Sunday, June 16, 2024

ಸತ್ಯ | ನ್ಯಾಯ |ಧರ್ಮ

ನೋಟು ನಿಷೇಧ ಬೃಹನ್ನಾಟಕಕ್ಕೆ ಏಳನೇ ವಾರ್ಷಿಕೋತ್ಸವ

ನೋಟ್ ನಿಷೇಧ ಎನ್ನುವುದು ಈ ದೇಶವಾಸಿಗಳ ಮೇಲೆ ಪ್ರಧಾನಿ ಮೋದಿಗಳು ಮಾಡಿದ ವಿಫಲ ಆರ್ಥಿಕ ಆಘಾತವಾಗಿದೆ. ಈ ಅನಾಹುತಕ್ಕೆ ಇವತ್ತಿಗೆ ಏಳು ವರ್ಷ. ನೋಟ್ ನಿಷೇಧವೇನಾದರೂ ಯಶಸ್ವಿಯಾಗಿ ಕಪ್ಪುಹಣ ನಿರ್ಮೂಲವಾಗಿ, ಭ್ರಷ್ಟಾಚಾರ ಭಯೋತ್ಪಾದನೆ ನಿಯಂತ್ರಣವಾಗಿದ್ದರೆ ಮೋದಿ ಭಕ್ತರು ಏಳನೇ ವರ್ಷದ ನೋಟ್ ಬಂಧಿ ವಾರ್ಷಿಕೋತ್ಸವನ್ನು ಅದ್ದೂರಿಯಾಗಿ ದೇಶಾದ್ಯಂತ ಆಚರಿಸಿ ಉನ್ಮಾದವನ್ನು ಹುಟ್ಟು ಹಾಕುತ್ತಿದ್ದರು- ಶಶಿಕಾಂತ ಯಡಹಳ್ಳಿ

ಇವತ್ತಿಗೆ ಸರಿಯಾಗಿ ಏಳು ವರ್ಷಗಳ ಹಿಂದೆ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿಯವರು ಅಧಿಕ ಬೆಲೆಯ ನೋಟುಗಳಿಗೆ ನಿಷೇಧಾಜ್ಞೆ ಹೊರಡಿಸಿ ದೇಶವಾಸಿಗಳಲ್ಲಿ ವಿಪರೀತ ಸಂಚಲನ ಮೂಡಿಸಿದರು.  ದೇಶದಲ್ಲಿ ಚಲಾವಣೆಯಲ್ಲಿದ್ದ 1000 ಹಾಗೂ 500 ರೂ ಮುಖಬೆಲೆಯ 16 ಲಕ್ಷ ಕೋಟಿ ಮೊತ್ತದ ನೋಟುಗಳು ತಮ್ಮ ಮೌಲ್ಯಗಳನ್ನು ಕಳೆದುಕೊಂಡು ಇದ್ದಕ್ಕಿದ್ದಂತೆ ರದ್ದಿ ಕಾಗದಗಳಾದವು. 

“ದೇಶದಲ್ಲಿರುವ ಕಪ್ಪುಹಣವನ್ನು ಮಟ್ಟಹಾಕಲು, ಮಿತಿ ಮೀರಿದ ಭ್ರಷ್ಟಾಚಾರ ಭಯೋತ್ಪಾದನೆಯನ್ನು ನಿಯಂತ್ರಿಸಲು ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದೇನೆ” ಎಂದು ಪ್ರಧಾನಿಗಳು 2016, ನವೆಂಬರ್ 8 ರಂದು ಘೋಷಿಸಿ ಜನರಿಗೆ ಆಘಾತ ಹಾಗೂ ಅಚ್ಚರಿಯನ್ನುಂಟು ಮಾಡಿದರು. ಕಪ್ಪು ಹಣ ಇದ್ದವರು ತಲ್ಲಣಿಸಿ ಹೋದರು. ಇಲ್ಲದೇ ಇದ್ದವರು ಶ್ರೀಮಂತರಿಗೆ ಇದೇ ತಕ್ಕ ಶಾಸ್ತಿ ಎಂದು ಖುಷಿಪಟ್ಟರು. ಭಾರತದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿರುವ ಭ್ರಷ್ಟಾಚಾರ ಮತ್ತು ಬ್ಲಾಕ್ ಮನಿ ಎಂಬ ಪೀಡೆಗಳು ನಿವಾರಣೆಯಾದವು ಎಂದು ಮೋದಿ ಭಕ್ತರು ಸಂಭ್ರಮಿಸಿದರು. ಇನ್ನೇನು ವಿದೇಶದಲ್ಲಿರುವ ಭಾರತೀಯ ಬಂಡವಾಳಿಗರ ಕಪ್ಪುಹಣವನ್ನು ಮರಳಿ ತಂದು ಮಾತು ಕೊಟ್ಟಂತೆ ಮೋದೀಜಿಯವರು ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೆ 15 ಲಕ್ಷ ಹಣ ಜಮೆ ಮಾಡುತ್ತಾರೆ ನೋಡುತ್ತಾ ಇರಿ ಎಂದು ಮೋದಿ ಮೇನಿಯಾ ಪೀಡಿತರು ಉಘೆ ಉಘೆ ಎನ್ನತೊಡಗಿದರು. 

