಗ ಲಿಂಗಾಯತ ಧರ್ಮಾನುಯಾಯಿಗಳು ತಮ್ಮ ಧರ್ಮದ ಮರ್ಮವನ್ನೇ ಮರೆತು ಅನ್ಯಧರ್ಮದ ಆಚರಣೆ ಆರಾಧನೆಗಳನ್ನು ಆರಂಭಿಸಿದ್ದಾರೋ, ಯಾವಾಗ ವಚನಗಳ ಆಶಯಗಳನ್ನು ಅರಿಯದೇ ಅದಕ್ಕೆ ವಿರುದ್ಧವಾದ ಸಿದ್ದಾಂತದ ಮೊರೆಹೋಗಿದ್ದಾರೋ, ಅಂತವರನ್ನು ಎಚ್ಚರಿಸುವ ಕಾಯಕ ಈ ಎಲ್ಲಾ ಲಿಂಗಾಯತ ಮಠಗಳದ್ದಾಗಬೇಕಿದೆ. ಬಸವ ಧರ್ಮ ಮಾರ್ಗದಲ್ಲಿ ನಂಬಿಕೆ ಇಟ್ಟು  ಬದುಕು ಕಟ್ಟಿಕೊಳ್ಳುವಂತೆ ಲಿಂಗಾಯತ ಸಮುದಾಯವನ್ನು ಲಿಂಗಾಯತ ಮಠಾಧಿಪತಿಗಳು ಪ್ರೇರೇಪಿಸಬೇಕಿದೆ. ಇಲ್ಲದೇ ಹೋದರೆ ಪೀಠಾಧಿಪತಿಗಳು ಆತ್ಮವಂಚನೆ ಮಾಡಿಕೊಂಡಂತೆ. ಬಸವಧರ್ಮ ದ್ರೋಹ ಮಾಡಿದಂತೆ. ಇಂತಹ ಆಪಾದನೆಗಳು ಈ ನಾಡಿನ ಪ್ರಮುಖ ಲಿಂಗಾಯತ ಬೃಹನ್ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ಬಾರದೇ ಇರಲಿ ಎನ್ನುವುದೇ ನಿಜ ಲಿಂಗಾಯತರ ಆಶಯವಾಗಿದೆ. ಶಿವಶರಣರ ವಚನಗಳೇ ಲಿಂಗಾಯತರ ಬದುಕಿಗೆ ದಾರಿದೀಪವಾಗಲಿ. ಆ ದೀಪಗಳಿಗೆ ಬದ್ಧತೆಯ ಎಣ್ಣೆ ಹಾಕಿ, ಬಸವ ನಿಷ್ಠೆಯ ಬತ್ತಿಯನ್ನು ಹೊಸೆದು, ಅರಿವಿನ ದಾರಿಯನ್ನು ತೋರುವ ಕಾಯಕ ಲಿಂಗಾಯತ ಮಠ ಪೀಠಗಳ ಗುರುಗಳದ್ದಾಗಲಿ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ-ಗಣಪತಿ ಪೂಜೆಗೆ ಸ್ವಾಮಿಗಳ ತಕರಾರು; ಭಾವನೆಗಳಿಗೆ ಧಕ್ಕೆಯೆಂದು ಧರ್ಮಾಂಧರ ದೂರು

Related Articles

ಇತ್ತೀಚಿನ ಸುದ್ದಿಗಳು