ಆದರೆ ಈ ಸಂತಸ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಯಾವಾಗ ನಿಷೇಧಿತ ನೋಟುಗಳನ್ನು ಬದಲಾಯಿಸಿಕೊಳ್ಳಲು ಮಹಿಳೆಯರು ಮುದುಕರಾದಿಯಾಗಿ ಭಾರತದ ಜನತೆ ದೇಶಾದ್ಯಂತ ಬ್ಯಾಂಕ್ ಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಹೈರಾಣಾದರೋ, ತಾವೇ ಕಷ್ಟ ಪಟ್ಟ ಹಣವನ್ನು ಪಡೆದುಕೊಳ್ಳಲು ಪರದಾಡಿದರೋ, ಆಗ ಡಿಮಾನಿಟೈಸೇಶನ್ನಿನ ಮೊದಲ ಸೈಡ್ ಎಫೆಕ್ಟ್ ಅನುಭವಕ್ಕೆ ಬಂತು. ದೈನಂದಿನ ವ್ಯವಹಾರಕ್ಕೆ, ಆಸ್ಪತ್ರೆ ಖರ್ಚಿಗೆ, ಜೀವನ ನಿರ್ವಹಣೆಗೆ ಅಗತ್ಯ ಹಣ ಸಿಗದೇ ಜನರು ಪರಿತಪಿಸಿದರು. ಅನಾರೋಗ್ಯ ಪೀಡಿತರಾದ ಹಾಗೂ ವಯಸ್ಸಾದ ನೂರಾರು ಮಂದಿ ಸರದಿ ಸಾಲಿನಲ್ಲೇ ಜೀವ ತೆತ್ತರು. ಎಟಿಎಂ ನಿಂದ ನಮ್ಮದೇ ಹಣ ಪಡೆಯ ಬೇಕೆಂದರೂ ದಿನಕ್ಕೆ ನಾಲ್ಕೂವರೆ ಸಾವಿರದ ಮಿತಿ ಹೇರಲಾಯ್ತು. ಬ್ಯಾಂಕಿನಿಂದ ಹಣ ಪಡೆಯಲೂ ಮಿತಿ ನಿಗದಿ ಪಡಿಸಲಾಯ್ತು. ಹಣ ವಿನಿಮಯ ಎಂಬುದೇ ಹರಸಾಹಸದ ಕೆಲಸವಾಯ್ತು. ಮನೆಯ ಯಜಮಾನನಿಗೆ ಗೊತ್ತಾಗದಂತೆ ಮಹಿಳೆಯರು ಸಂಗ್ರಹಿಸಿಟ್ಟ ಉಳಿತಾಯದ ಹಣ ವ್ಯರ್ಥವಾಯಿತು.ಆದರೂ ಈ ದೇಶ ಕಪ್ಪುಹಣ ಮುಕ್ತವಾಗುತ್ತಲ್ಲಾ ಎಂದು ಜನರು ಈ ಕಷ್ಟವನ್ನೂ ಅನಿವಾರ್ಯವಾಗಿ ಸಹಿಸಿ ಕೊಂಡರು. ಮೋದಿಯವರ ಭರವಸೆಗಳನ್ನು ನಂಬಿದ್ದರು. 

ಬಚ್ಚಿಟ್ಟ ಕಪ್ಪು ಹಣವನ್ನು ಬದಲಿಸಿ  ಕೊಡುವ ದಲ್ಲಾಳಿಗಳು ಹುಟ್ಟಿಕೊಂಡರು. ಬ್ಯಾಂಕುಗಳ ಅಧಿಕಾರಿಗಳೇ ಕೋಟ್ಯಾಧೀಶರುಗಳಿಂದ ಕಮಿಷನ್ ಪಡೆದು ಅಕ್ರಮವಾಗಿ ನೂರಾರು ಕೋಟಿ ಮೌಲ್ಯದ ನೋಟುಗಳನ್ನು ಬದಲಾಯಿಸಿ ಕೊಟ್ಟರು. ಇದರಿಂದಾಗಿ ಹೊಸ ನೋಟುಗಳು ಖಾಲಿಯಾಗ ತೊಡಗಿದವು. ಬ್ಯಾಂಕ್ ಮುಂದೆ ಸರದಿ ಸಾಲು ಉದ್ದವಾಗ ತೊಡಗಿತು. ಸುಲಭ ಸಾಧ್ಯವಲ್ಲದ ಹಣ ಬದಲಾವಣೆಯಿಂದಾಗಿ ಬಡಜನರು ಹಸಿವೆಯಿಂದ ನರಳಿದರೆ, ಸಣ್ಣ ವ್ಯಾಪಾರಸ್ಥರು ತೊಂದರೆಗೊಳಗಾದರು. ಆದರೂ ದೇಶಕ್ಕೆ ಹಾಗೂ ದೇಶದ ಆರ್ಥಿಕತೆಗೆ ಒಳಿತಾಗಲಿ ಎಂದು ಕೆಲವರು ಸಹಿಸಿ ಕೊಂಡರು. ಬಹುತೇಕರು ಆರ್ಥಿಕ ಸಮಸ್ಯೆಗೆ ಸಿಲುಕಿ ಕೊಂಡರು.

ನೋಟ್ ಅಮಾನ್ಯೀಕರಣದಿಂದ ಆದ ಪ್ರಯೋಜನಗಳೇನು?

1. ಮೋದಿ ಮೇನಿಯಾ ಅತಿಯಾಯಿತು.

2.ದೇಶಭಕ್ತಿಯ ಉನ್ಮಾದ ಹೆಚ್ಚಾಯಿತು.

3. ಬಿಜೆಪಿ ನಾಯಕರು ಹಾಗೂ ಬೆಂಬಲಿಗ ಬಂಡವಾಳಿಗರ ಕಪ್ಪುಹಣ ಬಿಳಿಯಾಯಿತು.

4. ವಿರೋಧ ಪಕ್ಷಗಳ ನಾಯಕರುಗಳ ಕಪ್ಪುಹಣ ಬದಲಾವಣೆ ಸಂಕಷ್ಟಕ್ಕೀಡಾಯಿತು.

5. ಕಾರ್ಪೋರೇಟ್ ಬಂಡವಾಳಿಗರಿಗೆ ಡಿಮಾನಿಟೈಸೇಶನ್ ವರದಾನವಾಯ್ತು. 

6. ದೇಶದಲ್ಲಿದ್ದ ಕಪ್ಪುಹಣ ಚಿನ್ನ ಆಸ್ತಿಯಾಗಿ ರೂಪಾಂತರವಾಯ್ತು.

7. ಕಪ್ಪು ಹಣದ ಖದೀಮರಿಗೆ 2,000 ಮುಖಬೆಲೆಯ ಹಣ ಸಂಗ್ರಹ ಇನ್ನೂ ಅನುಕೂಲಕರವಾಯ್ತು. 

ನೋಟ್ ಬಂಧಿ, ಹೇಳಿದ್ದೇನು? ಆಗಿದ್ದೇನು?

1. ನೋಟ್ ಬ್ಯಾನ್ ಎನ್ನುವುದು ನಕಲಿ ನೋಟುಗಳ ಹಾವಳಿ ತಡೆಯುವ ಬದಲು ಕೆಲವೇ ದಿನಗಳಲ್ಲಿ ಹೊಸ ನೋಟುಗಳ ನಕಲಿಗಳು ಹರಿದಾಡತೊಡಗಿದವು.

2. ಕಪ್ಪು ಹಣ ಸರ್ವನಾಶವಾಗುತ್ತದೆ ಅಂದುಕೊಂಡರೆ, ಇದ್ದ ಬದ್ದ ಕಪ್ಪುಹಣವೆಲ್ಲಾ ಯಾವು ಯಾವುದೋ ರೀತಿಯಲ್ಲಿ ಬಿಳಿಹಣವಾಗಿ ಬದಲಾಯಿತು. ದೊಡ್ಡ ಮುಖಬೆಲೆಯ ನೋಟ್ ಬಂದಿರುವುದರಿಂದ ಕಪ್ಪುಹಣದ ಸಂಗ್ರಹ ಮತ್ತಷ್ಟು ಹೆಚ್ಚಾಯಿತು. ಕಪ್ಪು ಹಣದ ಕದೀಮರು ಬಡವರ ಜನಧನ್ ಖಾತೆಗಳ ಮೂಲಕ ಕಪ್ಪು ಹಣವನ್ನು ಪರಿವರ್ತಿಸಿ ಮತ್ತೆ 2000 ಮುಖಬೆಲೆಯ ನೋಟುಗಳ ಮೂಲಕ ಕಪ್ಪುಹಣವನ್ನಾಗಿ ಸಂಗ್ರಹಿಸಿಟ್ಟು ಕೊಂಡರು. 

3. ಭ್ರಷ್ಟಾಚಾರ ನಿಯಂತ್ರಣಕ್ಕೆ ಬರುತ್ತದೆ ಎಂದು ನಂಬಿಸಲಾಗಿತ್ತಾದರೂ ಐನೂರು ಸಾವಿರ ನೋಟುಗಳಲ್ಲಿ ನಡೆಯುತ್ತಿದ್ದ ಲಂಚಾವತರಣ ಎರಡು ಸಾವಿರದ ನೋಟುಗಳಲ್ಲಿ ನಡೆದು ಲಂಚದ ಮೌಲ್ಯ ಅಧಿಕವಾಯಿತು. 

4. ಹೋಗಲಿ ಭಯೋತ್ಪಾದಕರಿಗೆ ಹಣದ ಹರಿವು ಕಡಿಮೆಯಾಗಿ ಭಯೋತ್ಪಾದನೆಯ ಮೂಲೋತ್ಪಾಟನೆಯಾಗುತ್ತದೆ ಎಂದು ಹೇಳಲಾಯ್ತಾದರೂ ಭಯೋತ್ಪಾದನೆ ಆತಂಕವಾದ ನಿಲ್ಲದೇ ಕಾಲಕಾಲಕ್ಕೆ ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ 2019 ರಲ್ಲಿ ಆದ ಪುಲ್ವಾಮಾ ದಾಳಿಯೇ ಉದಾಹರಣೆಯಾಗಿದೆ. 

5. ಆರ್ಥಿಕ ಅಭಿವೃದ್ದಿಯ ಬದಲಾಗಿ  ಹೊಸ ನೋಟುಗಳ ಮುದ್ರಣಕ್ಕೆ 21 ಸಾವಿರ ಕೋಟಿ ಹಣ ಖರ್ಚಾಗಿ ದೇಶದ ಆರ್ಥಿಕತೆಗೆ ಹೆಚ್ಚುವರಿ ಹೊರೆಯಾಯಿತು. 

6. ಡಿಮಾನಿಟೈಸೇಶನ್ ಜಾರಿಯಾದ ನಂತರ ದೇಶಾದ್ಯಂತ 2017ರ ಜನವರಿಯಿಂದ ಎಪ್ರಿಲ್ ತಿಂಗಳಿನವರೆಗೆ 15 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದರಿಂದಾಗಿ ನಿರುದ್ಯೋಗ ಹೆಚ್ಚಾಯಿತು.

7. ಅಕ್ರಮ ಕಪ್ಪು ಹಣ ನಾಶವಾಗುವ ಬದಲಾಗಿ 95% ಹಣ ಬ್ಯಾಂಕಿಗೆ ಜಮೆಯಾಗಿ ಸಕ್ರಮಗೊಳ್ಳುವ ಮೂಲಕ ನೋಟ್ ನಿಷೇಧದ ಉದ್ದೇಶವನ್ನೇ ಅಣಕಿಸಿತು.

8. ಇಡೀ ಬ್ಯಾಂಕಿಂಗ್ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿ ಮತ್ತೆ ಸಹಜ ಸ್ಥಿತಿಗೆ ಬರಲು ಕೆಲವಾರು ವರ್ಷಗಳೇ ಬೇಕಾದವು.

9. ನೋಟ್ ಅಮಾನ್ಯೀಕರಣದಿಂದಾಗಿ ಶೇ.7.93 ರಷ್ಟಿದ್ದ ಭಾರತದ ಜಿಡಿಪಿ ಶೇ.6.5 ಗೆ ಕುಸಿಯಿತು.

10. ದೇಶಾದ್ಯಂತ ಸಣ್ಣ ಉದ್ಯಮಗಳು ಸಂಕಷ್ಟ ಅನುಭವಿಸಿದರೆ, ಅಸಂಘಟಿತ ವಲಯಗಳು ಆಘಾತವನ್ನೇ ಅನುಭವಿಸಿ ನಷ್ಟಕ್ಕೀಡಾದವು.

11. ಖೋಟಾ ನೋಟಿನ ಚಲಾವಣೆ ನಿಯಂತ್ರಣಕ್ಕೆ ಬರುತ್ತದೆ ಎಂದುಕೊಂಡರೆ ಅದು ಇನ್ನೂ ಹೆಚ್ಚು ಉಲ್ಬಣಗೊಂಡಿತು. 500 ರ ನಾಲ್ಕು ನೋಟುಗಳನ್ನು ಮುದ್ರಿಸುವ ಬದಲಾಗಿ 2000 ರೂಪಾಯಿಯ ಒಂದು ನೋಟನ್ನು ಮುದ್ರಿಸುವುದು ಹಾಗೂ ಚಲಾಯಿಸುವುದು ಖೋಟಾ ನೋಟಿನ ಖದೀಮರಿಗೆ ಅನುಕೂಲವಾಯ್ತು.

12. ನಗದು ಹಣದ ಬದಲಾಗಿ ಡಿಜಿಟಲೈಜ್ ವಹಿವಾಟು ಜಾರಿಗೆ ತಂದಿದ್ದರಿಂದಾಗಿ ಚಿಕ್ಕ ಪುಟ್ಟ ವ್ಯಾಪಾರಸ್ಥರು ತೊಂದರೆಗೊಳಗಾದರು. ಅನಕ್ಷರಸ್ಥರು, ಅಸಂಘಟಿತರು, ಇಂಟರ್ನೆಟ್, ಫೋನ್ ಇಲ್ಲದವರು, ಇದ್ದರೂ ಬಳಸಲು ಬರದವರು ಸಂಕಷ್ಟಕ್ಕೆ ಸಿಲುಕಿದರು.  ಆರ್ಥಿಕ ವ್ಯವಹಾರಗಳ ಕಂಪನಿಗಳು ಕಮಿಷನ್ ಹೆಸರಲ್ಲಿ ಲಾಭಮಾಡಿ ಕೊಳ್ಳತೊಡಗಿದವು.

13. ಆನ್ ಲೈನ್ ವಹಿವಾಟಿಗೆ ಉತ್ತೇಜನವೆಂದು ಸರಕಾರ ಹೇಳಿದ್ದನ್ನೇ ಬಂಡವಾಳ ಮಾಡಿಕೊಂಡ ಬ್ಯಾಂಕಿಂಗ್ ವಲಯ ಎಲ್ಲಾ ವಹಿವಾಟುಗಳಿಗೂ ದುಬಾರಿ ದರ ವಿಧಿಸಿ ಜನರನ್ನು ಸುಲಿಗೆ ಮಾಡತೊಡಗಿತು. 

ಹೀಗೆ ಒಂದಾ? ಎರಡಾ? ಈ ನೋಟ್ ನಿಷೇಧದಿಂದಾದ ನಕಾರಾತ್ಮಕ ಪರಿಣಾಮಗಳು. ಕಪ್ಪುಹಣದ ಬೆಟ್ಟ ಅಗಿದು ಸ್ವಚ್ಛ ಮಾಡುತ್ತೇನೆಂದವರು ಬೆಟ್ಟ ಅಗೆದಗೆದು ಇಲಿ ಹಿಡಿದರು. ಆದರೆ ಹೆಗ್ಗಣಗಳು ಪಾರಾಗಿ ಇನ್ನಷ್ಟು ಕೊಬ್ಬಿ ನಿಂತವು. ಇಡೀ ನೋಟ್ ನಿಷೇಧ ಎನ್ನುವುದು ಒಂದು ಬೃಹತ್ ವಿಫಲ ಪ್ರಹಸನವಾಗಿ ಮೂಡಿಬಂದು ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಶಿಥಿಲಗೊಳಿಸಿತು. ಅದೆಷ್ಟೋ ಚಿಕ್ಕ ಪುಟ್ಟ ಕಂಪನಿಗಳು ದಿವಾಳಿಯಾದವು. ಸಣ್ಣ ಕಾರ್ಖಾನೆಗಳು ಮುಚ್ಚಲ್ಪಟ್ಟವು. ವ್ಯಾಪಾರ ವಹಿವಾಟು ಸ್ಥಗಿತಗೊಂಡವು. ನಿರುದ್ಯೋಗ ಮಿತಿಮೀರಿತು. ಈ ಎಲ್ಲಾ ಅವಘಡಗಳನ್ನು ಮರೆಮಾಚಲು ದೇಶಭಕ್ತಿ, ರಾಷ್ಟ್ರೀಯತೆ, ಹಿಂದೂ ಧರ್ಮ ಮುಂತಾದ ಭಾವನಾತ್ಮಕ ಸಂಗತಿಗಳನ್ನು ಕಾಲಕಾಲಕ್ಕೆ ಹುಟ್ಟುಹಾಕುವ ಮೂಲಕ ಮೋದಿ ಮತ್ತು ಅವರ ಸಂಘ ಪರಿವಾರ ದೇಶದ ಜನರ ಮೇಲೆ ಮೋಡಿ ಮಾಡಲು ಪ್ರಯತ್ನಿಸುತ್ತಲೇ ಇದೆ. ನೋಟ್ ನಿಷೇಧ ಎನ್ನುವುದು ಈ ದೇಶವಾಸಿಗಳ ಮೇಲೆ ಪ್ರಧಾನಿ ಮೋದಿಗಳು ಮಾಡಿದ ವಿಫಲ ಆರ್ಥಿಕ ಆಘಾತವಾಗಿದೆ. ಈ ಅನಾಹುತಕ್ಕೆ ಇವತ್ತಿಗೆ ಏಳು ವರ್ಷ. ನೋಟ್ ನಿಷೇಧವೇನಾದರೂ ಯಶಸ್ವಿಯಾಗಿ ಕಪ್ಪುಹಣ ನಿರ್ಮೂಲವಾಗಿ, ಭ್ರಷ್ಟಾಚಾರ ಭಯೋತ್ಪಾದನೆ ನಿಯಂತ್ರಣವಾಗಿದ್ದರೆ ಮೋದಿ ಭಕ್ತರು ಏಳನೇ ವರ್ಷದ ನೋಟ್ ಬಂಧಿ ವಾರ್ಷಿಕೋತ್ಸವನ್ನು ಅದ್ದೂರಿಯಾಗಿ ದೇಶಾದ್ಯಂತ ಆಚರಿಸಿ ಉನ್ಮಾದವನ್ನು ಹುಟ್ಟು ಹಾಕುತ್ತಿದ್ದರು. ಆದರೆ ಈ ಆಘಾತಕಾರಿ ನಿರ್ಣಯ ವಿಫಲವಾಗಿ ದೇಶದ ಆರ್ಥಿಕತೆಯನ್ನೇ ಹಾಳು ಮಾಡಿದ್ದರಿಂದಾಗಿ ಮೋದಿಯವರಾಗಲೀ ಅವರ ಸಮರ್ಥಕರಾಗಲೀ ಇಲ್ಲವೇ ಭಕ್ತಪಡೆಯಾಗಲೀ ಈ  ನೋಟ್ ಬ್ಯಾನ್ ನ ಏಳನೇ ವರ್ಷದ ವಾರ್ಷಿಕೋತ್ಸವದ ಕುರಿತು ಒಂದೇ ಒಂದು ಮಾತನ್ನೂ ಆಡುತ್ತಿಲ್ಲ, ಆಡಲು ಸಾಧ್ಯವೂ ಇಲ್ಲ. ನೋಟ್ ಅಮಾನ್ಯೀಕರಣ ಈ ದೇಶದ ಪ್ರಜೆಗಳಿಗೆ ತಂದಿಟ್ಟ ಸಂಕಷ್ಟವನ್ನು ಮರೆಯಲು ಸಾಧ್ಯವೇ ಇಲ್ಲ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

Related Articles

ಇತ್ತೀಚಿನ ಸುದ್ದಿಗಳು